ಯುದ್ದ ಸಂದರ್ಭದಲ್ಲಿ ಮಾಜಿ ಪ್ರಧಾನಮಂತ್ರಿ ವಿದುರರ ಸಂದರ್ಶನ
ಎಂಬ ದಪ್ಪಕ್ಷರದ ಶಿರೋನಾಮೆಯಲ್ಲಿ 'ಸಂದರ್ಶನ' ಬರಹವನ್ನೇ ಮುಖಪುಟದಲ್ಲಿ ಪ್ರಕಟಮಾಡಿದ್ದ ಇತಿಹಾಸದ ಕುರುಕ್ಷೇತ್ರ ವಾಣಿ ಎಂಬ ಪತ್ರಿಕೆಯ ಒಂದು ಪುಟ ದೊರೆತಿದ್ದು, ಇದು ಕುರುಕ್ಷೇತ್ರ ವಾಣಿ ದಿನ ಪತ್ರಿಕೆಯ ಕ್ರಿ.ಪೂ. 3124 ನೇ ಇಸವಿಯ ಸೆಪ್ಟೆಂಬರ್ 21 ಬೆಳಗ್ಗೆ ಹತ್ತು ಗಂಟೆಗೆ ಮುದ್ರಣಗೊಂಡ ವಿಶೇಷ ಸಂಚಿಕೆಯ ಮುಖ ಪುಟವಾಗಿರುತ್ತದೆ.
ಪತ್ರಿಕೆಯಲ್ಲೇ ದೊರೆತ ಮಾಹಿತಿಯಂತೆ, 'ಕುರುಕ್ಷೇತ್ರ ವಾಣಿ' ಪತ್ರಿಕೆಯು ದಿನಂಪ್ರತಿ ಬೆಳಗ್ಗೆ 5.00 ಗಂಟೆಗೆ ಎಂದಿನಂತೆ ದಿನದ ಸಂಚಿಕೆಯನ್ನೂ, ಕುರುಕ್ಷೇತ್ರ ಯುದ್ದ ಸಂದರ್ಭದಲ್ಲಿ, ಹೆಚ್ಚುವರಿಯಾಗಿ ಬೆಳಗ್ಗೆ 11 ಗಂಟೆಗೆ 'ಮಧ್ಯಾಹ್ನ ಸಂಚಿಕೆ' ಮತ್ತು ದಿನದ ಯುದ್ಧ ಮುಗಿದ ಮೇಲಿನ ಕಂಪ್ಲೀಟ್ ಪ್ಯಾಕೇಜ್ ನ್ಯೂಸ್‌ಗಾಗಿ ಸಂಜೆ 5.00ಗಂಟೆಗೆ 'ಸಂಜೆ ಸಂಚಿಕೆ' ಎಂದು ಎರಡು ವಿಶೇಷ ಸಂಚಿಕೆಗಳನ್ನು ಹೊರತರುತ್ತಿತ್ತು.
ಕುರುಕ್ಷೇತ್ರ ವಾಣಿ ದಿನ ಪತ್ರಿಕೆಯ ಕ್ರಿ.ಪೂ. 3124 ನೇ ಇಸವಿಯ ಸೆಪ್ಟೆಂಬರ್ 21 ಬೆಳಗ್ಗೆ 11 ಗಂಟೆಗೆ ಮುದ್ರಣಗೊಂಡ ವಿಶೇಷ ಮಧ್ಯಾಹ್ನ ಸಂಚಿಕೆಯ ಮುಖ ಪುಟ ಮಾತ್ರ ದೊರೆತಿದ್ದು, ಅದರಲ್ಲಿ ವಿದುರ ಸಂದರ್ಶನ ಭಾಗವನ್ನು ಅನುವಾದಿಸಿ ಈ ದಿನ ಪ್ರಕಟಿಸಲಾಗುತ್ತಿದೆ!!.
ಸರಿ ಸುಮಾರು 5150 ವರ್ಷಗಳ ಹಿಂದಿನ ಪತ್ರಿಕೆ ಇದಾಗಿರುತ್ತದೆ.
