ಶ್ರೀಪಾದರಾಜ ದರ್ಶನ: ಜೂ 21ರಂದು ಆರಾಧನಾ ಮಹೋತ್ಸವ

Upayuktha
0


ಡೀ ಕನ್ನಡ ಹರಿದಾಸ ಸಾಹಿತ್ಯ ಪರಂಪರೆ ಪ್ರಾರಂಭವಾಗುವುದೇ ನಮಃ ಶ್ರೀಪಾದರಾಜಾಯ ಎಂಬ ಸ್ತೋತ್ರದಿಂದ ಇನ್ನು ಸಹಸ್ರ ವರ್ಷಗಳ ಕಾಲ ದಾಸ ಸಾಹಿತ್ಯ ಎಷ್ಟೇ ವ್ಯಾಪಕವಾಗಿ ವಿಸ್ತಾರವಾಗಿ ಬೆಳೆದರೂ ಅದರ ಮೂಲ ನೆಲೆ, ಮೂಲ ಸೆಲೆ ಮೂಲನಾಮ ಶ್ರೀಪಾದರಾಜರಿದಂದಲೇ ಎನ್ನುವುದು ಸತ್ಯ. ಶ್ರೀಪಾದರಾಜರಿಗೆ ಮುಂಚೆ ಕನ್ನಡ ಸಾಹಿತ್ಯ ಪ್ರಚಲಿತವಿದ್ದರೂ, ಮೊದಲ ಬಾರಿಗೆ ''ಗಾನದಿ ಕೇಶವ ಎಂದೊಡನೆ ಬಂದು ಕೈಗೊಡುವನು ರಂಗವಿಠಲ'' ಎಂಬ ಸಂದೇಶ ನೀಡಿ ಸಾಹಿತ್ಯಕ್ಕೆ ಸಂಗೀತದ ಸಮನ್ವಯ ಮಾಡಿ ಎಲ್ಲರೂ ಭಕ್ತಿ ಸಾಹಿತ್ಯವನ್ನು ಸುಶ್ರಾವ್ಯವಾಗಿ ಹಾಡಿ ಅಲಿಸುವಂತೆ ಮಾಡಿದ ಕೀರ್ತಿ ಶ್ರೀಪಾದರಾಜರು. ಅವರ ಪ್ರಭಾವದಿಂದಲೇ ಅವರ ಪರಮಾಪ್ತ ಶಿಷ್ಯರಾದ ಶ್ರೀ ವ್ಯಾಸರಾಜರು ಕರ್ನಾಟಕ ಸಂಗೀತದ ಆಚಾರ್ಯ ಪುರುಷರಾದರು. ಅವರ ಶಿಷ್ಯರಾದ ಪುರಂದರದಾಸರು ಕರ್ನಾಟಕ ಸಂಗೀತ ಪಿತಾಮಹರೆನಿಸಿದರು.


ಕನ್ನಡ ಸಾಹಿತ್ಯಕ್ಕೆ, ಕನ್ನಡ ಭಾಷೆಗೆ, ಕನ್ನಡ ಸಂಸ್ಕೃತಿಗೆ ಶ್ರೀಪಾದರಾಜರು ಕೊಟ್ಟ ಕೊಡುಗೆ ಅತ್ಯಂತ ಮಹತ್ವದ್ದು, ವೇದ, ಉಪನಿಷತ್ತುಗಳ ಪಾವಿತ್ರ್ಯತೆಯನ್ನು ಹಿರಿಮೆ ಗರಿಮೆಗಳನ್ನು ಕನ್ನಡ ದೇವರ ನಾಮಗಳಿಗೆ ತಂದುಕೊಟ್ಟ ಭಗೀರಥರು. ಗೋಪೀನಾಥ ದೇವರ ಪೂಜಾಕಾಲದಲ್ಲಿ ಪರಂಪರಾನುಗತ ಮಂತ್ರ ಸ್ತೋತ್ರಗಳಿಗೆ ತಾವೆಯೇ ಕನ್ನಡ ದೇವರನಾಮಗಳನ್ನು ಹಾಡುವ, ನರ್ತನಮಾಡುವ, ಹೊಸ ಸಂಪ್ರದಾಯವನ್ನು ಉದ್ಘಾಟಿಸಿದರು. ಇಂತಹ ಕನ್ನಡ ಹಾಡುಗಳನ್ನು ಪದಪದ್ಯಗಳನ್ನು ಹೇಳುತ್ತಾ ಗಾಯನ ಮಾಡುವ ಭಾಗವತರ ತಂಡಗಳನ್ನು ಶ್ರೀಮಠದಲ್ಲಿ ವ್ಯವಸ್ಥೆ ಮಾಡಿದರು. 


