ಕಲಾವಿದೆಯೊಬ್ಬರು ಚೊಚ್ಚಲ ಪೈಂಟಿಂಗ್‌ಎಕ್ಸಿಬಿಶನ್ ಏರ್ಪಡಿಸಿದ್ದರು. ಗೃಹಿಣಿಯಾಗಿ ಬೋರು ತಡೆಯಲಾಗದೆ ಬಣ್ಣದ ಕುಂಚ ಹಿಡಿದವರು ಅವರು. ಅವರ ಕೈಬಿಡಿಸಿದ ವರ್ಣಚಿತ್ರಗಳಲ್ಲಿ ಇತರ ಜನಪ್ರಿಯ ಕಲಾವಿದರ ಕೃತಿಗಳ ಕಾಪಿಯೇ ಅಧಿಕವಾಗಿದ್ದವು. ಚಿತ್ರಗಳ ಆಸಕ್ತಿಯಿಂದಲೂ, ಆಕರ್ಷಣೆಗಿಂತಲೂ ಬಣ್ಣ ಸುಣ್ಣದ ಗೌಜಿಯೇ ಹೊಡೆದು ಕಾಣುತ್ತಲಿತ್ತು. ಇನ್ನೇನೂ ತೋಚದೆ ಉದ್ಘಾಟನಾ ಟೇಪು ಕತ್ತರಿಸಿದ ಅತಿಥಿ ಮಹಾನುಭಾವರು ಭಾಷಣ ಮಾಡುತ್ತಾ ಕಲಾವಿದೆಯ ಅನಿವಾರ್ಯ ಹೊಗಳಿಕೆ ಕೆಲಸಕ್ಕೆ ಇಳಿದರು.
"ಈ ಪ್ರತಿಭಾವಂತ ಕಲಾವಿದೆಯ ಕೃತಿಗಳನ್ನು ಅವಲೋಕಿಸುತ್ತಾ ಹೋದರೆ, ಅವರು ಜೀವನಾನುಭವದ ಅಚ್ಚನ್ನು ಕ್ಯಾನ್‌ವಾಸ್‌ನ ಮೇಲೆ ಮೂಡಿಸಲು ಪ್ರಯತ್ತಿಸಿರುವುದು ಕಂಡು ಬರುತ್ತದೆ. ಪ್ರದರ್ಶನಕ್ಕೆ ಇಟ್ಟಿರುವ ಕಲಾಕೃತಿಗಳಲ್ಲಿ ಅವರ ಕ್ರಿಯಾತ್ಮಕ, ಜೀವಂತ ಕೊಡುಗೆಯಾಗಿ ಗಮನ ಸೆಳೆಯುವುದು ಎಂದರೆ... ಎಂದು ಮುಂದಿನ ವರ್ಣನೆಗೆ ಪದ ಸಿಗದೆ ತಡವರಿಸಿದಾಗ...
ಕಾರ್ಯಕ್ರಮದ ಗಡಿಬಿಡಿ. ಒತ್ತಡದಲ್ಲಿ ಪ್ರದರ್ಶನಾಂಗಣದ ಮೂಲೆಯಲ್ಲಿ ಜಮಖಾನದ ಮೇಲೆ ಮಲಗಿಸಿ ಎಲ್ಲರೂ ಮರೆತು ಹೋಗಿದ್ದ ಕಲಾವಿದೆಯ ಒಂದು ವರ್ಷ ತುಂಬದ ಪುಟಾಣಿ ಮಗುವೇ "ವೇ ವೇ ವೇ... ಎಂದು ಜೋರಾಗಿ ಅಳಲು ಶುರು ಮಾಡಿಯೇ ಬಿಟ್ಟಿತು. ಸಭಿಕರೆಲ್ಲರೂ ಅಭಿಮಾನದಿಂದ ಖುಶಿಯಾಗಿ ಕೈಚಪ್ಪಾಳೆ ತಟ್ಟಿದದರು. ಮಾನ್ಯ ಅತಿಥಿಗಳು ತಾವೂ ಮಾತು ಮುಂದುವರಿಸದೆ ತಾವೂ ಕೈಕುಟ್ಟುತ್ತಾ, ನಗುತ್ತಾ ತಮ್ಮ ಕುರ್ಚಿಯಲ್ಲಿ ಆಸೀನರಾದರು. ಅತಿಥಿಗಳು, ಅಭ್ಯಾಗತರ ಅಭಿಪ್ರಾಯ ನೂರಕ್ಕೆ ನೂರರಷ್ಟು ತಲೆಯಾಡಿಸುವಿಕೆಯೊಂದಿಗಿನ ಒಮ್ಮತ ಹರಿದಾಟಿಸಿ ಬಿಟ್ಟಿತ್ತು.
