ಮೌನ ಮಾತಾಡುವ ಗಳಿಗೆ

Upayuktha
0



ಲ್ಲದಕ್ಕೂ ಒಂದು ಕಾಲವಿದೆ. ಅದೇ ರೀತಿ ಮೌನಕ್ಕೂ ಒಂದು ಕಾಲವಿದೆ. ಆದರೆ ಅದರ ಕಾಲ ಬಹಳ ಕಾಲವಿರುವುದಲ್ಲದೆ ಮಾತೆಂಬ ಮಾತನ್ನೇ ಅದುಮಿಟ್ಟುಕೊಳ್ಳುತ್ತದೆ. ಮಾತುಗಳ ನಡುವೆ ಮೌನ ಶೋಭೆ ತಂದರೆ ಮೌನವಿರಬೇಕಾದಲ್ಲಿ ಮಾತು ಅಪ್ರಸ್ತುತವಾಗುತ್ತದೆ. ಇದೇ ಮೌನದ ಹಿರಿಮೆ. ಇಷ್ಟೆಲ್ಲ ಪಿಠೀಕೆಯಿಂದ ಮೌನವಾಗಿ ಮುಂದುವರೆಯೋಣ. ಸಾವು..! ಇದು ನಿಜಕ್ಕೂ ಯಾರೂ ಬಯಸದ ಒಂದು ಸ್ಥಿತಿ. ಆದರೆ ಯಾರನ್ನೂ ಬಿಟ್ಟಿರದ ಸ್ಥಿತಿಯೂ ಹೌದು. ಒಂದು ಮನೆಯಲ್ಲಿ ಸಾವು ಸಂಭವಿಸುವಾಗ ಸಹಜವಾಗಿಯೇ ಎಲ್ಲ ವ್ಯವಸ್ಥೆಗಳೂ ಅಯೋಮಯವಾಗುತ್ತವೆ. ಮನೆಯ ಸದಸ್ಯನನ್ನು ಕಳಕೊಂಡ ದುಃಖ ಮನೆಯವರೊಡನೆ ಬಂಧು ಬಾಂಧವರೆಲ್ಲರಿಗೂ ಉಂಟಾಗುತ್ತದೆ. ಬದುಕು ಬಹಳಷ್ಟಿರುವಾಗ ಬದುಕಲಾಗದೆ ಬರುವ ಅಕಾಲಿಕ ಮರಣವಂತು ಸಹಿಸಲಸಾಧ್ಯವಾದದ್ದು. 



ಇಂಥ ಮರಣವಾದಾಗ ಒಂದಷ್ಟು ಹಿತೈಷಿಗಳು ಬರುತ್ತಾರೆ. ಸಾಂತ್ವನ ಹೇಳಲೂ ಆಗದೆ, ಮೌನವಾಗಿ ಇರಲೂ ಆಗದೆ ಬರಿದೆ ನೋಟದ ವಿನಿಮಯದ ಪ್ರಕ್ರಿಯೆಗೆ ಮಾತ್ರ ಅವಕಾಶವೋ ಎಂಬಂತೆ ಮತ್ತೆ ಮೌನಕ್ಕೇ ಶರಣಾಗಿ ಕಾಲಕ್ಕೆ ಶಿರಬಾಗಿ ನಿಲ್ಲುವುದು ಮಾತ್ರ ನಮ್ಮ ಅಂದರೆ ಬದುಕಿ ಉಳಿದವರಿಗಿರುವ ಮಾರ್ಗ. ಇನ್ನು ಕೆಲವರು  ಮರಣ ಸಂಭವಿಸಿದ ಕುಟುಂಬಕ್ಕೆ ದುಃಖವನ್ನು ಸಹಿಸುವ ಶಕ್ತಿಯನ್ನು ಆ ಭಗವಂತ ನೀಡಲಿ ಎಂದೋ, ಮರಣಿಸಿದ ವ್ಯಕ್ತಿಯ ಕಾಯದ ಹೊರತಾಗಿ ಅವರ ಆತ್ಮ ಇಲ್ಲೇ ತಿರುಗಾಡಿಕೊಂಡಿರುತ್ತದೆ, ನಿಮಗೆ ಯಾವ ಕಾಲಕ್ಕೂ ನಮ್ಮ ಸಹಾಯ ಇದೆ ಎಂದೋ ಹೇಳಿ ಒಂದಷ್ಟು ಧನಾತ್ಮಕತೆ ದುಃಖಿತ ಕುಟುಂಬಕ್ಕೆ ತುಂಬುವಂತೆ ಆ ಕ್ಷಣಕ್ಕೆ ಮಾಡುತ್ತಾರೆ ಮತ್ತು ಅದು ಸರಿಯೆ. ಇದೆಲ್ಲ ಪ್ರಕ್ರಿಯೆಗಳು ಅದೆಷ್ಟು ಧೈರ್ಯ ತುಂಬುವುದೋ ಗೊತ್ತಿಲ್ಲ. ಹಾಗೆಂದು ಅದಕ್ಕಿಂತ ಹೆಚ್ಚಿಗೆ ಯಾರಾದರು ಹೇಳಲಾಗುವುದೂ ಇಲ್ಲ.