ಮುಳಬಾಗಿಲಿನ ವೇದವಿದ್ಯಾಪೀಠ, ಹರಿದಾಸ ಸಾಹಿತ್ಯದ ತಲಕಾವೇರಿಯಾಯಿತು. ''ರಂಗವಿಠಲ'' ಅಂಕಿತದಿಂದ ಅವರು ಬರೆದ ಹಾಡುಗಳು ಕನ್ನಡ ದಾಸಸಾಹಿತ್ಯದ ಪ್ರಾರಂಭದ ಪ್ರಚಂಡ ಪ್ರವಾಹವಾಗಿ ಐದು ಶತಮಾನಗಳವರೆಗೂ ನಿರಂತರ ಹರಿದು ಬಂದಿದೆ. ಮುಂದುವರೆಯುವಂತೆ ದಾಸಸಂಸ್ಕೃತಿ, ದಾಸಕೂಟಗಳು ಬೆಳೆಯುವಂತೆ ಜಾಗೃತವಾಗಿ ಘೋಷಿಸಿದರು. ಸುಳಾದಿ ಪ್ರಕಾರದಲ್ಲಿ ಮೊದಲ ಬಾರಿಗೆ ಕನ್ನಡದ ವಚನಗಳು ಶ್ರೀಪಾದರಾಜರಿಂದ ಬಂದವು. ಇದು ವಿಜಯದಾಸರ ಮೇಲೆ ಎಷ್ಟು ಪ್ರಭಾವ ಬೀರಿತೆಂದರೆ ತಮ್ಮ ಸೈದ್ಧಾಂತಿಕ ಅಭಿವ್ಯಕ್ತಿಗೆ ಅವರು ಆಯ್ಕೆ ಮಾಡಿಕೊಂಡ ರಾಜಮಾರ್ಗವೇ ಶ್ರೀಪಾದರಾಜರು ಪ್ರಾರಂಬಿಸಿದ ಸುಳಾದಿ ಮಾರ್ಗ.


ವೇಣುಗೀತೆ, ಭ್ರಮರಗೀತೆ, ಗೋಪಿಗೀತೆ, ಶ್ರೀಕೃಷ್ಣನ ಬಾಲಲೀಲೆಗಳನ್ನು ಕನ್ನಡದ ಕನ್ನಡಿಯಲ್ಲಿ ಶ್ರೀಪಾದರಾಜರಿಂದಾಗಿ ಹೆಚ್ಚು ಸ್ಫುಟವಾಗಿ, ಸ್ಪಟಿಕವಾಗಿ ಜನ ಸಾಮಾನ್ಯರಿಗೆ ಗೋಚರವಾದವು. ಭಕ್ತಿಭಾವದ ಉತ್ಕಟತೆಯಿಂದಾಗಿ ಭಕ್ತಿಹೃದಯದ ಹಾಡುಗಳು ಶ್ರೀಪಾದರಾಜರಿಂದ ಮೂಡಿಬಂದವು. ''ಕಂಗಳಿದ್ಯಾತಕೋ ಕಾವೇರಿರಂಗನ ನೋಡದ'' ಮುಂತಾದ ಹಾಡುಗಳು ಶ್ರೀ ರಂಗನ ರಂಗನಾಥನ ಮಹತ್ವವನ್ನು ಸಾರಿ ಸಾರಿ ಹೇಳಿದವು. ''ಇಟ್ಹಾಂಗೋ ಇರುವೆನೋ ಹರಿಯೇ'' ಎನ್ನುವುದು ಒಬ್ಬ ದಿಟ್ಟ ಸನ್ಯಾಸಿಗೆ ಇರಬೇಕಾದ ಸ್ಥಿತ ಪ್ರಜ್ಞೆಯನ್ನು ಎತ್ತಿ ಹಿಡಿಯುತ್ತದೆ.


