- ರಾಜೇಶ್ವರಿ, ಬೆಂಗಳೂರು
ನಾವು ಆರ್ಯರಲ್ಲ ದ್ರಾವಿಡರು, ರಾಮ ನಮಗೆ ಆರಾಧ್ಯ ದೈವವಲ್ಲ, ರಾಮಾಯಣ ನಮಗೆ ಪೂಜ್ಯ ಕಾವ್ಯವಲ್ಲ, ನಾವು ರಾವಣನ ಪೂಜೆ ಮಾಡುತ್ತೇವೆ, ಎಂದು ಮುಂತಾಗಿ ಆಧಾರರಹಿತವಾಗಿ ಸನಾತನ ಧರ್ಮದ ವಿರುದ್ಧ ಇಲ್ಲಸಲ್ಲದ ಹೇಳಿಕೆಗಳನ್ನು ನೀಡುತ್ತಾ, ರಾಜಕೀಯ ಕಾರಣಗಳಿಗಾಗಿ, ವೋಟು ಹಾಗೂ ಅಧಿಕಾರಕ್ಕಾಗಿ, ಜನಾಂಗ ದ್ವೇಷವನ್ನು ಬೆಳೆಸುವಂತಹ, ರಾಮನ ಚಿತ್ರಕ್ಕೆ, ರಾಮಭಕ್ತಿಗೆ ಅವಮಾನ ಮಾಡುವ ಪ್ರವೃತ್ತಿಯು ದ್ರಾವಿಡ ಚಳವಳಿಯ ಮೂಲಸ್ಥಾನವೆನಿಸಿಕೊಳ್ಳುವ ತಮಿಳುನಾಡಿನಲ್ಲಿ, ಕೆಲವು ರಾಜಕೀಯ ಪಕ್ಷಗಳವರು, ಬುದ್ಧಿಜೀವಿಗಳೆನಿಸಿಕೊಂಡವರಿಂದ ಕಾಲಕಾಲಕ್ಕೆ ನಡೆಯುತ್ತಾ ಬಂದಿದೆ. ಆದರೆ ಭಕ್ತಿಪ್ರಧಾನವಾದ ಮಾನಸಿಕತೆಯನ್ನುಳ್ಳ ಬಹುಪಾಲು ತಮಿಳು ನಾಡಿನ ಜನತೆಗೆ ಪ್ರಾಚೀನ ಕಾಲದಿಂದಲೂ ಶಿವ, ಮುರುಗರಂತೆ, ರಾಮನೂ ಕೂಡಾ ಆರಾಧ್ಯದೈವವಾಗಿದ್ದಾನೆ, ತಮಿಳುನಾಡಿನ ಉದ್ದಗಲಕ್ಕೂ ಶ್ರೀರಾಮನ ದೇವಾಲಯಗಳಿವೆ, ರಾಮಾಯಣ ಕಾಲದ ಐತಿಹಾಸಿಕ ಸ್ಥಳಗಳಿವೆ. ತಮಿಳುನಾಡಿನ ಜನತೆ ಇಂದಿಗೂ ಶ್ರೀರಾಮನನ್ನು ದೈವವೆಂದು ನಂಬಿದ್ದಾರೆ, ಪೂಜಿಸಿಕೊಂಡು ಬರುತ್ತಿದ್ದಾರೆ.
ಪ್ರಾಚೀನ ಕಾಲದಲ್ಲಿ ತಮಿಳು ಭಾಷೆಯಲ್ಲಿ ಸಂಘ ಸಾಹಿತ್ಯವೆಂಬ ಮೂರು ಸಾಹಿತ್ಯ ಯುಗಗಳಿದ್ದವೆಂದೂ, ಅದರಲ್ಲಿ ಮೊದಲನೇ ಎರಡು ಸಂಘ ಸಾಹಿತ್ಯ ಕಾಲದ ಕೃತಿಗಳು ನಾಶವಾದವೆಂದೂ ಹೇಳುತ್ತಾರೆ. ಮೂರನೇ ಸಂಘ ಯುಗಕ್ಕೆ (ಕ್ರಿ.ಪೂ.500 ರಿಂದ ಕ್ರಿ.ಶ.200) ಸೇರಿದ್ದೆಂದು ಹೇಳುವ ಚಿಕ್ಕ ಪದ್ಯಗಳ ಸಂಕಲನವೆನಿಸಿದ "ಎಟ್ಟುತ್ತೊಗೈ" ಮತ್ತು ದೀರ್ಘ ಕವನಗಳು ಅಥವಾ ಹಾಡುಗಳ ಸಂಕಲನ "ಪತ್ತುಪಾಟ್ಟು" ಎಂಬುವು ಮಾತ್ರ ದೊರೆಯುತ್ತವೆ. ಮೂರನೇ ಸಂಘ ಸಾಹಿತ್ಯದ ಕೆಲವು ಪದ್ಯಗಳಲ್ಲಿ ರಾಮಾಯಣಕ್ಕೆ ಸಂಬಂಧಿಸಿದ ಸೂಚನೆಗಳಿವೆ. ರಾಮನು ರಾಮೇಶ್ವರದಲ್ಲಿ ಆಲದಮರದ ಕೆಳಗೆ ಸಭೆಯನ್ನು ನಡೆಸುತ್ತಿದ್ದಾಗ, ಅವನ ಸೂಚನೆಯಂತೆ ಪಶುಪಕ್ಷಿಗಳೂ ಶಾಂತವಾಗಿ ಕುಳಿತು ಆಲಿಸುತ್ತಿದ್ದವು ಎಂದು ಒಬ್ಬ ಸಂಘ ಕವಿಯೂ, ಸೀತೆಯ ಆಭರಣಗಳನ್ನು ವಿಪರೀತ ಕ್ರಮದಲ್ಲಿ ಧರಿಸಿಕೊಂಡು ವಾನರರು ಸಂತೋಷಪಡುತ್ತಿದ್ದರು ಎಂದು ಇನ್ನೊಬ್ಬ ಸಂಘ ಕವಿಯೂ ಹೇಳಿದ್ದಾನೆ.