******
ಯಾರು ಬುದ್ಧಿವಂತರು ಗೊತ್ತೇನು?
ಒಮ್ಮೆ ಮಹಾನ್ ಪ್ರೊಫೆಸರ್ ಹಾಗೂ ಶ್ರೀ ಸಾಮಾನ್ಯ ರೈತನೊಬ್ಬ ರೈಲು ಪ್ರಯಾಣದ ವೇಳೆ ಜೊತೆಗಾರರಾಗಿ ಬಿಟ್ಟರು. ಹೊತ್ತು ಕಳೆಯಲು ಒಗಟಿನ ಪಂಥ ಹಾಕೋಣ ಎಂದ ಘನ ವಿದ್ವಾಂಸರು "ಪಂಥದಲ್ಲಿ ನಾನು ಹೇಳಿದ ಒಗಟಿಗೆ ನಿನಗೆ ಉತ್ತರ ಹೇಳಲಾಗದಿದ್ದರೆ ನನಗೆ ಹತ್ತು ರೂಪಾಯಿ ಕೊಡಬೇಕು. ನೀನು ಹೇಳಿದ ಒಗಟಿಗೆ ನಾನು ಉತ್ತರಿಸಲು ಆಗಿದಿದ್ದರೆ ನಿನಗೆ 10 ರೂಪಾಯಿ ನಾನು ಕೊಡುತ್ತೇನೆ" ಎಂದರು ಪ್ರೊಫೆಸರ್ ಸಾಹೇಬರು. ಅನಕ್ಷರಸ್ಥ ರೈತ ತಕ್ಷಣವೇ ತಲೆಯಾಡಿಸುತ್ತಾ ಹೇಳಿದ " ನಾನು ಹಳ್ಳಿಮುಕ್ಕ ನೀವು ಓದಿದ ವಿದ್ಯಾವಂತರು. ನನಗೆ ಕನ್ಶೆಸನ್ ಕೊಡಬೇಕು. ನಾನು ಸೋತರೆ 5 ರೂಪಾಯಿ ಕೊಡುತ್ತೇನೆ" ಎಂದನಂತೆ ರೈತ.
ಸರಿ ಎಂದು ಒಪ್ಪಿ ತಲೆಯಾಡಿಸಿದ ಪ್ರೊಫೆಸರ್ ಒಗಟು ಹೇಳುವಂತೆ ರೈತನಿಗೆ ಸೂಚಿಸಿದರು. ಅದಕ್ಕೆ ಆತ "ಮೂರು ಕಾಲಿನಲ್ಲಿ ನಡೆಯೋದು, ಎರಡು ಕಾಲಿನಲ್ಲಿ ಹಾರೋದು ಏನು" ಎಂದು ರೈತ ಕೇಳಿದ. ಎಷ್ಟು ತಲೆಕೆಡಿಸಿಕೊಂಡರೂ ಉತ್ತರ ಸಿಗದಾದಾಗ ಪ್ರೊಫೆಸರ್ "ನಾನು ಸೋತೆ" ಎಂದು ಆತನಿಗೆ ಹತ್ತು ರೂಪಾಯಿ ಕಿಸೆಯಿಂದ ತೆಗೆದಿತ್ತರು. "ಇನ್ನು ಅದಕ್ಕೆ ನೀನು ಉತ್ತರ ಹೇಳು" ಎಂದು ರೈತನಿಗೆ ಸೂಚಿಸಿದರಂತೆ. ಅವಿದ್ಯಾವಂತ ರೈತ "ನಂಗೂ ಗೊತ್ತಿಲ್ಲ ಬಿಡಿ" ಎಂದು ಹೇಳಿ 5 ರೂಪಾಯಿಯನ್ನು ಪ್ರೊಫೆಸರ್ ಗೆ ಕೊಟ್ಟು ತೆರಳಿದನಂತೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

