ಶ್ರೀರಾಮ ಕಥಾ ಲೇಖನ ಅಭಿಯಾನ-104: ರಾಮಾಯಣ ಕಾಲದಲ್ಲಿ ಯೋಗದರ್ಶನ

Upayuktha
0


-ಡಾ. ಪರಶುರಾಮ ಬೆಟಗೇರಿ


ಒಂದು ಮಹಾಯುಗವೆಂದರೆ ಕೃತ ತ್ರೇತಾ ದ್ವಾಪರ ಮತ್ತು ಕಲಿಯುಗಗಳು ಒಂದು ಬಾರೆ ಗತಿಸಿಹೋಗುವುದಾಗಿದೆ. ಪ್ರಸ್ತುತ ಕಲಿಯುಗವು ವೈವಸ್ವತ ಮನ್ವಂತರದಲ್ಲಿನ 28 ನೆಯ ಕಲಿಯುಗವಾಗಿರುತ್ತದೆ. ಶ್ರೀರಾಮಾವತಾರವು ತ್ರೇತಾಯುಗದ ಕೊನೆಯಲ್ಲಿ ನಡೆಯಿತು ಎಂದುಕೊಂಡರೂ ಕೂಡ ಈಗ ಗತಿಸಿರುವ ಕಲಿಯುಗದ ಸುಮಾರು 5100 ವರ್ಷಗಳು, ಅದರ ಹಿಂದಿನ ದ್ವಾಪರದ 8 ಲಕ್ಷ 64 ಸಾವಿರ ವರ್ಷಗಳ ಹಿಂದೆಯೇ ನಡೆದಿರುತ್ತದೆ. ತ್ರೇತೆಯು ಸುಮಾರು 13 ಲಕ್ಷ ಪ್ರಮಾಣದ ದೀರ್ಘ ಯುಗವಾದ್ದರಿಂದ ಅದು ಮುಗಿಯುವುದಕ್ಕೂ 2 ಲಕ್ಷ ವರ್ಷ ಮೊದಲೇ ರಾಮಾವತಾರವಾಗಿದೆ ಎಂದು ಒಪ್ಪಿದರೆ ಈಗ್ಗೆ ಒಟ್ಟು ಸುಮಾರು 10 ಲಕ್ಷ 70 ಸಾವಿರ ವರ್ಷಗಳ ಹಿಂದೆ ಆಗಿರುವುದು ಎಂದು ನಾವು ಅಂದಾಜು ಮಾಡಿಕೊಳ್ಳಬಹುದಾಗಿದೆ. ಇದು ಕೇವಲ ನಮ್ಮ ಅಂದಾಜಿಗೆ ಮಾತ್ರ. ನಿಖರವಾಗಿ ಶಾಸ್ತ್ರ ಪಂಡಿತರೂ, ಜ್ಯೋತಿಷ್ಯ ಶಾಸ್ತ್ರ ಪರಿಣಿತರೂ ಮಾತ್ರ ಹೇಳಲು ಸಾಧ್ಯ. 


ಎಲ್ಲ ದರ್ಶನಗಳೂ ಅನಾದಿಯಿಂದಲೇ ಇದ್ದವುಗಳು ಎಂದು ಹೇಳಿದರೂ ಅವುಗಳಲ್ಲಿ ಕೆಲವು ಪೂರ್ಣವಾಗಿ ನಶಿಸಿಯೂ, ಸ್ವಲ್ಪ ನಶಿಸಿಯೂ ಹೋದರೂ, ಮತ್ತೆ ಬಹು ಕಾಲಾನಂತರದಲ್ಲಿ ಪುಟಿದೇಳುತ್ತವೆ. ಹಾಗೆಯೇ ಅವು ಹೊಸ ಮುಖದೊಡನೆ ಪ್ರಚಾರದಲ್ಲಿ ಬರುವ ಸಾಧ್ಯತೆಯೂ ಉಂಟು.


ದ್ವಾಪರಯುಗದ ಕೊನೆಯಲ್ಲಿ ಜಗತ್ತಿನಲ್ಲಿ ಇದ್ದ ಸುಜ್ಞಾನವು ಗೌತಮ ಮುನಿಗಳ ಶಾಪ ಹಾಗೂ ಇನ್ನೂ ಅನೇಕ ಕಾರಣಗಳಿಂದ ನಶಿಸತೊಡಗಿತು. ಪ್ರಜೆಗಳು ಕೂಡ ಅಲ್ಪಾಯುಷಿಗಳೂ, ಕಡಿಮೆ ಬುದ್ಧಿಮತ್ತೆಯುಳ್ಳವರೂ ಆದರು. ಕಲಿಯುಗದಲ್ಲಿಯಂತೂ ಎಲ್ಲ ಕಡೆಗೂ ಕಲಿಯ ವ್ಯಾಪಾರವೇ ತಾಂಡವವಾಡತೊಡಗಿತು. ಇದನ್ನರಿತ ಶ್ರೀಮನ್ನಾರಾಯಣನು ಬ್ರಹ್ಮಾದಿ ದೇವತೆಗಳ ಪ್ರಾರ್ಥನೆಯ ಮೇರೆಗೆ ಸರಿಯಾದ ಜ್ಞಾನವನ್ನು ಜಗತ್ತಿಗೆ ಅರುಹಲು ಶ್ರೀವೇದವ್ಯಾಸರಾಗಿ ಅವತರಿಸಿದರು. ವೇದಗಳನ್ನು ನಾಲ್ಕು ಭಾಗವಾಗಿ ವಿಭಾಗಿಸಿದರು. ಹದಿನೆಂಟು ಸಂಖ್ಯೆಯ ಪುರಾಣಗಳನ್ನೂ, ಅಷ್ಟೇ ಸಂಖ್ಯೆಯ ಉಪಪುರಾಣಗಳನ್ನೂ, ಇತಿಹಾಸ ಗ್ರಂಥವಾದ ಒಂದು ಲಕ್ಷ ಶ್ಲೋಕವುಳ್ಳ ಮಹಾನ್ ಮಹಾಭಾರತವನ್ನೂ ರಚಿಸಿದರು. ವೇದಾರ್ಥ ನಿರ್ಣಯಕ್ಕಾಗಿ 564 ಸಂಖ್ಯಾಕವುಳ್ಳ ಬ್ರಹ್ಮಸೂತ್ರಗಳನ್ನೂ ರಚಿಸಿದರು. ಇವೆಲ್ಲವುಗಳ ಪ್ರಚಾರಕ್ಕೆ ಶಿಷ್ಯರನ್ನು ಕುಲಪತಿಗಳಾಗಿ ನಿಯಮಿಸಿದರು. ವಿಶ್ವವಿದ್ಯಾಲಯದ ಅಧ್ಯಯನ ಪಠ್ಯಕ್ರಮಕ್ಕೆ ಇದು ನಾಂದಿಯಾಯಿತು. ಅಲ್ಪಬುದ್ಧಿಮಟ್ಟವನ್ನು ಹೊಂದಿದ ಕಲಿಯುಗದ ಸಾತ್ವಿಕ ಜನತೆಗೆ ಇದರಿಂದ ಬಹಳ ಪ್ರಯೋಜನವಾಯಿತು. ಹೀಗೆ ಭರತಖಂಡದಲ್ಲಿ ಆಸ್ತಿಕ ಮತಗಳ ಪುನರುತ್ಥಾನದ ಯುಗ ಪ್ರಾರಂಭವಾಯಿತು. 


