ಕಾಗೇರಿ ವಿಶ್ವೇಶ್ವರ ಹೆಗಡೆ- ನೇತಾರ ಮಾತ್ರವಲ್ಲ; ಮುತ್ಸದ್ದಿಯೂ

Upayuktha
0


ಬಾರಿಯ ಲೋಕಸಭಾ ಚುನಾವಣೆಯಲ್ಲಿ ಉತ್ತರಕನ್ನಡ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ಶ್ರೀ ಕಾಗೇರಿ ವಿಶ್ವೇಶ್ವರ ಹೆಗಡೆಯವರ ಬಗ್ಗೆ ಎರಡು ಮೂರು ವಿಚಾರ ಹಂಚಿಕೊಳ್ಳಬೇಕು ಅನಿಸುತ್ತಿದೆ.‌


ಹಾಗೆ ನೋಡಿದರೆ ಕಾಗೇರಿಯವರ ರಾಜಕೀಯ ಜೀವನದಲ್ಲಿ ಇದೊಂದು ಹೊಸ ತಿರುವು.‌ ಈಗಾಗಲೇ ಬಿಜೆಪಿ ನೇತೃತ್ವದ ಎನ್‌ಡಿಎ 400ಕ್ಕೂ ಅಧಿಕ ಸ್ಥಾನಗಳನ್ನು ಗೆದ್ದು ಮೂರನೇ ಬಾರಿಗೆ ಅಧಿಕಾರದ ಗದ್ದುಗೆ ಏರುವ ನಿಟ್ಡಿನಲ್ಲಿ ಗಂಭೀರ ಲೆಕ್ಕಾಚಾರ ಹಾಕಿಕೊಂಡಿದೆ; ಮತ್ತು ಆ ನಿಟ್ಟಿನಲ್ಲಿ ದೇಶಾದ್ಯಂತ ಅನೇಕ ಕ್ಷೇತ್ರಗಳಲ್ಲಿ ಹೊಸಮುಖಗಳನ್ನು ಜನರ ಮುಂದಿಟ್ಟು ರಣಕಣವನ್ನು ಎದುರಿಸಲು ಹೊರಟಿದೆ. ಹಾಗೆ ಆಯ್ಕೆಯಾದ ಹೊಸ ಮುಖವೇ ಕಾಗೇರಿಯವರು.


ರಾಜ್ಯ ರಾಜಕಾರಣದಲ್ಲಿ ಅನೇಕ ವರ್ಷಗಳಿಂದ ಶಾಸಕ‌ ಮಂತ್ರಿ ವಿಧಾನಸಭಾಧ್ಯಕ್ಷರಾಗಿ ಸುದೀರ್ಘ ಅನುಭವ ವರ್ಚಸ್ಸುಗಳನ್ನು ಸಂಪಾದಿಸಿಕೊಂಡವರು ಕಾಗೇರಿ ಹೆಗಡೆಯವರು.


ರಾಜಕೀಯದಲ್ಲಿರುವ ನೇತಾರರು ನಾಯಕರುಗಳೆಲ್ಲ ಮುತ್ಸದ್ದಿಗಳಾಗಿರೋದಿಲ್ಲ. ಆದರೆ ಓರ್ವ ಮುತ್ಸದ್ದಿಯೂ ಆಗಿರುವ ಅಪರೂಪದ ನೇತಾರ ಶ್ರೀ ವಿಶ್ವೇಶ್ವರ ಹೆಗಡೆ ಅನ್ನೋದು ಅತಿಶಯದ ಮಾತಲ್ಲ.