ತಮಿಳು ಭಕ್ತಿ ಸಾಹಿತ್ಯದ ಕಾಲದಲ್ಲಿ ಅಂದರೆ ಕ್ರಿ.ಶ.500 ರಿಂದ 800 ರವರೆಗೆ ರಚನೆಯಾದ ಆಳ್ವಾರರ ನಾಲಾಯಿರ ಪ್ರಬಂಧಗಳಲ್ಲಿ ರಾಮಾಯಣಕ್ಕೆ ಸಂಬಂಧಿಸಿದ ಪದ್ಯಗಳಿವೆ. ತಿರುಮಳಿಶೈ ಆಳ್ವಾರರು ವಾಲ್ಮೀಕಿ ರಾಮಾಯಣದಲ್ಲಿ ಇಲ್ಲದ ಭಿನ್ನವಾದ ಸಂಗತಿಗಳನ್ನು ಹೇಳಿದ್ದಾರೆ. ಹನುಮಂತನು ರಾಮನಿಂದ ಉದಯವಾಗಿ ಬಂದನೆಂದು ಪೆರಿಯಾಳ್ವಾರ್ ಹೇಳಿದ್ದಾರೆ. ಕುಲಶೇಖರ ಆಳ್ವಾರ್ ಅವರು ದಶರಥನ ಸ್ಥಾನದಲ್ಲಿ ತಮ್ಮನ್ನು ಕಲ್ಪಿಸಿಕೊಂಡು ರಾಮನಿಗೆ ಲಾಲಿ ಹಾಡುವುದು, ರಾಮನು ಕಾಡಿಗೆ ಹೋದಾಗ ಶೋಕಿಸುವಂತಹ ಪ್ರಬಂಧಗಳನ್ನು ರಚಿಸಿದ್ದಾರೆ. ತಿರುಮಂಗೈ ಆಳ್ವಾರರು ರಾಮ, ಗುಹ, ಲಕ್ಷ್ಮಣರ ಮೈತ್ರಿಯನ್ನು ಹೊಗಳಿ ಅವರು ಅಣ್ಣತಮ್ಮಂದಿರೆಂದು ಹೇಳಿದ್ದಾರೆ. ನಮ್ಮಾಳ್ವಾರ್ ಅಥವಾ ಶಠಗೋಪರು ಮನುಷ್ಯನಾಗಿ ಹುಟ್ಟಿದ ಎಲ್ಲರೂ ರಾಮಕಥೆಯನ್ನು ತಿಳಿದುಕೊಳ್ಳಬೇಕು, ರಾಮಕಥೆಯನ್ನು ಓದಬೇಕೆಂದು ಹೇಳಿದ್ದಾರೆ.
