ಬೇಸಗೆಯ ಧಗೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಉರಿಬಿಸಿಲಿನ ಕಾವನ್ನು ಸಹಿಸಿಕೊಳ್ಳುವುದು ಮನುಷ್ಯರಿಗೆ ಬಿಡಿ, ಪ್ರಾಣಿಗಳಿಗೂ ಸವಾಲಾಗಿ ಪರಿಣಮಿಸಿದೆ. ಆದರೆ ಇನ್ನು ಕೆಲವೇ ದಿನಗಳ ಅಂತರದಲ್ಲಿ ನಡೆಯಲಿರುವ ರಾಷ್ಟ್ರವ್ಯಾಪಿ ಚುನಾವಣೆಯ ಕಾವು ಮಾತ್ರ ಬೇರೆಲ್ಲ ಕಾವನ್ನೂ ಹಿಂದಿಕ್ಕಿ ಮೇಲೇರುತ್ತಲೇ ಇದೆ! ಆಯೋಗದಿಂದ ಘೋಷಣೆಯಾದ ಕ್ಷಣದಿಂದಲೇ ರಾಜಕೀಯ ಪಕ್ಷಗಳ ಟಿಕೆಟ್ ಆಕಾಂಕ್ಷಿಗಳ ದಂಡು ತಮಗೇ ಟಿಕೆಟ್ ಸಿಗಬೇಕೆಂದು ಪಟ್ಟುಹಿಡಿದು ತಮ್ಮ ಪಕ್ಷಗಳ ಹೈಕಮಾಂಡಿನ ಕೃಪೆಯನ್ನು ತಮ್ಮತ್ತ ತಿರುಗಿಸಿಕೊಳ್ಳಲು ಹಗಲಿರುಳೆನ್ನದೆ ಹರಸಾಹಸ ಪಟ್ಟ ರೀತಿ, ನಡೆಸಿದ ಸರ್ಕಸ್ಸು, ಬೆಂಬಲಿಗರಿಂದ, ವಿವಿಧ ಕ್ಷೇತ್ರಗಳ ಪ್ರಭಾವಿ ವ್ಯಕ್ತಿಗಳಿಂದ, ವಿವಿಧ ಜಾತಿಗಳ ಮುಖಂಡದಿಂದ ಹಾಗೂ ವಿವಿಧ ಸಮುದಾಯಗಳ ಮಠಾಧೀಶರಿಂದ ಹೇರಿದ ಒತ್ತಡಗಳನ್ನೆಲ್ಲ ಗಮನಿಸಿದರೆ ಬೇಸಗೆಯ ಕಾವು ಇವರಿಗೆ ತಟ್ಟಿಯೇ ಇಲ್ಲವೇನೋ ಎಂಬ ಸಂಶಯ ಯಾರಿಗಾದರೂ ಉಂಟಾಗುವುದು ಸಹಜ. ತಮ್ಮ ಕ್ಷೇತ್ರಗಳ ಅಭಿವೃದ್ಧಿಯನ್ನು ಸಾಧಿಸಲು, ತಮ್ಮ ಜಾತಿ-ಸಮುದಾಯಗಳನ್ನು ಉದ್ಧರಿಸಲು ತಮ್ಮಷ್ಟು ಅರ್ಹರು ಬೇರಾರೂ ಇಲ್ಲವೆಂಬ ಇವರ ವಾದಸರಣಿಗಳನ್ನು ಕೇಳಿಸಿಕೊಂಡರೆ ಆ ಕಾವಿನ ಮುಂದೆ ಬೇಸಗೆಯ ಈ ಕಾವು ಲೆಕ್ಕಕ್ಕೇ ಬರುವುದಿಲ್ಲ! ವಿರೋಧಿಗಳ ಕಾಲೆಳೆಯುವಲ್ಲಿ ಇವರು ತೋರುವ ’ಬುದ್ಧಿವಂತಿಕೆ’, ಯೇನಕೇನ ಪ್ರಕಾರೇಣ ಮತದಾರರ ದಿಕ್ಕು ತಪ್ಪಿಸಿ ತಮ್ಮ ಬೇಳೆ ಬೇಯಿಸಿಕೊಳ್ಳಲು ಇವರು ಹೆಣೆಯುವ ಕುತಂತ್ರ-ಷಡ್ಯಂತ್ರಗಳನ್ನು ಗಮನಿಸಿದರೆ ಜೀವನದಿ ಕಾವೇರಿ ಬತ್ತಿ ಬರಡಾದರೂ ಸಹ ಯಾರೊಬ್ಬರ ಗಮನಕ್ಕೂ ಬಂದೇ ಇಲ್ಲವೇನೋ ಎಂಬಷ್ಟರ ಮಟ್ಟಿಗೆ ಕಾವೇರಿದೆ ಈ ಚುನಾವಣಾ ರಣಾಂಗಣ! ಪರಸ್ಪರರ ಮೇಲೆ ಕೆಸರೆರಚಲು ಅಭ್ಯರ್ಥಿಗಳು ಬಳಸಿದ-ಬಳಸುತ್ತಿರುವ ಪದಗಳನ್ನು, ಪ್ರಯೋಗಿಸಿದ-ಪ್ರಯೋಗಿಸುತ್ತಿರುವ ಭಾಷೆಗಳನ್ನು, ನಡೆಸಿದ-ನಡೆಸುತ್ತಿರುವ ಮಸಲತ್ತುಗಳನ್ನು ಗಮನಿಸಿದರೆ ಸಭ್ಯತೆ-ಸಂಸ್ಕೃತಿ-ತತ್ತ್ವಗಳಿಗೂ ರಾಜಕೀಯಕ್ಕೂ ಸಂಬಂಧವೇ ಇರಕೂಡದೆಂಬ ನಿರ್ಧಾರವನ್ನೇ ಆಧುನಿಕ ಸಮಾಜ ಮಾಡಿಬಿಟ್ಟಿದೆಯೇನೋ ಎಂಬ ಸಂಶಯ ಪ್ರಜ್ಞಾವಂತ ಮತದಾರನನ್ನು ಕಾಡುತ್ತಿದೆ!
ಕೇವಲ ನಾಲ್ಕೈದು ದಶಕಗಳ ಹಿಂದೆ ಈ ದೇಶದಲ್ಲಿ ನಡೆಯುತ್ತಿದ್ದ ಚುನಾವಣೆಯ ಸನ್ನಿವೇಶಗಳನ್ನು ಗಮನಿಸಿದರೆ ಒಂದು ಸಂಗತಿಯಂತೂ ಸ್ಪಷ್ಟವಾಗುತ್ತದೆ. ಆಗೆಲ್ಲ ಯಾವುದೇ ರಾಜಕೀಯಪಕ್ಷದ ಹೈಕಮಾಂಡ್ ಬೇರೆ ಬೇರೆ ಕ್ಷೇತ್ರಗಳಿಗೆ ತನ್ನ ಪಕ್ಷದಿಂದ ಯಾರು ಯಾರನ್ನು ಅಭ್ಯರ್ಥಿಗಳನ್ನಾಗಿ ಘೋಷಿಸುತ್ತಿತ್ತೋ ಅವರನ್ನು ಪಕ್ಷದ ಇನ್ನಿತರ ಮಂದಿ ಯಾವೊಂದು ತಕರಾರೂ ಇಲ್ಲದೆ ಒಪ್ಪಿಕೊಂಡು ಚುನಾವಣೆಯಲ್ಲಿ ಅವರನ್ನು ಗೆಲ್ಲಿಸುವ ಒಂದೇ ಉದ್ದೇಶದಿಂದ ತಮ್ಮೆಲ್ಲರ ಶ್ರಮವನ್ನೂ ವ್ಯಯಿಸುತ್ತಿದ್ದ ಅಂದಿನ ದಿನಗಳೆಲ್ಲಿ? ತಮಗೇ ಸೀಟು ಕೊಡಬೇಕೆಂಬ ಹಠವನ್ನು ಮುಂದಿಟ್ಟು, ಇತರರಿಗೇನಾದರೂ ಟಿಕೆಟ್ ನೀಡಿದ್ದೇ ಆದರೆ ಒಳಗಿಂದೊಳಗೇ ಮಸಲತ್ತು ನಡೆಸಿ ವಿರೋಧಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿಯಾದರೂ ತಮ್ಮ ಪಕ್ಷದ ವಿರುದ್ಧವೇ ಸೇಡು ತೀರಿಸಿಕೊಳ್ಳಬೇಕು ಎನ್ನುವಷ್ಟೂ ನೀಚಮಟ್ಟಕ್ಕೆ ಇಳಿದಿರುವ ಇಂದಿನ ದಿನಗಳೆಲ್ಲಿ...?! ಅಭ್ಯರ್ಥಿಗಳ ಆಯ್ಕೆ ಹೈಕಮಾಂಡಿನದು ಎಂದು ಸಾಮಾನ್ಯವಾಗಿ ಎಲ್ಲ ರಾಜಕೀಯ ಪಕ್ಷಗಳೂ ನಂಬಿದ್ದ ಕಾಲವಾಗಿತ್ತು ಅಂದಿನದು. ಅಭ್ಯರ್ಥಿಗಳ ಆಯ್ಕೆಗೆ ಸಾರ್ವಜನಿಕ ಜೀವನದಲ್ಲಿ ಅವರ ಅರ್ಹತೆ, ಪ್ರಭಾವಗಳೇ ಮಾನದಂಡಗಳಾಗಿದ್ದ ಕಾಲವದು. ಇಂದಿನಂತೆ ನೂರಾರು ಬಗೆಯ ’ಲಾಬಿ’(lobby)ಗಳನ್ನು ಆಗ ಸಾಮಾನ್ಯವಾಗಿ ಯಾರೂ ಕೇಳಿಯೇ ಇರಲಿಲ್ಲ! ಆದರೆ ಇಂದಿನ ವಾತಾವರಣವನ್ನು ನೋಡಿದರೆ ಬಹುಶಃ ಮುಂದಿನ ದಿನಗಳಲ್ಲಿ ಸಮಾಜದಲ್ಲಿ ಹೊಂದಾಣಿಕೆ, ಶಾಂತಿ, ನೆಮ್ಮದಿ, ಮಾನ-ಮರ್ಯಾದೆಗಳೆಲ್ಲ ಕೇವಲ ಮರೀಚಿಕೆಯಾಗಿಯೇ ಉಳಿದುಬಿಡುತ್ತವೆಯೇನೋ ಎಂಬ ಭೀತಿ ಪ್ರಜ್ಞಾವಂತ ಪ್ರಜೆಗಳನ್ನು ಪ್ರತಿನಿಮಿಷವೂ ಕಾಡತೊಡಗಿದೆ!
