ಉರ್ವ ಶ್ರೀ ಮಾರಿಯಮ್ಮ
ಪುಟ 104
ಬೆಲೆ ರೂ. 100/-
ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳನ್ನು ಒಳಗೊಂಡಿರುವ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಹುಹಿಂದಿನಿಂದಲೂ ಸಾತ್ವಿಕ ಪರಂಪರೆಯ ಶಕ್ತ್ಯಾರಾಧನೆ ಆಚರಣೆಯಲ್ಲಿರುವಂತೆ, ಇನ್ನೊಂದೆಡೆ ಗ್ರಾಮದೇವತೆ ಮಾರಿಯಮ್ಮನ ಆರಾಧನೆ ಕೂಡ ಕಂಡು ಬರುತ್ತದೆ. ಕಷ್ಟಕೋಟಲೆಗಳನ್ನು – ದುರಿತಗಳನ್ನು – ರೋಗರುಜಿನಗಳನ್ನು ದೂರ ಮಾಡುವ ಈ ಮಾರಿದೇವತೆ ವಿಜಯನಗರ ಅರಸರ ಕಾಲದಲ್ಲಿ, ಅಂದರೆ ಸುಮಾರು ಹದಿನಾಲ್ಕನೇ ಶತಮಾನದ ಮಧ್ಯಭಾಗದ ಹೊತ್ತಿಗೆ ಘಟ್ಟದ ಮೇಲಿನಿಂದ ಕರಾವಳಿಗೆ ವಲಸೆ ಬಂದ ಜನರ ಜೊತೆಗೆ ಇಳಿದು ಬಂದಂತೆ ಕಂಡುಬರುತ್ತದೆ ಎಂದು ಇತಿಹಾಸ ತಿಳಿಸುತ್ತದೆ. ಮಂಗಳೂರು ನಗರದಲ್ಲಿರುವ ಉರ್ವ ಶ್ರೀ ಮಾರಿಯಮ್ಮ ಅಂತಹ ಒಂದು ಕ್ಷೇತ್ರ.
ಇತ್ತೀಚೆಗೆ ಉರ್ವ ಮಾರಿಗುಡಿಯು ಜೀರ್ಣೋದ್ಧಾರ ಹೊಂದಿ ಬ್ರಹ್ಮಕಲಶೋತ್ಸವ ಮೊದಲಾದ ಧಾರ್ಮಿಕ ಸಮಾರಂಭಗಳು ವಿಧಿವತ್ತಾಗಿ ಜರಗಿದವು. ಆ ಸಂದರ್ಭದಲ್ಲಿ ಉರ್ವ ಮಾರಿಗುಡಿಯ ಇತಿಹಾಸ ಮತ್ತು ಆರಾಧನಾ ವಿಶೇಷತೆಗಳ ಬಗ್ಗೆ ಪ್ರಸಿದ್ಧ ಸಾಹಿತಿಗಳೂ ವಿದ್ವಾಂಸರೂ ಆದ ಡಾ. ವಸಂತಕುಮಾರ ಪೆರ್ಲ ಅವರು ಇತಿಹಾಸವನ್ನು ಸಂಶೋಧಿಸಿ ಬರೆದು, ದೇವಸ್ಥಾನದ ಆಡಳಿತ ಸಮಿತಿ ಪ್ರಕಟಿಸಿದ ಅಪೂರ್ವ ಕೃತಿಯೇ ‘ಉರ್ವ ಶ್ರೀಮಾರಿಯಮ್ಮ’.
ಉರ್ವಕ್ಕೆ ಶ್ರೀ ಮಾರಿಯಮ್ಮನ ಆಗಮನವನ್ನು ಸಂಕ್ಷಿಪ್ತವಾಗಿ ಮತ್ತು ಇತಿಹಾಸ ಆಧಾರಿತವಾಗಿ ಡಾ. ಪೆರ್ಲ ಅವರು ದಾಖಲಿಸುತ್ತಾರೆ. ಅಲ್ಲದೆ ಗ್ರಾಮದೇವತೆಯಾಗಿ ಆಕೆಯ ನೆಲೆ, ಆರಾಧನೆಯ ಕ್ರಮ, ಕಾಲಾನುಕಾಲಕ್ಕೆ ಕ್ಷೇತ್ರ ಬೆಳೆದು ಬಂದ ಬಗೆ, ಭಕ್ತಾದಿಗಳ ನಂಬಿಕೆ-ಶ್ರದ್ಧೆಯ ಪರಿ, ಆಕೆ ರೋಗರುಜಿನಗಳನ್ನು ಕಳೆಯುವ ವಿಧಾನ ಮೊದಲಾದವುಗಳನ್ನು ವಿವರವಾಗಿ ತಿಳಿಸಿಕೊಡುತ್ತಾರೆ.
