1984ರಿಂದ ನಾನು ಮಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ಮುಖ್ಯಸ್ಥನಾದ ಕಾಲದಿಂದ ಮನೋಹರ ಪ್ರಸಾದ್‌ರನ್ನು ಹತ್ತಿರದಿಂದ ಕಂಡು ಉದಯವಾಣಿಯನ್ನು ಅವರು ಬೆಳೆಸಿದ ರೀತಿಯನ್ನು ಅವಲೋಕಿಸಿಕೊಂಡು ಬಂದವನು ನಾನು. ಮನೋಹರ ಪ್ರಸಾದ್ ಅವರ ಒಂದು ಮುಖ್ಯವಾದ ಗುಣ ಅವರ ಹುಡುಕಾಟದ ಪ್ರವೃತ್ತಿ ಮತ್ತು ಅಧ್ಯಯನಶೀಲತೆ. ಅವರು ಸ್ಥಳೀಯತೆಯನ್ನು ಪತ್ರಿಕೆಯ ಅಂಚಿನಿಂದ ಕೇಂದ್ರಕ್ಕೆ ತಂದರು. ಸಣ್ಣ ಸಣ್ಣ ಊರುಗಳ ಸಣ್ಣ ಸಣ್ಣ ಸುದ್ದಿಗಳು ರಾಜ್ಯದ ರಾಷ್ಟ್ರದ ಗಮನ ಸೆಳೆಯುವಂತೆ ಮಾಡಿದರು. ಮಂಗಳೂರು ನಗರ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ರಾಜಕೀಯ ಸಾಮಾಜಿಕ ಸಾಂಸ್ಕೃತಿಕ ಇತಿಹಾಸವನ್ನು ಸಾಮಾನ್ಯ ಓದುಗರಿಗೆ ಮುಟ್ಟಿಸುವ ಮಾದರಿಯ ಅಂಕಣ ಬರಹಗಳನ್ನು ಸಾವಿರ ಸಾವಿರ ಸಂಖ್ಯೆಯಲ್ಲಿ ಬರೆದರು. ಸ್ಥಳೀಯ ಭೌತಿಕ ಕಟ್ಟಡಗಳಿಗೆ, ಸ್ಮಾರಕಗಳಿಗೆ ತಮ್ಮ ಲೇಖನಗಳ ಮೂಲಕ ಹೊಸ ಜೀವ ತುಂಬಿದರು.
ತಮ್ಮ ಬರಹ, ವರದಿ, ಅಂಕಣ-ಇಂತಹ ಯಾವುದೇ ಕ್ರಿಯಾಶೀಲತೆಗಾದರೂ ಮನೋಹರ ಪ್ರಸಾದ್ ನಡೆಸುತ್ತಿದ್ದ ಸಿದ್ಧತೆ ಪತ್ರಕರ್ತರಿಗೆ ಒಂದು ವಿಶಿಷ್ಟ ಮಾದರಿ. ಅದಕ್ಕಾಗಿ ಅವರು ಗ್ರಂಥಗಳನ್ನು ಲೇಖನಗಳನ್ನು ಕಲೆಹಾಕಿ ಅಧ್ಯಯನ ನಡೆಸುತ್ತಾರೆ; ವಿಷಯದಲ್ಲಿ ಪರಿಣಿತರನ್ನು ಸಂಪರ್ಕಿಸಿ ಮಾಹಿತಿ ಪಡೆಯುತ್ತಾರೆ. ಸಾಹಿತ್ಯ, ಸಂಸ್ಕೃತಿ, ಕ್ರೀಡೆ, ಧರ್ಮ, ಇತಿಹಾಸ, ರಾಜಕೀಯ -ಹೀಗೆ ಬಹು ಕ್ಷೇತ್ರಗಳ ಜನರ ಜತೆಗೆ ಸಮಾನ ಸಂಬಂಧಗಳನ್ನು ಇಟ್ಟುಕೊಳ್ಳುತ್ತಾರೆ. ಇವೆಲ್ಲವನ್ನು ಕಲೆಹಾಕಿ ಶೋಧಿಸಿ ಆಯ್ಕೆ ಮಾಡಿ ಮಂಡಿಸುವಾಗ, ಸಮದರ್ಶಿತ್ವದ ನಿರೂಪಣೆಯನ್ನು ಮಾಡುತ್ತಾರೆ. ಪಂಥಗಳ ಪಕ್ಷಗಳ ಗುಂಪುಗಳ ಧರ್ಮಗಳ ಜಾತಿಗಳ ಒತ್ತಡಗಳಿಗೆ ಒಳಗಾಗದೆ, ಸಮತೂಕದ ವಿಷಯ ಮಂಡನೆ ಮಾಡುವ ಸಮಚಿತ್ತವನ್ನು ಉಳಿಸಿಕೊಂಡಿದ್ದಾರೆ.