ಸೂಕ್ಷ್ಮಭಾವನೆಗಳನ್ನು ಸಂವೇದನಗಳನ್ನು ಅಭಿವ್ಯಕ್ತಿಸಲು ಸಂಗೀತವೇ ಸಮರ್ಥ ಮಾಧ್ಯಮ ಎಂಬ ಸಂಗತಿಯನ್ನು ಅರಿತಿದ್ದ ಶ್ರೀಪಾದರಾಜರು, ಪಲ್ಲವಿ ಅನುಪಲ್ಲವಿಗಳನ್ನು ಚರಣ ವ್ಯವಸ್ಥೆ ಕೀರ್ತನೆಗಳನ್ನು ಮೊಟ್ಟ ಮೊದಲ ಬಾರಿಗೆ ಕನ್ನಡದಲ್ಲಿ ರಚಿಸಿ ಪ್ರಚಲಿತಗೊಳಿಸಿದರು. ಸ್ವರಗಳು ಶೃತಿಬದ್ಧವಾಗಿದ್ದು, ಅದು ಕಿವಿಗೆ ಹಿತವಾಗಿದ್ದು, ಲಯದ ಸಾಮರಸ್ಯದಿಂದ ಮೂಡಿಬಂದಿರುವ ಮೊಟ್ಟಮೊದಲ ಕನ್ನಡ ಸಾಹಿತ್ಯ ಸಂಗೀತ ಕೃತಿ ಶ್ರೀಪಾದರಾಜರದೇ ಆಗಿದೆ.


'ನಾಲಗೆಗೆ ನಾರಾಯಣ ನಾಮವೇ ಭೂಷಣ, ಕಾಲಿಗೆ ಹರಿಯಾತ್ರೆ ಮನೆಗೇ ತುಲಸೀ ಬೃಂದಾವನ ಕಿವಿಗೆ ಹರಿಕಥೆ, ಯೋಗಿಗಳಿಗೆ ಜ್ಞಾನ, ಸತಿಗೆ ಗೌರವ, ಕಣ್ಣುಗಳಿಗೆ ಸದಾ ರಂಗನನ್ನು ನೋಡುವುದೇ ಭೂಷಣ. ಶಿರಕ್ಕೆ ಭಗವಂತನಿಗೆ ಬಾಗಿ ನಮಿಸುವುದೇ ಭೂಷಣ, ಕೊರಳಿಗೆ ತುಳಸೀಮಣಿಯೇ ಭೂಷಣ. ರಂಗವಿಠಲ ನಿನ್ನ ನಾಮ ಅತೀ ಭೂಷಣವೆನ್ನುವ ಶ್ರೀಪಾದರಾಜರು ಮಾನವರಿಗೆ ಮಾನವೇ ಭೂಷಣ ಎಂಬ ಲೋಕ ನೀತಿಯನ್ನು ಹೇಳಿ ಸಾರ್ವತ್ರಿಕ ಎಚ್ಚರಿಕೆ ಕೊಟ್ಟಿದ್ದಾರೆ. 