ಕಪಿಲಸ್ಯ ಕಣಾದಸ್ಯ ಗೌತಮಸ್ಯ ಪತಂಜಲೇಃ / ವ್ಯಾಸಸ್ಯ ಜೈಮಿನೇಶ್ಚಾಪಿ ಶಾಸ್ತ್ರಾಣ್ಯಾಹುಃ ಷಡೇವಹಿ // -- ಕಪಿಲರ ಸಾಂಖ್ಯ, ಕಣಾದರ ವೈಶೇಷಿಕ, ಗೌತಮರ ನ್ಯಾಯ, ಪತಂಜಲಿಯ ಯೋಗ, ಜೈಮಿನಿಗಳ ಪೂರ್ವಮೀಮಾಂಸಾ ಹಾಗೂ ಶ್ರೀವೇದವ್ಯಾಸರ ಉತ್ತರ ಮೀಮಾಂಸಾ ಶಾಸ್ತ್ರವೆಂಬ ಆರು ಆಸ್ತಿಕ ದರ್ಶನಗಳ ವಿಭಾಗವಾಯಿತು. ಅದಲ್ಲದೇ ಚಾರ್ವಾಕ, ಬೌದ್ಧ ಹಾಗೂ ಜೈನ ಎಂಬ ನಾಸ್ತಿಕ ದರ್ಶನಗಳ ವಿಭಾಗವೂ ಉಂಟಾಯಿತು. ಕೃತ ತ್ರೇತಾ ಹಾಗೂ ದ್ವಾಪರದ ಬಹು ಕಾಲಗಳ ವರೆಗೆ ಇವೆಲ್ಲ ಪಠ್ಯಕ್ರಮಗಳ ಅವಶ್ಯಕತೆಯಿರಲಿಲ್ಲ, ಏಕೆಂದರೆ ಪ್ರಜೆಗಳು ಬಹು ಬುದ್ಧಿಮತ್ತೆಯುಳ್ಳವರೂ, ನಿಶ್ಚಯ ಜ್ಞಾನವುಳ್ಳವರೂ, ದೀರ್ಘಾಯುಷಿಗಳೂ, ಆರೋಗ್ಯವಂತರೂ ಆಗಿದ್ದರು.


ಶ್ರೀರಾಮಾಯಣದ ಕಾಲದಲ್ಲಿ ಹೆಚ್ಚಿನ ಪ್ರಜೆಗಳೆಲ್ಲ ಯೋಗ ಸಿದ್ಧಿಯನ್ನು ಪಡೆದಿದ್ದರು. ಯೋಗ ಸಿದ್ಧಿಯು ಸಾತ್ವಿಕ ರಾಜಸ ಮತ್ತು ತಾಮಸ ಎಂಬ ಮೂರು ವಿಧವಾಗಿರುತ್ತದೆ. ಸಾತ್ವಿಕರು ತಮ್ಮ ಯೋಗಸಿದ್ಧಿಯನ್ನು ತತ್ವಚಿಂತನೆ, ಮೋಕ್ಷಾದಿ ಪುರುಷಾರ್ಥಗಳಿಗೆ ಹಾಗೂ ಲೋಕ ಕಲ್ಯಾಣಕ್ಕೆ ಉಪಯೋಗಿಸುತ್ತಿದ್ದರು. ರಾಜಸ ಯೋಗಿಗಳು ತಮ್ಮ ಲೌಕಿಕ ಕಾಮನೆಗಳಿಗೆ, ಸ್ವರ್ಗಾದಿ ಭೋಗಗಳಿಗೆ ಉಪಯೋಗಿಸುತ್ತಿದ್ದರು. ತಾಮಸ ಯೋಗಸಿದ್ಧಿಯುಳ್ಳವರ ಗುರಿ ಕೇವಲ ಸ್ವಾರ್ಥ ಸಾಧನೆ, ಲೋಕಕಂಟಕದ ಕಾರ್ಯ ಇತ್ಯಾದಿಗಳಿಗೆ ಉಪಯೋಗಿಸುತ್ತಿದ್ದರು. ಯೋಗಸಿದ್ಧಿಯನ್ನು ಪಡೆದ ಜನರು ಅತಿಮಾನುಷ ಕಾರ್ಯಗಳನ್ನು ಮಾಡಲು ಸಮರ್ಥರಾಗಿದ್ದರು. ಮಾನವ ವಾನರ ಪಕ್ಷಿ ಇತ್ಯಾದಿ ಯೋನಿಗಳಲ್ಲಿ ಅವತಾರವನ್ನು ತಳೆದ ದೇವತೆಗಳು ಸಹಜವಾಗಿಯೇ ಯೋಗಸಿದ್ಧರೇ ಎಂದು ಹೇಳಬಹುದು. ಹಾಗೆಯೇ ಭೂಮಿಯಲ್ಲಿ ವಿವಿಧ ಯೋನಿಯಲ್ಲಿ ಜನ್ಮ ತಳೆದ ದೈತ್ಯರು ತಾಮಸಿಕ ಯೋಗಸಿದ್ಧರು ಆಗಿರುವರು. 

ರಾಮಾಯಣ ಕಾಲದಲ್ಲಿ ನಡೆದ ಕೆಲವು ಘಟನೆಗಳ ಮೂಲಕ ಯೋಗಸಿದ್ಧಿಯ ಕಾರ್ಯಗಳ ಚಿತ್ರಣವನ್ನು ಹೊಂದಬಹುದು. ಯೋಗ ಸಿದ್ಧಿಯನ್ನು ಪಡೆಯುವ ವ್ಯಕ್ತಿಯು ಬೇರೆ ಬೇರೆ ವಿಧಾನವನ್ನು ಅನುಸರಿಸುತ್ತಾನೆ. ಅದಕ್ಕಾಗಿ ವಿಭಿನ್ನ ಗುರುವಿನಲ್ಲಿ ಅವರು ಶಿಷ್ಯತ್ವವನ್ನು ವಹಿಸಬೇಕಾಗುವುದು. 


