ಪುತ್ತೂರು: ಬದುಕು ಎಂದರೆ, ಗೆಲ್ಲಬೇಕು ಎಂಬ ಹೋರಾಟ, ಸೋತರೆ ಸೋಲನ್ನು ಒಪ್ಪಿಕೊಂಡು ಗೆಲ್ಲಲು ಮತ್ತೆ ಹೋರಾಡುವುದು, ಅದೇ ಜೀವನದ ನಿಯಮ. ಅಂತೆಯೇ ಕ್ರೀಡೆಯಲ್ಲಿ ಸೋಲು ಗೆಲುವು ಎಂಬುದು ಇದ್ದದ್ದೆ. ಹಾಗಾಗಿ ಧನಾತ್ಮಕವಾಗಿ ಭಾಗವಹಿಸುವುದು ಮುಖ್ಯ. ಕ್ರೀಡೆ ಕೇವಲ ಆಟವಲ್ಲ ಅದು ಬದುಕಿಗೊಂದು ಪಾಠ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ. ಕೆಎಂ ಕೃಷ್ಣ ಭಟ್ ಹೇಳಿದರು.
ಇವರು ಪುತ್ತೂರಿನ ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ( ಸ್ವಾಯತ್ತ )ಇಲ್ಲಿ ಆಯೋಜಿಸಿದ 2023- 24 ನೇ ಸಾಲಿನ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಪ್ರೊ. ಶ್ರೀಪತಿ ಕಲ್ಲೂರಾಯ, ಮಾತನಾಡಿ ನಾವು ಬೌದ್ಧಿಕವಾಗಿ ಹೇಗೆ ದುಡಿಯುತ್ತೇವೆಯೋ ಹಾಗೆಯೇ ಶಾರೀರಿಕವಾಗಿ ಶಿಸ್ತು,ಕ್ರಮದಿಂದ ನಮ್ಮನ್ನು ನಾವು ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವುದು ಮುಖ್ಯ. ಇದು ನಮ್ಮ ದೈಹಿಕ ಆರೋಗ್ಯದ ಮೇಲೆ ಧನಾತ್ಮಕ ಪರಿಣಾಮವನ್ನು ಬೀರುತ್ತದೆ ಎಂದು ಕ್ರೀಡಾಪಟುಗಳಿಗೆ ಶುಭ ಹಾರೈಸಿದರು.
ಕಾಲೇಜಿನ ಎನ್ ಸಿಸಿ, ಎನ್ ಎಸ್ ಎಸ್,ರೋವರ್ ಆ್ಯಂಡ್ ರೇಂಜರ್ಸ್ ಮತ್ತು ಯೂಥ್ ರೆಡ್ ಕ್ರಾಸ್ ಹಾಗೂ ಪ್ರತಿ ತರಗತಿಗಳಿಂದ ಆಕರ್ಷಕ ಪಥಸಂಚಲನ ನಡೆದು ಬಳಿಕ ಅತಿಥಿಗಳು ಕ್ರೀಡಾ ಧ್ವಜಾರೋಹಣವನ್ನು ನೆರವೇರಿಸಿದರು. ರಾಜ್ಯ ದಿಂದ ರಾಷ್ಟ್ರೀಯ ಮಟ್ಟದವರೆಗೆ ಸಾಧನೆ ಮಾಡಿದ ಕಾಲೇಜಿನ ಹೆಮ್ಮೆಯ ವಿದ್ಯಾರ್ಥಿಗಳು ಕ್ರೀಡಾ ಜ್ಯೋತಿಯನ್ನು ಬೆಳಗಿಸಿದರು. ದ್ವಿತೀಯ ಬಿಕಾಂ ವಿಭಾಗದ ವಿದ್ಯಾರ್ಥಿ, ಕ್ರೀಡಾಪಟು ಗುರುಪ್ರಸಾದ್ ಪ್ರತಿಜ್ಞಾವಿಧಿಯನ್ನು ಬೋಧಿಸಿದರು. ಕ್ರೀಡೆಯಲ್ಲಿ ವಿಶೇಷ ಸಾಧನೆಗೈದ ಕಾಲೇಜಿನ ಕ್ರೀಡಾಪಟುಗಳನ್ನು ಗುರುತಿಸಲಾಯಿತು.
ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಷ್ಣು ಗಣಪತಿ ಭಟ್, ಪರೀಕ್ಷಾಂಗ ಕುಲ ಸಚಿವ ಮತ್ತು ಕನ್ನಡ ವಿಭಾಗದ ನಿವೃತ್ತ ಮುಖ್ಯಸ್ಥ ಡಾ ಶ್ರೀಧರ್ ಹೆಚ್. ಜಿ, ಇತಿಹಾಸ ವಿಭಾಗದ ಮುಖ್ಯಸ್ಥ ಮತ್ತು ಕಾಲೇಜಿನ ವಿಶೇಷ ಅಧಿಕಾರಿ ಡಾ.ಶ್ರೀಧರ್ ನಾಯ್ಕ್ ಬಿ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಕಾಲೇಜಿನ ಕ್ರೀಡಾ ಕಾರ್ಯದರ್ಶಿ, ತೃತೀಯ ಬಿಸಿಎ ವಿಭಾಗದ ವಿದ್ಯಾರ್ಥಿ ರುತ್ವಿಕ್ ಎಚ್ ಸ್ವಾಗತಿಸಿ, ಜೊತೆ ಕಾರ್ಯದರ್ಶಿ ದ್ವಿತೀಯ ಬಿಕಾಂ ವಿದ್ಯಾರ್ಥಿನಿ ಪ್ರೇಕ್ಷಿತಾ ಶೆಟ್ಟಿ ಕೆ ವಂದಿಸಿ, ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ರವಿ ಶಂಕರ್ ವಿ ಎಸ್ ನಿರ್ವಹಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