|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಶ್ರೀರಾಮ ಕಥಾ ಲೇಖನ ಅಭಿಯಾನ-133: ರಾಮಾಯಣದಲ್ಲಿ ನ್ಯಾಯದ ಪರಿಕಲ್ಪನೆ

ಶ್ರೀರಾಮ ಕಥಾ ಲೇಖನ ಅಭಿಯಾನ-133: ರಾಮಾಯಣದಲ್ಲಿ ನ್ಯಾಯದ ಪರಿಕಲ್ಪನೆ




-ವರದೇಂದ್ರ ಕೆ ಮಸ್ಕಿ

ರಾಮಾಯಣ, ಭಾರತೀಯರ ಪವಿತ್ರ ಗ್ರಂಥ. ರಾಮಾಯಣದಲ್ಲಿ ನ್ಯಾಯದ ಪರಿಕಲ್ಪನೆ ಅನ್ನುವುದಕ್ಕಿಂತ ನ್ಯಾಯದ ಪರಿಕಲ್ಪನೆಗೆ ರಾಮಾಯಣವೇ ಮೂಲ ಗ್ರಂಥ ಎನ್ನಬಹುದು. ನ್ಯಾಯದ ಪರಿಕಲ್ಪನೆಗೆ ರಾಮಾಯಣ ಆಕರವಿದ್ದಂತೆ.  ನ್ಯಾಯಯಾವಾಗಲೂ ಒಂದೇ ಆಗಿರುತ್ತದೆ ಅದನ್ನು ಅರ್ಥೈಸಿಕೊಳ್ಳುವ ಜನರ ಸ್ವಭಾವ ಹಾಗೂ ನಡವಳಿಕೆ ನ್ಯಾಯ ಅನ್ಯಾಯಗಳ ಚರ್ಚೆ ಆರಂಭವಾಗುತ್ತದೆ.  ರಾಮಾಯಣದಲ್ಲಿ ಬಹಳಷ್ಟು ಘಟನೆಗಳು ನ್ಯಾಯಯುತ ನಡೆಗೆ ಧರ್ಮ ಶಾಸ್ತ್ರದ ಉಲ್ಲೇಖ ಹಾಗೂ ಉದಾಹರಣೆಯಿಂದ ಹೇಳುವುದರಿಂದ ಮನುಷ್ಯರಿಗೆ ರಾಮಾಯಣವು ನ್ಯಾಯ ಅನ್ಯಾಯಗಳನ್ನು ಅರಿತು ಅನುಸರಿಸಿ ನಡೆಯಲು ಮಾರ್ಗದರ್ಶಕವಾಗುತ್ತದೆ.ಇಡೀ ರಾಮಾಯಣದಲ್ಲೇ ನ್ಯಾಯವು ಹೆಜ್ಜೆ ಹೆಜ್ಜೆಗೂ ಉದಾಹರಣೆಗಳೊಂದಿಗೆ ಮನದಟ್ಟಾಗುತ್ತದೆ.