ಮನೆಯಲ್ಲಿ ದೊರೆತ ಮೌಲಿಕ  ಸಂಸ್ಕಾರ, ಉತ್ತಮ ವಿದ್ಯೆ (ಕಾನೂನು ಪದವಿ) ಸಂಘದ ಚಾವಡಿಯಲ್ಲಿ ದೊರೆತ ರಾಷ್ಟ್ರ ನಿಷ್ಠೆಯ ಪಾಠ, ಎಬಿವಿಪಿಯ ಮೂಲಕ ಸಂಪಾದಿಸಿದ ಸಂಘಟನಾ ಕೌಶಲ್ಯ ಇವೆಲ್ಲವೂ ಮೇಳೈಸಿದ ಪರಿಣಾಮ ಕಾಗೇರಿ ಎಂಬ ನೇತಾರನನ್ನು ಮುತ್ಸದ್ದಿಯಾಗಿ ರೂಪಿಸಿಸಬೇಕು.


ಅಂಕೋಲ- ಶಿರಸಿ ವಿಧಾನ‌ಸಭಾ ಕ್ಷೇತ್ರಗಳಲ್ಲಿ  ತಲಾ ಮೂರು ಗೆದ್ದು ಒಟ್ಟು ಆರು ಬಾರಿ ಶಾಸಕರಾಗಿ ಆಯ್ಕೆಯಾದ ಹೆಗಡೆಯವರು ರಾಜ್ಯದ ಶಿಕ್ಷಣ ಮಂತ್ರಿ, ವಿಧಾನಸಭಾಧ್ಯಕ್ಷರಾಗಿ ಉತ್ತಮ ಕಾರ್ಯನಿರ್ವಹಿಸಿ ಗಮನಸೆಳೆದವರು.


ಸನಾತನ ಧರ್ಮ- ಸಂವಿಧಾನ ಧರ್ಮದ ಬಗ್ಗೆ ಸಮಾನ ಶ್ರದ್ಧೆ ಸಮಾನ ಗೌರವ ಇರುವ ಹೆಗಡೆಯವರು ಉತ್ತಮ ವಾಗ್ಮಿಯೂ ಹೌದು. ಸನಾತನ ಧರ್ಮ, ರಾಷ್ಟ್ರೀಯ ವಿಚಾರಧಾರೆಗಳು, ದೇಶದ ಘನ ಇತಿಹಾಸದ ಬಗ್ಗೆ ವಸ್ತುನಿಷ್ಠವಾದ ಮೌಲಿಕ ಚಿಂತನೆ ಇರುವ ವಿಶ್ವೇಶ್ವರ ಹೆಗಡೆಯವರು ಅಷ್ಟೇ ಪ್ರಗಲ್ಭವಾಗಿ ವಿವಿಧ ವೇದಿಕೆಗಳಲ್ಲಿ ನಿರಂತರವಾಗಿ ಮಂಡಿಸುವ ಪರಿ ಗಮನೀಯ.


ಅವರ ಧರ್ಮನಿಷ್ಠೆ ಸರಳತೆಗಳ ಬಗ್ಗೆ ಒಂದೆರಡು ಮೂರು ಘಟನೆಗಳನ್ನು ನಾನು ಹೇಳಬೇಕು ಅನ್ಸುತ್ತೆ.


ಅವರು ಶಿಕ್ಷಣ ಮಂತ್ರಿಯಾಗಿದ್ದಾಗ ಮಕ್ಕಳಿಗೆ ಸನಾತನ ಧರ್ಮ- ರಾಷ್ಟ್ರೀಯ ವಿಚಾರಧಾರೆಗಳ ಶಿಕ್ಷಣ ಸಿಗಬೇಕು ಅನ್ನುವ ಗಂಭೀರ ಪ್ರಯತ್ನಗಳನ್ನು ನಡೆಸಿದರು. ಶ್ರೀ ಸ್ವರ್ಣವಲ್ಲೀ ಮಠದ ಸ್ವಾಮೀಜಿಯವರು ರಾಜ್ಯಾದ್ಯಂತ ಶಾಲೆಗಳಲ್ಲಿ ಭಗವದ್ಗೀತಾಭಿಯಾನ ನಡೆಸಿದಾಗ ಅದನ್ನು ಯಶಸ್ವಿಯಾಗಿ ಜಾರಿಗೊಳಿಸಲು ಎಲ್ಲ ಸಹಕಾರ ನೀಡಿದರು.