1 ಸಂತಾನಕ್ಕಾಗಿ ದಶರಥಮಹಾರಾಜನ ಯಾಗ:

ಋಷ್ಯಶೃಂಗರು ದಶರಥಮಹಾರಾಜನಿಂದ ಪುತ್ರಕಾಮೇಷ್ಠಿ ಯಾಗವನ್ನು ಮಾಡಿಸಿದನು. ಇಂದ್ರಾದಿ ಸಕಲದೇವತೆಗಳು ಯಾಗಕುಂಡದಿಂದ ಬಂದು ತಮ್ಮ ತಮ್ಮ ಹವಿರ್ಭಾಗವನ್ನು ಸ್ವೀಕರಿಸಿದರು. ಬ್ರಹ್ಮದೇವರ ವಿಶೇಷ ಸನ್ನಿಧಾನವುಳ್ಳ ಒಬ್ಬ ದೇವತೆಯು ಶ್ರೀಹರಿಯ ಇಚ್ಛೆಯಂತೆ ಯಾಗಕುಂಡದಿಂದ ಮೇಲಕ್ಕೆ ಎದ್ದು ಬಂದನು. ದಶರಥಮಹಾರಾಜನಿಗೆ ಒಂದು ಪಾಯಸದ ಪಾತ್ರೆಯನ್ನು ಕೊಟ್ಟನು. ಆತನ ಪತ್ನಿಯರು ಆ ಪಾಯಸವನ್ನು ಸ್ವೀಕರಿಸುವಂತೆಯೂ ಅವರು ಗರ್ಭವತಿಯರಾಗುವರೆಂದೂ ಹೇಳಿ ಅದೃಶ್ಯನಾದನು. ದಶರಥನು ಆ ಪಾಯಸದಲ್ಲಿ ಅರ್ಧಭಾಗವನ್ನು ಕೌಸಲ್ಯೆಗೆ ಕೊಟ್ಟನು. ಉಳಿದ ಪಾಯಸದಲ್ಲಿ ಅರ್ಧವನ್ನು ಸುಮಿತ್ರೆಗೆ ಕೊಟ್ಟನು. ಉಳಿದ ಪಾಯಸದಲ್ಲಿ ಅರ್ಧವನ್ನು ಕೈಕೆಯಿಗೆ ಕೊಟ್ಟನು. ಉಳಿದ ಭಾಗವನ್ನು ಪುನಃ ಸುಮಿತ್ರೆಗೆ ಕೊಟ್ಟನು. ಪಾಯಸವನ್ನು ಸ್ವೀಕರಿಸಿದ ಅವರು ಗರ್ಭಿಣಿಯರಾದರು. 

ಅಪಾರ ಶಕ್ತಿಯುಳ್ಳ ಮಂತ್ರಗಳ ಪಠನೆಯನ್ನು ಯೋಗಸಿದ್ಧರು ಮಾಡಿ ಯಾಗವನ್ನು ಪೂರ್ಣಗೊಳಿಸಿದ ಕಾರಣ ದಶರಥನಿಗೆ ಸಂತಾನವುಂಟಾಯಿತು.


2 ವಿಶ್ವಾಮಿತ್ರರ ತಪಸ್ಸು:

 ಚಂದ್ರವಂಶದ ಗಾಧಿರಾಜನಲ್ಲಿ ಅವನ ಅಳಿಯನಾದ ಋಚೀಕಮುನಿಯ ಅನುಗ್ರಹದಿಂದ ವಿಶ್ವಾಮಿತ್ರನೆಂಬ ಮಗನು ಜನಿಸಿದನು. ಒಮ್ಮೆ ವಿಶ್ವಾಮಿತ್ರನು ಸೈನ್ಯಸಮೇತನಾಗಿ ದಿಗ್ವಿಜಯವನ್ನು ಮಾಡುತ್ತಾ ವಶಿಷ್ಠರ ಆಶ್ರಮಕ್ಕೆ ಬಂದನು. ವಶಿಷ್ಠರು ಕಾಮಧೇನುವಿನ ಮೂಲಕವಾಗಿ ಅವರೆಲ್ಲರನ್ನೂ ವಿಶೇಷವಾಗಿ ಸತ್ಕರಿಸಿದರು. ಆ ಕಾಮಧೇನುವನ್ನು ತನಗೆ ಕೊಡಬೇಕೆಂದು ವಿಶ್ವಾಮಿತ್ರನು ವಸಿಷ್ಠರನ್ನು ಕೇಳಿದನು. ವಸಿಷ್ಠರು ಒಪ್ಪಲಿಲ್ಲವಾದ್ದರಿಂದ ಆ ಕಾಮಧೇನುವನ್ನು ವಿಶ್ವಾಮಿತ್ರನು ಬಲವಂತದಿಂದ ಅಪಹರಿಸಿದನು. ಆ ಕಾಮಧೇನುವು ತನ್ನ ದೇಹದಿಂದ ಅಪಾರ ಸೈನ್ಯವನ್ನು ಸೃಷ್ಟಿಸಿ ವಿಶ್ವಾಮಿತ್ರನ ನೂರು ಮಕ್ಕಳನ್ನೂ ಅಪಾರ ಸೈನ್ಯವನ್ನೂ ಸಂಹರಿಸಿತು. ಸೋತು ಹೋದ ವಿಶ್ವಾಮಿತ್ರನು ರುದ್ರದೇವರನ್ನು ಕುರಿತು ಘೋರವಾದ ತಪಸ್ಸು ಮಾಡಿ ಅವರಿಂದ ಬ್ರಹ್ಮಾಸ್ತ್ರ ಮುಂತಾದ ಅಸ್ತ್ರಗಳನ್ನು ಸಂಪಾದಿಸಿದನು. ಆ ಎಲ್ಲ ಅಸ್ತ್ರಗಳನ್ನು ವಷಿಷ್ಠರ ಮೇಲೆ ಪ್ರಯೋಗಿಸಿದನು. ವಷಿಷ್ಠರು ತಮ್ಮ ತಪೋಬಲವನ್ನು ಒಂದು ಕೋಲಿನ ಮೇಲೆ ಆವಾಹನೆ ಮಾಡಿ ತಮ್ಮ ಮುಂದೆ ಇಟ್ಟರು. ಆ ಕೋಲು ವಿಶ್ವಾಮಿತ್ರನು ಪ್ರಯೋಗಿಸಿದ ಎಲ್ಲ ಅಸ್ತ್ರಗಳನ್ನು ನಾಶಮಾಡಿತು. ಬ್ರಾಹ್ಮಣರ ಶಕ್ತಿಯನ್ನು ಕಣ್ಣಾರೆ ಕಂಡ ವಿಶ್ವಾಮಿತ್ರನು ತಾನು ಬ್ರಾಹ್ಮಣನಾಗಬೇಕೆಂಬ ಬಯಕೆಯಿಂದ ಬ್ರಹ್ಮದೇವರನ್ನು ಕುರಿತು ಒಂದು ಸಹಸ್ರ ವರ್ಷ ತಪವನ್ನು ಮಾಡಿದರು. ಬ್ರಹ್ಮದೇವರು ಪ್ರತ್ಯಕ್ಷರಾಗಿ ನೀನು ರಾಜರ್ಷಿಯಾಗಿರುವಿ ಎಂದು ಹೇಳಿದರು. ಮುಂದೆ ವಿಶ್ವಾಮಿತ್ರರು ಬ್ರಹ್ಮರ್ಷಿ ಕೂಡ ಆದರು. ಇಲ್ಲಿ ವಶಿಷ್ಠಮುನಿಗಳ ಯೋಗಸಿದ್ಧಿಯನ್ನು ಕಾಣುತ್ತೇವೆ. ಹೇಗೆ ಒಂದು ನಿರ್ಜೀವವಾದ ಕೋಲಿನಿಂದ ವಿಶ್ವಾಮಿತ್ರರನ್ನು ಪರಾಭವಗೊಳಿಸಲಾಯಿತು!