ಇಂದಿನ ಮಂದಿಯ ಮನೋಭಾವವನ್ನು ಗಮನಿಸಿದರೆ ’ಜನಕಲ್ಯಾಣ-ಸಮಾಜಸೇವೆಗಳನ್ನು ಮಾಡಲು ಅಧಿಕಾರ ಅನಿವಾರ್ಯ; ಆ ಅಧಿಕಾರ ತನಗೆ ಮಾತ್ರವೇ ಸಿಗಬೇಕು; ಮತ್ತು ಆ ಅಧಿಕಾರವನ್ನು ಪಡೆಯಲು ತಾನು ಯಾವ ಮಾರ್ಗವನ್ನಾದರೂ ಅನುಸರಿಸಬಹುದು; ನ್ಯಾಯ-ಧರ್ಮಗಳಿಗೂ ಅದಕ್ಕೂ ಯಾವ ಸಂಬಂಧವೂ ಇಲ್ಲವೇ ಇಲ್ಲ’ ಎಂಬ ಅತ್ಯಂತ ಅಪಾಯಕಾರಿ ನಂಬಿಕೆಗೆ ಇಂದಿನ ಸಮಾಜ ಪೂರ್ತಿಯಾಗಿ ತನ್ನನ್ನು ಒಪ್ಪಿಸಿಕೊಂಡುಬಿಟ್ಟಂತಿದೆ. ಅಲ್ಲವೇ..?
ದೇಶದ ಪ್ರತಿ ಪ್ರಜೆಯಿಂದ ಕೇವಲ ಒಂದೊಂದು ರೂಪಾಯಿಯ ದೇಣಿಗೆಯನ್ನು ಸಂಗ್ರಹಿಸಿ ಯಾವ ಅಧಿಕಾರವೂ ಇಲ್ಲದ ಶ್ರೀ ಮದನ ಮೋಹನ ಮಾಳವೀಯರು ಇಂದಿಗೂ ಜಗತ್ತಿನಲ್ಲಿ ಅತ್ಯಂತ ವಿಶಿಷ್ಟವೆನಿಸಿದ ಬನಾರಸ್ ಹಿಂದು ವಿಶ್ವವಿದ್ಯಾಲಯವನ್ನು ಕಟ್ಟಿ ಬೆಳೆಸಿದ್ದು; ಬ್ರಿಟಿಷರ ಗುಲಾಮಗಿರಿಯಲ್ಲಿ ನರಳುತ್ತಿದ್ದ ದೇಶವೊಂದರ ಪ್ರಜೆಯಾಗಿದ್ದುಕೊಂಡು ’ಗೀತಾಂಜಲಿ’ ಎಂಬ ತಮ್ಮ ವಿಶ್ವಶ್ರೇಷ್ಠ ಕವನಸಾಹಿತ್ಯಕ್ಕೆ ನೋಬೆಲ್ ಬಹುಮಾನವನ್ನು ಪಡೆದ ವಿಶ್ವಕವಿ ರವೀಂದ್ರನಾಥ ಠಾಕೂರರು ಯಾವ ಅಧಿಕಾರವೂ ಇಲ್ಲದೆ ’ವಿಶ್ವಭಾರತಿ’ ಎಂಬ ವಿಶ್ವವಿದ್ಯಾನಿಲಯವನ್ನು ಹುಟ್ಟುಹಾಕಿ, ಪ್ರತಿಫಲದ ಅಪೇಕ್ಷೆಯೇ ಇಲ್ಲದೆ ತಮ್ಮ ಕೊನೆಯುಸಿರಿನ ತನಕವೂ ಅದನ್ನು ಯಶಸ್ವಿಯಾಗಿ ನಡೆಯಿಸಿದ್ದು; ನಾನಾಜಿ ದೇಶಮುಖರೆಂಬ ಸಾಮಾನ್ಯ ವ್ಯಕ್ತಿಯೊಬ್ಬ ಅಧಿಕಾರ-ಕೀರ್ತಿಗಳ ಹಂಬಲವನ್ನು ಸಂಪೂರ್ಣ ಬದಿಗಿಟ್ಟು 70ರ ಹರೆಯದಲ್ಲೂ ನಿರಂತರ ಶ್ರಮದಿಂದ ಉತ್ತರಪ್ರದೇಶದ ನೂರಾರು ಹಳ್ಳಿಗಳಲ್ಲಿ ತಮ್ಮ ’ಗ್ರಾಮರಾಜ್ಯ’ದ ಕನಸನ್ನು ಸಾಕಾರಗೊಳಿಸಿದ್ದು; ಯುದ್ಧಭೂಮಿಯಲ್ಲಿ ಏಕಾಂಗಿಯಾಗಿ ಬದುಕುಳಿದ ಸೇನಾತುಕಡಿಯೊಂದರ ಅನಾಥ ಟ್ರಕ್ ಡ್ರೈವರ್ ಅಣ್ಣಾ ಹಜಾರೆ ಸದಾ ಮದ್ಯದ ನಶೆಯಲ್ಲಿ ಮುಳುಗಿರುತ್ತಿದ್ದ ರಾಲೆಗಾಂವ್ ಸಿದ್ಧಿ ಎಂಬ ತಮ್ಮ ಜನ್ಮಗ್ರಾಮವನ್ನು ಮಾದರಿ ಗ್ರಾಮವನ್ನಾಗಿ ಪರಿವರ್ತಿಸಿದ್ದು; ಯಾವ ಅಧಿಕಾರವೂ ಇಲ್ಲದೆ ವಿನೋಬಾ ಭಾವೆಯವರು ’ಭೂದಾನಯಜ್ಞ’ವೆಂಬ ಸಾಮಾನ್ಯರ ಕಲ್ಪನೆಗೂ ಮೀರಿದ ತಮ್ಮ ಯೋಜನೆಯನ್ನು ದೇಶಾದ್ಯಂತ ಪಾದಯಾತ್ರೆಯ ಮೂಲಕವೇ ಸಾಕಾರಗೊಳಿಸಿದ್ದು; ಮಕ್ಕಳಿಲ್ಲದ ಒಂಟಿಜೀವ ನಿರಕ್ಷರಕುಕ್ಷಿ ತಿಮ್ಮಕ್ಕ ಅಧಿಕಾರದ ಅಥವಾ ಪ್ರತಿಫಲದ ಚಿಂತೆಯನ್ನೇ ಮಾಡದೆ ಮರಗಳೇ ಮಕ್ಕಳೆಂಬ ಭಾವನೆಯಿಂದ ಸಾವಿರಾರು ಮರಗಳನ್ನು ನೆಟ್ಟು ನೀರೆರೆದು ಪೋಷಿಸಿ ’ಸಾಲುಮರದ ತಿಮ್ಮಕ್ಕ’ ಎಂಬ ಹೆಸರಿನಿಂದ ಪ್ರಪಂಚಕ್ಕೇ ಮಾದರಿಯಾದುದು.
ಹತ್ತಾರು ಕಿ.ಮೀ ದೂರ ನಡೆದು ಪರ್ವತಕ್ಕೊಂದು ಸುತ್ತುಹಾಕಿ ನೀರನ್ನು ಹೊತ್ತು ತರುತ್ತಿದ್ದ ತನ್ನೂರ ಹೆಂಗಳೆಯರ ಕಷ್ಟವನ್ನು ನೋಡಲಾಗದೆ ಬಿಹಾರದ ದಶರಥ ಮಾಂಝಿ ಎಂಬ ವೃದ್ಧ ಏಕಾಂಗಸಾಹಸದಿಂದ ಆ ಪರ್ವತದಲ್ಲಿ ಸುರಂಗವನ್ನು ಕೊರೆದು ಪ್ರಪಂಚದಲ್ಲಿ ಯಾರೂ ನಂಬಲಾರದಂತಹ ಲೋಕೋಪಕಾರದ ಕೆಲಸವನ್ನು ಮಾಡಿದ್ದು; ತಮ್ಮ ಉಪನ್ಯಾಸಕ ಹುದ್ದೆಯನ್ನು ತ್ಯಜಿಸಿ ಸ್ವಾಮಿ ವಿವೇಕಾನಂದರ ಹೆಸರಿನಲ್ಲಿ ಸಮಾನಮನಸ್ಕ ಯುವಕರ ತಂಡವನ್ನು ಕಟ್ಟಿ ಹತ್ತಾರು ಸೇವಾಪ್ರಕಲ್ಪಗಳನ್ನು ನಡೆಸುತ್ತಿರುವುದಲ್ಲದೆ, ’ನಮೋ ಬ್ರಿಗೇಡ್’ ಮೂಲಕ ಸಮಾಜದಲ್ಲಿ ನಿರಂತರ ರಾಷ್ಟ್ರೀಯತೆಯ ಅರಿವು ಮೂಡಿಸುತ್ತಿರುವ ಚಕ್ರವರ್ತಿ ಸೂಲಿಬೆಲೆ; ನೂರಾರು ಸೇವಾಪ್ರಕಲ್ಪಗಳಿಂದ ಪ್ರಪಂಚದುದ್ದಕ್ಕೂ ನಿರಂತರ ಲೋಕಹಿತ ಕಾರ್ಯಗಳಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘ (RSS), ಶ್ರೀ ರಾಮಕೃಷ್ಣಾಶ್ರಮ, ಚಿನ್ಮಯ ಮಿಷನ್, ಮಾತಾ ಅಮೃತಾನಂದಮಯೀ ಟ್ರಸ್ಟ್, ಭಗವಾನ್ ಶ್ರೀ ಸತ್ಯಸಾಯಿ ಬಾಬಾ ಸೇವಾ ಟ್ರಸ್ಟ್, ಯಾವುದೇ ಅಧಿಕಾರ ಹಾಗೂ ಹೆಸರಿನ ಹಂಬಲವಿಲ್ಲದೆ ಮೌನವಾಗಿ ಶೈಕ್ಷಣಿಕ-ಸಾಮಾಜಿಕ-ಸಾಂಸ್ಕೃತಿಕ ಕ್ಷೇತ್ರಗಳಿಗೂ ತನ್ಮೂಲಕ ಸಮಾಜದ ಏಕತೆಗೂ ಅಪಾರ ದೇಣಿಗೆಯನ್ನೀಯುತ್ತ ಬಂದಿರುವ ಅದೆಷ್ಟೋ ಮಠ-ಮಾನ್ಯಗಳಂತಹ ನೂರಾರು ಉದಾಹರಣೆಗಳು ನಮ್ಮ ಕಣ್ಣ ಮುಂದೆ ಇದ್ದೂ ಸಹ ’ಅಧಿಕಾರ ತನಗಷ್ಟೇ ಸಿಗಬೇಕು, ಅದು ತನ್ನ ಪಿತ್ರಾರ್ಜಿತ ಹಕ್ಕು’ ಎಂಬಂತಹ ಧೋರಣೆ ಹಾಗೂ ವರ್ತನೆಗಳು ಇಂದು ಹೆಣ್ಣು-ಗಂಡೆಂಬ, ಹಿರಿಯ-ಕಿರಿಯರೆಂಬ ಭೇದವೇ ಇಲ್ಲದೆ ಪ್ರತಿಯೋರ್ವ ರಾಜಕಾರಣಿಯಲ್ಲೂ ಬೇರೂರಿರುವುದನ್ನು ನೋಡಿದರೆ ’ಗಣತಂತ್ರ’, ’ಪ್ರಜಾಪ್ರಭುತ್ವ’ ಎಂಬ ಪದಗಳು ಇಂದು ತಮ್ಮ ಅರ್ಥ ಹಾಗೂ ಉದ್ದೇಶಗಳನ್ನು ಸಂಪೂರ್ಣ ಕಳೆದುಕೊಂಡಿವೆ ಎಂದು ಅಲ್ಪಸ್ವಲ್ಪವಾದರೂ ಪ್ರಜ್ಞೆಯುಳ್ಳ ಪ್ರತಿಯೋರ್ವ ಪ್ರಜೆಗೂ ಅನಿಸದೆ ಇರದು. ಪ್ರಜಾಪ್ರಭುತ್ವ ಎಂಬ ವ್ಯವಸ್ಥೆ ಪ್ರಪಂಚದಲ್ಲಿ ಅಸ್ತಿತ್ವಕ್ಕೆ ಬಂದುದೇ ’ವಿಕಾಸದಲ್ಲಿ ಸರ್ವರಿಗೂ ಸಮಪಾಲು ದೊರಕಬೇಕು’; ’ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ಎಂಬ ತತ್ತ್ವದ ಆಧಾರದ ಮೇಲೆ ಎಂಬುದನ್ನು ನಾವೆಲ್ಲರೂ ಒಪ್ಪಿಕೊಳ್ಳುವುದೇ ಹೌದಾದರೆ ’ತನಗಷ್ಟೇ ಅಧಿಕಾರ ನಡೆಸುವ ಹಕ್ಕಿರುವುದು, ಇತರ ಯಾರಿಗೂ ಅದು ಇಲ್ಲ’ ಎಂಬ ಈ ಚಿಂತನೆಯಲ್ಲೇ ಬಹು ದೊಡ್ಡ ಸ್ವಾರ್ಥವಡಗಿದೆ; ಇದು ಜನಸೇವೆ ಎಂಬ ಹೆಸರಿನಲ್ಲಿ ಸಮಾಜವನ್ನು ಹಿಗ್ಗಾಮುಗ್ಗಾ ಲೂಟಿ ಮಾಡಿ, ಕಂಡದ್ದನ್ನೆಲ್ಲ ಕೊಳ್ಳೆ ಹೊಡೆದು ತನ್ನ ಖಾತೆ-ಖಜಾನೆಗಳನ್ನು ತುಂಬಿಸಿಕೊಳ್ಳುವ ಹುನ್ನಾರವೇ ಹೊರತು ಬೇರೇನೂ ಅಲ್ಲ ಎಂಬುದು ಇಂದು ಎಂತಹ ದಡ್ಡರಿಗೂ ಅರ್ಥವಾಗುತ್ತದೆ.