ರಾಮಾವತಾರಮ್ ಅಥವಾ ಕಂಬ ರಾಮಾಯಣ
ಕಂಬ ರಾಮಾಯಣವು ತಮಿಳು ಭಾಷೆಯ ಅತ್ಯಂತ ಶ್ರೇಷ್ಠ ಕಾವ್ಯವೆನಿಸಿದೆ. ತಮಿಳು ಜನರಿಗೆ ಪರಮಪೂಜ್ಯ ಗ್ರಂಥವಾಗಿದೆ. ಕಂಬನ್ ಪಿರನ್ದ ತಮಿಳುನಾಡು-ಕಂಬನು ತಮಿಳುನಾಡಿಗೆ ಮಹಿಮೆಯನ್ನು ತಂದು ಕೊಟ್ಟ ಶ್ರೇಷ್ಠ ಕವಿ ಎಂದು ತಮಿಳಿನ ಮತ್ತೊಬ್ಬ ಶ್ರೇಷ್ಠ ಕವಿ ಭಾರತಿಯವರು ಕೊಂಡಾಡಿದ್ದಾರೆ. ಕಂಬರು ತಂಜಾವೂರು ಜಿಲ್ಲೆಯ, ಮಾಯೂರದ ಹತ್ತಿರ, ತಿರುವಳಂದೂರಿನಲ್ಲಿ, ಉವಚ್ಛ ಜಾತಿಯಲ್ಲಿ ಕಾಳಿ ಪೂಜೆಯನ್ನು ಮಾಡುವ ಕುಟುಂಬದಲ್ಲಿ ಜನಿಸಿದರು. ತಂದೆಯ ಹೆಸರು ಆದಿತ್ಯನ್. ಕಾಂಚೀಪುರದ ಏಕಾಂಬ್ರನಾಥನನ್ನು ಆರಾಧನೆ ಮಾಡುತ್ತಿದ್ದರಿಂದ ಅವರಿಗೆ ಕಂಬನ್ ಎಂದು ಹೆಸರು ಬಂದಿತೆಂದು ಹೇಳುತ್ತಾರೆ. ತಂದೆಯು ಬಾಲ್ಯದಲ್ಲೇ ಕಾಲವಾಗಲು, ಚಿಕ್ಕಂದಿನಲ್ಲಿ ಅವರನ್ನು ವೆಣ್ಣೆಯನಲ್ಲೂರಿನ ಉಳುಮೆಗಾರರ ಪ್ರಭು ಶಡೈಯಪ್ಪನವರು ಸಾಕಿ ಸಲಹಿ ವಿದ್ಯಾಭ್ಯಾಸ ಮಾಡಿಸಿದನೆಂದು ತಿಳಿದು ಬರುತ್ತದೆ. ಆದಕಾರಣ ಕಂಬರು ತಾವು ರಚಿಸಿದ ರಾಮಾಯಣದ ಪ್ರತಿ ಒಂದು ಸಾವಿರ ಪದ್ಯಗಳ ನಂತರ ಶಡೈಯಪ್ಪನವರನ್ನು ಸ್ತುತಿಸಿದ್ದಾರೆ. ರಾಮನು ರಾವಣನ ಮೇಲೆ ಗೆದ್ದು ಅಯೋಧ್ಯೆಯಲ್ಲಿ ಪಟ್ಟಾಭಿಷೇಕ ಮಾಡಿಕೊಳ್ಳುವ ಸಮಯುದಲ್ಲಿ ಉತ್ತುಬಿತ್ತು ನಾಡನ್ನು ಕಾಪಾಡುವ ಉಳುಮೆಗಾರರ ಕುಲದವರು ವಂದಿಸಿ ಎತ್ತಿಕೊಟ್ಟ ಕಿರೀಟವನ್ನು ವಸಿಷ್ಠ ಮಹರ್ಷಿಗಳು ತೆಗೆದುಕೊಂಡು ರಾಮನಿಗೆ ತೊಡಿಸಿದರೆಂದು ಹೇಳಿದ್ದಾರೆ. ದಶರಥನಿಗೆ ನಾವು ನಾಲ್ವರು ಮಕ್ಕಳಾದೆವು, ಈಗ ಗುಹನೂ ಸೇರಿ ಐವರು ಸಹೋದರರಾದೆವು ಎಂದು ಕಂಬರು ಹೇಳುತ್ತಾರೆ.
ಕಂಬರ ಕಾಲ 9ನೇ ಶತಮಾನವೆಂದು ತಿಳಿದು ಬರುತ್ತದೆ. ಅವರು ಕುಲೋತ್ತುಂಗ ಚೋಳರಾಜನ ಆಸ್ಥಾನದಲ್ಲಿ ಕವಿಚಕ್ರವರ್ತಿ ಎಂಬ ಮನ್ನಣೆಯನ್ನು ಪಡೆದಿದ್ದರು. ಕಂಬರು ರಾಮಾಯಣದ ಆರು ಕಾಂಡಗಳನ್ನು ಮಾತ್ರ ರಚಿಸಿದ್ದಾರೆ. ಇವರು ರಚಿಸದೇ ಬಿಟ್ಟಿದ್ದ ಉತ್ತರ ಕಾಂಡವನ್ನು ಒಟ್ಟುಕ್ಕೂತ್ತರೆಂಬ ಕವಿ ರಚಿಸಿದ್ದಾರೆ. ಕಂಬ ರಾಮಾಯಣವು ಪಟಲಗಳಾಗಿ ವಿಭಾಗಗೊಂಡಿದ್ದು, ಒಂದೊಂದು ಪಟಲಕ್ಕೂ ಬೇರೆ ಬೇರೆ ಹೆಸರುಗಳಿವೆ. ಕಂಬ ರಾಮಾಯಣದಲ್ಲಿ ನಾಲ್ಕು ಸಾಲಿನ ವೆಣ್ಬಾ ಛಂದಸ್ಸಿನ ಹತ್ತು ಸಾವಿರಕ್ಕಿಂತ ಹೆಚ್ಚಿನ ವೃತ್ತಗಳಿವೆ. ಈ ವೃತ್ತಗಳು ರಾಗ, ತಾಳ, ನೃತ್ಯಕ್ಕೆ ಅಳವಡಿಸುವಂತಿವೆ. ಈಗಲೂ ತಮಿಳುನಾಡಿನಲ್ಲಿ ತಾಳಲಯ ಬದ್ಧವಾಗಿ ಪ್ರತಿದಿನವೂ ಹಾಡುವ ಪರಂಪರೆ ಬೆಳೆದು ಬಂದಿದೆ. ಕಂಬರ ರಾಮಾಯಣದ ಮೇಲೆ ಆಳ್ವಾರರ ಹಾಡುಗಳು, ಅಧ್ಯಾತ್ಮ ರಾಮಾಯಣದ ಪ್ರಭಾವ ಇದೆ.
