|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಶ್ರೀರಾಮ ಕಥಾ ಲೇಖನ ಅಭಿಯಾನ-134: ರಾಮಾಯಣದಲ್ಲಿ ಭಕ್ತ ವಾತ್ಸಲ್ಯ

ಶ್ರೀರಾಮ ಕಥಾ ಲೇಖನ ಅಭಿಯಾನ-134: ರಾಮಾಯಣದಲ್ಲಿ ಭಕ್ತ ವಾತ್ಸಲ್ಯ



- ಡಾ. ಚಂದ್ರಿಕಾ ವಿಜಯೇಂದ್ರ, ಬೆಂಗಳೂರು 


ಶ್ರೀರಾಮಚಂದ್ರನ ಜೀವನವು ಇಡೀ ಜಗತ್ತಿಗೆ ಆದರ್ಶವಾಗಿದೆ. ಆ ಮಹಿಮನ ನಡೆ, ನುಡಿ, ಆಚಾರ, ವಿಚಾರ ವ್ಯವಹಾರಗಳು ಮೌಲ್ಯ ಆಧಾರಿತ. ಅನಂತ ಕಲ್ಯಾಣ ಗುಣ ಪರಿಪೂರ್ಣನೆನಿಸಿದ ಅವನ ಬದುಕೇ ಒಂದು ಸಂದೇಶ ಈ ಮಾನವ ಕುಲಕ್ಕೆ.


ಶ್ರೀರಾಮಚಂದ್ರನಲ್ಲಿ ಅನೇಕ ವಿಶೇಷತೆಗಳನ್ನು ಕಾಣುತ್ತೇವೆ. ಅದರಲ್ಲಿ ಒಂದನ್ನು ಆರಿಸಿಕೊಂಡರೆ ಅವನು ತನ್ನ ಭಕ್ತರ ಮೇಲೆ ಇಟ್ಟ ವಾತ್ಸಲ್ಯ ಆದ್ದರಿಂದ ಅವನಿಗೆ ಭಕ್ತ ವತ್ಸಲ ಎಂದು ಕರೆಯುತ್ತೇವೆ. ಅವನ ನಿರ್ದಿಷ್ಟವಾದ ಅಭೇದ ದೃಷ್ಟಿ ಯಾರನ್ನೂ ತನಗಿಂತ  ಕೀಳಾಗಿ ನೋಡದೆ ತನ್ನವರಂತೆಯೆ ಕಂಡು ಅವರಿಗೆ ಒಂದು ನೆಲೆ ಕಲ್ಪಿಸಿ ಕೊಟ್ಟು ಪ್ರಿಯದರ್ಶನ ಎಂದು ಕರೆಸಿಕೊಂಡಿದ್ದಾನೆ. ಶ್ರೀರಾಮನ ಭೇದರಹಿತ ಬದುಕು ತಿಳಿಯುವುದು ಗುಹ, ಸುಗ್ರೀವ, ವಿಭೀಷಣ ಇವರ ಸ್ನೇಹದಿಂದ ಮತ್ತು ವಾತ್ಸಲ್ಯದಿಂದ.


ದೋಣಿ ನಡೆಸುವ ತನ್ನ ಕಾಯಕದಲ್ಲಿ ತನ್ನ ಮತ್ತು ತನ್ನವರ ಕಾರ್ಯವನ್ನು ಕಾಯ್ದುಕೊಂಡು ಬರುತ್ತಿದ್ದ ಓರ್ವ ಸಾಮಾನ್ಯ ಜೀವಿಯಾದ ಗುಹನ ಮತ್ತು ಕಾಡು ಕಪಿ ಎನಿಸಿಕೊಂಡ ಕಪಿರಾಜ ಸುಗ್ರೀವನ ಹಾಗೂ ತನ್ನಲ್ಲಿ ವೈರತ್ವವನ್ನು ಸಾಧಿಸಿದ ಲಂಕೇಶ್ವರನ ತಮ್ಮ ವಿಭೀಷಣನು ಬಂದಾಗ ಆಶ್ರಯವಿತ್ತು ರಕ್ಷಿಸಿದನು, ಶರಣಾಗತವತ್ಸಲನಾದ ಶ್ರೀರಾಮನು ಈ ಮೂವರನ್ನು ತನ್ನ ಕುಟುಂಬದ ಸದಸ್ಯರೆಂದೆ ಸಂತೈಸಿ ತನ್ನ ಉದಾರತೆಯನ್ನು ಮೆರೆಸಿದ್ದಾನೆ.


ಶ್ರೀ ರಾಮನು ನಮ್ಮೆಲ್ಲರ ರಕ್ಷಕ ಅಂತಹ ಶ್ರೀರಾಮ ಶ್ರೀಲಂಕಾಕ್ಕೆ ಹೋಗಿ ರಾವಣನ ಸಂಹರಿಸಿದ ಕಥೆ ನಮಗೆಲ್ಲ ತಿಳಿದಿದೆ. ಶ್ರೀ ರಾಮನ ಭಕ್ತರು ತಿಳಿಯಲೇಬೇಕಾದ ಮತ್ತೊಂದು ಕಥೆ ಎಂದರೆ ಅದು ಶ್ರೀರಾಮನಿಗಾಗಿ ಕಾದಿದ್ದ ಶಬರಿಯ ಕಥೆ. ಬೇಡರ ಕುಟುಂಬ ಒಂದರಲ್ಲಿ ಜನಿಸಿದ ಶಬರಿಯು ರಾಮನ ಕುರಿತಾದ ತನ್ನ ನಿಷ್ಕಳಂಕ ಭಕ್ತಿ ಭಾವದ ಮೂಲಕ ಪ್ರಭು ಶ್ರೀರಾಮಚಂದ್ರನ ಪಾದ ಪದ್ಮಗಳಲ್ಲಿ ಲೀನವಾದ ಕಥೆಯು ರಾಮಾಯಣದ ಭಾಗವಾಗಿದ್ದು ಆಧ್ಯಾತ್ಮಿಕ ಮಾರ್ಗವನ್ನು ಅನುಸರಿಸುತ್ತಿರುವವರಿಗೆ ದಾರಿದೀಪವಾಗಿದೆ.


