ಸಿದ್ಧರಾಮಯ್ಯ ಮತ್ತು ಡಿಕೆಶಿ ನಮಗೆ ಉತ್ತರ ಕೊಡಿ

Upayuktha
0



- ವೀಣಾ ಬನ್ನಂಜೆ 


ಬೆಂಗಳೂರು ಕರ್ಣಾಟಕದ ರಾಜಧಾನಿ. ಇಲ್ಲಿಯೇ ಹೀಗಾದರೆ ಉಳಿದೆಲ್ಲ ಕಡೆ ಏನು ಗತಿ? ಒಬ್ಬ ಹನುಮಾನ್ ಚಾಲೀಸ್ ಹಾಡು ಹಾಕಿದ್ದಕ್ಕೆ ಹೊಡೆದರು. ಎರಡು ದಿನ ಫೇಸ್ಬುಕ್ ನಿಮ್ಮ ಮುಖಕ್ಕೆ ಉಗಿಯಿತು, ಮರೆಯಿತು. ಒಂದು ಕೆಫೆಟೇರಿಯಾದಲ್ಲಿ ಬಾಂಬ್. ಈಗ ಅಪರಾಧಿಯನ್ನು ಹಿಡಿಯುವ ಸುದ್ದಿ ಜಾರಿಯಲ್ಲಿದೆ. ಆಗ ಜನರಲ್ಲಿ ಹುಟ್ಟಿದ ಭಯ? ಮತ್ತದೇ ಹಳೆಯ ದಾರಿ, ಮರೆವು. ಒಂದಿಷ್ಟು ಹುಡುಗರು ಹಗಲು ಹೊತ್ತು ಮಚ್ಚು ತಲ್ವಾರ್ ಹಿಡಿದು ಬೈಕ್ ಓಡಿಸಿದರು. ಅದೊಂದು ದಿನ ಬೆಂಗಳೂರು ಸೇಫ್ ಅಲ್ಲ ಅಂತ ಸಾಮಾಜಿಕ ಜಾಲತಾಣದ ಸುದ್ದಿಯಾಯಿತು. ಮತ್ತೆ ಮರೆವೇ ವರ. ಅಷ್ಟರಲ್ಲಿ ಒಂದು ಹೋಟೆಲಿನಲ್ಲಿ ರಾತ್ರಿ ಎಂಟು ಗಂಟೆಗೆ ಒಬ್ಬನನ್ನು ಗುಂಡು ಹೊಡೆದು ಕೊಲ್ಲಲಾಯಿತು. ಇದೆಲ್ಲ ಬೆಂಗಳೂರಿನಲ್ಲಿ ಇರಲೇ ಇಲ್ಲ. ಯಾಕೆ ಹೀಗೆ? ಜನ ಸ್ವಲ್ಪ ಹೊತ್ತು ಕೂಗಾಡಿದರು. ಮತ್ತೆ ಎಲ್ಲಿಯ ನೆನಪು? 


ನಿಮಗೆ ಚೆನ್ನಾಗಿ ಗೊತ್ತಿದೆ. ಜನರು ಮರೆಯುತ್ತಾರೆ. ನೀವು ಹಾಗೆಯೇ ಇರುವುದು ಎಂದು ತೀರ್ಮಾನಿಸಿದಂತಿದೆ. ಯಾವ ಬೇಜವಾಬ್ದಾರಿ ನಾಯಕತ್ವ ನಿಮ್ಮದು? ನೀವು ಮುಮನೋ ಉಮುಮನೋ ನಮಗೆ ಬೇಕಿಲ್ಲ. ಇಲ್ಲಿ ಒಂದು ವ್ಯವಸ್ಥೆ ಇದೆ. ಇದರಲ್ಲಿ ಹಲವರು ಬದುಕುತ್ತಿದ್ದಾರೆ. ಅವರು ನಿಮ್ಮ ನಾಯಕತ್ವ ಒಪ್ಪಿದ್ದಾರೋ, ಬಿಟ್ಟಿದ್ದಾರೋ ಅವರೆಲ್ಲರನ್ನೂ ರಕ್ಷಿಸುವ ಹೊಣೆ ನಿಮ್ಮದು. ಮತದಿಂದ ಆಯ್ಕೆ ಆದ ಮಾತ್ರಕ್ಕೆ ಮತ ಚಲಾಯಿಸದವರನ್ನು ಕೆಣಕುವ ಹಕ್ಕು ನಿಮಗಿಲ್ಲ. ಒಂದು ರಾಜ್ಯದ ಪ್ರತೀ ಪ್ರಜೆಯ ಸುಖದುಃಖ ನಿಮ್ಮ ಹೊಣೆ. ರಾಜ್ಯದ ಪ್ರತಿಯೊಬ್ಬ ಪ್ರಜೆಯೂ ಸುಖವಾಗಿ ಇರಬೇಕು. ಇಲ್ಲದಿದ್ದರೆ ರಾಜ ಕೂಡ ಕ್ಷೇಮವಾಗಿ ಇಲ್ಲ ಎಂದು ಅರ್ಥ. ಇದು ಭೀಷ್ಮರು ಶಾಂತಿಪರ್ವದಲ್ಲಿ ಹೇಳುವ ಉಪದೇಶ. ಇದರ ಒಳಾರ್ಥ ತಿಳಿದುಕೊಳ್ಳಿ. ಆಗ ನಿಮಗೆ ಹೆಚ್ಚು ಚೆನ್ನಾಗಿ ಅರ್ಥ ಆಗುತ್ತದೆ. 