ಹಾಗೆಯೇ ತ್ರಿಶಂಕುವಿಗಾಗಿ ಪ್ರತಿ ಸ್ವರ್ಗವನ್ನೇ ನಿರ್ಮಿಸಿಕೊಟ್ಟ ವಿಶ್ವಾಮಿತ್ರರ ಯೋಗಶಕ್ತಿಯ ಸಾಮರ್ಥ್ಯವನ್ನೂ ನಾವು ಅರಿತುಕೊಳ್ಳಬೇಕು. 


3 ಅಹಲ್ಯಾ ಶಾಪ ಮತ್ತು ಉದ್ಧಾರ:

ತಾಟಿಕಾ ಸುಬಾಹು ರಾಕ್ಷಸರ ನಿಗ್ರಹವಾದ ಮೇಲೆ ಶ್ರೀರಾಮಲಕ್ಷ್ಮಣರೊಡಗೂಡಿ ವಿಶ್ವಾಮಿತ್ರರು ಸಿದ್ಧಾಶ್ರಮದಿಂದ ಹೊರಟು ಜನಕಮಹಾರಾಜನು ಏರ್ಪಡಿಸಿರುವ ಸೀತಾ ಸ್ವಯಂವರಕ್ಕೆ ಹೋಗುತ್ತಿರುವಾಗ ಮಾರ್ಗದಲ್ಲಿರುವ ಗೌತಮರ ಆಶ್ರಮಕ್ಕೆ ಬಂದರು. ಬಹು ಹಿಂದ ಗೌತಮಮುನಿಗಳ ರೂಪವನ್ನು ಧಾರಣೆ ಮಾಡಿದವನಾದ ಇಂದ್ರನು ಗೌತಮರ ಪತ್ನಿಯಾದ ಅಹಲ್ಯೆಯನ್ನು ಮೋಸದಿಂದ ಕೂಡಿ ಸರಸವಾಡಿದನು. ಇದು ಇಂದ್ರನ ಕಪಟವೆಂದು ಅಹಲ್ಯಾದೇವಿಗೆ ತಿಳಿಯಲಿಲ್ಲ. ದೇವೇಂದ್ರನು ಗೌತಮರು ಬರುವುದನ್ನು ಅರಿತವನಾಗಿ ಲಗುಬಗೆಯಿಂದ ಹೊರಕ್ಕೆ ಬರುತ್ತಿರುವಾಗ ಗೌತಮರ ಕಣ್ಣಿಗೆ ಬಿದ್ದನು. ದೇವೇಂದ್ರನನ್ನು ನಪುಂಸಕನಾಗೆಂದು ಅವರು ಶಾಪವನ್ನಿತ್ತರು. ನಂತರ ಅವರು ಅಹಲ್ಯೆಯತ್ತ ನೋಡಿದರು. ನೀನು ಪಾತಿವ್ರತ್ಯದಿಂದ ಭ್ರಷ್ಟಳಾಗಿರುವಿ. ನೀನು ಅನೇಕ ವರ್ಷ ಕಲ್ಲಿನ ರೂಪವನ್ನು ಧರಿಸಿ ಬಿದ್ದವಳಾಗು. ಆಹಾರವಿಲ್ಲದೆ ಉಗ್ರವಾದ ತಪವನ್ನಾಚರಿಸಿ ನಿನ್ನ ಪಾಪವನ್ನು ಕಳೆದುಕೊಳ್ಳು. ಶ್ರೀರಾಮದೇವನು ಇಲ್ಲಿಗೆ ಬಂದಾಗ ನಿನ್ನನ್ನು ಕೃಪಾದೃಷ್ಟಿಯಿಂದ ನೋಡುವನು ಹಾಗೂ ತನ್ನ ಕಾಲಿನಿಂದ ಕಲ್ಲಾಗಿರುವ ನಿನ್ನನ್ನು ಸ್ಪರ್ಶಿಸಿದ ಕೂಡಲೇ ನೀನು ಪುನಃ ಮೊದಲಿನಂತಾಗುವಿ ಎಂದು ಹೇಳಿದರು. ಗೌತಮರ ಆಶ್ರಮದಲ್ಲಿ ಶಿಲೆಯಾಗಿರುವ ಅಹಲ್ಯೆಯನ್ನು ಶ್ರೀರಾಮನಿಗೆ ವಿಶ್ವಾಮಿತ್ರರು ತೋರಿಸಿದರು. ಹಿಂದೆ ನಡೆದ ಎಲ್ಲ ವೃತ್ತಾಂತವನ್ನು ಶ್ರೀರಾಮನಿಗೆ ವಿವರಿಸಿದರು. ಶ್ರೀರಾಮನು ಆ ಶಿಲೆಯನ್ನು ಕೃಪಾದೃಷ್ಟಿಯಿಂದ ನೋಡಿದನು ಮತ್ತು ಆ ಶಿಲೆಯನ್ನು ತನ್ನ ಪಾದದಿಂದ ಸ್ಪರ್ಶಿಸಿದನು. ಅಹಲ್ಯೆಯ ಶಾಪ ವಿಮೋಚನೆಯಾಯಿತು. ಅಹಲ್ಯಾಗೌತಮರು ಶ್ರೀರಾಮದೇವನನ್ನು ಬಹು ಹರ್ಷದಿಂದ ಪೂಜಿಸಿದರು. ಇಲ್ಲಿ ಸಾಕ್ಷಾತ್ ಪರಮಾತ್ಮನೇ ಆಗಿರುವ ಶ್ರೀರಾಮದೇವರ ವಿಶೇಷ ಕಾರ್ಯವನ್ನು ಯೋಗಸಿದ್ಧಿಯೆಂದು ಹೇಳಲಾಗದು. ಪರಮಾತ್ಮನು ಏನು ಬೇಕಾದರೂ ಯಾವ ಕಾಲದಲ್ಲಿಯಾದರೂ ಮಾಡಬಹುದು. ಆದರೆ ಸಾಮಾನ್ಯರ ದೃಷ್ಟಿಯಿಂದ ಇದು ಯೋಗಸಿದ್ಧಿಯೆನಿಸುವುದು ಅಷ್ಟೇ. 


