ಪುತ್ತೂರು: ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಬಾಲ ರಕ್ಷಣಾ ಹಾಗೂ ಮಹಿಳಾ ಸಬಲೀಕರಣ ಘಟಕದ ಆಶ್ರಯದಲ್ಲಿ ಕಾಲೇಜಿನ ವಿದ್ಯಾರ್ಥಿಗಳಿಗೆ 'ಹದಿಹರೆಯದ ಸವಾಲುಗಳು ಮತ್ತು ಪರಿಹಾರಗಳ' ಕುರಿತು ಕಾರ್ಯಗಾರವು ಜೂನ್ 27 ರಂದು ಕಾಲೇಜು ಸಭಾಂಗಣದಲ್ಲಿ ನಡೆಯಿತು.
ಸಂಪನ್ಮೂಲ ವ್ಯಕ್ತಿಗಳಾಗಿ ಸುಳ್ಯದ ಮನಃಶಾಸ್ತ್ರಜ್ಞರು ಮತ್ತು ಜೀವನ ಕೌಶಲ್ಯ ತರಬೇತುದಾರರು ಆಗಿರುವ ಮೀನಾ ಕುಮಾರಿ.ಕೆ ಅವರು ಮಾತನಾಡಿ ಹದಿಹರೆಯದ ಮಕ್ಕಳಲ್ಲಿ ಹೆಚ್ಚಾಗಿ ಶಾರೀರಿಕ ಬದಲಾವಣೆ, ಆತ್ಮ ವಿಶ್ವಾಸದ ಕೊರತೆ, ಸಿಟ್ಟು, ಹಠಮಾರಿತನ, ಖಿನ್ನತೆಗೆ ಒಳಗಾಗುವ ಗುಣ ಮತ್ತು ಒತ್ತಡಗಳು ಕಂಡು ಬರುತ್ತದೆ. ಇದನ್ನು ಅರ್ಥ ಮಾಡಿಕೊಂಡು ಸರಿಯಾದ ಮಾರ್ಗದರ್ಶನ ನೀಡುವಲ್ಲಿ ಪೋಷಕರ ಹಾಗೂ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ. ಸಮಸ್ಯೆಗಳನ್ನು ತಿಳಿದುಕೊಂಡು ಅದಕ್ಕೆ ಅನುಗುಣವಾಗಿ ಸೂಕ್ತ ಸಲಹೆ ಸೂಚನೆಗಳ ಜೊತೆಗೆ ಮಕ್ಕಳಲ್ಲಿ ಆತ್ಮವಿಶ್ವಾಸ ಮೂಡಿಸುವ ಅಗತ್ಯತೆ ಇದೆ. ಹದಿಹರೆಯದ ಮಕ್ಕಳು ತಮ್ಮ ಭಾವನೆಗಳನ್ನು ಇತರರೊಂದಿಗೆ ಹಂಚಿಕೊಂಡು ಪರಿಸ್ಥಿತಿಯನ್ನು ನಿಭಾಯಿಸಲು ಕಲಿಯಬೇಕು ಎಂದು ಹದಿಹರೆಯದ ಹಲವು ಸಮಸ್ಯೆಗಳು ಮತ್ತು ಪರಿಹಾರೋಪಾಯಗಳನ್ನು ವಿದ್ಯಾರ್ಥಿನಿಯರಿಗೆ ಮನಮುಟ್ಟುವಂತೆ ತಿಳಿಸಿದರು.
ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ರೆ.ಫಾ.ಅಶೋಕ್ ರಾಯನ್ ಕ್ರಾಸ್ತಾ ಮಾತನಾಡಿ ಹದಿಹರೆಯದಲ್ಲಿ ಹಲವಾರು ಸವಾಲುಗಳು ಎದುರಾಗುವುದು ಸಹಜ. ಈ ವಯಸ್ಸಿನಲ್ಲಿ ಮಕ್ಕಳಿಗೆ ಸಲಹೆಗಳು ಅತ್ಯಗತ್ಯ. ತಮ್ಮ ಬದುಕಿನಲ್ಲಿ ಉಂಟಾಗುವ ಕೆಲವೊಂದು ಒತ್ತಡ, ಗೊಂದಲಗಳಿಗೆ ಸೂಕ್ತವಾದ ಮಾರ್ಗದರ್ಶನವನ್ನು ಪಡೆದುಕೊಂಡರೆ ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಲು ಸಾಧ್ಯ ಎಂದು ಹೇಳಿದರು.
ವೇದಿಕೆಯಲ್ಲಿ ಬಾಲ ರಕ್ಷಣಾ ಹಾಗೂ ಮಹಿಳಾ ಸಬಲೀಕರಣ ಘಟಕದ ನಿರ್ದೇಶಕರಾದ ಉಷಾ. ಯು ಹಾಗೂ ಗೀತಾ ಕುಮಾರಿ ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ,ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಪ್ರದರ್ಶನ ಕಲಾ ಸಂಘದ ವಿದ್ಯಾರ್ಥಿಗಳು ಪ್ರಾರ್ಥಿಸಿ, ವಿದ್ಯಾರ್ಥಿಗಳಾದ ಅನ್ಸನ್ ಪಿ ತೋಮಸ್ ಸ್ವಾಗತಿಸಿ , ಅನ್ವಿತಾ ವಂದಿಸಿ, ಆಯಿಷಾ ತನಾಝ್ ಕಾರ್ಯಕ್ರಮ ನಿರೂಪಿಸಿದರು.