ಶೈಲಜಾ ಪುದುಕೋಳಿ ಆಶಯ
ಮಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆಯನ್ನು ಶಾಲೆ ಕಾಲೇಜುಗಳಲ್ಲಿ ಆಚರಿಸುವಂತಾಗಬೇಕು ತನ್ಮೂಲಕ ಇಂದಿನ ಯುವ ಜನತೆಯಲ್ಲಿ ಕನ್ನಡದ ಅಭಿಮಾನ ಮತ್ತು ಮಮತೆ ತುಂಬಬೇಕು ಎಂದು ಕೆನರಾ ಕಾಲೇಜು ಕನ್ನಡ ಉಪನ್ಯಾಸಕಿ , ಕವಯಿತ್ರಿ ಶೈಲಜಾ ಪುದುಕೋಳಿ ಹೇಳಿದರು. ದ.ಕ. ಜಿಲ್ಲಾ ಕ.ಸಾ.ಪ. ಮಂಗಳೂರು ತಾಲೂಕು ಘಟಕ ಶ್ರೀ ಭಾರತೀ ಕಾಲೇಜು ಆವರಣದಲ್ಲಿ ಏರ್ಪಡಿಸಿದ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆಯಲ್ಲಿ ಭಾಗವಹಿಸಿ ಸಂದೇಶ ನೀಡಿದರು. ಅದ್ಭುತವಾದ ಸಮಾಜಮುಖೀ ಕಾರ್ಯಗಳನ್ನು ಮಾಡಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ದೇವದೂತರಂತೆ ಕಂಡುಬರುತ್ತಾರೆ, ಅವರ ಆಶಯದಂತೆ ಇಂದಿಗೂ ಪರಿಷತ್ತು ಕನ್ನಡದ ಧ್ವನಿಯಾಗಿ ಹತ್ತು ಹಲವು ಮಹತ್ತರ ಕಾರ್ಯಗಳನ್ನೆಸಗುತ್ತಾ ಮುಂದುವರಿಯುತ್ತಿರುವುದು ಹೆಮ್ಮೆಯ ವಿಚಾರ. ಶಾಲೆ ಕಾಲೇಜುಗಳಲ್ಲಿ ಕಾರ್ಯಕ್ರಮ ಮಾಡುವಲ್ಲಿ ಉತ್ಸಾಹ ತೋರುತ್ತಿರುವ ಮಂಗಳೂರು ತಾಲೂಕು ಘಟಕವನ್ನು ಶ್ಲಾಘಿಸಿದರು. ಕ.ಸಾ.ಪ. ಕನ್ನಡಿಗರ ಏಕತೆಯ ಸಂಕೇತವೆಂದೂ ಅವರು ನುಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ನಾಡೋಜ ಕಯ್ಯಾರರ ಸುಪುತ್ರ, ನಿವೃತ್ತ ಪ್ರಾಧ್ಯಾಪಕ ಡಾ| ಪ್ರಸನ್ನ ರೈ ಕಲ್ಲಕಳಿಯ ಕನ್ನಡದ ಬಗೆಗೆ ಅಭಿಮಾನದ ಮಾತುಗಳನ್ನಾಡುತ್ತಾ ಕಯ್ಯಾರರ ಸಾಹಿತ್ಯದ ಹಾದಿಯನ್ನೂ ಜೊತೆಯಾಗಿ ಸಹಕರಿಸಲು ತಮಗೊದಗಿ ಬಂದ ಭಾಗ್ಯವನ್ನೂ ನೆನಪಿಸಿಕೊಂಡರು.
ಕ.ಸಾ.ಪ. ಕೇಂದ್ರ ಮಾರ್ಗದರ್ಶಕ ಸಮಿತಿ ಸದಸ್ಯ ಡಾ. ಮುರಲೀಮೋಹನ್ ಚೂಂತಾರು ಮಾತನಾಡಿ ಕ ಸಾ ಪ ಸಂಸ್ಥಾಪನೆಯ ಸ್ಫೂರ್ತಿ ನಮ್ಮೆಲ್ಲರಲ್ಲಿ ಚಿರಸ್ಥಾಯಿ ಎಂದು ತಿಳಿಸಿದರು.
ಘಟಕದ ಅಧ್ಯಕ್ಷ ಡಾ | ಮಂಜುನಾಥ ಎಸ್. ರೇವಣ್ಕರ್ ಅಧ್ಯಕ್ಷತೆ ವಹಿಸಿದ್ದರು. ರತ್ನಾವತಿ ಜೆ ಬೈಕಾಡಿ ಕನ್ನಡ ಗೀತೆಗಳನ್ನು ಹಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಅರುಣಾ ನಾಗರಾಜ್, ಸನತ್ ಕುಮಾರ್ ಜೈನ್, ಕಾ ವೀ ಕೃಷ್ಣದಾಸ್, ಗುರು ಪ್ರಸಾದ್, ಸತ್ಯವತಿ ಭಟ್ ಕೊಳಚಪ್ಪು, ಡಾ. ಸುರೇಶ ನೆಗಳಗುಳಿ, ಮಹಾಲಿಂಗ ಪಾಟಾಳಿ, ದಯಾನಂದ ರಾವ್ ಕಾವೂರು ಹಾಗೂ ಸಾಹಿತ್ಯಾಭಿಮಾನಿಗಳು ಉಪಸ್ಥಿತರಿದ್ದರು.
ಗೌ. ಕಾರ್ಯದರ್ಶಿ ಎನ್. ಗಣೇಶ್ ಪ್ರಸಾದ್ ಜೀ ಸ್ವಾಗತಿಸಿದರು. ಗೌ.ಕೋಶಾಧಿಕಾರಿ ಎನ್. ಸುಬ್ರಾಯ ಭಟ್ ನಿರೂಪಿಸಿ, ವಂದಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