ಪರಮಾತ್ಮ, ಆತ್ಮ, ಬಂಧು ಬಳಗ, ಹಿತೈಷಿಗಳು ಜನನ ಮರಣ, ವೈರಾಗ್ಯ ಹೀಗೆ ಅನೇಕ ವಿಷಯಗಳು ಆ ಕ್ಷಣಗಳಲ್ಲಿ ಬಂದು ಹೋಗುತ್ತವೆ. ಅದೇ ರೀತಿ ಭಗವಂತ ದುಃಖ ಸಹಿಸುವ ಶಕ್ತಿಯನ್ನೂ ನೀಡುತ್ತಾನೆ.  ಆದರೆ ಆ ಶಕ್ತಿಯನ್ನು ಧಾರಣೆ ಮಾಡಿಕೊಳ್ಳಲಿಕ್ಕೆ ದುಃಖಿತ ಕುಟುಂಬಕ್ಕೆ ಬಹಳ ಕಾಲದ ಅವಶ್ಯಕತೆ ಇದೆ. ವೃದ್ಧಾಪ್ಯ ಬಂದು ಸಹಜ ಮರಣವಾದರೆ ಆ ಶಕ್ತಿ ನಮ್ಮಲ್ಲಿ ಮುಂಚಿತವಾಗಿಯೇ ಇರುತ್ತದೆ. ಯಾಕೆಂದರೆ ವೃದ್ಧಾಪ್ಯ ಬಂದ ಮೇಲೆ ಮರಣ ಸಹಜವೆಂಬುದು ನಮ್ಮ ಮನಸ್ಸು ಒಪ್ಪಿಕೊಂಡ ವಿಚಾರ. ಆದರೆ ಅಕಾಲಿಕ ಮರಣಗಳು ಮನಸ್ಸನ್ನು ಜರ್ಜರಿತವಾಗಿಸುವಾಗ ಭಗವಂತ ಕೊಡುವ ಶಕ್ತಿಯನ್ನು ನಮ್ಮ ಮನಸ್ಸು ಧಾರಣ ಮಾಡುವಲ್ಲಿ ಕಾಲಾವಕಾಶ ಬೇಡುತ್ತದೆ. ಬುದ್ಧಿಗೆ ತಿಳಿದರೂ ಮನಸ್ಸು ಚಂಚಲವಾದ್ದರಿಂದ ಬಹಳ ಕಾಲದವರೆಗೆ ನೆನಪುಗಳನ್ನು ಬಿಟ್ಟುಕೊಡುವುದಿಲ್ಲ. ಆವಾಗ ಬುದ್ಧಿ ಹೇಳುವುದನ್ನು ಮನಸ್ಸು ಕೇಳಲೇ ಬೇಕಾದ ಅನಿವಾರ್ಯತೆ ಉಂಟಾಗಿ ದಿನದಿಂದ ದಿನಕ್ಕೆ ಮನಪರಿವರ್ತನೆ ಆದಾಗ ಹಾಗೂ ಸತ್ಯವನ್ನು ಒಪ್ಪಿಕೊಂಡಾಗ ಭಗವಂತ ಕೊಟ್ಟ ದುಃಖ ಸಹಿಸುವ ಶಕ್ತಿ ಕೆಲಸ ಮಾಡಲು ಪ್ರಾರಂಭವಾಗುತ್ತದೆ. ಅಲ್ಲಿವರೆಗೆ ಕಾಯುವುದೊಂದೇ ಮಾರ್ಗ.



