-ಪ್ರಮೋದ ಪುಂ ಪುರೋಹಿತ, ಬೆಂಗಳೂರು
|| ಶ್ರೀ ರಾಮ ಪ್ರಸೀದತು ||
"ಶ್ರೀರಾಮ" ಮತ್ತು "ಶ್ರೀರಾಮನಾಮ"ವು ವಿಶ್ವವ್ಯಾಪಿ. ಭಾರತೀಯರಿಗಂತೂ ಮೈ-ಮನ-ಮನೆ ತುಂಬ ರಾಮ. ಋಷಿಮುನಿಗಳು, ಯತಿಗಳು, ರಾಜರ್ಷಿಗಳು, ದಾರ್ಶನಿಕರು, ದಾಸರು, ಕವಿಗಳು, ಪಂಡಿತರಾದಿ ಮೊದಲಾಗಿ ಸಾಮಾನ್ಯರ ತನಕ ಯಾರೊಬ್ಬರೂ ಶ್ರೀರಾಮನ ಕಥೆ ಕೇಳದವರಿಲ್ಲ/ಹೇಳದವರಿಲ್ಲ, ಅವನ ಗುಣಗಾನ ಮಾಡದವರಿಲ್ಲ. ಹತ್ತು-ಹಲವಾರು ಬಗೆಯಲ್ಲಿ ಅವನನ್ನು ದರ್ಶಿಸುತ್ತಾರೆ. ಮರ್ಯಾದಾ ಪುರುಷೋತ್ತಮ, ಪಿತೃವಚನ ಪರಿಪಾಲಕ, ದುಷ್ಟ ಶಿಕ್ಷಕ, ಶಿಷ್ಟ ರಕ್ಷಕ, ಭಕ್ತಾಭೀಷ್ಟ ಪ್ರದಾಯಕ, ವೀರ, ಶೂರ, ಗಂಭೀರ, ಸುಂದರಾಂಗ ಮನೋಹರ, ಪರಿಪೂರ್ಣ, ಪರಬ್ರಹ್ಮ... ಹೀಗೆ ಅವನ ವ್ಯಕ್ತಿತ್ವ ವರ್ಣನೆ ಅಮಿತವಾದದ್ದು.
ಪ್ರಸಕ್ತದಲ್ಲಿ "ಇಂದಿರೇಶದಾಸರು" (ತಿರುಪತಿ ಹುಚ್ಚಾಚಾರ್ಯರು/ ಪಾಂಡುರಂಗಿ ಹುಚ್ಚಾಚಾರ್ಯರು/ ಬೆಟ್ಟದ ಆಚಾರ್ಯರು ಎಂತಲೂ ಪ್ರಸಿದ್ಧಿ ಉಳ್ಳವರು) ತಮ್ಮ ಕೃತಿಗಳ ಮೂಲಕ "ಶ್ರೀರಾಮ"ನನ್ನು ಕಂಡ ಬಗೆಯನ್ನು ನನ್ನ ಅಲ್ಪ ಶಕ್ತ್ಯಾನುಸಾರ ವಿವೇಚಿಸುವದು ಈ ಕಿರು-ಪ್ರಬಂಧದ ಉದ್ದೇಶ.
ದುಷ್ಟಶಿಕ್ಷಕ-ಶಿಷ್ಟರಕ್ಷಕ, ಮಹಾ ಪರಾಕ್ರಮಿ ಶ್ರೀರಾಮ:
-'ಸೀತಾರಾಮ ಬೇಗ ಬಾರೋ' (ಇಂ.ಪ.೩೧೩/ಭಾ.೧) ಎಂಬ ಕೀರ್ತನೆಯ, ಕೆಳಗೆ ತಿಳಿಸಿದ, ಒಂದು ನುಡಿಯಲ್ಲಿ ಶ್ರೀರಾಮನು ವನವಾಸದಲ್ಲಿ ಪರ್ಣಕುಟೀರದಲ್ಲಿರುವಾಗ ದುಷ್ಟ ರಾಕ್ಷಸಿಯಾದ ಶೂರ್ಪನಖಿಯು ಅವನನ್ನು ಕಾಮಿಸಿ ಬಂದಾಗ ಅವಳನ್ನು ತನ್ನ ತಮ್ಮನಾದ ಲಕ್ಷö್ಮಣನಿಂದ ಅವಳ ನಾಸಿಕವನ್ನೆ ಕತ್ತರಿಸಿ ಶಿಕ್ಷೆ ನೀಡಿದ ವಿಷಯವನ್ನು ಬಹಳೇ ಚೆನ್ನಾಗಿ ನಿರೂಪಿಸಿದ್ದಾರೆ.
