ಮಂಗಳೂರು: ಶಿವಮೊಗ್ಗ ಯಶವಂತಪುರ ರೈಲಿನ ಮಹಿಳಾ ಬೋಗಿಯಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಬ್ರಾಹ್ಮಣ ಸಮಾಜದ ಅನ್ನಪೂರ್ಣ ರಾನಡೆ ಎನ್ನುವ ಮಹಿಳೆಯೊಬ್ಬರನ್ನು ಕೊಲೆ ಮಾಡಿ ದರೋಡೆ ನಡೆಸಿದ ಘಟನೆ ಜ.30 ರಂದು ನಡೆದಿತ್ತು.
ಈ ಘಟನೆಯನ್ನು ಕೇಂದ್ರ ಹಾಗೂ ರಾಜ್ಯ ಸರಕಾರ ಗಂಭೀರವಾಗಿ ಪರಿಗಣಿಸಬೇಕು. ಘಟನೆಗೆ ಸಂಬಂಧಿಸಿದಂತೆ ಸೂಕ್ತ ತನಿಖೆ ನಡೆಸಿ ಮೃತರ ಕುಟುಂಬಕ್ಕೆ ಸಂಬಂಧಪಟ್ಟ ಇಲಾಖೆಯಿಂದ ಸೂಕ್ತ ಪರಿಹಾರ ಒದಗಿಸಿ ಕೊಡುವಂತೆ ಆಗ್ರಹಿಸಿ ಕೇಂದ್ರ ರೈಲ್ವೆ ಮಂತ್ರಿ, ಪ್ರಧಾನ ಮಂತ್ರಿ ಹಾಗೂ ರಾಜ್ಯಪಾಲರಿಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರ ಮೂಲಕ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ, ದಕ್ಷಿಣ ಕನ್ನಡ ಜಿಲ್ಲಾ ಘಟಕದ ವತಿಯಿಂದ ಇತ್ತೀಚೆಗೆ ಮನವಿ ಸಲ್ಲಿಸಲಾಯಿತು.
ಅನ್ನಪೂರ್ಣ ರಾನಡೆಯವರು ಅರಣ್ಯ ಇಲಾಖೆಯ ಬೆಂಗಳೂರು ಕಚೇರಿಯಲ್ಲಿ ಸ್ಟೆನೋಗ್ರಾಫರ್ ಆಗಿದ್ದರು. ಶಿವಮೊಗ್ಗದಲ್ಲಿ ಇಲಾಖೆ ನಡೆಸಿದ ಸ್ಟೆನೋಗ್ರಾಫರ್ ಪರೀಕ್ಷೆ ಮೇಲ್ವಿಚಾರಕಿಯಾಗಿ ಕರ್ತವ್ಯ ನಿರ್ವಹಿಸಿ, ಬೆಂಗಳೂರಿಗೆ ಹಿಂದಿರುಗುವ ವೇಳೆ ಘಟನೆ ನಡೆದಿತ್ತು.
ಘಟನೆ ನಡೆದು ಒಂದು ವಾರ ಕಳೆದರೂ ದುಷ್ಕರ್ಮಿಗಳನ್ನು ಪತ್ತೆಹಚ್ಚಲು ಪೊಲೀಸ್ ಇಲಾಖೆ ವಿಫಲವಾಗಿದೆ. ಮಹಿಳೆಯರಿಗೆ ಮಹಿಳಾ ಬೋಗಿಯಲ್ಲಿ ಪ್ರಯಾಣ ಎಷ್ಟು ಸುರಕ್ಷಿತ ಎನ್ನುವ ಆತಂಕ ಮೂಡಿದೆ. ಇಂತಹ ಘಟನೆಗಳು ಮರುಕಳಿಸಿದಂತೆ ಎಚ್ಚರ ವಹಿಸಿ ಮಹಿಳಾ ಪ್ರಯಾಣಿಕರಿಗೆ ಸೂಕ್ತ ಭದ್ರತೆ ಒದಗಿಸಬೇಕೆಂದು ಮನವಿಯಲ್ಲಿ ತಿಳಿಸಲಾಗಿದೆ.
ಜಿಲ್ಲಾ ಘಟಕದ ಪ್ರಧಾನ ಸಂಚಾಲಕ ಶ್ರೀಧರ ಹೊಳ್ಳ, ರಾಜ್ಯ ಸಂಘಟನೆಯ ಉಪಾಧ್ಯಕ್ಷ ನ್ಯಾಯವಾದಿ ಮಹೇಶ್ ಕಜೆ, ರಾಜ್ಯ ಸಂಘಟನಾ ಕಾರ್ಯದರ್ಶಿ ಪೊಳಲಿ ಗಿರಿ ಪ್ರಕಾಶ್ ತಂತ್ರಿ, ರಾಜ್ಯ ಕಾರ್ಯಕಾರಣಿ ಸದಸ್ಯ ಶ್ರೀಕರ ದಾಮ್ಲೆ, ಸಮತಾ ಬಳಗದ ಅಧ್ಯಕ್ಷೆ ವಂದನ ಸುರೇಶ್, ಜಿಲ್ಲಾ ಘಟಕದ ಸಂಚಾಲಕರಾದ ರಾಜೇಂದ್ರ ಕಲ್ಪಾವಿ, ನ್ಯಾಯವಾದಿ ಪುರುಷೋತ್ತಮ ಭಟ್, ಗೌರವ ಸಲಹೆಗಾರ ಸಿ ಎ ಆರ್. ಡಿ ಶಾಸ್ತ್ರಿ ಉಪಸ್ಥಿತರಿದ್ದರು.
ಮನವಿಯನ್ನು ಆಲಿಸಿದ ಜಿಲ್ಲಾಧಿಕಾರಿಯವರು ತಾನು ಸಾಕಷ್ಟು ಬಾರಿ ಅದೇ ರೈಲಿನಲ್ಲಿ ಸಂಚರಿಸಿದ ಅನುಭವ ಹಂಚಿಕೊಂಡರು ಅಲ್ಲದೆ ನಿಯೋಗದ ಎಲ್ಲಾ ವರ್ಗದ ಬ್ರಾಹ್ಮಣ ಪಂಗಡಗಳ ಪರಿಚಯ ಮಾಡಿಕೊಂಡರು. ಸಲ್ಲಿಸಿದ ಮನವಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸಿ ನ್ಯಾಯ ದೊರಕಿಸಿಕೊಡುವ ಭರವಸೆ ನೀಡಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