ಮಂಗಳೂರು: ದೇಶದ ಗಲ್ಲಿ ಗಲ್ಲಿಗಳಲ್ಲಿ ಅವತಾರ ಪುರುಷರು ಜನ್ಮ ತಾಳಿದ್ದಾರೆ. ಹಾಗೆ ಮನುಕುಲಕ್ಕಾಗಿ ಶ್ರಮಿಸಿದವರಲ್ಲಿ ಸ್ವಾಮಿ ವಿವೇಕಾನಂದರು ಕೂಡ ಒಬ್ಬರಾಗಿದ್ದಾರೆ ಎಂದು ಪೊಳಲಿ ರಾಮಕೃಷ್ಣ ತಪೋವನ ಮುಖ್ಯಸ್ಥ ವಿವೇಕ ಚೈತನ್ಯಾನಂದ ಸ್ವಾಮೀಜಿ ತಿಳಿಸಿದರು.
ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ರಾಷ್ಟ್ರೀಯ ಯುವ ದಿನಾಚರಣೆ ಅಂಗವಾಗಿ ನಡೆದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸ್ವಾಮಿ ವಿವೇಕಾನಂದರು 9 ವರ್ಷಗಳ ಕಾಲ ಭಾರತದ ಉದ್ದಗಲಕ್ಕೂ ಚಲಿಸಿ ದೇಶದ ಸ್ಥಿತಿಗತಿ ಅರಿತವರು. ದೇಶದಲ್ಲಿ ತಂತ್ರಜ್ಞಾನ ಮುಂದುವರೆಯಲು ವಿವೇಕಾನಂದರ ಸೂಕ್ಷ್ಮ ಬದುಕೇ ಮಾದರಿ. ಭಾರತ ಮತ್ತು ವಿವೇಕಾನಂದರ ಮಧ್ಯೆ ಯಾವುದೇ ವ್ಯತ್ಯಾಸವಿಲ್ಲ. ದೇಶವನ್ನು ಅರ್ಥಮಾಡಿಕೊಳ್ಳಲು ವಿವೇಕಾನಂದರ ಕುರಿತು ಅಧ್ಯಯನ ಮಾಡಬೇಕು. ಅವರ ಚಿಂತನೆಗಳೇ ದೇಶದ ಉದ್ಧಾರಕ್ಕೆ ಮುಖ್ಯ ಕಾರಣ ಎಂದರು. ದೇಶದ ಯುವ ಜನತೆ ಅನಗತ್ಯ ಮೊಬೈಲ್ ಬಳಕೆ, ಅರ್ಥವಿಲ್ಲದ ಪುಸ್ತಕ, ಮೋಜು ಮಸ್ತಿಯಿಂದ ಸಮಯ ವ್ಯರ್ಥ ಮಾಡುತ್ತಿದ್ದಾರೆ. ಇದು ನಮ್ಮನ್ನು ನಾವೇ ಕೊಂದುಕೊಂಡಂತೆ. ವಿವೇಕಾನಂದರ ಜೀವನ ಆದರ್ಶಗಳನ್ನು ಪಾಲಿಸುವುದನ್ನು ಮರೆತಿರುವ ಕಾರಣ ಯುವ ಜನರು ಹಾದಿ ತಪ್ಪುತ್ತಿದ್ದಾರೆ. ಏಕಾಗ್ರತೆ ಇದ್ದರೆ ಜಗತ್ತನ್ನೇ ಜಯಿಸಬಹುದು. ಆತ್ಮವಿಶ್ವಾಸ ಇದ್ದಾಗ ಜೀವನದಲ್ಲಿ ಕಷ್ಟ ಎದುರಿಸುವ ಧೈರ್ಯ ಬರುತ್ತದೆ. ಮನುಜ ಬಡವರ, ರೋಗಿಗಳ ಸೇವೆಗಾಗಿ ಶ್ರಮಿಸಬೇಕು. ವಿವೇಕಾನಂದರು ನಮ್ಮನ್ನು ಅಗಲಿ ಹಲವು ವರ್ಷ ಕಳೆದರೂ ಇಂದಿಗೂ ಜೀವಂತವಾಗಿದ್ದಾರೆ. ಹುಟ್ಟು-ಸಾವು ನಡುವಿನ ಕಾಲಾವಕಾಶದಲ್ಲಿ ಇವರು ಸೃಷ್ಟಿಸಿದ ಇತಿಹಾಸ ಇವರನ್ನು ಇಂದಿಗೂ ಬದುಕಿಸಿದೆ. ವಿವೇಕಾನಂದರ ಹೃದಯ ವಿಶ್ವದ ಎಲ್ಲಾ ಜನರಿಗೂ ಆಶ್ರಯ ನೀಡಿದೆ. ಹಾಗಾಗಿ ಇವರು ವಿಶ್ವವನ್ನು ಜಯಿಸಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲೆ ಡಾ. ಅನಸೂಯ ರೈ, ವಿವೇಕಾನಂದರ ಚಿಂತನೆ ವಿದ್ಯಾರ್ಥಿಗಳ ಮೇಲೆ ಸಕಾರಾತ್ಮಕ ಪ್ರಭಾವ ಬೀರುವಂತಾಗಲಿ. ಅವರ ಚಿಂತನೆ, ಸಹೋದರತ್ವ, ತ್ಯಾಗ ಎಲ್ಲರ ಜೀವನಕ್ಕೂ ಮಾದರಿಯಾಗಲಿ ಎಂದು ಆಶಿಸಿದರು.
ಇದೇ ವೇಳೆ ವಿದ್ಯಾರ್ಥಿ ಸಂಘದ ಉಪನಿರ್ದೇಶಕಿ ಪ್ರೊ. ಲತಾ ಎ. ಪಂಡಿತ್, ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಾದ ವಿದ್ಯಾರ್ಥಿ ಸಂಘದ ಅಧ್ಯಕ್ಷ ಜೀವಿತ್ ಗಟ್ಟಿ, ಕಾರ್ಯದರ್ಶಿ ಶಿವಪ್ರಸಾದ್ ರೈ, ಸಹ ಕಾರ್ಯದರ್ಶಿ ಪ್ರಗತಿ, ಲಲಿತಕಲಾ ಸಂಘದ ಕಾರ್ಯದರ್ಶಿ ವಿಕಾಸ್ ರಾಜ್, ಲಲಿತಕಲಾ ಸಂಘದ ಸಹ ಕಾರ್ಯದರ್ಶಿ ಕೇಸರಿ ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