ನಿಮ್ಮಂತಹ ಸದಸ್ಯರು ನನ್ನ ತಂಡದಲ್ಲಿರುವುದು ದೊಡ್ಡ ಆಸ್ತಿ: ಕ್ಯಾಪ್ಟನ್‌ ಬ್ರಿಜೇಶ್ ಚೌಟರಿಗೆ ಪ್ರಧಾನಿ ಮೋದಿ ಪತ್ರ

Upayuktha
0

ಭಾರತೀಯ ಸೇನೆಯಲ್ಲಿ ಸಲ್ಲಿಸಿರುವ ಸೇವೆಯ ಬಗ್ಗೆ ಪ್ರಧಾನಿ ಮೆಚ್ಚುಗೆ; ನಿಮ್ಮಂತಹ ಸದಸ್ಯರು ನನ್ನ ತಂಡದಲ್ಲಿರುವುದು ದೊಡ್ಡ ಆಸ್ತಿ ಎಂದು ಮೋದಿ ಪತ್ರ, ಈ ಚುನಾವಣೆ ಸಾಮಾನ್ಯದ್ದಲ್ಲ, ದೇಶದ ಭವಿಷ್ಯ ರೂಪಿಸುವಲ್ಲಿ ಮಹತ್ತರ ಘಟ್ಟ, 2047ರ ಮಿಶನ್ ಗುರಿ ಸಾಧಿಸಲು ಮಹತ್ವದ್ದು


 

ಮಂಗಳೂರು: ದಕ್ಷಿಣ ಕನ್ನಡ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಪತ್ರ ಬರೆದಿದ್ದು, ಬ್ರಿಜೇಶ್ ಚೌಟ ಸೇನಾ ಹಿನ್ನೆಲೆ ಹೊಂದಿರುವ ಅಭ್ಯರ್ಥಿ ಎನ್ನುವ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಭಾರತೀಯ ಸೇನೆಯಲ್ಲಿ ಪ್ರತಿ ದಾಳಿ ಕಾರ್ಯಾಚರಣೆಗೆ ಹೆಸರಾಗಿರುವ ಗೋರ್ಖಾ ರೆಜಿಮೆಂಟಿನಲ್ಲಿ ನೀವು ಸೇವೆಗೈದಿದ್ದೀರಿ ಎನ್ನುವುದು ಶ್ಲಾಘನೀಯ. ಅಲ್ಲದೆ, ಮಂಗಳೂರು ಲಿಟ್ ಫೆಸ್ಟ್ ಆಯೋಜಿಸುವ ಮೂಲಕ ನೀವು ಸಾಹಿತ್ಯ, ಸಂಸ್ಕೃತಿ ಕುರಿತ ಬದ್ಧತೆಯನ್ನು ತೋರಿಸಿದ್ದೀರಿ. ದಕ್ಷಿಣ ಕನ್ನಡ ಜಿಲ್ಲೆಯ ಅಭಿವೃದ್ಧಿ ಮತ್ತು ಜನರ ಕಲ್ಯಾಣಕ್ಕಾಗಿ ನೀವು  ತೊಡಗಿಸಿಕೊಳ್ಳುತ್ತೀರಿ ಎಂದು ಖಚಿತವಾಗಿ ಹೇಳಬಲ್ಲೆ ಎಂದು ಮೋದಿ ಪತ್ರದಲ್ಲಿ ತಿಳಿಸಿದ್ದಾರೆ.


ಜಿಲ್ಲೆಯ ಜನರ ಆಶೀರ್ವಾದ ಪಡೆದು ನೀವು ಪಾರ್ಲಿಮೆಂಟಿಗೆ ಬರುತ್ತೀರಿ ಅನ್ನುವ ಸಂಪೂರ್ಣ ನಂಬಿಕೆ ನನಗಿದೆ. ನಿಮ್ಮಂತಹ ಸದಸ್ಯರು ನನ್ನ ಜೊತೆಗಿರುವುದು ದೊಡ್ಡ ಆಸ್ತಿ ಎಂದುಕೊಳ್ಳುತ್ತೇನೆ. ದೇಶ ಮತ್ತು ನಿಮ್ಮ ಜಿಲ್ಲೆಯ ಕಲ್ಯಾಣದ ವಿಚಾರದಲ್ಲಿ ನಮ್ಮ ತಂಡವು ಸದಾ ಬದ್ಧತೆ ಹೊಂದಿರುತ್ತದೆ. ಈ ಪತ್ರದ ಮೂಲಕ, ನಿಮ್ಮ ಜಿಲ್ಲೆಯ ಜನರಿಗೆ ತಿಳಿಯಪಡಿಸುವುದು ಏನೆಂದರೆ, ಈ ಬಾರಿಯ ಚುನಾವಣೆ ಸಾಮಾನ್ಯ ರೀತಿಯದ್ದಲ್ಲ. ದೇಶದ ಜನತೆ ಅದರಲ್ಲೂ ಹಿರಿಯ ನಾಗರಿಕರು ಕಳೆದ ಐದಾರು ದಶಕಗಳಲ್ಲಿ ಅನುಭವಿಸಿದ ಕಷ್ಟಗಳೇನು ಎಂಬುದನ್ನು ತಿಳಿದುಕೊಂಡಿದ್ದಾರೆ. ಕಳೆದ ಹತ್ತು ವರ್ಷಗಳಲ್ಲಿ ಹಿಂದಿನ ಕಷ್ಟಗಳು ಕಳೆದು ದೇಶದ ಪ್ರತಿ ನಾಗರಿಕನ ಜೀವನ ಮಟ್ಟ ಸುಧಾರಣೆಯಾಗುತ್ತಿದೆ. ದೇಶದಲ್ಲಿ ಆಗಬೇಕಾದ ಕೆಲಸ ಇನ್ನೂ ಇದ್ದು, ಈ ಬಾರಿಯ ಚುನಾವಣೆ ನಮ್ಮ ಗುರಿ ಸಾಧಿಸುವಲ್ಲಿ ಮಹತ್ತರ ಘಟ್ಟವಾಗಿದೆ.