2020 ರಲ್ಲಿ ಕಾಗೇರಿಯವರು ರಾಜ್ಯ ವಿಧಾನ ಸಭಾಧ್ಯಕ್ಷ. ಉಡುಪಿಯಲ್ಲಿ ಶ್ರೀ ಪಲಿಮಾರು ಮಠಾಧೀಶರ ಪರ್ಯಾಯ. ಶ್ರೀ ವಿದ್ಯಾಧೀಶತೀರ್ಥ ಶ್ರೀಗಳು ದೇಶದಲ್ಲೇ ಸುಮಾರು ನೂರು ವರ್ಷಗಳ ಬಳಿಕ ಶ್ರೀ ಮಹಾಭಾರತ ಗ್ರಂಥದ ಪರಿಷ್ಕೃತ ಆವೃತ್ತಿಯ ಸಮಗ್ರ ಸಂಪುಟವನ್ನು ಪ್ರಕಟಿಸಿದರು. ಆ ಹೊತ್ತಲ್ಲಿ ಶ್ರೀ ಪೇಜಾವರ ಮಠಾಧೀಶರೂ ಆದ ಪರಮ ತಪಸ್ವಿ ಕೀರ್ತಿಶೇಷ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಆಸ್ಪತ್ರೆಯಲ್ಲಿ ರುಗ್ಣಶಯ್ಯೆಯಲ್ಲಿದ್ದರು. ಅವರ ಆರೋಗ್ಯ ವಿಚಾರಿಸಲು ಧಾವಿಸಿದ ಕಾಗೇರಿಯವರು ಬಂದಿದ್ದರು. ಮಣಿಪಾಲ ಆಸ್ಪತ್ರೆಯಲ್ಲಿ ಆ ಕೆಲಸ ಮುಗಿಸಿ ಇನ್ನೇನು ಹೊರಡಬೇಕೆಂದು  ಕಾರಲ್ಲಿ ಕುಳಿತಾಗ ಅವರೆಡೆ ಧಾವಿಸಿ, ಸ್ವಾಮೀ, ಉಡುಪಿಯಿಂದ ನೂತನವಾಗಿ ಪ್ರಕಟವಾಗಿರುವ ಮಹಾಭಾರತ ಗ್ರಂಥದ ಸಮಗ್ರ ಸಂಪುಟವನ್ನು ರಾಜ್ಯ ವಿಧಾನ ಸಭೆಯ ಗ್ರಂಥಾಲಯದಲ್ಲಿ ಇಡುವಂತಾಗಬೇಕು. ಮುಂದೆ ಯಾರಿಗಾದರೂ ಶಾಸಕರು ಮಂತ್ರಿಗಳಿಗೆ ಉಪಯೋಗಕ್ಕೆ ಬಂದ್ರೆ ಮೌಲಿಕ ರಾಜಕಾರಣಕ್ಕೆ ಮಾರ್ಗದರ್ಶಿಯಾದೀತು. ತಾವು ಈ ಬಗ್ಗೆ ಪ್ರಯತ್ನಿಸಬಹುದೇ ಅಂತ ಆಸ್ಪತ್ರೆಯ ಹೊರಗೇ ವಿನಂತಿಸಿದ್ದೆ. ಇದಕ್ಕಿಂತ ಒಳ್ಳೆ ಕೆಲಸ ಯಾವುದಿದೆ.‌ ಖಂಡಿತ ಕೊಡಿ ತಗೊಂಡು ಹೋಗ್ತೇನೆ ಅಂದ್ರು. ಮಣಿಪಾಲದಿಂದ ಶ್ರೀ ಕೃಷ್ಣಮಠಕ್ಕೆ ಭೇಟಿಕೊಟ್ಟು ಶ್ರೀ ಪಲಿಮಾರು ಶ್ರೀಗಳಿಂದ ಮಹಾಭಾರತ ಸಮಗ್ರ ಸಂಪುಟದ ಪ್ರತಿಯನ್ನು (ಸುಮಾರು 20 ಕ್ಕೂ ಅಧಿಕ ಗ್ರಂಥಗಳು) ಮನಸಾ ಸ್ವೀಕರಿಸಿ ತನ್ನ ಕಾರಿನಲ್ಲೇ ಬೆಂಗಳೂರಿಗೆ ಕೊಂಡೊಯ್ದು ವಿಧಾನ ಸಭೆ ಗ್ರಂಥಾಲಯದಲ್ಲಿ ಇರಿಸಿದರು!!