ಶಬರಿಯು ರಾಮನನ್ನು ಅರಿಸುತ್ತಾ ಮಾತಂಗ ಮುನಿಗಳ ಆಶ್ರಮಕ್ಕೆ ಬರುತ್ತಾಳೆ. ಅಲ್ಲಿಯೇ ಇದ್ದು ಮಾತಂಗ ಮುನಿಗಳ ಸೇವೆ ಮಾಡುತ್ತಾಳೆ ಮಾತಂಗ ಮುನಿಯು ತಮ್ಮ ದೇಹ ತ್ಯಾಗವನ್ನು ಮಾಡುವ ಸಮಯವೂ ವಿಹಿತವಾದಾಗ ಶಬರಿಯೂ ಸಹ ತನಗೂ ಮುಕ್ತಿಯನ್ನು ಕರುಣಿಸಬೇಕೆಂದು ಮಾತಂಗ ಮುನಿಗಳಲ್ಲಿ ಪ್ರಾರ್ಥಿಸುತ್ತಾಳೆ. ಅದಕ್ಕೆ ಮುನಿಗಳು ಶಬರಿಯೇ ಭಗವಾನ್ ಶ್ರೀರಾಮಚಂದ್ರನು ನನ್ನ ಆಶ್ರಮಕ್ಕೆ ಆಗಮಿಸುವ ಕಾಲಕ್ಕೆ ನಾನು ಅಂತ್ಯಕಾಲವನ್ನು ಹೊಂದಿರುತ್ತೇನೆ. ನಾನೀಗ ಶರೀರ ತ್ಯಾಗ ಮಾಡಬೇಕಾಗಿರುವುದು ಅನಿವಾರ್ಯವಾಗಿದೆ ಎಂದು ಹೇಳುತ್ತಾರೆ. ಶ್ರೀರಾಮಚಂದ್ರನನ್ನು ರಾಮಾವತಾರದಲ್ಲಿಯೇ ಕಾಣುವಂತಹ ಸೌಭಾಗ್ಯವು ನಿನ್ನದಾಗಿರುತ್ತದೆ. ಹಾಗೂ ಸ್ವಯಂ ಶ್ರೀರಾಮಚಂದ್ರನ ಅಮೃತ ಹಸ್ತಗಳಿಂದಲೇ ಮುಕ್ತಿಯನ್ನು ಪಡೆಯಲಿರುವ ಧನ್ಯಜೀವಿಯು ನೀನಾಗಲಿರುವೆ. ಎಂದು ಹೇಳಿ ಮಾತಂಗ ಮುನಿಗಳು ದೇಹ ತ್ಯಾಗ ಮಾಡುತ್ತಾರೆ .ಶ್ರೀರಾಮನು ಆಶ್ರಮಯದ ಹಾದಿ ಸಾಗಿ ಬರುವಾಗ ಯಾವುದೇ ಕಲ್ಲು ಮುಳ್ಳುಗಳು ಪ್ರಭುವಿನ ಪಾದ ಕಮಲಗಳಿಗೆ ಚುಚ್ಚಿ ಅವುಗಳಿಗೆ ಘಾಸಿಯನ್ನು ಉಂಟುಮಾಡಬಾರದೆಂದು ಶಬರಿಯು ಕಾಳಜಿವಹಿಸುತ್ತಿದ್ದಳು. ತನ್ನ ಪ್ರಭುವನ್ನು ನಿರೀಕ್ಷಿಸುತ್ತಿರುವ ಶಬರಿಯೋ ಹಲವಾರು ವರ್ಷಗಳನ್ನು ಕಳೆದಳು. ಕಡೆಗೂ ರಾಮ ಲಕ್ಷ್ಮಣರ ಆಗಮನವಾಗುತ್ತದೆ. ರಾಮ ಲಕ್ಷ್ಮಣರು ಶಬರಿಯ ಆಶ್ರಮಕ್ಕೆ ಬರುತ್ತಾರೆ. ತನ್ನ ಕಣ್ಣುಗಳ ಮುಂದೆಯೇ ಸಾಕ್ಷಾತ್ ಪ್ರಭು ಶ್ರೀರಾಮಚಂದ್ರನನ್ನು ಕಂಡ ಶಬರಿಯ ಮನಸ್ಸು ಇಂದಿಗೆ ನನ್ನ ಜನ್ಮ ಸಾರ್ಥಕವಾಯಿತು ಎಂದು ಹೇಳಿ ಆದರದಿಂದ ರಾಮನನ್ನು ಕರೆದು ಆಸನವನ್ನು ನೀಡುತ್ತಾಳೆ, ಶಬರಿಯು ತಾನು ಪರಿಶೀಲಿಸಿದ ಹಣ್ಣುಗಳ ಪೈಕಿ ಅತ್ಯಂತ ಸವಿಯಾದ ಹಣ್ಣುಗಳನ್ನು ಶ್ರೀರಾಮಚಂದ್ರನಿಗೆ ಅರ್ಪಿಸುತ್ತಾಳೆ. ಶಬರಿಯೋ ನಿಷ್ಕಲ್ಮಶ ಮನಸ್ಸಿನಿಂದ ಪರಿಶುದ್ಧವಾದ ಭಕ್ತಿ ಭಾವದಿಂದ ಪ್ರಾಮಾಣಿಕವಾಗಿ ಅರ್ಪಿಸಿದ ಆ ಹಣ್ಣುಗಳನ್ನು ಶ್ರೀರಾಮಚಂದ್ರನು ಮನಸಾರೆ ಸ್ವೀಕರಿಸುವನು. ಭಗವಂತನಾದ ಶ್ರೀರಾಮಚಂದ್ರನಲ್ಲಿ ಮುಕ್ತಿಯನ್ನು ಬೇಡಿಕೊಳ್ಳುತ್ತಾ ಶಬರಿಯು ಅಗ್ನಿಯನ್ನು ಪ್ರವೇಶಿಸುತ್ತಾಳೆ. ಭಗವಂತನ ಕಾರುಣ್ಯದಿಂದ ಜೀರ್ಣವಾದ ಶರೀರವನ್ನು ಹೊಂದಿದ್ದ ಹಣ್ಣು ಮುದುಕಿ ಯಾದ ಶಬರಿಯು ಅಗ್ನಿಯನ್ನು ಪ್ರವೇಶಿಸಿದೊಡನೆ ಆಕೆಯು ರೇಷ್ಮೆ ಪಿತಾಂಬರ ಆಭರಣವನ್ನು ಧರಿಸಿದ ಸುಂದರಿ ರೂಪವತಿಯಾಗಿ ಓರ್ವ ಕನ್ಯೆಯಾಗಿ ಹೊರ ಬರುತ್ತಾಳೆ. ಶ್ರೀರಾಮಚಂದ್ರನ ಅಮೃತ ಹಸ್ತದಿಂದ ಮೋಕ್ಷವನ್ನು ಗಳಿಸುತ್ತಾಳೆ.


