ನಮ್ಮ ನೆಲದ ಕಾನೂನುಗಳ ಸೂಕ್ಷ್ಮ ಗ್ರಹಿಕೆ, ಅರಿವು ಎಲ್ಲರಿಗೂ ಇರಬೇಕು: ಬಿ. ದಯಾನಂದ
ಬೆಂಗಳೂರು: 'ನಮ್ಮ ನೆಲದ ಕಾನೂನುಗಳ ಸೂಕ್ತಗ್ರಹಿಕೆ ಹಾಗೂ ಅರಿವು ಸಮಾಜದ ಪ್ರತಿಯೊಬ್ಬರಲ್ಲೂ ಇರಬೇಕು. ಅದರಲ್ಲೂ ನಮ್ಮ ಯುವ ಜನಾಂಗ ಈ ನಿಟ್ಟಿನಲ್ಲಿ ಆಸಕ್ತಿ ಬೆಳೆಸಿಕೊಂಡು ಉಳಿದ ಸಮಾಜದ ಬಂಧುಗಳಲ್ಲಿ ಆತ್ಮವಿಶ್ವಾಸ ಬೆಳೆಸಬೇಕು. ಏಕೆಂದರೆ ನಮ್ಮನ್ನೆಲ್ಲಾ ಆಳುವುದು, ನಿಗ್ರಹಿಸುವುದು ಮತ್ತು ಪ್ರೋತ್ಸಾಹಿಸುವುದು ಕಾನೂನು ಮಾತ್ರ. ಇಡೀ ಸರ್ಕಾರ ಈ ಕಾನೂನಿನ ಚೌಕಟ್ಟಿನಲ್ಲಿಯೇ ಕಾರ್ಯನಿರ್ವಹಿಸುತ್ತದೆ. ಪ್ರಜಾಪ್ರಭುತ್ವದಲ್ಲಿ ಕಾನೂನಿನ ಅರಿವು ಬಹಳ ಮುಖ್ಯ. ಕಾನೂನುಗಳ ಬಗ್ಗೆ ಪರಿಜ್ಞಾನವಿಲ್ಲದೆ ನಮ್ಮ ಬಹುತೇಕ ಯುವಜನರು ತಮಗೇ ತಿಳಿಯದಂತೆ ಅಪರಾಧಗಳ ಸುಳಿಗೆ ಸಿಲುಕಿ ಬಿಡುತ್ತಾರೆ. ಕಾನೂನಿನ ಅರಿವು ನಿಜಕ್ಕೂ ಒಬ್ಬ ವ್ಯಕ್ತಿಯನ್ನು ಅಕ್ರಮಗಳನ್ನು ಮಾಡದಂತೆ ತಡೆಯುತ್ತದೆ, ಅಷ್ಟೇ ಅಲ್ಲದೆ ಅಕ್ರಮ ಹಾಗೂ ಕಾನೂನುಬಾಹಿರ ಕೃತ್ಯಗಳಿಗೆ ಬಲಿಪಶುಗಳಾಗುವುದನ್ನೂ ತಪ್ಪಿಸುತ್ತದೆ' ಎಂದು ಹಿರಿಯ ಪೊಲೀಸ್ ಅಧಿಕಾರಿ, ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ ನುಡಿದರು.
