ಗಂಗಾವತರಣದ ದಿನ- ದಶಾಹರ ವ್ರತದ ವೈಶಿಷ್ಟ್ಯ

Upayuktha
0

(ಜೂನ್ 16 ರಂದು ದಶಾಹರ ವ್ರತ ತನ್ನಿಮಿತ್ತ ಈ ಲೇಖನ)



ಪ್ರತಿವರುಷ ಜೇಷ್ಠ ಮಾಸದ ಶುಕ್ಲ ದಶಮಿಯನ್ನು ಭಾಗೀರಥಿ ಜಯಂತಿ ದಿವಸವನ್ನಾಗಿ ಆಚರಿಸಲಾಗುತ್ತಿದೆ. ಆ ಶುಭದಿನದಂದು ಶ್ರೀ ಗಂಗಾಮಾತೆಯನ್ನು ಆರಾಧಿಸುವ ಪದ್ಧತಿ ಇದೆ. ಇದರ ಆಚರಣೆಯಿಂದ ಗಂಗಾ ಮಾತೆಯು ಹತ್ತು ವಿಧದ ಪೂಜಕರ ಪಾಪಗಳನ್ನು ನಾಶಮಾಡುತ್ತಾಳೆ ಎಂಬ ನಂಬಿಕೆ ಇದೆ. ಅಂತೆಯೇ ಈ ವ್ರತಕ್ಕೆ ದಶಹರ ಎಂಬ ಹೆಸರು ಬಂದಿದೆ. ಇದನ್ನು ಆಚರಿಸುವ ರೀತಿ ಹಾಗೂ ಫಲಶೃತಿಯನ್ನು ಇಲ್ಲಿ ವಿವರಿಸಲಾಗಿದೆ.


ಬಹಳ ಹಿಂದೆ ಭಗೀರಥ ಮಹಾರಾಜನ ತನ್ನ ಕಠೋರವಾದ ತಪಸ್ಸಿನಿಂದ ಶಿವಶಂಕರನನ್ನು ಮೆಚ್ಚಿಸಿ ಶಿವನ ಜಟೆಯಲ್ಲಿರುವ ಗಂಗೆಯನ್ನು ಭೂಮಿಗೆ ಕರೆತಂದನು. ಗಂಗಾವತರಣದ ಆ ಪವಿತ್ರ ದಿನವೇ ಜೇಷ್ಠ ಶುಕ್ಲ ದಶಮಿಯಾಗಿದೆ. ಇಂದಿಗೂ ಕೂಡ ಈ ಪವಿತ್ರ ದಿನವನ್ನು ಭಾಗೀರಥಿ ಜಯಂತಿಯಾಗಿ ಆಚರಿಸುವ ಪದ್ಧತಿ ರೂಢಿಯಲ್ಲಿದೆ. ಆ ದಿವಸ ಬೇಗನೆ ಎದ್ದು ಪ್ರಾತಃಕಾಲದಲ್ಲಿ ಭಾಗಿರಥಿ ಮಾತೆಯ ದ್ವಾದಶ ನಾಮಗಳನ್ನು ಸ್ಮರಿಸುತ್ತಾ ಸ್ನಾನ ಮಾಡಿ ಶುಚಿಯಾಗಬೇಕು. ಆ ಹನ್ನೆರಡು ನಾಮಗಳನ್ನು ಈ ಕೆಳಗೆ ಶ್ಲೋಕದಲ್ಲಿ ತಿಳಿಸಲಾಗಿದೆ.


ನಂದಿನೀ ನಲಿನೀ ಸೀತಾ ಮಾಲತಿ ಚ ಮಲಪಹಾ |

ವಿಷ್ಣು ಪಾದಾಬ್ಜ ಸಂಭೂತಾ ಗಂಗಾ ತ್ರಿಪದಗಾಮಿನಿ ||

ಭಾಗೀರಥಿ ಭೋಗವಿ ಜಾನ್ಹವಿ ತ್ರಿದಶೇಶ್ವರಿ ||


ಸ್ನಾನ ನಂತರ ನೆಲದ ಮೇಲೆ ಕಮಲ ಅಥವಾ ಸ್ವಸ್ತಿಕ ಚಿಹ್ನೆಯನ್ನು ಬರೆದು ಅದರ ಮೇಲೆ ಗಂಗಾ ಜಲವನ್ನು ತುಂಬಿಸಿದ ಕಲಶವನ್ನು ಇಡಬೇಕು. ಪಂಚ ಪಲ್ಲವ ಸುವರ್ಣ ಪುಷ್ಪಗಳನ್ನು ಹಾಕಿ ಅಲಂಕರಿಸಿ ಅದರ ಮೇಲೆ ಚಿನ್ನ ಅಥವಾ ಬೆಳ್ಳಿಯ ಗಂಗಾ ಮಾತೆಯ ಪ್ರತಿಮೆಯನಿಟ್ಟು ಗಂಗೆಯನ್ನು ಸ್ಥಾಪಿಸಬೇಕು. ಹತ್ತು ಬಗೆಯ ಹೂಗಳನ್ನು ಹತ್ತು  ಬಗೆಯ ಹಣ್ಣುಗಳನ್ನು ಇಟ್ಟು 10 ದೀಪಗಳನ್ನು ಹಚ್ಚಿಟ್ಟು ವಿಶೇಷವಾಗಿ ಪ್ರಾರ್ಥನೆಯನ್ನು ಮಾಡಬೇಕು.


