ನೆನಪಿನಾಳದಿಂದ: ಕಾರಂತರ ಸಾಮಾಜಿಕ ಚಿಂತನೆ, ಭಾವೀ ಜನಾಂಗದ ಬಗ್ಗೆ ಕಾಳಜಿ

Upayuktha
0





-ಈಶ್ವರ ದೈತೋಟ


ಕಾರಂತರ ಸಾಮಾಜಿಕ ಚಿಂತನೆ ಮುಂದಿನ ಜನಾಂಗದ ಬಗೆಗಿನ ಕಾಳಜಿಯೊಂದಿಗೆ ಪ್ರಕಟಗೊಳ್ಳುತ್ತದೆ. ಸ್ವತಃ ತಮ್ಮ ಮಕ್ಕಳನ್ನು ಬೆಳೆಸುವುದರಿಂದ ಹಿಡಿದು ನಾಡಿನ ಎಲ್ಲ ಮಕ್ಕಳ ಮಾನಸಿಕ ಅಭ್ಯುದಯಕ್ಕೆ ಅವರು ನಡೆಸಿದ ಪ್ರಯೋಗಗಳು, ಪ್ರಾಮಾಣಿಕ ಪ್ರಯತ್ನಗಳು ಈ ಹಿರಿಯರ ಹೃದಯದಾಳವನ್ನು ತೆರೆದಿಡುತ್ತವೆ.


ಮಕ್ಕಳ ಓದು, ಕಲಿಕೆ, ಮನರಂಜನೆ ಆ ಚಿಣ್ಣರ ವ್ಯಕ್ತಿತ್ವ ವಿಕಸಿಸುವಂತಿರಬೇಕು ಎಂಬ ಮಹದಾಸೆಯಿಂದ ಪುತ್ತೂರಿನಲ್ಲಿ ಕಾರಂತರು ಸ್ಥಾಪಿಸಿದ ಬಾಲವನ, ನಿರಂತರವಾಗಿ ದುಡಿದು ರಚಿಸಿದ ವೈಜ್ಞಾನಿಕ ವಿಷಯ ವಿಶ್ವಕೋಶಗಳು, ಜಾನಪದ ಪ್ರಯೋಗಗಳು- ಹೀಗೆ ಪ್ರತಿಯೊಂದೂ ಅವರ ಸಾಮಾಜಿಕ ಕಳಕಳಿಗೆ ಅವಿಚ್ಛಿನ್ನ ಸಾಕ್ಷಿಯಾಗಿ ಬೆಳಗುತ್ತವೆ.


ಮಹಾತ್ಮಾ ಗಾಂಧಿಯವರ ಅಸಹಕಾರ ಚಳುವಳಿ ಕರೆಗೆ ಓಗೊಟ್ಟು, ಕಾಲೇಜು ವಿದ್ಯಾಭ್ಯಾಸ ತ್ಯಜಿಸಿ ಸಾರ್ವಜನಿಕ ಬದುಕಿಗೆ ತಮ್ಮನ್ನು ತಾವು ಸಮರ್ಪಿಸಿಕೊಂಡಾಗ ಕಾರಂತರ ವಯಸ್ಸು ಕೇವಲ 18. ಸ್ವಾತಂತ್ರ್ಯದ ಬಗ್ಗೆ ಜನಜಾಗೃತಿ ಮೂಡಿಸುವುದರೊಂದಿಗೆ ಅವರ ಬದುಕಿಗೆ ಮಹತ್ವದ ತಿರುವು ಬಂದಿತು. ಮುಂದೆ ಅವರು ರಂಗಭೂಮಿ, ಸಾಹಿತ್ಯ, ಪತ್ರಿಕೋದ್ಯಮವನ್ನು ಈ ಮಹತ್ತರ ಉದ್ದೇಶಕ್ಕೆ ಬಳಸಿಕೊಂಡರು.


