- ಡಾ. ಪ್ರಕಾಶ್.ಕೆ. ನಾಡಿಗ್ ತುಮಕೂರು
ಪ್ರಪಂಚ ಕಂಡ ಅದ್ವೀತಿಯ ಆದರ್ಶ ಪುರುಷ ಶ್ರೀರಾಮನ ಹೆಸರನ್ನು ಕೇಳದವರಿಲ್ಲ. ರಾಮನನ್ನು, ಪುಣ್ಯನಾಮನನ್ನು, ರಘುಕುಲಲಲಾಮನನ್ನು, ಸಕಲ ಸದ್ಗುಣ ಸ್ತೋಮನನ್ನು, ಪೂರ್ಣಕಾಮನನ್ನು, ಸಾರ್ವಭೌಮನಾದ ಶ್ರೀರಾಮನ ಆದರ್ಶ ಗುಣಗಳನ್ನು ಪ್ರಪಂಚಕ್ಕೆ ಪರಿಚಯಿಸಿದ ಕೀರ್ತಿ ಕವಿ ವಾಲ್ಮೀಕಿಗೆ ಸೇರುತ್ತದೆ. ಶ್ರೀರಾಮನನ್ನೇ ಕುರಿತಾದ ರಾಮಾಯುಣ ಎಂಬ ಕಾವ್ಯವನ್ನು ಮೊಟ್ಟ ಮೊದಲು ಬರೆದವರು ವಾಲ್ಮೀಕಿ, ಅಷ್ಟೇ ಅಲ್ಲ ಇದು ಸಂಸ್ಕೃತದಲ್ಲಿ ರಚಿತವಾದ ಪ್ರಪಂಚದ ಮೊದಲ ಕಾವ್ಯ, ಹಾಗಾಗಿಯೇ ಇದನ್ನು ಆದಿಕಾವ್ಯವೆಂದು ಕರೆದರು. ಇದನ್ನು ಬರೆದ ವಾಲ್ಮೀಕಿ ಆದಿ ಕವಿಯೆಂದೇ ಪ್ರಸಿದ್ಧರಾದರು. ವಾಲ್ಮೀಕಿ ಮಹರ್ಷಿ ಜಗದ ಮೊದಲ ಕವಿಗಳು. ರಾಮನಾಮ ಬೀಜವನ್ನು ಆಸ್ತಿಕರ ಹೃದಯದಲ್ಲಿ ಬಿತ್ತಿ ಮುಕ್ತಿಯ ಹಾದಿಯನ್ನು ತೋರಿದ ಮಹಾಮಹಿಮರು. ರಾಮಾಯಣ ಮಹಾಕಾವ್ಯವು ಭಾರತ ಜಗತ್ತಿಗೆ ನೀಡಿದ ದೊಡ್ಡ ಕೊಡುಗೆ. ಈ ಕಾವ್ಯವನ್ನು ಬರೆದ ಮಹರ್ಷಿ ಕೇವಲ ಕವಿಯಲ್ಲ ಅವರು ಒಂದು ದೊಡ್ಡ ಜ್ಞಾನ ಭಂಡಾರವಾಗಿದ್ದರು. ಆದರ್ಶ ಪ್ರಾಯರದ ತಂದೆ ತಾಯಿಗಳು, ಸಮಾಜದಲ್ಲಿ ಅವರ ಸ್ಥಾನ ಮಾನ, ಸಹೋದರರ ಸಂಬಂಧ ಹೇಗಿರಬೇಕು, ಸಮಾಜದಲ್ಲಿ ಹೆಣ್ಣಿನ ಸ್ಥಾನಮಾನ ಹಾಗೂ ಘನತೆ ಮುಂತಾದ ವಿಷಯಗಳ ಬಗ್ಗೆ ಇದರಲ್ಲಿ ಮಹರ್ಷಿಗಳು ಬೆಳಕು ಚೆಲ್ಲಿದ್ದಾರೆ. ಸಮಾಜ ಸುಧಾರಕರು ಮಾತ್ರ ಹೀಗೆ ಯೋಚಿಸಲು ಸಾಧ್ಯ ಹಾಗಾಗಿ ವಾಲ್ಮೀಕಿ ಒಬ್ಬ ಶ್ರೇಷ್ಠ ಸಮಾಜ ಸುಧಾರಕರೂ ಆಗಿದ್ದಾರೆ. ಇವರು ರಚಿಸಿದ ರಾಮಾಯಣ ಮಹಾ ಕಾವ್ಯವು ನಮ್ಮ ನೆಲದ ಸಂಸ್ಕೃತಿ, ಆದರ್ಶ ಮೌಲ್ಯಗಳನ್ನು ಎತ್ತಿ ಹಿಡಿಯುತ್ತದೆ.
