ನಮ್ಮ ತುಳುನಾಡು ತನ್ನದೇ ಆದಂತಹ ಸಾಂಸ್ಕೃತಿಕ ಪರಂಪರೆಯನ್ನು ಒಳಗೊಂಡಿದೆ. ಇಲ್ಲಿನ ಜನರ ಆಡು ಭಾಷೆ ತುಳು. ಇಲ್ಲಿನ ಆಚರಣೆ, ಸಂಪ್ರದಾಯಗಳು ಪ್ರತಿಯೊಂದು ಕೂಡ ತನ್ನದೇ ಆದ ಮಹತ್ವ ಹೊಂದಿದೆ.
ಮಾರ್ಚ್ ತಿಂಗಳ ಸಂಕ್ರಾಂತಿಯ ಮಾರನೆಯ ದಿನವನ್ನು "ಸುಗ್ಗಿ" ಎಂದು ಕರೆಯುವರು. ಸುಗ್ಗಿ ಎಂದರೆ ಪ್ರಾರಂಭದ ತಿಂಗಳು. ತುಳುವರ ಹನ್ನೆರಡು ತಿಂಗಳುಗಳಲ್ಲಿ "ಆಟಿ " ಎಂಬ ತಿಂಗಳು ಕೂಡ ಒಂದಾಗಿದೆ. ಈ ತಿಂಗಳು ತುಳುನಾಡಿನ ಜನತೆಗೆ ಬಹಳ ಕಷ್ಟಕರವಾದಂತಹ ತಿಂಗಳು ಎಂಬುವುದು ಹಿರಿಯರಿಂದಲೂ ಚಾಲ್ತಿಯಲ್ಲಿರುವಂತಹ ಮಾತು. ಯಾಕೆಂದರೆ ಈ ತಿಂಗಳಿನಲ್ಲಿ ದಿನಗಳು ತುಂಬಾ ನಿಧಾನ ಗತಿಯಲ್ಲಿ ಉರುಳುತ್ತವೆ.
ಮೆಂತ್ಯೆಯ ಗಂಜಿ, ಕೆಸುವಿನ ಎಲೆ, ತಜಂಕ್ ಸೊಪ್ಪು, ನುಗ್ಗೆ ಸೊಪ್ಪು, ಕಣಲೆ, ಹಲಸು, ಸಾಂತನಿ (ಒಣಗಿಸಿದ ಹಲಸಿನ ಬೀಜ), ಹುಣಸೆ ಬೀಜ, ಮರ ಕೆಸು ಇತ್ಯಾದಿಗಳು ಈ ತಿಂಗಳಲ್ಲಿ ತುಳುವರ ಆಹಾರ-ಪದಾರ್ಥಗಳಾಗಿತ್ತು. ಈ ತಿಂಗಳಲ್ಲಿ ತುಳುನಾಡಿನಲ್ಲಿ ಆರಾಧಿಸಲ್ಪಡುವ ಎಲ್ಲಾ ದೈವಗಳ ದೈವಸ್ಥಾನ, ಚಾವಡಿ, ಮಾಡಗಳನ್ನು ಮುಚ್ಚಲಾಗುತ್ತದೆ. "ಆಟಿ ತಿಂಗಳು ತುಳುವರ ಬಡತನದ ಸಂದರ್ಭಗಳನ್ನು ಸೂಚಿಸುವ ಸಂಕೇತವಾಗಿದೆ" ಎಂದರೆ ತಪ್ಪಾಗಲಾರದು. ಆದ್ದರಿಂದ ಹಿಂದೆ ಈ ತಿಂಗಳಲ್ಲಿ ನೇಮೋತ್ಸವ ಮದುವೆ ಇತ್ಯಾದಿ ಯಾವುದೇ ರೀತಿಯ ಶುಭ ಕಾರ್ಯಕ್ರಮಗಳನ್ನು ನಡೆಸುತ್ತಿರಲಿಲ್ಲ. ಈ ತಿಂಗಳಲ್ಲಿ ತುಳುನಾಡಿಗೆ ಮತ್ತು ತುಳುವರಿಗೆ ರೋಗ - ರುಜಿನಗಳು ಬರುವುದನ್ನು ತಪ್ಪಿಸಲು ಕೈಲಾಸದಿಂದ ದೇವಾನು ದೇವತೆಗಳು 'ಆಟಿಕಳಂಜ' ನನ್ನು ಭೂಮಿಗೆ ಕಳುಹಿಸುತ್ತಾರೆ. ಮಾಂತ್ರಿಕ ಶಕ್ತಿಯ ಪ್ರತಿಕಾರವಾಗಿ ಈತನು ತುಳುನಾಡಿಗೆ ಬಂದು ಇಲ್ಲಿನ ಕಷ್ಟ- ನಷ್ಟಗಳನ್ನು ಹೋಗಲಾಡಿಸುತ್ತಾನೆ ಎಂಬ ಪ್ರತೀತಿ ಇದೆ.