ಮುಖ್ಯ ವರದಿಗಾರರಾಗಿ ಮನೋಹರ ಪ್ರಸಾದ್ ಅವರೇ ವರದಿ ಮಾಡಿದಾಗ ಅದರಲ್ಲಿ ಅವರದ್ದೇ ಒಂದು ಚಹರೆ ಇರುತ್ತದೆ. ಚಿಕ್ಕ ಚಿಕ್ಕ ಚೊಕ್ಕ ಪ್ಯಾರಾಗಳು, ಅವುಗಳಿಗೆ ಕ್ಲಪ್ತವಾದ ಕಿರು ಶೀರ್ಷಿಕೆ, ಕಿರಿದರಲ್ಲಿ ಹಿರಿದನ್ನು ಅಡಕವಾಗಿ ತಿಳಿಸುವ ಸಂಗ್ರಹ ಗುಣದ ಶೈಲಿ, ಪದಗಳ ಜೋಡಣೆಯಲ್ಲಿ ಹೊಸತನದ ಸ್ಪರ್ಶ, ಕೆಲವೊಮ್ಮೆ ಹೊಸಪದಗಳ ಸೃಷ್ಟಿಯ ನಾವೀನ್ಯ, ಆಪ್ತತೆಯ ಭಾವಸ್ಪರ್ಶ- ಇವೆಲ್ಲ ಪಾಕಗೊಂಡಿರುತ್ತವೆ. ಅವರು 'ಉದಯವಾಣಿ' ಸುದ್ದಿ ವಿಭಾಗದ ಮುಖ್ಯಸ್ಥರಾಗಿ ಮಂಗಳೂರು ಪರಿಸರದ ಬಹುರೂಪಿ ಬದುಕನ್ನು ಬಹುಬಗೆಗಳಲ್ಲಿ ಕಟ್ಟಿಕೊಡುವ ತೆರೆದು ತೋರಿಸುವ ಕಾರ್ಯವನ್ನು ನಿರಂತರವಾಗಿ ಮಾಡಿಕೊಂಡು ಬಂದಿದ್ದಾರೆ. ಮನೋಹರ ಪ್ರಸಾದ್ ಕಾರ್ಯಕ್ರಮಗಳ ನಿರ್ವಹಣೆಯಲ್ಲಿ ನಿರೂಪಕರಾಗಿ ಹೊಸ ಮಾರ್ಗವೊಂದನ್ನು ಹಾಕಿಕೊಟ್ಟಿದ್ದಾರೆ. ಅದರಲ್ಲಿ ಒಂದು ಮುಖ್ಯ ಆಕರ್ಷಣೆ: ವಿಷಯಗಳ, ವ್ಯಕ್ತಿಗಳ, ಘಟನೆಗಳ ಇತಿಹಾಸದ ಅಪೂರ್ವ ಪುಟಗಳನ್ನು ತೆರೆದು ತೋರಿಸುವುದು. ಇದಕ್ಕಾಗಿ ಅವರು ಸಾಕಷ್ಟು ಮನೆ ಕೆಲಸದ ಸಿದ್ಧತೆಗಳನ್ನು ಮಾಡಿಕೊಂಡು ಬರುತ್ತಾರೆ. ಸಮಾರಂಭದ ಅತಿಥಿಗಳಿಗೆ ತಮ್ಮ ಬಗ್ಗೆ ಗೊತ್ತಿಲ್ಲದ ಅನೇಕ ಸಂಗತಿಗಳನ್ನು ಮನೋಹರ ಪ್ರಸಾದ್ ಅನಾವರಣ ಮಾಡಿ, ಅತಿಥಿಗಳಿಗೆ ಆಶ್ಚರ್ಯ ಮತ್ತು ಆನಂದವನ್ನು ಒಟ್ಟಿಗೆ ತಂದುಕೊಟ್ಟು, ಮುಂದಿನ ಅವರ ಭಾಷಣಗಳಿಗೆ ಉಲ್ಲಾಸದ ಆವರಣವೊಂದನ್ನು ನಿರ್ಮಾಣ ಮಾಡುತ್ತಾರೆ.