ಇನ್ನು ನೆನಪುಗಳು.. ಈ ನೆನಪುಗಳು ಕಾಡುತ್ತಲೇ ಇರುತ್ತವೆ. ನೆನಪುಗಳೆಂದರೆ ಬೆಂಕಿ ಇದ್ದಂತೆ. ಅದಕ್ಕೆ ನಾವು ಎಷ್ಟು ಹತ್ತಿರವಾಗುತ್ತೇವೋ ಅಷ್ಟು ತೀವ್ರತೆಯಿಂದ ಸುಡುತ್ತವೆ. ದೂರವಾದಷ್ಟು ಸುಡುವ ತೀವ್ರತೆ ಕಡಿಮೆಯಾಗುತ್ತದೆ. ಹಾಗೆಂದು ನಾವು ದೂರ ಹೋಗುವುದಾದರೂ ಅದಕ್ಕೊಂದು ವ್ಯಾಪ್ತಿ ಇದೆ. ಬೆಂಕಿಯ ಕಾವು ತಾಗದಂತೆ ಎಷ್ಟು ದೂರವಾದರೂ ಹೋಗಬಹುದು.  ಆದರೆ ಮನಸ್ಸಿಗೆ ತಾಗುವ ನೆನಪೆಂಬ ಬೆಂಕಿಯ ಕಾವು ನಮಗೆ ತಾಗದಂತೆ ದೂರ ಹೋಗಲಾಗದು. ದೂರಕ್ಕೆ ಹೋದರೂ ಒಂದಷ್ಟು ಬಿಸಿಯೊಂದಿಗೆ ನಮ್ಮೊಡನೆಯೇ ಇರುತ್ತದೆ. ಆದರೂ ನೆನಪುಗಳಿಂದ ನಿಧಾನವಾಗಿಯಾದರೂ ಮರೆಯಾಗಲು ಅಥವಾ ಮರೆಯಲು ನಾವು ಕೆಲವೊಂದಷ್ಟು ಹವ್ಯಾಸಗಳನ್ನು ಬೆಳೆಸಿಕೊಂಡರೆ ಬಹಳ ಒಳ್ಳೆಯದು. 



ಬೆಂಕಿಯ ಕಾವಿಗೆ ಅಡ್ಡ ಹಿಡಿದಂತೆ ಈ ಹವ್ಯಾಸಗಳು ವರ್ತಿಸುತ್ತವೆ. ಓದು, ಸಂಗೀತ, ಬರವಣಿಗೆ, ಕ್ರೀಡೆ, ಪ್ರವಾಸ, ಸದಾ ಕ್ರಿಯಾಶೀಲವಾಗಿರುವ ವೃತ್ತಿಗಳು, ಸಜ್ಜನರೊಡನೆ ಸಹವಾಸ ಇತ್ಯಾದಿ ಕೆಲವು ಬದಲಾವಣೆಗಳೊಂದಿಗೆ ನಾವು ರಾಜಿ ಮಾಡಿಕೊಂಡರೆ ಸಾವಿನ ತೀವ್ರತೆಯನ್ನು ಸಹಿಸುವಷ್ಟು ಮಟ್ಟಿಗೆ ಕಡಿಮೆ ಮಾಡಿಕೊಳ್ಳಬಹುದು. ಅದೇ ರೀತಿ ಮನೆಯಲ್ಲಿ ಒಂಟಿಯಾಗಿದ್ದಾಗ ನೆನಪುಗಳು ದಾಳಿ ಮಾಡುವುದು ಜಾಸ್ತಿ. ಸಾಧ್ಯವಿದ್ದವರು ಸಾಧ್ಯವಾದಷ್ಟು ಒಂಟಿಯಾಗಿ ಇರದಂತೆ ಅವಕಾಶಗಳನ್ನು ಸೃಷ್ಟಿ ಮಾಡಿಕೊಂಡರೆ ಒಳ್ಳೆಯದು. ಒಂದು ವೇಳೆ ಒಂಟಿ ಜೀವನವೇ ಅನಿವಾರ್ಯವಾದಾಗ ಭಗವದ್ಗೀತೆ, ರಾಮಾಯಣ, ಮಹಾಭಾರತ, ಭಾಗವತ ಮುಂತಾದ ಗ್ರಂಥ ಪಠಣ ಬಹಳ ಬಹಳ ಉಪಯೋಗವಾಗುತ್ತದೆ.  