ಅಂತೂ ಯಾವ್ಯಾವುದೋ ಕುತಂತ್ರಗಳ ಮೂಲಕ ಸಾಮಾನ್ಯ ಜನತೆಯ ಮತಗಳನ್ನು ಪಡೆದು ಒಮ್ಮೆ ಇವರು ಅಧಿಕಾರಕ್ಕೆ ಬಂದರೆಂದರೆ ಮುಗಿಯಿತು - ಮುಂದೆ ಇವರನ್ನು ಹಿಡಿಯುವವರೇ ಇಲ್ಲ! ಅವರಾಡಿದ್ದೇ ಸರಿ, ಅವರು ಹೇಳಿದ್ದೇ ಸತ್ಯ, ಅವರಿಗೆ ಕಂಡದ್ದೇ ವಾಸ್ತವ, ಅವರಿಗೆ ಕೇಳಿಸಿದ್ದೇ ನಿಜ! ನಡುಮಧ್ಯಾಹ್ನದ ಹೊತ್ತಿನಲ್ಲಿ ನೆತ್ತಿಯ ಮೇಲೆ ಸೂರ್ಯ ಧಗಧಗಿಸುತ್ತಿದ್ದರೂ ಅದು ಮಧ್ಯರಾತ್ರಿ ಎಂದು ಇವರು ಹೇಳಿದರೆ ಸುತ್ತಲಿರುವ ಪ್ರತಿಯೊಬ್ಬರೂ ಹೌದೆಂದುಬಿಡಬೇಕು! ಅಪ್ಪಿತಪ್ಪಿ ಯಾವನಾದರೊಬ್ಬ ’ತಲೆಕೆಟ್ಟಾತ’ ಈ ಅಧಿಕಾರಾರೂಢರ ಮಾತನ್ನು ಅಲ್ಲಗಳೆದನೆಂದಿಟ್ಟುಕೊಳ್ಳಿ, ಆತನ ಗತಿ ಮುಗಿದಂತೆಯೇ! ತತ್ಕ್ಷಣವೇ ಖಾಕಿ ಪಡೆಗಳು ಅವನ ಮೇಲೆ ಮುಗಿಬಿದ್ದು ’ಸ್ವಯಂಪ್ರೇರಿತ’ರಾಗಿ ಅವನ ಮೇಲೆ ’ರಾಜದ್ರೋಹ’ದ ಪ್ರಕರಣವನ್ನು ದಾಖಲಿಸುತ್ತವೆ! ಆತ ಕಂಬಿ ಎಣಿಸಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ಜರಗಿಸಿಯೇ ಬಿಡುತ್ತವೆ! ರಾತ್ರಿ ಬೆಳಗಾಗುವುದರೊಳಗೆ ಆತನ ಮನೆಯಂಗಳದಲ್ಲಿ ಬೀಟಿ-ಗಂಧದ ಮರಗಳು ಬಂದು ಬಿದ್ದಿರುತ್ತವೆ! ಮರಗಳ್ಳತನದ ಕೇಸು ಆತನ ಮೇಲೆ ದಾಖಲಾಗಿರುತ್ತದೆ! ಅದಲ್ಲವೆಂದಾದರೆ ’ದಲಿತರ’ ಗುಂಪೊಂದು ಆತನ ವಿರುದ್ಧ ಘೋಷಣೆ ಕೂಗುತ್ತ ಬರುತ್ತದೆ! ತಮ್ಮ ಹೆಣ್ಣುಮಕ್ಕಳ ಮೇಲೆ ಈತ ಅತ್ಯಾಚಾರವೆಸಗಿದ್ದಾನೆಂದೋ, ತಮಗೆ ಸೇರಿದ ಸ್ಥಳವನ್ನು ಆತ ಲಪಟಾಯಿಸಿದ್ದಾನೆಂದೋ ಪೋಲೀಸು ಠಾಣೆಯಲ್ಲಿ ಈ ’ದಲಿತರಿಂದ’ ದೂರು ದಾಖಲಿಸಲ್ಪಡುತ್ತದೆ! ಅಥವಾ ಅದುತನಕ ಯಾರೂ ಕಂಡಿರದಿದ್ದ ಒಬ್ಬಾಕೆ ಮಹಿಳೆ ಎಲ್ಲಿಂದಲೋ ಬಂದು ಪೋಲೀಸು ಠಾಣೆಯ ಮೆಟ್ಟಲೇರಿ ’ಈ ವ್ಯಕ್ತಿ ಹಾಡುಹಗಲೇ ಎಲ್ಲರೆದುರೇ ತನ್ನ ಖಾಸಗಿ ಅಂಗವನ್ನು ಸ್ಪರ್ಶಿಸಿದ’ ಎಂಬ ದೂರನ್ನು ಕೊಟ್ಟುಬಿಡುತ್ತಾಳೆ! ಆ ವ್ಯಕ್ತಿಯ ವಯಸ್ಸು, ಸ್ವಭಾವ, ಸ್ಥಾನ-ಮಾನ ಏನೊಂದನ್ನೂ ನೋಡದೆ ದೂರಿತ್ತ ವ್ಯಕ್ತಿ ನಿಜವಾದ ಮಹಿಳೆ ಹೌದೇ? ಅಲ್ಲವೇ? – ಎಂಬುದನ್ನು ಕೂಡ ಗಮನಿಸದೆ ಆ ವ್ಯಕ್ತಿಗೆ ಬಂಧನದ ಭಾಗ್ಯ ಕರುಣಿಸಲ್ಪಡುತ್ತದೆ! ಬೂಟುಗಾಲಿನ ಒದೆಗಳ ಗೌರವದೊಂದಿಗೆ ’ಪೋಕ್ಸೋ’ ಪ್ರಕರಣದಡಿಯಲ್ಲಿ FIR ದಾಖಲಿಸಲ್ಪಡುತ್ತದೆ! ಇದು ಇಂದಿನ ಪ್ರಜಾಪ್ರಭುತ್ವದ ಒಂದು ಸ್ಯಾಂಪಲ್(sample) ಅಷ್ಟೆ!
