ಕನ್ನಡ ಅಭಿವೃದ್ಧಿ ಪ್ರಾಧಿಕಾರ ನೂತನ ಅಧ್ಯಕ್ಷರಿಗೆ ಅಭಿನಂದನೆ
ಬೆಂಗಳೂರು: ಕನ್ನಡ ನಾಡಿನಲ್ಲಿ ಕನ್ನಡದ ಅಭಿವೃದ್ಧಿಯ ಕಾಯಕವೆಂದರೆ ಕೇವಲ ಸಮ್ಮೇಳನಗಳನ್ನು ಮಾಡುವುದಕ್ಕೆ ಸೀಮಿತವಾಗದೆ ಸಮಗ್ರ ಸಮಸ್ಯೆಗಳಿಗೆ ಸ್ಪಂದನೆ ನೀಡಿ ಆಮೂಲಾಗ್ರವಾಗಿ ಕನ್ನಡ ಕಟ್ಟುವ ಕೆಲಸ ನಿರಂತರ ನಡೆಯಬೇಕಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷರಾದ ಡಾ. ಪುರುಷೋತ್ತಮ ಬಿಳಿಮಲೆ ತಿಳಿಸಿದರು.
ಬೆಂಗಳೂರಿನಲ್ಲಿ ಶುಕ್ರವಾರ (ಜೂನ್ 14ರಂದು) ನೂತನ ಅಧ್ಯಕ್ಷರಿಗೆ ಅಭಿನಂದನೆ ಸಲ್ಲಿಸಿದ ನಂತರ ಕಾಸರಗೋಡಿನ ಕನ್ನಡಪರ ಚಿಂತಕರು ಹಾಗೂ ಸಿನಿಮಾ ಪತ್ರಕರ್ತರಾದ ಬಿ ಎನ್ ಸುಬ್ರಹ್ಮಣ್ಯ ಹಾಗೂ ಕಾಸರಗೋಡಿನ ಕನ್ನಡ ಹೋರಾಟದ ಬಗ್ಗೆ ಅಧ್ಯಯನ ನಡೆಸಿದ ಆಕಾಶವಾಣಿಯ ನಿವೃತ್ತ ಹಿರಿಯ ಕಾರ್ಯಕ್ರಮ ನಿರ್ವಹಣಾಧಿಕಾರಿಗಳಾದ ಡಾ. ಸದಾನಂದ ಪೆರ್ಲ ಅವರ ಜೊತೆ ಮಾತುಕತೆ ನಡೆಸಿ ಮಾತನಾಡಿದ ಅವರು, ಕೇವಲ ಸಮ್ಮೇಳನಗಳನ್ನು ಮಾಡುವುದರ ಮೂಲಕ ರಾಜಧಾನಿಯ ಕೆಲವೊಂದು ಜನರನ್ನು ಮಾತ್ರ ಅತಿಥಿಗಳನ್ನಾಗಿ ಆಹ್ವಾನಿಸಿ ಹೊರನಾಡು, ಗಡಿನಾಡು ಸೇರಿದಂತೆ ಇರುವ ಕನ್ನಡಿಗರು ಸೇವಾ ಮನೋಭಾವದಿಂದ ಅವರ ಕೆಲಸ ಮಾಡುವುದಕ್ಕೆ ಮಾತ್ರ ಸೀಮಿತವಾಗಿದೆ. ಅದಕ್ಕಾಗಿ ಸಮ್ಮೇಳನಗಳು ಮಾತ್ರ ಮುಖ್ಯವಾಗದೆ ಸಮಗ್ರವಾಹಿಕನ್ನಡದ ಏಳ್ಗೆ ದೃಷ್ಟಿಯಿಂದ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಸಮಸ್ತ ಕನ್ನಡಿಗರ ಸಮಸ್ಯೆಗಳಿಗೆ ಸ್ಪಂದಿಸುವುದಲ್ಲದೆ ಕನ್ನಡದ ಜಾಗೃತಿಯನ್ನು ಮೂಡಿಸಿ ಕನ್ನಡ ವಾತಾವರಣವನ್ನು ಸೃಷ್ಟಿಸುವ ಕೆಲಸ ಮಾಡಬೇಕಾಗುತ್ತದೆ. ಅದಕ್ಕಾಗಿ ನನ್ನ ಅವಧಿಯಲ್ಲಿ ವಿಸ್ತೃತವಾದ ಕಾರ್ಯ ಯೋಜನೆಗಳನ್ನು ರೂಪಿಸಿ ಕನ್ನಡಿಗರೆಲ್ಲರೂ ಕನ್ನಡಕ್ಕಾಗಿ ದುಡಿಯುವಂತೆ ಪ್ರಯತ್ನಿಸಲಾಗುವುದು ಎಂದರು.
