ಒಂದು ಪುಟ್ಟ ಊರು. ಆ ಊರಿನಲ್ಲಿ ಒಬ್ಬಳು ಮುದ್ದಾದ, ಮುಗ್ಧ ಮನಸ್ಸಿನ ಹುಡುಗಿ, ಲಕ್ಷ್ಮಿ. ಹೆಸರಲ್ಲಿ ಲಕ್ಷ್ಮಿ ಇದ್ದರೂ ಅವಳು ಬಡತನದಲ್ಲಿ ತನ್ನಿಡೀ ಜೀವನವನ್ನು ಕಳೆಯುತ್ತಿದ್ದಳು. ದಿನನಿತ್ಯ ಕುಡಿದು ಬರುವ ತಂದೆ, ತನ್ನ ಮಗಳ ಆಸ್ಪತ್ರೆಯ ಖರ್ಚಿಗಾಗಿ ಬೆವರು ಸುರಿಸಿ ದುಡಿಯುವ ತಾಯಿ, ಇದು ಲಕ್ಷ್ಮಿಯ ಪುಟ್ಟ ಕುಟುಂಬ. ಲಕ್ಷ್ಮಿಯ ಮನೆಯ ಪರಿಸ್ಥಿತಿಯನ್ನು ನೋಡಿ ಸಹಾಯ ಮಾಡುವವರಿಗಿಂತ ಆಡಿಕೊಳ್ಳುವವರೇ ಹೆಚ್ಚು. ಲಕ್ಷ್ಮಿ ಓದುವುದರಲ್ಲಿ ಬಲು ಜಾಣೆ, ತಾಯಿಯ ಮುದ್ದು ಕಣ್ಮಣಿ.
ಹಣದ ಸಮಸ್ಯೆಯಿಂದ ಲಕ್ಷ್ಮಿಯನ್ನು ಓದಿಸಲು ತಾಯಿಗೆ ಸಾಧ್ಯವಾಗದಿರುವುದನ್ನು ಕಂಡು ಲಕ್ಷ್ಮಿ ಓದುವುದನ್ನು ನಿಲ್ಲಿಸಿದಳು. ಅಂಗವೈಕಲ್ಯದಿಂದ ಬಳಲುತ್ತಿದ್ದ ಲಕ್ಷ್ಮಿಯನ್ನು ನೋಡಿ ಎಲ್ಲರೂ ಗೇಲಿ ಮಾಡುತ್ತಿದ್ದರು. ಮೊದಮೊದಲು ಸ್ವಲ್ಪ ಬೇಸರವಾದರೂ ಮತ್ತೆ ಅದನ್ನು ಲೆಕ್ಕಿಸದೆ ಅವಳ ಜೀವನವನ್ನು ಅವಳು ಸಾಗಿಸುತ್ತಿದ್ದಳು. ಸುಮಾರು ದಿನಗಳ ಬಳಿಕ ಲಕ್ಷ್ಮಿಯ ಮನೆಯ ಹತ್ತಿರದಲ್ಲಿ ಒಂದು ಹೊಸ ಶ್ರೀಮಂತ ಕುಟುಂಬ ನೆಲೆಸಿತ್ತು . ಅವರಿಗೆ ಲಕ್ಷ್ಮಿಯ ವಯಸ್ಸಿನ ಮಗಳಿದ್ದಳು, ಗೌರಿ. ಲಕ್ಷ್ಮಿ ಅಂಗವೈಕಲ್ಯಳಾದ ಕಾರಣ ಗೌರಿಗೆ ಅವಳನ್ನು ಇಷ್ಟವಾಗುತ್ತಿರಲಿಲ್ಲ. ಲಕ್ಷ್ಮಿಗೆ ಅವಮಾನ ಮಾಡುತ್ತಲೇ ತನ್ನ ಸಂತೋಷವನ್ನು ಕಾಣುತ್ತಿದಳು.