ತಂದೆಯ ಮಾತನ್ನು ಅನುಪಾಲಿಸಿದ ಪರಶುರಾಮ ತಾಯಿಯ ರುಂಡವನ್ನು ಛೇದಿಸಿದರೆ, ಅದೇ ತಂದೆಗೆ ತನ್ನಿಂದ ಅಪಕೀರ್ತಿ ಬರಬಾರದೆಂದು ಶ್ರೀ ರಾಮ 14 ವರ್ಷ ವನವಾಸಕ್ಕೆ ಹೊರಟು ನಿಂತು, ಕೊಟ್ಟ ಮಾತಿನಂತೆ ನಡೆಯುವುದೇ ಪರಮೋಚ್ಛ ನ್ಯಾಯ ಎಂದು ಸಾರುತ್ತಾನೆ.   ಪತಿ ದೇವರ ಅಗಲಿ ಅರಮನೆ ವೈಭೋಗದಲ್ಲಿ ನಾನ್ಹೇಗೆ ಇರಲು ಸಾಧ್ಯ ಎಂಬ ಆಲೋಚನೆಗೆ ಸೀತೆ ಪತಿಯನ್ನನುಸರಿಸಿ ದಾಂಪತ್ಯಕ್ಕೆ ನ್ಯಾಯ ಸೂತ್ರ ಪ್ರತಿಪಾದಿಸಿದ್ದಾಳೆ. ಇನ್ನು ಲಕ್ಷ್ಮಣ ಬಾಲ್ಯದಿಂದಲೇ ಅಣ್ಣನೊಂದಿಗೆ ಅನುಗಾಲವೂ ಇದ್ದವ, ಈಗ ಕಷ್ಟವೆಂದಾಕ್ಷಣ ಬಿಡುವನೇ, ಅವನೂ ಅಣ್ಣ, ಅತ್ತಿಗೆಯ ಸೇವೆಗೆ ಅಣಿಯಾಗಿ ಅವರನ್ನು ಹಿಂಬಾಲಿಸುತ್ತಾನೆ. ಲಕ್ಷ್ಮಣನ ಹೆಂಡತಿ ಊರ್ಮಿಳೆಯು ಕೂಡ ಅದ್ಭುತವಾದ ಸುಶೀಲೆ. ಅನಿವಾರ್ಯವಿಲ್ಲದಿದ್ದರೂ ಗಂಡ ಕಾಡಿಗೆ ಹೊರಡಲಣಿಯಾದಾಗ ಒಂದು ಋಣಾತ್ಮಕ ಮಾತೂ ಆಡದೆ ಸತಿ ಧರ್ಮಕ್ಕೆ ನ್ಯಾಯೋಚಿತವಾಗಿ ನಡೆದುಕೊಳ್ಳುತ್ತಾಳೆ. 

 

ಕಾಡಿನ ಸಂಚಾರದ ಸಮಯದಲ್ಲಿ, ಅರಮನೆಯಲ್ಲಿರಬೇಕಾದವಳು ಕಾಡಿನ ಕಲ್ಲು ಮುಳ್ಳುಗಳ ಮಧ್ಯೆ ಇರಬೇಕಾದ ಪ್ರಸಂಗ ನಿನಗೆ ಬಂತು ಎಂದು ಸೀತೆಯನ್ನುಲ್ಲೇಖಿಸಿ ರಾಮನು ಆಡಿದ ಮಾತಿಗೆ ಸೀತೆ ಪ್ರತ್ಯುತ್ತರವಾಗಿ, "ರಾಮಚಂದ್ರ, ರಾಜ್ಯ ಮತ್ತೆಂದಾದರೂ ಸಿಗಬಹುದು, ನಮ್ಮ ಕೈಯಲ್ಲಿಲ್ಲದ ವಿಷಯದ ಬಗೆಗೆ ಚಿಂತಿಸುವುದು ಬೇಡ, ನೀವಿರುವ ಸ್ಥಳವೇ ನನಗೆ ಅರಮನೆ, ಮಾನವನಿಗೆ ಸುಖ-ದುಃಖಗಳು ಸ್ಥಿರವಲ್ಲ" ಎಂದು ಸಮಯೋಚಿತವಾದ ಮಾತುಗಳನ್ನಾಡಿ ಪತಿಯನ್ನು ಸಮಾಧಾನಪಡಿಸುತ್ತಾಳೆ. ಸತಿ ಧರ್ಮದ ಪರಿಕಲ್ಪನೆಯಲ್ಲಿ ಸತಿಯಾದವಳು ಪತಿಯನ್ನನುಸರಿಸಿ ಧನಾತ್ಮಕ ಮಾತುಗಳಿಂದ ಪತಿಯ ಮನವನ್ನು ಅನ್ಯ ನೋವಿನ ಚಿಂತನೆಗಳಿಂದ ದೂರ ಇಡುಲು ಪ್ರಯತ್ನಿಸುವುದು ವಿಶೇಷವಾಗಿ ನ್ಯಾಯಯುತವಾದ ನಡೆಯಾಗಿದೆ. 


