ಮಂಗಳೂರು: ದೌರ್ಜನ್ಯವೇ ತುಂಬಿಕೊಂಡಿದ್ದ ಸಮಾಜದಲ್ಲಿ ಸಂವಿಧಾನದ ಹೆಸರಿನಲ್ಲಿ ತಳ ಸಮುದಾಯಕ್ಕೂ ಎಲ್ಲಾ ರೀತಿಯ ಸೌಕರ್ಯ ನೀಡಿದ ಮಹಾತ್ಮ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಎಂದು ಶ್ರೀ ಗೋಕರ್ಣನಾಥೇಶ್ವರ ಕಾಲೇಜಿನ ಪ್ರಾಂಶುಪಾಲ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯ ರಘುರಾಜ್ ಅಭಿಪ್ರಾಯಪಟ್ಟರು.
ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಐಕ್ಯೂಎಸಿ ಹಾಗೂ ಕಾಲೇಜಿನ ಗ್ರಂಥಾಲಯದ ಸಹಯೋಗದಲ್ಲಿ ನಡೆದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ದೀನ-ದಲಿತರಿಗೆ ಅಂಬೇಡ್ಕರ್ ಒಬ್ಬ ಗುರು ಮಾತ್ರವಲ್ಲ; ಅವರೇ ದೇವರು ಎಂದರು.
ದೂರದ ಅಮೆರಿಕಾ ದೇಶದ ಕೊಲಂಬಿಯಾ ವಿಶ್ವವಿದ್ಯಾನಿಲಯದಲ್ಲಿ ಜ್ಞಾನದ ಸಂಕೇತವಾಗಿ ಡಾ. ಬಿ. ಆರ್.ಅಂಬೇಡ್ಕರ್ ಅವರ ಪ್ರತಿಮೆ ಸ್ಥಾಪನೆ ಮಾಡಿರುವುದು ನಮ್ಮ ಹೆಮ್ಮೆ. ಅಂಬೇಡ್ಕರ್ ಜೀವನ ಕುರಿತಾಗಿ ಸಂಪೂರ್ಣವಾಗಿ ಅಧ್ಯಯನ ಮಾಡುವುದು ಅಸಾಧ್ಯವಾದ ಮಾತೇ ಸರಿ ಎಂದರು.
ನಮ್ಮ ಸಮಾಜದಲ್ಲಿ ಜಾತಿ ವ್ಯವಸ್ಥೆ ಇನ್ನೂ ಜೀವಂತವಾಗಿರುವುದು ಶೋಚನೀಯ. ಪ್ರತಿಯೊಬ್ಬರ ಮೈಯಲ್ಲೂ ಒಂದೇ ರೀತಿಯ ರಕ್ತ ಹರಿಯುತ್ತಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಿದೆ. ಸಮಾಜದಲ್ಲಿ ಮೇಲು-ಕೀಳು ಎಂಬುದಿಲ್ಲ, ಬದಲಾಗಿ ಎಲ್ಲರೂ ಸಮಾನರು. ನ್ಯಾಯದ ಪರಿಕಲ್ಪನೆಯಲ್ಲಿ ಸಾಮಾಜಿಕ ನ್ಯಾಯ ಪ್ರಮುಖವಾದುದು. ಸಾಮಾಜಿಕ ನ್ಯಾಯದಿಂದಲೇ ಆರ್ಥಿಕ ಹಾಗೂ ರಾಜಕೀಯ ನ್ಯಾಯವನ್ನು ಸಾಧಿಸಲು ಸಾಧ್ಯ ಎಂಬುದನ್ನು ಅಂಬೇಡ್ಕರ್ ಅವರು ಅಂದೇ ವಿವರಿಸಿದ್ದರು ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಭಾರ ಪ್ರಾಂಶುಪಾಲೆ ಪ್ರೊ. ಲತಾ ಎ. ಪಂಡಿತ್ ಹೇಳಿದರು.
ಕಾಲೇಜಿನ ಗ್ರಂಥಾಲಯದ ವತಿಯಿಂದ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆ, ಭಾಷಣ ಸ್ಪರ್ಧೆ ಮತ್ತು ವ್ಯಕ್ತಿ ಚಿತ್ರಣ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಅಲ್ಲದೇ, ಇದೇ ವೇಳೆ ಅಂಬೇಡ್ಕರ್ ಅವರ ಕುರಿತು ವಿದ್ಯಾರ್ಥಿಗಳು ಮಾತನಾಡಿದರು.
ಕಾರ್ಯಕ್ರಮವನ್ನು ರಾಜ್ಯಶಾಸ್ತ್ರ ವಿಭಾಗದ ಡಾ. ರುಕ್ಮಯ ಕಾರ್ಯಕ್ರಮ ನಿರೂಪಿಸಿದರೆ, ಸ್ನಾತಕೋತ್ತರ ರಸಾಯನಶಾಸ್ತ್ರ ವಿಭಾಗದ ಸಂಯೋಜಕ ಡಾ. ಸಂಜಯ್ ಅಣ್ಣಾರಾವ್ ಸ್ವಾಗಿತಿಸಿದರು. ಐಕ್ಯೂಎಸಿ ಸಂಯೋಜಕ ಡಾ. ಸಿದ್ದರಾಜು ಎಂ. ಎನ್. ವಂದಾರ್ಪಣೆ ಮಾಡಿದರು. ಗ್ರಂಥಪಾಲಕಿ ಡಾ. ವನಜಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