ಮಂಗಳೂರು: ನರೇಂದ್ರ ಮೋದಿಯವರು ಪ್ರಧಾನಿಯಾಗಿ ಕಳೆದೆರಡು ಅವಧಿಯಲ್ಲಿ ಕೆಲಸಗಳೇನು ಮಾಡಿದ್ದಾರೆ, ಸಾಧನೆಗಳೇನು ಮಾಡಿದ್ದಾರೆ, ಅವೆಲ್ಲ ಜನರ ಬಳಿಗೆ ತಲುಪಿವೆ. ಆದರೆ, ಮೋದಿಯವರ ಯೋಜನೆಯ ಲಾಭಗಳನ್ನು ಪಡೆದವರನ್ನು ನಮ್ಮ ಮತದಾರರನ್ನಾಗಿ ಮಾಡಬೇಕು. ನಾವು ಜನರ ಬಳಿಗೆ ಹೋಗಿ ಮೋದಿಯವರ ಕೆಲಸಗಳ ಬಗ್ಗೆ ತಿಳಿಸುವ ಕೆಲಸ ಮಾಡಬೇಕಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಅಭ್ಯರ್ಥಿ ಬೃಜೇಶ್ ಚೌಟ ಹೇಳಿದ್ದಾರೆ.
ಪಕ್ಷದ ಜಿಲ್ಲಾ ಕಚೇರಿಯಲ್ಲಿ ನಡೆದ ಚುನಾವಣಾ ನಿರ್ವಹಣಾ ಸಮಿತಿ ಉದ್ಘಾಟನೆ ಮತ್ತು ಜಿಲ್ಲಾ ಪದಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ಮೋದಿಯವರ ಸಾಧನೆಗಳನ್ನು ತಿಳಿಸಿ, ಮತಗಳಾಗಿ ಪರಿವರ್ತಿಸುವ ಅತಿ ದೊಡ್ಡ ಜವಾಬ್ದಾರಿ ನಮ್ಮಲ್ಲಿದೆ. ಅದನ್ನು ವಿಶ್ವಾಸಪೂರ್ವಕವಾಗಿ ನಾವು ಮಾಡಬೇಕಾಗಿದೆ ಎಂದು ಸೇರಿದ್ದ ಕಾರ್ಯಕರ್ತರನ್ನು ಹುರಿದುಂಬಿಸುವ ಮಾತುಗಳನ್ನಾಡಿದರು.
ಕಂಕನಾಡಿ ಗರೋಡಿಗೆ ಭೇಟಿ, ದೇವರ ದರ್ಶನ:
ಇದಲ್ಲದೆ, ಶುಕ್ರವಾರ ಸಂಜೆ ಕಂಕನಾಡಿ ಬ್ರಹ್ಮ ಬೈದರ್ಕಳ ಗರಡಿಗೆ ಭೇಟಿಯಿತ್ತು ದೇವರ ದರ್ಶನ ಪಡೆದಿದ್ದಾರೆ. ಇದೇ ವೇಳೆ, ನಾರಾಯಣ ಗುರುಗಳ ಮತ್ತು ಮಹಾತ್ಮ ಗಾಂಧೀಜಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಮಿಸಿದ್ದಾರೆ. ಗರೋಡಿ ದೈವಸ್ಥಾನ ಸಮಿತಿ ಅಧ್ಯಕ್ಷ ಚಿತ್ತರಂಜನ್ ಉಪಸ್ಥಿತರಿದ್ದು ಬೃಜೇಶ್ ಚೌಟ ಅವರನ್ನು ಬರಮಾಡಿಕೊಂಡರು. ಶುಕ್ರವಾರ ಬೆಳಗ್ಗೆ ಕಾವೂರು ಮಹಾಲಿಂಗೇಶ್ವರ ದೇವಸ್ಥಾನ, ಪೊಳಲಿ ರಾಜರಾಜೇಶ್ವರಿ ದೇವಸ್ಥಾನ, ಪೊಳಲಿಯ ರಾಮಕೃಷ್ಣ ಮಠಕ್ಕೆ ಭೇಟಿ ನೀಡಿ ಶ್ರೀ ವಿವೇಕ ಚೇತನ್ಯ ಸ್ವಾಮೀಜಿಯವರ ಆಶೀರ್ವಾದ ಪಡೆದರು.
ಇದಲ್ಲದೆ, ಸಂಘ ಪರಿವಾರದ ಹಿರಿಯ ನಾಯಕರ ಮನೆಗಳಿಗೆ ಭೇಟಿಯಿತ್ತು ಆಶೀರ್ವಾದ ಕೇಳಿದ್ದಾರೆ. ಗುರುವಾರ ರಾತ್ರಿ ಸಹಕಾರ ಭಾರತಿಯ ಹಿರಿಯ ನಾಯಕರಾದ ರಂಗಮೂರ್ತಿ, ಪುತ್ತೂರಿನ ಡಾ. ಪ್ರಸಾದ್ ಭಂಡಾರಿ, ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್ ಮನೆಗೆ ತೆರಳಿ ಆಶೀರ್ವಾದ ಕೋರಿದ್ದರು. ಶುಕ್ರವಾರ ಮಾಜಿ ವಿಧಾನ ಪರಿಷತ್ ಸದಸ್ಯ ಬಾಲಕೃಷ್ಣ ಭಟ್ ಮನೆಗೆ ಭೇಟಿ, ಆದಿಚುಂಚನಗಿರಿ ಶಾಖಾ ಮಠ ಕಾವೂರಿನ ಡಾ.ಧರ್ಮಪಾಲನಾಥ ಸ್ವಾಮೀಜಿ ಭೇಟಿಯಾಗಿ ಆಶೀರ್ವಾದ ಪಡೆದರು. ಬಂಟ್ವಾಳ ಬಿಜೆಪಿ ಕಚೇರಿಗೆ ತೆರಳಿ ಕಾರ್ಯಕರ್ತರನ್ನು ಭೇಟಿಯಾಗಿ ಚುನಾವಣೆಗೆ ಸಿದ್ಧಗೊಳ್ಳುವಂತೆ ಹುರಿದುಂಬಿಸಿದ್ದಾರೆ. ಸಂಜೆಯ ವೇಳೆಗೆ, ಆರೆಸ್ಸೆಸ್ ಹಿರಿಯ ಮುಖಂಡ ಸುನಿಲ್ ಆಚಾರ್ ಮನೆಗೆ ತೆರಳಿ ಆಶೀರ್ವಾದ ಪಡೆದಿದ್ದಾರೆ. ಈ ವೇಳೆ, ಪಕ್ಷದ ಮುಖಂಡರು ಜೊತೆಗಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