ನೀವು ಭಾವನೆಗಳನ್ನು ಅದುಮಿಟ್ಟು ಬದುಕುತ್ತಿದ್ದೀರಾ? ಇಲ್ಲಿದೆ ಹತ್ತು ಲಕ್ಷಣಗಳು‌

Upayuktha
0

- ಡಾ. ರೂಪಾ ರಾವ್

ಭಾವನೆಗಳು ಬದುಕಿನ ಭಾಗ, ಮನುಷ್ಯ ಮನುಷ್ಯನಾಗಿರಲು ಭಾವನೆಗಳೂ ಒಂದು ಕಾರಣ. ಈ ಭಾವನೆಗಳನ್ನು ಅನುಭವಿಸಿ ಬದುಕುವುದು ಬಹಳ ಮುಖ್ಯ, ಆದರೆ ಕೆಲವರು ಈ ಭಾವನೆಗಳನ್ನು ತಮ್ಮಲ್ಲಿಯೇ ಅದುಮಿ ಬದುಕುವ ಪ್ರಯತ್ನ ಮಾಡುತ್ತಾರೆ.


ಭಾವನೆಗಳನ್ನು ಹೊರ ಚೆಲ್ಲಲು ಏನೋ ಅಳುಕು, ಹಿಂಜರಿಕೆ, ಇಂತಹವರು ಕೋಪ ಬಂದಾಗ, ಅಥವಾ ಮನಸಿಗೆ ನೋವಾದಾಗಲೂ ನಗುತ್ತಿರುವಂತೆ ಇರುವ ಪ್ರಯತ್ನ ಮಾಡುತ್ತಾರೆ. ಇದು ಮನಸು ಹಾಗೂ ದೈಹಿಕ ಆರೋಗ್ಯಕ್ಕೆ ಒಳ್ಳೆಯದಲ್ಲ. ಭಾವನೆಗಳನ್ನು ಅಡಗಿಸಿಟ್ಟಂತೆ ಅದು ಬಹಳ ಅಪಾಯಗಳನ್ನು ಉಂಟು ಮಾಡುತ್ತದೆ.


ಭಾವನೆಗಳನ್ನು ಅದುಮಿಟ್ಟು ಬದುಕುವವರ ಹತ್ತು ಲಕ್ಷಣಗಳನ್ನು ಕೆಳಗೆ ವಿವರಿ‌ಸಿರುವೆ...


1. ಅತೀವ ಧನಾತ್ಮಕ ಮಾತುಗಳು:

ಈ ವ್ಯಕ್ತಿಗಳು ಯಾವಾಗಲೂ ಅತಿಯಾಗಿ ಧನಾತ್ಮಕ ಮಾತುಗಳನ್ನು ನುಡಿಯುತ್ತಾ, ನೆಗೆಟೀವ್ ಭಾವನೆಗಳನ್ನು ಬಚ್ಚಿಡಬಹುದು, ಸಮಸ್ಯೆಯನ್ನು ಎದುರಿಸದೇ ಅದನ್ನು ಮುಚ್ಚಿಟ್ಟು ನಗೆಯ‌ ಮುಖವಾಡ ಧರಿಸುವುದುಬಹಳ ಸಮಸ್ಯೆಗಳನ್ನು ಉಂಟು ಮಾಡುತ್ತದೆ.


2. ಯಾವಾಗಲೂ ಸುಸ್ತಾದಂತಿರುತ್ತಾರೆ:

ಭಾವನೆಗಳನ್ನು ಒತ್ತಿ ಹಿಡಿದಿಡಲು ಜಾಸ್ತಿ ಶಕ್ತಿಯ ಅಗತ್ಯವಿರುತ್ತದೆ, ಆ ಭಾವನೆಗಳನ್ನು ಅದುಮಿಡುವುದರಿಂದ ಶಕ್ತಿ ವ್ಯಯವಾಗಿ ಅದು ಸದಾಕಾಲದ ಆಯಾಸಕ್ಕೆ ಕಾರಣವಾಗುತ್ತದೆ.