ರಾಮಾಯಣದಲ್ಲಿ ನಡೆದ ಅತ್ಯಂತ ದೊಡ್ಡ ಅನ್ಯಾಯ ಎಂದರೆ, ಕೈಕೇಯಿಯ ವರದ ಅನುಪಾಲನೆ. ತಂದೆಯ ಸಾವಿನ ಸಂದರ್ಭದಲ್ಲಿ ತನ್ನ ತಾಯಿ ಕೈಕೇಯಿಯ ನಡೆಯನ್ನು ಕಂಡು, ಭರತನೇ ವಸಿಷ್ಠರಿಗೆ ದುಃಖತಪ್ತನಾಗಿ, ಮರುಗುತ್ತ, " ಗುರುಗಳೇ ಚಿಕ್ಕವರಿಗೆ ಬುದ್ಧಿ ಹೇಳಬೇಕಾದ ಹಿರಿಯರೇ ಅನ್ಯಾಯವನ್ನು ಮಾಡಿದರೆ ಪ್ರಜೆಗಳನ್ನು ರಕ್ಷಿಸುವವರ್ಯಾರು?" ಇದು ಅನ್ಯಾಯ ಎಂದು ಹೇಳುತ್ತಾನೆ. ಇದೇ ಸಂದರ್ಭದಲ್ಲಿ ಇದಕ್ಕೆಲ್ಲ ಕಾರಣವಾದ 'ಮಂಥರೆ' ಯನ್ನು ಕೊಂದು ಬಿಡುತ್ತೇನೆ ಎಂದು ಹೊರಟ ಶತೃಘ್ನನನ್ನು ತಡೆದು, "ಇವಳನ್ನು ಕೊಂದರೆ ಅಣ್ಣ ಶ್ರೀರಾಮ ನಮ್ಮೊಂದಿಗೆ ಮಾತಾಡುವುದು ಇರಲಿ, ಹಿಂತಿರುಗಿ ಬರುವುದೂ ಇಲ್ಲ" ಎಂದು ನುಡಿಯುತ್ತಾನೆ. ಅಂತಹ ವಿಷಮ ಸ್ಥಿತಿಯಿದ್ದರೂ ನ್ಯಾಯದ ಚಿಂತನೆಯನ್ನು ಬಿಡದ ಈ ಪ್ರಸಂಗ ನಮಗೆಲ್ಲ ಮಾದರಿಯಾಗಿದೆ.


 ಆಸ್ತಿಗಾಗಿ ಅಣ್ಣ ತಮ್ಮ ಶತೃಗಳಂತೆ ಹೊಡೆದಾಡುವ ಈ ಕಲಿಯುಗಕ್ಕೆ ಪರಿಪೂರ್ಣ ಸನ್ನಡತೆಯ, ನ್ಯಾಯ ನಿಷ್ಠೆಯ ವ್ಯಕ್ತಿತ್ವ ಉಳ್ಳ ಭರತನು ನ್ಯಾಯಮೂರ್ತಿಯಾಗಿ ಗೋಚರಿಸುತ್ತಾನೆ. ಭರತ, ತನಗೊದಗಿ ಬಂದ ರಾಜ್ಯವನ್ನು ಮರಳಿ ಅಣ್ಣ 'ಶ್ರೀರಾಮ'ನಿಗೆ ನೀಡಲು ಮುಂದಾಗಿ, ವನವಾಸಕ್ಕೆ ತೆರಳಿದ ಶ್ರೀ‌ರಾಮನನ್ನು ಮರಳಿ ಕರೆತರಲು ಕಾಡಿಗೆ ಹೊರಡುತ್ತಾನೆ. ವಂಶಕ್ಕೆ‌ಹಿರಿಯನು ಅಣ್ಣ, ಅವನಿಗೇ ಪಟ್ಟಾಭಿಷೇಕವಾಗುವುದೇ ನ್ಯಾಯ ಎನ್ನುವ ಈ ರಾಮಾಯಣದ ನೀತಿಯನ್ನು ನಾವು ಇಂದು ಪರಿಪಾಲಿಸುವ ಅವಶ್ಯಕತೆ ಇದೆ.


