ನಗರ ಬೆಳೆಯಬೇಕಾದರೆ ರಸ್ತೆಗಳು ಸಮರ್ಪಕವಾಗಿರಬೇಕು: ಅಶೋಕ್ ಕುಮಾರ್ ರೈ

Upayuktha
0

        ಅಂಬಿಕಾ ಕ್ಯಾಂಪಸ್‌ಗೆ ತೆರಳುವ ಅಗಲೀಕರಣಗೊಂಡ ರಸ್ತೆ ಉದ್ಘಾಟನೆ



ಪುತ್ತೂರು: ನಗರ ಬೆಳೆಯಬೇಕಾದರೆ ರಸ್ತೆಗಳು ಸಮರ್ಪಕವಾಗಿರಬೇಕು. ಆದ್ದರಿಂದ ಎಲ್ಲೆಲ್ಲಿ ರಸ್ತೆಗೆ ಸಂಬಂಧಿಸಿದ ಸಮಸ್ಯೆಗಳು, ತಕರಾರುಗಳಿವೆಯೋ ಅವುಗಳನ್ನು ಗುರುತಿಸಿ ನ್ಯಾಯಮಾರ್ಗದಲ್ಲಿ ಪರಿಹರಿಸುವ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿಯೇ ಬಪ್ಪಳಿಗೆಯಲ್ಲಿನ ಅಂಬಿಕಾ ಶಿಕ್ಷಣ ಸಂಸ್ಥೆಗಳಿಗೆ ತೆರಳುವ ರಸ್ತೆಯ ಬಗೆಗಿದ್ದ ತಕರಾರನ್ನು ಮಾತುಕತೆಯ ಮೂಲಕ ಪರಿಹರಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ ಎಂದು ಪುತ್ತೂರಿನ ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.


ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ಕ್ಯಾಂಪಸ್‌ಗೆ ತೆರಳುವ ಅಗಲೀಕರಣಗೊಂಡ ರಸ್ತೆಯನ್ನು ಉದ್ಘಾಟಿಸಿ ಶನಿವಾರ ಮಾತನಾಡಿದರು.


ಅಂಬಿಕಾ ಶಿಕ್ಷಣ ಸಂಸ್ಥೆಗಳು ಪುತ್ತೂರಿನ ಹೆಮ್ಮೆಗಳಲ್ಲೊಂದು. ಬೇರೆ ಬೇರೆ ಜಿಲ್ಲೆಗಳ, ತಾಲೂಕುಗಳ ವಿದ್ಯಾರ್ಥಿಗಳ ಜತೆಗೆ ಸಮರ್ಥವಾಗಿ ಸ್ಪರ್ಧೆ ಒದಗಿಸಿ ಅತ್ಯಧಿಕ ಅಂಗಳನ್ನು, ರಾಂಕ್‌ಗಳನ್ನು ತಮ್ಮದಾಗಿಸುವ ವಿದ್ಯಾರ್ಥಿಗಳು ಈ ಸಂಸ್ಥೆಗಳಲ್ಲಿದ್ದಾರೆ. ಎಷ್ಟೋ ಮಂದಿ ಇಲ್ಲಿ ದಾಖಲಾತಿ ಪಡೆಯುವುದಕ್ಕೆ ಬಯಸುತ್ತಿದ್ದಾರೆ. ಹಾಗಾಗಿ ಸಂಸ್ಥೆಗೆ ನ್ಯಾಯಯುತವಾಗಿ ನೀಡಬಹುದಾದ ಎಲ್ಲಾ ಸಹಕಾರಗಳನ್ನೂ ಸರ್ಕಾರದ ವತಿಯಿಂದ ನೀಡಲಾಗುತ್ತದೆ. ಸದ್ಯದಲ್ಲೇ ಅಗಲೀಕರಣಗೊಂಡ ರಸ್ತೆಗೆ ಕಾಂಕ್ರೀಟೀಕರಣವನ್ನೂ ಮಾಡಿಸಲಾಗುತ್ತದೆ ಎಂದರು.