ಒಂದು ಕಾಲದಲ್ಲಿ ಅತ್ಯಂತ ಸಭ್ಯ, ಅನುಭವಿ ಹಾಗೂ ಹಿರಿಯ ರಾಜಕಾರಣಿಗಳೆನಿಸಿಕೊಂಡು ಭಾರತೀಯ ಜನತಾ ಪಕ್ಷದ ಶಿಸ್ತಿನ ಸಿಪಾಯಿಗಳೆಂದು ಕರೆಯಿಸಿಕೊಂಡಿದ್ದ; ಹಲ-ಕೆಲವು ವರ್ಷಗಳ ಕಾಲ ಬೇರೆ ಬೇರೆ ಮಂತ್ರಿ ಹಾಗೂ ಮುಖ್ಯಮಂತ್ರಿಪಟ್ಟಗಳಲ್ಲಿದ್ದುಕೊಂಡು ಅಧಿಕಾರ ನಡೆಸಿದ ಜಗದೀಶ ಶೆಟ್ಟರ್, ಸದಾನಂದ ಗೌಡ, ಸಂಗಣ್ಣ ಕರಡಿ, ಮಾಧುಸ್ವಾಮಿ, ಈಶ್ವರಪ್ಪ, ರೇಣುಕಾಚಾರ್ಯ, ಅನಂತಕುಮಾರ್ ಹೆಗಡೆಯಂತಹವರು ಇಂದು ಮಾಡುತ್ತಿರುವುದಾದರೂ ಏನನ್ನು..? ತಮಗೆ ಟಿಕೆಟ್ ಸಿಕ್ಕಿಲ್ಲವೆಂಬ ಒಂದೇ ಒಂದು ಕಾರಣಕ್ಕಾಗಿ ತಾವು ಇಷ್ಟೊಂದು ವರ್ಷ ನಂಬಿಕೊಂಡು ಬಂದಿದ್ದ ತತ್ತ್ವಗಳಿಗೆ, ನಡೆಸಿಕೊಂಡು ಬಂದಿದ್ದ ಹೋರಾಟಗಳಿಗೆ ಎಳ್ಳುನೀರು ಬಿಟ್ಟು ಬಂಡಾಯ, ಪಕ್ಷಾಂತರ, ಅಸಹಕಾರಗಳೇ ಮೊದಲಾದ ಬೆದರಿಕೆಗಳನ್ನೊಡ್ಡುತ್ತ, ಲೂಟಿಕೋರರಿಂದಲೂ, ರಾಷ್ಟ್ರದ್ರೋಹಿಗಳಿಂದಲೂ, ಶತ್ರುಗಳಿಂದಲೂ ಭಾರತವನ್ನು ಉಳಿಸುವ ಸಲುವಾಗಿ, ಜಗತ್ತಿನಲ್ಲೇ ಸ್ವಚ್ಛ ವ್ಯಕ್ತಿತ್ವ ಹಾಗೂ ಸ್ವಚ್ಛ ರಾಜಕಾರಣದ ಮೂಲಕ ಸ್ವಚ್ಛಭಾರತದ, ಸಶಕ್ತ, ಸುದೃಢ ಹಾಗೂ ಆತ್ಮನಿರ್ಭರ ಭಾರತದ ತಮ್ಮ ಕನಸನ್ನು ನನಸಾಗಿಸುವ ಸಲುವಾಗಿ ಪ್ರತಿನಿಮಿಷವೂ ಗಂಧದ ಕೊರಡಿನಂತೆ ತಮ್ಮ ಜೀವವನ್ನು ಸವೆಸುತ್ತಿರುವ ನರೇಂದ್ರ ಮೋದಿಯವರಂತಹ ಪುಣ್ಯಾತ್ಮರ-ತಪಸ್ವಿಗಳ ಮುಖಕ್ಕೆ ತಮ್ಮ ಕೈಯಾರೆಯೇ ಮಸಿ ಬಳಿಯಹೊರಟ ಇವರಿಗೆ ತಮ್ಮ ಈ ಘೋರ ಅಪರಾಧದ ಅರಿವು ಇನ್ನೂ ಆಗುತ್ತಿಲ್ಲವೆಂದಾದರೆ ಇವರಿಗಾದ ವಯಸ್ಸಿಗೆ, ಇವರ ಮನುಷ್ಯ ಜನ್ಮಕ್ಕೆ ಅರ್ಥವಾದರೂ ಏನು…? ತಾವು ಆಡುತ್ತಿರುವ ಈ ’ಆಟ’ಗಳ ಮೂಲಕ ಎಂತಹ ರಾಷ್ಟ್ರದ್ರೋಹಕ್ಕೆ ತಾವು ಕೈಯಿಕ್ಕಿದ್ದೇವೆ ಎಂಬ ಒಂದು ಸಾಮಾನ್ಯ ಕಲ್ಪನೆಯೂ ಇವರ ತಲೆಯಲ್ಲಿ ಯಾಕೆ ಇನ್ನೂ ಹುಟ್ಟುತ್ತಿಲ್ಲ…??
“ರಾಷ್ಟ್ರದ ಉಳಿವಿಗಾಗಿ ಮೋದಿಯವರ ಕೈಗಳನ್ನು ಬಲಪಡಿಸಬೇಕು” ಎಂಬ ನುಡಿಮುತ್ತನ್ನು ತಾವು ಹೋದಲ್ಲೆಲ್ಲ ಉದುರಿಸುತ್ತಲೇ ಮೋದಿಯವರ ಕೈಗಳನ್ನು ಮಾತ್ರವಲ್ಲ, ಕಾಲುಗಳನ್ನೂ ಸಹ ತಾವು ಕಟ್ಟಿಹಾಕುತ್ತಿದ್ದೇವೆ; ತನ್ಮೂಲಕ ’ತಾವು ಏರಿನಿಂತ ಕೊಂಬೆಯ ಬುಡವನ್ನು ತಾವೇ ಕಡಿಯುತ್ತಿದ್ದೇವೆ’ ಎಂಬ ಅತ್ಯಂತ ಸಾಮಾನ್ಯ ಅರಿವೂ ಸಹ ಇವರಿಗೇಕೆ ಆಗುತ್ತಿಲ್ಲ…?? ತಮ್ಮ ಬಗೆಗೆ ಅಪಾರ ಭರವಸೆ, ಗೌರವಗಳನ್ನಿರಿಸಿಕೊಂಡಿದ್ದ ಮತದಾರ ಬಂಧುಗಳಿಗೆ ತಾವೆಂತಹ ದ್ರೋಹವನ್ನು ಬಗೆಯುತ್ತಿದ್ದೇವೆ? ತಮ್ಮ ಮೇಲೆ ತುಂಬು ಅಭಿಮಾನವನ್ನಿಟ್ಟಿದ್ದ ಯುವ ಕಾರ್ಯಕರ್ತರಿಗೆ, ರಾಷ್ಟ್ರದ ಯುವ ಪೀಳಿಗೆಗೆ ತಾವೆಂತಹ ನೀಚ ಆದರ್ಶವನ್ನು ಹಾಕಿಕೊಡುತ್ತಿದ್ದೇವೆ? ಎಂಬ ಕನಿಷ್ಠ ಅರಿವು-ಆತ್ಮ ಸಾಕ್ಷಿಗಳೆಲ್ಲ ಇವರಲ್ಲಿ ಯಾವಾಗ, ಹೇಗೆ ಸತ್ತುಹೋದವು…?? – ಈ ಎಲ್ಲ ಪ್ರಶ್ನೆಗಳಿಗೆ ಇವರಿಂದ ಸರಿಯಾದ ಉತ್ತರವನ್ನು ನಿರೀಕ್ಷಿಸುವ ಹಕ್ಕು ಇವರಿಗೆ ಮತ ನೀಡಬೇಕಾಗಿರುವ ಪ್ರತಿಯೊಬ್ಬ ಮತದಾರನಿಗೂ ಇದೆಯಷ್ಟೆ?
ಅಥವಾ ಇದನ್ನೆಲ್ಲ ಸರಿಯಾಗಿ ತಿಳಿದೇ ಇವರು ಈ ಎಲ್ಲ ಕೃತ್ಯಗಳನ್ನು ಎಸಗುತ್ತಿದ್ದಾರೆ ಎಂದಾದರೆ ಇವರಿಗೆ ಮತ ಕೇಳುವುದಕ್ಕೆ ಬಿಡಿ, ಜನಕ್ಕೆ ಮೋರೆ ತೋರಿಸುವುದಕ್ಕಾದರೂ ಯೋಗ್ಯತೆಯುಂಟೆ? ’ತಮಗೆ ಟಿಕೆಟ್ ನೀಡದೆ ಅನ್ಯಾಯವೆಸಗಿದ ಯಡಿಯೂರಪ್ಪನವರ ವಿರುದ್ಧ ತಾವು ಸೇಡು ತೀರಿಸಿಯೇ ಸಿದ್ಧ’ ಎಂದು ಹಲ್ಲು ಕಡಿಯುತ್ತಿರುವ ಈಶ್ವರಪ್ಪನವರು ಪರ್ಯಾಯವಾಗಿ “ತನಗೆ ನಾಯಿ ಕಚ್ಚಿದೆ; ಆದುದರಿಂದ ಏನಾದರೂ ಮಾಡಿ ತಾನು ಅದರ ಬಾಲವನ್ನು ಕಚ್ಚದೆ ಬಿಡಲಾರೆ” ಎಂದು ಹೇಳಿದಂತೆಯೇ ಅಲ್ಲವೆ..?? ಇವರ ಈ ಮುಟ್ಠಾಳತನಕ್ಕೆ ಯಾವ ಪ್ರಜ್ಞಾವಂತ ಮತದಾರ ತಾನೆ ಹೇಸಿಕೊಳ್ಳದಿರಲು ಸಾಧ್ಯ…? ಮತದಾರರೆಂದರೆ ಕೇವಲ ಕುರಿಗಳೆಂಬ ಭ್ರಮೆ ಇವರಿಗೇನಾದರೂ ಇದ್ದುದೇ ಹೌದಾದರೆ ಆ ಭ್ರಮೆ ನಿರಸನಗೊಳ್ಳುವ ಕಾಲ ತೀರ ಸನಿಹದಲ್ಲೇ ಇದೆ ಎಂಬ ಸತ್ಯವನ್ನು ಎಷ್ಟು ಬೇಗ ಇವರು ಅರಿತುಕೊಳ್ಳುತ್ತಾರೋ ಅಷ್ಟು ಅವರಿಗೂ ಒಳ್ಳೆಯದು, ಸಮಾಜಕ್ಕೂ ಒಳ್ಳೆಯದು. ಮತದಾರರಿಂದ ಕ್ಯಾಕರಿಸಿ ಉಗಿಸಿಕೊಳ್ಳುವ ಮೊದಲೇ ಈ ಭ್ರಮೆಯಿಂದ ಅವರು ಹೊರಬರಲಿ ಎಂಬುದೇ ದೇವರಲ್ಲಿ ಪ್ರತಿಯೋರ್ವ ಪ್ರಜ್ಞಾವಂತ ಮತದಾರನ ಪ್ರಾರ್ಥನೆ.
