ಮುಳುಬಾಗಿಲಿನ ಮಹಾಸಂತ ಶ್ರೀ ಶ್ರೀಪಾದರಾಜರು

Upayuktha
0

(ಜೂನ್ 21 ಗುರುಗಳ ಆರಾಧನೆ ಪ್ರಯುಕ್ತ ಈ ಲೇಖನ)



ಶ್ರೀಪಾದರಾಜರು (1402-1502) ಶ್ರೀ ಪದ್ಮನಾಭತೀರ್ಥರಿಂದ ಪ್ರವರ್ತಿತವಾದ ಪೀಠದಲ್ಲಿ ವಿರಾಜಮಾನರಾದ ವಿಭೂತಿಪುರುಷರು. ಇವರ ಸಾಧನೆಗಳ ಫಲಶೃತಿಯಾಗಿ 'ಶ್ರೀ ಶ್ರೀಪಾದರಾಜ ಮಠ' ಎಂದೇ ಪ್ರಸಿದ್ಧಿ ಉಂಟಾಯಿತು.


ಚೆನ್ನಪಟ್ಟಣದ ಬಳಿಯ ಅಬ್ಬೂರು ಇವರ ಜನ್ಮಸ್ಥಳ. ಲಕ್ಷ್ಮೀನಾರಾಯಣ ಎಂಬುದು ಪೂರ್ವಾಶ್ರಮದ ಹೆಸರು. ಶ್ರೀ ಸ್ವರ್ಣವರ್ಣತೀರ್ಥರಿಂದ ಬಾಲ್ಯದಲ್ಲೇ ಸನ್ಯಾಸದೀಕ್ಷೆ ಪಡೆದು ಶತಾಯುಷಿಗಳಾಗಿ ಪೀಠವನ್ನು ಅಲಂಕರಿಸಿದ ಹಿರಿಮೆ ಇವರದು. ಇವರು ಶ್ರೀ ವ್ಯಾಸರಾಜ ಮಠದ ಶ್ರೀ ಬ್ರಹ್ಮಣ್ಯತೀರ್ಥರ ಪೂರ್ವಾಶ್ರಮದ ಹತ್ತಿರದ ಸಂಬಂಧಿಗಳು.


ಬಾಲ್ಯದಲ್ಲಿಯೇ ಪ್ರತಿಭಾಂಬುಧಿ ಎನ್ನಿಸಿದ ಮಹನೀಯರು ಇವರು. ವಿಶೇಷವಾಗಿ ಶ್ರೀರಂಗ ಮೊದಲಾದ ದಕ್ಷಿಣ ಪ್ರಾಂತ್ಯದಲ್ಲಿ ಮಧ್ವ ಸಿದ್ಧಾಂತವನ್ನು ಪ್ರಸಾರ ಮಾಡಿದ ಮಹನೀಯರಲ್ಲಿ ಅಗ್ರಮಾನ್ಯರು ಎಂಬುದು ಇವರ ಹಿರಿಮೆ. ಬಹುಕಾಲ ಶ್ರೀರಂಗದಲ್ಲಿಯೇ ನೆಲೆಸಿದ್ದು ವಾದಿನಿಗ್ರಹದೊಂದಿಗೆ ಪಾಠ ಪ್ರವಚನಗಳನ್ನು ನಡೆಸಿದವರು. ಮುಂದೆ ಇವರ ಕಾರ್ಯಕ್ಷೇತ್ರ ಮುಳುಬಾಗಿಲಿನ ಶ್ರೀ ನರಸಿಂಹತೀರ್ಥವಾಯಿತು .