 ಅಣ್ಣ ಶ್ರೀರಾಮನನ್ನು ಅಯೋಧ್ಯೆಗೆ ಕರೆತರಲು ಭರತ ತೆರಳಿದ ಸಂದರ್ಭದಲ್ಲಿ ಭರತನನ್ನು ಕಂಡ ಶ್ರೀರಾಮ ರಾಜ್ಯಭಾರ ಮಾಡುವ ಸಂದರ್ಭದಲ್ಲಿ ಪಾಲಿಸಬೇಕಾದ ನ್ಯಾಯ, ನೀತಿ, ನಿಯಮಗಳನ್ನು ಅಮೋಘವಾಗಿ ತಿಳಿಸುತ್ತಾನೆ. ನ್ಯಾಯಯುತವಾದ ಆಡಳಿತದಲ್ಲಿ ಪ್ರಜೆಗಳ ಕ್ಷೇಮ, ಮಾತಾ ಪಿತೃಗಳ ಸೇವೆ, ಧರ್ಮ ರಕ್ಷಣೆ, ಹಿರಿಯರು ಋಷಿಗಳಿಗೆ ಗೌರವ ಸಮರ್ಪಣೆ, ಏಕ ಮುಖ ನಿರ್ಧಾರವನ್ನು ತೆಗೆದುಕೊಳ್ಳದಿರುವುದು, ಹೊಗಳು ಭಟ್ಟರನ್ನು ನಂಬದಿರುವುದು, ಚಾಡಿ ಮಾತುಗಳನ್ನು ಕಡೆಗಣಿಸುವುದು, ಕೃಷಿ, ಪಶು ಪಾಲನೆ ನಿಲ್ಲಿಸದಿರುವುದು ಹೀಗೆ ಅನೇಕಾನೇಕ ನ್ಯಾಯಸಮ್ಮತ ಸಲಹೆಗಳನ್ನು ನೀಡುತ್ತಾನೆ. ಈ ಎಲ್ಲ ಸಲಹೆಗಳು ಇಂದಿನ ಆಡಳಿತಕ್ಕೂ ಮಾದರಿಯಾಗಿವೆ. ಪ್ರಸ್ತುತ ಆಡಳಿತ ಅಧಿಕಾರ ಇರುವವರು ಯಾರು ರಾಮಾಯಣವನ್ನು ಅಧ್ಯಯನ ಮಾಡುತ್ತಾರೋ ಹಾಗೂ ನಿಷ್ಠೆಯಿಂದ ರಾಮಾಯಣದ ಬೋಧನೆಯನ್ನು ಅಳವಡಿಸಿಕೊಂಡಿರುತ್ತಾರೋ ಅವರುಅವರು ಖಂಡಿತವಾಗಿ ನ್ಯಾಯಯುತ ಅಧಿಕಾರ ನಡೆಸುತ್ತಾರೆ.


ಮುಂದೆ ದಂಡಕಾರಣ್ಯ ಪ್ರವೇಶದ ಸಂದರ್ಭದಲ್ಲಿ, ರಾಮ, ಲಕ್ಷ್ಮಣರಿಬ್ಬರೂ * 'ವಿರಾಧ'(ಕುಬೇರನ ಅಸ್ಥಾನದಲ್ಲಿದ್ದ ತುಂಬುರನೆಂಬ ಗಂಧರ್ವ, ಮಾಡಿದ ಒಂದು ತಪ್ಪಿನಿಂದ ರಾಕ್ಷಸನಾಗಿದ್ದ), ಎಂಬ ರಾಕ್ಷಸನನ್ನು ಕೊಂದು ಋಷಿಗಳನ್ನು ರಕ್ಷಣೆ ಮಾಡುತ್ತಾರೆ. ಆಗ ಸೀತಾದೇವಿ, ನೀವು ರಾಕ್ಷಸರನ್ನು ಕೊಂದು ಋಷಿಗಳನ್ನು ರಕ್ಷಣೆ ಮಾಡುತ್ತಿದ್ದೀರಿ, ಆದರೆ ರಾಕ್ಷಸರು ನಮಗೇನು ತೊಂದರೆ ಮಾಡಿದ್ದಾರೆ? ಅವರನ್ನು ಕೊಲ್ಲುವುದರಿಂದ ನಮಗೆ ಪಾಪ ಬರುವುದಿಲ್ಲವೇ? ಇದು ಅನ್ಯಾಯವಲ್ಲವೇ? ಎಂದು ಪತಿ ಶ್ರೀರಾಮನನ್ನು ಪ್ರಶ್ನಿಸುತ್ತಾಳೆ. ಆಗ ಪುರುಷೋತ್ತಮನಾದ ಶ್ರೀರಾಮನು, "ಲೋಕಕಲ್ಯಾಣಕ್ಕಾಗಿ ಸಜ್ಜನರಿಗೆ ತೊಂದರೆ ಕೊಡುವ, ಧರ್ಮನಿಷ್ಠರನ್ನು ಪೀಡಿಸುವ ಇಂತಹ ದುಷ್ಟ, ದುರ್ಗಣ ರಾಕ್ಷಸರನ್ನು ಸಂಹರಿಸುವುದು ನ್ಯಾಯಸಮ್ಮತವಾದುದು" ಎಂದು ನ್ಯಾಯ ಸ್ವರೂಪವನ್ನು ವಿವರಿಸುತ್ತಾನೆ.


