ಬೆಂಗಳೂರು: ‘ರೆಸ್ಟೋರೆಂಟ್‍ಗಳ ಸೂಕ್ತ ನಿರ್ವಹಣೆ, ಮ್ಯಾನೇಜ್‍ಮೆಂಟ್ ವಿದ್ಯಾರ್ಥಿಗಳಿಗೆ ಕಲಿಸುವ ಪಾಠ ಬಹಳ ಮಹತ್ತರವಾದುದು. ಏಕೆಂದರೆ ಯಾವ ಸಂದರ್ಭದಲ್ಲಾದರೂ ತಪ್ಪುಗಳು ಘಟಿಸುವ ಸಾಧ್ಯತೆ ಇಲ್ಲಿ ಹೆಚ್ಚು. ಹಣದ ನಿರ್ವಹಣೆ, ಆಹಾರ ಪದಾರ್ಥಗಳ ಖರೀದಿ, ಖಾದ್ಯಗಳ ತಯಾರಿ, ವ್ಯಾಪಾರದ ಕಲೆ - ಹೀಗೆ ನಾನಾ ಘಟ್ಟಗಳಲ್ಲಿ ಎದುರಾಗುವ ಸಮಸ್ಯೆಗಳನ್ನು ಚಾಕಚಕ್ಯತೆಯಿಂದ ನಿವಾರಿಸುವ ಕೌಶಲ್ಯವನ್ನು ವಿದ್ಯಾರ್ಥಿಗಳು ರೂಢಿಸಿಕೊಳ್ಳುತ್ತಾರೆ. ಅದರಿಂದಲೇ ನಿಟ್ಟೆ ಸ್ಕೂಲ್ ಆಫ್ ಮ್ಯಾನೇಜ್‍ಮೆಂಟ್ ತನ್ನ ವಿದ್ಯಾರ್ಥಿಗಳಿಗೆ ವರ್ಷಕ್ಕೊಮ್ಮೆ ‘ನಿಟ್ಟೆ ಖಾನಾವಳಿ’ಶೀರ್ಷಿಕೆಯಡಿ ಆಹಾರ ಮೇಳವನ್ನು ಏರ್ಪಡಿಸಲು ಅವಕಾಶ ನೀಡುತ್ತಿದೆ. ಕಳೆದ ಮೂರು ವರ್ಷಗಳಿಂದ ನಡೆಯುತ್ತಿರುವ ಈ ವಾರ್ಷಿಕ ಆಹಾರ ಮೇಳ ದೇಶದಾದ್ಯಂತ ಮ್ಯಾನೇಜ್‍ಮೆಂಟ್ ತಜ್ಞರ ಮೆಚ್ಚುಗೆ ಗಳಿಸಿದೆ. ಅತ್ಯುತ್ತಮ ಆಹಾರ ಮಳಿಗೆಗೆ ಆಕರ್ಷಣೀಯ ನಗದು ಬಹುಮಾನವನ್ನು ನೀಡಲಾಗುತ್ತದೆ’, ಎಂದು ನಿಟ್ಟೆ ಸ್ಕೂಲ್ ಆಫ್ ಮ್ಯಾನೇಜ್‍ಮೆಂಟ್‍ನ ನಿರ್ದೇಶಕ ಡಾ. ಎಂ. ವೇಣುಗೋಪಾಲ್ ನುಡಿದರು.
ಬೆಂಗಳೂರಿನ ನಿಟ್ಟೆ ಕ್ಯಾಂಪಸ್‍ನಲ್ಲಿ ಆಯೋಜಿಸಿದ್ದ ‘ನಿಟ್ಟೆ ಖಾನಾವಳಿ-2024’ ಆಹಾರ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಹತ್ತಕ್ಕೂ ಅಧಿಕ ಸಂಖ್ಯೆಯ ಆಹಾರ ಮಳಿಗೆಗಳಲ್ಲಿ ಐಯಂಗಾರ್ ಪುಳಿಯೋಗರೆಯಿಂದ ಹಿಡಿದು ಹೈದರಾಬಾದ್ ಬಿರಿಯಾನಿವರೆಗೆ ಹತ್ತು ಹಲವು ರುಚಿಕರ ತಿನಿಸುಗಳು ಲಭ್ಯವಿದ್ದವು. ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಗ್ರಾಹಕರು ದಿನವಿಡೀ ತಮ್ಮ ನೆಚ್ಚಿನ ತಿನಿಸುಗಳನ್ನು ಸವಿದರು. ವಿಶೇಷ ಅತಿಥಿಯಾಗಿ ಆಗಮಿಸಿದ್ದ ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಎಚ್.ಸಿ. ನಾಗರಾಜ್ ಪ್ರತಿ ಆಹಾರ ಮಳಿಗೆಗೂ ಭೇಟಿ ನೀಡಿ ವಿದ್ಯಾರ್ಥಿಗಳ ಪರಿಶ್ರಮಕ್ಕೆ, ಪ್ರತಿಭೆಗೆ, ಸೌಹಾರ್ದ ನಡೆವಳಿಕೆಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಕಬ್ಬಿನ ಹಾಲು ತೆಗೆದ ನಂತರ ಸಿಗುವ ಸಿಪ್ಪೆಯಿಂದ ತಯಾರಿಸಿದ (ಜೈವಿಕ) ಬಿಸಾಡಬಹುದಾದ ತಟ್ಟೆ ಹಾಗೂ ಲೋಟಗಳನ್ನು ಆಹಾರ ಮಳಿಗೆಗಳಲ್ಲಿ ಬಳಸುತ್ತಿದ್ದದ್ದು ಎಲ್ಲರ ಗಮನ ಸೆಳೆಯಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