ಈ ತಿಂಗಳಿನಲ್ಲಿ ಬರುವ ಅಮಾವಾಸ್ಯೆಯು 'ಆಟಿ ಅಮಾವಾಸ್ಯೆ' ಎಂದೇ ಪ್ರಸಿದ್ಧಿಯಾಗಿದೆ. ಈ ದಿನದಂದು ಬಲಿಚಕ್ರವರ್ತಿಯ ತಾಯಿ ತುಳುನಾಡಿಗೆ ಬರುತ್ತಾಳೆಂಬ ನಂಬಿಕೆ ಇದೆ. ಆಟಿ ಅಮಾವಾಸ್ಯೆಯ ದಿನದಂದು ಇಡೀ ಭೂಮಿಯ ಔಷಧೀಯ ತತ್ವ ಬಲಿಂದ್ರ ಮರದಲ್ಲಿ ಸೇರುತ್ತದೆ. ಹಾಗಾಗಿ ಆ ದಿನ ಸೂರ್ಯೋದಯದ ಮೊದಲು ಮನೆಯ ಯಜಮಾನ ಬೆತ್ತಲೆ ಹೋಗಿ ಬಲೀಂದ್ರ ಮರದ ತೊಗಟೆಯನ್ನು ಕಲ್ಲಿನಿಂದ ಗುದ್ದಿ ತಂದು ಕಷಾಯ ಮಾಡಿ ಕುಡಿಯುತ್ತಿದ್ದರು. ಈ ಕಷಾಯವು ವರ್ಷವಿಡೀ ಜನರನ್ನು ಆರೋಗ್ಯವಾಗಿರುವಂತೆ ಮಾಡುತ್ತಿತ್ತು. ಒಂದು ವೇಳೆ ಸೂರ್ಯನ ಬೆಳಕು ಮತ್ತು ಕಬ್ಬಿಣದ ಕತ್ತಿ ತಾಗಿದರೆ ತೊಗಟೆ ವಿಷವಾಗುತ್ತದೆ ಎಂಬ ನಂಬಿಕೆ ಇತ್ತು. ಆಟಿ ತಿಂಗಳ ಕೊನೆಯ ದಿನದಂದು ಮನೆಯನ್ನು ಗುಡಿಸಿ ಅಂಗಳಕ್ಕೆ ಸೆಗಣಿ ಸಾರುವ ಮೂಲಕ ಈ ತಿಂಗಳನ್ನು ಹೊರಹಾಕಲಾಗುತ್ತಿತ್ತು.