ಇದಾದ ಬಳಿಕ ಮತ್ತೊಮ್ಮೆ ತಮ್ಮ ಸ್ಪೀಕರ್ ಅಧಿಕಾರಾವಧಿಯಲ್ಲೇ ಶ್ರೀ ಕೃಷ್ಣಮಠಕ್ಕೆ ಬಂದಿದ್ದಾಗ ಪೀಠದಲ್ಲಿದ್ದವರು ಶ್ರೀ ಕೃಷ್ಣಾಪುರ ಮಠದ ಶ್ರೀವಿದ್ಯಾಸಾಗರತೀರ್ಥರು.‌ ಮಧ್ಯಾಹ್ನದ ಹೊತ್ತು.‌ ಶ್ರೀಗಳವರನ್ನು ನೂರಾರು ಭಕ್ತರು ಭೇಟಿ ಮಾಡಿ ಪ್ರಸಾದ ಆಶೀರ್ವಾದ ಪಡೆಯುವ ಹೊತ್ತು.‌ ಆದ್ರೆ ಭೇಟಿಗೆ ಬಂದ ಕಾಗೇರಿಯವರು ಅವರ ಅಪಾರ ವಿದ್ವತ್ತಿನ ಬಗ್ಗೆ ಕೇಳಿ ತಿಳಿದುಕೊಂಡವರೇ ಸ್ವಾಮೀಜಿ ಹತ್ರ ಓರ್ವ ಜಿಜ್ಞಾಸುವಿನ ಜ್ಞಾನದ ತೃಶೆಯ ರೀತಿಯಲ್ಲೇ ವೇದ ಉಪನಿಷತ್ತು ಪುರಾಣಗಳ ಹಿನ್ನೆಲೆಯಲ್ಲಿ ಕೆಲವೊಂದು ಪ್ರಶ್ನೆಗಳನ್ನು ಕೇಳಿದರು.‌ ಅವರೊಳಗಿನ ವೈಚಾರಿಕ ಹಂಬಲವನ್ನರಿತ ಶ್ರೀಗಳು ತುಂಬ ಬ್ಯುಸಿ ಇದ್ದಾಗ್ಯೂ ನಗುತ್ತಲೇ ಸಂಕ್ಷಿಪ್ತವಾಗಿ ಎಲ್ಲ ಪ್ರಶ್ನೆಗಳಿಗೂ ಉತ್ತರಿಸಿದರು. ಇದರಿಂದ ಬಹಳ ಸಂತೋಷಗೊಂಡ ಕಾಗೇರಿಯವರು ಸುಮಾರು 20 ನಿಮಿಷ ದೇವರ ಮುಂಭಾಗ ಎಲ್ಲ ಜಂಜಾಟ ಮರೆತು ಧ್ಯಾನಮಗ್ನರಾಗಿ ಬಿಟ್ಟರು. ತಮ್ಮ ಈ ಬಾರಿಯ ಭೇಟಿ ಅತ್ಯಂತ ಅಪೂರ್ವವೆಂದೇ ಬಣ್ಣಿಸಿದರು. 