ಮುಂದೆ ಸೀತಾಪಹರಣದ ತರುವಾಯ, ಸುಗ್ರೀವನೊಂದಿಗಿನ ಸ್ನೇಹದ ಸಮಯದಲ್ಲಿ, ಮರೆಯಲ್ಲಿ ನಿಂತು ವಾಲಿಯನ್ನು ಸಂಹರಿಸಿದಾಗ, "ನಾನು, ಸುಗ್ರೀವ ಯುದ್ಧದಲ್ಲಿರುವಾಗ ನೀನು ಮರೆಯಲ್ಲಿ ನಿಂತು ಬಾಣ ಹೊಡೆದುದು ಧರ್ಮವೇ? ಇದು ನ್ಯಾಯವೇ?" ಎಂಬ ವಾಲಿಯ ಪ್ರಶ್ನೆಗೆ, "ಯಾರು ಅಧರ್ಮಿಗಳಾಗುವರೋ ಅವರನ್ನು ಹೇಗೆ ಕೊಂದರೂ ಅದು ಧರ್ಮವೇ ಆಗುವುದು, ಯದ್ಯಪಿ ಸಮಗಿಂತ ಸಣ್ಣವರು ಮಾಡುವ ತಪ್ಪನ್ನು ಕ್ಷಮಿಸಿ ಅವರಿಗೆ ಒಂದು ಅವಕಾಶ ನೀಡುವುದು ಧರ್ಮ ಆದರೆ ನೀನು ನಿನ್ನ ತಮ್ಮ ಸುಗ್ರೀವನ ಮೇಲೆ ಅನುಮಾನ ಪಟ್ಟು, ಅವಮಾನ ಮಾಡಿ ಅರಣ್ಯಕ್ಕೆ ಕಳಿಸಿದಾಗ ಧರ್ಮದ, ನ್ಯಾಯದ ಅರಿವು ನಿನಗಿರಲಿಲ್ಲವೇ?" ಎಂದು ರಾಮ ಉತ್ತರಿಸುತ್ತ, ಅಧರ್ಮಿಗಳನ್ನು ಸಂಹರಿಸುವುದು ಮುಖ್ಯ, ಅದು ಹೇಗಾದರೂ ಸರಿ ಅದು ನ್ಯಾಯ ಸಮ್ಮತವಾದುದೇ ಎಂಬುದನ್ನು ಸಾಮಾನ್ಯ ಜನರಿಗೆ ತಿಳಿಸುತ್ತಾನೆ.

 