ನೀರು ಹಾಗೂ ಒಳಚರಂಡಿಗಳು ನಗರದ ಬೆಳವಣಿಗೆಗೆ ಅವಶ್ಯಕ. ಕಿರಿದಾದ ರಸ್ತೆಗಳ ಅಗಲೀಕರಣವೂ ಅನಿವಾರ್ಯ. ಹಾಗಾಗಿ ಆದ್ಯತೆಯ ಮೇರೆಗೆ ಒಂದೊಂದೇ ಸಂಗತಿಗಳನ್ನು ಸಾಧಿಸುತ್ತಾ ಬರಬೇಕಿದೆ. ಹಾಗಾದಾಗ ಮಾತ್ರ ಪುತ್ತೂರು ಅಭಿವೃದ್ಧಿ ಕಾಣುವುದಕ್ಕೆ ಸಾಧ್ಯ ಎಂದರಲ್ಲದೆ ವಿದ್ಯಾರ್ಥಿಗಳಿಗೆ ಔದ್ಯಮಿಕ ಕ್ಷೇತ್ರದ ಬಗೆಗೆ ಮಾರ್ಗದರ್ಶನ ನೀಡುವುದಕ್ಕೆ ಸದಾ ಸಿದ್ಧ ಎಂದು ನುಡಿದರು.


ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ ಕಳೆದ ಹನ್ನೊಂದು ವರ್ಷಗಳಿಂದ ನಿರಂತರ ಪ್ರಯತ್ನ ಮಾಡಲಾಗುತ್ತಿದ್ದರೂ ರಸ್ತೆ ಅಗಲೀಕರಣಗೊಳ್ಳದಂತೆ ವ್ಯವಸ್ಥಿತ ಜಾಲವೊಂದು ಕಾರ್ಯನಿರ್ವಹಿಸುತ್ತಿತ್ತು. ಕಿರಿದಾದ ರಸ್ತೆಯಲ್ಲಿ ಸುಮಾರು ಒಂದೂವರೆ ಸಾವಿರದಷ್ಟು ವಿದ್ಯಾರ್ಥಿಗಳು ಹಾಗೂ ಹೆತ್ತವರು ಬೇಲಿಯ ಮುಳ್ಳುಗಳಿಂದ ತರಚಿಸಿಕೊಳ್ಳುತ್ತಾ ನಡೆಯಬೇಕಾದ ಸ್ಥಿತಿ ಇತ್ತು. ಆದರೆ ಶಾಸಕರು ಕ್ಷಣಾರ್ಧದಲ್ಲಿ ಸಮಸ್ಯೆಯನ್ನು ಬಗೆಹರಿಸಿ ವಿದ್ಯಾರ್ಥಿಗಳ ಅಧ್ಯಯನಕ್ಕೆ ಅನುಕೂಲ ಕಲ್ಪಿಸಿದ್ದಾರೆ ಎಂದರು.


ಕಾರ್ಯಕ್ರಮದಲ್ಲಿ ಹಿರಿಯ ನ್ಯಾಯವಾದಿ ಎನ್.ಕೆ.ಜಗನ್ನಿವಾಸ ರಾವ್, ಸ್ಥಳೀಯ ಮುಖಂಡರಾದ ಶಿವರಾಮ ಆಳ್ವಾ ಬಳ್ಳಮಜಲು, ಜಯಪ್ರಕಾಶ್ ಬದಿನಾರು, ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ರಾಜಶ್ರೀ ಎಸ್ ನಟ್ಟೋಜ, ಆಡಳಿತ ಮಂಡಳಿ ಸದಸ್ಯರಾದ ಸುರೇಶ ಶೆಟ್ಟಿ, ಪ್ರಸನ್ನ ಭಟ್, ಹೆತ್ತವರು, ಆಡಳಿತಾಧಿಕಾರಿ ಗಣೇಶ ಪ್ರಸಾದ್ ಎ, ಕ್ಯಾಂಪಸ್ ನಿರ್ದೇಶಕ ರಾಜೇಂದ್ರ, ಬೋಧಕ ಬೋಧಕೇತರ ವೃಂದ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.


ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯ ಪ್ರಾಚಾರ್ಯೆ ಮಾಲತಿ ಡಿ ಸ್ವಾಗತಿಸಿ, ಅಂಬಿಕಾ ಮಹಾವಿದ್ಯಾಲಯದ ಪ್ರಾಂಶುಪಾಲ ರಾಕೇಶ ಕುಮಾರ್ ಕಮ್ಮಜೆ ವಂದಿಸಿದರು.



 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top