ಮಂದಾಕಿನ್ಯೈ ನಮಸ್ತೇಸ್ತು ಸ್ವರ್ಗದಾಯೈ ನಮೋ ನಮಃ |

ನಮಸ್ತೈಲೋಕ್ಯ ಪೂಜ್ಯಾಯೈ ತ್ರಿದಶಾಯೈ ನಮೋ ನಮಃ ||


ಅರಿಶಿಣ ಕುಂಕುಮ ಗೆಜ್ಜೆ ವಸ್ತ್ರಗಳಿಂದ ಹತ್ತು ಸಲ ಪೂಜಿಸಿ ಗಂಗಾ ಪಿತನಾದ ಶ್ರೀಮನ್ನಾರಾಯಣನನ್ನು ಭಕ್ತಿಯಿಂದ ಸ್ಮರಿಸಿ ನೈವೇದ್ಯವನ್ನು ಸಮರ್ಪಿಸಬೇಕು. ಈ ವೃತ್ತಾಚರಣೆಯನ್ನು ಮಾಡುವುದರಿಂದ ಪೂಜಕನ ಹತ್ತು ವಿಧವಾದ ಪಾಪಗಳು ನಾಶ ಹೊಂದಿ ಪುಣ್ಯ ಪ್ರಾಪ್ತಿಯಾಗುತ್ತದೆ. ಆ ಹತ್ತು ವಿಧದ ಪಾಪಗಳು ಯಾವೆಂದರೇ- 


ಕೊಡದಿರುವ ವಸ್ತುಗಳನ್ನು ತೆಗೆದುಕೊಳ್ಳುವುದು, ಹಿಂಸೆ ಮಾಡುವುದು, ಚಾಡಿ ಹೇಳುವುದು, ಪರಸ್ತ್ರೀ ಸಂಗ, ಕಠೋರ ವಚನ, ಸುಳ್ಳು ಹೇಳುವುದು, ಹರಟೆ ಹೊಡೆಯುವದು, ಇನ್ನೊಬ್ಬರ ಹಣ ಕಬಳಿಸುವುದು, ಇನ್ನೊಬ್ಬರಿಗೆ ಕೆಡುಕನ್ನು ಬಯಸುವುದು, ಮಿಥ್ಯಾ ಗೃಹ ಹತ್ತು ವಿಧವಾದ ಜನ್ಮಾಂತರದಿಂದ ಬಂದ ಪಾಪಗಳು ನಾಶ ಹೊಂದುತ್ತವೆ. ಅದಕ್ಕಾಗಿಯೇ ಭಾಗೀರಥಿ ಮಾತೆಯನ್ನು ಈ ಕೆಳಗಿನಂತೆ ವರ್ಣಿಸಿದ್ದಾರೆ.


ಭಾಗೀರಥಿ ಗುಣಾನ್ ವಕ್ತುಮ್  ಭೋಗೀಶೋ ಬಹುಲಾನನಃ। 

ವಾಗಿಶೋSಪಿ ಕ್ಷಮೋ ನೈವ ಹೇ ಗಿರ್ವಾಣತರಂಗಿಣಿ॥


ಈ ಶುಭ ದಿನದಂದು ಬ್ರಾಹ್ಮಣರಿಗೆ ಹತ್ತು ಮಾವಿನ ಹಣ್ಣುಗಳನ್ನು ಅಥವಾ ಬಾಳೆಹಣ್ಣುಗಳನ್ನು ತಟ್ಟೆಯಲ್ಲಿಟ್ಟು ತಾಂಬೂಲ ದಕ್ಷಿಣೆ ಸಮೇತ ದಾನ ಮಾಡಬೇಕೆಂಬ ಪದ್ಧತಿ ಇದೆ.


ಶ್ರೀ ಪದ್ಮ ಪುರಾಣದಲ್ಲಿ ಗಂಗಾ ಮಹಿಮೆಯನ್ನು ಈ ರೀತಿ ಕೊಂಡಾಡಿದ್ದಾರೆ.

ಗಂಗಾ ನಾಮಾನಿ ಸಂಸ್ಕೃತ್ಯ ಪಾಪೀ ಮುಚ್ಯೇತ್ ಪಾತಕಾತ್  |

ಸಾಕ್ಷಾತ್ ತತ್ಸಲಿಲಂ ಸ್ಪೃಷ್ಟ್ವಾ ಮುಚ್ಯತೇsತ್ರ ಕಿಮದ್ಭುತಮ್ ||


ಗಂಗೆಯ ನಾಮಗಳನ್ನು ಸ್ಮರಣ ಮಾಡಿದ ಮಾತ್ರದಿಂದ ಪಾಪಿಯು ಎಲ್ಲ ಪಾಪಗಳಿಂದ ಮುಕ್ತನಾಗುತ್ತಾನೆ. ಸಾಕ್ಷಾತ್ ಗಂಗೆಯ ನೀರನ್ನು ಮುಟ್ಟಿ ಸ್ನಾನಮಾಡಿದರೆ ಅವನು ಮುಕ್ತನಾಗುತ್ತಾನೆ. ಇದರಲ್ಲಿ ಆಶ್ಚರ್ಯವೇನು? ಈ ರೀತಿಯಾಗಿ ಗಂಗಾ ಮಹಿಮೆಯನ್ನು ಕೊಂಡಾಡಿದ್ದಾರೆ. ಹೀಗಾಗಿ ಈ ದಶಾಹರ ವೃತವು ಇಂದಿಗೂ ಮಹತ್ವವನ್ನು ಪಡೆದುಕೊಂಡಿದೆ ಎಂದರೆ ಅತಿಶಯೋಕ್ತಿಯಾಗಲಾರದು. 


ಶ್ರೀ,ಕೃಷ್ಣಾರ್ಪಣ ಮಸ್ತು


-ರಾಘವೇಂದ್ರ. ಸು. ಆಡಬಡ್ಡಿ.


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top