3. ಹುಸಿ ಹಾಗೂ ಹಸಿ ಮಾತುಕತೆ: 

ಮಾತುಕತೆಗಳು ಬಲವಂತವಾಗಿ ನಡೆಯುತ್ತಿರುವಂತೆ ಅಥವಾ ನಟನೆ‌ ಮಾಡುತ್ತಿರುವಂತೆ ಕಾಣಿಸಬಹುದು. ಫೇಕ್ ನಗು ಫೇಕ್ ಮಾತು, ಇತ್ಯಾದಿ


4. ಪದೇಪದೇ ಅನಾರೋಗ್ಯಕ್ಕೆ ಬೀಳುವುದು: ನಿಗ್ರಹಿಸಿದ ಭಾವನೆಗಳು ನಮ್ಮ ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು (ಇಮ್ಯೂನಿಟಿ) ದುರ್ಬಲಗೊಳಿಸಬಹುದು, ಇದರಿಂದ ಕಾಯಿಲೆ ಅಥವಾ ಅನಾರೋಗ್ಯಗಳು ಸುಲಭವಾಗಿ ಆಕ್ರಮಣ ನಡೆಸುತ್ತವೆ. "ಸೈಕೋಸೊಮ್ಯಾಟಿಕ್ ಮೆಡಿಸಿನ್" ನಲ್ಲಿನ ಅಧ್ಯಯನಗಳು ದೈಹಿಕ ಆರೋಗ್ಯ ಸಮಸ್ಯೆಗಳಿಗೆ ಭಾವನೆಗಳನ್ನು ಅದುಮಿ‌ ಹಿಡಿದಿಡುವುದೂ ಕಾರಣ ಎನ್ನುತ್ತದೆ.

5. ನಿದ್ರಾಹೀನತೆ: ಭಾವನೆಗಳನ್ನು ತಡೆಹಿಡಿಯುವುದರಿಂದ, ಮನಸು ಅವುಗಳ ಬಗ್ಗೆಯೇ ಪದೇ ಪದೇ ಯೋಚನೆ ನಡೆಸುತ್ತಿರುತ್ತದೆ, ಇದರಿಂದ ಮನಸು ಆರಾಮ ಹಾಗು ವಿರಾಮಕ್ಕೆ ಒಳಗಾಗದೇ ನಿದ್ರಾಹೀನತೆ ಉಂಟಾಗುತ್ತದೆ. 


6. ಭಾವಾವೇಶ ಹಾಗೂ ಭಾವೋದ್ವೇಗ: 

ಬಹುಕಾಲ ನಿಗ್ರಹಿಸಿದ ಭಾವನೆಗಳು ಕುಕ್ಕರಿನಂತೆ  ಒಳಗೊಳಗೇ ಕುದಿಯುತ್ತಿರುತ್ತದೆ, ಯಾವುದೋ ಸಮಯದಲ್ಲಿ ಇದು ಹಠಾತ್ ಆಗಿ ಸ್ಫೋಟಗೊಂಡು ಅನಿರೀಕ್ಷಿತ ಕೋಪ ಅಥವಾ ಹತಾಶೆಗೆ ಕಾರಣವಾಗಬಹುದು. 


7. ಮಾದಕ ವಸ್ತಗಳ‌ ವ್ಯಸನ: ಈ ಅದುಮಿಟ್ಟ  ಭಾವನೆಗಳನ್ನು ನಿರ್ವಹಿಸಲಾಗದೇ ಇವುಗಳಿಂದ ಪಾರಾಗಲು ಜನರು, ಸಿಗರೇಟ್, ಮದ್ಯ ಅಥವಾ ಮಾದಕದ್ರವ್ಯದ ಕಡೆಗೆ ತಿರುಗಬಹುದು. 


8. ಭಿನ್ನಾಭಿಪ್ರಾಯಗಳನ್ನು ತಪ್ಪಿಸುವುದು: ಅವರು ಸಾಮಾನ್ಯವಾಗಿ ಘರ್ಷಣೆಗಳನ್ನು ತಪ್ಪಿಸುತ್ತಾರೆ, ಒಂದೊಮ್ಮೆ ಭಿನ್ನಾಭಿಪ್ರಾಯವನ್ನು ಎದುರಿಸಿದರೆ ತಮ್ಮ ನಿಗ್ರಹಿಸಿದ ಭಾವನೆಗಳು ಹೊರಹೊಮ್ಮಬಹುದೆಂಬ ಭಯವಿರುತ್ತದೆ.

 

9. ದೈಹಿಕ ಸಮಸ್ಯೆಗಳು:

ಭಾವನೆಗಳ ನಿರಂತರ ನಿಗ್ರಹವು ಸ್ನಾಯು ಸೆಳೆತ ಮತ್ತು ನೋವಿಗೆ ಕಾರಣವಾಗಬಹುದು. 