ಕಂಬ ರಾಮಾಯಣಕ್ಕೆ ವಾಲ್ಮೀಕಿ ರಾಮಾಯಣವೇ ಮೂಲ. ಆದರೆ ಕಂಬರು ಅಂದಿನ ಕಾಲದ ತಮಿಳುನಾಡಿನ ಸಂಸ್ಕೃತಿ ಮತ್ತು ಪರಂಪರೆಗೆ ತಕ್ಕಂತೆ ಅಲ್ಲಲ್ಲಿ ಕೆಲವು ಮಾರ್ಪಾಟುಗಳನ್ನು ಮಾಡಿಕೊಂಡು ಕೆಲವು ಘಟನೆಗಳನ್ನು ಮೂಲಕ್ಕಿಂತ ಹೆಚ್ಚು ಶೋಭಾಯಮಾನವನ್ನಾಗಿ, ರಸಮಯವನ್ನಾಗಿ ಕಟ್ಟಿಕೊಟ್ಟಿದ್ದಾರೆ. ಕಂಬರಾಮಾಯಣದ ಕಥಾನಕದಲ್ಲಿ ಅಂತಹ ಕೆಲವು ಪ್ರಮುಖ ಬದಲಾವಣೆಗಳನ್ನು ಅವುಗಳ ಸ್ವಾರಸ್ಯವನ್ನು ಗಮನಿಸಬಹುದು.
ವಾಲ್ಮೀಕಿಯ ದೃಷ್ಟಿಯಲ್ಲಿ ರಾಮನು ಆದರ್ಶ ಮಾನವ. ಕಂಬರ ದೃಷ್ಟಿಯಲ್ಲಿ ರಾಮನು ಅವತಾರ ಪುರುಷ. ದೇವತೆಗಳೇ ಮಾನವರ ಉದ್ಧಾರಕ್ಕಾಗಿ ಭೂಲೋಕದಲ್ಲಿ ಅವತರಿಸಿದರು. ರಾಮನು ಮಾನವ ಸಹಜವಾದ ಪರಿತಾಪಗಳಿಗೆ ಒಳಗಾದರೂ ಅವನ ತಪಃಶಕ್ತಿಯಿಂದ ದೈವತ್ವದ ಅರಿವಾಗುತ್ತದೆ. ಹಾಗೂ ಲಕ್ಷ್ಮಣನೇ ಮೊದಲಾದ ಸುತ್ತಲಿದ್ದವರು ಅವನ ದೈವತ್ವವನ್ನು ಆಗಾಗ್ಗೆ ಜ್ಞಾಪಿಸುತ್ತಿರುತ್ತಾರೆ.
ಕಂಬರು ಸೀತಾರಾಮರ ಪ್ರೇಮ ವಿವಾಹವನ್ನು ತಮಿಳುನಾಡಿನಲ್ಲಿದ್ದ ಕಳವಿಯಲ್ ಅಂದರೆ ವಿವಾಹಪೂರ್ವ ಪ್ರೇಮ ಸಂಪ್ರದಾಯಕ್ಕನುಗುಣವಾಗಿ ಐದು ಪಟಲಗಳಲ್ಲಿ ವಿಸ್ತಾರವಾಗಿ ವರ್ಣಿಸಿದ್ದಾರೆ. ರಾಮ, ಲಕ್ಷ್ಮಣರು ವಿಶ್ವಾಮಿತ್ರರ ಜೊತೆ ಮಿಥಿಲೆಯ ಬೀದಿಯಲ್ಲಿ ಹೋಗುತ್ತಿದ್ದಾಗ, ಅರಮನೆಯ ಮಹಡಿಯ ಮೇಲೆ ನಿಂತಿದ್ದ ಸೀತೆಯು ರಾಮನನ್ನು ನೋಡುತ್ತಾಳೆ. ರಾಮನೂ ಸೀತೆಯನ್ನು ನೋಡುತ್ತಾನೆ. ಇಬ್ಬರಲ್ಲೂ ಪ್ರೇಮ ಅಂಕುರಿಸುತ್ತದೆ. ಅವರು ವಿರಹ ವೇದನೆಯಿಂದ ಬಳಲುತ್ತಾರೆ. ಮದುವೆಯ ಭವ್ಯವಾದ ಮೆರವಣಿಗೆ ಮೊದಲಾದವುಗಳನ್ನು ವಿಸ್ತಾರವಾಗಿ ವರ್ಣಿಸಿದ್ದಾರೆ. ಸೀತೆಯನ್ನು ಹುಡುಕಲು ಹೊರಟ ಹನುಮಂತನಿಗೆ, ಅವನು ರಾಮನ ದೂತನೆಂದು ನಂಬಲು, ಸೀತೆಗೆ ಈ ವಿವಾಹದ ಪ್ರಸಂಗವನ್ನು ಹೇಳುವಂತೆ ರಾಮನು ಹೇಳುತ್ತಾನೆ.