ದುಷ್ಟರಾಕ್ಷಸಿ ದೃಷ್ಟಿಸಿ ಕಂದರ್ಪಾ |ವಿಷ್ಟಳಾಗುತಲಾಗು ಪ್ರೇಷ್ಟನೆನ್ನೆ |
ಸಿಟ್ಟಿನಿಂದಲಿ ಸ್ವ ಕನಿಷ್ಟನಿಂದಲೆ ಮಾನಾ | ನಷ್ಟ ಮಾಡಿಸಿರೊ ಸುರರಿಷ್ಟಪ್ರದನೆ ||
ಶೂರ್ಪನಖಿಗಾದ ಅವಮಾನವನ್ನು ತೀರಿಸಿಕೊಳ್ಳಬೇಕೆಂದು ಯುದ್ಧ ಮಾಡಲು ಬಂದ ಅವಳ ಸಹೋದರರಾದ, ಪ್ರಬಲರಾದ ಖರ-ದೂಷಣರಾದಿ ಹದಿನಾಲ್ಕು ಸಾವಿರ ದುಷ್ಟ ರಾಕ್ಷಸರನ್ನೆಲ್ಲ ಏಕೈಕನಾಗಿ ಶ್ರೀರಾಮನು ತನ್ನ ಬಾಣಗಳಿಂದ ಛೇದಿಸಿ ಪರಾಜಯ ಮಾಡಿ ಹಿಮ್ಮೆಟ್ಟಿಸಿದ ಪರಾಕ್ರಮವನ್ನು ಇದೇ ಕೀರ್ತನೆಯ ಎರಡನೇ ನುಡಿಯಲ್ಲಿ ಹೀಗೆ ವರ್ಣಿಸಿದ್ದಾರೆ..
ಹತ್ತಬ್ಧಿ ಸಾವಿರ ಭ್ರಾತೃಗಳಾಕೆಯ | ವಾರ್ತೆ ಕೇಳುತ ಸಂಯೋಗಾರ್ಥೆ ಬರೆ |
ಸುತ್ತಮುತ್ತಲು ರಾಮ ಮೂರ್ತಿ ತೋರಿಸಿ | ಕರ ಶಸ್ತ್ರದಿಂದಲೇ ಶಿರ ಕತ್ತರಿಸಿದ ||
-"ಬಾರೋ ನೀ ವೀರ ರಾಘವ" (ಇಂ.ಪ.೩೨೧/ಭಾ.೧) ಎಂಬ ಐದು ನುಡಿಗಳ ಕೃತಿಯಲ್ಲಿ ಶ್ರೀರಾಮನನ್ನು ವೀರ, ಪರಾಕ್ರಮಿ ಎಂದು ಸಂಭೋದಿಸಿದ್ದಾರೆ. ವನವಾಸಕ್ಕೆ ಹೋಗುವ ಮುಖ್ಯ ಉದ್ದೇಶವೇ ದುಷ್ಟರಾದ ರಾಕ್ಷಸರ ಸಮೂಹವನ್ನು ನಾಶ ಮಾಡುವದು ಮತ್ತು ಮುನಿಗಳನ್ನು, ಭಕ್ತರನ್ನು, ಉದ್ಧಾರ ಮಾಡುವದಾಗಿತ್ತು. ತಾಟಕ, ಸುಬಾಹು, ಮಾರೀಚ, ಕಬಂಧ, ವಿರಾಧ, ಖರ, ದೂಷಣ, ತ್ರಿಶಿರ, ಮಕರಾಕ್ಷ ಕೊನೆಗೆ ಕುಂಭಕರ್ಣ-ರಾವಣ ಸಹಿತ ಅವನ ಅನುಚರ ರಾಕ್ಷಸರನ್ನೆಲ್ಲ ನಿರ್ನಾಮ ಮಾಡಿದ ಶ್ರೀರಾಮ ಮಹಾಪರಾಕ್ರಮಿ. ಅದರಂತೆ ಅಹಲ್ಯಾ, ಶಬರಿ, ಸುಗ್ರೀವ, ವಿಭೀಷಣ ಮತ್ತು ಅನೇಕ ಋಷಿ ಮುನಿಗಳನ್ನು ರಕ್ಷಣೆ ಮಾಡಿ ಉದ್ಧಾರ ಮಾಡಿದ ಎಂದು ಸೂಚ್ಯವಾಗಿ ತಿಳಿಸಿದ್ದಾರೆ.