***
ಕುರುಕ್ಷೇತ್ರ ವಾಣಿ
ಕುರುಕ್ಷೇತ್ರ ಯುದ್ದ ಪ್ರಾರಂಭವಾಗುವ ಕ್ಷಣದಲ್ಲಿ, ಧೃತರಾಷ್ಟ್ರ ಹಾಗೆ ಕೇಳಿದ್ದೇಕೆ?
ಮಾಜಿ ಪ್ರಧಾನಮಂತ್ರಿ ವಿದುರ ಕೊಟ್ಟ ಉತ್ತರ ಏನು?
ಯುದ್ದ ಸಂದರ್ಭದಲ್ಲಿ ತೀರ್ಥಯಾತ್ರೆ ಹೊರಟ ಪ್ರಧಾನಮಂತ್ರಿ ವಿದುರರ ಸಂದರ್ಶನ
ಹಸ್ಥಿನಾವತಿಯ ಅರಮನೆಯ ವಿಶೇಷ ಕಾಮೆಂಟ್ರಿ ಕೊಠಡಿಯಿಂದ ಸುದ್ಧಿಗಳು ಹೊರಬರುತ್ತಿದ್ದು, ಹೊರಬಂದ ಮೊದಲ ಸುದ್ದಿಯ ಪ್ರಕಾರ, ಧೃತರಾಷ್ಟ್ರ ಪ್ರಭುಗಳು ಕುರುಕ್ಷೇತ್ರದ ಸಮಗ್ರ ವರದಿಯನ್ನು ಸಂಜಯರ ಮೂಲಕ ಕೇಳುವುದಕ್ಕೆ ಬೆಳಗ್ಗೆ ಎಂಟು ಗಂಟೆಗೆ ಸಿದ್ದರಾಗಿ, ಕುತೂಹಲಭರಿತರಾಗಿ ಕುಳಿತಿದ್ದರು.
ಭಗವಾನ್ ವೇದವ್ಯಾಸರ ಅನುಗ್ರಹದ ಮೂಲಕ ದಿವ್ಯ ದೃಷ್ಟಿಯಿಂದ, ಕುರುಕ್ಷೇತ್ರದ ಸಮಸ್ತ ಚಿತ್ರಣವನ್ನು, ಸಂಭಾಷಣೆಗಳನ್ನು ಕಾಣುವ-ಕೇಳುವ ಅವಕಾಶವನ್ನು ಪಡೆದ ಸಂಜಯರು ಧೃತರಾಷ್ಟ್ರರ ಪಕ್ಕದಲ್ಲೇ ಆಸೀನರಾಗಿದ್ದರು.
ಅರಮನೆಯ ಕಾಮೆಂಟ್ರಿ ಕೊಠಡಿಯ ಪೂರ್ವ ದಿಕ್ಕಿನ ಶ್ವೇತವರ್ಣದ ಖಾಲಿ ಗೋಡೆಯ ಮೇಲೆ ಧೃಷ್ಠಿ ನೆಟ್ಟು, ಆ ಮೂಲಕ ಕುರುಕ್ಷೇತ್ರದ ರಣಾಂಗಣದ ಮೇಲೆ ದಿವ್ಯ ದೃಷ್ಟಿ ಹರಿಸಿರುವ ಸಂಜಯರನ್ನು ಉದ್ದೇಶಿಸಿ ಧೃತರಾಷ್ಟ್ರ ಪ್ರಭುಗಳು:
ಧರ್ಮಕ್ಷೇತ್ರೇ ಕುರುಕ್ಷೇತ್ರೇ ಸಮವೇತಾ ಯುಯುತ್ಸವಃ |
ಮಾಮಕಾಃ ಪಾಂಡವಾಶ್ಚೈವ ಕಿಮಕುರ್ವತ ಸಂಜಯ ?||
ಎಂದು ಪ್ರಶ್ನಿಸಿದ್ದಾರೆ.
