ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಆಜೇರಿನ ರಾಮಪ್ಪಯ್ಯ ನಾಯಕ್ ಹಾಗೂ ಚಂದ್ರಾವತಿ ಇವರ ಮಗನಾಗಿ ಶ್ರೀಪತಿ ನಾಯಕ್ ಜನಿಸಿದರು. ಸ್ನಾತಕೋತ್ತರ ಮತ್ತು ಶಿಕ್ಷಕ ತರಬೇತಿ ಇವರ ವಿದ್ಯಾಭ್ಯಾಸ. ವೃತ್ತಿಯಲ್ಲಿ ಅಧ್ಯಾಪಕ, ಮುಖ್ಯ ಶಿಕ್ಷಕ ಹಾಗೂ ಸಂಪನ್ಮೂಲ ವ್ಯಕ್ತಿಯಾಗಿ ಸರಕಾರಿ ಶಿಕ್ಷಣ ಇಲಾಖೆಯಲ್ಲಿ 37 ವರ್ಷ ಸೇವೆ ಸಲ್ಲಿಸಿ ಈಗ ನಿವೃತ್ತಿಯಾಗಿರುತ್ತಾರೆ. ಆಸುಪಾಸಿನಲ್ಲಿ ನಡೆಯುತ್ತಿದ್ದ ಹವ್ಯಾಸಿಗಳ ತಾಳಮದ್ದಳೆ ಹಾಗೂ ತಂದೆ ಹಾಗೂ ಸೋದರ ಮಾವ ಹವ್ಯಾಸಿ ಭಾಗವತ ಆದುದರಿಂದ ಶ್ರೀಪತಿ ನಾಯಕ್ ಯಕ್ಷಗಾನ ರಂಗಕ್ಕೆ ಬರಲು ಪ್ರೇರಣೆಯಾಯಿತು.
ತಂದೆಯೇ ಇವರ ಯಕ್ಷಗಾನ ಭಾಗವತಿಕೆ ಗುರುಗಳು. ಹಿರಿಯ ಹಿಮ್ಮೇಳ ಕಲಾವಿದರ ಬಳಿ ಕೇಳಿ ಚೆಂಡೆ ಹಾಗೂ ಮದ್ದಳೆ ನುಡಿಸುವುದನ್ನು ಅಭ್ಯಾಸ ಮಾಡಿ ಯಕ್ಷಗಾನ ರಂಗದಲ್ಲಿ ತಮ್ಮ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಯಕ್ಷಗಾನ ರಂಗದಲ್ಲಿ ಶಿಕ್ಷಕ ವೃತ್ತಿಯೊಂದಿಗೆ ಹವ್ಯಾಸಿಯಾಗಿ ಶಾಲಾ ವಾರ್ಷಿಕೋತ್ಸವಗಳಲ್ಲಿ ಭಾಗವತಿಕೆ ಮಾಡಿದ ಅನುಭವ ಇವರದು. ನಾಟಿ, ಭೈರವಿ, ಕಲ್ಯಾಣಿ ಇತ್ಯಾದಿ ಇವರ ನೆಚ್ಚಿನ ರಾಗಗಳು.
ಕಡತೋಕ, ಪುತ್ತಿಗೆ ಹೊಳ್ಳರು,ಪದ್ಯಾಣ, ಅಮ್ಮಣ್ಣಾಯರು, ನಾವುಡರು, ಮತ್ತು ಎಲ್ಲಾ ಹಿರಿಯ ಭಾಗವತರು ಇವರ ನೆಚ್ಚಿನ ಭಾಗವತರು. ಚಿಪ್ಪಾರು, ಚೇವಾರು ಕಾಮತ್,ಕಡಬ, ಅಡೂರು, ಉಪಾಧ್ಯಾಯರು ಇವರ ನೆಚ್ಚಿನ ಚೆಂಡೆ ಹಾಗೂ ಮದ್ದಳೆ ವಾದಕರು.
ಯಕ್ಷಗಾನದ ಇಂದಿನ ಸ್ಥಿತಿ ಗತಿ:-
ಯಕ್ಷಗಾನ ಸ್ಥಿತಿ ಒಳ್ಳೆದಿದೆ. ಯಕ್ಷಗಾನದ ಪರಂಪರೆಗೆ ಧಕ್ಕೆ ಆಗದಂತೆ ಬದಲಾವಣೆ ಆಗಿದೆ ಎಂದು ಹೇಳುತ್ತಾರೆ ನಾಯಕ್ ಅವರು.
ಯಕ್ಷಗಾನದ ಇಂದಿನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:-
ಪರಂಪರೆಯ ಯಕ್ಷಗಾನವನ್ನು ವೀಕ್ಷಿಸುವ ಪ್ರೇಕ್ಷಕರೂ ಇದ್ದಾರೆ, ಹೊಸತನವನ್ನು ವೀಕ್ಷಿಸುವ ಪ್ರೇಕ್ಷಕರೂ ಇದ್ದಾರೆ. ಇವೆರಡೂ ಪ್ರೇಕ್ಷಕರನ್ನು ಆಕರ್ಷಿಸುವ ಪ್ರದರ್ಶನ ಅನಿವಾರ್ಯ.
ಕೆರೆಕಾಡು ಮೇಳದಲ್ಲಿ ಮಗಳು ಕಾವ್ಯಶ್ರೀಯೊಂದಿಗೆ 10 ವರ್ಷಗಳ ಕಾಲ ತಿರುಗಾಟ ಮಾಡಿ ಅತಿಥಿ ಕಲಾವಿದರಾಗಿ ತಲಕಳ, ಇರುವೈಲು, ಬೆಂಕಿನಾಥೇಶ್ವೇರ ಮೇಳದಲ್ಲಿ ತಿರುಗಾಟ ಮಾಡಿದ ಅನುಭವ ಶ್ರೀಪತಿ ನಾಯಕ್ ರದು. ಶಾಲಾ ವಾರ್ಷಿಕೋತ್ಸವ ಸಂದರ್ಭ, ಮುಂಬೈ ಅಜೆಕಾರು ಬಳಗ, ಯಕ್ಷ ತರಂಗ ಹಾಗೂ ಹಲವು ಧಾರ್ಮಿಕ ಕ್ಷೇತ್ರಗಳಲ್ಲಿ ಇವರನ್ನು ಸನ್ಮಾನ ಹಾಗೂ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ದಿನ ಪತ್ರಿಕೆ ಓದುವುದು, ಕೃಷಿ ಮಾಡುವುದು ಇವರ ಹವ್ಯಾಸ.
ಶ್ರೀಪತಿ ನಾಯಕ್ ಅವರು ಉಮಾ ಅವರನ್ನು ಮದುವೆಯಾಗಿ ಮಗಳು ಸ್ವರವಾರಿಧಿ ಕಾವ್ಯಶ್ರೀ ನಾಯಕ್, ಮಗ ವಿಭುರಾಮ, ಅಳಿಯ ಗುರುಪ್ರಸಾದ್ ನಾಯಕ್ ಜೊತೆಗೆ ಸುಖೀ ಸಂಸಾರವನ್ನು ನಡೆಸುತ್ತಿದ್ದಾರೆ.
-ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.
☎️ :- +91 8317463705
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