ವಾಲ್ಮೀಕಿಯಿಂದ ರಚಿತವಾದ ರಾಮಾಯಣ ಮಹಾಕಾವ್ಯ ಸೂರ್ಯ ಚಂದ್ರರಂತೆ ಶಾಶ್ವತವಾದದ್ದು. ಇಂತಹ ಮಹಾ ಕಾವ್ಯ ಪ್ರಪಂಚದಲ್ಲಿ ಮತ್ತೊಂದಿಲ್ಲ ಎಂದರೆ ತಪ್ಪಾಗಲಾರದು. ರಾಮಾಯಣದಲ್ಲಿ ಬರುವ ಎಲ್ಲಾ ಪಾತ್ರಗಳೂ ಆದರ್ಶನೀಯ ಹಾಗೂ ನಮ್ಮ ಮೇಲೆ ಪ್ರಭಾವ ಬೀರುವಂತದ್ದು. ಇಂತಹ ಮಹಾ ಕಾವ್ಯವನ್ನು ಭಾರತೀಯರಿಗೆ ಕೊಟ್ಟ ವಾಲ್ಮೀಕಿಯ ಜೀವನ ವೃತ್ತಾಂತವೂ ರೋಚಕವಾದದ್ದು. ಬೇಡನಾಗಿದ್ದವರು ಋಷಿಯಾಗಿ ಕೊನೆಗೆ ಮಾಹಾಕಾವ್ಯವನ್ನು ಬರೆದು ಆದಿಕವಿಯಾದದ್ದು ದೈವಾನುಗ್ರಹವೇ ಸರಿ. ಆದರ್ಶ ಶ್ರೀರಾಮನನ್ನು ಲೋಕಕ್ಕೆ ಪರಿಚಯಿಸಿದ ವಾಲ್ಮೀಕಿ ಮಹರ್ಷಿಯ ಧ್ಯೇಯಾದರ್ಶಗಳು ಕೂಡ ಇಂದಿಗೂ ಪ್ರಸ್ತುತ. ಸ್ವತಃ ವಾಲ್ಮೀಕಿಯೇ ರಾಮಾಯಣ ಕಾವ್ಯವನ್ನು ರಚಿಸಿದವರಾದರೂ ಉತ್ತರಾಕಾಂಡದಲ್ಲಿ ವಾಲ್ಮೀಕಿಯ ಪ್ರವೇಶವಾಗುತ್ತದೆ, ಆ ಮೂಲಕ ರಾಮಾಯಣದಲ್ಲಿ ಅವರು ಒಂದು ಪಾತ್ರವೂ ಆಗಿ ನಮ್ಮ ಕಣ್ಣ ಮುಂದೆ ನಿಲ್ಲುತ್ತಾರೆ. ವಾಲ್ಮೀಕಿ ಮಹರ್ಷಿಗಳು ರಾಮಾಯಣ ಕಾಲದಲ್ಲಿದ್ದುಕೊಂಡೆ ರಾಮಾಯಣ ಮಹಾಕಾವ್ಯವನ್ನು ಬರೆದರು ಎಂಬುದು ವಿಶೇಷ.