ಬಡತನ ಕಡುಕಷ್ಟಗಳಲ್ಲಿರುವ ಆರ್ತರನ್ನು ದೀನರನ್ನು ಅನಾಥರನ್ನು ಕಂಡೊಡನೆಯೇ ಕರುಣೆ ಉಕ್ಕೇರುವ ಶ್ರೀಪಾದರಾಜರು 'ಯಾಕೆ ಪುಟ್ಟಿಸಿದೆ ನೀ ಸಾಕಲಾರದ ಜಗದೇಕ ಕಾರಣ ಪುರುಷ ಶ್ರೀಕೃಷ್ಣ' ಎಂದು ಪ್ರಶ್ನಿಸಿದ್ದಾರೆ. 'ಸತಿ ಅನುಕೂಲವಿರಬೇಕು ಸುತನಲ್ಲಿ ಗುಣಬೇಕು, ಮತಿವಂತನಾಗಬೇಕು, ಮತ ಒಂದಾಗಿರಬೇಕು.' ಎಂದು ಸತ್ಸಂಗದ ಅಗತ್ಯವನ್ನು ವಿವೇಕ ಕುಟುಂಬ ನೆಮ್ಮದಿಗಳ ಅಗತ್ಯವನ್ನು ಮನಮುಟ್ಟುವಂತೆ ಅವರು ನಿರೂಪಿಸಿದ್ದಾರೆ. ಉಂಟಾದ ಕಾಲಕ್ಕೆ ನೆಂಟರು ಇಷ್ಟರು ಬಂಟರಾಗಿ ಬಾಗಿಲಕಾಯ್ವರು, ಉಂಟಾದತನ ತಪ್ಪಿ ಬಡತನ ಬಂದರೆ ಒಂಟೆಯಂತೆ ಗೋಣಮೇಲೆತ್ತುವರು. ಎಂದು ಹೇಳಿ ಅಜ್ಞಾನದ ಮಂಪರಿನಲ್ಲಿ ವೈಭವದ ಅಮಲಿನಲ್ಲಿ ಬೀಗುತ್ತಿರುವವರಿಗೆ ಎಚ್ಚರಿಕೆಯ ಮಾತನ್ನು ಹೇಳುತ್ತಾರೆ.


ಶ್ರೀಪಾದರಾಜರು ಸರ್ವಸಾರಭೋಕ್ತನಾದ ಶ್ರೀಹರಿಯ ಅನುಗ್ರಹ ವಿಶೇಷದಿಂದ ಸುಖಪ್ರಾರಬ್ಧ ಪಡೆದಿದ್ದು, ಅದರಂತೆ ಕ್ಲೇಶಾನಂದಗಳನ್ನು ಈಶಾಧಿನಗೈದು ಅದರಂತೆ ಪ್ರವರ್ತಿಸುವ ದೃಢಭಕ್ತಿಯ ಧೀಮಂತ ಭಕ್ತಾಗ್ರಣಿಗಳು. ಇಟ್ಟಾಂಗೆ ಇರುವೆನೋ ಹರಿಯೇ ಎನ್ನ ದೊರೆಯೇ ಎಂದು ಭಗವಂತನಿಗೆ ಹೇಳುತ್ತಾ ಭಗವಂತನ ಕರುಣವಿದ್ದರೆ ಮೃಷ್ಟಾನ್ನ ಭೋಜನ ಹೊಳೆವ ಪೀತಾಂಬರ ಸೊಂಪಿನಂಚಿನ ಶಾಲು ಚಂದ್ರಶಾಲೆಯ ಚಂದ್ರಮಂಚ, ವರಛಂತ್ರಚಾಮರಗಳು ಸಹಜವಾಗಿಯೇ ಲಭ್ಯವಾಗುತ್ತವೆ. ಭಗವಂತನ ಕರುಣೆ ಒಮ್ಮೆ ತಪ್ಪಿದರೆ, ಅನ್ನ ಕಾಣದೆ ಬಾಯ್ಬಿಸಿಸುವೀ. ಕಡೆಗೆ ಕೌಪೀನವು ದೊರೆಯದೋ ಛತ್ರದಲ್ಲಿ ನೆಲದ ಮೇಲೆ ತೋಳನ್ನೇ ತಲೆದಿಂಬಾಗಿಸಿ ಮಲಗಬೇಕೋ ಎಂದು ಹರಿಕೃಪೆ ಮರೆಯಾದರೆ ಆಗುವ ಕಷ್ಟಗಳನ್ನು ನೆನೆಸುತ್ತಾರೆ.