ಮುಂದೆ ವಿಭೀಷಣ ಶರಣಾಗಿ ಬಂದಾಗ ಅವನನ್ನು ಸತ್ಕರಿಸಿ ಮುಂದೆ ಲಂಕೆಯ ಸಿಂಹಾಸನದಲ್ಲಿ ಕೂಡಿಸ ಪಟ್ಟಾಭಿಷೇಕ ಮಾಡಿದ್ದು ಕೂಡ ನ್ಯಾಯಯುತ ನಡೆಯೇ ತನ್ನ ರಾಜ್ಯದಲ್ಲಿ ನ್ಯಾಯದ ಪರ ಮಾತನಾಡಿ  ಅನ್ಯಾಯವಾಗಿ ಶಿಕ್ಷೆಗೆ ಗುರಿಯಾಗುವದರ ಬದಲು ಧರ್ಮದ ಮಾರ್ಗವನ್ನು ಅನುಸರಿಸಿ ಭಗವಂತನ ನ್ಯಾಯದ ಆಶ್ರಯಕ್ಕೆ ಬಂದ ರಾಜನಿಗೆ ಸರಿಯಾದ ಮರ್ಯಾದೆ ಮಾಡಿ ಅವನಿಗೆ ಸತ್ಕರಿಸಿ ರಾಜ್ಯಾಭಿಷೇಕ ಮಾಡುವುದು ಕೂಡ ನ್ಯಾಯ ಸಮ್ಮತ ನಡೆಯಾಗುತ್ತದೆ.  ಶೂದ್ರ ತಪಸ್ವಿ ಶಂಭೂಕನನ್ನು ವಧಿಸಿದ್ದೂ ನ್ಯಾಯಯುತವಾಗಿಯೇ ಇದೆ. ಶೂದ್ರ ತಪಸ್ಸು ಮಾಡಿದ ಎಂಬ ಕಾರಣಕ್ಕೆ ಅವನನ್ನು ಸಂಹಾರ ಮಾಡಿದ ಎಂಬ ಕತೆಯನ್ನು ಕೇಳುತ್ತೇವೆ. ಆದರೆ ಅದರ ಹಿನ್ನೆಲೆಯನ್ನು ತಿಳಿದು ನ್ಯಾಯ ಅನ್ಯಾಯಗಳ ನಿರ್ಣಯ ಮಾಡಬೇಕು.  ಆ ಶೂದ್ರ ಒಬ್ಬ ವೈದ್ಯನಾಗಿದ್ದ ಅವನ ಕೆಲಸ ರೋಗಿಗಳನ್ನು ಗುಣ ಪಡಿಸುವುದು ಹಾಗೂ ಜನರ ಆರೋಗ್ಯ ಕಾಪಾಡುವುದಕ್ಕೆ ಸಹಾಯಕವಾಗುವುದು.  ಪ್ರತಿಯೊಬ್ಬ ಮನುಜನ ಕರ್ತವ್ಯ ತನ್ನ ವೃತ್ತಿ ಧರ್ಮವನ್ನು ಪಾಲಿಸಿ ನಂತರ ತನ್ನ ವೈಯಕ್ತಿಕ ಉಪಾಸನೆ ಅಥವಾ ಆರಾಧನೆ ಮಾಡಿಕೊಳ್ಳಬೇಕು.  ವೈದ್ಯನಾದವನು ಸ್ವತಃ ನಾರಾಯಣ ರೂಪದಲ್ಲಿದ್ದು ರೋಗಿಯ ಆರೋಗ್ಯ ಕಾಪಾಡುವುದು ಅವನ ಕರ್ತವ್ಯ. ಕರ್ತವ್ಯ ಭ್ರಷ್ಠನಾಗಿ ತನ್ನ ವೈಯಕ್ತಿಕ ಆಸೆ ಪೂರೈಕೆಗೆ ತಪಸ್ಸು ಆಚರಿಸಲು ಹೋಗಿ ಧರ್ಮ ಮಾರ್ಗವನ್ನು ಧಿಕ್ಕರಿಸಿದ ಕಾರಣ ರಾಮನು ಶೂದ್ರಕನ ಕರ್ವ್ಯ ಲೋಪಕ್ಕಾಗಿ ಅವನನನ್ನು ಸಂಹರಿಸುತ್ತಾನೆ.


ರಾವಣಾಸುರನ ಅಧೀನದಲ್ಲಿದ್ದ ಸೀತೆಯನ್ನು ರಾಜ ಶ್ರೀರಾಮ ಮರಳಿ ಕರೆತಂದ, ಸೀತಾ ಮಾತೆ ಅಗ್ನಿ ಪ್ರವೇಶಿಸಿ ತಾನು ಪತಿವ್ರತೆಯೆಂದು ಸಾಬೀತು ಮಾಡಿದ ನಂತರ ಅವಳನ್ನು ಸ್ವೀಕರಿಸಿದ, ಹಾಗಾದರೆ ಸಾಮಾನ್ಯ ಪ್ರಜೆಗಳಾದ ನಾವು ಹೀಗೆ ಮಾಡಬಹುದೇ ಎಂಬ ಒಬ್ಬ ಸಾಮಾನ್ಯ ಪ್ರಜೆಯ ಮಾತನ್ನು ಕೇಳಿ ತನ್ನ ಸೀತೆಯನ್ನು ಕಾಡಿಗೆ ಕಳೆಸಿದ ಶ್ರಿರಾಮನ ಪ್ರಜಾತಂತ್ರ ಆಡಳಿತಕ್ಕೆ ಸಮನಾದ ಮತ್ತೊಂದು ನ್ಯಾಯಯುತವಾದ ಆಡಳಿತ ಮತ್ತೊಂದು ಇಲ್ಲ. ರಾಜ ಧರ್ಮದಲ್ಲಿ ರಾಜನಾದವನು ಯಾವುದೇ ಒಬ್ಬ ಪ್ರಜೆಯೂ ತಪ್ಪು ಎಂದು ತೋರಿಸುವಂತೆ ನಡೆಯದೇ ಎಲ್ಲ ಪ್ರಜೆಗಳ ಒಮ್ಮತ ಹಾಗೂ ಅವರ ಅಭಿಪ್ರಾಯಕ್ಕೆ ಮನ್ನಣೆ ನೀಡಿ ನಡೆಯಬೇಕೆಂಬ ನಿಮಯವನ್ನು ಪಾಲಿಸುತ್ತಾ ಸೀತೆಯನ್ನು ಕಾಡಿಗೆ ಕಳುಹಿಸುತ್ತಾನೆ. ಮೇಲ್ನೋಟಕ್ಕೆ ಇದು ಪುರಷ ಪ್ರಧಾನ ಆಡಳಿತ ಅನ್ನಿಸಿದರೂ ರಾಜನಾಗಿ ಪ್ರಜೆಗಳ ಅಭಿಪ್ರಾಯಕ್ಕೆ ತಕ್ಕಂತೆ ನಡೆದು ರಾಮರಾಜ್ಯದಲ್ಲಿ ಎಲ್ಲರಿಗೂ ನ್ಯಾಯ ಎಂಬ ಮಾತನ್ನು ಸಾಬೀತು ಪಡಿಸುವಂತೆ ಶ್ರೀರಾಮನ ಈ ನಿರ್ಧಾರ ಸಮಂಜಸವಾಗಿದೆ ಅನಿಸುತ್ತದೆ. 