ಹಿಂದೆ ತುಳುನಾಡಿನ ಹನ್ನೆರಡು ತಿಂಗಳುಗಳಲ್ಲಿ 'ಆಟಿ ತಿಂಗಳು' ತುಳುನಾಡಿನ ಭವಿಷ್ಯ ಮತ್ತು ಆಯುಷ್ಯವನ್ನು ಹೆಚ್ಚಿಸುತ್ತಿತ್ತು ಎಂದರೆ ತಪ್ಪಾಗಲಾರದು. ಈ ತಿಂಗಳಿನಲ್ಲಿ ಮೂಢನಂಬಿಕೆಗಳಿವೆ ಎಂದು ಈಗಿನ ಜನತೆ ಹೇಳಿದರು ಸಹ ಅದರೊಳಗೆ ಒಂದು ರೀತಿಯ ಸತ್ಯ- ತತ್ವ- ಮೌಲ್ಯಗಳಿವೆ ಎಂದು ಹೇಳಬಹುದು. ಹಿಂದಿನ ಕಾಲದ 'ಆಟಿ' ತಿಂಗಳ ಆಚರಣೆಗಳು ಸಂಪ್ರದಾಯ ಪದ್ಧತಿಗಳನ್ನು ನಾವೆಲ್ಲರೂ ಗೌರವಿಸೋಣ ಮತ್ತು ಆಚರಿಸೋಣವೆಂಬುದು ನನ್ನ ಆಶಯ. ಈ ತಿಂಗಳಲ್ಲಿ ಬರುವ ಮಳೆಯಿಂದಾಗಿ ಭೂಮಿ ತಂಪಾಗುತ್ತದೆ. ಮತ್ತು ಕೆಸರು, ಸೊಪ್ಪು, ಕಡ್ಡಿಗಳಿಂದಾಗಿ ಮಣ್ಣು ಫಲ ಬರುತಿತ್ತು.
ಆದರೆ ಇತ್ತೀಚಿನ ದಿನಗಳಲ್ಲಿ ಆಟಿ ತಿಂಗಳು ಒಂದು ರೀತಿಯ ಹಬ್ಬದ ವಾತಾವರಣವಾಗಿದೆ. ಈ ತಿಂಗಳ ಹೆಸರಿನಲ್ಲಿ ಹಲವಾರು ಸಂಘ- ಸಂಸ್ಥೆಗಳು ಹಲವಾರು ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸುತ್ತದೆ. "ಆಟಿಡ್ ಒಂಜಿ ದಿನ", "ಆಟಿದ ಕೂಟ", "ಆಟಿದ ವನಸ್", "ಆಟಿದ ತಮ್ಮನ" ಹೀಗೆ ವಿವಿಧ ಹೆಸರುಗಳ ಮೂಲಕ ಶಾಲಾ- ಕಾಲೇಜು, ಜಾತಿ ಸಂಘಟನೆಗಳು ವಿಭಿನ್ನ ರೀತಿಯ ಕಾರ್ಯಕ್ರಮಗಳನ್ನ ಆಯೋಜಿಸುತ್ತಿದೆ. ಹಿಂದೆ ಧರಿಸಲು ಸರಿಯಾದ ಬಟ್ಟೆಗಳು ಇಲ್ಲದ ಕಾರಣ ತುಂಡು ಬಟ್ಟೆಯನ್ನುಟ್ಟು ಮಾನ ಕಾಪಾಡಿಕೊಳ್ಳುತ್ತಿದ್ದರು. ಆದರೆ ಈಗ ಈ ಬಟ್ಟೆಗಳು ಫ್ಯಾಷನ್‌ಗಳ ರೂಪ ತಾಳಿದೆ.ಈಗಿನ ಕಾಲಘಟ್ಟದಲ್ಲಿ ಬರುವ ಆಟಿ ತಿಂಗಳ ಮಳೆಯು ಊರನ್ನೇ ಧ್ವಂಸ ಮಾಡುವ ಸಂದರ್ಭಗಳು ಬಂದೊದಗಿದೆ. ಆಟಿಕಳಂಜ, ಬಲೀಂದ್ರ ಮರದ ಕಷಾಯ, ಆಟಿ ತಿಂಗಳ ಆಹಾರ- ಪದಾರ್ಥಗಳು ಈಗಿನ ಕಾಲದಲ್ಲಿ ನೆನಪುಗಳಾಗಿ ಉಳಿದಿದೆ.
- ಕೃತಿಕಾ ಕಣಿಯಾರು
ಪ್ರಥಮ ಪತ್ರಿಕೋದ್ಯಮ ವಿಭಾಗ
ವಿವೇಕಾನಂದ ಮಹಾವಿದ್ಯಾಲಯ ಪುತ್ತೂರು
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