ಒಬ್ಬಳು ಹರ್ಷಿಕಾ ಪೂಣಚ್ಚ ನಟಿ. ತಾನು ರಸ್ತೆಯಲ್ಲಿ ತನ್ನ ಗಂಡನ ಜೊತೆ ಕಾರಿನಲ್ಲಿ ಅನುಭವಿಸಿದ ಹಿಂಸೆಯನ್ನು ವಿವರಿಸುತ್ತಾಳೆ. ಪೋಲಿಸರಿಗೆ ಹೇಳಿದರೆ ಅವರು ಕೇಸ್ ದಾಖಲಿಸುವುದಿಲ್ಲ. ಕ್ಷಮೆ ಇರಲಿ ನಾಗರೀಕರೇ  ಈ ಆರಕ್ಷಕರು ನಿರ್ವೀರ್ಯ ನಪುಂಸಕರಾಗುತ್ತಿದ್ದಾರೆ. ಯಾರಿಗಾಗಿ, ಯಾತಕ್ಕಾಗಿ? ಪ್ರಮೋಷನ್, ಕೇಳಿದ ಹುದ್ದೆ, ಸ್ಥಳ ಎಲ್ಲ ಬೇಕಲ್ಲ? ನಾಚಿಕೆಗೇಡು! ಇಂಥವರು ನಮ್ಮನ್ನು ರಕ್ಷಿಸುತ್ತಾರೆ. (ಒಳ್ಳೆಯ ಪೋಲಿಸ್ ಅಧಿಕಾರಿಗಳು ಕ್ಷಮಿಸಲಿ. ಆದರೆ ನಿಮ್ಮಲ್ಲಿ ಒಂದು ವಿನಂತಿ -ಇಂಥ ಕೆಟ್ಟ ಪೋಲೀಸರನ್ನು ಸರಿದಾರಿಗೆ ತನ್ನಿ. ನಿಮಗೊಂದು ಸೆಲ್ಯೂಟ್.) ನಾಗರಿಕರೇ ಇದು ಕೇವಲ ಹರ್ಷಿಕಾರ ಸಮಸ್ಯೆ ಎಂದು ಸುಮ್ಮನಿರಬೇಡಿ. ನಮ್ಮ ಮನೆಯ ಕಾರು ಚಾಲಕನಿಗೆ ತಾನಾಗಿ ಬಂದು ಹೊಡೆದ ವಾಹನಕ್ಕೆ ಕೇಸ್ ಹಾಕಲಿಲ್ಲ ಪೋಲಿಸ್. ಇದು ನಮ್ಮ ನಿಮ್ಮ ಎಲ್ಲರಿಗೂ ನಾಳೆ ಆಗಲಿಕ್ಕಿದೆ. 


ಇಷ್ಟೆಲ್ಲ ಬೆಂಗಳೂರಿನ ಕತೆ. ಇಷ್ಟಾದರೂ ಬೆಂಗಳೂರು ಹಾಯಾಗಿದೆ. ಫೇಸ್ಬುಕ್ ಸ್ವಲ್ಪ ದಿನ ಉರಿಯುತ್ತದೆ. ಸಿದ್ಧರಾಮಯ್ಯ ಡಿಕೆಶಿ ಅಂಥವರಿಗೆ ಎಮ್ಮೆ ಚರ್ಮ, ಎಲ್ಲೋ ಏನೋ ಆಯಿತಂತೆ... ಎಂಬಂತೆ ಇರುತ್ತಾರೆ. ಯಾಕೆಂದರೆ  ಹೊಡೆದವರು ಅವರನ್ನು ಸಾಕಿದವರಲ್ಲವೇ? ಮೈಕೊಬ್ಬಿಗೆ ಏನು ಬೇಕೋ ಅದನ್ನೂ ಚೆನ್ನಾಗಿ ಕೊಟ್ಟಿದ್ದಾರೆ. ನಾಳೆ ಕಡಿದು ತಿನ್ನುವಾಗ ಒಳ್ಳೆಯ ಮಾಂಸ ಬೇಕಲ್ಲ, ಸಾಕುವವರಿಗೆ ಗೊತ್ತಿದೆ. ಎಮ್ಮೆ ತಮ್ಮಣ್ಣಗಳಿಗೆ ಏನು ಗೊತ್ತು ಪಾಪ!


ಇದೀಗ ಈ ಆರ್ಭಟ ಬೆಂಗಳೂರು ದಾಟಿದೆ. ಮೈಸೂರಿನಲ್ಲಿ ಮೋದಿ ಕುರಿತು ಹಾಡು ಬರೆದವರನ್ನು ಬಡಿಯಿತು. ಇದೆಲ್ಲ ಕಂಡೂ ಕಾಣದಂತೆ ಇದ್ದಾರೆ ಮಹಾಮಹಿಮ ಬುದ್ಧಿಜೀವಿಗಳು. ದಸರಾದಲ್ಲಿ ಸಾಹಿತಿ ಎಂದು ಮೆರೆದವರಿದ್ದಾರೆ. ಸಾಹಿತ್ಯ, ಸಾಹಿತಿ ಈ ಪ್ರಜ್ಞೆ ಕೂಡ ಇಲ್ಲದೇ ಸರ್ಕಾರದ  ಕೃಪೆಗೆ ಕಾದಿದ್ದಾರೆ. ಮುಂದೆ ಅಕಾಡೆಮಿ, ಪ್ರಶಸ್ತಿ ಈ ಲೆಕ್ಕಾಚಾರದಲ್ಲಿ‌.... ಅನ್ಯಾಯ ಪ್ರತಿಭಟನೆ ಛೆ ಛೆ ಹೇಗೆ ನಿರೀಕ್ಷೆ ಮಾಡುವುದು? ಅವರ ಅಸಹಾಯಕತೆಗೆ ಮರುಕ ಪಡಬೇಕು. ಪದ್ಯ ಮಾತ್ರ ಯೂಟ್ಯೂಬ್ ನಲ್ಲಿ ರಾರಾಜಿಸುತ್ತಿದೆ. ಅದಕ್ಕೆ ಪ್ರತಿಸಾಹಿತ್ಯ ರಚಿಸಿ ಹೊಡೆಯುವ ಪ್ರತಿಭೆಯ ಕೆಚ್ಚನ್ನು ಕಳೆದುಕೊಂಡಾಗಿದೆ. ದೇಹಕ್ಕೆ ಹೊಡೆದರೆ ಹಾಡು ಹರಿದೀತೇ? ನಿಲ್ಲಿಸಲಾಗದಂತೆ ಓಡುತ್ತಿದೆ. ನಿಂತೀತೇ, ನಿಲ್ಲಿಸಲಾದೀತೇ ಅದನ್ನು? 


ಈಗ ನೇಹಾಳ ಸರದಿ. ಕಾಲೇಜಿನ ಆವರಣದಲ್ಲಿ... ಎಂಥಾ ಹಗಲು ಹೊತ್ತಿನಲ್ಲಿ... ಹಿಂದೂ ಹೆಣ್ಣು ಮಕ್ಕಳನ್ನು ತಂದೆ ತಾಯಿ ಶಾಲೆಗೆ ಕಳಿಸ ಬಾರದು. ಅಂಥದೊಂದು ಭಯ ಹುಟ್ಟಿಸುವ ಹುನ್ನಾರ. ಈ ಮುಮ ಹೇಳುತ್ತಾರೆ... ಅದು ವೈಯಕ್ತಿಕ. ಈ ಮಟ್ಟಕ್ಕೆ ಒಬ್ಬ ಮನುಷ್ಯ ಇನ್ನೊಬ್ಬರಿಗೆ ಮಾರಿ ಕೊಳ್ಳುವುದಾ? ನಿಮಗೆ ಇನ್ನೂ ತನಕವೂ ಕಣ್ಣೀರು, ಧರ್ಮ ಇವು ಅರ್ಥ ಆದಂತಿಲ್ಲ. ಹಿಂದೊಬ್ಬ ತಾಯಿಯ ಕಣ್ಣೀರಿಗೆ ನೀವು ಕಾಣಬಾರದ್ದನ್ನು ಕಂಡಿರಿ. ಆದರೂ ನಿಮಗೆ ಕಾಣದ ಕುರುಡು. ಹೊಡೆದ ಕೈಗಿಂತಲೂ ಕಣ್ಣೀರಿನ ಹನಿಯ ಹಿಂದಿರುವ ನೋವಿನ ಶಾಪ ಬಹಳ ಬಲಿಷ್ಠ. ನಿಮಗೆ ಮತ್ತೆ ಹೊಸ ಗಾಯ ಆಗದಿರಲಿ. ಬೇಗನೇ ಕಣ್ಣೀರಿನ ಅರ್ಥ ತಿಳಿಯಿರಿ. ಕಣ್ಣೀರಿನಲ್ಲಿ ಜಾತಿ ಹುಡುಕಬೇಡಿ. 