ಹೀಗೆ ಧೃತರಾಷ್ಟ್ರ ಪ್ರಶ್ನಿಸಿ, ಸಂಜಯರು ದಿವ್ಯ ದೃಷ್ಟಿಯ ನೆಟ್ಟ (ನೆಟ್) ನೋಟವನ್ನು ಕುರುಕ್ಷೇತ್ರದ ಸಮಗ್ರ ರಣಾಂಗಣಕ್ಕೆ ಸಂಪರ್ಕಿಸುವಾಗ, ಅರಮನೆಯ ಕಾಮೆಂಟ್ರಿ ಕೊಠಡಿಯಲ್ಲಿ ವೀಕ್ಷಕ ವಿವರಣೆಗೆ ಕಾದು ಕುಳಿತಿದ್ದ ನಮ್ಮ ಪತ್ರಿಕೆಯ ವರದಿಗಾರರಿಗೆ 'ಯುದ್ಧ ಸಮಯದಲ್ಲಿ ಬೇಸರಗೊಂಡು, ಹಸ್ಥಿನಾಪುರದ ಕೌರವನ ಕ್ಯಾಬಿನೆಟ್‌ನ ಮಾಜಿ ಪ್ರಧಾನಮಂತ್ರಿ ವಿದುರರು ತೀರ್ಥಯಾತ್ರೆಗೆ ಹೊರಟ ಸುದ್ದಿ ತಿಳಿದು ಬಂದಿದ್ದು, ಕೂಡಲೆ ವಿದುರರ ಮನೆಗೆ ತೆರಳಿ ಮಾಡಿದ ಒಂದು ಸಂಕ್ಷಿಪ್ತ ಸಂದರ್ಶನ ನಮ್ಮ ಓದುಗರಿಗೆ. (ಇದು ನಮ್ಮಲ್ಲಿ ಮಾತ್ರ!!)
ಕುರುಕ್ಷೇತ್ರ ವಾಣಿ(ಕು.ವಾ.): ನಮಸ್ಕಾರ ಪ್ರಧಾನ ಮಂತ್ರಿಗಳಿಗೆ. ಒಳಗೆ ಬರಬಹುದಾ?
ವಿದುರ: ನಮಸ್ಕಾರ ಬನ್ನಿ, ನೀವೂ.... ವರದಿಗಾರರಲ್ಲವಾ?
ಕುರುಕ್ಷೇತ್ರ ವಾಣಿ: ಹೌದು ಸರ್, ನಾನು ಕುರುಕ್ಷೇತ್ರ ವಾಣಿ ಪತ್ರಿಕೆಯ ವರದಿಗಾರ. ನೀವು ಯುದ್ದವನ್ನು ವಿರೋಧಿಸಿ ತೀರ್ಥಯಾತ್ರೆಗೆ ಹೊರಟಿದ್ದೀರಿ ಎನ್ನುವ ಬ್ರೇಕಿಂಗ್ ನ್ಯೂಸ್ ಗೊತ್ತಾಯ್ತು. ನಿಮ್ಮದೊಂದು ಕಿರು ಸಂದರ್ಶನ ಮಾಡಲು ಅವಕಾಶ ಬೇಕು.
ವಿದುರ: ಹ ಹ ಹ. ನೀವು ವರದಿಗಾರರು ಎಲ್ಲವನ್ನೂ 'ಬ್ರೇಕಿಂಗ್ ನ್ಯೂಸ್' ಮಾಡ್ತೀರಿ. ಸಂದರ್ಶನ ಮಾಡಬೇಕಾಗಿದ್ದು ಯುದ್ಧ ಮಾಡುವವರನ್ನು, ನನ್ನನ್ನಲ್ಲ. ಆದರೂ ಬಂದಿದ್ದೀರಿ, ಕೇಳಿ. ಪತ್ನಿ ಪಾರಸವಿ ನನ್ನ ತೀರ್ಥಯಾತ್ರೆಗೆ ಬೇಕಾಗುವ ಸಿದ್ದತೆ ಮಾಡುವವರೆಗೆ ನಾವು ಮಾತಾಡಬಹುದು.