-ಇದೇ ವಿಷಯವನ್ನು "ದಾಸೋಹಂ ತವ ದಾಸೋಹಂ" (ಇಂ.ಪ.೪೨/ಭಾ.೨) ಎಂಬ ದಶಾವತಾರ ಕೃತಿಯಲ್ಲಿ ಇಂದಿರೇಶದಾಸರು ಶ್ರೀರಾಮನನ್ನು ಕೆಳಗಿನಂತೆ ಹಾಡಿ ಹೊಗಳಿದ್ದಾರೆ.
ದುಷ್ಟ ರಾಕ್ಷಸರ ಕುಟ್ಟಿ ಪೋಗಿ ವರಗಿಷ್ಟವ ನೀಡಿದಿ ಪಾಲಯಮಾಂ |
ಮೆಟ್ಟಿ ರಾವಣನ ಕೊಟ್ಟು ರಾಜ್ಯ ಕನಿಷ್ಟಗೆ ಆತನ ಕಷ್ಟ ಕಳಿದಿ ತವ ||
-ಶ್ರೀಮಧ್ವಾಚಾರ್ಯರು ತಾತ್ಪರ್ಯ ನಿರ್ಣಯದಲ್ಲಿ ಸುಂದರಕಾಂಡವನ್ನು ರಚಿಸಿದ್ದಾರೆ. ಅದನ್ನೇ ಹುಚ್ಚಾಚಾರ್ಯರು ಪ್ರಾಕೃತದಲ್ಲಿ ಅನುವಾದಿಸಿದ್ದಾರೆ. ಇದರಲ್ಲಿ ಹನುಮಂತನು ರಾವಣನೆದುರಿನಲ್ಲಿ ನಿರ್ಭಯವಾಗಿ ಶ್ರೀರಾಮನ ಪರಾಕ್ರಮದ ಪ್ರಶಂಸೆಯನ್ನು ಮಾಡಿದ ರೀತಿ ತುಂಬಾ ಸೊಗಸಾಗಿ ಮೂಡಿ ಬಂದಿದೆ...
ಶಕ್ತರಾಗರು ಸರ್ವ ದಿವಿಜರು ಮರ್ತ್ಯನಾಥನ ಬಾಣ ಧರಿಸಲು |
ಎತ್ತೊ ನೀನವಗಿನ್ನು ಧರಿಸಲು ಹತ್ತು ತಲೆಯವನೆ ||
ಸಿಟ್ಟು ಬಂದರೆ ಆತನೆದುರಿಗೆ ಘಟ್ಟಿ ನಿಲ್ಲುವನಾವ ರಾಕ್ಷಸ
ಇಷ್ಟು ಸುರ ದಾನವರೊಳಾತನ ದೃಷ್ಟಿಸಲು ಕಾಣೆ ||
ಶ್ರೀರಾಮನ ಬಾಣವೆಂದರೆ ಏನು ತಿಳಿದಿದ್ದೀಯಾ? ದೇವಾದಿದೇವತೆಗಳೂ ಅವನ ಬಾಣವನ್ನು ಎದುರಿಸಲು ಅಸಮರ್ಥರಾದಾಗ, ಹತ್ತು ತಲೆಗಳ ಹೊತ್ತ ರಾವಣ ನೀನ್ಯಾವ ಲೆಕ್ಕ ! ಅವನು ಶಾಂತ ಸುಂದರ ಮೂರ್ತಿ. ಆದರೆ ಸಿಟ್ಟು ಬಂದರೆ ಆತನೆದುರಿಗೆ ನಿಲ್ಲುವ ತಾಕತ್ತು ಯಾವ ದೇವ ದಾನವರಿಗೂ ಇಲ್ಲ, ಅಂತಹದರಲ್ಲಿ ನಿಮ್ಮಲ್ಲಿ ಅದಾವ ರಾಕ್ಷಸ ಅವನೆದರಿಗೆ ನಿಲ್ಲಬಲ್ಲ. ನೀವೆಲ್ಲ ಅವನೆದುರಿಗೆ ತೃಣ ಸಮಾನರು. ಎಂಬೀ ರೋಮಹರ್ಷಣ ಮಾತುಗಳು ಶ್ರೀರಾಮನ ಪರಾಕ್ರಮವನ್ನು ಎದೆಗೆ ತಟ್ಟುವಂತೆ ಮನದಟ್ಟು ಮಾಡಿಕೊಡುತ್ತವೆ.