1932ರಲ್ಲಿ ಕಾರಂತರು 'ವಸಂತ' ಎಂಬ ವಾರಪತ್ರಿಕೆ ಹೊರಡಿಸುವುದರೊಂದಿಗೆ ಅವರ ಪತ್ರಿಕೋದ್ಯಮ ಪ್ರತಿಭೆ ಮೊಳಕೆಯೊಡೆಯಿತು. ಈ ಪತ್ರಿಕೆ ಅವರ ಚಿಂತನೆಯ ಮುಖವಾಣಿಯಾಗಿತ್ತು. ಮೊದಲ ಂಪಾದಕೀಯದಲ್ಲಿಯೇ ''ದೇಶಸೇವೆ, ಈಶಸೇವೆ, ಭಾಷಾ ಸೇವೆ''ಗಾಗಿ ವಸಂತ ಜನ್ಮ ತಾಳಿದ್ದಾನೆಂಬ ಇಂಗಿತ ಅದರಲ್ಲಿತ್ತು. ಕಥೆ, ಕಾದಂಬರಿ, ವಿಡಂಬನೆ, ಅನುವಾದ, ಸ್ವತಂತ್ರ ಲೇಖನ, ಮುಂತಾಗಿ ಹಲವು ಬಗೆಯ ಬರಹಗಳ ಮುಖಾಂತರ ಅವರು ತಮ್ಮ ಉದ್ದೇಶ ಸಾಧನೆಗೆ ಮುನ್ನಡೆದರು.


ಕಾರಂತರ ಉಗ್ರ ರಾಷ್ಟ್ರಪ್ರೇಮ ಇದರಲ್ಲಿ ಪ್ರಕಾಶಿಸಿತು. ಬ್ರಿಟಿಷರ ಕ್ರೂರ ಆಡಳಿತದ ಮೇಲೆ ಪ್ರಹಾರ ನಡೆಸತೊಡಗಿದ ನಿರ್ಭೀತಿಯ ಯುವಕನ ಆದರ್ಶ ಜನಮನ ಸೆಳೆಯಿತು. ಜೊತೆಗೆ ಅವರ ಸಾಮಾಜಿಕ ಸುಧಾರಣಾ ಮನಸ್ಸು ಕೂಡಾ ಜಾಗೃತಗೊಂಡಿತ್ತು. ಅಸ್ಪೃಶ್ಯತಾ ನಿವಾರಣೆ, ಮದ್ಯಪಾನ ನಿಷೇಧ, ಬಾಲ್ಯವಿವಾಹ ಖಂಡನೆ, ವಿಧವಾ ವಿವಾಹ ಪ್ರಚಾರ, ಮೂಢನಂಬಿಕೆ ವಿರುದ್ಧ ಹೋರಾಟ ಅವರ ಬರಹಗಳಲ್ಲಿ ಬಿಂಬಿಸಲ್ಪಟ್ಟವು.



ವಸಂತ ಪತ್ರಿಕೆ ಕಾರಂತರೊಳಗಿದ್ದ ಬರಹಗಾರನನ್ನು ಹೊರಗೆಳೆದು ತಂದಿತು. ಅಷ್ಟೇ ಅಲ್ಲ, ಬರಹಕ್ಕೆ ವಿವಿಧ ಆಯಾಮ ನೀಡಿ ಪಕ್ವತೆ ತಂದು ಕೊಟ್ಟಿತು ಎಂದು ಅವರ ನಿಕಟವರ್ತಿಗಳು ಗುರುತಿಸಿದ್ದಾರೆ.


ಆದರೆ ಸ್ವಾತಂತ್ರ್ಯ ಹೋರಾಟ, ಸಮಾಜ ಸೇವೆಗೆ ಅಪ್ರತಿಮ ನೆರವು ನೀಡಿದ 'ವಸಂತ' ಆರ್ಥಿಕವಾಗಿ ನೆಲೆ ಕಂಡುಕೊಳ್ಳಲಾರದೆ ಹೋಯಿತು. ಅಂತಹ ಸಂದರ್ಭ ಅವರ ಸಂಪಾದಕೀಯ ಹೀಗಿತ್ತು:


''ಧೋರಣೆಯಿಲ್ಲದ ಜೀವನಕ್ಕಿಂತ ಮರಣವೇ ಮಾನ್ಯವೆಂದು ನಮ್ಮ ನಂಬುಗೆ. ವಸಂತದಂತಹ ಪತ್ರಿಕೆಯೊಂದು ಕರ್ನಾಟಕಕ್ಕೆ ಅವಶ್ಯವಿರುವುದಾದರೆ ನಾಡಿನವರು ಅದನ್ಉ ಉಳಿಸಲಿ. ಕೇವಲ ವ್ಯಾಪಾರೀ ದೃಷ್ಟಿಯಿಂದ ವಸಂತವನ್ನು ನಡೆಯಿಸುವುದಕ್ಕಿಂತ ಪತ್ರಿಕೆಯು ನಿಂತರೂ ನಾವು ಬೇಸರ ಪಡುವುದಿಲ್ಲ. ಪತ್ರಿಕೆಯನ್ನು ಕಥೆಗಾಗಿ ಇರಿಸುವುದೂ, ಗ್ರಾಹಕರ ಮನೋಲಹರಿಗಳಿಗೆ ಸರಿಯಾಗಿ ಸ್ವರೂಪ ಬದಲಾಯಿಸುವುದೂ ಧ್ಯೇಯಾತ್ಮಕ ದೃಷ್ಟಿಯಿಂದ ಸರಿಯಾಗಲಾರದು''.


