ಭಾರತ ಪುಣ್ಯ ಭೂಮಿ, ಕರ್ಮ ಭೂಮಿ. ಇಲ್ಲಿ ಅನೇಕ ಮಹಾಮಹಿಮರು ಕಾಲ ಕಾಲಕ್ಕೆ ಅವತರಿಸಿ ತಮ್ಮ ತತ್ತ್ವ, ಸಿದ್ಧಾಂತ, ಬರಹಗಳ ಮೂಲಕ ಸಮಾಜದ ಅಂಕುಡೊಂಕುಗಳನ್ನು ತಿದ್ದಿ ಸಮಾಜಕ್ಕೆ ಮೇಲ್ಪಂಕ್ತಿಯಾದರು. ಅಂತಹವರಲ್ಲಿ ಸಂತ ಕಬೀರ ದಾಸರು ಒಬ್ಬರು. ಇವರು ಮಧ್ಯಕಾಲೀನ ಭಾರತದಲ್ಲಿ ನಡೆದ ಭಕ್ತಿ ಚಳವಳಿಯಲ್ಲಿ, ಸಮಾಜ ಸುಧಾರಣ ಚಳವಳಿಯಲ್ಲಿ ಬಹುಮುಖ್ಯ ಪಾತ್ರವಹಿಸಿದರು. ಇವರು ತಮ್ಮ ತತ್ತ್ವಗಳು, ಬೋಧನೆಗಳು ಹಾಗೂ ಹಾಗೂ ವಿಶಿಷ್ಟ ದೋಹಾಗಳ ಮೂಲಕ ಏಕತೆ, ಸತ್ಯ, ಭಕ್ತಿ, ಮಾನವೀಯತೆ, ಪ್ರೀತಿ ಇತ್ಯಾದಿ ಉದಾತ್ತ ಮೌಲ್ಯಗಳನ್ನು ಪ್ರತಿಪಾದಿಸಿದರು.
ಕಬೀರರ ಹುಟ್ಟು: ಕಬೀರರ ಜನ್ಮದ ಬಗ್ಗೆ ನಿಖರವಾದ ದಾಖಲೆಗಳು ಇಲ್ಲವಾದರೂ ಲಭ್ಯವಿರುವ ಸ್ಥಳೀಯ ಮೂಲ ಮಾಹಿತಿಗಳ ಪ್ರಕಾರ ಅವರ ಜನ್ಮ ಕ್ರಿ.ಶ.1398ರಲ್ಲಿ ವಾರಾಣಾಸಿಯಲ್ಲಿ ಆಯಿತು. ವೃತ್ತಿಯಲ್ಲಿ ನೇಕಾರರಾಗಿದ್ದ ಮುಸಲ್ಮಾನ ದಂಪತಿಗಳಾದ ನೀರು ಮತ್ತು ನೀಮಾ ದಂಪತಿಗಳ ಪುತ್ರರಾಗಿ ಜನಿಸಿದ ಕಬೀರರು ಬಾಲ್ಯವನ್ನು ಬಡತನದ ಬೇಗೆಯಲ್ಲೇ ಕಳೆದರು. ಅತ್ಯಂತ ಕಿರಿಯ ವಯಸ್ಸಿನಲ್ಲೇ ಆಧ್ಯಾತ್ಮದತ್ತ ಒಲವುಳ್ಳವರಾಗಿದ್ದ ಇವರ ಮೇಲೆ ಆಗ ನಡೆಯುತ್ತಿದ್ದ ಭಕ್ತಿ ಚಳವಳಿ ಅಪಾರ ಪ್ರಭಾವ ಬೀರಿತ್ತು. ಅದರಲ್ಲೂ ವಿಶೇಷವಾಗಿ ವೈಷ್ಣವ ಸಂತರಾದ ರಮಾನಂದರ ಪ್ರಭಾವ ಗಾಢವಾಗಿದ್ದಿತು. ಬಾಲ್ಯದಲ್ಲಿ ಅನುಭವಿಸಿದ್ದ ಬಡತನದ ಬೇಗೆ ಅವರಲ್ಲಿ ವಿಶಾಲ ದೃಷ್ಟಿಕೋನ, ದಯೆ, ಅನುಕಂಪ ಇತ್ಯಾದಿಗಳನ್ನು ಬೆಳೆಸಿಕೊಳ್ಳಲು ಹಾಗೂ ಇಂತಹ ಉದಾತ್ತ ಮೌಲ್ಯಗಳನ್ನು ಕಾರಣವಾಗುವುದರ ಜೊತೆಗೆ ಅವರ ತತ್ತ್ವ ಹಾಗೂ ದೋಹಾಗಳಿಗೆ ತಳಹದಿಯಾಯಿತು. ಕಬೀರರ ಚಿಂತನೆಗಳ ಅನುಯಾಯಿಗಳು ಪ್ರತಿವರ್ಷ ಅವರ ಜನ್ಮೋತ್ಸವವನ್ನು ಬಹಳ ಭಕ್ತಿ ಶ್ರದ್ಧೆಗಳಿಂದ ಆಚರಿಸುತ್ತಾರೆ. ಈ ವರ್ಷ ಕಬೀರ್ ದಾಸ್ ಜಯಂತಿಯನ್ನು ಶನಿವಾರ, ಜೂನ್ 22 ರಂದು ಆಚರಿಸಲಾಗುತ್ತದೆ. ಇದು ಸಂತ ಕಬೀರ್ ದಾಸ್ ಅವರ 647 ನೇ ಜನ್ಮದಿನವಾಗಿದೆ. ಅವರ ಜನ್ಮ ವಾರ್ಷಿಕೋತ್ಸವವನ್ನು ಹಿಂದೂ ಪಂಚಾಂಗದ ಜ್ಯೇಷ್ಠ ಮಾಸದ ಹುಣ್ಣಿಮೆಯ ರಾತ್ರಿ ಆಚರಿಸಲಾಗುತ್ತದೆ.
ಕಬೀರರ ತತ್ತ್ವ ಮತ್ತು ಬೋಧನೆಗಳು:
1) ಪ್ರೀತಿ ಮತ್ತು ಭಕ್ತಿ: ಕಬೀರರು ಕುರುಡು ನಂಬಿಕೆಗಳನ್ನು, ಆಚರಣೆಗಳನ್ನು ಬದಿಗೊತ್ತಿ ದೇವರೆಡೆಗೆ ನಿಷ್ಕಲ್ಮಷ ಭಕ್ತಿ ಹಾಗೂ ಪ್ರೀತಿ ಬೆಳೆಸಿಕೊಳ್ಳಬೇಕೆಂದು ಕರೆ ನೀಡಿದರು.
2) ಏಕತೆ: ಸಕಲ ಚರಾಚರಗಳಲ್ಲಿರುವ ಭಗವಂತನನ್ನು ಕಂಡು, ಒಬ್ಬನೇ ಆಗಿರುವ ದೇವರನ್ನು ಹಾಗೂ ವಿಶ್ವದೊಳಗಿನ ಅಂತರ್ಗತ ಸಂಬಂಧಗಳನ್ನು, ಏಕತೆಯನ್ನು ಅರ್ಥೈಸಿಕೊಳ್ಳಲು ಪ್ರಯತ್ನಿಸುವಂತೆ ತಿಳಿಸಿದರು.
3) ಸತ್ಯ ಮತ್ತು ಪ್ರಾಮಾಣಿಕತೆ: ಡಾಂಭಿಕತೆ ಖಂಡಿಸಿದ ಕಬೀರರು ಸತ್ಯವನ್ನೇ ನುಡಿಯುವಂತೆ ಹಾಗೂ ಪ್ರಾಮಾಣಿಕ ಜೀವನ ನಡೆಸುವಂತೆ ತಿಳಿಸಿದರು.
4) ಆತ್ಮಾವಲೋಕನ:ಆಧ್ಯಾತ್ಮಿಕ ಸಾಧನೆಯಲ್ಲಿ ತನ್ನನ್ನು ತಾನು ಅರಿಯುವುದು ಬಹು ಮುಖ್ಯವೆಂದು ಸಾರಿದ ಕಬೀರರು ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಆತ್ಮಾವಲೋಕನ ಮಾಡಿಕೊಳ್ಳಬೇಕೆಂದು ಒತ್ತಿ ಹೇಳಿದರು.
5) ಸರಳ ಜೀವನ: ಲೌಕಿಕ ಬಂಧಗಳಿಂದ ವಿಮುಕ್ತರಾಗಿ ಸರಳ ಜೀವನ ನಡೆಸುತ್ತಾ ಆಧ್ಯಾತ್ಮಿಕ ಪ್ರಗತಿ ಸಾಧಿಸಬೇಕೆಂದು ಬೋಧಿಸಿದರು.
6) ಕರುಣೆ ಮತ್ತು ಸಹಾನುಭೂತಿ:ಎಲ್ಲ ಜೀವಿಗಳ ಬಗ್ಗೆಯೂ ಕರುಣೆ ಮತ್ತು ಸಹಾನುಭೂತಿ ಹೊಂದಬೇಕೆಂದು ತಿಳಿಸಿದರು.
7) ಸಾಮಾಜಿಕ ಸಮಾನತೆ: ವ್ಯಕ್ತಿಗಳ ನಡುವೆ ಬೇಧ ಕಲ್ಪಿಸುವ ಸಾಮಾಜಿಕ ಮೇಲುಕೀಳು ಸೃಷ್ಟಿಸುವ ಆಚರಣೆಗಳಿಂದ ದೂರವಿದ್ದು ಮೌಢ್ಯಗಳನ್ನು ತಿರಸ್ಕರಿಸಬೇಕೆಂದು ಕರೆನೀಡಿದರು.
8) ನೇರ ದೈವಿಕ ಅನುಭೂತಿ:
ಪರೋಕ್ಷ ಮಾರ್ಗಗಳನ್ನು ಬಿಟ್ಟು ದೈವದೊಂದಿಗೆ ಧ್ಯಾನ, ಭಕ್ತಿಯ ಮೂಲಕ ನೇರವಾಗಿ ಸಂಪರ್ಕ ಸಾಧಿಸಿಕೊಳ್ಳಬೇಕೆಂದು ಕಬೀರರು ಹೇಳುತ್ತಾರೆ.
9) ಆಧ್ಯಾತ್ಮಿಕ ಉನ್ನತಿ:
ಬೌದ್ಧಿಕ ಜ್ಞಾನವನ್ನು ಮೀರಿ ಅಂತರ್ದೃಷ್ಟಿ ಬೆಳೆಸಿಕೊಂಡು ಆಧ್ಯಾತ್ಮಿಕ ಪ್ರಗತಿ ಸಾಧಿಸಬೇಕೆಂಬುದು ಕಬೀರರ ಅಭಿಪ್ರಾಯ.
10) ವೈವಿಧ್ಯತೆಯ ಸಹಿಷ್ಣುತೆ: ವೈವಿಧ್ಯಮಯ ನಂಬಿಕೆಗಳು ಮತ್ತು ಆಚರಣೆಗಳ ನಡುವೆ ಬದುಕುತ್ತಿರುವ ನಾವು ಅವುಗಳ ಬಗ್ಗೆ ಸಹಿಷ್ಣುತೆ ಬೆಳೆಸಿಕೊಂಡು ಅವುಗಳ, ಸೌಂದರ್ಯವನ್ನು ಆಸ್ವಾದಿಸಬೇಕೆಂದು ಕರೆ ನೀಡಿದರು. ಹಿಂದೂ ಮುಸ್ಲಿಂರ ನಡುವೆ ಸೌಹಾರ್ದತೆ ಬೆಳೆಸಲು ಯತ್ನಿಸಿದ ಅವರು ಅದಕ್ಕೆ ತಾವೇ ಮಾದರಿಯಾದರು.
ಕಬೀರರ ದೋಹಾಗಳು: ಕಬೀರರು ರಚಿಸಿದ ಎರಡು ಸಾಲಿನ ವಿಶಿಷ್ಟ ಪದ್ಯವನ್ನು ಕಬೀರರ ದೋಹ ಎಂದೇ ಕರೆಯಲಾಗುತ್ತದೆ. ಇದು ಎರಡೇ ಸಾಲಿನದ್ದಾದರೂ ಇವು ಬಹಳ ಅರ್ಥಗರ್ಭಿತವಾಗಿದ್ದು ಆಧ್ಯಾತ್ಮಿಕ ತತ್ತ್ವಗಳನ್ನು ಒಳಗೊಂಡಿದ್ದು ಆತ್ಮ ಸಾಕ್ಷಾತ್ಕಾರದೆಡೆಗೆ ನಿರ್ದೇಶಿಸುತ್ತವೆ. ಅವುಗಳಲ್ಲಿ ಕೆಲವನ್ನು ನೋಡುವುದಾದರೆ,
"ಮಾಯ ಮಾಯ ಕಛು ನಹಿ
ಸಿರ್ಫ್ ಬ್ರಹ್ಮ ಸೋಯಂ"
ಇದರರ್ಥವೇನೆಂದರೆ, ಮಾಯೆಯೆಂಬುದಿಲ್ಲ ಬ್ರಹ್ಮ ಮಾತ್ರನಿದ್ದಾನೆ
"ದುಃಖ ಮಿಯಾನ್ ಸಂಸಾರ್ ಕೆ
ದುಃಖ ಮಿಯಾನ್ ಸಂಸಾರ್"
ಇದರ ಅರ್ಥವೇನೆಂದರೆ, ಲೋಕವು ದುಃಖದಿಂದ ಹಾಗೂ ನೋವಿನಿಂದ ಕೂಡಿದೆ.
"ಕಾಹೆ ರೆ ತು ಡರ್ ದೆ ಮಾಲ್ ಕೊ,
ಕಾಹೆ ರೆ ತು ಡರ್ ದೆ ಮಾಲ್"
ಇದರ ಅರ್ಥವೇನೆಂದರೆ, ನಶ್ವರವಾದ ಸಂಪತ್ತಿನ ಬಗ್ಗೆ ನೀನೇಕೆ ಚಿಂತಿಸುತ್ತೀಯಾ ಎಂಬುದಾಗಿದೆ.ಕಬೀರರ ದೋಹಾಗಳು ಭಾರತೀಯ ಸಾಹಿತ್ಯಕ್ಕೆ ಉತ್ತಮ ಕೊಡುಗೆಯಾಗಿದ್ದು ಆತ್ಮ ಸಾಕ್ಷಾತ್ಕಾರಕ್ಕೆ ದಾರಿದೀಪವಾಗಿವೆ.
ಒಟ್ಟಿನಲ್ಲಿ ಕಬೀರದಾಸರು ತಮ್ಮ ಬೋಧನೆಗಳು ಹಾಗೂ ದೋಹಾಗಳ ಮೂಲಕ ಲೌಕಿಕ ಮಾಯೆಯನ್ನು ತಿರಸ್ಕರಿಸಿ ಆಧ್ಯಾತ್ಮಿಕ ಉನ್ನತಿ, ದಯೆ, ಪ್ರೀತಿ, ಅನುಕಂಪ, ಸಹಾನುಭೂತಿ, ಮಾನವೀಯತೆಗಳನ್ನು ಎತ್ತಿಹಿಡಿದರು. ಆ ಮೂಲಕ ಮಧ್ಯ ಕಾಲೀನ ಭಾರತದ ಸಂತರ ಸಾಲಿನಲ್ಲಿ ಪ್ರಮುಖರೆನಿಸಿಕೊಂಡರು. ಸಮಾಜದಲ್ಲಿ ಕೋಮುದಳ್ಳುರಿ, ಅಸಮಾನತೆ, ಮೇಲು ಕೀಳು, ಬಡವ ಬಲ್ಲಿದನೆಂಬ ಬೇಧಭಾವಗಳು, ತಾಂಡವವಾಡು ತ್ತಿರುವ ಈ ಸಂದರ್ಭದಲ್ಲಿ ಕಬೀರರ ಚಿಂತನೆಗಳ ಅನುಸರಿಸುವಿಕೆ ಸಮಸ್ಯೆಗಳಿಗೆ ಉತ್ತರವಾಗಬಲ್ಲದು. ಸರಳ ಜೀವನ, ಸೌಹಾರ್ದತೆಗೆ ಒತ್ತುಕೊಟ್ಟ ಕಬೀರರು ಮಾನವ ಪ್ರೀತಿ ಮೆರೆದ ಶ್ರೇಷ್ಠ ಚಿಂತಕರೇ ಹೌದು.ಇಂದಿಗೂ ಅವರ ಅರ್ಥಗರ್ಭಿತ ಸರಳ ದೋಹಾಗಳು ಜನಸಾಮಾನ್ಯರ ನಾಲಿಗೆಯಲ್ಲಿ ನಲಿಯುತ್ತಿರುವುದು ಸಂತ ಕಬೀರ ದಾಸರ ಹಿರಿಮೆಯೇ ಸರಿ.
-ಎಸ್.ಎಲ್. ವರಲಕ್ಷ್ಮೀ ಮಂಜುಮಾಥ್.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


