ಶ್ರೀರಾಮ ಕಥಾ ಲೇಖನ ಅಭಿಯಾನ- 60: ರಾಮಾಯಣದಲ್ಲಿ ಸಂವಹನ ಕೌಶಲ್ಯ

Upayuktha
0

ಚಿತ್ರ ಕೃಪೆ: ಪ್ರೊ. ಜಿ. ವೆಂಕಟಸುಬ್ಬಯ್ಯ ಸಂಪಾದಿತ ಸಚಿತ್ರ ರಾಮಾಯಣ ದರ್ಶನ


ಅವಿನಾಶ್ ಭಟ್ ಪೆರ್ಮುಖ

ಸಂವಹನ ಅಂದರೆ ಒಬ್ಬ ವ್ಯಕ್ತಿಯ ಮನಸ್ಸಿನಲ್ಲಿರುವ ವಿಚಾರವನ್ನು ಅಥವಾ ಭಾವನೆಯನ್ನು ಪರಿಣಾಮಕಾರಿಯಾಗಿ ಇನ್ನೊಬ್ಬ ವ್ಯಕ್ತಿಗೆ ಮನದಟ್ಟು ಮಾಡುವ ಪ್ರಕ್ರಿಯೆ. ರಾಮಾಯಣದಲ್ಲಿರುವ ಸಂವಹನ ಕೌಶಲ್ಯವ ಬಗ್ಗೆ ಬೆಳಕು ಹರಿಸುವ ಮೊದಲು, ಸ್ವತಃ ರಾಮಾಯಣವೇ ಒಂದು ಅದ್ಭುತವಾದ ಸಂವಹನ ಕಲೆಯ ಆರಂಭ ಅನ್ನುವುದೇ ವಿಶೇಷ. ರಾಮಾಯಣ ರಚನೆಯಾದ ಕಾಲಘಟ್ಟದಲ್ಲಿ ಅಕ್ಷರಗಳೇ ರೂಪುಗೊಂಡಿರಲಿಲ್ಲ. ಹೀಗಾಗಿ ಇಡೀ ರಾಮಾಯಣದ 24000 ಶ್ಲೋಕಗಳು ವ್ಯಕ್ತಿಯಿಂದ ವ್ಯಕ್ತಿಗೆ, ಗುರುವಿನಿಂದ ಶಿಷ್ಯನಿಗೆ, ತಲೆತಲಾಂತರಗಳವರೆಗೆ ಮೌಖಿಕವಾಗಿಯೇ ಹರಿದು ಬಂದಿದೆ. ಪ್ರಾಯಶಃ ಆದಿಕವಿ ವಾಲ್ಮೀಕಿಯವರು ರಾಮಾಯಣವನ್ನು ಅಷ್ಟು ಅದ್ಭುತವಾಗಿ ಮತ್ತು ಅನುಷ್ಟುಪ್ನಂತಹ ಸುಂದರ ಛಂದಸ್ಸಿನಲ್ಲಿ ಬರೆದದ್ದೇ ಕಾರಣವಿರಬಹುದು. ಪದ್ಯರೂಪದಲ್ಲಿ ಇದ್ದದ್ದು ಯಾವಾಗಲೂ ನೆನಪಿಡಲು ಸುಲಭ, ಅದೇ ಗದ್ಯವಾಗಿದ್ದರೆ ತುಂಬಾ ಕಠಿಣವಾಗುತ್ತಿತ್ತು, ಎಷ್ಟೋ ವಿಚಾರಗಳು ಇಂದಿನವರೆಗೆ ತಲುಪುತ್ತಲೇ ಇರಲಿಲ್ಲ. 