ಇನ್ನೊಂದು ಘಟನೆ ಕಳೆದ ವರ್ಷದ್ದು. ಕಳೆದ ಆಗಸ್ಟ್ ತಿಂಗಳಲ್ಲಿ ಮೈಸೂರಲ್ಲಿ ಚಾತಿರ್ಮಾಸ್ಯ ವ್ರತದೀಕ್ಷೆಯಲ್ಲಿದ್ದ ಶ್ರೀ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಅಯೋಧ್ಯೆಯಲ್ಲಿ ರಾಮಮಂದಿರ ಲೋಕಾರ್ಪಣೆಯ ನಿರೀಕ್ಷೆಯ ಕ್ಷಣಗಳು ರಾಮನ ಸ್ಮರಣೆಯಲ್ಲಿ ಸಾರ್ಥಕವಾಗಬೇಕೆಂಬ ಸದಿಚ್ಛೆಯಿಂದ ರಾಜ್ಯಾದ್ಯಂತ ದಶಕೋಟಿ ರಾಮಜಪ ಯಜ್ಞ ಕ್ಕೆ ಕರೆಕೊಟ್ಟರು. ರಾಜ್ಯದ ಸುಮಾರು 1100 ಕ್ಕೂ ಅಧಿಕ ಖಾಸಗಿ ಶಾಲೆಗಳ ಏಳು ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳೂ ಸೇರಿದಂತೆ ನೂರಾರು ಸಂಘ ಸಂಸ್ಥೆಗಳು ಇದರಲ್ಲಿ ಭಾಗಿಯಾದರು. ಇದನ್ನು ನಿತ್ಯ ಗಮನಿಸುತ್ತಿದ್ದ ಕಾಗೇರಿಯವರು ಶಿರಸಿಯಲ್ಲಿ ಈ ಉದ್ದೇಶಕ್ಕಾಗಿಯೇ ಒಂದು ದೊಡ್ಡ ಕಾರ್ಯಕ್ರಮ‌ ಸಂಯೋಜಿಸಿ ಬಿಟ್ಟರು. ಒಂದು ಸಾಯಂಕಾಲ ಒಂದು ಸಭಾಂಗಣದಲ್ಲಿ ನೂರಾರು ಮಾತೆಯರ ಸಂಗಮ ಆಯ್ತು.‌ ಎರಡು ಘಂಟೆಗಳ ಕಾಲ ರಾಮ ತಾರಕ ಮಂತ್ರವನ್ನು ಎಲ್ಲರೂ ಸಾಮೂಹಿಕವಾಗಿ ಜಪಿಸಿ ಆ ಸ್ಥಳದಲ್ಲಿ ಒಂದು ದೈವಿಕ ವಾತಾವರಣವೇ ನಿರ್ಮಾಣವಾಗಿತ್ತು. ಈ ಒಟ್ಟು ಕಾರ್ಯಕ್ರಮದ ರೂವಾರಿ ಕಾಗೇರಿಯವರು ರಾತ್ರಿ ಸ್ವಾಮೀಜಿಯವರಿಗೆ ಫೋನಾಯಿಸಿ ಎರಡು ಘಂಟೆಗಳ ಕಾರ್ಯಕ್ರಮ ಭಾಗವಹಿಸಿದ ಮಾತೆಯರು ಮತ್ತಿತರರ ಒಟ್ಟು ಸಂಖ್ಯೆ ಜಪಿಸಲಾದ ಒಟ್ಟು ಜಪ ಸಂಖ್ಯೆಗಳನ್ನು ಧನ್ಯತಾಭಾವದಿಂದ ಸಂಘದ  ಚಾವಡಿಯಲ್ಲಿ ಲೆಕ್ಕ ಒಪ್ಪಿಸುವ ಸ್ವಯಂಸೇವಕನ ಶಿಸ್ತಿನಿಂದಲೇ ಒಪ್ಪಿಸಿದರು.‌


ಇವುಗಳೆಲ್ಲ ತೀರ ಸಣ್ಣ ವಿಷಯಗಳಲ್ಲ. ಓರ್ವ ಜನಪ್ರತಿನಿಧಿಯಾಗಿದ್ದುಕೊಂಡು ಧರ್ಮ ಇತಿಹಾಸಗಳ ಬಗ್ಗೆ ಅಸೀಮ ಶ್ರದ್ಧೆ ಇದ್ದಾಗ ಮಾತ್ರ ಈ ಕಾಳಜಿ, ಈ ಕರ್ತವ್ಯಗಳು ಸಾಧ್ಯವಾದಾವು.