ರಾಮಾಯಣದ ಪ್ರಮುಖ ಪಾತ್ರ ಹನುಮಂತ ಇಂದಿಗೂ ಜನರ ಮನಸ್ಸಿನಲ್ಲಿ ಉಳಿದಿದ್ದಾನೆ. ರಾಮ ಮತ್ತು ಹನುಮಂತ ಇಬ್ಬರ ಬಾಂಧವ್ಯ ಹೇಳಲು  ಅಸಾಧ್ಯವಾದುದು. ಸೀತೆಯನ್ನು ಮರಳಿ ಪಡೆದ ರಾಮನು ಹನುಮಂತನಿಗೆ ನಾನು ನಿನಗೆ ಪ್ರತಿಯಾಗಿ ಏನು ಕೊಡಲಿ ಎಂದು ಕೇಳಿದಾಗ ದಾಸ್ಯದ ಭಾಗ್ಯ ಕೊಡು ಎಂದು ಹನುಮಂತನು ಕೇಳುತ್ತಾನೆ. ಭಕ್ತ ಹನುಮಂತನಿಗೆ ನಾನು ಏನು ಕೊಟ್ಟರೂ ಕಡಿಮೆಯೇ. ಅವನು ಮಾಡಿದ ಸೇವೆಯ ಮುಂದೆ ಮೋಕ್ಷವೂ ಸಣ್ಣದು. ಅವನು ನನ್ನ ಸಹ ಭೋಗವನ್ನು ಪಡೆದ ಭಾಗ್ಯಶಾಲಿ ಆಗಲಿ ಎಂದು ರಾಮಚಂದ್ರನು ಸಂತಸದಿಂದ ಹನುಮಂತನನ್ನು ಆಲಂಗಿಸಿದನು. ಹೇಗೆ ರಾಮಚಂದ್ರನು ತನ್ನ ಭಕ್ತರ ಮೇಲೆ ಇಟ್ಟಿರುವ ವಾತ್ಸಲ್ಯ, ಪ್ರೀತಿ ಅಪಾರವಾದದ್ದು ಯಾರೇ ಆಗಲಿ ರಾಮ ನಾನು ನಿನ್ನವನು ಎಂದು ಆಶ್ರಯವನ್ನು ಬೇಡಿ ಬರುವ ಮಿತ್ರರಾಗಲಿ ಶತ್ರುವಾಗಲಿ ಅಂತವರಿಗೆ ಆಶ್ರಯವನ್ನು ಕೊಟ್ಟು ರಕ್ಷಿಸುವುದು ನನ್ನ ಧರ್ಮ ಇದು ನನ್ನ ವ್ರತ ಕೂಡ ಎಂದು ಶ್ರೀರಾಮ ನುಡಿಯುತ್ತಾನೆ. ಇಂತಹ ಚಾರಿತ್ಯ ವಂತ ಶ್ರೀ ರಾಮನ ಬದುಕು ಒಂದು ಲೋಕ ಚರಿತ್ರೆ ಆಗಿರುವುದು ಈ ಭವ್ಯ ಭಾರತದ ಪ್ರಜೆಗಳಾದ ನಮ್ಮ ಪುಣ್ಯ ಎನ್ನಬೇಕು.