ಕು.ವಾ.: ಧೃತರಾಷ್ಟ್ರ ಪ್ರಭುಗಳು ದಿವ್ಯಜ್ಞಾನಿ ಸಂಜಯರ ಬಳಿ 'ಧರ್ಮಕ್ಷೇತ್ರೇ ಕುರುಕ್ಷೇತ್ರೇ ಸಮವೇತಾ ಯುಯುತ್ಸವಃ |ಮಾಮಕಾಃ ಪಾಂಡವಾಶ್ಚೈವ ಕಿಮಕುರ್ವತ ಸಂಜಯ ?||' ಅಂತ ಕೇಳಿದ್ದಾರೆ. ಇದರ ಬಗ್ಗೆ ನೀವು ಏನು ಹೇಳುತ್ತೀರಿ?
ವಿದುರ: ನನಗೂ ಈಗಷ್ಟೆ ಈ ಮಾಹಿತಿ ಬಂತು. ನಾನೂ ಅದನ್ನೇ ಯೋಚಿಸುತ್ತಿದ್ದೆ. ಬಹುಶಃ ಪುತ್ರಪ್ರೇಮದಿಂದ ಕುರುಡರಾದ ಧೃತರಾಷ್ಟ್ರರಿಗೆ ಹೀಗನ್ನಿಸಿರಬಹುದು, ಏನೆಂದರೆ, ಮಹಿಳೆಯರ ಮಾನಭಂಗ ಮಾಡುತ್ತ ಸನಾತನ ಧರ್ಮದ ವಿರುದ್ದ ನಿಂತ ಕೌರವನಿಗೆ ಧರ್ಮಕ್ಷೇತ್ರದಲ್ಲಿ ನೆಡೆಯುವ ಯುದ್ಧದಲ್ಲಿ ಸೋಲಾಗುತ್ತದೆ ಎಂಬ ಭಯ ಕಾಡುತ್ತಿರಬಹುದು. ಹಾಗಾಗಿ ಅದೇ ಭಯದಲ್ಲಿ ಧರ್ಮಕ್ಷೇತ್ರೇ ಕುರುಕ್ಷೇತ್ರೇ... ಅಂತ ಪ್ರಾರಂಭಿಸಿರಬಹುದು.
ಅಥವಾ ತ್ರೇತಾಯುಗದ ಅಯೋಧ್ಯಾ ಶ್ರೀರಾಮಚಂದ್ರನೇ ಮತ್ತೆ ಕೃಷ್ಣನಾಗಿ ಬಂದು ಧರ್ಮ ಪಕ್ಷದ ಸಾರಥ್ಯವಹಿಸಿ, "ಧರ್ಮದ ಬೆಳೆಯನ್ನು ಬೆಳೆಯಬೇಕೆಂದರೆ, ಅಧರ್ಮದ ಕಳೆಯನ್ನು ಕೀಳಬೇಕು" ಎಂದು ಯುದ್ಧ ಪೂರ್ವದಲ್ಲಿ ಹೇಳಿದ್ದು ಧೃತರಾಷ್ಟ ಅಂತರಂಗದ ಕಣ್ಣಿಗೆ ಸತ್ಯದ ಪಲಿತಾಂಶ ಅರಿವಾಗಿ ಆತಂಕಗೊಂಡು ಹೇಳಿರಬಹುದು.
ಇನ್ನೂ ಒಂದು ಸಾಧ್ಯತೆ ಇದೆ, ಏನೆಂದರೆ ಧರ್ಮಕ್ಷೇತ್ರವಾದ ಕುರುಕ್ಷೇತ್ರಕ್ಕೆ ಹೆಜ್ಜೆ ಇಟ್ಟ ತಕ್ಷಣ ಧರ್ಮಕ್ಷೇತ್ರದ ಪ್ರಭಾವದಿಂದಾಗಿ ದುರ್ಯೋಧನ ಧರ್ಮಿಷ್ಟನಾಗಿ ಶಾಂತಿಯ ಮಾರ್ಗ ಹಿಡಿದರೆ.... ಯುದ್ಧ ಬೇಡ ಅಂದರೆ.... ಎಂಬ ಭಯವೂ ಯುದ್ಧಾಕಾಂಕ್ಷಿಯಾದ ಧೃತರಾಷ್ಟ್ರನಿಗೆ ಕಾಡಿರಬಹುದು.