ಶ್ರೀಪಾದರಾಜರ ಸಾಹಿತ್ಯ ಸಂಖ್ಯಾ ದೃಷ್ಟಿಯಿಂದ ಹೆಚ್ಚಿಲ್ಲವಾದರೂ, ಗುಣಮಟ್ಟದ ದೃಷ್ಟಿಯಿಂದ ಶ್ರೇಷ್ಠವಾದುದು. ಸಾಹಿತ್ಯ ಸೃಷ್ಟಿಯೊಂದಿಗೆ ಸಾಹಿತ್ಯ ಮಾರ್ಗವೊಂದರ ಸೃಷ್ಟಿಕರ್ತರು. ಈ ಕಾರಣದಿಂದಾಗಿ ಅವರ ಸಾಹಿತ್ಯಕ್ಕೆ ತನ್ನದೇ ಆದ ನೆಲೆ ಬೆಲೆ ಇದೆ. ಶ್ರೀಪಾದರಾಜರ ಸಾಹಿತ್ಯದ ಅಧ್ಯಯನವು ಎರಡು ಮುಖಗಳನ್ನು ಹೊಂದಿದೆ.ಶ್ರೀಪಾದರಾಜರು ಪೀಠಾಧಿಪತಿಗಳು ಸನ್ಯಾಸ ಧರ್ಮದಲ್ಲಿದ್ದು, ಏನೆಲ್ಲಾ ಮಾಡಬಹುದೆಂಬುದರ ಪರಿಪೂರ್ಣ ಸಾಕ್ಷ್ಯಚಿತ್ರದಂತಿದ್ದರೆ. ಶಾಸ್ತ್ರ ಸಾಹಿತ್ಯ- ಪಾಠ- ಪ್ರವಚನ-ಲೇಖನ-ಲೋಕೋಪಕಾರ-ಅನ್ನ ಸಂತರ್ಪಣೆ ಎಲ್ಲದರಲ್ಲಿಯೂ ವ್ಯಾಪಕವಾಗಿ ತಮ್ಮನ್ನು ತೊಡಗಿಸಿಕೊಂಡು ಅಂತರಂಗದಲ್ಲಿ ರಂಗವಿಠಲನ್ನು ಕುಣಿಸಿ ಆಡಿಸಿ ಮುದ್ದಾಡಿದ ಮಹನೀಯರಿವರು. ಇವರ ಜೀವನ ಆದರ್ಶ ಜೀವನಾದರ್ಶನಗಳನ್ನು ತಿಳಿದವರ ಹೃದಯ ಝಲ್ಲೆನ್ನುತ್ತದೆ. ರೋಮಾಂಚಿತನಾಗುತ್ತಾನೆ.


ದಾಸ ಸಾಹಿತ್ಯಕ್ಕೆ ಶ್ರೀಕಾರ ಹಾಕಿದ ಶ್ರೇಯಸ್ಸಿಗೆ ಪಾತ್ರರು ಶ್ರೀಪಾದರಾಜರು ಕನ್ನಡ ಸಾಹಿತ್ಯಕ್ಕೆ ಕ್ಷೇತ್ರದಲ್ಲಿ ಅಪರೂಪದ ಸ್ಥಾನ ಮಾನ ಗೌರವಕ್ಕೆ ಪಾತ್ರವಾದುದು ದಾಸಸಾಹಿತ್ಯ. ಲೌಕಿಕ ಪಾರಮಾರ್ಥಗಳೆರಡು ದಾಸ ಸಾಹಿತ್ಯದ ಎರಡು ಕಣ್ಣುಗಳು- ದಾಸ ಸಾಹಿತ್ಯ ಮಾತ್ರವಲ್ಲ ; ದಾಸರ ಬದುಕು ಸಹಿತ ಸಮಾಜಕ್ಕೊಂದು ಆದರ್ಶದ ಮಾದರಿ. ಆರು ಶತಮಾನಗಳ ಹಿಂದೆಯೇ ಶ್ರೀ ಮಧ್ವಾಚಾರ್ಯರು, ಶ್ರೀ ನರಹರಿತೀರ್ಥರು, ಶ್ರೀ ಶ್ರೀಪಾದರಾಜರು, ಶ್ರೀ ವ್ಯಾಸರಾಜರು, ಶ್ರೀ ವಾದಿರಾಜರಂತಹ ಸಂಸ್ಕೃತ ಪಂಡಿತರು, ಮಠಾಧೀಶರು ಭಾಷೆ ಸಂಸ್ಕೃತಿ, ವ್ಯಕ್ತಿತ್ವ, ಮೌಲ್ಯ, ಜನ ಸಮುದಾಯಕ್ಕೆ ಸ್ಪಂದಿಸಿದ ರೀತಿ ದಾಖಲೆಯಾಗಲೇ ಬೇಕಾದ ಇತಿಹಾಸ.