ಮಾನ್ಯ ಯಡಿಯೂರಪ್ಪನವರೂ ಸಹ ’ಕರ್ನಾಟಕದ ಬಿಜೆಪಿಯೆಂದರೆ ತನ್ನ ಪಿತ್ರಾರ್ಜಿತ ಆಸ್ತಿ’ ಎಂಬ ತಮ್ಮ ಧೋರಣೆ ಹಾಗೂ ವರ್ತನೆಯ ಬಗೆಗೆ ಅತ್ಯಂತ ಗಂಭೀರವಾದ ಆತ್ಮವಿಮರ್ಶೆಯನ್ನು ಮಾಡಿಕೊಂಡರೆ ಪ್ರಾಯಶಃ ಕರ್ನಾಟಕದ ಬಿಜೆಪಿಗೆ ಭವಿಷ್ಯದಲ್ಲಾದರೂ ಇಂತಹ ಹೀನಸ್ಥಿತಿಯನ್ನು ಎದುರಿಸುವ ದೌರ್ಭಾಗ್ಯವನ್ನು ತಪ್ಪಿಸಬಹುದು ಎಂಬುದು ಇದೇ ಪ್ರಜ್ಞಾವಂತ ಮತದಾರನ ಅತ್ಯಂತ ಪ್ರಾಮಾಣಿಕವಾದ ಅನಿಸಿಕೆ. ವಯಸ್ಸು 80 ದಾಟಿದರೂ ವ್ಯಕ್ತಿಯೊಬ್ಬ ವೈಯಕ್ತಿಕ ದ್ವೇಷಾಸೂಯೆಗಳ ಮಟ್ಟದಿಂದ ಮೇಲಕ್ಕೆ ಹೋಗಿಯೇ ಇಲ್ಲವೆಂದಾದರೆ ಆತನಿಗೆ ರಾಷ್ಟ್ರದ ಬಗೆಗೆ ಮಾತನಾಡುವ ಹಕ್ಕಾದರೂ ಎಲ್ಲಿಂದ ಬಂದೀತು ಹೇಳಿ. ಹಡಗು ಎಷ್ಟೇ ದೊಡ್ಡದಿರಬಹುದು, ಆದರೆ ತಳದಲ್ಲಿ ಅಣುಗಾತ್ರದ ರಂಧ್ರವಿದ್ದರೂ ಸಾಕು, ಹಡಗು ಮುಳುಗುವುದು ನಿಶ್ಚಯ. ಮುಳುಗಬಾರದೆಂದಿದ್ದರೆ ರಂಧ್ರವನ್ನು ಮುಚ್ಚುವುದು ಪ್ರಥಮ ಕರ್ತವ್ಯವಾಗುತ್ತದೆ. ಅಲ್ಲವೆ..? ’ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ಎಂಬ ತತ್ತ್ವ ಕೇವಲ ಸರಕಾರಕ್ಕೆ ಮಾತ್ರ ಸೀಮಿತವಲ್ಲ; ಜೊತೆಯಾಗಿ ಕಾರ್ಯ ನಿರ್ವಹಿಸುವ ಪ್ರತಿಯೊಂದು ವ್ಯವಸ್ಥೆಗೂ ಇದೇ ನಿಯಮ ಅನ್ವಯಿಸುತ್ತದೆ; ಅನ್ವಯಿಸಬೇಕು. ಪಕ್ಷ ಯಾವುದೇ ಇರಲಿ, ತಳಮಟ್ಟದ ಕಾರ್ಯಕರ್ತರೇ ಅದರ ಆಧಾರಸ್ತಂಭಗಳು. ಪ್ರತಿ ಹೆಜ್ಜೆಗೂ ಅವರೆಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳದೆ ಸರ್ವಾಧಿಕಾರಿ ಪ್ರವೃತ್ತಿಯನ್ನು ತೋರಿಸಿದರೆ ಸೋಲು ಅನಿವಾರ್ಯ. ತಂಡವೊಂದರ ಯಶಸ್ಸಿಗೆ ಒಗ್ಗಟ್ಟೊಂದೇ ಮಂತ್ರ. ಬಿಕ್ಕಟ್ಟು ಸರ್ವನಾಶಕ್ಕೆ ಆಹ್ವಾನ. ಇದನ್ನು ಮರೆತ ನಾಯಕ ತಂಡವನ್ನು ತನ್ನ ಕೈಯಾರೆ ಮಣ್ಣುಗೂಡಿಸುವುದು ಖಂಡಿತ. ತಂಡವೊಂದನ್ನು ಕಟ್ಟಿ ಬೆಳೆಸಲು ನಾಯಕನೊಬ್ಬ ಎಷ್ಟು ಪರಿಶ್ರಮ ಪಟ್ಟಿದ್ದಾನೋ ಅದನ್ನು ಉಳಿಸಲು ಪ್ರಾಯಶಃ ಅದಕ್ಕಿಂತಲೂ ಹೆಚ್ಚಿನ ಪರಿಶ್ರಮ ಪಡುವ ಆವಶ್ಯಕತೆಯಿದೆ ಎಂಬ ಸತ್ಯವನ್ನು ಆತ ಎಂದೂ ಮರೆಯತಕ್ಕದ್ದಲ್ಲ. ತನ್ನ ಮರ್ಜಿಗೇ ಎಲ್ಲರೂ ಒಗ್ಗಿಕೊಳ್ಳಬೇಕೆಂಬ ಚಿಂತನೆಗೆ ಪಶ್ಚಾತ್ತಾಪವೇ ಫಲ. ಕೆಟ್ಟಮೇಲೆ ಬುದ್ಧಿ ಬಂದರೆ ಏನು ಪ್ರಯೋಜನ ಹೇಳಿ. “ಸಬ್ ಕೋ ಸನ್ಮತಿ ದೇ ಭಗವಾನ್”.
ಇದೆಲ್ಲಕ್ಕಿಂತಲೂ ಅತಿಗಂಭೀರ ಹಾಗೂ ಅತಿವಿಚಿತ್ರವಾದ ಒಂದು ವಿದ್ಯಮಾನ ತೀರ ಇತ್ತೀಚಿನದು. ಅತ್ಯಂತ ನೂತನವಾದ ಈ ವಿದ್ಯಮಾನವೇ ಧಾರವಾಡ ಲೋಕಸಭಾ ಕ್ಷೇತ್ರದಿಂದ ಕಮಲಪಕ್ಷದ ಅಭ್ಯರ್ಥಿಯಾದ ಶ್ರೀಮಾನ್ ಪ್ರಹ್ಲಾದ ಜೋಶಿಯವರ ವಿರುದ್ಧ ಸಮಾಜಕ್ಕೆ ಪೂಜ್ಯರೆನಿಸಿಕೊಂಡಿರುವ ದಿಂಗಾಲೇಶ್ವರ ಶ್ರೀಗಳು ಪಕ್ಷೇತರರಾಗಿ ಸ್ಪರ್ಧಿಸುತ್ತಿರುವುದು!!! ತಮ್ಮ ಈ ನಿರ್ಧಾರಕ್ಕೆ ದಿಂಗಾಲೇಶ್ವರ ಶ್ರೀಗಳು ಕೊಡುತ್ತಿರುವ ಕಾರಣ “ಮಾನ್ಯ ಪ್ರಹ್ಲಾದ ಜೋಶಿಯವರು ಲಿಂಗಾಯತ ನಾಯಕರನ್ನು ತುಳಿದು ಲಿಂಗಾಯತ ಸಮಾಜಕ್ಕೆ ಬಹುದೊಡ್ಡ ದ್ರೋಹವನ್ನೆಸಗಿದ್ದಾರೆ; ಆದುದರಿಂದ ಚುನಾವಣೆಯಲ್ಲಿ ತಾವು ಜೋಶಿಯವರನ್ನು ಸೋಲಿಸಿ ಅವರಿಗೆ ಎಂದೂ ಮರೆಯದ ಪಾಠ ಕಲಿಸಹೊರಟಿದ್ದೇವೆ” ಎಂಬುದು. ಸಾರ್ವಜನಿಕವಾಗಿ ಈ ರೀತಿಯ ಹೇಳಿಕೆಗಳನ್ನು ಕೊಡುವ ಮೂಲಕ ಜೋಶಿಯವರ ಮೇಲೆ ಗಂಭೀರವಾದ ಆರೋಪವನ್ನು ಹೊರಿಸಿದ್ದಾರೆ ದಿಂಗಾಲೇಶ್ವರ ಶ್ರೀಗಳು! ಆದರೆ ದಿಂಗಾಲೇಶ್ವರ ಶ್ರೀಗಳು ಜೋಶಿಯವರ ವಿರುದ್ಧ ಮಾಡಿದ, ಮಾಡುತ್ತಿರುವ ಇಷ್ಟೊಂದು ಗಂಭೀರವಾದ ಆರೋಪಗಳಲ್ಲಿ ಯಾವೊಂದಕ್ಕೂ ಈ ತನಕ ಒಂದೇ ಒಂದು ಪುರಾವೆಯನ್ನೂ ಯಾಕೆ ಕೊಟ್ಟಿಲ್ಲ ಎಂಬುದು ಪ್ರಜ್ಞಾವಂತ ಮತದಾರರ ಪ್ರಶ್ನೆ. ದಿಂಗಾಲೇಶ್ವರ ಶ್ರೀಗಳು ಪ್ರತಿನಿಧಿಸುತ್ತಿರುವುದು ಜಗಜ್ಜ್ಯೋತಿ ಬಸವಣ್ಣನವರನ್ನು! ತಾವು ಆ ಪೀಠದಲ್ಲಿ ಕುಳಿತು ಮಂದಿಗೆ ಬೋಧಿಸುತ್ತಿರುವುದು “ನುಡಿದರೆ ಮುತ್ತಿನ ಹಾರದಂತಿರಬೇಕು; ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು; ನುಡಿದರೆ ಲಿಂಗ ಮೆಚ್ಚಿ ಅಹುದಹುದೆನಬೇಕು” ಎಂಬ ಅದೇ ಬಸವಣ್ಣನವರ ಸರ್ವಶ್ರಷ್ಠ ತತ್ತ್ವೋಪದೇಶವನ್ನು!
ಸಾರ್ವಜನಿಕವಾಗಿ ಯಾವುದೇ ಭ್ರಷ್ಟಾಚಾರದ ಆರೋಪಕ್ಕೂ ಈ ತನಕ ತುತ್ತಾಗದಿರುವ, ತಮ್ಮ ರಾಜಕೀಯ ಎದುರಾಳಿಗಳ ಬಗೆಗೆ ಇಂದಿನ ತನಕವೂ ಎಲ್ಲಿಯೂ ಒಂದೇ ಒಂದು ಕೀಳು ಪದವನ್ನಾಗಲಿ, ಅಸಭ್ಯ ಭಾಷೆಯನ್ನಾಗಲಿ ಬಳಸದ, ಸಭ್ಯರಲ್ಲಿ ಸಭ್ಯ ರಾಜಕಾರಣಿ ಎಂದು ಪ್ರಜ್ಞಾವಂತ ಸಮಾಜದಲ್ಲಿ ಗುರುತಿಸಲ್ಪಟ್ಟಿರುವ ಶ್ರೀಯುತ ಪ್ರಹ್ಲಾದ ಜೋಶಿಯವರ ಮೇಲೆ ತಾವು ಹೊರಿಸಿದ ಅಷ್ಟೊಂದು ಗಂಭೀರವಾದ ಆರೋಪಕ್ಕೆ ಯಾವುದೇ ಪುರಾವೆಯನ್ನೂ ನೀಡದ ದಿಂಗಾಲೇಶ್ವರ ಶ್ರೀಗಳ ಪ್ರಾಮಾಣಿಕತೆಯ ಬಗೆಗೇ ಸಂಶಯವೇಳುವುದು ಸಹಜವಲ್ಲವೆ…? ಪ್ರಾಮಾಣಿಕತೆಗೆ ದೂರವಾದ ಅವರ ಈ ನುಡಿಗಳು ಮುತ್ತಿನ ಹಾರದಂತೆಯೋ ಮಾಣಿಕ್ಯದ ದೀಪ್ತಿಯಂತೆಯೋ ಇದೆಯೆಂದು ಪ್ರಾಮಾಣಿಕರಾದ ಯಾವ ವ್ಯಕ್ತಿಗಳಿಗಾದರೂ ಅನಿಸುವುದಕ್ಕೆ ಸಾಧ್ಯವುಂಟೆ? ಮೇಲ್ನೋಟಕ್ಕೆ ಸಟೆಯೆಂದೇ ತೋರುವ ಈ ನುಡಿಗಳನ್ನು ಯಾವ ಲಿಂಗ ಮೆಚ್ಚಿ ಅಹುದಹುದೆನ್ನುತ್ತದಂತೆ…?? ಒಂದು ವೇಳೆ ಶ್ರೀಗಳ ಈ ಆರೋಪವು ದಿಟವೇ ಆಗಿದ್ದಲ್ಲಿ ಅದಕ್ಕೆ ತಕ್ಕ ಪುರಾವೆಯನ್ನೊದಗಿಸಬೇಕಾದುದು ಅಷ್ಟೊಂದು ಎತ್ತರದ ಪೀಠದಲ್ಲಿ ಕುಳಿತಿರುವ ಅವರ ನೈತಿಕ ಹೊಣೆಯಲ್ಲವೆ..??