 

ಇನ್ನೊಂದು ಕತೆಯ ಪ್ರಕಾರ ರಾಮ ರಾಜ್ಯದಲ್ಲಿ ಪ್ರಾಣಿಗಳೂ ಕೂಡ ಮಾತನಾಡಬಲ್ಲವಾಗಿದ್ದವೂ ಎಂದು ಹೇಳುತ್ತಾರೆ.  ಒಂದು ನಾಯಿಯು ಬಂದು ರಾಮನಲ್ಲಿ ತನಗೆ ನ್ಯಾಯವನ್ನು ಕೇಳಿತು.  ಒಂದು ಮನಷ್ಯನು ತನಗೆ ವಿನಾಕಾರಣ ಹೊಡೆದಿದ್ದಾನೆ ಅವನಿಗೆ ಶಿಕ್ಷೆಯಾಗಬೇಕು ಎಂದಾಗ ರಾಮನು ಅವನಿಗೆ ಯಾವ ಶಿಕ್ಷೆ ವಿಧಿಸಬೇಕೆಂದು ನೀನೇ ಹೇಳು ಎಂದು ನಾಯಿಗೆ ಅವಕಾಶ ನೀಡುತ್ತಾನೆ ಆಗ ನಾಯಿಯು "ಒಂದು ದೇವಾಲಯದ ಧರ್ಮಧಿಕಾರಿಯನ್ನಾಗಿ ಮಾಡು" ಎಂದು ಕೇಳುತ್ತದೆ.  ಆಗ ಆ ನಾಯಿಯು ನಾನು ಹಿಂದಿನ ಜನ್ಮದಲ್ಲಿ ಧರ್ಮಧಿಕಾರಿಯೇ ಆಗಿದ್ದೆ ಕೆಟ್ಟ ಕರ್ಮಗಳಿಂದ ನನಗೆ ನಾಯಿಯ ಜನ್ಮ ಬಂದಿದೆ. ಈ ಮನುಷ್ಯನೂ ಕೂಡ ಧರ್ಮಾಧಿಕಾರಿಯಾಗಿ ಕೆಟ್ಟ ಕರ್ಮಗಳನ್ನು ಮಾಡಿ ನಾಯಿಯಾಗಿ ತನ್ನಂತೆ ನೋವನ್ನು ಅನುಭವಿಸಲಿ ಎಂಬ ಶಿಕ್ಷೆಯನ್ನು ತನ್ನನ್ನು ಹೊಡೆದ ಮನುಷ್ಯನಿಗೆ ಕೇಳುತ್ತದೆ.  ಘಟನೆಯಲ್ಲಿ ರಾಮರಾಜ್ಯದ ನ್ಯಾಯ ಎಷ್ಟು ನ್ಯಾಯಯುತವಾಗಿತ್ತು ಎಂಬುದನ್ನು ಎತ್ತಿ ತೋರಿಸುತ್ತದೆ.  ರಾಮನು ನಾಯಿಗೆ ಅನ್ಯಾಯವಾದ್ದರಿಂದ ಶಿಕ್ಷೆಯನ್ನು ನೀಡುವ ಅವಕಾಶವನ್ನು ಪೀಡಿತರಿಗೆ ನೀಡಿ ನ್ಯಾಯವನ್ನು ಎತ್ತಿ ಹಿಡಿದಿದ್ದಾನೆ. ಆ ನಾಯಿಯು ಕೂಡ ತನ್ನ ನಾಯಿಯ ಜನ್ಮದಲ್ಲಿ ಅನುಭವಿಸಬೇಕಾದ ನೋವುಗಳಿಗೆ ಕಾರಣವಾದ ತನ್ನ ವೃತ್ತಿಯನ್ನು ಆ ಮನುಷ್ಯನಿಗೆ ಆಗಲಿ ಎಂದು ಕೇಳಿದ್ದು ಕೂಡ ನ್ಯಾಯಯುತವೇ ಬೇರೆಯವರ ಪರಿಸ್ಥಿತಿ ತಿಳಿಯದೇ ಹಿಂದೆ ಮುಂದೆ ನೋಡದೆ ದೌರ್ಜನ್ಯ ಮಾಡುವುದು ಅನ್ಯಾಯ ಎಂಬ ವಿಷಯವನ್ನು ಕೂಡ ತಿಳಿಸುತ್ತದೆ.  