ಕನ್ನಡ ಪುಸ್ತಕ ಪ್ರಾಧಿಕಾರದ ಪುಸ್ತಕಗಳ ಮಳಿಗೆಗಳನ್ನು ಅಲ್ಲಲ್ಲಿ ತೆರೆದು ಕನ್ನಡಿಗರಿಗೆ ಕನ್ನಡ ಪುಸ್ತಕ ಪ್ರಾಧಿಕಾರವು ಹೊರ ತಂದ ಕನ್ನಡ ಕೃತಿಗಳು ಲಭ್ಯವಾಗುವಂತೆ ಮಾಡಲು ಚಿಂತನೆ ನಡೆದಿದೆ. ಇದರಿಂದ ಪುಸ್ತಕ ಮಳಿಗೆಗಳಲ್ಲಿ ಕನ್ನಡದ ಸಾಹಿತಿಗಳು ಕನ್ನಡಾಭಿಮಾನಿಗಳು ಒಟ್ಟು ಸೇರುವ ಅಪೂರ್ವ ಅವಕಾಶವಿದೆ. ಗಡಿನಾಡು, ಹೊರನಾಡು ಹಾಗೂ ಕನ್ನಡ ನಾಡಿನಲ್ಲಿರುವ ಪ್ರವಾಸ ಮಾಡಿ ಮೂಲ ಸಮಸ್ಯೆ ತಿಳಿಯಲು ಪ್ರಯತ್ನಿಸಲಾಗುವುದು. ಈಗಾಗಲೇ ಒಂದು ವರ್ಷ ಕಳೆದು ಹೋಗಿರುವುದರಿಂದ ಉಳಿದ ಅವಧಿಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರವನ್ನು ಇನ್ನಷ್ಟು ಕ್ರಿಯಾಶೀಲವಾಗಿಸಿ ಕನ್ನಡಿಗರ ಆಶಾಕಿರಣದ ಪ್ರಾಧಿಕಾರವನ್ನಾಗಿ ಕಟ್ಟುವ ಗುರಿಯಿದೆ.ಇದಕ್ಕೆ ಸಮಸ್ತ ಕನ್ನಡಿಗರು ಕೈಜೋಡಿಸಬೇಕಾಗಿದೆ ಮತ್ತು ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಇದಕ್ಕೆ ವಿಸ್ತೃತ ರೂಪ ನೀಡಲು ಮುಂದಿನ ದಿನಗಳಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು. ಕನ್ನಡ ಕಟ್ಟುವ ಕಾಯಕ ಪ್ರತಿಯೊಬ್ಬ ಕನ್ನಡಿಗನ ಆದ್ಯ ಕರ್ತವ್ಯವಾಗಬೇಕು ಎಂದು ಹೇಳಿದರು.
ಕನ್ನಡ ನಾಡಿನ ಗಡಿ ಜಿಲ್ಲೆಗಳು ಮುಖ್ಯವಾಗಿ ಕಾಸರಗೋಡು, ಕಲಬುರ್ಗಿ ರಾಯಚೂರು, ಬೀದರ್, ಬಳ್ಳಾರಿ ಕಾರವಾರ ಮುಂತಾದೆಡೆಗಳಲ್ಲಿರುವ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಾಗಿದೆ. ಶಿಕ್ಷಣ ವ್ಯವಸ್ಥೆಯ ಸುಧಾರಣೆಗೆ ಒತ್ತು ಕೊಡಲಾಗುವುದು ಎಂದು ಹೇಳಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