ಇವರು ತಮ್ಮ ಕೃತಿಗಳಲ್ಲಿ ಬಳಸುವಂತಹದು ಅಚ್ಚ ಕನ್ನಡದ ತೊಲಿಗು, ಪೆಣ, ಬಗೆಯನು, ಎಣೆಗಾನು, ಐದಿದನು, ಒರೆಸಿ, ಅಟ್ಟಿದ, ಸೆದೆದ ಬಿಸುಟುವ ಹೀಗೆ ನೂರಾರು ಪದಗಳನ್ನು ಪ್ರಾಕೃತ ಅಪಭ್ರಂಶ ಎಂದು ಅಲ್ಲಗೆಳೆಯುವ ಎದೆಗಾರಿಕೆ ಯಾರಿಗಿದೆ. ಹೀಗೆ ಆಡು ಭಾಷೆಯ ಕನ್ನಡವನ್ನು ಪ್ರೌಢರ ಭಾಷೆಯನ್ನಾಗಿಸಿ ಕನ್ನಡಿಗರಿಗೆ ಮಹೋಪಕಾರ ಮಾಡಿದ್ದಾರೆ ಶ್ರೀರಾಜರು. ಶ್ರೀ ಲಕ್ಷ್ಮೀನರಸಿಂಹ ಪ್ರಾದುರ್ಭಾವ ದಂಡಕದಲ್ಲಿ ಅಡಗಿರುವ ಯಕ್ಷಗಾನದ ಗುಣ ನಮ್ಮನ್ನು ಅಚ್ಚರಿಗೊಳಿಸುತ್ತದೆ. ಅಲ್ಲದೆ ಭಾಗವತದ ಸಪ್ತಮಸ್ಕಂದವನ್ನು ಅಚ್ಚ ಕನ್ನಡ ಶೈಲಿಯಲ್ಲಿ ಎಷ್ಟು ಅಚ್ಚುಕಟ್ಟಾಗಿ ಕನ್ನಡೀಕರಿಸಿದ್ದಾರೆ.


ಹೀಗೆ ಶ್ರೀಪಾದರಾಜರ ಪ್ರಭಾವ ಕನ್ನಡ ಸಾಹಿತ್ಯದಲ್ಲಿ ಶಿಷ್ಯರನ್ನು ಸ್ತುತಿಸುವಂತಹ ಒಂದು ಉದಾರ ಪರಂಪರೆಯನ್ನು ಸೃಷ್ಟಿಸಿತು. ಸಾಸಿರಜಿಹ್ವೆಗಳುಳ್ಳ ಶೇಷನೇ ಕೊಂಡಡಬೇಕು ವ್ಯಾಸಮುನಿರಾಯ ಸನ್ಯಾಸದಿರವ ಎಂದು ತಮ್ಮ ಶಿಷ್ಯರನ್ನು ಮನದುಂಬಿ ಹೊಗಳಿದರು.ಮುಂದೆ ವ್ಯಾಸರಾಜರು ತಮ್ಮ ಶಿಷ್ಯರಾದ ಪುರಂದರದಾಸರನ್ನು ಹಾಗೂ ಪುರಂದರದಾಸರು ಕನಕದಾಸರನ್ನು ಕೊಂಡಾಡಿದಂತಹ ಒಂದು ಸಹೃದಯತೆ ಪರಂಪರೆ ಸೃಷ್ಟಿಯಾಯಿತು.