ಈ ಬಾರಿಯ ಚುನಾವಣೆ ದೇಶದ ಭವಿಷ್ಯ ಉಜ್ವಲವಾಗಿಸುವಲ್ಲಿ ಜನರಿಗೆ ಸಿಕ್ಕಿರುವ ಅವಕಾಶ ಎಂದುಕೊಳ್ಳುತ್ತೇನೆ. ಬಿಜೆಪಿಗೆ ಕೊಡುವ ಪ್ರತಿ ಮತವೂ ಸ್ಥಿರ ಸರಕಾರ ರೂಪಿಸುವಲ್ಲಿ ಮತ್ತು 2047ರ ವೇಳೆಗೆ ಅಭಿವೃದ್ಧಿ ಹೊಂದಿದ ದೇಶವಾಗಿಸುವಲ್ಲಿ ಮಹತ್ತರ ಕೊಡುಗೆ ನೀಡಲಿದೆ. ಈ ಮಹತ್ತರ ಗುರಿ ಸಾಧಿಸುವಲ್ಲಿ ದೇಶದ ಜನತೆ ಸ್ವಯಂಪ್ರೇರಿತವಾಗಿ ನಮ್ಮ ಜೊತೆಗೆ ಬೆಂಬಲವಾಗಿ ನಿಲ್ಲಲಿದ್ದಾರೆ ಮತ್ತು ಈ ಚುನಾವಣೆ ಮೂಲಕ ದೇಶವನ್ನು ಸಮೃದ್ಧವಾಗಿಸುವಲ್ಲಿ ಕೊಡುಗೆ ನೀಡಲಿದ್ದಾರೆ. ಬೇಸಿಗೆ ಸಮಯದಲ್ಲಿ ಚುನಾವಣೆ ಆಗುತ್ತಿರುವುದರಿಂದ ಜನರು ಸಮಸ್ಯೆ ಎದುರಿಸುತ್ತಿದ್ದಾರೆಂಬುದನ್ನು ತಿಳಿದಿದ್ದೇನೆ. ಆದರೆ ಈ ಬಾರಿಯ ಚುನಾವಣೆ ದೇಶದ ಭವಿಷ್ಯದ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿದೆ. ಹೀಗಾಗಿ ಬಿಸಿಲೇರುವ ಮೊದಲೇ ಬೆಳಗ್ಗೆ ಬೇಗನೇ ಮತ ಹಾಕುವಂತೆ ಮತದಾರರಿಗೆ ಮನವಿ ಮಾಡುತ್ತೇನೆ ಎಂದು ಮೋದಿ ಹೇಳಿದ್ದಾರೆ.


ಲೋಕಸಭಾ ಕ್ಷೇತ್ರದಲ್ಲಿ ಪ್ರತಿ ಬೂತ್ ಗೆಲ್ಲುವುದಕ್ಕಾಗಿ ನಮ್ಮ ಕಾರ್ಯಕರ್ತರು ಮತದಾರರಿಗೆ ಮತ ಹಾಕುವಂತೆ ಪ್ರೇರಣೆ ನೀಡುವುದು ಮುಖ್ಯವಾಗಿದೆ. ಪ್ರತಿ ಬೂತಿನಲ್ಲಿ ಅತಿ ಹೆಚ್ಚು ಮತ ಹಾಕಿಸಿ, ಬೂತ್ ಗೆದ್ದರೆ ಲೋಕಸಭೆ ಕ್ಷೇತ್ರವನ್ನು ಗೆಲ್ಲುವುದಕ್ಕೆ ಕೊಡುಗೆ ಕೊಟ್ಟಂತಾಗುತ್ತದೆ. ಇದೇ ವೇಳೆ, ಇತರ ಜನರಂತೆ ಪಕ್ಷದ ಕಾರ್ಯಕರ್ತರು ಕೂಡ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ಇಟ್ಟುಕೊಳ್ಳಬೇಕಾಗಿದೆ. ದೇಶದ ಅಭಿವೃದ್ಧಿ ಮತ್ತು ಜನರ ಕಲ್ಯಾಣಕ್ಕಾಗಿ ಪ್ರತಿ ಕ್ಷಣದಲ್ಲೂ ಬದ್ದತೆ ಹೊಂದಿದ್ದೇನೆಂದು ಪ್ರತಿ ಮತದಾರನಿಗೂ ತಿಳಿಸಲು ಇಚ್ಚಿಸುತ್ತೇನೆ ಎಂದು ಪ್ರಧಾನಿ ಮೋದಿ, ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top