ಸುಮಾರು ಆರುನೂರ ಐವತ್ತು ವರ್ಷಗಳ ಹಿಂದೆ ಮೊಗವೀರ ಚುಳ್ಳಿ ಗುರಿಕ್ಕಾರ ಮನೆತನದವರಿಂದ ಸ್ಥಾಪನೆಯಾದದ್ದು, ನಾಡಿನ ಒಳಿತಿಗಾಗಿ ಮಾಡುವ ಸಾಮೂಹಿಕ ಪ್ರಾರ್ಥನೆ, ವಾರ್ಷಿಕ ಮಾರಿಪೂಜೆ, ದೇವಸ್ಥಾನಕ್ಕೆ ಮೊಗವೀರರ ವಿಶೇಷ ಸೇವೆ ಮತ್ತು ಕೊಡುಗೆ ಮೊದಲಾದವುಗಳನ್ನು ಪರಿಶೀಲಿಸುವುದರ ಜೊತೆಗೆ ಜೀರ್ಣೋದ್ಧಾರಗೊಂಡು ಕಂಗೊಳಿಸುತ್ತಿರುವ ದೇವಸ್ಥಾನದ ವಾಸ್ತುವಿಶೇಷಗಳನ್ನು ಪರಿಚಯಿಸುತ್ತಾರೆ. ಪರಿವಾರ ದೈವ-ದೇವರುಗಳ ಕುರಿತು ಚರ್ಚಿಸುತ್ತಾರೆ.
ಉರ್ವ ಶ್ರೀ ಮಾರಿಯಮ್ಮ ದೇವಸ್ಥಾನದ ವಿಶಿಷ್ಟ ಸಂಪ್ರದಾಯಗಳಾದ ಹಾಲು ಉಕ್ಕಿಸುವ ಪೂಜೆ, ರಾಶಿಪೂಜೆ, ಮಾರಿ ಉಚ್ಚಿಷ್ಟ, ಮಡಸ್ತಾನ, ಕಂಚಿಲ್ ಸೇವೆ, ಮಂಡಲಸೇವೆ, ರಾಶಿಮೆರವಣಿಗೆ, ಮಾರಿ ಓಡಿಸುವುದು ಮೊದಲಾದವುಗಳ ಕುರಿತು ವಿವರವಾಗಿ ಬರೆಯುತ್ತಾರೆ.
ದೇವಸ್ಥಾನದ ಆಡಳಿತವನ್ನು ನಿರ್ವಹಿಸುತ್ತಿರುವ ಆಡಳಿತ ಸಮಿತಿ ಬಗ್ಗೆ ಮತ್ತು ಮೊಗವೀರರ ಮಾತೃಸಂಸ್ಥೆಯಾದ ಏಳುಪಟ್ಟಣ ಮೊಗವೀರ ಸಂಯುಕ್ತ ಮಹಾಸಭಾ ಬಗ್ಗೆ ಮಾಹಿತಿ ಕೊಡುತ್ತಾರೆ. ದೇವಸ್ಥಾನವನ್ನು ಸರ್ವಾಂಗೀಣವಾಗಿ ಅಭಿವೃದ್ಧಿಪಡಿಸಿ ನಾಡಿನ ಒಂದು ಪ್ರಮುಖ ದೇವಾಲಯವಾಗಿ ಬೆಳೆಸುವ ಆಡಳಿತ ಸಮಿತಿಯ ಕನಸನ್ನು ಪ್ರಸ್ತುತಪಡಿಸುತ್ತಾರೆ. ತಾಮಸ ಪ್ರವೃತ್ತಿಯ ದೇವಸ್ಥಾನವು ಸಾತ್ವಿಕ ದೇವಾಲಯವಾಗಿ ಪರಿವರ್ತಿತವಾದುದನ್ನು ಪ್ರಾಸಂಗಿಕವಾಗಿ ಉಲ್ಲೇಖಿಸುತ್ತಾರೆ.
ಕೃತಿಯ ಕೊನೆಯಲ್ಲಿ ದೇವಸ್ಥಾನ ಮತ್ತು ದೇವಿಯ ಕುರಿತು ಗಣ್ಯರನೇಕರ ಅಭಿಪ್ರಾಯಗಳನ್ನು ಸಂಗ್ರಹಿಸಿ ಕೊಡಲಾಗಿದೆ. ಇದರಿಂದ ದೇವಸ್ಥಾನದ ಮಹತ್ವದ ಬಗ್ಗೆ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ಉರ್ವ ಎಂಬ ಹೆಸರು ಬಂದುದು ಹೇಗೆ ಎಂದು ವಿವೇಚಿಸಿರುವುದು ಕುತೂಹಲಕರವಾಗಿದೆ. ಗ್ರಾಮದೇವತೆಯಾದ ಮಾರಿಯಮ್ಮನ ವಿಶೇಷತೆಗಳನ್ನು ಲೇಖಕರು ತಿಳಿಸುತ್ತಾರೆ.
ಉರ್ವ ಮಾರಿಯಮ್ಮನ ಕುರಿತಾದ ಹಲವು ನಿಗೂಢಗಳನ್ನು ಭಕ್ತರಿಗೆ ತಿಳಿಸಿಕೊಡುವ ಇದೊಂದು ಅಪೂರ್ವ ಕೃತಿಯಾಗಿದೆ. ಇಂತಹ ವಿಶಿಷ್ಟ ಕೃತಿ ರಚಿಸಿದ ಲೇಖಕರಾದ ಡಾ. ವಸಂತಕುಮಾರ ಪೆರ್ಲ ಅವರಿಗೂ ಇದನ್ನು ಪ್ರಕಟಿಸಿದ ದೇವಸ್ಥಾನದ ಆಡಳಿತ ಸಮಿತಿಗೂ ಅಭಿನಂದನೆ ಸಲ್ಲಬೇಕು.
- ನಂದಳಿಕೆ ಬಾಲಚಂದ್ರ ರಾವ್
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