ಆದಿ ಕಾವ್ಯದ ಸೃಷ್ಟಿಗೆ ಪ್ರೇರಣೆಯಾದ ಘಟನೆ: ಬೇಡನಾಗಿದ್ದ ರತ್ನಾಕರನಿಗೆ ನಾರದರು ಒಳಗಣ್ಣು ತೆರೆಸಿದರು. ಬೇಡನಾಗಿದ್ದ ರತ್ನಾಕರ ನಾರದರ ಅನುಗ್ರಹದಿಂದ ಋಷಿಯಾದ. ಋಷಿಯಾದ ವಾಲ್ಮೀಕಿ ಕವಿಯಾದದ್ದು ಇನ್ನು ರೋಚಕ. ವಾಲ್ಮೀಕಿಗಳು ಮಧ್ಯಾಹ್ನದ ಅಹ್ನಿಕ ಕ್ರಿಯೆಗಳನ್ನು ಮುಗಿಸಲು ತಮಾಸ ನದಿಯ ತೀರಕ್ಕೆ ಹೊರಡುತ್ತಿದ್ದಾರೆ. ಜೊತೆಯಲ್ಲಿ ವಾಲ್ಮೀಕಿಯ ಶಿಷ್ಯನಾದ ಭಾರದ್ವಾಜ ಎಂಬಾತನು ಗುರುಗಳ ಬಟ್ಟೆ ಕಮಂಡಲವನ್ನು ಹಿಡಿದು ಹಿಂಬಾಲಿಸುತ್ತಿದ್ದಾನೆ. ಮಧ್ಯಾಹ್ನದ ಸೂರ್ಯನ ರಷ್ಮಿಯಿಂದ ನದಿಯ ನೀರು ಹೊಳೆಯುತ್ತಿದೆ. ನದಿ ಹರಿಯುವ ಶಬ್ದ ಕಿವಿಗೆ ಮಂಜುಳ ನಿನಾದದ ಅನುಭವ ನೀಡುತ್ತಿದೆ. ನಿರ್ಮಲವಾಗಿ ಹರಿಯುತ್ತಿದ್ದ ತಮಾಸ ನದಿಯ ಒಂದು ಜಾಗದಲ್ಲಿ ನಿಂತು ಅಲ್ಲೇ ಸ್ನಾನಮಾಡಲು ನಿರ್ಧರಿಸುತ್ತಾರೆ. ಪ್ರಕೃತಿಯ ಸೊಬಗು ಮನಮೋಹಕವಾಗಿದೆ. ಕಾಡಿನಲ್ಲಿ ಬೆಳೆದ ನಾನಾ ಬಗೆಯ ಪುಷ್ಪಗಳ ಸುಗಂಧ ನದಿಯ ಸುತ್ತೆಲ್ಲಾ ಹರಡಿದೆ. ಇಂತಹ ರಮ್ಯ ಪ್ರಕೃತಿಯ ನಡುವೆ ಮರದಲ್ಲಿ ಎರಡು ಕ್ರೌಂಚ ಪಕ್ಷಿಗಳು ಉಲ್ಲಾಸದಿಂದ ಲಾಸ್ಯೋಲ್ಲಾಸದಲ್ಲಿ ತೊಡಗಿವೆ. ಒಗ್ಗೂಡಿ ನಲಿಯುತ್ತಿದ್ದ ಪಕ್ಷಿಗಳನ್ನು ನೋಡಿ, ಅವುಗಳ ಕೂಗಿನಿಂದ ಕರ್ಣಾನಂದವನ್ನು ಪಡೆಯುತ್ತಿದ್ದ ವಾಲ್ಮೀಕಿ ಮಹರ್ಷಿಗಳು ನೋಡನೋಡುತ್ತಿದ್ದಂತೆ ಅನಾಹುತವೊಂದು ನಡೆದು ಹೋಯಿತು. ಬೇಡನೊಬ್ಬನು ಬಿಟ್ಟ ಬಾಣ ಆ ಪಕ್ಷಿಗಳಲ್ಲಿ ಗಂಡು ಪಕ್ಷಿಗೆ ತಗುಲಿ ನೆತ್ತರು ಉಕ್ಕಿ ಹರಿಯಿತು, ಬಾಣದ ಪೆಟ್ಟಿನಿಂದ ನೆಲಕ್ಕೆ ಬಿದ್ದ ಗಂಡು ಹಕ್ಕಿ ವಿಲವಿಲನೆ ಒದ್ದಾಡಿ ಸತ್ತು ಹೋಯಿತು, ಇದನ್ನು ಕಂಡ ಹೆಣ್ಣು ಪಕ್ಷಿ ರೋಧಿಸಿತು, ಇದನ್ನು