ರಾಮ ಲಕ್ಷ್ಮಣ ಇಬ್ಬರೂ ಸೀತೆಯನ್ನು ಹುಡುಕುತ್ತಾ ನಡೆಯುವಾಗ ಮಹಾತ್ಮನು ಹಾಗೂ ಪಕ್ಷಿ ಶ್ರೇಷ್ಠನೂ ಆದ ಜಟಾಯು ನೆಲದ ಮೇಲೆ ಬಿದ್ದಿರುವುದು ಕಾಣಿಸುತ್ತದೆ. ಅವರಿಬ್ಬರೂ ಜಟಾಯುವಿನ ಹತ್ತಿರ ಹೋದಾಗ ಜಟಾಯು ಆಯುಷ್ಮಾನ್ ರಾಮ ಯಾವ ಸೀತೆಯನ್ನು ಈ ಮಹಾ ಅರಣ್ಯದಲ್ಲಿ ಅರಸುತ್ತಿದ್ದೀಯೋ ಆ ದೇವಿಯನ್ನು, ನನ್ನ ಪ್ರಾಣವನ್ನು ರಾವಣನು ಅಪಹರಿಸಿದನು ಎಂದನು. ಆಗ ಶ್ರೀರಾಮನಿಗೆ ಕಣ್ಣೀರು ಉಕ್ಕಿತು. ಅವನು ಜಟಾಯುವನ್ನು ಆಲಂಗಿಸಿಕೊಂಡು ನೆಲದ ಮೇಲೆ ಕುಸಿದನು. ಜಟಾಯು ಮೆಲ್ಲಗೆ ಸೀತಾ ವೃತ್ತಾಂತವನ್ನು ತಿಳಿಸಿ ಅವಳನ್ನು ರಕ್ಷಿಸಲು ಹೋಗಿ ರಾವಣನ ಆಘಾತಕ್ಕೆ ಒಳಗಾದೆನೆಂಬುದನ್ನು ತಿಳಿಸಿದನು. ಶ್ರೀರಾಮನ ದುಃಖವು ತೀವ್ರವಾಯಿತು. ಲಕ್ಷ್ಮಣ, ಈ ಪಕ್ಷಿ ಶ್ರೇಷ್ಠನು ನನಗೋಸ್ಕರ ಮಲಗಿರುವನಲ್ಲ ನೋಡು, ನನಗಾಗಿ ಈತನು ಪ್ರಾಣವನ್ನು ಅರ್ಪಿಸಿದ್ದಾನೆ. ಪಿತೃ ವಾತ್ಸಲ್ಯದಿಂದ ಜಟಾಯುವನ್ನು ಮುಟ್ಟಿ ಶ್ರೀ ರಾಮನು ವಂದಿಸಿದನು. ಜಟಾಯು, ವತ್ಸ ರಾಮ... ರಾಕ್ಷಸ ರಾಜನಾದ ರಾವಣನು ಅವಳನ್ನು ಅಪಹರಿಸಿಕೊಂಡು ದಕ್ಷಿಣ ದಿಕ್ಕಿಗೆ ಹೋದನು. ಆ ದುರಾತ್ಮನ ಕತ್ತಿಯ ಹೊಡೆತದಿಂದ ನನ್ನ ರೆಕ್ಕೆಗಳು ಕತ್ತರಿಸಿ ಬಿದ್ದವು. ಈಗ ನನ್ನ ಪ್ರಾಣವು ಮರಣ ಯಾತನೆಗೆ ಸಿಕ್ಕಿ ತೊಳಲುತ್ತಿದೆ. ರಾವಣನನ್ನು ನೀನು ಕೊಲ್ಲುವೆ ಮತ್ತೆ ಜಾನಕಿಯೊಡನೆ ವಿಹರಿಸು ಎಂದನು. ಅಷ್ಟರಲ್ಲಿ ಜಟಾಯುವಿನ ಬಾಯಿಯಿಂದ ಗರಣಿಯಾಗಿ ರಕ್ತವು ಸುರಿತು. ಆ ಪಕ್ಷಿರಾಜನು ಕಡೆಯ ಉಸಿರೆಳೆದು ಪ್ರಾಣವನ್ನು ಬಿಟ್ಟನು.