10. ಖಿನ್ನತೆ ಮತ್ತು ಆತಂಕ

ನಿಗ್ರಹಿಸಿದ ಭಾವನೆಗಳು ಕೊರಗಿನಂತೆ ಆಗಿ ಕಾಲಾನಂತರದಲ್ಲಿ ಖಿನ್ನತೆ ಅಥವಾ ಆತಂಕವಾಗಿ ಪ್ರಕಟವಾಗಬಹುದು. 


ಇದೆಲ್ಲದೆ ಆರೋಗ್ಯಕರ ಸಂಬಂಧಗಳನ್ನು‌ ಹೊಂದಲಾಗದೇ ಇರುವುದು, ಆಲೋಚನಾ ಶಕ್ತಿ ನಿಧಾನವಾಗಿ ಕುಂಠಿತವಾಗುವುದು, ಹೆಚ್ಚಿದ ಮಾನಸಿಕ ಒತ್ತಡ ಇವುಗಳೂ ಕಾಡಬಹುದು.


ಮನುಷ್ಯನ ಸಹಜ ಗುಣ ಭಾವಾಭಿವ್ಯಕ್ತಿ, ಆದರೆ ಅಂತಹ‌ ಸಹಜ ಪ್ರವೃತ್ತಿ ಇಂದ ಕೆಲವು ಜನರೇಕೆ ಓಡುತ್ತಾರೆ ಎಂಬುದನ್ನು ನೋಡೋಣ.


1. ವಿಮರ್ಶೆಗೆ ಅಥವಾ ಟೀಕೆಗೆ ಒಳಗಾಗುವ ಅಥವಾ ತಿರಸ್ಕಾರದ ಭಯ: ಕೆಲವರು ನಕಾರಾತ್ಮಕ ವಿಮರ್ಶೆಗೆ ಒಳಗಾಗುವುದು ಅಥವಾ ಇತರರಿಂದ ನಿರಾಕರಣೆ ತಪ್ಪಿಸಲು ತಮ್ಮ ಭಾವನೆಗಳನ್ನು ಮರೆಮಾಡುತ್ತಾರೆ.


ಸೋಶಿಯಲ್ ಕಂಪೇರಿಶನ್ ಸಿದ್ಧಾಂತದ ಪ್ರಕಾರ, ಈ ವ್ಯಕ್ತಿಗಳು ತಮ್ಮನ್ನು ಇತರರಿಗೆ ಹೋಲಿಸಿಕೊಳ್ಳುತ್ತಾರೆ ಮತ್ತು ತಮ್ಮ ಸಕಾರಾತ್ಮಕ ಸಾಮಾಜಿಕ ಇಮೇಜ್ ಅನ್ನು ಕಾಪಾಡಿಕೊಳ್ಳಲು, ಸಮಾಜ ಒಪ್ಪಿಕೊಳ್ಳುವುದಿಲ್ಲ ಎಂದು ಅವರು ನಂಬುವ ಭಾವನೆಗಳನ್ನು ವ್ಯಕ್ತಪಡಿಸದಿರಬಹುದು. 


2. ಸಾಂಸ್ಕೃತಿಕ ಮತ್ತು ಸಾಮಾಜಿಕ ನಿಯಮಗಳು: ಸಾಂಸ್ಕೃತಿಕ ರೂಢಿಗಳು ಮತ್ತು ಸಾಮಾಜಿಕ ನಿರೀಕ್ಷೆಗಳು ಯಾವ ಭಾವನೆಗಳನ್ನು ವ್ಯಕ್ತಪಡಿಸಲು ಸೂಕ್ತವೆಂದು ನಿರ್ದೇಶಿಸಬಹುದು. ಉದಾಹರಣೆಗೆ ಗಂಡು ಅಳಬಾರದು, ಹೆಂಗಸು ಎಷ್ಟು ತೊಂದರೆಯೇ ಆದರೂ‌ ಹೇಳಿಕೊಳ್ಳಬಾರದು ಎಂಬ ಸಮಾಜದ ಕಟ್ಟುಪಾಡುಗಳು ಎಂದು ಪರಿಗಣಿಸಲ್ಪಟ್ಟ ಭಾವನೆಗಳನ್ನು ನಿಗ್ರಹಿಸಲು ಜನ ಮುಂದಾಗುತ್ತಾರೆ. 


3. ಕಂಟ್ರೋಲ್ ಮಾಡುವ ಬಯಕೆ: ಕೆಲವು ವ್ಯಕ್ತಿಗಳು ತಮ್ಮ ಜೀವನ ಮತ್ತು ಸಂದರ್ಭಗಳ ಮೇಲೆ ಕಂಟ್ರೋಲ್ ಕಾಪಾಡಿಕೊಳ್ಳಲು ಭಾವನೆಗಳನ್ನು ತೋರಿಸುವುದಿಲ್ಲ. 