ಶೂರ್ಪನಖಿಯ ಪ್ರಸಂಗವೂ ವಿಶೇಷವಾಗಿದೆ. ರಾಮನೊಬ್ಬನೇ ನದಿಯ ದಡದಲ್ಲಿ ಕುಳಿತು ವಿಹರಿಸುತ್ತಿರುತ್ತಾನೆ. ಅವನನ್ನು ಕಂಡ ಶೂರ್ಪನಖಿಯ ಮನ್ಮಥನೇ ಈ ರೂಪು ತಾಳಿ ಬಂದಿದ್ದಾನೆ ಎಂದು ಹೇಳಿಕೊಂಡು, ಕಾಮೋದ್ದೀಪಿತಳಾಗಿ ಸುಂದರವಾದ ಹೆಣ್ಣಿನ ರೂಪವನ್ನು ಧರಿಸಿ ಬಂದು, ನಾನು ಬ್ರಹ್ಮನ ಮೊಮ್ಮಗನ ಪುತ್ರಿ, ಕುಬೇರ ಮತ್ತು ರಾವಣರ ತಂಗಿ ಎಂದು ಹೇಳಿಕೊಂಡು ತನ್ನನ್ನು ವಿವಾಹವಾಗುವಂತೆ ಒತ್ತಾಯಿಸುತ್ತಾಳೆ. ಅಷ್ಟರಲ್ಲಿ ಸೀತೆ ಅಲ್ಲಿಗೆ ಬರುತ್ತಾಳೆ. ಸೀತೆಯ ರೂಪವನ್ನು ಕಂಡು ಅಸೂಯಾಪರಳಾದ ಶೂರ್ಪನಖಿಯು ರಾಮನನ್ನು ಕುರಿತು ಅಯ್ಯೋ ಇವಳು ಮಾಯಾರೂಪಳಾದ ರಾಕ್ಷಸಿ, ಇವಳನ್ನು ದೂರಮಾಡು ಎನ್ನುತ್ತಾಳೆ. ರಾಮನು ನೀನಾದರೂ ಇವಳನ್ನು ಸರಿಯಾಗಿ ಗುರುತಿಸಿದೆಯಲ್ಲ ಎಂದು ಹಾಸ್ಯ ಮಾಡುತ್ತಾನೆ. ಇಲ್ಲಿ ನನ್ನ ತಮ್ಮನಿದ್ದಾನೆ ಅವನು ಬಹಳ ಕೋಪಿಷ್ಟ, ಅವನಿಂದ ನಿನಗೆ ತೊಂದರೆಯಾಗುತ್ತದೆ. ನೀನು ಇಲ್ಲಿಂದು ಹೊರಟುಹೋಗು ಎಂದು ಪರ್ಣಶಾಲೆಯೊಳಕ್ಕೆ ಹೋಗುತ್ತಾನೆ. ಸೀತೆ ಇದ್ದರೆ ರಾಮನನ್ನು ಒಲಿಸಿಕೊಳ್ಳುವುದು ಕಷ್ಟವೆಂದು ತಿಳಿದ ಶೂರ್ಪನಖಿಯು ಮಾರನೆಯ ದಿವಸ ರಾಮನು ನದಿಯ ದಡದಲ್ಲಿ ಉಪಾಸನೆಯನ್ನು ಮಾಡುತ್ತಿದ್ದ ವೇಳೆಯಲ್ಲಿ ಬಂದು ಸೀತೆಯನ್ನು ಕೊಲ್ಲಲ್ಲು ಪರ್ಣಕುಟಿಯೊಳಕ್ಕೆ ನುಗ್ಗುತ್ತಾಳೆ. ಆದರೆ ಅಲ್ಲೇ ಇದ್ದ ಲಕ್ಷ್ಮಣನು ಅವಳನ್ನು ತಡೆದು ವಿರೂಪಗೊಳಿಸುತ್ತಾನೆ.