ಕು.ವಾ. : ಅಂದರೆ, ರಾಜಮಾತೆ ಗಾಂಧಾರಿಯ ಮಕ್ಕಳು 'ಕುರು'ಚಲು ಕಳೆ ಅನ್ನುವುದು ಅಭಿಪ್ರಾಯವಾ?
ವಿದುರ : ಅದು ನನ್ನದಲ್ಲ. ಹಾಗಂತ ಧರ್ಮ ಪಕ್ಷದಲ್ಲಿರುವ ಯಾದವ ಶ್ರೇಷ್ಟನ ಮನದಿಂಗಿತ. ಅಧರ್ಮದ ಕುರುಚಲು ಕಳೆ ದೇಶದ ಧರ್ಮದ ಅಭಿವೃದ್ಧಿಯ ಬೆಳೆಗೆ ಮಾರಕ. ಇಡೀ ಧರಣಿಯೇ ಕುರುಚಲು ಮುಕ್ತ ಬೆಳೆ ಪ್ರದೇಶ ಆಗಬೇಕು ಅನ್ನುವುದು ಕೃಷ್ಣನ ನಿರ್ಣಯ. ಯುದ್ದ ಕುರುಚಲು ಕಳೆಯನ್ನು ಬೇರು ಸಹಿತ ನಿರ್ಮೂಲನೆ ಮಾಡುವ ಕಳೆನಾಶಕ ಮಾರ್ಗ!!
ಕು.ವಾ.: ಮಾಮಕಾಃ ಪಾಂಡವಾಶ್ಚೈವ ಎಂದು ಧೃತರಾಷ್ಟ್ರರು ಹೇಳಿದ್ದೇಕಿರಬಹುದು?
ವಿದುರ: ಇದನ್ನು ಈ ಹಿಂದೆಯೇ ಮಹಾರಾಜನಿಗೆ ನೀತಿಯಾಗಿ ಹೇಳಿದ್ದೆ. ನಮ್ಮವರು, ಪಾಂಡವರು ಬೇರೆ ಬೇರೆ ಎಂದು ಬೇಧ ಎಣಿಸಬೇಡ, ಎಲ್ಲರೂ ಕುರು ವಂಶದವರೆ ಎಂದು. ಇಡೀ ಭರತ ಖಂಡದವರನ್ನು ಜೋಡಿಸಬೇಕಾದರೆ ಮೊದಲು ಕುಟುಂಬದ ಒಳಗೆ ಜೋಡಣೆ ಆಗಬೇಕು. ದೂರದ ಗಾಂಧಾರ ದೇಶದ ಸ್ತ್ರೀ ತಾಯಿ ಗಾಂಧಾರಿಯೂ ತನ್ನ ಮಕ್ಕಳನ್ನು ಪ್ರಬುಧ್ದ ಸಾತ್ವಿಕ ಮನಸ್ಥಿತಿಯವರನ್ನಾಗಿ ಬೆಳಸಲಿಲ್ಲ. ಅಣ್ಣ ತಮ್ಮಂದಿರ ನಡುವೆ ಎರಡು ರಾಜಕೀಯ ಪ್ರಬಲ ವಿರೋಧದ ಪಕ್ಷಗಳಾಗುವಂತೆಯೇ ನೋಡಿಕೊಂಡಳು. ಈಗ ಧೃತರಾಷ್ಟ್ರನ ನಾಲಿಗೆಯಲ್ಲಿ ಮಾಮಕಾಃ ಪಾಂಡವಾಶ್ಚೈವ ಎಂದು ಭಿನ್ನತೆಯ ಧ್ವನಿ ಮೊಳಗುವಂತಾಯ್ತು.
ಕು.ವಾ.: ಹಾಗಾದರೆ, ಗಾಂಧಾರಿಯೂ ಕೌರವ ಪಕ್ಷವನ್ನು ಧರ್ಮದ ದಾರಿಯಲ್ಲಿ ನೆಡೆಸಲು ಮನಸ್ಸು ಮಾಡಲಿಲ್ಲವೆ?!!