4 ವಾತಾಪಿ ಇಲ್ವಲರ ತಾಮಸೀ ಯೋಗ ಸಿದ್ಧಿ :

ದಂಡಕಾರಣ್ಯದಲ್ಲಿ ವಾತಾಪಿ ಮತ್ತು ಇಲ್ವಲರೆಂಬ ಇಬ್ಬರು ರಾಕ್ಷಸ ಸಹೋದರರು ವಾಸಿಸುತ್ತಿದ್ದರು. ಅವರಲ್ಲಿ ಇಲ್ವಲನು ಬ್ರಾಹ್ಮಣವೇಷಧಾರಿಯಾಗಿ ತನ್ನ ತಂದೆಯ ಶ್ರಾದ್ಧವೆಂದು ಹೇಳಿ ಬ್ರಾಹ್ಮಣರನ್ನು ಭೋಜನಕ್ಕೆ ಆಹ್ವಾನ ಮಾಡುತ್ತಿದ್ದನು. ಅವನ ಸಹೋದರನಾದ ವಾತಾಪಿಯು ಕುರಿಯ ರೂಪದ ಧಾರಣೆ ಮಾಡುತ್ತಿದ್ದನು. ಆ ಕುರಿಯನ್ನು ಕತ್ತರಿಸಿ ಪಕ್ವಮಾಡಿ ಇಲ್ವಲನು ಭೋಜನವನ್ನು ಮಾಡಿ ಬ್ರಾಹ್ಮಣರಿಗೆ ಬಡಿಸುತ್ತಿದ್ದನು. ಆ ಬ್ರಾಹ್ಮಣರೆಲ್ಲಾ ಭೋಜನ ಮಾಡಿ ತೃಪ್ತರಾದಮೇಲೆ ಇಲ್ವಲನು ಓ ವಾತಾಪಿ ಬಾ ಎಂದು ಕರೆಯುತ್ತಿದ್ದನು. ಈಗಾಗಲೇ ಕುರಿಯ ಮಾಂಸದ ಆಹಾರದ ರೂಪದಿಂದ ಬ್ರಾಹ್ಮಣರ ಹೊಟ್ಟೆಯನ್ನು ಸೇರಿದ ವಾತಾಪಿಯು ಅವರ ಹೊಟ್ಟೆಯನ್ನು ಸೀಳಿಕೊಂಡು ಬೇರೆ ಬೇರೆ ಕುರಿಗಳ ರೂಪದಿಂದ ಹೊರಗೆ ಬರುತ್ತಿದ್ದನು. ಹೊಟ್ಟೆ ಸೀಳಿ ಮೃತರಾದ ಆ ಬ್ರಾಹ್ಮಣರನ್ನು ವಾತಾಪಿ ಇಲ್ವಲರಿಬ್ಬರೂ ತಿನ್ನುತ್ತಿದ್ದರು. ಹೀಗೆ ಅವರ ದಿನಚರಿಯು ಬಹಳ ವರ್ಷಗಳಿಂದ ನಡೆದು ಬರುತ್ತಿತ್ತು. ದೇವತೆಗಳ ಪ್ರಾರ್ಥನೆಯಂತೆ ಆ ರಾಕ್ಷಸರನ್ನು ನಿಗ್ರಹಿಸಲು ಅಗಸ್ತ್ಯ ಮುನಿಗಳು ಆ ಮಾರ್ಗದಲ್ಲಿಯೇ ಬಂದರು. ಅವರನ್ನು ಶ್ರಾದ್ಧಕ್ಕಾಗಿ ಇಲ್ವಲನು ಆಮಂತ್ರಿಸಿದನು. ಶ್ರಾದ್ಧಭೋಜನವನ್ನು ಅಗಸ್ತ್ಯರು ಸ್ವೀಕರಿಸಿದರು. ಅಗಸ್ತ್ಯರ ಭೋಜನ ಮುಗಿದಾದ ಮೇಲೆ ಓ ವಾತಾಪಿ ಬಾ ಎಂದು ಇಲ್ವಲನು ಕರೆದನು. ಆಗ ಅಗಸ್ತ್ಯರು ತಮ್ಮ ಕೈಯಿಂದ ಹೊಟ್ಟೆಯನ್ನು ಸವರುತ್ತಾ ವಾತಾಪಿಯು ಜೀರ್ಣನಾದನು, ಅವನು ಹಿಂದೆ ಬಂದಂತೆ ಹೊರಗೆ ಬರಲಾರನು ಎಂದರು. ವಾತಾಪಿಯು ಅಗಸ್ತ್ಯರ ಹೊಟ್ಟೆಯಲ್ಲಿ ಜೀರ್ಣವಾದುದನ್ನು ಅರಿತವನಾದ ಇಲ್ವಲನು ಸಿಟ್ಟಿನಿಂದ ಅಗಸ್ತ್ಯರನ್ನು ಸಂಹರಿಸಲು ಅಗಸ್ತ್ಯರ ಮೇಲೇರಿ ಬಂದನು.ಅವನು ಅಗಸ್ತ್ಯರ ನೇತ್ರಾಗ್ನಿಯಿಂದ ಸುಟ್ಟು ಭಸ್ಮವಾದನು. ಹೀಗೆ ವಾತಾಪಿ ಹಾಗೂ ಇಲ್ವಲರ ಅಂತ್ಯವಾಯಿತು. ಅಗಸ್ತ್ಯರು ಕುಳ್ಳರಾಗಿದ್ದರು ಎಂದು ಹೇಳುತ್ತಾರೆ. ಆದರೆ ಅವರು ತಮ್ಮ ಯೋಗಸಿದ್ಧಿಯಿಂದ ಸಮುದ್ರದ ಎಲ್ಲ ನೀರನ್ನೂ ಒಂದು ಸಂದರ್ಭದಲ್ಲಿ ಪಾನ ಮಾಡಿದ್ದರಂತೆ! ಎಂತಹ ವಿಶೇಷ ಶಕ್ತಿ ಅವರದ್ದು!. ಅವರೆಲ್ಲ ಶಾಪಾನುಗ್ರಹ ಶಕ್ತಿಯುಳ್ಳವರು!


