ಯಶಸ್ವಿಗೊಂಡ ಯುವ ಸ್ಫೂರ್ತಿ ಅಕಾಡೆಮಿ ಉದ್ಘಾಟನಾ ಕಾರ್ಯಕ್ರಮ
ಶಿವಮೊಗ್ಗ: ಯುವ ಸ್ಫೂರ್ತಿ ಅಕಾಡೆಮಿ ಚಿಕ್ಕಮಗಳೂರು ಹಾಗೂ ಮೊರಾರ್ಜಿ ದೇಸಾಯಿ ವಸತಿ ವಿಜ್ಞಾನ ಪದವಿ ಪೂರ್ವ ಕಾಲೇಜು, ಗಾಜನೂರು ಇವರ ಸಹಯೋಗದಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಸಭಾಂಗಣದಲ್ಲಿ ಯುವ ಸ್ಫೂರ್ತಿ ಅಕಾಡೆಮಿಯ ಉದ್ಘಾಟನೆ ಹಾಗೂ ವಿದ್ಯಾರ್ಥಿಗಳೊಂದಿಗೆ ಯುವ ಸಂವಾದ ಕಾರ್ಯಕ್ರಮವು ಜರುಗಿತು.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಸುಪ್ರೀಂ ಕೋರ್ಟ್‌ನ ವಿಶ್ರಾಂತ ನ್ಯಾಯಮೂರ್ತಿ ಹಾಗೂ ಮಾಜಿ ಲೋಕಾಯುಕ್ತ ಎನ್. ಸಂತೋಷ್ ಹೆಗ್ಡೆಯವರು ಆಗಮಿಸಿ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳೊಂದಿಗೆ ಯುವ ಸಂವಾದ ಕಾರ್ಯಕ್ರಮವನ್ನು ನಡೆಸಿದರು.
ಅವರ ಜೀವನದ ನೈಜ ಘಟನೆಗಳನ್ನು ಸ್ಮರಿಸುತ್ತಾ ಪ್ರಾಮಾಣಿಕತೆ ಹಾಗೂ ಭ್ರಷ್ಟಾಚಾರ ಮುಕ್ತ ಸಮಾಜವನ್ನು ನಿರ್ಮಿಸಬೇಕಾದರೆ ವಿದ್ಯಾರ್ಥಿಗಳ ಪಾತ್ರ ಎಷ್ಟು ಮುಖ್ಯವಾಗುತ್ತದೆ ಎಂಬುದರ ಬಗ್ಗೆ ಸಂದೇಶವನ್ನು ನೀಡಿದರು ಹಾಗೂ ವಿದ್ಯಾ ಸಂಸ್ಥೆಯ ಮಕ್ಕಳ ಶಿಸ್ತಿನ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಮತ್ತೋರ್ವ ಅತಿಥಿಗಳಾದ ಸುಪ್ರೀಂಕೋರ್ಟ್ ಹಾಗೂ ಹೈಕೋರ್ಟ್ ನ ಖ್ಯಾತ ನ್ಯಾಯವಾದಿಗಳಾದ ವಿಕ್ರಂ ಫಡ್ಕೆರವರು ನಿವೃತ್ತ ನ್ಯಾಯಮೂರ್ತಿಗಳ ಬಗ್ಗೆ ಕಿರುಪರಿಚಯವನ್ನು ಮಾಡುತ್ತಾ ಕಾನೂನಿನ ಅರಿವು ಮತ್ತು ಜಾಗೃತಿ ಮೂಡಿಸುವ ಮಾತುಗಳಾನ್ನಾಡಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶಿವಮೊಗ್ಗದ ದೊಡ್ಡಮ್ಮ ದೇವಿ ಉಪಾಸಕರಾದ ಪೂಜ್ಯ ಶ್ರೀ ಸಿದ್ದಪ್ಪಾಜಿಯವರು ವಹಿಸಿದ್ದರು. ಚಿಕ್ಕಮಗಳೂರಿನ ಯುವಸ್ಪೂರ್ತಿ ಅಕಾಡೆಮಿಯ ಮುಖ್ಯಸ್ಥ ಸುಂದರೇಶ್ ಸಿ.ಬಿ ರವರು ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಕಾರ್ಯಕ್ರಮದಲ್ಲಿ ವಿಶೇಷವಾದ ಯೋಗ ಪ್ರದರ್ಶನವನ್ನು ಸಾಗರದ ಕುಮಾರಿ ಪ್ರಜ್ಞಾರವರು ನಡೆಸಿಕೊಟ್ಟರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಯುವ ಸ್ಪೂರ್ತಿ ಸೇವಾ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗಾಜನೂರಿನ ಮೊರಾರ್ಜಿ ದೇಸಾಯಿ ವಿಜ್ಞಾನ ವಸತಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಲೋಕಪ್ಪ.ವಿ. ದಳವಾಯಿ ವಹಿಸಿದ್ದರು.
ಕಾರ್ಯಕ್ರಮದ ನಿರೂಪಣೆಯನ್ನು ಕೆರಿಯರ್ ಪ್ಲಾನಿಂಗ್ ಪಠ್ಯಕ್ರಮದ ತರಬೇತುದಾರ ಮುರಳಿ.ಎಸ್.ಡಿಯವರು ನಡೆಸಿಕೊಟ್ಟರೆ, ಸ್ವಾಗತವನ್ನು ಶಿಕ್ಷಕಿ ಶ್ವೇತರವರು ಹಾಗೂ ವಂದನಾರ್ಪಣೆಯನ್ನು ಗಣಕವಿಜ್ಞಾನ ಶಿಕ್ಷಕಿ ಪಂಕಜಾ.ಹೆಚ್.ಎಸ್ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಕರ್ನಾಟಕದ ಹಲವು ವಸತಿ ಶಾಲೆಗಳ ಪ್ರಾಂಶುಪಾಲರು ಹಾಗೂ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