 ಈ ಗ್ರಂಥಗಳ ಒಳ ಹೊಕ್ಕರೆ ನಮಗೆ ಒಂದು ಅದ್ಭುತ ಲೋಕದೊಡನೆ ವಿಶಿಷ್ಟವಾದ ಚೈತನ್ಯವನ್ನು ಇವು ಖಂಡಿತ ಕೊಡುತ್ತವೆ.  ಕೆಲವು ವಿಚಾರಗಳು ಅಥವಾ ಸತ್ಯಗಳು ಬದಲಾವಣೆ ಮಾಡಲು ಸಾಧ್ಯವೇ ಇಲ್ಲವೆಂದಾಗ ಅದರೊಡನೆ ರಾಜಿ ಮಾಡಿಕೊಳ್ಳಲೇಬೇಕಾದ ಅನಿವಾರ್ಯತೆ ಸೃಷ್ಟಿಯಾದಾಗ ವರ್ತಮಾನವನ್ನು ಒಪ್ಪಿಕೊಳ್ಳಲೇಬೇಕು, ಅಪ್ಪಿಕೊಳ್ಳಲೇಬೇಕು. ಮನೆಯಲ್ಲೊಂದು ಸಾವು ಸಂಭವಿಸಿದಾಗ ಉಂಟಾದ ಮೌನದ ಪ್ರಕ್ರಿಯೆ ಕಡಿಮೆಯಾಗಿ ಮತ್ತೆ ಮಾತುಗಳ ಆಗಮನಕ್ಕೆ ಬಹಳ ಕಾಲಾವಕಾಶ ಬೇಕಾಗಬಹುದು. ಅಲ್ಲಿವರೆಗೆ ಮೌನವೇ ಮಾತಾಡುತ್ತಿರುತ್ತದೆ. ಎಷ್ಟು ಬೇಗ ಮೌನ ಜಾಗ ಖಾಲಿ ಮಾಡುತ್ತದೊ ಅಷ್ಟು ಬೇಗ ನಾವು ಸಹಜತೆಯತ್ತ ಮರಳುತ್ತಿದ್ದೇವೆ ಎನ್ನಬಹುದು. ಹೇಗೆ ಚಳಿಯು ನಮ್ಮೊಂದಿಗಿರುವಾಗ ಬೆಂಕಿಯ ಸಾಂಗತ್ಯ ಹಿತವಾಗುತ್ತದೆ. ಅದೇ ರೀತಿಯಲ್ಲಿ ಬದುಕು ಪೂರಕವಾಗಿ ಬದುಕುತ್ತಿರುವಾಗ ನೆನಪೆಂಬುದು ಹಿತವಾಗಿ ಅಥವಾ ಅಪ್ಯಾಯಮಾನವಾಗಿರುತ್ತದೆ. 