ಕಂಡು ವಾಲ್ಮೀಕಿ ಮಹರ್ಷಿಗಳ ಮನಸ್ಸು ಮರುಗಿತು. ಸತ್ತ ಗಂಡು ಪಕ್ಷಿಯ ಮೇಲೆ ಕರುಣೆ ಉಕ್ಕಿತು. ಬೇಡ ಮಾಡಿದ ಕೆಲಸ ಅಮಾನವೀಯವಾದದ್ದು ಎನ್ನಿಸಿತು. ತಕ್ಷಣವೇ ವಾಲ್ಮೀಕಿ ಮಹರ್ಷಿಗಳ ಮನದ ಶೋಕವು ಶ್ಲೋಕದ ರೂಪದಲ್ಲಿ
ಮಾನಿಷಾದ ಪ್ರತಿಷ್ಠಾಂ ತ್ವ ಅಗಮಃ ಶಾಶ್ವತೀಃ ಸಮಾಃ |
ಯತ್ಕ್ರೌಂಚಮಿಥುನಾದೇಕಮವಧೀಃ ಕಾಮಮೋಹಿತಮ್
ಹೊರಹೊಮ್ಮಿತು, ಎಲೈ ಬೇಡನೆ, ಲಾಸ್ಯೋಲ್ಲಾಸದಲ್ಲಿ ತೊಡಗಿದ್ದ ಕ್ರೌಂಚ ಜೋಡಿಯಲ್ಲಿ ಗಂಡು ಪಕ್ಷಿಯನ್ನು ಹೊಡೆದು ಕೊಂದ ನಿನಗೂ ಕೂಡ ಬಾಳಲ್ಲಿ ನೆಲೆಯಿಲ್ಲದಂತಾಗಲಿ ಎಂದು ಶಾಪವನ್ನು ಕೊಟ್ಟುಬಿಟ್ಟರು. ಕ್ರೌಂಚ ಪಕ್ಷಿಯ ಸಾವಿನಿಂದಾಗಿ ಮರುಗಿ ತಮಗರಿವಿಲ್ಲದಂತೆಯೇ ಬೇಡನಿಗೆ ಶಾಪವಿತ್ತಿದ್ದರು. ಮರುಕ್ಷಣದಲ್ಲೇ ಶಾಪವಿತ್ತಿದ್ದಕ್ಕಾಗಿ ಮನದಲ್ಲಿ ಬೇಸರವೂ ಆಗಿತ್ತು. ಅಯ್ಯೋ ನನ್ನಿಂದ ಎಂತಹ ಕೆಲಸವಾಯಿತು, ಕೋಪಕ್ಕೆ ನಾನೇಕೆ ವಶವಾದೆ ಎಂದು ಮರುಗಿದರು. ತನ್ನ ಶಿಷ್ಯನ ಕಡೆ ತಿರುಗಿ ಹೆಣ್ಣು ಹಕ್ಕಿಯ ರೋದನೆಯನ್ನು ಕಂಡು ಮರುಗಿ ಶೋಕಪೀಡಿತನಾಗಿ ಬೇಡನಿಗೆ ಶಾಪವಿತ್ತೆನು. ಶ್ಲೋಕ ರೂಪದಲ್ಲಿ ಬಂದ ಶಾಪದ ವಾಣಿಯು ನಾಲ್ಕು ಪಾದಗಳಿಂದ ಕೂಡಿದೆ, ಪ್ರಾಸಬದ್ದವಾಗಿದೆ, ಹಾಡಲು ಯೋಗ್ಯವಾಗಿದೆ ಅಲ್ಲವೇ ಎಂದು ಕೇಳಿದರು. ಶಿಷ್ಯ ಶ್ಲೋಕವನ್ನು ಮತ್ತೆ ಮತ್ತೆ ಹಾಡಿದ, ಶೋಕದ ಸಮಯದಲ್ಲೂ ಒಂದು ಬಗೆಯ ಆನಂದ ವಾಯಿತು ಅವನಿಗೆ. ಮನಸ್ಸನ್ನು ಕದಡಿದ ಶೋಕವು ಶ್ಲೋಕರೂಪವಾಗಿ ಹೊರಬಂದದ್ದನ್ನು ಕಂಡು ಮಹರ್ಷಿಗಳ ಮನವು ಸ್ವಲ್ಪ ತಿಳಿಯಾಯಿತು. ನದಿಯಲ್ಲಿ ಮಿಂದು ನಾರುಡುಗೆಯನ್ನುಟ್ಟು ಶಿಷ್ಯನೊಡನೆ ಆಶ್ರಮದ ಕಡೆ ಹೆಜ್ಜೆ ಹಾಕಿದರು. ವಾಲ್ಮೀಕಿ ಮುನಿಗಳು