ಶ್ರೀ ಅಕ್ಷೋಭ್ಯತೀರ್ಥರಿಂದ ನಿರ್ಮಿತವಾದ ನರಸಿಂಹತೀರ್ಥ ಹಾಗೂ ಅವರಿಂದಲೇ ಪ್ರತಿಷ್ಠಿತವಾದ ಶ್ರೀ ಯೋಗಾನರಸಿಂಹನ ಸನ್ನಿಧಿಯಲ್ಲಿ ಬಹುಕಾಲ ನೆಲೆಸಿದ್ದು ಅದನ್ನು ದಕ್ಷಿಣದ ಪ್ರಧಾನ ವೈದಿಕ ವಿದ್ಯಾಕೇಂದ್ರವನ್ನಾಗಿಸಿದ್ದು ಇವರ ಸಾಧನೆ. ಅದಲ ಫಲಶೃತಿಯಾಗಿ ಆನೇಕ ಶತಮಾನಗಳವರೆಗೆ ಮುಳುಬಾಗಿಲು ವಿದ್ವಾಂಸರ ನೆಲೆ ಎನ್ನಿಸಿದ್ದು ಇತಿಹಾಸ.


ನರಸಿಂಹಭೂಪಾಲನ ಬ್ರಹ್ಮಹತ್ಯೆಯನ್ನು ಪರಿಹರಿಸಿ ರಾಜಮನೆತನವನ್ನೇ ಸಂರಕ್ಷಿಸಿದ ತಪಶಕ್ತಿ ಇವರದು. ಅದರಂತೆ ಬ್ರಾಹ್ಮಣನೊಬ್ಬನಿಗೆ ಒದಗಿದ್ದ ಬ್ರಹ್ಮಹತ್ಯಾದೋಷವನ್ನು  ಶಂಖೋದಕ ಪ್ರೋಕ್ಷಣೆಯಿಂದ ಪರಿಹರಿಸಿದ ಕೀರ್ತಿಯೂ ಇವರದು.


ಯತಿಪರಂಪರೆಯಲ್ಲಿ ಶ್ರೀಪಾದರಾಜ ಎಂಬ ಹೆಸರಿನ ಏಕಮಾತ್ರ ವ್ಯಕ್ತಿಯಾಗಿ ವಿರಾಜಿಸಿದ ಇವರದು ಯತಿಗಳ ವೈರಾಗ್ಯವಾದರೆ, ರಾಜರ ಭೋಗವೂ ಆಗಿದ್ದುದು ವಿಶೇಷ. 'ಮುತ್ತಿನ ಕವಚ ಮೇಲ್ಕುಲಾವಿ' ಎಂದು ವರ್ತಿಸುವಂತೆ ರಾಜಯೋಗ್ಯವಾದ ಅಲಂಕಾರ. ಪ್ರತಿನಿತ್ಯ ೬೦ ಬಗೆಯ ಶಾಕವನ್ನು ಶ್ರೀಹರಿಗೆ ಸಮರ್ಪಿಸುವ ರಾಜಭೋಗ. ಇವರನ್ನು ಮೇಲ್ನೋಟಕ್ಕೂ ರಾಜರೇ ಎಂದು ಜನ ತಿಳಿಯುವಂತೆ ಮಾಡಿದೆ. ಆದರೆ ಅವರ ವೈರಾಗ್ಯ ಅದನ್ನು ಮೀರಿಸುವಂತಹ ಅಪೂರ್ವ ಸಾಧನೆಯಾಗಿ ಖ್ಯಾತಿ ಪಡೆದಿದೆ.


ಇವರು ವಾಗ್ವಜ್ರ ಎಂಬ ಗ್ರಂಥವನ್ನು ರಚಿಸಿದ ಪ್ರತೀತಿ ಇದೆ. ವಾಗ್ವಜ್ರವೆಂಬ ಗ್ರಂಥ ಇಂದು ಉಪಲಬ್ಧವಿದ್ದು ಅದನ್ನು ಪ್ರಾಯಶಃ ಇವರ ಕೃತಿಯೆಂದೇ ಭಾವಿಸಲಾಗಿದೆ. ನ್ಯಾಯಸುಧೆಯ ಮೇಲಿನ ಉಪನ್ಯಾಸದ ಸ್ವರೂಪದ ಈ ಕೃತಿ ಅದರ ಮನನಕ್ಕೆ ಅಪೂರ್ವ ನೆರವನ್ನು ನೀಡುತ್ತದೆ.