ಯಾವಾಗ ಚಳಿಯ ಸಾಂಗತ್ಯ ದೂರವಾಯಿತೊ ಅಥವಾ ಚಳಿಯೇ ಇಲ್ಲವಾಯಿತೊ ಆವಾಗ ಬೆಂಕಿಯ ತೀವ್ರತೆ ನಮ್ಮನ್ನೇ ಸುಟ್ಟು ಬಿಡುತ್ತದೆ. ಅದೇ ರೀತಿ ಬದುಕಬೇಕಾದವರು ಬದಕನ್ನು ಬಿಟ್ಟು ಹೋದಾಗ ನೆನಪೆಂಬ ಬೆಂಕಿ ಸುಡಲು ಪ್ರಾರಂಭವಾಗುತ್ತದೆ. ವೈದ್ಯಕೀಯ ಭಾಷೆಯಲ್ಲಾದರೆ ಟೆನ್ಶನ್, ಡಿಪ್ರೆಶನ್, ಪೇನಿಕ್ ಇತ್ಯಾದಿ ಹಲವಾರು ಶಬ್ದಗಳಿವೆ ಎಲ್ಲದರ ಮೂಲ ಒಂದೇ ಆದರೂ ಸಂದರ್ಭಕ್ಕನುಗುಣವಾಗಿ ಬೇರೆ ಬೇರೆ ಅರ್ಥಗಳಿರಬಹುದು. ಅಂತು ಈ ವ್ಯಾಧಿಗೆ ಔಷಧಿ ಕೂಡ ನಮ್ಮ ಮನದಲ್ಲಡಗಿರುವುದು. ನನ್ನ ಸ್ವಂತ ಅನುಭವವನ್ನೇ ಹೇಳುವುದಾದರೆ ನಾನಿಷ್ಟನ್ನೆಲ್ಲ ಬರೆಯುತ್ತೇನೆ ಆದರೆ ಪ್ರಾಯೋಗಿಕವಾಗಿ ನನಗೆ ನನ್ನ ಹಂಡತಿಯ ನೆನಪುಗಳಿಂದ ಇನ್ನೂ ಹೊರಗೆ ಬರಲಾಗಲಿಲ್ಲ. 



ಪ್ರತಿಯೊಂದು ಗಳಿಗೆಯೂ ನೆನಪೆಂಬ ಬೆಂಕಿ ದಹಿಸುತ್ತಲೇ ಇರುತ್ತದೆ. ಆದರೆ ಉರಿಯನ್ನು ತಡೆದುಕೊಳ್ಳುವ ಅಭ್ಯಾಸವಾಗಿದೆಯೇ ಹೊರತು ಉರಿ ಕಡಿಮೆ ಆಗಿಲ್ಲ. ಆಗುವುದೂ ಇಲ್ಲ. ಆದರೆ ನನಗೆ ಓದು, ಬರವಣಿಗೆಯಂಥ ಹವ್ಯಾಸಗಳು ಬೆಂಕಿಯ ಕಾವಿಗೆ ಗೋಡೆ ಅಡ್ಡ ಬಂದಂತೆ ವರ್ತಿಸುತ್ತವೆ ಎನ್ನುವುದೇ ಸಮಾಧಾನ. ಮತ್ತೆ ಸತ್ಯವೆಂಬುದು ಸತ್ಯವೇ.  ಎಲ್ಲೊ ಒಂದು ಸ್ಮಶಾನದಲ್ಲಿ (ಬಹುಷ ಬಾಳೆ ಹೊನ್ನೂರಿನ ಪಕ್ಕದಲ್ಲಿ ಎಂಬ ನೆನಪು) ಒಳ ಹೋಗುವ ದ್ವಾರದಲ್ಲಿ ದೊಡ್ಡ ಅಕ್ಷರಗಳಲ್ಲಿ ಫಲಕವೊಂದನ್ನು ಹಾಕಿದ್ದಾರೆ. ಇದಕ್ಕೆ ಅದೆಷ್ಟು ಅರ್ಥವಿದೆ ಎಂದು ಅರ್ಥವಾದವರಿಗೆ ಗೊತ್ತಾಗುವುದು. ಅದು ಹೀಗಿದೆ 'ಇಂದು ನನಗೆ ನಾಳೆ ನಿನಗೆ' ಎಂದು. ಅಲ್ಲವೇ ಮತ್ತೆ ಅದೆಷ್ಟು ಅರ್ಥಪೂರ್ಣ.! 


-ಬಾಲಕೃಷ್ಣ ಸಹಸ್ರಬುದ್ಧೆ ಮುಂಡಾಜೆ



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top