ಶ್ರೀರಾಮನಿಗೆ ಜಟಾಯುವಿನ ಮರಣವು ಮತ್ತೊಂದು ದುಃಖ ಪ್ರಸಂಗವನ್ನು ತಂದು ಕೊಟ್ಟಿತು. ಅವನು ಜಟಾಯುವನ್ನು ಕೊಂಡಾಡುತ್ತಾ ಲಕ್ಷ್ಮಣನ ಕಡೆಗೆ ತಿರುಗಿ ಲಕ್ಷ್ಮಣ ಈ ಪಕ್ಷಿಯು ನನಗೋಸ್ಕರ ಪ್ರಾಣವನ್ನು ಒಪ್ಪಿಸಿದ್ದಲ್ಲದೆ ಇದು ನನ್ನ ಕರುಳನ್ನು ಕೊರೆಯುತ್ತಿದೆ. ಈ ಪಕ್ಷಿರಾಜನಿಗೆ ಯೋಗ್ಯವಾದ ಅಗ್ನಿ ಸಂಸ್ಕಾರವನ್ನು ಮಾಡುವೆನು. ಇವನು ನನ್ನ ತಂದೆಗೆ ಸಮಾನ ಎಂದನು ರಾಮ. ಲಕ್ಷ್ಮಣನು ಚಿತೆಯನ್ನು ಸಿದ್ಧಪಡಿಸಲು ಶ್ರೀರಾಮನು ಜಟಾಯುವಿನ ದೇಹವನ್ನು ಅದರ ಮೇಲಿಟ್ಟು ಪಕ್ಷಿರಾಜ ಶ್ರೇಷ್ಠರಾದ ಸದ್ಗೃಹಸ್ತರಿಗೆ ಮತ್ತು ಯುದ್ಧದಲ್ಲಿ ಹಿಂದೆ ಗೆರೆದ ವೀರರಿಗೆ ಯಾವ ಸದ್ಗತಿಯು ದೊರಕುವುದು ಅದು ನಿನಗೆ ದೊರಕಲಿ ನೀನು ಪುಣ್ಯ ಲೋಕವನ್ನು ಸೇರು ಎಂದು ಹೇಳಿ ತನ್ನ ಬಂಧುವಿಗೆ ಸಂಸ್ಕಾರ ಮಾಡುವಂತೆ ದುಃಖಿಸುತ್ತಾ ವಿಧಿ ಪೂರ್ವಕವಾದ ವಾಗಿ ಚಿತೆಗೆ ಅಗ್ನಿಸ್ಪರ್ಶ ಮಾಡಿದನು. ಜಟಾಯುವಿಗೆ ಪಿಂಡಗಳನ್ನು ಸಮರ್ಪಿಸಿ ಪಿತೃ ಮೇಧಾ ಮಂತ್ರಗಳನ್ನು ಜಪಿಸಿದನು. ಆನಂತರ ಶ್ರೀರಾಮ ಲಕ್ಷ್ಮಣರಿಬ್ಬರೂ ಗೋದಾವರಿ ನದಿಗೆ ಹೋಗಿ ಸ್ನಾನ ಮಾಡಿ ಜಟಾಯುವಿಗೆ ತಿಲತರ್ಪಣವನ್ನೇ ಇಟ್ಟರು. ಆಮೇಲೆ ಸೀತೆಯನ್ನು ಅನ್ವಯಿಸುತ್ತಾ ದಕ್ಷಿಣ ದಿಕ್ಕಿಗೆ ಹೋಗುವಾಗ ದುರ್ಗಮವಾದ ಬೋಂಡಾರಣ್ಯವೂ ಎದುರಾಯಿತು.


ಹೀಗೆ ಶ್ರೀ ರಾಮನು ಸಕಲ ಜೀವರಿಗೂ ತನ್ನ ವಾತ್ಸಲ್ಯವನ್ನು ತೋರಿಸಿ ಅವನ ಉದಾರ ಮನಸ್ಸನ್ನು ಜಗತ್ತಿಗೆ ತೋರಿಸಿದನು. ಶ್ರೀರಾಮನ ಕಾರುಣ್ಯ ಸಾಗರ ಕರುಣೆಯು ಪ್ರವಾಹವಾಗಿ ಉಕ್ಕಿ ಹರಿಯುತ್ತದೆ. ಅವನಿಂದ ಅದು ಸರ್ವತೋಮುಖವಾಗಿ ಹರಿಯುತ್ತದೆ. ಸರ್ವರೂ ಅದಕ್ಕೆ ಬಾಗಿಗಳು. ಬಂದು ಮಿತ್ರರಿಗೆ ಮಾತ್ರವಲ್ಲ, ಶತ್ರುಗಳಿಗೂ ಅದು ಲಭ್ಯ. ಬೆಲ್ಲದ ಮುದ್ದೆಯನ್ನು ಯಾರು ಯಾವ ದಿಕ್ಕಿನಿಂದ ತಿಂದರು ಸಿಹಿಯಾಗಿಯೂ ಇರುತ್ತದೆ. ಇದು ನಮ್ಮ ಶ್ರೀರಾಮಚಂದ್ರನ ಗುಣ.