ಕುಟೀರವನ್ನು ತಲುಪುತ್ತಿದ್ದಂತೆ ಬ್ರಹ್ಮದೇವರು ಪ್ರತ್ಯಕ್ಷರಾಗಿ ದೈವ ಪ್ರೇರಣೆಯಿಂದಲೇ ಆ ಶ್ಲೋಕ ನಿನ್ನ ಬಾಯಿಂದ ಹುಟ್ಟಿಬಂದಿತು. ಆ ಶ್ಲೋಕದ ರೂಪದಲ್ಲಿಯೇ ಪುರುಷೋತ್ತಮನಾದ ಶ್ರೀರಾಮನ ಕಥೆಯನ್ನು ಬರಿ. ಧರೆಯ ಮೇಲೆ ಎಲ್ಲಿಯವರೆಗೆ ಗಿರಿಪರ್ವತ ನದಿಗಳು ಇರುತ್ತವೆಯೋ ಅಲ್ಲಿಯವರೆಗೆ ರಾಮಾಯಣ ಕಥೆಯು ಪ್ರಚಲಿತವಿರುತ್ತದೆ ಎಂದು ಹೇಳಿ ಅಂತರ್ಧಾನನಾದನು. ಬ್ರಹ್ಮನ ವಾಣಿ ಸತ್ಯಸ್ಯ ಸತ್ಯವಾಯಿತು.
ವಾಲ್ಮೀಕಿ ರಾಮಾಯಣದ ಮಹತ್ವ ವೈಶಿಷ್ಟ್ಯ
ಭರತ ಖಂಡದ ನೀತಿ ಸಂಸ್ಕತಿಗಳು ರಾಮಾಯಣ ಮಹಾಕಾವ್ಯದಲ್ಲಿ ಮಡುಗಟ್ಟಿ ಹರಿದಿವೆ. ಇಲ್ಲಿ ಕವಿಯ ಕಲ್ಪನೆಗಿನ್ನ ಸಹಜತೆಗೆ ಹೆಚ್ಚಿನ ಮಹತ್ವ ಕೊಟ್ಟಿದ್ದಾರೆ. ಕಥಾನಾಯಕನಾದ ಶ್ರೀರಾಮನನ್ನು ಎಲ್ಲೀಯೂ ದೇವರೆಂದು ಹೇಳಿಲ್ಲ, ಆದರೆ ನರನಾದ ಶ್ರೀರಾಮನನ್ನು ಆ ಪದವಿಗೆ ಮುಟ್ಟಿಸಿದ್ದಾರೆ. ರಾಮಾಯಣದಲ್ಲಿ ಬರುವ ಪಾತ್ರಗಳು ಎಲ್ಲಾ ಕಾಲದಲ್ಲೂ ಇರುವ ಸಜೀವ ಪಾತ್ರಗಳಾಗಿವೆ. ರಾಮಾಯಣ ವಾಲ್ಮೀಕಿ ಬರೆದದ್ದು ಮೂಲವೇ ಆದರೂ ಅದರಿಂದ ಪ್ರಭಾವಿತರಾಗಿ ನೂರಾರು ಕೃತಿಗಳು ಜಗತ್ತಿನಲ್ಲಿ ರಚನೆಯಾಗಿದೆ. ಜಗತ್ತಿನಲ್ಲಿ ರಚನೆಯಾಗಿರುವ ಗ್ರಂಥಗಳಲ್ಲಿ ಹೆಚ್ಚು ರಾಮಾಯಣವನ್ನೇ ಕುರಿತು ರಚಿತವಾಗಿದೆ. "ತಿಣುಕಿದನು ಫಣಿರಾಯ ರಾಮಾಯಣದ ಕವಿಗಳ ಭಾರದಲಿ'' ಎಂದು ಕುಮಾರವ್ಯಾಸ ಹೇಳಿದ್ದಾನೆ. "ತಿಣುಕಿದನು ಫಣಿರಾಯ ರಾಮಾಯಣದ ಕಥನದಲ್ಲಿ" ಅಂದರೆ ಈ ಭೂಮಿಯನ್ನು ಹೊತ್ತಿರುವ ಅದಿಶೇಷನು ಭೂಮಿಯ ಭಾರಕ್ಕೆ ತಿಣುಕಲಿಲ್ಲವಂತೆ ರಾಮಾಯಣವೆಂಬ ಕೃತಿಗಳ ಭಾರಕ್ಕೆ ತಿಣುಕಿದನಂತೆ ಎಂಬ ಮಾತಿನಿಂದ ನಮಗೆ ತಿಳಿಯುವ ಅಂಶವೆಂದರೆ ಜಗತ್ತಿನಲ್ಲಿ ರಚನೆಯಾಗಿರುವ ಕಾವ್ಯಗಳಲ್ಲಿ ಹೆಚ್ಚು ರಾಮಾಯಣವನ್ನು ಕುರಿತು ರಚನೆಯಾದ ಗ್ರಂಥವಾಗಿದೆ. ಬೌದ್ಧ ರಾಮಾಯಣ, ಲಂಕಾ ರಾಮಾಯಣ, ಜಾನಪದ ರಾಮಾಯಣ, ನೇಪಾಳಿ ರಾಮಾಯಣ ಜಗತ್ ಪ್ರಸಿದ್ಧಿಯಾಗಿದೆ. ರಾಮಾಯಣ ಎಂದರೆ ಒಂದೇ ಅಲ್ಲ, ವಾಲ್ಮೀಕಿ ಶ್ರೀಮದ್ ರಾಮಾಯಣವನ್ನು ಬರೆದ ಮೇಲೆ ಸುಮಾರು ಮೂನ್ನೂರಕ್ಕೂ ಹೆಚ್ಚು ರಾಮಾಯಣ ಕಾವ್ಯಗಳು ರಚನೆಯಾಗಿದೆ. ರಾಮಾಯಣ ಎಷ್ಟೇ ಸಂಖ್ಯೆಯಲ್ಲಿ ರಚಿತವಾಗಿದ್ದರೂ ವಾಲ್ಮೀಕಿ ರಾಮಾಯಣ ಕಥೆಯ ರಸಾಸ್ವಾದವೇನು ಕಡಿಮೆಯಾಗುವುದಿಲ್ಲ. ರಾಮಾಯಣವನ್ನು ಕುರಿತು ಬಂದಿರುವ ವಿಶ್ಲೇಷಣಾ ಕೃತಿಗಳಿಗೂ ಏನೂ ಕಡಿಮೆಯಿಲ್ಲ. ರಾಮಾಯಣ ಇಷ್ಟು ಪ್ರಸಿದ್ಧಿಯಾಗಲು ಕಾರಣ ಇಷ್ಟೇ, ವಾಲ್ಮೀಕಿ ಸಾರ್ವಕಾಲಿಕ ಸತ್ಯವನ್ನು ರಾಮಾಯಣದಲ್ಲಿ ತಿಳಿಸಿದ್ದಾರೆ. ಸತ್ಯವನ್ನು ಸಾರುವ ಮಹಾಕೃತಿಗಳೇ ಮಹಾಕಾವ್ಯಗಳು. ಸಾರ್ವಕಾಲಿಕ ಸತ್ಯಗಳು ಯಾವುವು ಎಂದರೆ ಆದರ್ಶ ಪುತ್ರರು ನಾವಾಗಬೇಕು, ಆದರ್ಶವಾದ ಸಹೋದರರು ಇರಬೇಕು, ಪತಿವ್ರತೆಯಾದ ಸತಿ ಮಡದಿಯಾಗಿರಬೇಕು, ವಿನಮ್ರರಾದ ಸೇವಕರು ಇರಬೇಕು, ಅವರು ಯಾವುದೇ ಕುಲ ಜಾತಿ ಗೋತ್ರಗಳಾಗಲಿ ಅವರ ಗುಣಧರ್ಮಗಳನ್ನು ನಾವು ಗೌರವಿಸಬೇಕು, ಅಷ್ಟೇ ಅಲ್ಲದೇ ಮಾತೃ ದೇವೋಭವ, ಪಿತೃ ದೇವೋಭವ, ಆಚಾರ್ಯ ದೇವೋಭವ ಎಂಬ ತತ್ವವನ್ನು ಈ ಕೃತಿ ಸಾರುತ್ತದೆ. ವಾಲ್ಮೀಕಿ ಬರಿ ಮಹರ್ಷಿಯಷ್ಟೆ ಅಲ್ಲ, ಈತ ಆದಿಕವಿ, ಶ್ಲೋಕಗಳ ಸೃಷ್ಟಿಕರ್ತನೆಂದು ಹೆಸರುವಾಸಿ. 24 ಸಾವಿರ ಶ್ಲೋಕಗಳಿಂದ ಕೂಡಿದ ಏಳು ಕಾಂಡಗಳಿಂದ ಕೂಡಿದ ರಾಮಾಯಣವೆಂಬ ಮಾಹಾಕಾವ್ಯವನ್ನು ಲೋಕಕ್ಕೆ ನೀಡಿದ ಮಹಾನುಭಾವರಾದ ವಾಲ್ಮೀಕಿ ಮಹರ್ಷಿಗಳನ್ನು ಭಕ್ತಿಭಾವದಿಂದ ಸ್ಮರಿಸೋಣ.