ಅವರು ಬೆಂಗಳೂರು ನಗರದ ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಆಯೋಜಿತಗೊಂಡಿದ್ದ ಪ್ರತಿಷ್ಠಿತ ರಾಷ್ಟ್ರಮಟ್ಟದ ತಂತ್ರಜ್ಞಾನ ಹಾಗೂ ಸಾಂಸ್ಕೃತಿಕ ಉತ್ಸವ 'ಅನಾದ್ಯಂತ-2024' ಅನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಮುಂದುವರಿದು ಮಾತನಾಡಿದ ಅವರು, 'ಈ ಸಲದ 'ಅನಾದ್ಯಂತ'ದ ಚರ್ಚೆಯ ವಿಷಯ, 'ಕನಸುಗಳ ನಗರ'. ಕನಸುಗಳ ನಗರವನ್ನು, ನಮ್ಮೆಲ್ಲರ ಕನಸುಗಳನ್ನು ನನಸಾಗಿಸುವ ನಗರವನ್ನು ಸೃಷ್ಟಿಸುವ ಹೊಣೆ ನಮ್ಮ ಮೇಲಿದೆ. ನಾವು ಹೇಗೆ ಬದುಕಬೇಕು, ಸಾರ್ಥಕ ಬದುಕು ನಮ್ಮದಾಗಬೇಕಾದರೆ ನಾವು ಹೇಗೆ ಸನ್ನದ್ಧರಾಗಬೇಕು ಎಂಬ ವಿಚಾರಗಳಲ್ಲಿ ನೈತಿಕತೆ ಸದಾ ಅಡಿಗಲ್ಲಾಗಿರಬೇಕು, ನಾವು ನಮ್ಮ ಭಾರತದ ನೆಲ ನಿರೂಪಿಸಿರುವ ನೈತಿಕ ನೆಲೆಗಟ್ಟುಗಳ ಮೇಲೆ ನಗರಗಳನ್ನು ಕಟ್ಟಬೇಕೇ ಹೊರತು, ವಿದೇಶದ ಮಾದರಿಗಳನ್ನು ಅನುಸರಿಸಿ ಅಲ್ಲ. ನಮ್ಮ ಯುವ ತಂತ್ರಜ್ಞರು ಪರಿಸರಸ್ನೇಹಿ ತಂತ್ರಜ್ಞಾನವನ್ನು ಮಾತ್ರ ಬಳಸಿ ನಗರಗಳನ್ನು ಕಟ್ಟಬೇಕು ಅಥವ ಅಭಿವೃದ್ಧಿ ಪಡಿಸಬೇಕು. ಹಾಗಾದಲ್ಲಿ ಮಾತ್ರ ಭವಿಷ್ಯದ ಜನಾಂಗಗಳಿಗೂ ಸಲ್ಲುವಂತಹ ಕನಸುಗಳ ನಗರಗಳನ್ನು ಶಾಶ್ವತವಾಗಿ ನಿರ್ಮಿಸಲು ಸಾಧ್ಯ', ಎಂದರು.
ಈ ಉತ್ಸವದಲ್ಲಿ ಅಪರಿಮಿತ ಉತ್ಸಾಹ ಹಾಗೂ ತೀವ್ರಬದ್ಧತೆಯಿಂದ ರಾಷ್ಟ್ರದ ವಿವಿಧ ತಾಂತ್ರಿಕ ಮಹಾವಿದ್ಯಾಲಯಗಳನ್ನು ಪ್ರತಿನಿಧಿಸಿದ್ದ ಸಹಸ್ರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಈ ಸಲದ 'ಅನಾದ್ಯಂತ'ದ ಚರ್ಚೆಯ ವಿಷಯ - ನಮ್ಮ ನಗರಗಳು ಸಕಲರ ಕನಸುಗಳನ್ನು ನನಸು ಮಾಡುವ ನಿಟ್ಟಿನಲ್ಲಿ ಪ್ರಸ್ತುತವಾಗಬೇಕು ಎಂಬುದು. ಈ ನಿಟ್ಟಿನಲ್ಲಿ 'ಅನಾದ್ಯಂತ-2024', ತಂತ್ರಜ್ಞಾನದ ಸದ್ಬಳಕೆಗೆ ಹಾಗೂ ನಗರಗಳ ವ್ಯವಸ್ಥಿತ ಅಭಿವೃದ್ಧಿಗೆ ಅನೇಕ ಅನ್ವೇಷಣಾಧಾರಿತ ಸಂವಾದಗಳಿಗೆ ವೇದಿಕೆಯಾಗಲಿದೆ.
