ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ

Upayuktha
0


ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎನ್ನುವ ಮಾತು   ಅಕ್ಷರಶಃ ಸತ್ಯ. ಏಕೆಂದರೆ ಒಂದು ಮನೆಯಲ್ಲಿ ಹೆಣ್ಣು ಕಲಿತರೆ ಆ ಮನೆಗೆ ಬೆಳಕಾಗುವಳು. ಸಮಾಜದ ಎಲ್ಲ ಹೆಣ್ಣು ಮಕ್ಕಳು ಶಿಕ್ಷಣ ಪಡೆದರೆ ಸಮಾಜವನ್ನೇ ಉದ್ದರಿಸುವರು. ಸಮಾಜದ ಪ್ರಗತಿಯ ರಥ ಸಾಗಬೇಕಾದರೆ ಗಂಡು-ಹೆಣ್ಣು ಎಂಬ ಎರಡು ಚಕ್ರಗಳು ಇರಲೇಬೇಕು. ರಥಕ್ಕೆ ಹೇಗೆ ಒಂದು ಚಕ್ರ ಇಲ್ಲವಾದರೆ ಚಲಿಸಲು ಸಾಧ್ಯವಿಲ್ಲವೋ ಸಮಾಜವೂ ಹಾಗೆಯೇ, ಪ್ರಕೃತಿಯೇ ಗಂಡು, ಹೆಣ್ಣಿಗೂ ಸಮಾನವಾದ ಸ್ಥಾನಮಾನವನ್ನು ನೀಡಿಬಿಟ್ಟಿದೆ. 


ಯಾರೂ ಹೆಚ್ಚಲ್ಲ ಯಾರೂ ಕಡಿಮೆಯಲ್ಲ ದೈಹಿಕವಾಗಿ ಗಂಡು-ಹೆಣ್ಣು ಎರಡು ಲಿಂಗಗಳನ್ನು ಕಾಣಬಹುದು. ಅಧ್ಯಾತ್ಮಿಕವಾಗಿ ಆತ್ಮಗಳಿಗೆ ಯಾವುದೇ ಲಿಂಗ ಭೇದವಿಲ್ಲ ಎಂದು ವಚನಕಾರರು ಹೇಳಿದ್ದಾರೆ. ಪುರುಷನಷ್ಟೇ ಸಮಾನ ಸಾಮರ್ಥ್ಯ ಉಳ್ಳವಳು ಹೆಣ್ಣು ಆದರೆ ಹಿಂದಿನ ಪುರುಷ ಪ್ರಧಾನ ಸಮಾಜದಲ್ಲಿ ಗಂಡು ಶ್ರೇಷ್ಠ ಹೆಣ್ಣು ಕನಿಷ್ಠ ಹೆಣ್ಣು ಗಂಡಿನ ಗುಲಾಮಳು, ಆವಳೇನಿದ್ದರೂ ಗಂಡು ಹೇಳಿದ ಹಾಗೆ ಕೇಳಬೇಕು ಎನ್ನುವ ಮನೋಭಾವನೆಯನ್ನು ಸ್ವಾರ್ಥಪರ ಪುರುಷರು ಹುಟ್ಟು ಹಾಕಿದ್ದರ ಪರಿಣಾಮವಾಗಿ ಹೆಣ್ಣು ಅವಮಾನಕ್ಕೊಳಗಾದಳು. ದೌರ್ಜನ್ಯಕ್ಕೊಳಗಾದಳು, ಅಬಲೆಯಾದಳು, ಪರಾವಲಂಬಿಯಾದಳು. 


ಇತ್ತೀಚೆಗೆ ನಡೆಯುತ್ತಿರುವ ಮಹಿಳೆಯ ಮೇಲಿನ ದೌರ್ಜನ್ಯ ಮತ್ತು ಅತ್ಯಾಚಾರಗಳನ್ನು ಕಂಡು ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ. ಈ ಘಟನೆಗಳು ನಮ್ಮ ಭಾರತಿಯ ಉನ್ನತ ಸಂಸ್ಕೃತಿಗೆ ಘೋರ ಅಪಮಾನವನ್ನು ಮಾಡುವಂತವಷ್ಟೇ ಅಲ್ಲ ಮಹಿಳೆಯ ಅಳಿವು ಉಳಿವಿನ ಪ್ರಶ್ನೆಯಂತೆ ತೋರುತ್ತವೆ. ಇಂದಿನ ಆಧುನಿಕ ಯುಗದಲ್ಲಿ ಮಹಿಳೆಯರು ಯಾರಿಗೂ ಕಮ್ಮಿ ಇಲ್ಲ ಎನ್ನುವ ಹಾಗೆ ಎಲ್ಲ ಕ್ಷೇತ್ರದಲ್ಲಿಯೂ ತನ್ನ ಛಾಪನ್ನು ಮೂಡಿಸುತ್ತಿದ್ದಾಳೆ. ಪ್ರತಿಯೊಂದು ಕ್ಷೇತ್ರದಲ್ಲೂ ಮಹಿಳೆ ಸಾಧನೆ ಮಾಡುತ್ತಿದ್ದಾಳೆ. 


ಹೆಣ್ಣು ರಾಷ್ಟ್ರಪತಿಯಾಗುವುದು ಒಂದು ಸಾಧನೆಯಾದರೆ, ತನ್ನ ಕುಟುಂಬವನ್ನು ಅಚ್ಚುಕಟ್ಟಾಗಿ ನಿಭಾಯಿಸುವುದೂ ಕೂಡ ಸಾಧನೆಯೇ. ಹೆಣ್ಣು ಪುರುಷನಂತೆಯೇ ಬೇರೆ ಬೇರೆ ಕ್ಷೇತ್ರಗಳಲ್ಲೂ ಸಾಧನೆ ಮಾಡಬೇಕಾದರೆ ಅವಳಿಗೆ ಎದುರಾಗುವ ಮೊದಲ ಸವಾಲು ಕುಟುಂಬ, ಹೆಣ್ಣು ಮಗುವಾಗಿ ,ಮಗಳಾಗಿ ಹೆಂಡತಿಯಾಗಿ, ಸೊಸೆಯಾಗಿ, ತಾಯಿಯಾಗಿ, ವಿವಿಧ ಪಾತ್ರಗಳನ್ನು ನಿರ್ವಹಿಸುತ್ತಾಳೆ. ಕುಟುಂಬರೂಪಿಯಾದ ಹೆಣ್ಣು ಸಮಾಜ ರೂಪಿಯಾಗಿ ನಿಲ್ಲಬೇಕಾದರೆ ಕುಟುಂಬದವರ ಸಹಕಾರ ಬಹಳ ಮುಖ್ಯವಾಗಿರುತ್ತದೆ. ಕುಟುಂಬದ ಸಹಕಾರ ದೊರೆತರೆ ಹೆಣ್ಣು ಯಾವ ಸಾಧನೆಯನ್ನು ಬೇಕಾದರೂ ಮಾಡಬಲ್ಲಳು ಎನ್ನುವುದಕ್ಕೆ ಬಹಳಷ್ಟು ಸಾಕ್ಷಿಗಳು ನಮ್ಮ ನಡುವೆಯೇ ಇವೆ. 



ಜಯಶ್ರೀ.ಸಂಪ , ಪಂಜ



  ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top