ಯಾವಾಗ ಮಾನ್ಯ ಪ್ರಹ್ಲಾದ ಜೋಶಿಯವರಂತಹ ಮರ್ಯಾದಸ್ಥ ಜನನಾಯಕರ ವಿರುದ್ಧ ಇಷ್ಟೊಂದು ಗಂಭೀರವಾದ ಆರೋಪಗಳನ್ನು ದಿಂಗಾಲೇಶ್ವರ ಶ್ರೀಗಳು ಮಾಡಿದರೋ ಆವಾಗಲೇ ತಮ್ಮ ಪ್ರತಿಯೊಂದು ಆರೋಪಕ್ಕೂ ಸರಿಯಾದ ಪುರಾವೆಯೊನ್ನೊದಗಿಸಬೇಕಾದುದು ಶ್ರೀಗಳ ಬಹುದೊಡ್ಡ ಕರ್ತವ್ಯ ಎಂಬುದನ್ನು ಅವರೂ ಸೇರಿದಂತೆ ಯಾರೊಬ್ಬರೂ ಅಲ್ಲಗಳೆಯುವಂತಿಲ್ಲ ತಾನೆ…? ಹಾಗೆ ಮಾಡದೆ ದಿಂಗಾಲೇಶ್ವರ ಶ್ರೀಗಳು ಜೋಶಿಯವರ ಮೇಲೆ ಕೇವಲ ಆರೋಪಗಳನ್ನಷ್ಟೇ ಹೊರಿಸುತ್ತ ಹೋಗುವುದನ್ನು ನೋಡಿದರೆ ಶ್ರೀಗಳು ಜೋಶಿಯವರಂತಹ ಸಭ್ಯ ಜನನಾಯಕರ ಚಾರಿತ್ರ ವಧೆ ಮಾಡಹೊರಟಿರಬಹುದೆ..?? ಎಂಬ ತೀವ್ರವಾದ ಸಂದೇಹಕ್ಕೆ ಎಡೆಮಾಡಿಕೊಡುತ್ತವೆ ಪರಸ್ಪರ ಹೊಂದಿಕೆಯಾಗದ ಶ್ರೀಗಳ ಈ ನುಡಿ ಹಾಗೂ ನಡೆಗಳು!! ವೈಯಕ್ತಿಕ ಕಾರಣಕ್ಕಾಗಿಯೋ ಆಮಿಷಕ್ಕೊಳಗಾಗಿಯೋ ವ್ಯಕ್ತಿಯೊಬ್ಬನ ಚಾರಿತ್ರವಧೆ ಮಾಡುವುದು ಸಾಮಾನ್ಯ ಅಪರಾಧವಲ್ಲ. ಅದರಲ್ಲೂ ದಿಂಗಾಲೇಶ್ವರ ಶ್ರೀಗಳಂತಹ ಪೂಜ್ಯ ಸ್ಥಾನದಲ್ಲಿ ಮಂಡಿಸಿದವರು ಅಂತಹ ಅಪರಾಧವನ್ನೆಸಗುತ್ತಾರೆ ಎಂದಾದರೆ ಸಾಮಾನ್ಯನೊಬ್ಬನ ಅಪರಾಧಕ್ಕಿಂತ ಸಹಸ್ರ ಪಟ್ಟು ಗಂಭೀರವಾದ ಅಪರಾಧವೆಂದು ಪರಿಗಣಿಸಲ್ಪಡಬೇಕಾಗತ್ತದೆ. ಅಲ್ಲವೆ..? ಮಾತ್ರವಲ್ಲ, ಚಾರಿತ್ರವಧೆ ಎಂಬುದು ಒಂದು ಮಹಾಪಾಪ ಎಂಬುದನ್ನು ಅರಿಯದಷ್ಟು ಮೂಢರಲ್ಲ ತಾನೆ ದಿಂಗಾಲೇಶ್ವರ ಶ್ರೀಗಳು…?
ತಾವು ಕುಳಿತಿರುವ ಸ್ಥಾನದ, ಮೈಮೇಲೆ ಧರಿಸಿರುವ ಕಾವಿಯ, ಹಣೆಗೆ ಹಚ್ಚಿಕೊಂಡಿರುವ ವಿಭೂತಿಯ, ಕೊರಳಲ್ಲಿ ಧರಿಸಿರುವ ರುದ್ರಾಕ್ಷಿ ಮಾಲೆಯ, ಅಂಗೈಯಲ್ಲಿ ಧರಿಸಿದ ಇಷ್ಟಲಿಂಗದ ಮಹತ್ತ್ವದ ಅರಿವು ಇವರಿಗೆ ಇರುವುದೇ ನಿಜವಾದರೆ, ಆ ಸ್ಥಾನದಲ್ಲಿ ಕುಳಿತು ಯಾವ ಸಮಾಜವನ್ನು ಸ್ವಚ್ಛಗೊಳಿಸಲು, ಸ್ವಸ್ಥಗೊಳಿಸಲು ತಾವು ಹೊರಟಿದ್ದಾರೋ ಅಂತಹ ಸಮಾಜದ ಒಬ್ಬಾನೊಬ್ಬ ವ್ಯಕ್ತಿ ಒಂದು ತಪ್ಪು ಮಾಡಿದಾಗ ಅಂತಹವನನ್ನು ಕರೆದು ತಮ್ಮೆದುರು ನಿಲ್ಲಿಸಿಕೊಂಡು ಆತನ ತಪ್ಪನ್ನು ಆತನಿಗೆ ತಿಳಿಸಿಕೊಟ್ಟು, ಚೆನ್ನಾಗಿ ಬುದ್ಧಿ ಹೇಳಿ, ತಿದ್ದಿ, ಸರಿದಾರಿಗೆ ಹಚ್ಚುವ ಕೆಲಸವನ್ನು ಮಾಡಬೇಕಾಗಿದ್ದುದು ಅವರ ಕರ್ತವ್ಯವಾಗಿತ್ತೇ ಹೊರತು ಆ ದಾರಿಯನ್ನು ಬಿಟ್ಟು, ಇಂದಿನ ದಿನಗಳಲ್ಲಿ ಕೊಚ್ಚೆಯಿಂದ ತುಂಬಿ ತುಳುಕುತ್ತ ಗಬ್ಬು ನಾರುತ್ತಿರುವ ಚುನಾವಣೆಯ ಆಖಾಡಕ್ಕೆ ಇಳಿದು, ತಮಗೆ ಯಾವ ಲೆಕ್ಕದಲ್ಲೂ ಸಮದಂಡಿಯಲ್ಲದ ಜೋಶಿಯವರಂತಹ ಒಬ್ಬ ಸಾಮಾನ್ಯವ್ಯಕ್ತಿಯ ವಿರದ್ಧ ತೊಡೆ ತಟ್ಟುವ ಮೂಲಕ ತಾವು ಕುಳಿತಿರುವ ಪೀಠದ ಹಾಗೂ ಧರಿಸಿರುವ ಎಲ್ಲ ವಸ್ತುಗಳ, ಪ್ರತಿನಿಧಿಸುತ್ತಿರುವ ಎಲ್ಲ ತತ್ತ್ವಗಳ ಪಾವಿತ್ರ್ಯವನ್ನು ಮಣ್ಣುಗೂಡಿಸುವ ಮೂಲಕ ಸಮಸ್ತ ಸಮಾಜಕ್ಕೆ ತಾವೆಂತಹ ಕೆಟ್ಟ ಮೇಲ್ಪಂಕ್ತಿಯನ್ನು ಹಾಕುತ್ತಿದ್ದೇವೆ? ಇಡಿಯ ಸಮಾಜದಲ್ಲಿ ಅದೆಂತಹ ಅಸ್ವಾಸ್ಥ್ಯಕ್ಕೆ ತಾವು ಕಾರಣರಾಗುತ್ತಿದ್ದೇವೆ?? ಇದರ ಪರಿಣಾಮವೇನಾದೀತು??? ಎಂಬ ಒಂದು ಸಾಮಾನ್ಯ ಯೋಚನೆಯೂ ಶ್ರೀಗಳ ತಲೆಯಲ್ಲಿ ಯಾಕೆ ಸುಳಿಯುತ್ತಿಲ್ಲ…?