ರಾಮಾಯಣದ ಒಳಗಿನ ಕೆಲವೊಂದು ರಸವತ್ತಾದ ಸಂವಹನ ಕೌಶಲ್ಯದ ಪ್ರದರ್ಶನದ ಬಗ್ಗೆ ಬೆಳಕು ಚೆಲ್ಲುವ ಒಂದು ಸಣ್ಣ ಪ್ರಯತ್ನ ಮಾಡೋಣ. ಮೊದಲಿಗೆ ನಾರದರು ಸೂಕ್ಷ್ಮವಾಗಿ ರಾಮನ ಕಥೆಯನ್ನು ವಾಲ್ಮೀಕಿ ಮಹರ್ಷಿಗಳಿಗೆ ಹೇಳುತ್ತಾರೆ. ಇದರಿಂದಾಗಿ ವಾಲ್ಮೀಕಿಯ ಆಸಕ್ತಿ ಕೆರಳಿದರೂ, ರಾಮಾಯಣದಂತಹ ಮಹಾನ್ ಕೃತಿ  ರಚಿಸುವಷ್ಟು ಗಟ್ಟಿಯಾಗಿರಲಿಲ್ಲ. ಆದರೆ ಯಾವಾಗ ಬೇಡನೊಬ್ಬ ಜೋಡಿ ಕ್ರೌಂಚ ಪಕ್ಷಿಗಳಲ್ಲಿ ಒಂದನ್ನು ಕೊಂದನೋ, ವಾಲ್ಮೀಕಿಯವರ ಒಳಗೊಬ್ಬ ಆದಿಕವಿ ಜನ್ಮತಾಳಿದ. ವಾಲ್ಮೀಕಿಯವರು ತಮ್ಮ ಪೂರ್ವಾಶ್ರಮದಲ್ಲಿ ಸ್ವತಃ ಬೇಡನಾಗಿದ್ದು, ಬೇಟೆಯಾಡುವುದು ಬೇಡನ ಸಹಜ ಧರ್ಮ ಅನ್ನುವ ಅರಿವಿದ್ದೂ ಕ್ರೌಂಚಪಕ್ಷಿಯ ವಿರಹವನ್ನು ಕಂಡು, ನೆನೆದು ದುಃಖಿತರಾಗುತ್ತಾರೆ. ಆಗ ಆ ಆಕ್ರೋಶದಲ್ಲಿ ರಚನೆಯಾದದ್ದೇ ಮಾನಿಷಾದ. ರಾಮಾಯಣದ ರಚನೆಗೆ ಇದೇ ನಾಂದಿಯಾಯಿತು. ಯಾವುದೇ ಸಂವಹನ ಪರಿಣಾಮಕಾರಿಯಾಗಲು ಕೇಳುಗನಿಗೂ ಅದು ಅನುಭವಕ್ಕೆ ಬರಬೇಕು.


ಇಡೀ ರಾಮಾಯಣದಲ್ಲಿ ಅತ್ಯದ್ಭುತ ಸಂವಹನ ಕೌಶಲ್ಯ ತೋರಿಸಿದವನು ಅಂದರೆ ಅದು ಹನುಮಂತನೇ ಸರಿ. ಸ್ವತಃ ಶ್ರೀರಾಮನೇ ಸುಂದರಕಾಂಡದಲ್ಲಿ ಹನುಮಂತನ ವಾಕ್ಚಾತುರ್ಯವನ್ನು ಮನತುಂಬಿ ಹೊಗಳುತ್ತಾನೆ. “ಕೊಲ್ಲಲು ಕತ್ತಿಯನ್ನೆತ್ತಿದ ಶತ್ರುವೂ ಕೂಡ ಹನುಮಂತನ ಮಾತನ್ನು ಕೇಳಿದರೆ ಕತ್ತಿ ಕೆಳಗಿಟ್ಟು ಸ್ನೇಹಹಸ್ತ ಚಾಚುತ್ತಾನೆ. ಸಕಲ ವೇದ, ವ್ಯಾಕರಣವನ್ನು ಸರಿಯಾಗಿ ಅಭ್ಯಸಿಸಿದವರ ಮಾತಿನಂತೆ ತೋರುತ್ತದೆ ಹನುಮಂತನ ಮಾತು. ಇಂತಹ ಮಂತ್ರಿಯನ್ನು ಪಡೆದುದು ಸುಗ್ರೀವನ ಅದೃಷ್ಟ” ಅಂತ ರಾಮನ ಕೈಯಿಂದಲೇ ಪ್ರಮಾಣಪತ್ರ ಪಡೆದವನಲ್ಲವೇ ಹನುಮಂತ. ರಾಮ ಲಕ್ಷ್ಮಣರು ಹನುಮಂತನನ್ನು ಮೊದಲು ಭೇಟಿಯಾದ ಪ್ರಸಂಗ ಬಹಳ ರಸವತ್ತಾಗಿದೆ. ಹನುಮಂತನಿಗೆ ರಾಮ ಲಕ್ಷ್ಮಣರನ್ನು ಕಂಡೊಡನೆಯೇ ಪೂಜ್ಯಭಾವನೆ ಮೂಡಿತ್ತು, ಆದರೆ ಸುಗ್ರೀವನಿಗೆ ಸಂಶಯ ಕಾಡಿತ್ತು. ಅಣ್ಣ ವಾಲಿಯಿಂದ ಪದೇ ಪದೇ ಏಟು ತಿಂದ ಪರಿಣಾಮ, ಎಲ್ಲವನ್ನೂ ಸಂಶಯ ದೃಷ್ಟಿಯಿಂದ ನೋಡುವಂತೆ ಮಾಡಿತ್ತು. ಸುಗ್ರೀವನ ಆಶಯದಂತೆ ಹನುಮಂತ ರಾಮಲಕ್ಷ್ಮಣರ ಭೇಟಿಗೆ ತೆರಳುವಾಗ ಭಿಕ್ಷುವಿನ ವೇಷ ಧರಿಸಿ ಹೋದ. ಪ್ರಾಯಶಃ ಕೋತಿ ಚಂಚಲತೆಯ ಪ್ರತೀಕ, ಹೀಗಾಗಿ ತನ್ನನ್ನು ಗಂಭೀರವಾಗಿ ತೆಗೆದುಕೊಳ್ಳಲಾರರು ಅನ್ನುವ ಸಂಶಯ ಕಾಡಿದ್ದಿರಬಹುದು. 