ಒಂದು ದಿನ ಲಕ್ಷ್ಮಿ , "ಗೌರಿ ನನಗೆ ಗೆಳತಿಯರು ಯಾರು ಇಲ್ಲ, ನೀನು ನನ್ನ ಗೆಳತಿ ಆಗಬಹುದೇ?" ಎಂದು ಕೇಳಿದ್ದೇ ತಡ ಅಷ್ಟರಲ್ಲಿ ಗೌರಿ, " ನಿನಗೆ ನನ್ನ ಗೆಳತಿಯಾಗಲು ಏನು ಅರ್ಹತೆ ಇದೆ? ನೀನೊಬ್ಬಳು ಅಂಗವೈಕಲ್ಯದಿಂದ ಬಳಲುತ್ತಿರುವವಳು ನಿನ್ನನ್ನು ಗೆಳತಿ ಮಾಡಿದರೆ ನನಗೆ ಅವಮಾನ" ಎಂದು ಅಹಂಕಾರದಲ್ಲಿ ನುಡಿದಳು. ಇದನ್ನು ಕೇಳಿದ ಲಕ್ಷ್ಮಿಗೆ ಒಂದು ಕ್ಷಣ ಎದೆ ನಿಂತಂತಾಯಿತು. ಎಲ್ಲರ ಚುಚ್ಚುಮಾತಿನಿಂದ ಲಕ್ಷ್ಮಿ ಕುಗ್ಗಿ ಹೋಗಿದ್ದಳು. ಅದಲ್ಲದೆ ತನ್ನ ತಂದೆಯ ಕುಡಿಯುವ ಚಟದಿಂದ ಅವಳ ಜೀವನ ಬಹಳ ದುರಂತದಲ್ಲಿ ಸಾಗುತ್ತಿತ್ತು. ಗೌರಿ ಪ್ರತಿದಿನ ಲಕ್ಷ್ಮಿಗೆ ಅವಮಾನ ಮಾಡುತ್ತಿದ್ದಳು. ಗೌರಿಯ ಅಹಂಕಾರ ದಿನ ಮೀರಿದಂತೆ ಹೆಚ್ಚಾಗಿ ಬೆಳೆಯುತ್ತಿತ್ತು. ಇದನ್ನೆಲ್ಲಾ ಸಹಿಸಲು ಸಾಧ್ಯವಾಗದ ಲಕ್ಷ್ಮಿ ಆತ್ಮಹತ್ಯೆಗೆ ಶರಣಾಗಳು ಹೋಗುತ್ತಾಳೆ. ತಟ್ಟನೆ ನಿದ್ದೆಯಿಂದ ಎಚ್ಚೆತ್ತ ಲಕ್ಷ್ಮಿ ಜೋರಾಗಿ ಕಿರುಚಲು ಶುರುಮಾಡಿದಳು. ಇದು ಲಕ್ಷ್ಮಿಗೆ ಬಿದ್ದ ಕನಸಾಗಿತ್ತು.
ಲಕ್ಷ್ಮಿ ಗೌರಿಯಾಗಿ, ಗೌರಿ ಲಕ್ಷ್ಮಿಯಾಗಿ ಬದಲಾದಂತ ಕನಸಾಗಿತ್ತು. ನಿಜವಾದ ಅಂಗವೈಕಲ್ಯೇ ಗೌರಿಯಾಗಿದ್ದಳು. ಆದರೆ ಲಕ್ಷ್ಮಿ ದಿನನಿತ್ಯ ಅವಳಿಗೆ ಅವಮಾನ ಮಾಡುತ್ತಿದ್ದಳು, ಅವಳನ್ನು ಹೀಯಾಳಿಸುತ್ತಿದ್ದಳು. ತನ್ನ ಕನಸಿನಲ್ಲಿ ಗೌರಿಯ ಜಾಗವನ್ನು ಕಲ್ಪಿಸಿದ ಲಕ್ಷ್ಮಿಗೆ ತಾನು ಎಷ್ಟು ಕ್ರೂರತೆಯಿಂದ ಅವಳೊಂದಿಗೆ ನಡೆದುಕೊಂಡೆ ಎಂದು ಬಾಸವಾಗಿ ತನ್ನ ತಪ್ಪಿನ ಅರಿವನ್ನು ಮಾಡಿಕೊಂಡು ಗೌರಿಯಲ್ಲಿ ತಲೆಬಾಗಿ ಕ್ಷಮೆಯನ್ನು ಯಾಚಿಸುತ್ತಾಳೆ. ಅಂದಿನಿಂದ ಲಕ್ಷ್ಮಿ ಹಾಗೂ ಗೌರಿ ಒಳ್ಳೆ ಸ್ನೇಹಿತೆಯರಾಗಿ ಕಷ್ಟ ಸುಖದಲ್ಲಿ ಭಾಗಿಯಾಗುತ್ತಾಳೆ . ಗೌರಿಯ ಅಂಗವಿಕಲತೆನ್ನು ಯಾರಾದರೂ ತಮಾಷೆ ಮಾಡಿದರೆ ಲಕ್ಷ್ಮಿ ಅವರಿಗೆ ಬೆಂಡೆತ್ತುತ್ತಿದ್ದಳು.