ಗೌರವಾನ್ವಿತ ಅತಿಥಿಗಳಾಗಿ ಪಾಲ್ಗೊಂಡಿದ್ದ ಜನಪ್ರಿಯ ಚಿತ್ರನಟಿ ಸಪ್ತಮಿ ಗೌಡ ಅವರು ಮೊದಲಿಗೆ, ಸ್ವತಃ ಇಂಜಿನಿಯರಿಂಗ್ ಅಭ್ಯಾಸ ಮಾಡಿರುವುದರಿಂದ ಇಂಜಿನಿಯರಿಂಗ್ ಕಾಲೇಜಿನ ತಂತ್ರಜ್ಞಾನ ಹಾಗೂ ಸಾಂಸ್ಕೃತಿಕ ಉತ್ಸವದಲ್ಲಿ ಪಾಲ್ಗೊಳ್ಳುತ್ತಿರುವುದು ಅಪಾರ ಸಂತಸ ತಂದಿದೆ ಎಂದರು. 'ನಮ್ಮ ವಿದ್ಯಾರ್ಥಿಗಳು ಎಷ್ಟೇ ನಿರಾಸಕ್ತಿ ತೋರಿದರೂ ಅವರನ್ನು ತರಗತಿಗಳಲ್ಲಿ ಕೂರಿಸಿ, ಪಾಠ ಹೇಳಿ, ಜ್ಞಾನದ ಬಗ್ಗೆ ಅರಿವು ಮೂಡಿಸುವ ಅಧ್ಯಾಪಕರುಗಳು ನಿಜಕ್ಕೂ ದೇವರ ಸಮಾನ. ಅವರನ್ನು ಗೌರವಿಸುವ ಪರಿಪಾಠವನ್ನು ನಾವು ಬೆಳೆಸಿಕೊಂಡು ನಮನಗಳನ್ನು ಸಲ್ಲಿಸಿದಾಗಲೇ ಬದುಕು ಸಾರ್ಥಕ ಅನ್ನಿಸುತ್ತದೆ. ನಮ್ಮ ಅಧ್ಯಾಪಕರು ಇಷ್ಟು ಸಹಸ್ರಾರು ಸಂಖ್ಯೆಯಲ್ಲಿ ತಂತ್ರಜ್ಞರನ್ನು ಸೃಷ್ಟಿಸುತ್ತಿರುವುದು ನೀವು ಈ ದೇಶದ ಅಭಿವೃದ್ಧಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲಿ ಎಂದು. ಆದರಿಂದ ನೀವು ಇಲ್ಲೇ ನೆಲೆಸಿರಿ; ನಿಮ್ಮವೇ ಉದ್ಯಮಗಳನ್ನು ಸ್ಥಾಪಿಸಿ', ಎಂದರು.
ಪ್ರಾರಂಭದಲ್ಲಿ ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಹೆಚ್.ಸಿ. ನಾಗರಾಜ್ ಸ್ವಾಗತಿಸಿದರು. ನಿಟ್ಟೆ ಶಿಕ್ಷಣ ಸಂಸ್ಥೆಯ ಶೈಕ್ಷಣಿಕ ನಿರ್ದೇಶಕ ಪ್ರೊ. ಸಂದೀಪ್ ಶಾಸ್ತ್ರಿ ಅಧ್ಯಕ್ಷತೆ ವಹಿಸಿದ್ದರು. ನಿಟ್ಟೆ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ರೋಹಿತ್ ಪೂಂಜ, ಸಂಸ್ಥೆಯ ಶೈಕ್ಷಣಿಕ ಮುಖ್ಯಸ್ಥ ಡಾ. ವಿ. ಶ್ರೀಧರ್, ಶಿಕ್ಷಕ ಸಂಯೋಜಕರಾದ ಡಾ. ಎನ್. ನಳಿನಿ ಹಾಗೂ ಡಾ. ಸುಧೀರ್ ರೆಡ್ಡಿ ಉಪಸ್ಥಿತರಿದ್ದರು
ಉತ್ಸವದಲ್ಲಿ 'ಐಡಿಯಾಥಾನ್ 5.0', 'ಕೋಡ್ ಸ್ಪ್ರಿಂಟ್ 2.0', ' ಸಿಮ್ ರೇಸಿಂಗ್', 'ಬಗ್ ಬ್ಯಾಶ್ ಬೊನಾಂಝಾ', 'ಕ್ವಿಜ್', 'ಟ್ರೆಶರ್ ಹಂಟ್', 'ಬೈಟ್ ಬ್ಯಾಟಲ್', 'ಕೋಡ್ ವರ್ಡ್ಸ್, ನೃತ್ಯ, ಚರ್ಚಾ ಸ್ಪರ್ಧೆ, ಕ್ರೀಡೆ, ಫ್ಯಾಶನ್ ಶೋ ಮೊದಲಾದ ಚಟುವಟಿಕೆಗಳೂ ನಡೆದವು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