ಶ್ರೀಪಾದರಾಜರ ಸಾಧನೆಗಳಲ್ಲಿ ಕಿರೀಟಪ್ರಾಯವಾದದ್ದು ಹರಿದಾಸ ಸಾಹಿತ್ಯಕ್ಕೆ ಖಚಿತವಾದ ರೂಪುರೇಷೆಗಳನ್ನು ನೀಡಿದ್ದು ಶ್ರೀಮದಾಚಾರ್ಯರ ಸಾಕ್ಷಾಚ್ಛಿಷ್ಯರಾದ ಶ್ರೀ ನರಹರಿತೀರ್ಥರಿಂದ  ಉಗಮ ಹೊಂದಿದ ಹರಿದಾಸ ಸಾಹಿತ್ಯವನ್ನು ಸಮಗ್ರವಾಗಿ ರೂಪಿಸಿ ಅಪಾರ ಸಂಖ್ಯೆಯ ಕೃತಿಗಳಿಂದ ಅದನ್ನು ಶ್ರೀಮಂತಗೊಳಿಸಿದ್ದು ಇವರ ವಿಶಿಷ್ಟವಾದ ಹಿರಿಮೆ.


ಕೀರ್ತನೆಗಳು, ಉಗಾಭೋಗಗಳು, ಸುಳಾದಿಗಳು, ವೃತ್ತನಾಮ, ದಂಡಕ ಮೊದಲಾಗಿ ಎಲ್ಲಾ ಬಗೆಯ ಪ್ರಾಕಾರಗಳಿಂದಲೂ ಹರಿದಾಸ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಇವರ ಕೃತಿಗಳು ಸಾಹಿತ್ಯ ಸಂಗೀತ ಹಾಗೂ ತತ್ವಜ್ಞಾನಗಳ ದಿವ್ಯಸಂಗಮವಾಗಿದ್ದು ಅನಂತರ ಅನೇಕ ಶತಮಾನಗಳವರೆಗೆ ಅವಿಚ್ಛಿನ್ನವಾಗಿ ಹರಿದಾಸ ಸಾಹಿತ್ಯ ಮುನ್ನಡೆಯಲು ಮುಖ್ಯಸ್ಫೂರ್ತಿ ಎನ್ನಿಸಿದವು. ಅವರು ರಚಿಸಿದ ಶ್ರೀಮಧ್ವನಾಮವಂತೂ ಕನ್ನಡದ ವಾಯುಸ್ತುತಿ ಎನ್ನಿಸಿ ಮನೆ ಮನೆಗಳಲ್ಲಿ ನಿತ್ಯಪಠ್ಯವಾಗಿರುವ ಮಹೋನ್ನತ ಇವರ ಕೃತಿ ಎನ್ನಿಸಿದೆ. ಶ್ರೀ ವಾಯುದೇವರ ಮೂಲರೂಪ ಮತ್ತು ಅವತಾರತ್ರಯಗಳ ವೈಭವವನ್ನು ಅದ್ಭುತ ಶೈಲಿಯಲ್ಲಿ ಸರಸವಾಗಿ ನಿರೂಪಿಸುವ ಈ ಕೃತಿ ಹರಿದಾಸ ಸಾಹಿತ್ಯದ ಸಮಸ್ತ ವಾಯುಪರಸ್ತೋತ್ರಗಳಿಗೂ ನಾಂದಿ ಹಾಡಿದ ವಿಶಿಷ್ಟಕೃತಿಯಾಗಿದೆ. ಹರಿಕಥಾಮೃತಸಾರವನ್ನು ರಚಿಸಿದ ಶ್ರೀ ಜಗನ್ನಾಥದಾಸರು ಇದಕ್ಕೆ ಫಲಶೃತಿಯನ್ನು  ರಚಿಸಿರುವುದು ಇದರ ಹಿರಿಮೆಗೆ ಹಿಡಿದ ಕನ್ನಡಿ. ಇದರ ನಿತ್ಯಪಠನೆಯಿಂದ ಸಿದ್ಧಿ ಪಡೆದ ಅಸಂಖ್ಯ ಜನಗಳನ್ನು ಇಂದೂ ಕಾಣಬಹುದು. ಅವರ ಶ್ರೀಲಕ್ಷ್ಮೀನೃಸಿಂಹಪ್ರಾದುರ್ಭಾವ ದಂಡಕ ಶ್ರೀಮದ್ಭಾಗವತದ ಶ್ರೀಲಕ್ಷ್ಮೀನೃಸಿಂಹಪ್ರಾದುರ್ಭಾವದ ಶ್ಲೋಕಗಳ ಅತ್ಯಂತ ಪರಿಣಾಮಕಾರಿಯಾಗಿ ನಿರೂಪಣೆಯಾಗಿದೆ. ಇಂದಿಗೂ ಹರಿದಾಸ ಸಾಹಿತ್ಯದಲ್ಲಿ ಉಪಲಬ್ಧವಿರುವ ಏಕಮಾತ್ರ ದಂಡಕ ಎಂಬುದು ಇದರ ಪ್ರಶಸ್ತಿ.