ಸುಂದರಾಂಗ ಶ್ರೀರಾಮ:
-ಭಕ್ತರಿಗೆ ಅಭಯ ನೀಡುವ ಶ್ರೀರಾಮ ಸರ್ವಾಂಗ ಸುಂದರಾಂಗ. ಪರಮ ಸುಂದರಾಂಗ, ಅಷ್ಟೆ ಅಲ್ಲ, ಪರಮ ಮಂಗಳಾಂಗ, ಕೋಮಲಾಂಗ. ಪೂರ್ಣಚಂದ್ರನ ಕಾಂತಿಯನ್ನೂ ಮೀರಿಸುವ ಮಂದಸ್ಮಿತ ಮುಖವುಳ್ಳವ. “ವಜ್ರಾದಪಿ ಕಠೋರಾಣಿ, ಮೃದೂನಿ ಕುಸುಮಾನಿಚ” ಎಂಬುವಂತೆ ತನ್ನನ್ನು ಪ್ರೀತಿಸುವ, ಆರಾಧಿಸುವ ಸಜ್ಜನರ, ಭಕ್ತರ ಮೇಲೆ ಅವನ ಮೈ-ಮನಸ್ಸು ಹೂವಿಗಿಂತ ಮೃದುವಾಗಿ ಕರುಣಾಪೂರ್ಣವಾಗಿರುತ್ತದೆ. ಅದೇ ಅಧರ್ಮಿಗಳ ಮತ್ತು ದುಷ್ಟರ ಮೇಲೆ ಅವನ ಮೈ-ಮನಸ್ಸು ವಜ್ರಕ್ಕಿಂತ ಕಠಿಣವಾಗಿ ಪರಿವರ್ತಿತವಾಗುತ್ತದೆ. ಎಂಬ ಈ ಸಂದೇಶವನ್ನು ದಾಸರು ಮನೋಜ್ಞವಾಗಿ ತಮ್ಮ ಕೀರ್ತನೆಯಲ್ಲಿ (ಇಂ.ಪ.೩೮೫/ಭಾ.೧) ಕೆಳಗಿನಂತೆ ವ್ಯಕ್ತ ಮಾಡಿದ್ದಾರೆ.
ನಾಮ ಮಾತ್ರದಿ ಭಕ್ತ ಕಾಮಿತ ಪ್ರದನೆ | ಶಾಮ ಸುಂದರ ಪೂರ್ಣ ಸೋಮ ಸನ್ಮುಖನೆ |
ಹೇಮಾಭರಣ ಶೋಭಿ ಕೋಮಲಾಂಗನೆ(ಅ)ಯೋಧ್ಯಾ | ಧಾಮದೊಳಿಹ ಸೀತಾ ಕಾಮಿನಿ ಸಖನೆ||
ಅಂಘ್ರಿ ಮೊದಲು ಸಕಲಾಂಗ ಸೌಭಗನೆ | ಮಂಗಲ ಮಹಿಮ ಕುರಂಗ ನಾಶಕನೆ |
ತುಂಗ ವಿಕ್ರಮ ಸುರ ಸಂಘ ಸೇವಿತ ಕೃಪಾ | ಪಾಂಗದಿಂದಲಿ ನೋಡಾ ಸಂಗ ಪುರುಷನೆ ||
-ಇಂದಿರೇಶದಾಸರ ಇನ್ನೊಂದು ದೀರ್ಘವಾದ ೨೩ ನುಡಿಗಳ ಕೀರ್ತನೆಯಲ್ಲಿ (ಇಂ.ಪ.೧೨/ಭಾ.೨) ಇಡೀ ರಾಮಾಯಣದ ಝಲಕನ್ನು ಪ್ರತಿಫಲಿಸಿ ಕೊನೆಗೆ ಶ್ರೀರಾಮನ ಸೌಂದರ್ಯವನ್ನು ಕೊಂಡಾಡಿದ್ದಾರೆ.