ಕಾಗೇರಿಯವರ ಸಂವಿಧಾನ ಧರ್ಮ ನಿಷ್ಠೆಯೂ ಉಲ್ಲೇಖನೀಯ. ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಶಾಸಕಾಂಗ ಒಂದು ಭಾಗವಾಗಿ ಸಂವಿಧಾನದ ಬಗ್ಗೆ ಹೊಂದಿರಲೇ ಬೇಕಾದ ಬದ್ಧತೆಯನ್ನು ಸದಾ ಜಾಗೃತವಾಗಿಟ್ಟುಕೊಂಡವರು. ವಿಧಾನಸಭಾಧ್ಯಕ್ಷರಾಗಿದ್ದಾಗ ಅದರ ಸದುಪಯೋಗ ಪಡೆದು ಒಂದು ವಿಧಾನ ಸಭಾ ಅಧಿವೇಶನದ ಪೂರ್ತಿ ದಿನಕ್ಕೆ ಇಂತಿಷ್ಟು ಅವಧಿಯನ್ನು ನಿಗದಿ ಪಡಿಸಿ ದೇಶದ ಸಂವಿಧಾನದ ಆಶಯ- ಆಶೋತ್ತರಗಳ ಬಗ್ಗೆ ಶಾಸಕರು ಚಿಂತನ ಮಂಥನ ನಡೆಸಲು ಒಂದು ಸುವರ್ಣಾವಕಾಶ ಕಲ್ಪಿಸಿಕೊಟ್ಟರು. ಪ್ರಾಯಃ ರಾಜ್ಯದ ಮಾತ್ರವಲ್ಲ ದೇಶದ ಇತಿಹಾಸದಲ್ಲೇ ಇದೊಂದು ದಾಖಲೆಯಾಯಿತು. ಎಲ್ಲ ಪಕ್ಷದ ಪ್ರಮುಖ ಶಾಸಕರೂ ಮಂತ್ರಿಗಳು ವಿರೋಧ ಪಕ್ಷದ ಪ್ರಮುಖರೆಲ್ಲ ಈ ಚರ್ಚೆಯಲ್ಲಿ ಮುಕ್ತವಾಗಿ ಪಾಲ್ಗೊಂಡು ಮಾತನಾಡಿದರು. ಮತ್ತು ಈ ಸದವಕಾಶಕ್ಕಾಗಿ ಸ್ಪೀಕರ್ ಕಾಗೇರಿವಯವರನ್ನು ಮುಕ್ತವಾಗಿ ಪ್ರಶಂಶಿಸಿದರು. ಈ ಚರ್ಚೆಯ ವೇಳೆ ಆಗಿನ ವಿರೋಧ ಪಕ್ಷದ ನಾಯಕ ಶ್ರೀ ಸಿದ್ದರಾಮಯ್ಯನವರು ಕೀರ್ತಿಶೇಷ ಡಾ ಬಿ ಆರ್ ಅಂಬೇಡ್ಕರ್ ರ ಜೀವನದ ಒಂದು ಘಟನೆಯ ಬಗ್ಗೆ ತಪ್ಪಾಗಿ ಅಥವಾ ತಮ್ಮ ಮೂಗಿನ ನೇರಕ್ಕೆ ಸರಿಯಾಗಿ ವಿಚಾರ ಮಂಡಿಸಿದಾಗ ತಕ್ಷಣ ಎಚ್ಚೆತ್ತ ಕಾಗೇರಿಯವರು ಅದು ಹಾಗಲ್ಲ; ಹೀಗೆ ಎಂದು ನಿಜ ಸಂಗತಿಯನ್ನು ವಿವರಿಸಿದಾಗ ಸಿದ್ದರಾಮಯ್ಯ ಸೇರಿದಂತೆ ಇಡೀ ಸದನ ನಿರುತ್ತರವಾಯಿತು.