4. ಹಳೆಯ ನಕಾರಾತ್ಮಕ/ ಕೆಟ್ಟ ಅನುಭವಗಳು: ಬಾಲ್ಯದಲ್ಲಿ ಭಾವನೆಗಳನ್ನು ವ್ಯಕ್ತಪಡಿಸಿದಾಗ ಯಾವುದಾದರೂ ನಕಾರಾತ್ಮಕ ಪರಿಣಾಮಗಳನ್ನು ಎದುರಿಸಿದ್ದಾಗ ಅದೂ ಸಹಾ ಭಾವನಾತ್ಮಕ ನಿಗ್ರಹಕ್ಕೆ ಕಾರಣವಾಗಬಹುದು. ಉದಾಹರಣೆಗೆ ಮಗು ಅತ್ತಾಗ ಅದರ ಪೋಷಕರು ಅಳಬೇಡ ಎಂದು ಹೆದರಿಸಿದ್ದರೆ ಅಥವಾ ಕೋಪ ಮಾಡಿಕೊಂಡಾಗ ಅದರಿಂದ ಯಾವುದಾದರೂ ತೊಂದರೆ ಆಗಿದ್ದಾಗ ಭಾವನೆಗಳನ್ನು ಅದುಮಿಡುತ್ತಾರೆ


5. ತಮಗೆ  ಅಥವಾ ಇನ್ನೊಬ್ಬರಿಗೆ ಬೇಸರವಾಗಬಹುದು: ಭಾವನೆಗಳನ್ನು ತೋರಿಸುವುದು ದೌರ್ಬಲ್ಯ ಇದನ್ನು ತೋರಿಸುವುದರಿಂದ ತನಗೋ ಅಥವಾ ಇತರರಿಗೋ ಯಾವುದೋ  ಹಾನಿ ಆಗಬಹುದು ಎಂದು ನಂಬಿದ್ದರೆ, ಭಾವನೆಗಳನ್ನು ಅದುಮಿಡುತ್ತಾರೆ.


ಯಾವುದೇ ಭಾವನೆಗಳನ್ನು ಆಗಲಿ ಅದನ್ನು ಚಾನೆಲೈಸ್‌ ಮಾಡಲೇಬೇಕು. ಇಲ್ಲವಾದರೆ ನಮ್ಮ ಭಾವನೆಗಳನ್ನು ತೋರಿಸಲಾಗದೆ ಅಸಹಾಯಕತೆ ಖಿನ್ನತೆ ಹಾಗೂ ದೈಹಿಕ ತೊಂದರೆಗಳನ್ನು ಉಂಟುಮಾಡುತ್ತವೆ.


ಈ ಭಾವನೆಗಳನ್ನು ಮೊದಲಿಗೆ ಅರ್ಥ ಮಾಡಿಕೊಂಡು ಅವುಗಳೊಂದಿಗೆ ಸಂಪರ್ಕ ಸಾಧಿಸಬೇಕು. ಇದಕ್ಕೆಂದೇ ಕೆಲವು ದಾರಿಗಳು ಕೆಳಗಿವೆ.


1. ಮೈಂಡ್‌ಫುಲ್‌ನೆಸ್ ಮತ್ತು ಧ್ಯಾನ: ಸಾವಧಾನತೆಯನ್ನು ಅಭ್ಯಾಸ ಮಾಡುವುದರಿಂದ ನಮ್ಮ ಸ್ವಂತ ಭಾವನೆಗಳನ್ನು ಗಮನಿಸಿ ಅರ್ಥ ಹಾಗೂ  ಅರಿವು ಮೂಡಿಸಿಕೊಳ್ಳಬಹುದು.

 

2. ಜರ್ನಲಿಂಗ್ ಅಥವಾ ಅಭಿವ್ಯಕ್ತಿಶೀಲ ಬರವಣಿಗೆಯನ್ನು ನಿಯಮಿತವಾಗಿ ರೂಢಿಸಿಕೊಳ್ಳುವುದರಿಂದ ನಮ್ಮ ಭಾವನೆಗಳನ್ನು ಅರ್ಥ ಮಾಡಿಕೊಳ್ಳಲು ಮತ್ತು ಪ್ರಕ್ರಿಯೆಗೊಳಿಸಲು, ವ್ಯಕ್ತಪಡಿಸಲು ಸಾಧ್ಯವಾಗುತ್ತದೆ.