ಸುಂದರ ಮುಖದಿ ರಮ್ಯ ಮಂದಹಾಸ ಮಾಡುತೀಹ |
ನಿಂದು ಸ್ಮರಿಸುವೆನು ಮನೋ ಮಂದಿರಾದಿ ಮೋದದಿಂದ||
ಹರಳು ಕೆತ್ತಿದಂಥ ದಿವ್ಯ ಕರಣಕುಂಡಲಾದಿ ಕಾಂತಿ |
ಗುರುಳು ಶಿರಿಯ ಕೂಡಿ ನಾನಾ ಥರದಿ ಮುಖದಿ ಮೆರೆಯುವಾದು ||
ಸ್ವರಣಾದಿ ಕೂಡಿಸಿದಂಥಾ ಎರಡು ರತ್ನದಂತೆ ರಾಮ |
ತರುಣಿಯಿಂದ ಶೋಭಿಸೂವ ಪುರುಟ ಪೀಠದಲ್ಲಿ ಸ್ವಾಮಿ ||
-ಭಕ್ತಾಭೀಷ್ಟಪ್ರದ, ಪರಿಪೂರ್ಣ, ಪರಮಾತ್ಮ ಶ್ರೀರಾಮ:
ಶ್ರೀಮನ್ನಾರಾಯಣನ ದಶಾವತಾರಗಳಲ್ಲಿ ಏಳನೇಯದು "ಶ್ರೀರಾಮ"ನದು. ಭಗವಂತನ ಪೂರ್ಣಾವತಾರ. ಅಂತೆಯೇ ಅವನು ಸರ್ವತಂತ್ರ ಸ್ವತಂತ್ರ, ಸರ್ವೋತ್ತುಮ, ಅಣುರೇಣು ತೃಣಕಾಷ್ಠ ಪರಿಪೂರ್ಣ, ಅಂತರ್ಬಹಿಶ್ಚ ಸರ್ವ ವಿಶ್ವವ್ಯಾಪಿ, ಜನ್ಮಾದಿ ಅಷ್ಟ ಕರ್ತೃತ್ವಗಳ ನಿಯಾಮಕ, ಜ್ಞಾನಾನಂದಾದಿ ಗುಣಗಳಿಂದ ಪರಿಪೂರ್ಣ, ಸಮಸ್ತದೋಷ ದೂರ, ಪರಮಾತ್ಮ. ಅವನು ಭಕ್ತವತ್ಸಲ, ಭಕ್ತಿಯಿಂದ ಭಜಿಸುವವರ ಇಷ್ಟಾರ್ಥಗಳನ್ನು ನೀಡುವ ಕರುಣಿ. ಮೋಕ್ಷವನ್ನೂ ದಯಪಾಲಿಸುವ ದಯಾನಿಧಿ. ಎಂಬಿತ್ಯಾದಿ ಶ್ರೀರಾಮನ ಗುಣಗಾನವನ್ನು ಹುಚ್ಚಾಚಾರ್ಯರು ತಮ್ಮ ಕೆಳಗಿನ ಕೀರ್ತನೆಯÀಲ್ಲಿ ತಿಳಿಸುತ್ತ ಈ ಮಾಯಾಯುಕ್ತ ಸಂಸಾರ ಶರಧಿಯಿಂದ ಮುಕ್ತ ಮಾಡುವಂತೆ ಅಲವತ್ತುಕೊಂಡಿದ್ದಾರೆ. ಇಂದಿರೇಶದಾಸರು ಶ್ರೀರಾಮನಲ್ಲಿ ಆತ್ಮ ಸಮರ್ಪಣೆ ಮಾಡಿದ ಭಾವವನ್ನು ಈ ಕೀರ್ತನೆಯಲ್ಲಿ ಕಾಣಬಹುದು.
