ಗಂಗಾ ಶಶಿಧರನ್ ವಯಲಿನ್ ಆಕರ್ಷಣೆ
ಬದಿಯಡ್ಕ: ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರ ಹಾಗೂ ವೇದಮಾತಾ ಟ್ರಸ್ಟ್ ಅಗಲ್ಪಾಡಿಯ ನೇತೃತ್ವದಲ್ಲಿ ಲೋಕ ಕಲ್ಯಾಣಾರ್ಥವಾಗಿ ನಡೆಯುತ್ತಿರುವ ಯಾಗದ ಅಂಗವಾಗಿ ಏ.3ರಂದು ಬೆಳಗ್ಗೆ ಋಕ್ ಸಂಹಿತಾ ಯಾಗ ಹಾಗೂ ಸಹಸ್ರ ಚಂಡಿಯಾಗ ಮಹಾಪೂರ್ಣಾಹುತಿ, ಪೂಜೆ ನಡೆಯಲಿದೆ.
ಮುಂಜಾನೆ 5 ಗಂಟೆಗೆ ಅಗ್ನಿ ಪ್ರತಿಷ್ಠೆ ನಡೆದು ಸಹಸ್ರ ಚಂಡಿಕಾಯಾಗ ಪ್ರಾರಂಭವಾಗಲಿದೆ. ಬೆಳಗ್ಗೆ 10 ಗಂಟೆಗೆ ಋಕ್ ಸಂಹಿತಾ ಯಾಗದ ಪೂರ್ಣಾಹುತಿ ನಡೆದು ಪೂಜೆ ನೆರವೇರಲಿದೆ. ಬೆಳಗ್ಗೆ 11 ಗಂಟೆಗೆ ಸಹಸ್ರ ಚಂಡಿಯಾಗ ಮಹಾಪೂರ್ಣಾಹುತಿ ನಡೆಯಲಿದೆ. ಬಳಿಕ ಪೂಜೆ ನೆರವೇರಲಿದೆ. ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ ನಡೆದು ಅನ್ನ ಸಂತರ್ಪಣೆ ನಡೆಯಲಿದೆ. ಬಳಿಕ ಮಹಾ ಮಂತ್ರಾಕ್ಷನತೆ ನೆರವೇರಲಿದೆ.
ಏ.3ರಂದು ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಖ್ಯಾತ ವಯಲಿನ್ ವಾದಕ ವಿದ್ವಾನ್ ಸಿ.ಎಸ್.ಅನುರೂಪ್ ಹಾಗೂ ಅವರ ಶಿಷ್ಯೆ ಅಂತಾರಾಷ್ಟ್ರೀಯ ಖ್ಯಾತಿಯ ಬಾಲಕಿ ಗಂಗಾ ಶಶಿಧರನ್ ತ್ರಿಶ್ಯೂರ್ ಮತ್ತು ಬಳಗದವರಿಂದ ದ್ವಂದ್ವ ವಯಲಿನ್ ವಾದನ ನಡೆಯಲಿದೆ.
ಎಡನೀರು ಶ್ರೀಗಳ ಉಪಸ್ಥಿತಿ: ಯಾಗದ ಅಂಗವಾಗಿ ನಡೆಯಲಿರುವ ಋಕ್ ಸಂಹಿತಾ ಯಾಗ ಹಾಗೂ ಸಹಸ್ರ ಚಂಡಿಯಾಗ ಮಹಾಪೂರ್ಣಾಹುತಿ ಸುಸಂದರ್ಭದಲ್ಲಿ ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಉಪಸ್ಥಿತರಿರುವರು.
ಉಚಿತ ಬಸ್ ಸೇವೆ
ಏ.3ರಂದು ವಿಜೃಂಭಣೆಯಿಂದ ನಡೆಯಲಿರುವ ಋಕ್ ಸಂಹಿತಾ ಯಾಗ ಮತ್ತು ಸಹಸ್ರ ಚಂಡಿಕಾ ಯಾಗದ ಪೂರ್ಣಾಹುತಿ ಹಿನ್ನೆಲೆಯಲ್ಲಿ ಭಗವದ್ಭಕ್ತರ ಅನುಕೂಲಕ್ಕಾಗಿ ಬದಿಯಡ್ಕ- ಮುಳ್ಳೇರಿಯಾ ರಸ್ತೆಯ ಪಿಲಾಂಕಟ್ಟೆಯಿಂದ ಅಗಲ್ಪಾಡಿ ಕ್ಷೇತ್ರಕ್ಕೆ ಬೆಳಗ್ಗೆ 9.30ರಿಂದ ಮಧ್ಯಾಹ್ನ 3 ಗಂಟೆ ತನಕ ಉಚಿತ ವಿಶೇಷ ಬಸ್ ಸೌಕರ್ಯವನ್ನು ದುರ್ಗಾಫ್ರೆಂಡ್ಸ್ ಕ್ಲಬ್ ಅಗಲ್ಪಾಡಿ ಮತ್ತು ಪ್ರಚಾರ ಸಮಿತಿ ವತಿಯಿಂದ ಏರ್ಪಡಿಸಲಾಗಿದೆ. ಯಾಗಕ್ಕೆ ಆಗಮಿಸುವ ಭಕ್ತರು ಈ ಸೌಲಭ್ಯವನ್ನು ಪಡೆಯಬಹುದು ಎಂದು ಕ್ಷೇತ್ರದ ಪ್ರಕಟಣೆ ತಿಳಿಸಿದೆ.
ಶ್ರೀ ಕ್ಷೇತ್ರದಲ್ಲಿ ನಡೆಯುತ್ತಿರುವ ಯಾಗದ ಪೂರ್ಣಾಹುತಿ ಸಂದರ್ಭ 15 ಸಾವಿರ ಭಕ್ತರ ಆಗಮನ ನಿರೀಕ್ಷಿಸಲಾಗಿದೆ. ಇದಕ್ಕಾಗಿ ಸಕಲ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ. ಸಾವಿರಕ್ಕೂ ಅಧಿಕ ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.
-ಎ.ಜಿ.ಶರ್ಮ ಕೋಳಿಕ್ಕಜೆ,
ಆಡಳಿತ ಮೊಕ್ತೇಸರ, ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