ಎರಡು ವರ್ಷಗಳಲ್ಲಿಯೇ ವಸಂತ ಕೊನೆಗೊಂಡಿತು. ಆದರೆ ಕಾರಂತರು ಮಾಧ್ಯಮದ ಮಹತ್ವವನ್ನು ಆಗಲೇ ಕಂಡುಕೊಂಡಿದ್ದರು. ಪುನಃ ವಸಂತವನ್ನು ಹುಟ್ಟುಹಾಕಿ 5 ಸಂಪುಟಗಳನ್ನು ಮುನ್ನಡೆಸಿ 1930ರಲ್ಲಿ ಮತ್ತೆ ನಿಲ್ಲಿಸುವ ಪರಿಸ್ಥಿತಿ ಬಂತು.


ಸ್ವಾತಂತ್ರ್ಯಾನಂತರ ವರ್ಷಗಳಲ್ಲಿ ಕಾರಂತರು ಕರ್ನಾಟಕ ಏಕೀಕರಣ ಚಳವಳಿಯಲ್ಲಿ ಪಾಲುಗೊಂಡರು. 1951ರಲ್ಲಿ ಪುನಃ ಪತ್ರಿಕಾ ಪ್ರಪಂಚಕ್ಕೆ ಇಳಿದು 'ವಿಚಾಋವಾಣಿ' ಎಂಬ ಹೊಸ ವಾರ ಪತ್ರಿಕೆಯನ್ನು ಹುಟ್ಟುಹಾಕಿ ಮುಖವಾಣಿಯನ್ನಾಗಿಸಿಕೊಂಡರು. ರಾಜಕೀಯ ದೃಷ್ಟಿಕೋನಗಳೊಂದಿಗೆ ಎಂದಿನಂತೆ ಸಾಹಿತ್ಯ, ಕಲೆ, ಶಿಕ್ಷಣ, , ಕೈಗಾರಿಕೆ, ಗುಡಿಕೈಗಾರಿಕೆ, ಕನ್ನಡ ನಾಡು ನುಡಿಗಳ ಸಮಗ್ರ ಅಭಿವೃದ್ಧಿಗೆ ಮಾಧ್ಯಮವನ್ನಾಗಿಸಿ ಮುನ್ನಡೆದರು. ವಿಜ್ಞಾನ ಸಂಶೋಧನೆಗಳ ಬಗ್ಗೆ ಸರಳ ಭಾಷೆಯಲ್ಲಿಅನೇಕ ಲೇಖನಗಳು ಇದರಲ್ಲಿ ಅಚ್ಚಾಗುತ್ತಿದ್ದುದು ವಿಶೇಷ. ಕೆಲವೇ ವರ್ಷಗಳಲ್ಲಿ ವಿಚಾರವಾಣಿ ಕೈ ಬದಲಾಯಿಸಿ ಮತ್ತೊಂದು ದಶಕ ಕಾಲ ಮುಂದುವರಿದಿತ್ತು.


ಯಾವ ಪತ್ರಿಕೆಯೇ ಆಗಲಿ ತನ್ನನ್ನು ಕೇಳಿಕೊಳ್ಳಬೇಕಾದ ಪ್ರಶ್ನೆಯಿದೆ ಎಂಬುದನ್ನು ಕಾರಂತರು ಆಗಲೇ ಗುರುತಿಸಿದ್ದರು. ಯಾವ ಕೊರತೆ ನೀಗಿಸಲು ಅದು ಕೆಲಸ ಮಾಡುತ್ತದೆ ಎಂಬ ಸ್ಪಷ್ಟ ಕಲ್ಪನೆ ಸಂಪಾದಕನಿಗಿರಬೇಕು ಎನ್ನುತ್ತಾರೆ ಕಾರಂತರು.


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top