ಯೋಗಸಿದ್ಧಿಯ ಕೆಲವು ದೃಷ್ಟಾಂತಗಳ ಸಂಗ್ರಹ ಇಲ್ಲಿವೆ.


1 ಹುಟ್ಟಿದ ಕೂಡಲೇ ಹನುಮಂತದೇವರು ಹಣ್ಣೆಂದುಕೊಂಡು ಉದಿಸುವ ಸೂರ್ಯನನ್ನು ತಿನ್ನಲು ಆಕಾಶಕ್ಕೆ ನೆಗೆದರು. ಆಕಾಶಕ್ಕೆ ನೆಗೆದ ಹನುಮಂತ ದೇವರು ಮಧ್ಯೆ ಬಂದ ರಾಹುವನ್ನು ತಿನ್ನಲು ಹೋದರು. 

2 ಜಾಂಬುವಂತನ ಒಂದೇ ನೆಗೆತದ ದೂರವು 96 ಯೋಜನದಿಂದ 90 ಯೋಜನಕ್ಕೆ ಕಡಿಮೆಯಾದುದರ ಕಾರಣವು ಏನಿತ್ತು ಗೊತ್ತೆ?- ತ್ರಿವಿಕ್ರಮರೂಪಿ ಪರಮಾತ್ಮನ ಸ್ಮರಣೆಯನ್ನು ಮಾಡುತ್ತಾ ಜಾಂಬುವಂತನು ಬ್ರಹ್ಮಾಂಡದಲ್ಲಿ ಪ್ರದಕ್ಷಿಣೆಯನ್ನು ಮಾಡುತ್ತಿರುವಾಗ ಒಂದು ದಿನ ಜಾಂಬುವಂತನ ಮೊಣಕಾಲಿಗೆ ಮೇರುಪರ್ವತವು ತಗುಲಿದ್ದುದರಿಂದ ಆತನ ನೆಗೆತದ ದೂರವು ಕಡಿಮೆಯಾಯಿತು.


3 ಸೀತಾನ್ವೇಷಣೆಯಲ್ಲಿ ಸಮುದ್ರವನ್ನು ದಾಟುವಾಗ ಹನುಮಂತ ದೇವರು ತಮಗೆ ಅಡ್ಡ ಬಂದ ದೇವ ಮಾತೆ ಸುರಸೆಯ ಬಾಯಲ್ಲಿ ತಕ್ಷಣವೇ ಸೂಕ್ಷ್ಮ ರೂಪವನ್ನು ಧರಿಸಿ ಒಳಗೆ ಹೋಗಿ ಕ್ಷಣಾರ್ಧದಲ್ಲಿಯೇ ಹೊರಗೆ ಬಂದರು. ಆದರೆ ಸಿಂಹಿಕಾ ಎಂಬ ರಾಕ್ಷಸಿಯ ಬಾಯಿಯನ್ನು ಸೂಕ್ಷ್ಮರೂಪದಿಂದ ಪ್ರವೇಶಿಸಿದ ಹನುಮಂತದೇವರು ಆಕೆಯ ಹೃದಯವನ್ನು ಸೀಳಿ ಹೊರಗೆ ಬಂದರು. ಇದು ಶ್ರೀಹನುಮಂತದೇವರ ಸಾತ್ವಿಕ ಯೋಗಸಿದ್ಧಿಯು. ಹನುಮಂತದೇವರು ಋಜುಯೋಗಿಗಳೇ ಆದ ಪ್ರಯುಕ್ತ ಅವರು ನಿರಾಯಾಸದಿಂದ ತಮ್ಮ ಯೋಗಸಿದ್ಧಿಯನ್ನು ತೋರಿಸಬಲ್ಲರು. 


4 ಲಂಕೆಯನ್ನು ಪ್ರವೇಶಿಸಲು ನಿಶ್ಚಯಿಸಿದ ಹನುಮಂತದೇವರು ತಮ್ಮ ದೇಹವನ್ನು ಬೆಕ್ಕಿನ ಗಾತ್ರದ್ದಾಗಿ ಮಾಡಿಕೊಂಡರು.


5 ಯುದ್ಧಭೂಮಿಯಲ್ಲಿ ಯುದ್ಧ ಪ್ರಾರಂಭವಾಗುವ ಸಮಯದಲ್ಲಿ ಶುಕನೆಂಬ ರಾಕ್ಷಸನು ರಾವಣನ ಮಾತಿನಂತೆ ಗಿಳಿಯ ರೂಪವನ್ನು ಧರಿಸಿ ಸುಗ್ರೀವನಲ್ಲಿಗೆ ಬಂದು ಆಕಾಶದಲ್ಲಿಂದ ಆತನಿಗೆ ಬೆದರಿಕೆಯನ್ನು ಹಾಕಿ ಶ್ರೀರಾಮದೇವರಿಂದ ಬೇರ್ಪಡಬೇಕೆಂದು ಹೇಳಿದನು. ಇದರಿಂದ ಸಿಟ್ಟಿಗೆದ್ದ ಅಂಗದನೇ ಮುಂತಾದವರು ಆಕಾಶಕ್ಕೆ ನೆಗೆದು ಶುಕನೆಂಬ ಆ ದೈತ್ಯನನ್ನು ಎಳೆತಂದು ಸಿಕ್ಕಾಪಟ್ಟೆ ಏಟುಗಳನ್ನು ಕೊಟ್ಟರು. ಇಲ್ಲಿ ದೈತ್ಯನು ಪಕ್ಷಿಯ ರೂಪಧಾರಣೆ ಮಾಡಿದ್ದ. ವಾನರರೂ ಕೂಡ ಆಕಾಶಕ್ಕೆ ವೇಗವಾಗಿ ಜಿಗಿದು ಆ ರಾಕ್ಷಸನನ್ನು ಸೆರೆಹಿಡಿಯಲು ಸಮರ್ಥರಾದರು. ಇದೆಲ್ಲ ವಿವಿಧ ಯೋಗಸಿದ್ಧಿಯ ಶಕ್ತಿಯು.