ಕೃತಿರಚನೆಯ ಮೂಲಕ ಮಾತ್ರವಲ್ಲದೆ ಶ್ರೀ ವ್ಯಾಸರಾಜರ ಮೂಲಕ ಹರಿದಾಸ ಸಾಹಿತ್ಯವನ್ನು ಚಿರಸ್ಥಾಯಿಯನ್ನಾಗಿಸುವಂತೆ ಮಾಡಿದ ವ್ಯವಸ್ಥೆಯು ಇವರದು. 'ರಂಗವಿಠಲ' ಎಂಬ ಅಂಕಿತದಿಂದ ಇವರು ರಚಿಸಿರುವ ಅಸಂಖ್ಯ ಕೃತಿಗಳು ಸಾಹಿತ್ಯಕವಾಗಿಯೂ ಅತ್ಯಂತ ಮೌಲಿಕ ಎನ್ನಿಸಿ ಮಾಧ್ಯಮವಾಗಿವೆ.


ಶ್ರೀಪಾದರಾಜರ ಸಾಧನೆಯ ಮಕುಟಪ್ರಾಯವಾದ ಮಹತ್ವ ಶ್ರೀ ವ್ಯಾಸರಾಜರಂತಹ ಜಗತ್ತು ಕಂಡ ಮಹಾವಿದ್ವಾಂಸರನ್ನು ರೂಪಿಸಿದ್ದು. ತಮ್ಮಲ್ಲಿ ಅಧ್ಯಯನಕ್ಕೆಂದು ಆಗಮಿಸಿದ ಶ್ರೀ ವ್ಯಾಸತೀರ್ಥರನ್ನು ಸಮಸ್ತ ಶಾಸ್ತ್ರಗಳಲ್ಲಿ ಅಪ್ರತಿಮ ಪಂಡಿತರಾಗುವಂತೆ ರೂಪಿಸಿದ್ದು ಇವರ ಅಧ್ಯಾಪನಕಾರ್ಯದ ಒಟ್ಟು ಫಲಶ್ರುತಿ. ಇವರ ಬಳಿ ಕಳೆದ ಅವಧಿ ಶ್ರೀ ವ್ಯಾಸರಾಜರ ಪಾಲಿಗೆ ಜೀವನದ ಮುಖ್ಯ ಸ್ಫೂರ್ತಿಯ ಎನ್ನಿಸಿ ಅವರನ್ನು ದ್ವೈತವೇದಾಂತ ಕಂಡ ಅಪೂರ್ವ ವಾದಗ್ರಂಥಕಾರರು ಎನ್ನಿಸುವಂತೆ ಮಾಡಿದೆ. ತಮ್ಮ ವ್ಯಾಸತ್ರಯಗಳಿಂದ ಅವರು ಮಾಡಿದ ವಿದ್ವತ್ಕ್ರಾಂತಿ ‌ ಪರಕೀಯರು ಸಹ ಸ್ತುತಿಸುವಂತಹ ಅನುಪಮ ಸಾಧನೆ.