ವಿದುರ: ಇಲ್ಲ. ಅವಳೂ ಪುತ್ರ ಪ್ರೇಮದಲ್ಲಿ ಕುರುಡಾಗಿದ್ದಳು. ಜೊತೆಗೆ ಇಲ್ಲಿಯ ಧರ್ಮ ಸಂಸ್ಕ್ರತಿಯನ್ನು ತನ್ನ ಮಕ್ಕಳಲ್ಲಿ ಬೆಳೆಸುವ ಬದಲು, ತಮ್ಮ ಶಕುನಿಯ ಕುತಂತ್ರ ಬುದ್ದಿಗಳನ್ನೇ ಮಕ್ಕಳಲ್ಲಿ ಮೊಳಕೆ ಬಂದು ಬೆಳೆಯುವಂತೆ ಮಾಡಿದಳು. ಗಾಂಧಾರದ ಕುತಂತ್ರ ಸಂಸ್ಕೃತಿ ಇಲ್ಲಿ ವಿಸ್ತರಿಸುವಂತಾಯ್ತು. ದುಶ್ಯಾನನಂತೂ ಭಯೋತ್ಪಾದಕ, ಅತ್ಯಾಚಾರಿಯೇ ಆಗಿ ಹೋದ.
ಕು.ವಾ.: ಕಿಮಕುರ್ವತ ಅನ್ನುವಾಗ ಪ್ರಭುಗಳ ಧ್ವನಿ ನಡುಗಿದ್ದು?
ವಿದುರ: ಹೌದು ಆ ವಿಚಾರದ ಮಾಹಿತಿಯೂ ಬಂದಿದೆ. ಕಿಮಕುರ್ವತ ಸಂಜಯ ಅನ್ನುವಾಗ ಇದ್ದ ಧ್ವನಿಯ ವೈಬ್ರೇಷನ್‌ಗೆ ಒಂದು ಕ್ಷಣ ತ್ರಿಕಾಲ ದಿವ್ಯಜ್ಞಾನಿ ಸಂಜಯನೂ ಗಾಬರಿ ಆದನಂತೆ.
ಇರಲಿ, ಧೃತರಾಷ್ಟ್ರನು ತನ್ನ ಪುತ್ರರ ನಾಶವನ್ನು ನೋಡಲು ಹಿಂಜರಿಯುತ್ತಾನೆ. ಮಕ್ಕಳ ಬಾಲ್ಯವನ್ನಾಗಲಿ, ಯೌವನವನ್ನಾಗಲಿ ನೋಡಿಲ್ಲ, ಹಾಗಾಗಿ ಅವರ ಸಾವನ್ನು ನೋಡಲು ಆತ ಬಯಸುವುದಿಲ್ಲ. ಹಾಗಾಗಿಯೇ ವೇದ ವ್ಯಾಸರು ಯುದ್ದ ರಂಗದ ಪ್ರತಿಕ್ಷಣದ ಸಮಗ್ರ ದೃಶ್ಯವನ್ನು ನೋಡುವ ದಿವ್ಯ ದೃಷ್ಟಿಯನ್ನು ಕೊಡುತ್ತೇನೆ ಎಂದಾಗ ಧೃತರಾಷ್ಟ್ರ ಹೇಳಿದ್ದು "ನನಗೆ ಬೇಡ ಸಂಜಯನಿಗೆ ಕೊಡಿ" ಎಂದು. ನೂರು ಮಕ್ಕಳೂ ಸಾಯುತ್ತಾರೆ ಎಂಬುದು ಧೃತರಾಷ್ಟ್ರನಿಗೆ ಮೊದಲೇ ಆರನೆ ಇಂದ್ರಿಯದ ಅರಿವಿಗೆ ಬಂದಿದೆ. ಕಿಮಕುರ್ವತ ಸಂಜಯ ಎನ್ನುವಾಗ ಸ್ವರದಲ್ಲಿ ಕಂಪನ ಧ್ವನಿಸಿದ್ದು ಅದಕ್ಕಿರಬಹುದು.
ಕು.ವಾ.: ಹಾಗಾದರೆ ಧೃತರಾಷ್ಟ್ರರು, ಮಕ್ಕಳ ಕ್ಷೇಮಕ್ಕಾದರೂ ಯುದ್ಧ ನಿಲ್ಲಿಸಬಹುದಾಗಿತ್ತಲ್ಲ?
ವಿದುರ: ಮರ ಬೆಳೆದು ನಿಂತ ಮೇಲೆ ಮತ್ತೆ ಬೆಳಸಿದವನಿಗೆ ಅದನ್ನು ಬಗ್ಗಿಸಲು ಸಾಧ್ಯವಿಲ್ಲ. ಗೋವುಗಳನ್ನು ಕದ್ದವರನ್ನು, ವಿರಾಟನ ಗೋ ಶಾಲೆಯಿಂದ ಗೋವುಗಳನ್ನು ಕಳ್ಳ ಸಾಗಾಣಿಕೆ ಮಾಡಿದವರನ್ನು, ಸ್ತ್ರೀಯರ ಮಾನಭಂಗ ಮಾಡಿದವರನ್ನು ಗೋಪಾಲನ ಪಕ್ಷದವರು ಸುಮ್ಮನೆ ಬಿಡುತ್ತಾರಾ? ದುಷ್ಟ ಕೃತ್ಯ ಮಾಡುವುದನ್ನು ತಡೆಯಬೇಕಿತ್ತೇ ಹೊರೆತು, ಅಂತಿಮ ಹಂತದ ಯುದ್ದವನ್ನಲ್ಲ. ಬಹುಶಃ ಕೌರವ ಮುಕ್ತ ಭಾರತ ಆಗುತ್ತದೆ.
ಕು.ವಾ.: ಆದರೂ ಕೌರವರ ಪಕ್ಷಕ್ಕೇ ಬೆಂಬಲ ಹೆಚ್ಚು ಇದೆಯಲ್ಲ? ಹನ್ನೊಂದು ಅಕ್ಷೋಹಿಣಿಯ ಮಿತ್ರಕೂಟ ಆಗಿದೆ. ವೇರ್ ಆ್ಯಸ್ ಪಾಂಡವ ಮಿತ್ರ ಕೂಟದಲ್ಲಿ ಕೇವಲ ಏಳು ಅಕ್ಷೋಹಿಣಿ!!?
ವಿದುರ: ಸಂಖ್ಯಾ ಬಲದಲ್ಲಿ ಹೆಚ್ಚು ಬೆಂಬಲ ಇರುವಂತೆ ಕಾಣಬಹುದು. ಅದರೆ, ಆ ಬಲ ಬಂದಿರುವುದು ಉಚಿತಗಳ ಆಮಿಷದಿಂದ, ಮದ್ಯ ಮದಿರೆಗಳನ್ನು ಹಂಚಿದ್ದರಿಂದ!! ಮದ್ರಾ ದೇಶದ ಬೆಂಬಲ ಬಂದಿರುವುದಂತೂ ಕೇವಲ ಉಚಿತ ಅನ್ನ, ಮದಿರೆಗಳಿಂದ, ಯಾದವರ ಅಕ್ಷೋಹಿಣಿ ಬೆಂಬಲ ಸಂಖ್ಯೆಗೆ ಮಾತ್ರ. ಅವರುಗಳ ನಿಷ್ಠೆ, ಸಿದ್ದಾಂತಗಳ ವಿಚಾರ ಬಂದಾಗ ಅಂತರಂಗದಲ್ಲಿ ಪರೋಕ್ಷವಾಗಿ ಮೂಲ ಧರ್ಮ ಪಕ್ಷಕ್ಕೆ ಇರುತ್ತದೆ.
**
ಸಂದರ್ಶನದ ಮುಂದಿನ ಭಾಗಕ್ಕೆ ಪುಟ 7 ಮತ್ತು 11 ನ್ನು ನೋಡಿ ಎಂದಿದ್ದು, ಆ ಪುಟಗಳು ದೊರೆಯದಿರುವುದು ವಿಷಾದನೀಯ.
(Diclimicer: ಇದು ಕಾಲ್ಪನಿಕ ಬರಹ)
- ಅರವಿಂದ ಸಿಗದಾಳ್, ಮೇಲುಕೊಪ್ಪ
9449631248
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