ಆರು ಬಾರಿ ಅವರನ್ನು ಅಂಕೋಲ ಶಿರಸಿಯ ಜನತೆ ಆಯ್ಕೆ ಮಾಡಿದ್ದರೆಂದರೆ ಅವರ ಜನಪರ ಕಾಳಜಿ ಕರ್ತವ್ಯಗಳಿಂದಲೇ ಅನ್ನೋದೂ ಅವರ ಯಶಸ್ವಿ ಶಾಸಕತ್ವಕ್ಕೆ ಸಾಕ್ಷಿಯಾದೀತು. ಈ ರೀತಿಯಾಗಿ ಪರಿಶುದ್ಧ ಮತ್ತು ಮೌಲಿಕ  ರಾಜಕೀಯವನ್ನು ನಡೆಸಿಕೊಂಡು ಬಂದಿರುವ ಕಾಗೇರಿಯವರಿಗೆ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಲೋಕ ಸಭೆಗೆ ಸ್ಪರ್ಧಿಸುವ ಅವಕಾಶ ದೊರೆತಿದೆ.‌


ಎಲ್ಲವೂ ಸುಸೂತ್ರವಾಗಿಯೇ ನಡೆದರೆ ದೇಶದ ಜನ ಬಯಸಿದಂತೆ ಬಿಜೆಪಿ ನೇತೃತ್ವದ ಎನ್‌ಡಿಎ ಬಹುಮತ ಪಡೆದು ಮೋದಿಜೀಯವರು ಮತ್ತೊಮ್ಮೆ  ದೇಶದ ಪ್ರಧಾನಿಯಾಗ್ತಾರೆ. ಉತ್ತರ ಕನ್ನಡದ ಮತದಾರರ ಕೃಪೆಯೂ ಅದರೊಂದಿಗೆ ಸಮ್ಮಿಳಿತವಾಗಿ ಕಾಗೇರಿಯವರೂ ಸಂಸದರಾಗಿ ಆಯ್ಕೆಯಾಗಿ ಕಾರ್ಯನಿರ್ವಹಿಸುವ ಮಹದವಕಾಶ ದೊರೆತೀತು. ಪರಿಣಾಮವಾಗಿ ಕ್ಷೇತ್ರದಲ್ಲಿ ಅನೇಕ ವರ್ಷಗಳಿಂದ ಜನತೆ ಬಹಳ ಮುಖ್ಯವಾಗಿ ಅಪೇಕ್ಷಿಸುತ್ತಿರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯೂ ಸೇರಿದಂತೆ ಕ್ಷೇತ್ರದ ಪ್ರಗತಿಗೆ ಪುರೋಗಾಮಿಯಾದ ಯೋಜನೆ ಯೋಚನೆಗಳು ಸಾಕಾರಗೊಳ್ಳುವತ್ತ ಒಂದಷ್ಟು ವೇಗದಿಂದ ಪ್ರಯತ್ನಗಳು ನಡೆಯಬಲ್ಲವು;. ಮಾತ್ರವಲ್ಲ; ಕೇಂದ್ರ ಸಚಿವ ಸಂಪುಟದಲ್ಲೂ ಮಂತ್ರಿಯಾಗುವ ಅವಕಾಶ ದೊರೆತರೂ ಅಚ್ಚರಿ ಪಡಬೇಕಿಲ್ಲ. 

ನೇತಾರ- ಮುತ್ಸದ್ದಿ ಕಾಗೇರಿಯವರಿಗೆ ಅಂಥ ಉತ್ತಮ ಅವಕಾಶ ದೊರೆಯಲಿ ಎಂದಷ್ಟೇ ಹಾರೈಕೆ.


- ಜಿ ವಾಸುದೇವ ಭಟ್ ಪೆರಂಪಳ್ಳಿ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top