ಶ್ರೀ ವಿಬುಧೇಂದ್ರತೀರ್ಥರಂತಹ ವಿಭೂತಿಪುರುಷರ ಶಿಷ್ಯರಾಗಿ ಶ್ರೀ ವ್ಯಾಸರಾಜರಂತಹ ವಿದ್ವನ್ಮೇರುಗಳ ವಿದ್ಯಾಗುರುಗಳಾಗಿ ಹರಿದಾಸ ಸಾಹಿತ್ಯದ ಸಮಗ್ರ ನಿರ್ಮಾತೃಗಳಾಗಿ ರಾಜಮಹಾರಾಜರುಗಳನ್ನು ಉದ್ಧರಿಸಿದ ತಪೋನಿಧಿಗಳಾಗಿ ಪಾಠಪ್ರವಚನಗಳ ಮೂಲಕ ಮಧ್ವಸಿದ್ಧಾಂತವನ್ನು ವಿಶೇಷವಾಗಿ ದಕ್ಷಿಣ ಭಾರತದಲ್ಲಿ ಪ್ರಸಾರಗೊಳಿಸಿದ ವಿದ್ವದ್ವರೇಣ್ಯರಾಗಿ ಶ್ರೀ ಶ್ರೀಪಾದರಾಜರು ದ್ವೈತವೇದಾಂತದ ಆಗಸದಲ್ಲಿ ಧ್ರುವತಾರೆಯಂತೆ ಕಂಗೊಳಿಸುವ ಅಮರವ್ಯಕ್ತಿತ್ವವನ್ನು ಹೊಂದಿರುವರು.


ಉತ್ತರಾದಿಮಠದ ಶ್ರೀ ರಘುನಾಥತೀರ್ಥರಿಂದ ಶ್ರೀಪಾದರಾಜಪ್ರಶಸ್ತಿ ಶ್ರೀ ರಾಘವೇಂದ್ರಮಠದ ವಿಭುದೇಂದ್ರತೀರ್ಥರ ಬಳಿ ಅಧ್ಯಯನ ತಮ್ಮ ಹೆಸರಿನಿಂದ ಮಠಕ್ಕೆ ವ್ಯಾಸರಾಜ ಮಠವೆಂಬ ಪ್ರಸಿದ್ಧಿ ತಂದುಕೊಟ್ಟ ಶ್ರೀ ವ್ಯಾಸರಾಜರ ಗುರುತ್ವ. ಹೀಗೆ ಘಟ್ಟದ ಮೇಲಿನ ಪ್ರಧಾನ ಮಠತ್ರಯಗಳಿಗೂ ಶ್ರೀಪಾದರಾಜರ ಸಂಪರ್ಕ ಅತ್ಯಂತ ಗಮನಾರ್ಹವಾದುದು. ಪ್ರಾತಃಕಾಲದ ಇವರ ಸ್ಮರಣೆ ಮೃಷ್ಟಾನ್ನಭೋಜನದಾಯಕ ಎಂಬ ಪ್ರತೀತಿ ಅನೇಕರ ಅನುಭವಿಸಿದ್ಧವಾದ ಸತ್ಯಸಂಗತಿ.



ಡಾ|| ವ್ಯಾಸನಕೆರೆ ಪ್ರಭಂಜನಾಚಾರ್ಯ 

'ರಾಷ್ಟ್ರಪ್ರಶಸ್ತಿ' ಪುರಸ್ಕೃತರು

'ಪಾಜಕ', #89/24, 3ನೇ ಅಡ್ಡರಸ್ತೆ, ಮೌಂಟ್ ಜಾಯ್ ಬಡಾವಣೆ, ಹನುಮಂತನಗರ, ಬೆಂಗಳೂರು


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
To Top