ದಾಶರಥೆ ದಯಮಾಡು ನಿನ್ನ ದಾಸನ ನೋಡು||
ನೀರಜಾಕ್ಷ ನಿಜ ಮಾಯ ಮಮತೆ ಸಂಸಾರ ಶರಧಿಯೊಳು ಬಿದ್ದು |
ಪಾರುಗಾಣದೆ ಬರಿದೆ ಪೋಗುವಾ ತಾರಕ ಬ್ರಹ್ಮ ನೀನೆಂದು ||
ತುಂಬಿದ ಭಂಡಿಗೆ ಮೊರ ಭಾರವೆ ಎನಗಿಂಬಿಲ್ಲವೆ ನಿನ್ನಲ್ಲಿ |
ನಂಬಿದೆ ವಿಶ್ವಕುಟುಂಬನೆ ಎನಗೆ ಇಂಬುಗೊಡದಿರೆಲ್ಲಿ ಹೋಗಲಿ ||
ಇಂದಿರೇಶ ಮುಚಕುಂದ ವರದ ಮುನಿವಂದ್ಯನೆ ದಶರಥ ಕಂದಾ |
ಚಂದದಿ ನಿನ್ನ ದ್ವಂದ್ವಗಳನುದಿನ ವಂದಿಸುವೆನು ಮುದದಿಂದ || (ಇಂ.ಪ.೬೦೫/ಭಾ.೧)
-ಶ್ರೀರಾಮನಾಮ ಜಪಿಸುವ ನೈಜ ಭಕ್ತರನ್ನು ಸಂಸಾರ ತಾಪತ್ರಯಗಳಿಂದ ಬಿಡಿಸಿ, ಮೋಕ್ಷವೀಯುವ ಕರುಣಾಳು ಶ್ರೀರಾಮನೇ ನಮ್ಮನ್ನೂ ಕಾಯೋ ಎಂದು ದಾಸರು ಬೇಡಿಕೊಂಡಿದ್ದಾರೆ. ಹಾಗೆ ಶ್ರೀರಾಮನಿಂದ ಮೋಕ್ಷ ಪಡೆದವರನ್ನು ಸಾಕ್ಷೀಕರಿಸಿದ್ದಾರೆ ಈ ಕೆಳಗಿನ ಕೀರ್ತನೆಯಲ್ಲಿ.
ಚಿತ್ರ ಚರಿತಾಂಬೋಧಿ ಪುತ್ರ ದಶರಥ ರಾಜ | ನುತ್ತಮೀ ನಾಮವನು ಭಕ್ತಿಯಿಂದ ||
ನಿತ್ಯ ಪಠಿಸುವ ನೈಜ ಭಕ್ತರಿಗೆ ಸಂಸಾರ | ಮೃತ್ಯು ಪರಿಹರಿಸುತ ಮೋಕ್ಷವಿತ್ತು ಪಾಲಿಸುವ ||
ಶಬರಿ ಸಾಕ್ಷಿಯು ಇದಕೆ ಶರಬಂಗ ಋಷಿ ಸಾಕ್ಷಿ | ಶಿಲೆಯು ಸಾಕ್ಷಿಯು ಕಪಿಯಸುತನು ಸಾಕ್ಷಿ ||
ಶಿವನು ಸಾಕ್ಷಿಯು ಸೂರ್ಯಸುತ ಮುಖ್ಯ ವಾನರರು | ಸಕಲ ಕೋಸಲರು ರಾಕ್ಷಸರು ಸಾಕ್ಷಿ || (ಇಂ.ಪ.೪೧೯/ಭಾ.೧)
-ಇನ್ನೊಂದು ಕೀರ್ತನೆಯಲ್ಲಿ (ಇಂ.ಪ.೩೦೦/ಭಾ.೧) ಶ್ರೀರಾಮನನ್ನು 'ಪರಂತರ, ಪರತರ ಸುಗುಣ, ಪರಮ ಹಿತಕರ' ಎಂದು ಸಂಬೋಧಿಸುತ್ತ ಶ್ರೀರಾಮನ ಸರ್ವೋತ್ತುಮತ್ವವನ್ನು ಪುನರುಚ್ಚರಿಸಿದ್ದಾರೆ.