ಭೇಟಿಗೆ ಹೋಗುವಾಗ ಹನುಮಂತನಿಗೆ ಸುಗ್ರೀವನ ಸಂಶಯ ನಿವಾರಣೆ ಹೊಣೆಗಾರಿಕೆ ಇದ್ದದ್ದಾದರೂ, ರಾಮ ಲಕ್ಷ್ಮಣರೊಂದಿಗೆ ಸ್ನೇಹ ಸಂಪಾದನೆಯ ಉದ್ದೇಶವೇ ಮುಖ್ಯವಾಗಿತ್ತು. ಹೀಗಾಗಿ ಅದಕ್ಕೆ ತಕ್ಕಂತೆ ತನ್ನ ಮಾತುಗಳನ್ನು ಪ್ರದರ್ಶಿಸಿದ. ಮೊದಲಿಗೆ ಹನುಮಂತ ರಾಮಲಕ್ಷ್ಮಣರ ದೈಹಿಕ ಲಕ್ಷಣ, ರಾಜ ಕಳೆಯನ್ನು ಗುರುತಿಸಿ ಗುಣಗಾನ ಮಾಡುತ್ತಾನೆ. ಆದರೆ ಆ ಗುಣಗಾನದಲ್ಲಿ ಉತ್ಪ್ರೇಕ್ಷೆ ಇಲ್ಲದೆ, ಸಹಜವಾದದ್ದನ್ನೇ ಹೇಳುತ್ತಾನೆ. ಅತೀ ಉತ್ಸಾಹದಲ್ಲಿ ಉತ್ಪ್ರೇಕ್ಷಿಸಿದ್ದಿದ್ದರೆ ಕಪಟವೆನಿಸುತ್ತಿತ್ತು. ಆ ಪ್ರಜ್ಞೆ ಹನುಮಂತನಿಗೆ ಸದಾ ಇತ್ತು. “ಎಲ್ಲಾ ವಿಧವಾದ ಆಭರಣ ಧರಿಸಲು ಯೋಗ್ಯವಾದ ತೋಳುಗಳು, ಆದರೂ ಸಿಂಗರಿಸಿಕೊಂಡಿಲ್ಲ. ಚಿನ್ನದಂತಹ ಕಾಂತಿಯುತ ಮೈ, ಆದರೂ ನಾರುಮಡಿ ತೊಟ್ಟಿರುವಿರಿ. ರಾಜರ್ಷಿಗಳಂತೆ ಕಂಗೊಳಿಸುತ್ತಿರುವಿರಿ. ಇಂದ್ರನ ಧನುಸ್ಸಿನಂತಹ ಧನುಸ್ಸು, ಆನೆ ಸೊಂಡಿಲಿನಂತಹ ತೋಳುಗಳು ನಿಮ್ಮದು. ನಿಮ್ಮ ಪರಿಚಯವನ್ನು ತಿಳಿಸುವಿರೇ?” ಎಂದು ವಿನಂತಿಸುತ್ತಾನೆ. ಹನುಮಂತನ ಮಾತುಗಳಿಗೆ ಸ್ವತಃ ಶ್ರೀ ರಾಮನೇ ಮಾರುಹೋಗುತ್ತಾನೆ. ಅಲ್ಲಿ ಆರಂಭವಾದ ಅವರ ಬಾಂಧವ್ಯ ಕೊನೆಯವರೆಗೂ ಶಾಶ್ವತವಾಗಿತ್ತು. ