'ಕಾಮನ್ ಸೆನ್ಸ್' ಕೃತಿ ಲೋಕಾರ್ಪಣೆ
ಕಲ್ಬುರ್ಗಿ: ವ್ಯಕ್ತಿಯ ಜೀವನದಲ್ಲಿ ಕಾಮನ್ ಸೆನ್ಸ್ ಅಥವಾ ಸಾಮಾನ್ಯ ಜ್ಞಾನವನ್ನು ಬಳಸಿದಾಗ ಮಾತ್ರ ಯಶಸ್ಸು ಹೊಂದಲು ಸಾಧ್ಯ ಎಂದು ಮಾಜಿ ಲೋಕಸಭಾ ಸದಸ್ಯರಾದ ಡಾ. ಉಮೇಶ್ ಜಾಧವ್ ಹೇಳಿದರು.
ಕಲ್ಬುರ್ಗಿ ಹಿಂದಿ ಪ್ರಚಾರ ಸಭಾದಲ್ಲಿ ಜೂನ್ 23ರಂದು ಭಾನುವಾರ ಬನ್ನಪ್ಪ ಬಿ.ಕೆ ಅವರ "ಕಾಮನ್ ಸೆನ್ಸ್" ಕೃತಿಯನ್ನು ಲೋಕಾರ್ಪಣೆ ಮಾಡಿ ಮಾತನಾಡಿ, ಕಾಮನ್ ಸೆನ್ಸ್ ಎಂಬುದು ಕೇವಲ ಸುಶಿಕ್ಷಿತರಲ್ಲಿ ಮಾತ್ರ ಇರದೆ ಸಾಮಾನ್ಯ ಹಳ್ಳಿಗಾಡಿನ ಜನರಲ್ಲಿ ಹೆಚ್ಚಾಗಿ ಕಾಣಲು ಸಾಧ್ಯ. ಹಳ್ಳಿಗರು ಜನರೊಡನೆ ತೋರುವ ದಯೆ, ಕರುಣೆ ಎಲ್ಲವೂ ಶಿಕ್ಷಣದಿಂದ ಲಭ್ಯವಾಗುವುದಿಲ್ಲ. ಅದು ಬದುಕಿನಿಂದ ಕಲಿತ ವಿದ್ಯೆಯಾಗಿದೆ. ಇದರಿಂದಾಗಿ ಪಟ್ಟಣವಾಸಿಗಳಿಗಿಂತಲೂ ಹಳ್ಳಿಗಳಲ್ಲಿ ನೋವು, ಧೈರ್ಯ ತುಂಬುವ ಕಾಮನ್ ಸೆನ್ಸ್ ಹೆಚ್ಚಿಗಿದೆ ಎಂದು ಹೇಳಿದರು.
ರಾಜಕೀಯದಲ್ಲಿ ಧರ್ಮಸಿಂಗ್ ಅವರಲ್ಲಿ ಕಾಮನ್ ಸೆನ್ಸ್ ಅತಿಯಾಗಿರುವುದನ್ನು ನಾನು ಕಂಡಿದ್ದೇನೆ. ಆ ಕಾರಣಕ್ಕಾಗಿ ಅವರು ಮುಖ್ಯಮಂತ್ರಿಯಾದರು. ಕಾಮನ್ ಸೆನ್ಸ್ ಅನ್ನು ಬಳಸಿ ಬದುಕನ್ನು ಉತ್ತಮಗೊಳಿಸಬೇಕು. ಅದಕ್ಕಾಗಿ ಬನ್ನಪ್ಪ ಅವರು ಬರೆದ ಈ ಕೃತಿ ಎಲ್ಲರಿಗೂ ಪ್ರೇರಣೆಯಾಗಲಿ ಎಂದು ಶುಭ ಕೋರಿದರು.
ವಿಧಾನ ಪರಿಷತ್ ಸದಸ್ಯರಾದ ಶಶಿಲ್ ಜಿ ನಮೋಶಿಯವರು ಮಾತನಾಡಿ, ಕೃತಕ ಬುದ್ಧಿಮತ್ತೆಯ ಈ ಕಾಲದಲ್ಲಿ ಸಾಮಾನ್ಯ ಜ್ಞಾನ ಎಲ್ಲರಿಗೂ ಅತ್ಯಂತ ಅನುಕೂಲವಾಗಿರಕ್ಕಂತದ್ದು ಮತ್ತು ಅದನ್ನು ಹೆಚ್ಚಾಗಿ ಬಳಸಿ ಜೀವನ ಸಾರ್ಥಕ ಮಾಡಿಕೊಳ್ಳಬೇಕಾಗಿದೆ ಎಂದರು. ಕೃತಿಯ ಲೇಖಕರಾದ ಬನ್ನಪ್ಪ ಬಿ.ಕೆ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಕಾಮನ್ ಸೆನ್ಸ್ ಕುರಿತಾಗಿ ಇಂಗ್ಲಿಷ್ ಕೃತಿಗಳನ್ನು ಓದಿದ ನಂತರ ಕನ್ನಡದಲ್ಲಿ ಕೃತಿ ಬರೆಯಲು ಪ್ರೇರಣೆ ದೊರಕಿದೆಯಲ್ಲದೆ ಆಂಗ್ಲ ಭಾಷೆಯ ಪುಸ್ತಕಗಳಿಗಿಂತಲೂ ಹೆಚ್ಚು ಅರ್ಥಪೂರ್ಣವಾಗಿ ಕನ್ನಡದಲ್ಲಿ ಕಾಮನ್ ಸೆನ್ಸ್ ನ ಕುರಿತಾಗಿ ಬರೆಯಲು ಸಾಧ್ಯವಾಯಿತು. ಪ್ರತಿಯೊಬ್ಬರಲ್ಲೂ ಕಾಮನ್ ಸೆನ್ಸ್ ಇದ್ದರೂ ಕೂಡ ಅದನ್ನು ಸೂಕ್ತ ಕಾಲದಲ್ಲಿ ಬಳಸದೆ ಇರುವುದರಿಂದ ದೊಡ್ಡ ಹಡಗು ಸಣ್ಣ ರಂಧ್ರವೊಂದರಿಂದಾಗಿ ನೀರು ನುಗ್ಗಿ ಮುಳುಗುವಂತೆ ಜೀವನ ಹಾಳಾಗುತ್ತಿದೆ. ಜೀವನದಲ್ಲಿ ಕೈಗೊಳ್ಳುವ ಪ್ರತಿ ನಿರ್ಧಾರ ಬಹಳ ಮುಖ್ಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಾಸಕರಾದ ಡಾ. ಅವಿನಾಶ್ ಜಾಧವ್, ಹಿಂದುಳಿದ ವರ್ಗಗಳ ಮೋರ್ಚಾದ ಕಾರ್ಯದರ್ಶಿ ಅಯ್ಯಣ್ಣ ಮ್ಯಾಕೇರಿ, ಕಾಡಾ ಮಾಜಿ ಅಧ್ಯಕ್ಷರಾದ ಶರಣಪ್ಪ ತಳವಾರ್, ಸೋಮನಾಥ ಪಾಟೀಲ್ ಬೀದರ್, ನಿವೃತ್ತ ಪ್ರಾಂಶುಪಾಲರಾದ ಕಾಶೀನಾಥ ಪಾಟೀಲ್ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಓಂ ಪ್ರಕಾಶ್ ಪಾಟೀಲ್ ಸ್ವಾಗತಿಸಿ ಆನಂದ ಸಿದ್ದಾಮಣಿ ಧನ್ಯವಾದವಿತ್ತರು.
ಈ ಕಾರ್ಯಕ್ರಮದಲ್ಲಿ ಸೂರ್ಯಕಾಂತ ಸೊನ್ನದ,ಸಿದ್ದಪ್ಪ ತಳ್ಳಳ್ಳಿ ಪ್ರಭಾಕರ್ ಜೋಶಿ, ಡಾ. ಸದಾನಂದ ಪೆರ್ಲ ,ವೀರೇಂದ್ರ ರಾಯ್ ಕೋಡ್, ಡಾ. ಸುಧಾ ಹಾಲ ಕಾಯಿ, ಡಾ. ನಾಮದೇವ ರಾಥೋಡ್, ಡಾ. ಬಿ ಆರ್ ಅಣ್ಣಸಾಗರ್, ಡಾ. ಶ್ರೀಶೈಲ ಬಿರಾದರ್, ಡಾ. ವೀರಶೆಟ್ಟಿ ಗಾರಂಪಲ್ಲಿ ಮತ್ತಿತರರು ಉಪಸ್ಥಿತರಿದ್ದರು.
ಲೋಕಸಭಾ ಚುನಾವಣೆ ಮುಗಿದು ಜನರ ತೀರ್ಪು ಪ್ರಕಟವಾಗಿದ್ದು ಕೆಲವೇ ಮತಗಳ ಅಂತರದಿಂದ ಸೋತಿದ್ದರೂ 6 ಲಕ್ಷ 25ಸಾವಿರ ಮತಗಳನ್ನು ಹಾಕಿದ ಮತದಾರರಿಗೆ ನ್ಯಾಯ ಕೊಡಲು ದಿನದ 24 ಗಂಟೆಯೂ ಲಭ್ಯವಿರುತ್ತೇನೆ. ಕಾಮನ್ ಸೆನ್ಸ್ ಕೃತಿ ಲೋಕಾರ್ಪಣೆಯ ಮೂಲಕ ನನ್ನ ರಾಜಕೀಯ ಜೀವನದ ಮತ್ತೊಂದು ಅಧ್ಯಾಯವನ್ನು ಪ್ರಾರಂಭಿಸಿ ಜನರ ಜೊತೆ ಸದಾ ಸೇವೆಗೆ ಬದ್ಧನಾಗಿರುತ್ತೇನೆ. ನಿಮ್ಮ ಸೋಲು ನಿಜವಾಗಿ ಅದು ಸೋಲಲ್ಲ ಎಂದು ಮತದಾರರು ಅಭಿಮಾನಿಗಳು ಸಾಂತ್ವನ ಹೇಳುತ್ತಿದ್ದು ಜನ ಪ್ರೀತಿಗೆ ನಾನು ಶಿರಬಾಗುತ್ತೇನೆ.
- ಡಾ. ಉಮೇಶ್ ಜಾಧವ್
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