ರಾವಣಾರಿಯೆ ಶ್ರೀವಧೂಟಿಯೆ ಪಾವನಾಮೃತಾ | ತೀವ ಸತ್ಕಥಾ ಸೇವಿಸೂವೆವು ಪರಂತರ ಅರಿಧರ ವರದಾ ||
ಭಕ್ತಭಾಷಣ ನಿತ್ಯಪೋಷಣ ಕೃತ್ಯ ಕೋವಿದ | ಚಿತ್ರ ವೈಭವ ಶತೃಸೂದನ ದುರಂಧರ ಪರತರ ಸುಗುಣ ||
ಇಂದಿರೇಶನೆ ನಂದಸೂನುನೆ ನಂದು ಪ್ರಾರ್ಥನಾಮಿಂದು ಕೇಳೋ| ಸಿಂಧುರೇಷ್ಟದ ಪುರಂದರ ಪರಮ ಹಿತಕರ ಶ್ರೀರಾಮನೆ ||
ಹೀಗೆ ಇಂದಿರೇಶದಾಸರ ಕೀರ್ತನೆಗಳ ದೃಷ್ಟಿಯಲ್ಲಿ ಶ್ರೀರಾಮನು ದುಷ್ಟ ಶಿಕ್ಷಕನಾಗಿ, ಶಿಷ್ಟ ರಕ್ಷಕನಾಗಿ, ಬಹು ಪರಾಕ್ರಮಿಯಾಗಿ, ಸುಂದರಾಂಗನಾಗಿ, ಭಕ್ತಾಭೀಷ್ಟಪ್ರದನಾಗಿ, ಪರಿಪೂರ್ಣ ವ್ಯಕ್ತಿತ್ವವುಳ್ಳವನಾಗಿ, ಮೋಕ್ಷಪ್ರದ ಪರಮಾತ್ಮನಾಗಿ ಮೂಡಿ ನಿಂತಿದ್ದಾನೆ.
ಜೈ ಶ್ರೀರಾಮ
-ಪ್ರಮೋದ ಪುಂ ಪುರೋಹಿತ, ಬೆಂಗಳೂರು
ಲೇಖಕರ ಸಂಕ್ಷಿಪ್ತ ಪರಿಚಯ:
ಪ್ರಮೋದ ಪುಂಡಲೀಕಾಚಾರ್ಯ ಪುರೋಹಿತ, ಮೊ: 9945065776
-ಜನ್ಮ ದಿನಾಂಕ: 22.07.1957
-ವಿಳಾಸ: 1) ಪ್ರಭಾತ ನಗರ, ಏ ಪಿ ಎಮ್ ಸಿ ಎದುರಿಗೆ, ಜಮಖಂಡಿ-587301
& 2) ಪ್ಲಾಟ ನಂ.6, ಪ್ರಾರ್ಥನಾ ಎನಕ್ಲೇವ್, ನಾಗೇಗೌಡನ ಪಾಳ್ಯ, ಬನಶಂಕರಿ 6ನೇ ಹಂತ, ಬೆಂಗಳೂರು.
-ಶಿಕ್ಷಣ: ಬಿ ಎಸ್ಸಿ (ಅಗ್ರಿ)-1979, ಎಲ್ ಎಲ್ ಬಿ-1990, ಎಂ ಎ (ಕನ್ನಡ)-2015, ಪಿ ಎಚ್ ಡಿ (ದಾಸಸಾಹಿತ್ಯ)- 2019.
- ವೃತ್ತಿ : 28 ವರ್ಷ ಸಾಂಗ್ಲಿ ಬ್ಯಾಂಕನಲ್ಲಿ, 6 ವರ್ಷ ಐಸಿಐಸಿಐ ಬ್ಯಾಂಕಿನಲ್ಲಿ,
- ಸಾಹಿತ್ಯ ಕೃಷಿ: "ಕವನ ಕುಸುಮ"-40 ಪದ್ಯಗಳ ಗುಚ್ಛ-ಮಾರ್ಚ್ 2015ರಲ್ಲಿ ಪ್ರಕಟ
"ಇಂದಿರೇಶಾಮೃತ"-ಇಂದಿರೇಶದಾಸರ 825 ಕೃತಿಗಳ ಸಂಗ್ರಹ-ನವೆಂಬರ್ 2015ರಲ್ಲಿ ಪ್ರಕಟ
"ಇಂದಿರೇಶದಾಸರು-ಜೀವನ ಹಾಗೂ ಕೃತಿಗಳ ಅಧ್ಯಯನ"-ಪಿಎಚ್‌ಡಿ ಪ್ರಬಂಧ-2023ರಲ್ಲಿ ಪ್ರಕಟ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