3. ವ್ಯಾಯಾಮ, ಅಡಗಿಸಿಟ್ಟ ಭಾವನೆಗಳನ್ನು ಬಿಡುಗಡೆ ಮಾಡಲು ಕಸರತ್ತು ಹಾಗೂ ವ್ಯಾಯಾಮವು ಸಹಾಯ ಮಾಡುತ್ತದೆ.


4. ಕ್ರಿಯೇಟಿವ್ ಔಟ್‌ಲೆಟ್‌ಗಳು: ಕಲೆ, ಸಂಗೀತ ಅಥವಾ ನೃತ್ಯದಂತಹ ಸೃಜನಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ನೀವು ಭಾವನೆಗಳನ್ನು ಮಾತು ಹಾಗೂ ಮುಖತಃ ವ್ಯಕ್ತಪಡಿಸಬಹುದು.


5 ಥೆರಪಿ ಮತ್ತು ಕೌನ್ಸೆಲಿಂಗ್: ಮಾನಸಿಕ ಆಪ್ತ ಸಮಾಲೋಚಕರೊಂದಿಗೆ ಮಾತನಾಡುವುದು ಭಾವನೆಗಳನ್ನು ಕಲಿಯುವುದು ಮತ್ತು ವ್ಯಕ್ತಪಡಿಸಲು ಸಹಾಯ ಒದಗಿಸುತ್ತದೆ. 


6. ಆಳವಾದ ಉಸಿರಾಟ: ಆಳವಾದ ಉಸಿರಾಟದ ವ್ಯಾಯಾಮಗಳನ್ನು ಅಭ್ಯಾಸ ಮಾಡುವುದು ಮೆದುಳಿನ ಆತಂಕವನ್ನು ಶಾಂತಗೊಳಿಸಲು ಮತ್ತು ಭಾವನಾತ್ಮಕ ಪ್ರತಿಕ್ರಿಯೆಗಳನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. 


 7. ಸುತ್ತಲಿನವರ ಸಹಕಾರ: ನಮ್ಮ ಭಾವನೆಗಳನ್ನು ವಿಶ್ವಾಸಾರ್ಹ ಸ್ನೇಹಿತರು ಅಥವಾ ಕುಟುಂಬದೊಂದಿಗೆ ಹಂಚಿಕೊಳ್ಳುವುದು ಪರಿಹಾರ ಮತ್ತು ಬೆಂಬಲವನ್ನು ನೀಡುತ್ತದೆ. 


8. ಸ್ವ ಸಹಾನುಭೂತಿ: ಸೆಲ್ಫ್ ಎಂಪತಿ 

ಕಷ್ಟಕರವಾದ ಭಾವನೆಗಳನ್ನು ವ್ಯಕ್ತಪಡಿಸುವಾಗ ನಿಮ್ಮ ಮನಸಿನಲ್ಲಿ ಏನಾಗುತ್ತಿದೆ ಎಂದು ಅರ್ಥ ಮಾಡಿಕೊಂಡು ನಿಮ್ಮ ಭಾವನೆಗಳನ್ನು ಅರಿಯಿರಿ.


 9. ಗ್ರೌಂಡಿಂಗ್ ತಂತ್ರಗಳು: ವರ್ತಮಾನದ ಕ್ಷಣದ ಮೇಲೆ ಗಮನ ಕೇಂದ್ರೀಕರಿಸುವ ಮೂಲಕ ಗ್ರೌಂಡಿಂಗ್ ತಂತ್ರಗಳನ್ನು ಅಭ್ಯಾಸ ಮಾಡಬಹುದು. ಇದು ಮನಸಿನ ಅಗಾಧ ಭಾವನೆಗಳನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. 


10. ಆರೋಗ್ಯಕರ ಬೌಂಡರಿ: ಸಂಬಂಧಗಳಲ್ಲಿ ಆರೋಗ್ಯಕರ ಗಡಿಗಳು ಅಂದರೆ ಎಲ್ಲಿ ಯಾರನ್ನು ಎಲ್ಲಿಯವರೆಗೆ ನಮ್ಮ ವಲಯಕ್ಕೆ ಬರಲು  ನಿರ್ಧಾರ ಮಾಡುವುದು ಮತ್ತು ಸಂಬಂಧಗಳನ್ನು ಸರಿಯಾಗಿ ನಿರ್ವಹಿಸುವುದು ಭಾವನಾತ್ಮಕ ನಿಗ್ರಹವನ್ನು ತಡೆಯಲು ಸಹಾಯ ಮಾಡುತ್ತದೆ. 


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top