ನಾವು ಯಾವತ್ತೂ ಇನ್ನೊಬ್ಬರಿಗೆ ನೋವು ಮಾಡಬಾರದು. ನಾವು ಯಾವಾಗ ಇನ್ನೊಬ್ಬರ ಪರಿಸ್ಥಿತಿಯಲ್ಲಿ ಬದುಕುತ್ತೇವೋ ಆಗ ಮಾತ್ರ ನಮಗೆ ಆ ನೋವು ಏನು ಎಂಬುವುದು ತಿಳಿಯುತ್ತದೆ. ಯಾರೇ ಆಗಲಿ,ಅವರು ಎಂತವರೇ ಆಗಿರಲಿ ನಮ್ಮಂತೆ ಎಂದು ಭಾವಿಸಿ ಮುನ್ನಡೆಯಬೇಕು. ನಾವು ಯಾವಾಗ ಅವರ ಜಾಗದಲ್ಲಿ ನಿಂತು ಅವಮಾನಗಳನ್ನು ಎದುರಿಸುತ್ತೇವೆಯೋ ಆಗ ಮಾತ್ರ ನಮಗೆ ಅವರು ಎಷ್ಟು ನೋವಿನಲ್ಲಿ ಜೀವಿಸಿರಬಹುದು ಎಂದು ತಿಳಿಯುತ್ತದೆ. ಯಾರಿಗಾದರೂ ಅವಮಾನ ಮಾಡುವುದಕ್ಕಿಂತ ಮೊದಲು ಸ್ವಲ್ಪ ಯೋಚಿಸಿ. ಯಾಕೆಂದರೆ ನಿಮ್ಮ ಅವಮಾನದ ಮಾತುಗಳಿಂದ ಅವರ ಜೀವನದ ಮೇಲೆ ಹೇಗೆ ಪರಿಣಾಮ ಬೀಳುತ್ತದೆ ಎಂದು ಮೊದಲು ತಿಳಿದುಕೊಳ್ಳಿ. ಮಾತು ಮುತ್ತಿನಂತಲ್ಲವೇ? ಒಮ್ಮೆ ಒಡೆದರೆ ಮತ್ತೆ ಸರಿ ಮಾಡಲು ಸಾಧ್ಯವೇ ಇಲ್ಲ. ಹಾಗೆಯೇ ಇನ್ನೊಬ್ಬರನ್ನು ಹೀಯಾಳಿಸುವುದು, ಅವರ ಮನಸ್ಸಿಗೆ ನೋವನ್ನು ಮಾಡುವುದು, ಅವರ ಸ್ಥಿತಿಯನ್ನು ನೋಡಿ ತಮಾಷೆ ಮಾಡುವುದನ್ನು ನಿಲ್ಲಿಸಿ ಅವರಿಗೆ ಸಹಾಯವನ್ನು ಮಾಡುತ್ತಾ ಅವರು ನಮ್ಮಂತೆಯೇ ಎಂದು ತಿಳಿದು ಜೀವಿಸಬೇಕು. ಯಾರು ಮೇಲು,ಕೇಳಲ್ಲ ಕೆಲವು ಸಂದರ್ಭಗಳು ಕೆಲವು ಮಾತುಗಳು ನಮ್ಮನ್ನು ಹಾಗೆ ಮಾಡುತ್ತದೆ ಅಷ್ಟೇ. ಬದಲಾಗಿ ನಾವು ಯಾವಾಗ ಚಿಂತಿಸಿ, ಇನ್ನೊಬ್ಬರಿಗೆ ಚುಚ್ಚು ಮಾತನಾಡದೆ ಬದುಕುತ್ತೇವೆಯೋ ಆಗ ನಾವು ಒಂದು ಬದುಕನ್ನು ಸರಿಯಾಗಿ ಬದುಕಲು ಸಾಧ್ಯ.
-ಆಶ್ರಿತ ಎಮ್
ಪ್ರಥಮ ಬಿಎ ಪತ್ರಿಕೋದ್ಯಮ ವಿದ್ಯಾರ್ಥಿನಿ
ವಿವೇಕಾನಂದ ಮಹಾವಿದ್ಯಾಲಯ (ಸ್ವಾಯತ್ತ) ಪುತ್ತೂರು
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