ಈ ಜಗದಲ್ಲಿ ಎಲ್ಲರೂ ಎಲ್ಲ ಕಾಲದಲ್ಲಿಯೂ ಪೂರ್ಣತ್ವದ ಹಾಗೂ ಅಪೂರ್ಣತ್ವದ ಪರಿಧಿಯನ್ನು ಸ್ಪರ್ಶಿಸಿಕೊಂಡೇ ಇರುತ್ತಾರೆ. ಆ ಕ್ಷಣಕ್ಕೆ ಒಂದು ಪೂರ್ಣತ್ವವೆಂದು ಅನಿಸಬಹುದು. ಆದರೆ, ವಿಸ್ತೃತ ದೃಷ್ಟಿಯಿಂದ ಅಥವಾ ಪರಿಧಿಯಲ್ಲಿ ನೋಡಿದರೆ, ಆ ಮುಂಚೆ ಪೂರ್ಣತ್ವವೆಂದು ಅನಿಸಿದ್ದು ಅಪೂರ್ಣತ್ವವೆಂದು ಅನಿಸಬಹುದು.
ಅದಕ್ಕಾಗಿಯೇ, ಶ್ರೀ ರಾಮಕೃಷ್ಣ ಪರಮಹಂಸರು, ನಾಲ್ವರು ಕುರುಡರು ಆನೆಯನ್ನು ಸ್ಪರ್ಶಿಸಿ ತಮಗೆ ಅನಿಸಿದ್ದನ್ನು ಪೂರ್ಣವೆಂದು ಹೇಳಿದರು - ಒಬ್ಬನು ಕಾಲುಗಳನ್ನು ಮುಟ್ಟಿ ಆನೆ ಕಂಬದಂತೆ ಇದೆಯೆಂದೂ, ಮತ್ತೊಬ್ಬ ಕಿವಿಯನ್ನು ಮುಟ್ಟಿ ಆನೆ ಮೊರದಂತೆ ಇದೆಯೆಂದೂ, ಇನ್ನೊಬ್ಬ ಬಾಲವನ್ನು ಮುಟ್ಟಿ ಆನೆ ಹಗ್ಗದಂತೆ ಇದೆಯೆಂದೂ, ಮಗದೊಬ್ಬ ಹೊಟ್ಟೆಯನ್ನು ಮುಟ್ಟಿ ಆನೆ ಗೋಡೆಯಂತೆ ಇದೆಯೆಂದೂ- ಎಂದು ಹೇಳುತ್ತಾರೆ. ಆಯಾ ಮಟ್ಟಗೆ ಅವರು ಹೋಲಿಕೆ ಮಾಡಿ ಹೇಳಿದ ಅನುಭವಗಳೆಲ್ಲವೂ ಅವರವರ ಮಟ್ಟಿಗೆ ಸತ್ಯವೂ ಅಹುದು, ಪೂರ್ಣವೂ ಅಹುದು. ಆದರೆ ಆನೆಯನ್ನು ಪೂರ್ಣತ್ವದ ದೃಷ್ಟಿಯಿಂದ ನೋಡಿದರೆ, ಅವರು ಹೇಳಿದುದದೆಲ್ಲವೂ ಅಪೂರ್ಣವೆಂದೇ ತೋರುತ್ತದಲ್ಲವೇ...!?