ರಾವಣನು ಸೀತೆಯನ್ನು ಅಪರಹರಿಸುವಾಗ ಅವಳನ್ನು ಮುಟ್ಟುವುದಿಲ್ಲ, ಬದಲಿಗೆ ಪರ್ಣಶಾಲೆಯು ಇದ್ದ ನೆಲವನ್ನು ಬಗೆದು ಆ ಗುಡಿಸಿಲಿನ ಸಮೇತ ಅವಳನ್ನು ಅಪಹರಿಸಿಕೊಂಡು ಹೋದಂತೆ ಚಿತ್ರಿಸಿದ್ದಾರೆ. ಹನುಮಂತನು ಅಶೋಕವನದಲ್ಲಿ ಸೀತೆಯನ್ನು ಕಂಡಾಗ ಪರ್ಣಶಾಲೆಯು ಅಲ್ಲೇ ಇರುತ್ತದೆ. ಹನುಮಂತನ ಸೀತೆಯ ದರ್ಶನ ಮಾಡಿ ಹಿಂದಿರುಗಿ ಬಂದು ರಾಮನಿಗೆ ಈ ವಿಷಯವನ್ನು ಹೇಳುವಾಗ, ಅಯ್ಯಾ ನಿನ್ನ ತಮ್ಮನು ಕಟ್ಟಿದ ಪರ್ಣಶಾಲೆಯಲ್ಲಿಯೇ ಸೀತೆಯು ಇದ್ದಳೆಂದು ಹೇಳುತ್ತಾನೆ. ಜಟಾಯುವು ಕೂಡಾ ರಾವಣನು ಪರ್ಣಶಾಲೆಯ ಸಮೇತ ಸೀತೆಯನ್ನು ಎತ್ತಿಕೊಂಡು ಹೋದನೆಂದು ಹೇಳುತ್ತಾನೆ. ವಿರಾಧನು ಸೀತೆಯನ್ನು ಹೊತ್ತುಕೊಂಡು ಹೋದ ಘಟನೆಯು ಕಂಬರಲ್ಲಿ ಇಲ್ಲ. ಏಕೆಂದರೆ ಪರಪುರಷನು ಸೀತೆಯನ್ನು ಮುಟ್ಟುವುದು ಸಂಸ್ಕೃತಿಗೆ ವಿರುದ್ಧವಾದುದು. ವಾಲ್ಮೀಕಿ ರಾಮಾಯಣದಲ್ಲಿ ವಾಲಿಯು ಸತ್ತನಂತರ ಅವನ ಹೆಂಡತಿ ತಾರೆಯನ್ನು ಸುಗ್ರೀವನು ಮದುವೆಯಾದನೆಂದು ಹೇಳಿದೆ. ಆದರೆ ಕಂಬರು ತಾರೆಯನ್ನು ಉತ್ತಮ ಸ್ತ್ರೀಯಂತೆ ಚಿತ್ರಿಸಿದ್ದಾರೆ. ಗಂಡನನ್ನು ಕಳೆದುಕೊಂಡ ತಾರೆಯು ಹೂಮುಡಿಯುವುದೇ ಮೊದಲಾದ ಮಂಗಳ ಅಲಂಕಾರಗಳನ್ನು ತ್ಯಜಿಸಿ, ದಃಖಿಯಂತೆ ವಿಧವೆಯ ಬಾಳನ್ನು ನಡೆಸಿತ್ತಿರುತ್ತಾಳೆ. ಇಲ್ಲೆಲ್ಲಾ ಕಂಬರು ಅಂದಿನ ತಮಿಳುನಾಡಿನ ಸ್ತ್ರೀಯರ ಶ್ರೇಷ್ಠತೆಯನ್ನು ಎತ್ತಿ ಹಿಡಿಯುವಂತೆ ಕಥೆಯನ್ನು ಬದಲಾಯಿಸಿದ್ದಾರೆ.
ಯುದ್ಧಕ್ಕೆ ಮುಂಚೆ ರಾವಣನು ನಡೆಸಿದ ಸಭೆಯಲ್ಲಿ, ವಿಭೀಷಣನು ರಾವಣನಿಗೆ ರಾಮನ ಅಸದೃಶ್ಯವಾದ ಶಕ್ತಿಯನ್ನು ವಿವರಿಸುವಾಗ ಅವನಿಗೆ ನರಸಿಂಹಾವತಾರದ ಕಥೆಯನ್ನು ಅದ್ಭುತವಾಗಿ ವರ್ಣಿಸಿ ರಾವಣನಲ್ಲಿ ರಾಮನ ಬಗ್ಗೆ ಭಯ ಮೂಡುವಂತೆ ಮಾಡಲು ಯತ್ನಿಸುತ್ತಾನೆಂದು ಕಂಬರು ಹೇಳಿದ್ದಾರೆ. ಈ ಕಥೆಯು ಭಾಗವತಕ್ಕಿಂತ ಅತ್ಯಂತ ರೋಚಕವಾಗಿ ಮೂಡಿ ಬಂದಿದೆ. ಕಂಬರಿಗೆ ನರಸಿಂಹಾವತಾರದ ಬಗ್ಗೆ ವಿಶೇಷ ಭಕ್ತಿ. ಶ್ರೀರಂಗಂ ದೇವಾಲಯದಲ್ಲಿ ಕಂಬರ ರಾಮಾಯಣವು ಪ್ರಕಟವಾದಾಗ, ಕಂಬ ರಾಮಾಯಣದ ಶ್ರೇಷ್ಠತೆಯನ್ನು ಪ್ರಕಟಿಸಲು ಸಾಕ್ಷಾತ್ ನರಸಿಂಹನೇ ಪ್ರತ್ಯಕ್ಷನಾದನೆಂದು ಪ್ರತೀತಿ ಇದೆ.