ಹೀಗೆ ರಾಮಾಯಣದಲ್ಲಿ ಅನೇಕ ಸನ್ನಿವೇಶಗಳ ಮೂಲಕ ರಾಮ ನ್ಯಾಯಾಧೀಶನಾಗಿ ಕಾಣುತ್ತಾನೆ. ಮಾನವ ಜನ್ಮ ತಾಳಿ ಕೇವಲ ನ್ಯಾಯದ ತೀರ್ಮಾನಿಗನಾಗದೆ ನ್ಯಾಯದ ಹಾದಿಯಲ್ಲೇ ನಡೆದು ಪುರುಷೋತ್ತಮನಾಗಿ ಶ್ರೋತೃಗಳ ಮುಂದೆ ನಿಲ್ಲುತ್ತಾನೆ. ವಾಲ್ಮೀಕಿ ಮಹರ್ಷಿಗಳಿಂದ ರಚಿತವಾದ ಈ ಮಹಾನ್ ಗ್ರಂಥ ಸಾರ್ವಕಾಲಿಕವಾಗಿ ಉಳಿಯುವುದಾಗಿದೆ. ಬದುಕನ್ನು ಉತ್ತಮವಾಗಿ ಬದುಕಲು, ಬದುಕನ್ನು ನೆಮ್ಮದಿಯಾಗಿ ಕಳೆಯಲು, ಬದುಕನ್ನು ನ್ಯಾಯಯುತವಾಗಿ ಬದುಕಲು ನಮಗೆ ಮಾರ್ಗದರ್ಶನ ನೀಡುವ ಪವಿತ್ರವಾದ ಕಾವ್ಯ ಅದುವೇ "ರಾಮಾಯಣ".


-ವರದೇಂದ್ರ ಕೆ ಮಸ್ಕಿ

-- 9945253030

ಲೇಖಕರ ಸಂಕ್ಷಿಪ್ತ ಪರಿಚಯ

ವರದೇಂದ್ರ ಕೆ ಮಸ್ಕಿ ,ತಂದೆ ಶ್ರೀನಿವಾಸಾಚಾರ್ಯ ಮಂತ್ರಾಲಯ, ವಾಸಸ್ಥಳ - ಮಸ್ಕಿ ತಾ.ಮಸ್ಕಿ ಜಿ.ರಾಯಚೂರು ಕಳೆದ 16 ವರ್ಷಗಳಿಂದ ಪ್ರಾಥಮಿಕ ಶಾಲಾ ಶಿಕ್ಷಕನಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸಾಹಿತ್ಯ ಕೃಷಿ : ಕಥೆ, ಕಾದಂಬರಿ, ಕವನ, ಪುಸ್ತಕ ಅವಲೋಕನ ಬರಹಗಳು -ಎರಡು ಕೃತಿಗಳು ಲೋಕಾರ್ಪಣೆಯಾಗಿವೆ. 



   ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

0 Comments

Post a Comment

Post a Comment (0)

Previous Post Next Post