ಶ್ರೀರಾಮಚಂದ್ರನ ಭಕ್ತ ವಾತ್ಸಲ್ಯವನ್ನು ತೋರುವ ಮತ್ತೊಂದು ಕಥೆಯೆಂದರೆ ಅಹಲ್ಯಾದೇವಿಯ ಕಥೆ. ಇವಳು ಗೌತಮ ಋಷಿಯ ಪತ್ನಿ. ಪರಮ ಸುಂದರಿ. ಇವಳ ಸೌಂದರ್ಯಕ್ಕೆ ಮರುಳಾಗಿ ದೇವೇಂದ್ರನು ಬಂದು ಅಹಲ್ಯ ಶೀಲವನ್ನು ಕೆಡಿಸಿದನೆಂದು ಬಾಲ ಕಾಂಡದಲ್ಲಿ ಹೇಳಿದೆ. ಅದನ್ನ ಅರಿತು ಗೌತಮ ಋಷಿಯು ಇವಳಿಗೆ ಕ್ರೂರವಾದ ಶಾಪವನ್ನು ಕೊಡುತ್ತಾರೆ. ಅಹಲ್ಯಗೆ ಕಲ್ಲಾಗಿ ಬಹಳ ಕಾಲ ಗಾಳಿಯನ್ನೇ ಸೇವಿಸುತ್ತಾ ಯಾರಿ ಕಣ್ಣಿಗೂ ಕಾಣದೆ ಇರು ಎಂದು ಶಾಪವನ್ನು ಕೊಡುತ್ತಾರೆ. ಈ ಶಾಪಕ್ಕೆ ಪರಿಹಾರವೇನು ಎಂದು ಕೇಳಿದಾಗ ಗೌತಮರು ಹೇಳುತ್ತಾರೆ ಮುಂದೆ ದಶರಥ ಪುತ್ರನಾದ ರಾಮನು ಇಲ್ಲಿಗೆ ಬಂದು ಕಾಲಿಟ್ಟಾಗ ಈ ನಿನ್ನ ಪಾಪವು ಪರಿಹಾರವಾಗುವುದು ಪುನಃ ನೀನು ಪೂರ್ವ ರೂಪವನ್ನು ಹೊಂದುವೆ. ಆಗ ನನ್ನೊಡನೆ ಬಾಳಬಹುದು ಎಂದು ಹೇಳಿ ಗೌತಮರು ಹಿಮಾಲಯಕ್ಕೆ ತಪಸ್ಸು ಮಾಡಲು ಹೊರಟು ಹೋಗುತ್ತಾರೆ. ರಾಮ ಲಕ್ಷ್ಮಣರು ಅವಳಿದ್ದ ಆಶ್ರಮಕ್ಕೆ ಬರುತ್ತಾರೆ  ಶಾಪ ಗ್ರಸ್ಥಳಾದ ಅಹಲ್ಯಯನ್ನು ನೀನು ಉದ್ದರಿಸಬೇಕಾಗಿದೆ ಎಂದು ಮುನಿಗಳು ಕೇಳುತ್ತಾರೆ ಶ್ರೀ ರಾಮನ ಪಾದ ಸ್ಪರ್ಶದಿಂದ ಅಹಲ್ಯ ಮಾಡಿದ ಪಾಪ ತೀರುತ್ತದೆ, ಹಿಂದಿನ ರೂಪಕ್ಕಿಂತ ಇಮ್ಮಡಿಯಾಗಿ ಶೋಭಿಸುತ್ತಾಳೆ ರಾಮ ಲಕ್ಷ್ಮಣರು ಆಕೆಯ ಪಾದಗಳನ್ನು ಮುಟ್ಟಿ ನಮಸ್ಕರಿಸುತ್ತಾರೆ ಅಹಲ್ಯಯು ವಿಶ್ವಾಮಿತ್ರ ರಾಮ ಲಕ್ಷ್ಮಣರಿಗೆ  ಉಪಚರಿಸಿದಳು. ಅವಳ ಘೋರ ಪಾಪವು ಕಳೆಯಿತು ದೇವ ಸ್ತ್ರೀಯಂತೆ ಶೋಭಿಸಿದಳು. ಆ ವೇಳೆಗೆ ಗೌತಮರು ಬಂದರು ಹಿಂದಿನಂತೆ ಅವರು ಆಕೆಯನ್ನು ಸ್ವೀಕರಿಸಿ ಕರ್ಮದಲ್ಲಿ ನಿರತರಾದರು. ಬಾಲೆಯಾದ ಅಹಲ್ಯಯನ್ನು ಉದ್ಧಾರ ಮಾಡಿದ ಶ್ರೀರಾಮಚಂದ್ರನ ಮಹಿಮೆ ಅಪಾರ.


ರಾಮಾಯಣದಲ್ಲಿ ಲಕ್ಷ್ಮಣನ ಪಾತ್ರ ಅತ್ಯಂತ ಪ್ರಮುಖವಾದುದು. ಲಕ್ಷ್ಮಣನೆಂಬ ಶಬ್ದವು ರಾಮನಿಂದ ಬೇರ್ಪಡಿಸಲಾಗದ ಬಾಂಧವ್ಯ. ಲಕ್ಷ್ಮಣನ ನಿಷ್ಠೆ, ಪ್ರಾಮಾಣಿಕತೆ ಮತ್ತು ಮಧುರ ಭಾಂದವ್ಯ ರಾಮಾಯಣದಲ್ಲಿ ಬೇರೆ  ಕಾಣಲು ಸಾಧ್ಯವಿಲ್ಲ. ರಾಮನು 14 ವರ್ಷಗಳ ಕಾಲ ವನವಾಸಕ್ಕೆ ತೆರಳಲು ಸಿದ್ದನಾದಾಗ ಲಕ್ಷ್ಮಣನು ಸಹ ತನ್ನ ಅಣ್ಣನೊಂದಿಗೆ ವನವಾಸಕ್ಕೆ ತೆರಳಲು ಮುಂದಾಗುತ್ತಾನೆ. ಕಾಡಿನಲ್ಲಿ 14 ವರ್ಷಗಳ ವನವಾಸದಲ್ಲಿ ತನ್ನ ಅಣ್ಣ ಮತ್ತು ಸೀತಾದೇವಿಯರಿಗೆ ಏನು ತೊಂದರೆ ಆಗದಂತೆ ಕಾಪಾಡುವುದು ಅವನ ಜವಾಬ್ದಾರಿ ಆಗಿತ್ತು. ಆದ್ದರಿಂದ ಲಕ್ಷ್ಮಣನು ತನಗೆ 14 ವರ್ಷಗಳವರೆಗೆ ನಿದ್ರೆ ಬಾರದಂತೆ ತಡೆಯಲು ನಿದ್ರಾದೇವಿಯನ್ನು ಪ್ರಾರ್ಥಿಸುತ್ತಾನೆ.


ಲಕ್ಷ್ಮಣನ ಗುರು ಆತನ ಸೋದರನಾದ ರಾಮ .ರಾಮ ಕೇವಲ ಲಕ್ಷ್ಮಣನ ಸಹೋದರ ಮಾತ್ರನಾಗಿರಲಿಲ್ಲ .ಆತನಿಗೆ ತಂದೆಯ ಸ್ಥಾನವನ್ನು ಗುರುವಿನ ಸ್ಥಾನವನ್ನು ತುಂಬಿದನು. ವಿಶ್ವಾಮಿತ್ರ ಮುನಿಗಳು ರಾಮನಿಗೆ ಅಸ್ತ್ರಗಳ ಬಗ್ಗೆ ಶಾಸ್ತ್ರಗಳ ಬಗ್ಗೆ ಉಪದೇಶ ನೀಡಿದಾಗ ಅದನ್ನು ರಾಮನು ಲಕ್ಷ್ಮಣನಿಗೂ ಕಲಿಸಿಕೊಡುತ್ತಿದ್ದನು. ರಾಮಚಂದ್ರನು ಕೂಡ ಲಕ್ಷ್ಮಣನನ್ನು ಅಷ್ಟೇ ಪ್ರೀತಿಸುತ್ತಿದ್ದನು. ಲಕ್ಷ್ಮಣನಿಗೆ ರಾಮನ ಮೇಲೆ ಎಲ್ಲಿಲ್ಲದ ಪ್ರೀತಿ ವಾತ್ಸಲ್ಯವಿತ್ತು .ಲಕ್ಷ್ಮಣನು ತನಗಾಗಿ ಬದುಕುವುದಕ್ಕಿಂತ ರಾಮನ ಸೇವೆಗಾಗಿ ಬದುಕುತ್ತಿದ್ದನು. ರಾಮನು ಕೂಡ ಲಕ್ಷ್ಮಣನೆಂದರೆ ಅಗಾಧ ಪ್ರೇಮ ತೋರುತ್ತಿದ್ದನು. ಒಮ್ಮೆ ಯುದ್ಧದಲ್ಲಿ ಲಕ್ಷ್ಮಣ ಗಾಯಗೊಂಡಾಗ ರಾಮನು ಅಳುತ್ತಾ ನಾನು ಸಿರಿ ಸಂಪತ್ತಲ್ಲದೆ, ಅಯೋಧ್ಯೆ ಇಲ್ಲದೆ, ಬೇಕಾದರೆ ಬದುಕುತ್ತೇನೆ ಆದರೆ ನೀನಿಲ್ಲದೆ ನಾನು ಬದುಕಲು ಸಾಧ್ಯವಿಲ್ಲವೆಂದು ರಾಮನು ಲಕ್ಷ್ಮಣನಿಗೆ ಹೇಳುತ್ತಾನೆ. ಹನುಮಂತನು ವಾಯು ವೇಗದಿಂದ ಹಾರಿ ಗಂದ ಮಾದನವನ್ನು ತಂದನು ಅದರ ಗಾಳಿ ಸೋಕಿದುದೆ ತಡ ಲಕ್ಷ್ಮಣನು ಉಲ್ಲಾಸದಿಂದ ಎದ್ದು ಕುಳಿತನು. ಶ್ರೀರಾಮಚಂದ್ರನು ಸಂತಸದಿಂದ ಹನುಮಂತನನ್ನು ಅಪ್ಪಿ ಕೊಂಡನು. ಬ್ರಹ್ಮ ರುದ್ರಾದಿ ಸಕಲ ದೇವತೆಗಳು ಸಕಲ ಮುನಿಗಳು ಭಗವಂತನ ಲೀಲಾವತಾರದ ಉದ್ದೇಶವಾದ ಈ ಲೀಲಾ ನಾಟಕವನ್ನು ನೋಡಿ ಶ್ರೀರಾಮಚಂದ್ರನನ್ನು ನಮಸ್ಕರಿಸಿದರು.


ಜೈ ಶ್ರೀ ರಾಮ್



- ಡಾ. ಚಂದ್ರಿಕಾ ವಿಜಯೇಂದ್ರ, ಬೆಂಗಳೂರು 

95916 90717 


ಲೇಖಕರ ಸಂಕ್ಷಿಪ್ತ ಪರಿಚಯ:

ಮೈಸೂರಿನ ಸೇತು ಮಾಧವ ರಾವ್ ಹಾಗೂ ಹೇಮಾವತಿ  ಭಾಯಿ ದಂಪತಿಗಳ ಪುತ್ರಿಯಾಗಿ 1965 ರಲ್ಲಿ ಜನಿಸಿದರು ಶ್ರೀಮತಿ ಡಾ. ಚಂದ್ರಿಕಾ ವಿಜಯೇಂದ್ರ ಅವರು. ತಮ್ಮ ಪ್ರಾಥಮಿಕ ಶಿಕ್ಷಣವನ್ನು ಸರ್ಕಾರಿ ಶಾಲೆಯಲ್ಲಿ ಪೂರೈಸಿ, ಬಿಎಮ್ಎಸ್ ಮಹಿಳಾ ಕಾಲೇಜಿನಲ್ಲಿ ಬಿಎ ಪದವಿ ಮುಗಿಸಿ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಎಂಎ ಮಾಡಿ ನಂತರ ವಿಜಯ ಶಿಕ್ಷಕರ ಕಾಲೇಜಿನಲ್ಲಿ ಬಿ ಎಡ್ ಪದವಿಯನ್ನು ಪಡೆದಿದ್ದಾರೆ ಬೆಂಗಳೂರಿನ ಅನೇಕ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಕಿಯಾಗಿ  ಆಗಿ ಸೇವೆ ಸಲ್ಲಿಸಿದ್ದಾರೆ .30 ವರ್ಷಗಳ ಕಾಲ ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಚಂದ್ರಿಕಾ ವಿಜಯೇಂದ್ರ ಅವರು ತಮ್ಮ ಸಣ್ಣ ವಯಸ್ಸಿನಲ್ಲಿ ಆಧ್ಯಾತ್ಮಿಕ ಚಿಂತನೆಗಳಲ್ಲಿ ಆಸಕ್ತಿ ಹೊಂದಿದ್ದು ಆ ಕ್ಷೇತ್ರದಲ್ಲೂ ಸಾಕಷ್ಟು ಕೃಷಿ ನಡೆಸಿದ್ದಾರೆ. ಶ್ರೀಮತಿ ಚಂದ್ರಿಕಾ ವಿಜಯೇಂದ್ರ ಅವರು ಯೋಗ ಸಂಸ್ಕೃತಂ ಯುನಿವರ್ಸಿಟಿ ಫ್ಲೋರಿಡಾ ಯು ಎಸ್ ಎ ಅಂಡ್ ಅಮೆರಿಕನ್ ರಿಲಿಜನ್ ಯುನಿವರ್ಸಿಟಿ ಇಂದ ಪಿ ಹೆಚ್ ಡಿ ಪದವಿಯನ್ನು ಪಡೆದಿದ್ದಾರೆ.

ಬಡವರ ಭಕ್ತಿ ಬಂಡಿ ತುಂಬ ಎಂಬ ವಿಷಯದ ಬಗ್ಗೆ ಪ್ರಬಂಧ ಬರೆದಿದ್ದಾರೆ. ಭಾರತೀಯ ಹರಿದಾಸ ಸಾಹಿತ್ಯ ವಿದ್ಯಾಲಯದಲ್ಲಿ ಶಿಕ್ಷಣವನ್ನು ಪಡೆದು ಹರಿದಾಸ ಸಾಹಿತ್ಯದಲ್ಲಿ ಸುಮಾರು 40ಕ್ಕಿಂತಲೂ ಹೆಚ್ಚು ವಿವಿಧ ವಿಷಯಗಳಲ್ಲಿ ಸ್ನಾತಕ ಅಧ್ಯಯನವನ್ನು ಮಾಡಿ ಅಧ್ಯಾಪಕರ ಮಾರ್ಗದಲ್ಲಿ ದಾಸ ಸಾಹಿತ್ಯ ಹರಿದಾಸ ಸಾಹಿತ್ಯದಲ್ಲಿ ಸಂಶೋಧನಾತ್ಮಕ ಪ್ರಬಂಧ ಜೀವನದ ಸಾರ್ಥಕತೆಯನ್ನು ಮಂಡಿಸಿ ಹರಿದಾಸ ಸಾಹಿತ್ಯದ ಸೇವೆಯನ್ನು ಮಾಡಿ ಹರಿದಾಸ ಸಾಹಿತ್ಯ ಸೇವಾ ರತ್ನ ಎಂಬ ವಿದ್ಯಾಲಯದ ಉನ್ನತ ಪ್ರಶಸ್ತಿಯನ್ನು ಪಡೆದಿದ್ದಾರೆ. ಇವರು ಪೋಸ್ಟ್ ಗ್ರಾಜುಯೇಟ್ ಡಿಪ್ಲೋಮೋ ಇನ್ ಭಗವದ್ಗೀತಾ ಎಂಬ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ತೆಗೆದುಕೊಂಡಿದ್ದಾರೆ. ಸಮಗ್ರ ಹರಿಕತಾಮೃತಸಾರ ಅಧ್ಯಯನ ಮಾಡಿ ಶ್ರೀ ಹರಿಕಥಾಮೃತಸಾರ ಅನುಗ್ರಹ ಪ್ರಶಸ್ತಿಯನ್ನು ಪಡೆದಿದ್ದಾರೆ. ಹರಿ ಭಜನಾ ಭೂಷಣ ತತ್ಸಮ ಪರೀಕ್ಷೆಯಲ್ಲಿ ಲೋಕ ಪಾವನಿ ಅಲಕನಂದ ಅನುಗ್ರಹ ಪ್ರಶಸ್ತಿಯನ್ನು ಪಡೆದಿದ್ದಾರೆ. ಭಾರತೀಯ ಹರಿದಾಸ ಸಾಹಿತ್ಯ ವಿದ್ಯಾಲಯ ಬೆಂಗಳೂರು ನಡೆಸಿದ ಭಾಗವತ ಮಹಾಪುರಾಣ ಪರೀಕ್ಷೆಯಲ್ಲಿ ಶ್ರೀ ಭಾಗವತ ಮಹಾಪುರಾಣ  ಪ್ರಶಸ್ತಿ ಪಡೆದಿದ್ದಾರೆ ಈಗ ಇವರು P.hd ಸ್ಟೂಡೆಂಟ್ಸ್ ಗೆ ಗೈಡ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

0 Comments

Post a Comment

Post a Comment (0)

Previous Post Next Post