ಯುದ್ಧವೆಂದ ಬಳಿಕ ತಾವು ಗೆದ್ದೇ ಗೆಲ್ಲುತ್ತೇವೆಂದು ಯಾರಾದರೂ ಹೇಳುವುದಕ್ಕೆ ಸಾಧ್ಯವಿಲ್ಲ ತಾನೆ? ಯುದ್ಧದಲ್ಲಿ ಗೆಲ್ಲಲೂಬಹುದು ಸೋಲಲೂಬಹುದು; ಅದು ಮನುಷ್ಯರಾದ ನಮ್ಮ ಕೈಯಲ್ಲಿಲ್ಲ. ಯುದ್ಧದ ಪರಿಣಾಮ ಯಾವತ್ತೂ ದೈವಾಯತ್ತವಾದದು ಎಂಬ ಸಾಮಾನ್ಯಜ್ಞಾನ ಶ್ರೀಗಳಂತಹ ಒಂದು ಮಠಾಧಿಪತಿಯ ಸ್ಥಾನದಲ್ಲಿ ಕುಳಿತವರಿಗೆ ಇರಲೇಬೇಕಲ್ಲವೆ? ಇದೇ ಕ್ಷೇತ್ರದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಲೆಯ ಹೊರತಾಗಿಯೂ ಮಹೇಶ ಟೆಂಗಿನಕಾಯಿಯವರ ವಿರುದ್ಧ ಜಗದೀಶ ಶೆಟ್ಟರವರು ಸೋತಿರುವುದೇ ಇದಕ್ಕೆ ಸಾಕ್ಷಿ. ಹಾಗಿದ್ದ ಮೇಲೆ ಜೋಶಿಯವರ ವಿರುದ್ಧ ಸ್ಪರ್ಧಿಸುವ ಮೂಲಕ ದಿಂಗಾಲೇಶ್ವರ ಶ್ರೀಗಳು ಮಾಡಹೊರಟಿರುವ ಸಾಧನೆಯಾದರೂ ಯಾವುದು?? ಜೋಶಿಯವರ ವಿರುದ್ಧ ತಾವು ಗೆದ್ದೇಗೆಲ್ಲುತ್ತೇವೆಂಬ ಭ್ರಮೆ ಶ್ರೀಗಳಿಗೆ ಇಲ್ಲವೆಂದಾದರೆ ಪರ್ಯಾಯವಾಗಿ ಜೋಶಿಯವರಿಗೆ ಸಿಗಬೇಕಾದ ಮತಗಳ ವಿಭಜನೆಗೆ ತಾವು ಕಾರಣರಾಗುವ ಮೂಲಕ ರಾಷ್ಟ್ರದ್ರೋಹಿಗಳೊಂದಿಗೆ, ರಾಷ್ಟ್ರದ್ರೋಹಿ ಪಕ್ಷಗಳೊಂದಿಗೆ ತಮ್ಮನ್ನು ಗುರುತಿಸಿಕೊಂಡು, ಮೋದಿಯವರನ್ನು ಸೋಲಿಸಬೇಕೆಂಬ ಒಂದೇ ಒಂದು ಉದ್ದೇಶಕ್ಕಾಗಿ (one point programme) ದೇಶದ ಶತ್ರುಗಳೊಂದಿಗೆ ಕೈಜೋಡಿಸಿ ರಾಷ್ಟ್ರವನ್ನು ಶತ್ರುಗಳಿಗೆ ಮಾರಾಟಮಾಡ ಹೊರಟಿರುವ ಕಾಂಗ್ರೆಸ್ ಎಂಬ ಭಾರತ ವಿರೋಧಿ, ಸನಾತನ ಧರ್ಮವಿರೋಧಿ, ರಾಷ್ಟ್ರದ್ರೋಹಿ ಪಕ್ಷದ ರೊಟ್ಟಿಗೆ ತುಪ್ಪದ ಪಾತ್ರೆಯನ್ನು ತಾವೇ ಕೈಯಾರೆ ಒಡ್ಡುವ ಮೂಲಕ ದಿಂಗಾಲೇಶ್ವರ ಶ್ರೀಗಳು ಪರ್ಯಾಯವಾಗಿ ರಾಷ್ಟ್ರದ್ರೋಹವನ್ನು ಬೆಂಬಲಿಸದಂತೆಯೇ ಆಗಲಿಲ್ಲವೆ…??? ಹಾಗಾದರೆ ರಾಷ್ಟ್ರಕಾಗಲಿ, ರಾಷ್ಟ್ರದ ಭದ್ರತೆಗಾಗಲಿ, ರಾಷ್ಟ್ರದ ಪ್ರಜೆಗಳ ಹಿತಕ್ಕಾಗಲಿ ಶ್ರೀಗಳ ಬದ್ಧತೆಯೇನು..???
ಈ ಎಲ್ಲ ಪ್ರಶ್ನೆಗಳಿಗೆ ದಿಂಗಾಲೇಶ್ವರ ಶ್ರೀಗಳಿಂದ ಉತ್ತರವನ್ನು ಬಯಸುವ ಹಕ್ಕು ಇವರಿಗೆ ತಮ್ಮ ಅಮೂಲ್ಯ ಮತವನ್ನು ನೀಡಬೇಕಾದ ಪ್ರತಿಯೊಬ್ಬ ಮತದಾರನಿಗೂ ಇದೆಯೆಂಬುದು ಸರ್ವರೂ ಒಪ್ಪತಕ್ಕ ವಿಷಯ ತಾನೆ?
ತಮ್ಮನ್ನು ಮನುಷ್ಯರೆಂದು ಹೇಳಿಕೊಳ್ಳುವ ಮತಭ್ರಾಂತರ ಒಂದು ಸಮೂಹ ಕಾಶ್ಮೀರದ ಪಂಡಿತ ಸಮುದಾಯದ ಮೇಲೆ ನಡೆಸಿದ ಮಾನವೀಯತೆಗೇ ಅವಮಾನವೆನಿಸಿದ ಘೋರ ಪೈಶಾಚಿಕ ಅತ್ಯಾಚಾರಕ್ಕೆ ಮೌನ ಸಮ್ಮತಿಯನ್ನಿತ್ತ; ಮತದ ಭೂತ ಹಿಡಿಸಿಕೊಂಡ ಇದೇ ನರರಾಕ್ಷಸ ವರ್ಗ ಕೇರಳದಲ್ಲೂ ದೇಶದ ಮೂಲೆಮೂಲೆಗಳಲ್ಲೂ ’ಲವ್ ಜಿಹಾದ್’ ಹೆಸರಿನಲ್ಲಿ ವಿಶ್ವದ ಹೆಣ್ತನದ ಮೇಲೆಯೇ, ಮಾತೃತ್ವದ ಮೇಲೆಯೇ ನಡೆಸಿದ-ನಡೆಸುತ್ತಿರುವ ಅಮಾನುಷ ಅತ್ಯಾಚಾರ-ಅನಾಚಾರಗಳ ಬಗೆಗೆ ಹಾಗೂ ಸಮಸ್ತ ಮಾನವ ಜನಾಂಗವೇ ತಲೆ ತಗ್ಗಿಸಬೇಕಾದಂತಹ ’ಸಂದೇಶ ಕಾಳಿ ಪ್ರಕರಣ’ದ ಬಗೆಗೆ ಇಂದಿನ ತನಕವೂ ಒಮ್ಮೆಯಾದರೂ ತುಟಿಬಿಚ್ಚದ; ಸ್ಟಾಲಿನ್-ಉದಯನಿಧಿ-ರಾಜಾ-ಕಮಲಹಾಸನರಂತಹ ಸೈತಾನರ ಕೂಟ ರಾಷ್ಟ್ರದ ಅಸ್ಮಿತೆ ಹಾಗೂ ಏಕತೆಯ ಮೇಲೆ ನಿರಂತರವಾಗಿ ನಡೆಸಿದ, ನಡೆಸುತ್ತಿರುವ ಪ್ರಹಾರಗಳನ್ನು, ಬಹುಸಂಖ್ಯಾತ ಹಿಂದುಗಳ ಮೇಲೆ ನಡೆಸುತ್ತಿರುವ ರಕ್ತ ಕುದಿಸುವಂತಹ ದೌರ್ಜನ್ಯವನ್ನು, ಕೇಜ್ರಿವಾಲನಂತಹ ರಾಷ್ಟ್ರದ್ರೋಹಿಗಳ ಬ್ರಹ್ಮಾಂಡ ಭ್ರಷ್ಟಾಚಾರ ಹಾಗೂ ರಾಷ್ಟ್ರದ ಭದ್ರತೆಗೆ ಸವಾಲೊಡ್ಡುತ್ತಿರುವ ಭಯಾನಕ ಕರ್ಮಕಾಂಡಗಳನ್ನು ಬಹಿರಂಗವಾಗಿಯೇ ಸಮರ್ಥಿಸಿಕೊಳ್ಳುತ್ತಿರುವ: ತಾವು ಅಧಿಕಾರಕ್ಕೆ ಬಂದರೆ ಮೋದಿಸರಕಾರ ರದ್ದುಗೊಳಿಸಿದ ಕಾಶ್ಮೀರದ ಮರಣಶಾಸನವಾಗಿದ್ದ ಸಂವಿಧಾನದ 370ನೆಯ ವಿಧಿಯನ್ನು ಪುನಃ ಜಾರಿಗೆ ತರುವುದಾಗಿ ಘೋಷಿಸಿದ; 5 ಶತಮಾನಗಳ ಹಿಂದೆ ರಾಷ್ಟ್ರ ಕಳೆದುಕೊಂಡಿದ್ದ ಅಸ್ಮಿತೆಯ ಪುನಃಸ್ಥಾಪನೆಯ, ಸಂವಿಧಾನ ಕೊಡಮಾಡಿರುವ ಮೂಲಭೂತ ಹಕ್ಕಿನ ನ್ಯಾಯಯುತ ಅನುಷ್ಠಾನದ, ಕೋಟ್ಯಂತರ ಭಾರತೀಯರ ಹಾಗೂ ಜಗತ್ತಿನ ಸಮಸ್ತ ಆಸ್ತಿಕ ಹಿಂದು ಜನಾಂಗದ ಅಸ್ತಿತ್ವಕ್ಕೆ ಸಾರ್ಥಕತೆಯನ್ನು ತಂದುಕೊಟ್ಟ ಅಯೋಧ್ಯೆಯಲ್ಲಿನ ಶ್ರೀರಾಮಚಂದ್ರನ ಪ್ರಾಣಪ್ರತಿಷ್ಠೆಯ ಐತಿಹಾಸಿಕ ರಾಷ್ಟ್ರೀಯ ಕಾರ್ಯಕ್ರಮವನ್ನು ಬಹಿರಂಗವಾಗಿಯೇ ಬಹಿಷ್ಕರಿಸುವ ಮೂಲಕ ರಾಷ್ಟ್ರಕ್ಕೂ, ರಾಷ್ಟ್ರದ ಸಂವಿಧಾನಕ್ಕೂ ಅಪಮಾನವೆಸಗಿದ; ವಿಶ್ವದ ಕೋಟ್ಯಂತರ ಮಾನವರ ಆರಾಧ್ಯದೈವವೂ, ಅಸಂಖ್ಯ ಆಸ್ತಿಕರಿಗೆ ಪ್ರೇರಣಾಸ್ರೋತಸ್ಸೂ, ಮಾನವೀಯತೆಗೆ ಮರ್ಯಾದೆಯೂ, ಮನುಕುಲಕ್ಕೆ ಅಲಂಕಾರವೂ ಆದ ’ರಾಷ್ಟ್ರಪುರುಷ ಶ್ರೀರಾಮಚಂದ್ರ ಹುಟ್ಟಿರಲೇ ಇಲ್ಲ, ಆತನೊಬ್ಬ ಕಾಲ್ಪನಿಕ ವ್ಯಕ್ತಿ’ ಎಂದು ದೇಶದ ಸರ್ವೋಚ್ಚ ನ್ಯಾಯಾಲಯದಲ್ಲಿ ಅಫಿದವಿತ್ ಸಲ್ಲಿಸುವ ಮೂಲಕ ಪ್ರಪಂಚದ ಇತಿಹಾಸಕ್ಕೂ ಮಾನವತೆಗೂ ಅವಮಾನವೆಸಗಿದ; ಲಕ್ಷಾಂತರ ಮುಸ್ಲಿಂ ಮಾತೆಯರ ಹಾಗೂ ಸೋದರಿಯರ ಮರ್ಯಾದೆಯ ಬದುಕಿಗೆ ಕೊಳ್ಳಿಯನ್ನಿಟ್ಟಿದ್ದ, ಮೋದಿಸರ್ಕಾರದ ಸತತ ಪ್ರಯತ್ನದಿಂದ ರಾಷ್ಟ್ರದ ಸರ್ವೋಚ್ಚ ನ್ಯಾಯಾಲಯದಿಂದ ನಿಷೇಧಕ್ಕೆ ಒಳಗಾದ ತ್ರಿವಳಿತಲಾಖನ್ನು ಮತ್ತೆ ಜಾರಿಗೆ ತರುತ್ತೇವೆಂದು ಹೇಳುತ್ತಿರುವ; ಊರ ದೇವಾಲಯದ ಮುಂದೆ ತಮ್ಮ ಆರಾಧ್ಯ ದೇವರ ಧ್ವಜವನ್ನು ಹಾರಿಸುವ ಧಾರ್ಮಿಕ ಸ್ವಾತಂತ್ರ್ಯವನ್ನು (ಸಂವಿಧಾದತ್ತ ಮೂಲಭೂತಹಕ್ಕನ್ನು) ಅಧಿಕಾರದ ಬರ್ಬರ ದುರುಪಯೋಗದ ಮೂಲಕ ಕಸಿದುಕೊಳ್ಳುವ; ಪ್ರತಿಭಟಿಸಹೋದ ಭಗವದ್ಭಕ್ತ ಮಹಿಳೆಯರನ್ನು ಮನಬಂದಂತೆ ನೆಲದಲ್ಲಿ ಎಳೆದಾಡಿ ಅವರ ಮೇಲೆ ಲಾಠಿಪ್ರಹಾರದಂತಹ ಅಮಾನುಷ ಅತ್ಯಾಚಾರ ನಡೆಸುವ; ರಾಷ್ಟ್ರದ ಧಾರ್ಮಿಕ ಸಂಕೇತವಾದ, ತ್ಯಾಗದ ಪ್ರತೀಕವಾದ ಕೇಸರಿ ಬಣ್ಣದ ಮೇಲೆ, ಹನುಮಾನ್ ಚಾಲೀಸ ಪಠಿಸುವವರ ಮೇಲೆ, ಸಮಸ್ತ ರಾಷ್ಟ್ರದ ಆಧಾರವಾದ ಸನಾತನ ಧರ್ಮದ ಮೇಲೆ ವಿಷಕಾರುವ; ರಾಮಭಕ್ತರ ಮೇಲೆ, ರಾಷ್ಟ್ರಭಕ್ತರ ಮೇಲೆ, ಗೋಭಕ್ತರ ಮೇಲೆ ಸುಳ್ಳು ಕೇಸುಗಳನ್ನು ಹಾಕಿ ಅವರನ್ನು ಕಾರಾಗೃಹಕ್ಕೆ ತಳ್ಳುವ; ಜಿಹಾದಿಗಳ ವಿರುದ್ಧ ತಮ್ಮನ್ನು ಸಮಾಜಸಂಘಟನೆಯಲ್ಲಿ ತೊಡಗಿಸಿಕೊಂಡ ಹಿಂದು ಕಾರ್ಯಕರ್ತರಿಗೆ ಗಡಿಪಾರಿನ ಶಿಕ್ಷೆ ವಿಧಿಸುವ; ಶತ್ರುದೇಶದ ಪರ ಘೋಷಣೆ ಕೂಗುವ ರಾಷ್ಟ್ರದ್ರೋಹಿಗಳಿಗೆ ಹಿಂಬಾಗಿಲಿನ ಮೂಲಕ ರಕ್ಷಣೆ ನೀಡುವ; ಕಾನೂನುಗಳನ್ನು, ದಾಖಲೆಗಳನ್ನು ತಮಗಿಷ್ಟ ಬಂದಂತೆ ತಿದ್ದಿ ತಿರುಚಿ ಸಾವಿರಾರು ಕೋಟಿ ರೂಪಾಯಿಗಳ ಬೆಲೆ ಬಾಳುವ ರಾಷ್ಟ್ರೀಯ ಆಸ್ತಿ-ಪಾಸ್ತಿಗಳನ್ನು ಲೂಟಿ ಹೊಡೆಯಲು ರಾಷ್ಟ್ರದ್ರೋಹಿಗಳಿಗೆ ಸರ್ವವಿಧದ ಅನುಕೂಲಗತೆಗಳನ್ನು ಕಲ್ಪಿಸಿಕೊಡುವ; ದೇವಸ್ಥಾನಗಳ ಹುಂಡಿಯ ಹಣವನ್ನು ಲೂಟಿ ಮಾಡಲು ಹೊಸ ಹೊಸ ಕಾನೂನುಗಳನ್ನು ರಚಿಸುವ; ಬಿಟ್ಟಿಭಾಗ್ಯಗಳಿಗಾಗಿ, ಮುಸ್ಲಿಮರ ತುಷ್ಟೀಕರಣಕ್ಕಾಗಿ, ಮಂತ್ರಿ-ಶಾಸಕರಿಗೆ ಕೋಟ್ಯಂತರ ರೂಪಾಯಿಗಳ ಕಾರು-ಬಂಗಲೆಗಳಿಗಾಗಿ ರಾಜ್ಯದ ಬೊಕ್ಕಸವನ್ನು ದಿವಾಳಿಯೆಬ್ಬಿಸಿ, ಕುಡಿಯಲು ನೀರಿಲ್ಲದೆ ಕಂಗಾಲಾದ ಅನ್ನದಾತನಿಗೆ ಬರಪರಿಹಾರ ನೀಡಲು ಕೇಂದ್ರಸರ್ಕಾರ ಹಣ ಕೊಡುತ್ತಿಲ್ಲವೆಂದು ಮೋದಿಯವರ ಮೇಲೆ ಗೂಬೆ ಕೂರಿಸುವ; ಲವ್ ಜಿಹಾದಿಗಳಿಗೆ-ಲ್ಯಾಂಡ್ ಜಿಹಾದಿಗಳಿಗೆ-ಗೋಹಂತಕರಿಗೆ ಸರ್ವತಂತ್ರ ಸ್ವಾತಂತ್ರ್ಯವನ್ನಿತ್ತಿರುವ; ಭಯಾನಕ ಅಪರಾಧಿಗಳಿಗೆಲ್ಲ ಬಿಡುಗಡೆಯ ಭಾಗ್ಯವನ್ನು ಕರುಣಿಸಿ ರಾಷ್ಟ್ರದ ಭದ್ರತೆಗೆ ತೀವ್ರಸ್ವರೂಪದ ಅಪಾಯವನ್ನೊಡ್ಡುತ್ತಿರುವ; ವಿದೇಶಿ ನೆಲದಲ್ಲಿ ನಿಂತು ತಮ್ಮ ರಾಷ್ಟ್ರದ ಮಾನವನ್ನೇ ಹರಾಜು ಹಾಕುವ; ರಾಷ್ಟ್ರವಿರೋಧಿ ಶಕ್ತಿಗಳೊಂದಿಗೆ ಕೈಜೋಡಿಸಿ ಸ್ವರಾಷ್ಟ್ರದ ವಿರುದ್ಧವೇ ಮಸಲತ್ತು ನಡೆಸುವ ರಾಷ್ಟ್ರವಿರೋಧಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ವಿರುದ್ಧ ಸ್ಪರ್ಧಿಸಿ ಅವರನ್ನು ಸೋಲಿಸಿದರೆ ಅದು ಭಾರತೀಯಸಮಾಜಕ್ಕೆ, ಮಾನವತೆಗೆ ಹಾಗೂ ಪ್ರಜಾಪ್ರಭತ್ವಕ್ಕೆ ಸಲ್ಲಿಸಬಹುದಾದ ಸರ್ವಶ್ರೇಷ್ಠ ಸೇವೆಯಾಗಬಹುದೆಂಬ ಚಿಂತನೆ ದಿಂಗಾಲೇಶ್ವರ ಶ್ರೀಗಳ ತಲೆಯೊಳಗೆ ಈ ತನಕವೂ ಸುಳಿಯದಿರುವುದು ನಿಜಕ್ಕೂ ವಿಪರ್ಯಾಸವೇ ಸರಿ! ಹಾಗೇನಾದರೂ ಮಾಡುವ ನಿರ್ಧಾರವನ್ನು ದಿಂಗಾಲೇಶ್ವರ ಶ್ರೀಗಳು ಈಗಲಾದರೂ ತೆಗೆದುಕೊಳ್ಳುತ್ತಾರೆಂಬುದಾದರೆ ಅವರ ಪಾದ ತೊಳೆದು ಆ ನೀರನ್ನು ತೀರ್ಥವೆಂದು ಸೇವಿಸಲು ಪ್ರಜ್ಞಾವಂತ ಮತದಾರರ ಹಿಂಡೇ ತುದಿಗಾಲಲ್ಲಿ ನಿಂತಿದೆ ಎಂಬ ಸತ್ಯವನ್ನು ಪೂಜ್ಯ ಶ್ರೀಗಳು ತಿಳಿದುಕೊಂಡರೆ ಒಳ್ಳೆಯದೆಂದು ಭಾರತೀಯರೆಲ್ಲರ ಪ್ರಾಮಾಣಿಕ ಅನಿಸಿಕೆ.
ಇಷ್ಟಾದರೂ ಶ್ರೀಗಳು ತಮ್ಮ ನಿಲುವಿಗೇ ಅಂಟಿಕೊಳ್ಳುತ್ತಾರೆಂದಾದರೆ ಬೆಂಕಿಯನ್ನಾರಿಸಲು ಪೆಟ್ರೋಲನ್ನು ಆರಿಸಿಕೊಂಡಿರುವ ಅವರ ಬುದ್ಧಿಮತ್ತೆಗೆ ಪ್ರಜ್ಞಾವಂತ ಮತದಾರ ಶರಣು, ಶರಣಾರ್ಥಿ.
-ಪ್ರಜ್ಞಾವಂತ ಪ್ರಜೆ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