- ಡಾ. ಪ್ರಕಾಶ್.ಕೆ. ನಾಡಿಗ್ ತುಮಕೂರು
No-103, Abhayraghavi,
5th Cross, Balaji nagara.
Near Bovipalya Extension.
Orukerre.
TUMKUR-572106
ಮೊಬೈಲ್-9845529789
ಲೇಖಕರ ಸಂಕ್ಷಿಪ್ತ ಪರಿಚಯ:
ಪ್ರಕಾಶ್ ಕೆ ನಾಡಿಗ್ ಅವರು ಮೂಲತಃ ಶಿವಮೊಗ್ಗದವರು. ಕುವೆಂಪು ವಿಶ್ವವಿದ್ಯಾನಿಲಯದಿಂದ ಸೂಕ್ಷ್ಮಾಣು ಜೀವ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದು, ಪಿಎಚ್‌ಡಿಯನ್ನೂ ಪಡೆದಿದ್ದಾರೆ. ಶಿವಮೊಗ್ಗದ ನ್ಯಾಷನಲ್ ಫಾರ್ಮಸಿ ಕಾಲೇಜಿನಿಂದ ಫಾರ್ಮಸಿಯಲ್ಲಿ ಡಿಪ್ಲೋಮಾ ಪದವಿ ಗಳಿಸಿ ಪ್ರಸ್ತುತ ಖಾಸಗಿ ಔಷಧ ತಯಾರಿಕಾ ಕಂಪನಿಯಲ್ಲಿ ಗುಣಮಟ್ಟದ ಖಾತ್ರಿ ವಿಭಾಗದ ಮುಖ್ಯಸ್ಥರಾಗಿ ವೃತ್ತಿ ನಡೆಸುತ್ತಿದ್ದಾರೆ.
ಹಾಸ್ಯ ಲೇಖನಗಳು, ಮಕ್ಕಳಿಗಾಗಿ ಕಥೆಗಳು, ಪ್ರವಾಸ ಕಥನ, ಹಾಸ್ಯ ಲೇಖನಗಳು ಸೇರಿದಂತೆ ಇದುವರೆಗೆ 14 ಕೃತಿಗಳನ್ನು ಪ್ರಕಟಿಸಿದ್ದಾರೆ. ಕಳೆದ 24 ವರ್ಷಗಳಿಂದ ರಾಜ್ಯದ ಎಲ್ಲ ಪ್ರಮುಖ ದಿನಪತ್ರಿಕೆಗಳಲ್ಲಿ ವಿಜ್ಞಾನ, ಮಹಿಳೆ, ಪರಿಸರ, ಆರೋಗ್ಯ, ನೀರು, ಅಧ್ಯಾತ್ಮ, ಮಕ್ಕಳ ಕಥೆಗಳು ಹಾಗೂ ಹಾಸ್ಯ ಲೇಖನಗಳನ್ನು ಒಳಗೊಂಡಂತೆ ಸುಮಾರು 1000ಕ್ಕೂ ಹೆಚ್ಚು ಬರಹಗಳನ್ನು ಪ್ರಕಟಿಸಿದ್ದಾರೆ. ಸಿಸು ಸಂಗಮೇಶ ಪ್ರಶಸ್ತಿ, ತುಮಕೂರು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