ಕುಂಭಕರ್ಣನು ಮೊದಲಿಗೆ ಯುದ್ಧಸಭೆಯಲ್ಲಿ ಭಾಗವಹಿಸಿ ರಾವಣನಿಗೆ ಬುದ್ಧಿ ಹೇಳುತ್ತಾನೆ. ಪರಸ್ತ್ರೀ ಅಪಹರಣ, ಅವಳನ್ನು ಬಂಧನದಲ್ಲಿಡುವುದು, ಅವಳ ಮೇಲೆ ಮೋಹಗೊಳ್ಳುವುದು ನಮ್ಮ ವಂಶಕ್ಕೇ ಅವಮಾನ. ಸೀತೆಯನ್ನು ರಾಮನಿಗೊಪ್ಪಿಸಿ ಬಿಡುವುದು ಸೂಕ್ತವೆಂದು ಸಲಹೆ ನೀಡುತ್ತಾನೆ. ವಿಭೀಷಣನೂ ಇದನ್ನೇ ಹೇಳುತ್ತಾನೆ. ಆದರೆ ರಾವಣನು ಇಬ್ಬರ ಮಾತನ್ನೂ ತಳ್ಳಿ ಹಾಕಲು ವಿಭೀಷಣನು ರಾಮನಿಗೆ ಶರಣಾಗತನಾಗುತ್ತಾನೆ. ಆದರೆ ಕುಂಭಕರ್ಣನು ಭ್ರಾತೃಪ್ರೇಮವನ್ನು ಮೆರೆದು ಮನೆಗೆ ಹೋಗುತ್ತಾನೆ. ಪುನಃ ಕುಂಭಕರ್ಣನನ್ನು ಯದ್ಧಕ್ಕೆ ಎಬ್ಬಿಸಿ ಕರೆತಂದಾಗ, ಯುದ್ಧಸನ್ನದ್ಧನಾಗಿ ಬಂದು ಪುನಃ ರಾವಣನಿಗೆ ಬುದ್ಧಿವಾದ ಹೇಳುತ್ತಾನೆ. ರಾವಣನು ಒಪ್ಪದಿರಲು ಅಣ್ಣನ ಆಜ್ಞೆಯನ್ನು ಶಿರಸಾವಹಿಸಿ, ಇದೇ ತಮ್ಮ ಕಡೆಯ ಭೇಟಿಯೆಂದು ಕಣ್ಣೀರು ತುಂಬಿಕೊಂಡು ಯುದ್ಧರಂಗಕ್ಕೆ ಹೋಗುತ್ತಾನೆ. ಕುಂಭಕರ್ಣನ ಪಾತ್ರವನ್ನು ಕಂಬರು ಉಜ್ವಲವಾಗಿ ಚಿತ್ರಿಸಿದ್ದಾರೆ. ಕುಂಭಕರ್ಣನ ಪರಾಕ್ರಮಕ್ಕೆ ಕಪಿಸೇನೆ ಚೆಲ್ಲಾಪಿಲ್ಲಿಯಾಗುತ್ತದೆ. ಆಗ ರಾಮನು ವಿಭೀಷಣನನ್ನು ಕರೆದು ಕುಂಭಕರ್ಣನನ್ನು ಸಮಾಧಾನಪಡಿಸಿ ನಮ್ಮ ಪಕ್ಷಕ್ಕೆ ಕರೆತರುವಂತೆ ಹೇಳಿ ಕಳುಹಿಸುತ್ತಾನೆ. ವಿಭೀಷಣನು ಕುಂಭಕರ್ಣನನ್ನು ಯುದ್ಧರಂಗದಲ್ಲಿ ಭೇಟಿಯಾಗಿ ಅವನಿಗೆ ನಮಸ್ಕರಿಸುತ್ತಾನೆ. ಆಗ ಕುಂಭಕರ್ಣನು ವಿಭೀಷಣ ನೀನು ರಾಮನ ಕೃಪೆಗೆ ಪಾತ್ರನಾಗಿದ್ದೆ , ಈಗ ನೀನೂ ಕೂಡಾ ಅವನನ್ನು ಬಿಟ್ಟು ನಮ್ಮ ಪಕ್ಷಕ್ಕೆ ಬಂದೆಯಲ್ಲ ಎನ್ನುತ್ತಾನೆ. ಆಗ ವಿಭೀಷಣನು ರಾಮನೇ ತನ್ನನ್ನು ಕಳುಹಿಸಿದ್ದಾನೆಂದೂ, ನೀನು ರಾಮನ ಪಕ್ಷಕ್ಕೆ ಬಂದರೆ ಲಂಕೆಯ ರಾಜಕಿರೀಟವು ನಿನ್ನ ಶಿರಸ್ಸನ್ನು ಅಲಂಕರಿಸುವುದೆಂದು ಹೇಳುತ್ತಾನೆ. ಆಗ ಕುಂಭಕರ್ಣನು ಇಷ್ಟುದಿನ ನನ್ನೊಡನಿದ್ದು, ನನ್ನನ್ನು ಸಾಕಿ ಸಲಹಿದ ಅಣ್ಣನನ್ನು ನಾನು ಬಿಟ್ಟು ಬರುವುದಿಲ್ಲ, ಲಂಕೆಯ ರಾಜ್ಯಕ್ಕೆ ಧಾರ್ಮಿಕಪುರುಷನು, ನಿಷ್ಕಲ್ಮಷನೂ, ಶಾಂತನೂ ಆದ ನೀನು ರಾಜನಾಗಿರಲು ಅರ್ಹ, ಪೌಲಸ್ತ್ಯ ಕುಲದ ಕೀರ್ತಿಯನ್ನು ಉಳಿಸಲು ನೀನೇ ಸೂಕ್ತನದವನು, ನಾನು ಪಾಪಿ, ರಾಮನ ಬಾಣದಿಂದ ನನ್ನ ತಲೆಯು ಭೂಮಿಗೆ ಉರುಳಿದಾಗ ಅದಕ್ಕೆ ಕಿರೀಟ ಧಾರಣೆಯಾದಂತಾಗುತ್ತದೆ ಎನ್ನುತ್ತಾನೆ.