ಅಂತೆಯೇ ಸೃಷ್ಟಿಗೆ ಹೋಲಿಸಿ ನೋಡಲಾಗಿ ಆನೆಯೂ ಸಮಗ್ರ ಸೃಷ್ಟಿಯನ್ನು ಸೂಚಿಸದೇ ಅದರ ಒಂದು ಅಪೂರ್ಣ ಭಾಗವಾಗಿಯೇ ತೋರುತ್ತದಲ್ಲವೇ? ಹೀಗೆಯೇ, ನಾವೂ ಸಹ ಸೃಷ್ಟಿಯ ಅಪೂರ್ಣಾಂಶಿತರಾಗಿರುವಾಗ ಸಮಗ್ರ ಸೃಷ್ಟಿಯನ್ನು ಹೇಗೆ ನಿದರ್ಶಿಸಬಲ್ಲೆವು...!? ಆದರೂ ನಮ್ಮ ಮಟ್ಟಿಗೆ ನಾವೂ ಪೂರ್ಣರೆಂದೇ ಬಗೆದುಕೊಳ್ಳುತ್ತೆವಲ್ಲವೇ...! ನಮ್ಮ ಮಟ್ಟಿಗಿನ ಸೀಮಿತ ದೃಷ್ಟಿಯಿಂದ ನೋಡಿದಾಗ ನಾವೂ ಸಹ - ಆನೆಯ ಕಾಲುಗಳು ಕಂಬದಂತೆ, ಕಿವಿಗಳು ಮೊರದಂತೆ, ಬಾಲ ಹಗ್ಗದಂತೆ, ಹೊಟ್ಟೆ ಗೋಡೆಯಂತೆ- ಪೂರ್ಣರಂತೆ ಭಾವಿಸಿಕೊಂಡು ಇರುತ್ತೇವೆ.
ಸೃಷ್ಟಿಗೆ ಹೋಲಿಸಿಕೊಂಡು ನೋಡಿದಾಗ ನಮ್ಮ ಅಪೂರ್ಣತ್ವದ ಅರಿವಾಗುತ್ತದೆ. ಆಗ ನಮ್ಮ ದೃಷ್ಟಿ ಸಮಗ್ರತೆಯೆಡೆಗೆ ಹೊರಳಿ, ದಿವ್ಯವಾದ ಪೂರ್ಣತೆಯನ್ನು ಅನುಭವಿಸಲು ಪ್ರೇರಣಾತ್ಮಕವಾಗಿ ಮುಂದುವರೆಯುತ್ತದೆ. ಇದೇ ಅಪೂರ್ಣತ್ವದಿಂದ ಪೂರ್ಣತ್ವದೆಡೆಗೆ ಸಂತತವಾಗಿ ಸಾಗುವ ಮಾರ್ಗವಾಗಿ ಗೋಚರಿಸುತ್ತದೆ...! ಹೀಗೆ ನೋಡಿದರೆ ಎಲ್ಲವೂ ಪೂರ್ಣವೇ ಸರಿ. ಅದರಿಂದಾಗಿ ನಮ್ಮ ಪೂರ್ವಿಕರು ಹೇಳಿದರು:
ಪೂರ್ಣಮಿದಂ, ಪೂರ್ಣಮದಃ, ಪೂರ್ಣಾತ್ ಪೂರ್ಣಮುದಚ್ಯತೇ, ಪೂರ್ಣಸ್ಯ ಪೂರ್ಣಮಾದಾಯ ಪೂರ್ಣಮೇವಾವಶಿಷ್ಯತೇ...! ಎಂದು. ಅಂತೆಯೇ ಆ ಮಟ್ಟ ಮುಟ್ಟುವ ತನಕ ನಾವೂ ಸಹ ಹೀಗೆ ಹೇಳಬಹುದು: ಅಪೂರ್ಣಮಿದಂ, ಅಪೂರ್ಣಮದಃ, ಅಪೂರ್ಣಾತ್ ಅಪೂರ್ಣಮುದಚ್ಯತೆ, ಅಪೂರ್ಣಸ್ಯ ಅಪೂರ್ಣಮಾದಾಯ ಅಪೂರ್ಣಮೇವಾವಶಿಷ್ಯತೆ...!
ಇವೆಲ್ಲವೂ ಮನನಗೊಂಡು ಅನುಭವಿಸಿದಾಗ, ಕೇವಲ ಇರುವಿಕೆಯಷ್ಟೇ ಇರುವುದರ ಅನುಭವವಾಗಿ -ತದ್ ತ್ವಮ್ ಅಸಿ- ತತ್ವಮಸಿ ತತ್ವವು ಹೃದ್ಯವಾಗುತ್ತದೆ.
All are in the state of Tangential Truth always. Experience it, feel it, and become ONE with it; and You are that itself. That's all...!
-ಕುರಾಜನ್.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