6 ಇದೇ ರೀತಿಯಲ್ಲಿ ಲಂಕಾಪಟ್ಟಣದ ತಕ್ಷಣದ ಸಮಾಚಾರವನ್ನು ತಿಳಿದುಕೊಂಡು ಬರುವುದಕ್ಕಾಗಿ ವಿಭೀಷಣನು ಕಳುಹಿಸಿದ ನಾಲ್ಕು ಮಂತ್ರಿಗಳು ಪಕ್ಷಿಗಳ ರೂಪವನ್ನು ಧರಿಸಿ ಲಂಕೆಗೆ ಹೋದರು. 


7 ಇಂದ್ರಜಿತುವು ಅಭಿಚಾರಹೋಮವನ್ನು ಅಥರ್ವ ವೇದೋಕ್ತಮಂತ್ರಗಂದ ಮಾಡಿ ಅಪಾರ ಯೋಗಶಕ್ತಿಯನ್ನು ಪಡೆಯುತ್ತಿದ್ದನು. ನಾಲ್ಕು ಬಾರೆ ಅಭಿಚಾರ ಹೋಮವನ್ನು ಮಾಡಿದರೆ ಇಂದ್ರಜಿತ್ತುವನ್ನು ಯಾರೂ ಕೊಲ್ಲಲು ಸಾಧ್ಯವಿಲ್ಲವೆಂದು ಬ್ರಹ್ಮದೇವರ ವರವಿತ್ತು. ನಾಲ್ಕನೆಯ ಬಾರಿಯ ಅಭಿಚಾರ ಹೋಮವನ್ನು ಮಾಡಿ ಮುಗಿಸುವದರಲ್ಲಿಯೇ ಇಂದ್ರಜಿತ್ತುವನ್ನು ಸಂಹರಿಸಬೇಕು ಎಂದು ವಿಭೀಷಣನು ಶ್ರೀರಾಮನಲ್ಲಿ ಬಿನ್ನೈಸಿಕೊಂಡನು. ನಾಲ್ಕನೆಯ ಬಾರಿಯ ಅಭಿಚಾರ ಹೋಮವನ್ನು ಮಾಡಲು ಇಂದ್ರಜಿತ್ತುವು ನಿಕುಂಭಿಲಾ ಗುಹೆಯತ್ತ ಬಂದನು. ಆದರೆ ಆ ಗುಹೆಯನ್ನು ಲಕ್ಷ್ಮಣನು ಮುತ್ತಿಗೆಯನ್ನು ಹಾಕಿ ಇಂದ್ರಜಿತ್ತುವಿನ ಮೇಲೆ ಯುದ್ಧಕ್ಕೆ ಬಂದಿದುದರಿಂದ ನಾಲ್ಕನೆಯ ಬಾರಿಯ ಅಭಿಚಾರ ಹೋಮವನ್ನು ಇಂದ್ರಜಿತ್ತುವು ಮಾಡಲಾಗಲಿಲ್ಲ. ಅಂತಿಮವಾಗಿ ಇಂದ್ರಜಿತ್ತುವು ಸಂಹರಿಸಲ್ಪಟ್ಟನು. ಹೀಗೆ ತಾಮಸ ಯೋಗವು ಪ್ರಯೋಗ ಮಾಡಿದ ವ್ಯಕ್ತಿಯ ಸರ್ವನಾಶಕ್ಕೆ ಕಾರಣವಾಗುತ್ತದೆ. 


8 ಸೀತೆಯನ್ನು ಹುಡುಕಲು ವಾನರ ವೀರರು ನಿರ್ಧರಿಸಿದಮೇಲೆ ಅವರೆಲ್ಲ ಕಿಷ್ಕಿಂಧೆಯಿಂದ ನೇರವಾಗಿ ಜಂಬೂದ್ವೀಪದ ಮಧ್ಯಸ್ಥಾನವಾದ ಮೇರುಪರ್ವತಕ್ಕೆ ಬಂದರು. ಮೇರುಪರ್ವತವನ್ನು ಮಧ್ಯಸ್ಥಾನವನ್ನಾಗಿ ಇಟ್ಟುಕೊಂಡು ನಾಲ್ಕು ದಿಕ್ಕಿನಲ್ಲಿ ನಾಲ್ಕು ತಂಡವಾಗಿ ಕಪಿವೀರರು ಬೇರೆಬೇರೆ ದಿಕ್ಕಿಗೆ ಸೀತಾಮಾತೆಯನ್ನು ಹುಡುಕಲು ಹೊರಟರು. ಏಕೆಂದರೆ ಸೀತೆಯನ್ನು ರಾವಣನು ಜಂಬೂದ್ವೀಪದ ಯಾವುದೇ ಸ್ಥಳದಲ್ಲಿ ಇಟ್ಟಿರಲು ಸಾಕು ಎಂಬ ಶಂಕೆಯು ಸುಗ್ರೀವಾದಿ ವೀರರಿಗೆ ಇತ್ತು. ಸೀತೆಗಾಗಿ ಯಾವೆಲ್ಲ ಸ್ಥಳಗಳನ್ನು ವಾನರ ವೀರರು ಹುಡುಕಿದರು ಗೊತ್ತೇ?


ಪೂರ್ವದಿಕ್ಕಿನಲ್ಲಿ ಸುಪಾರ್ಶ್ವ, ಮಾಲ್ಯವಂತ, ಪಾರಿಯಾತ್ರ ಪವಮಾನಾದಿ ಎತ್ತರದ ಪರ್ವತ ಶಿಖರಗಳೂ, ಇಳಾವೃತವರ್ಷ, ಕೇತುಮಾಲಾ ವರ್ಷಗಳನ್ನೂ ಹುಡುಕಿ ಪಶ್ಚಿಮದ ಲವಣಸಾಗರದ ದಂಡೆಗೆ ಬಂದು ಸೀತೆ ಕಾಣದೆ ಹಿಂದಿರುಗಿದರು. 

ಉತ್ತರದಿಕ್ಕಿನಲ್ಲಿ ನೀಲ, ಶ್ವೇತ, ಶೃಂಗವಾನ್ ಪರ್ವತ ದಾಟಿದರು. ಹಾಗೆಯೇ ಇಳಾವೃತ, ರಮ್ಯಕ, ಹಿರಣ್ಮಯ ಹಾಗೂ ಕುರು ವರ್ಷಗಳನ್ನು ಹುಡುಕಿ ಉತ್ತರದ ಲವಣ ಸಾಗರದ ದಂಡೆಯನ್ನು ತಲುಪಿದರು! 

ಪಶ್ಚಿಮ ದಿಕ್ಕಿನಲ್ಲಿ ಇಳಾವೃತ ಮತ್ತು ಭದ್ರಾಶ್ವ ವರ್ಷಗಳನ್ನೂ ಅವುಗಳಲ್ಲಿರುವ ಗಂಧಮಾದನ, ದೇವಕೂಟ ಮತ್ತು ಜಠರ ಪರ್ವತಗಳನ್ನು ಹುಡುಕಿ ಪಶ್ಚಿಮದ ಲವಣಸಾಗರದ ದಂಡೆಗೆ ಬಂದರು. 