ರಾವಣನಿಗೂ ಕೂಡಾ ಕೊನೆಯಲ್ಲಿ ರಾಮನ ಸಾಕ್ಷಾತ್ಕಾರವಾಗಿ, ತನ್ನ ತಪ್ಪಿನ ಅರಿವಾಗಿ ರಾಮನನ್ನು ಯುದ್ಧದಲ್ಲಿ ಸೋಲಿಸಿದ ಮೇಲೆ ಸೀತಾದೇವಿಯನ್ನು ಅವನಿಗೆ ಒಪ್ಪಿಸುವುದಾಗಿ ಮನಸ್ಸು ಮಾಡುತ್ತಾನೆ. ಆದರೆ ಅದು ಈಡೇರುವುದಿಲ್ಲ. ರಾವಣನು ಹತನಾದ ಮೇಲೆ ಮಂಡೋದರಿಯು ದುಃಖಿಸಿ ಸೀತೆಯ ಪ್ರೇಮವು ರಾವಣನ ನರನಾಡಿಗಳಲ್ಲಿ ಸೇರಿರುವುದನ್ನು ರಾಮನು ಬಲ್ಲನೇ ಎಂದು ಹಲುಬುತ್ತಾಳೆ. ಈ ರೀತಿಯಾಗಿ ಇನ್ನೂ ಅನೇಕ ಬದಲವಾವಣೆಗಳು ಕಂಬ ರಾಮಾಯಣದಲ್ಲಿ ಕಂಡು ಬರುತ್ತವೆ. ರಾಮಾಯಣದ ಎಲ್ಲಾ ಪಾತ್ರಗಳನ್ನು ಕಂಬರು ಬಹಳ ಉದಾತ್ತವಾಗಿ ಚಿತ್ರಿಸಿದ್ದಾರೆ. ಕಂಬ ರಾಮಾಯಣವು ಇಂದಿಗೂ ತಮಿಳುನಾಡಿನ ಮನೆಮನಗಳಲ್ಲಿ ನೆಲೆಸಿದೆ. ಜನತೆಯ ಗೌರವ ಆದರಗಳಿಗೆ ಪಾತ್ರವಾಗಿದೆ. ಜನಪದಗೀತೆಯ ರೂಪದಲ್ಲಿ ದಿನನಿತ್ಯ ತಾಳ, ಲಯ ಬದ್ಧವಾಗಿ ಕಂಬ ರಾಮಾಯಣದ ಪಾರಾಯಣ, ರಾಮಪೂಜೆಯಲ್ಲಿ ತಮಿಳು ನಾಡಿನ ಭಕ್ತಜನತೆ ತೊಡಗಿದ್ದಾರೆ. ಆದರೆ ಕೆಲವೇ ಕೆಲವು ರಾಜಕಾರಣಿಗಳು, ಬುದ್ಧಿಜೀವಿಗಳೆನಿಸಿಕೊಂಡವರು, ಅಧಿಕಾರ ಲಾಲಸೆಯಿಂದ ಜನಾಂಗ ದ್ವೇಷವನ್ನು ಹುಟ್ಟುಹಾಕಲು ರಾಮನ ಬಗ್ಗೆ, ರಾಮಾಯಣದ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ ತಮಿಳುನಾಡಿನ ಭಕ್ತಜನ ಸಮುದಾಯವು ಅದಕ್ಕೆ ಬೆಲೆ ಕೊಡುತ್ತಿಲ್ಲ, ಅದಕ್ಕೆ ತಮ್ಮ ಬೆಂಬಲವನ್ನೂ ವ್ಯಕ್ತಪಡಿಸುವುದಿಲ್ಲ.
- ಶ್ರೀಮತಿ ರಾಜೇಶ್ವರಿ, ಬೆಂಗಳೂರು.
ಲೇಖಕರ ಕಿರುಪರಿಚಯ: ನಿವೃತ್ತ ಬ್ಯಾಂಕ್ ಉದ್ಯೋಗಿ. ರಾಮಾಯಣ ಮಹಾಭಾರತ ಮತ್ತು ಧರ‍್ಮಿಕ ಸಾಹಿತ್ಯದಲ್ಲಿ ಆಸಕ್ತಿ. ಅಧ್ಯಯನ ಮತ್ತು ಪ್ರವಾಸ ಇವರ ಹವ್ಯಾಸ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