ಧೃವರಾಜರ ಅವತಾರವೆನಿಸಿರುವ ಶ್ರೀಪಾದರಾಜರು ಅವನಂತೆ ಉನ್ನತ ಪದವಿಯನ್ನೆ ಹೊಂದಿ, ಸಪ್ತರ್ಷಿಗಳಿಗಿಂತ ಮಿಗಿಲಾದ ಶಿಷ್ಯರುಗಳಿಂದ ಪ್ರತಿದಿನ ಸ್ತೋತ್ರಗೈಸಿಕೊಳ್ಳುವ ಇವರು ಕರ್ನಾಟಕದಲ್ಲಿ ಉದಿಸಿ ಅಲ್ಲಿಯೇ ನೆಲೆನಿಂತಿರುವುದು ಕನ್ನಡಿಗರ ಸುಕೃತವಲ್ಲವೇ?


ಯದ್ವೃಂದಾವನ ಸೇವಾಯ ಸುವಿಮಾಲಾಂ ವಿದ್ಯಾನ್ ಪಶೂನ್ ಸಂತತಿಂ \ ಧ್ಯಾನ ಜ್ಞಾನಮನಲ್ಪ ಕೀರ್ತಿನಿವಹಂ ಪ್ರಾಪ್ನೋತಿ ಸೌಖ್ಯಂ ಜನಃ \

ವಂದೇ ನರಸಿಂಹತೀರ್ಥ ನಿಲಯಂ ಶ್ರೀ ವ್ಯಾಸರಾಟ್ ಪೂಜಿತಂ \ ಧ್ಯಾಯಂತಂ ಮನಸಾ ನೃಸಿಂಹ ಚರಣಂ ಶ್ರೀಪಾದರಾಜಂ ಗುರುಂ \\


ಪೂಜನೀಯ ಶ್ರೀ ಶ್ರೀಪಾದರಾಜರು ಕೇವಲ ಮೃಣ್ಮಯ ಶರೀರದಿಂದ ಮುಕ್ತರಾದರೂ ಅವರ ಅತೀವವಾದ ಸಾತ್ವಿಕ ತೇಜಃಪುಂಜ ಆತ್ಮಶಕ್ತಿಯು ಇಂದಿಗೂ ಮುಳಬಾಗಿಲಿನ ವೃಂದಾವನದಲ್ಲಿ ಸಾನ್ನಿಧ್ಯವಿದೆ ಎಂಬುವುದೇ ಜನತೆಯ ದೃಢ ನಂಬುಗೆ ಅದರಿಂದ ಹಾಗೂ ಧೃವಾಂಶ ಸಂಭೂತರೆಂದೇ ಪ್ರಸಿದ್ಧರಾಗಿ ಸೇವೆಯನ್ನು ಗೈಯುವವರೆಗೆ ಎಲ್ಲ ಆಭೀಷ್ಟಗಳು ನೆರವೇರುವುದೆಂಬುದಾಗಿ ಮೇಲ್ಕಾಣಿಸಿರುವ ಶ್ಲೋಕದಲ್ಲಿ ವ್ಯಾಸರಾಯರೇ ಭರವಸೆ ನೀಡಿದ್ದಾರೆ.



- ಡಾ. ಗುರುರಾಜ ಪೋಶೆಟ್ಟಿಹಳ್ಳಿ (ಪ್ರಣವ)

ಸಂಸ್ಕೃತಿ ಚಿಂತಕರು ಮೊಬೈಲ್ : 9739369621

ಇ-ಮೇಲ್ : padmapranava@yahoo.com


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  




Post a Comment

0 Comments
Post a Comment (0)
To Top