ನನ್ನ ತಂದೆ ಹಿರಿಯ ಪತ್ರಕರ್ತ ಅಗ್ರಾಳ ಪುರಂದರ ರೈ ಅವರ ಜತೆಗೂ ಆತ್ಮೀಯ ಸಂಬಂಧ ಇಟ್ಟುಕೊಂಡಿದ್ದ ಮನೋಹರ ಪ್ರಸಾದ್, ತಂದೆಯವರು ತೀರಿ ಹೋಗುವ ಮೊದಲು 2001 ಎಪ್ರಿಲ್‌ನಲ್ಲಿ ಮಂಗಳೂರಿನ ನಮ್ಮ ಮನೆಯ ಅಂಗಳದಲ್ಲಿ ಏರ್ಪಡಿಸಿದ್ದ "ಅಗ್ರಾಳ ಪುರಂದರ ರೈ ಸಮಗ್ರ ಸಾಹಿತ್ಯ' ಗ್ರಂಥ ಬಿಡುಗಡೆಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ತಂದೆಯವರು 2001 ಮೇ 7ರಂದು ನಿಧನರಾದಾಗ ಅದನ್ನು ದೊಡ್ಡ ಸುದ್ದಿಯಾಗಿ 'ಉದಯವಾಣಿ'ಯಲ್ಲಿ ಪ್ರಕಟಿಸಿದ್ದರು. ಅಗ್ರಾಳ ಪುರಂದರ ರೈ ನೂರರ ನೆನಪು ಕಾರ್ಯಕ್ರಮವನ್ನು 2016ರಲ್ಲಿ ಮಾಡಿದಾಗ ಮನೋಹರ ಪ್ರಸಾದ್ ಅದರಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಪತ್ರಕರ್ತರ ವಿಚಾರಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು. ಅದೇ ವರ್ಷ ಕುವೈಟ್‌ನಲ್ಲಿ ನಡೆದ ವಿಶ್ವ ತುಳು ಸಮ್ಮೇಳನದಲ್ಲಿ ನಾವು ಜೊತೆಯಾಗಿ ಅನೇಕ ಸಂತಸದ ತಮಾಷೆಯ ಸಂಗತಿಗಳನ್ನು ಹಂಚಿಕೊಂಡಿದ್ದೆವು.
ಮನೋಹರ ಪ್ರಸಾದ್ "ನಮ್ಮ ಕುಡ್ಲ'ದ ಜನಮನಕ್ಕಾಗಿ ಸುಮಾರು 30 ವರ್ಷಗಳ ಅಂತರದಲ್ಲಿ ಎರಡು ಬಾರಿ ನನ್ನ ಸಂದರ್ಶನ ನಡೆಸಿದ್ದರು. ಅವರ ಉತ್ಸಾಹ, ನೆನಪಿನ ಶಕ್ತಿ ಎಳ್ಳಷ್ಟೂ ಕುಂದಿರಲಿಲ್ಲ.
ಕ್ರಿಯಾಶೀಲತೆ, ಅಧ್ಯಯನಶೀಲತೆ, ಚಲನಶೀಲತೆಗಳ ಜತೆಗೆ ಮಾನವೀಯತೆಯನ್ನು ತನ್ನ ಬುದ್ಧಿಭಾವಗಳ ತಳಗಟ್ಟು ಆಗಿ ಉಳ್ಳ ಮನೋಹರ ಪ್ರಸಾದ್ ಅವರು ಕನ್ನಡ ಪತ್ರಿಕಾರಂಗದ ದಣಿವರಿಯದ ಓಟಗಾರರಾಗಿದ್ದರು. ಅವರು ಕಳೆದ ದಶಂಬರ 8ರಂದು ನನ್ನ ಹುಟ್ಟಿದ ದಿನವನ್ನು ನೆನಪಿಸಿಕೊಂಡು ತಮ್ಮ ಫೇಸ್‌ಬುಕ್‌ನಲ್ಲಿ ಬರೆದ ಕೆಲವು ಸಾಲುಗಳನ್ನು ಇವತ್ತು ಮತ್ತೆ ಓದಿದಾಗ ಕಣ್ಣುಗಳು ಒದ್ದೆಯಾದವು.
"ವಿವೇಕ ರೈ ಅವರ 300+ ಕಾರ್ಯಕ್ರಮ ವರದಿ ಮಾಡಿರುವೆ. ತುಳು ಸಾಹಿತ್ಯ ಅಕಾಡೆಮಿ, ಸಂದೇಶ, ಆಳ್ವಾಸ್ ನುಡಿಸಿರಿ, ಕುವೈಟ್ ವಿಶ್ವ ತುಳು ಸಮ್ಮೇಳನ, ಮಂಗಳೂರು ದರ್ಶನ ಸಂಪುಟಗಳ ವೇಳೆ ಅವರ ಜತೆಗಿದ್ದ ಭಾಗ್ಯ ನನ್ನದು. ಅಂದಹಾಗೆ, ಪ್ರಸಿದ್ಧ ತುಳು ಸಿನೆಮಾ "ಕೋಟಿ ಚೆನ್ನಯ'ಕ್ಕೆ ಅವರು ಬರೆದ ಅತ್ಯಂತ ಜನಪ್ರಿಯ ಗೀತೆ "ಎಕ್ಕಸಕ್ಕ'ಕ್ಕೆ ಈಗ 50 ವರ್ಷ'.
- ಡಾ|ಬಿ.ಎ. ವಿವೇಕ ರೈ, ಹಿರಿಯ ವಿದ್ವಾಂಸರು
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