ನಾವು ನೆನಪಿಟ್ಟು ಕೊಂಡಿದ್ದೇವೆ. ಇದು ಹೋಟೆಲ್ ನಲ್ಲಿ, ಬೀದಿಯಲ್ಲಿ, ಬರೆಯುವ ನಮ್ಮ ಸ್ವಾತಂತ್ರ್ಯದಲ್ಲಿ ಈಗ ನಾವು ಓದಿಸುವ ನಮ್ಮ ಮಕ್ಕಳ ಶಾಲೆಯಲ್ಲಿ ನೀವು ಹುಟ್ಟಿಸುತ್ತಿರುವ ಭೀತಿ. ಬೆಂಗಳೂರು , ಅಲ್ಲಿಂದ ಮೈಸೂರು, ಹಾಗೆಯೇ ಹುಬ್ಬಳ್ಳಿ ಹೀಗೆ ಕರ್ಣಾಟಕದಾದ್ಯಂತ ನಿಮ್ಮ ವ್ಯಾಪಾರ.ಇನ್ನು ನಿಧಾನ ನೀವು ನಮ್ಮ ಮನೆಯ ಒಳಗೂ ಬರಬಹುದು. ನೆನಪಿರಲಿ ಅದು ನಿಮ್ಮ ಮನೆಯನ್ನೂ ಸುಡುತ್ತದೆ. 


ಮತ್ತೂ ಒಂದು ಮಾತು. ನಾವು ಎಲ್ಲವನ್ನೂ ಮರೆತಿದ್ದೇವೆ ಎಂದು ನಿಮಗೆ ಕಾಣುತ್ತದೆ. ನಮಗೆ ಯಾವುದನ್ನು ಎಲ್ಲಿ ನೆನಪಿಟ್ಟು ಕೊಳ್ಳಬೇಕು ಎಂದು ಹಿರಿಯರು ಹೇಳಿಕೊಟ್ಟಿದ್ದಾರೆ. ನಾವು ಅಷ್ಟು ದಿನ ಹಾಗೆ ತಾಳ್ಮೆಯಿಂದ ಕಾಯುತ್ತೇವೆ. ನಿಮ್ಮ ಈ ಹಣದ ಗ್ಯಾರಂಟಿಯ ಆಚೆಗೆ ನೀವು ಉಳಿಸುವ ಸಂಸ್ಕೃತಿ ಎಂಥದು? ನಮ್ಮ ಬದುಕಿಗೆ ನೀವು ಕೊಡುತ್ತಿರುವ ಬೆಲೆ ಏನು? ಯಾರು ನಿಮಗೆ ಮುಖ್ಯರು? ಯಾಕೆ? ಈ ಎಲ್ಲ ಪ್ರಶ್ನೆಗಳಿಗೆ ನೀವು ಒಂದು ದಿನ ಉತ್ತರಿಸಲಿಕ್ಕಿದೆ.


ನಿಮಗೆ ಹನುಮಾನ್ ಚಾಲೀಸ್ ಹಾಕಿದವನ ಸಂಬಂಧ ಇಲ್ಲವೇ? ಹರ್ಷಿಕಾ ನಿಮ್ಮ ರಾಜ್ಯದ ಪ್ರಜೆ ಅಲ್ಲವೇ? ಹಾಡು ಬರೆದ ಹುಡುಗ ಕರ್ಣಾಟಕದವನು ಎಂಬುದನ್ನು ಒಪ್ಪುತ್ತೀರಾ? ನೇಹಾ ಈ ರಾಜ್ಯದ ಹೆಣ್ಮಗಳು ತಾನೇ? ಇದು ಹೌದೆಂದಾದರೆ ಇನ್ನೊಮ್ಮೆ ಭೀಷ್ಮರು ಹೇಳಿದ ಮಾತು ಓದಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top