ದಕ್ಷಿಣದಿಕ್ಕಿಗೆ ಹೊರಟಿರುವ ಹನುಮಂತ, ಜಾಂಬವಂತ, ಅಂಗದ ಮೊದಲಾದ ವೀರರು ಇಳಾವೃತ, ಹರಿವರ್ಷ, ಕಿಂಪುರುಷ ಮತ್ತು ಭರತವರ್ಷಗಳನ್ನೂ ಹಾಗೂ ಅಲ್ಲಿರುವ ನಿಷಧ, ಹೇಮಕೂಟ, ಹಿಮಾಲಯಾದಿ ಪರ್ವತಗಳನ್ನೂ ಹುಡುಕಿ ಕೊನೆಗೆ ದಕ್ಷಿಣದ ಲವಣ ಸಾಗರ ತಲುಪಿದರು. 


ಯುಗ ನಿಯಮದ ಪ್ರಕಾರ ಕಲಿಯುಗದಲ್ಲಿ ಅವೆಲ್ಲ ವರ್ಷಗಳೂ, ಪರ್ವತಗಳೂ ಅದೃಶ್ಯವಾಗಿವೆ ಎಂದು ಹೇಳುವರು. ವಿಶೇಷ ಯೋಗಶಕ್ತಿಯುಳ್ಳವರು ಅವುಗಳನ್ನು ಈಗಲೂ ಈ ಕಲಿಯುಗದಲ್ಲೂ ಕಾಣಲು ಸಮರ್ಥರಂತೆ!. ಯೋಗಶಕ್ತಿಯು ಸಾಮಾನ್ಯವಾದ ಶಕ್ತಿಯಲ್ಲ. ಅದನ್ನು ಸಮಾಜದ ಒಳಿತಿಗಾಗಿ ಮತ್ತು ಆತ್ಮೋದ್ಧಾರಕ್ಕಾಗಿ ಉಪಯೋಗಿಸಿದರೆ ಸಾತ್ವಿಕ ಯೋಗಶಕ್ತಿಯಾಗುವುದು. 


ಹೀಗೆ ರಾಮಾಯಣ ಕಾಲದಲ್ಲಿ ನಾವು ಯೋಗಶಕ್ತಿಯ ಪ್ರದರ್ಶನದ ಅನೇಕ ನಿದರ್ಶನಗಳನ್ನು ಕಾಣುತ್ತೇವೆ. 




-ಡಾ. ಪರಶುರಾಮ ಬೆಟಗೇರಿ

ನಿರ್ದೇಶಕರು ಭಾರತೀಯ ಹರಿದಾಸ ಸಾಹಿತ್ಯ ವಿದ್ಯಾಲಯ ಬೆಂಗಳೂರು.



ಲೇಖಕರ ಸಂಕ್ಷಿಪ್ತ ಪರಿಚಯ:


ಡಾ. ಪರಶುರಾಮ ಬೆಟಗೇರಿ 1997 ರಲ್ಲಿ ಭಾರತೀಯ ಹರಿದಾಸ ಸಾಹಿತ್ಯ ವಿದ್ಯಾಲಯವನ್ನು ಸ್ಥಾಪಿಸಿದರು. ಪ್ರಪ್ರಥಮದಲ್ಲಿ ಹರಿದಾಸ ಸಾಹಿತ್ಯದ ಎಲ್ಲ ವಿಷಯಗಳಿಗೂ ಮಾರ್ಗದರ್ಶಿ ಹೊತ್ತಿಗೆಗಳನ್ನು ರಚಿಸಿದರು. ಹರಿದಾಸ ಸಾಹಿತ್ಯದಲ್ಲಿ ಪ್ರಪ್ರಥಮವಾಗಿ ಅಧ್ಯಯನ ಕ್ರಮ, ಪಠ್ಯಕ್ರಮ ಹಾಗೂ ಪರೀಕ್ಷಾ ಕ್ರಮಗಳನ್ನು 25 ವರ್ಷಗಳ ಹಿಂದೆಯೇ ಜಾರಿಗೆ ತಂದರು. ದಾಸ ಸಾಹಿತ್ಯದಲ್ಲಿ ಅನೇಕ ಡಿಪ್ಲೊಮಾ, ಪದವಿ ಮತ್ತು ಸ್ನಾತಕ ತರಗತಿಗಳನ್ನು ನಡೆಸಿದರು. ಹರಿದಾಸ ಸಾಹಿತ್ಯದ ಸಂಶೋಧನಾ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾದರು. ಎಲ್ಲ ಹರಿದಾಸ ಸಾಹಿತ್ಯದ ಕೃತಿಗಳಿಗೆ, ರಾಮಾಯಣ, ಮಹಾಭಾರತ, ಗೀತಾ, ಭಾಗವತ ಇತ್ಯಾದಿ ಗ್ರಂಥಗಳಿಗೆ ಸುದೀರ್ಘವಾದ ರಸಪ್ರಶ್ನೋತ್ತರ ಹೊತ್ತಿಗೆಗಳನ್ನು ಸಂಪಾದಿಸಿದರು. ದಾಸ ಸಾಹಿತ್ಯ ವಿದ್ಯಾಲಯ ಎಂಬ ಹೆಸರಿನ ಯು ಟ್ಯುಬ್ ಚನೆಲ್ ಕೂಡ ನಡೆಸುತ್ತಲಿದ್ದಾರೆ. ಅವರ ಕಾರ್ಯವೈಖರಿಯನ್ನು ನೋಡಿ ಈಗ ಕೆಲವು ಸಂಸ್ಥೆಗಳು ಕೂಡ ದಾಸ ಸಾಹಿತ್ಯದ ವಿದ್ಯಾಲಯಗಳನ್ನು ಸ್ಥಾಪಿಸಿ ದಾಸ ಸಾಹಿತ್ಯದ ಪ್ರಚಾರದಲ್ಲಿ ತೊಡಗಿರುವುದು ಸಂತಸದ ವಿಷಯ. ಶ್ರೀಯುತ ಪರಶುರಾಮ ಅವರು ಬೆಂಗಳೂರು ಟೆಲಿಕಾಂ ಬಿ ಎಸ್ ಎನ್ ಎಲ್ ದಲ್ಲಿ 'ಡೆಪ್ಯುಟಿ ಜನರಲ್ ಮ್ಯಾನೇಜರ್' ಆಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುತ್ತಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top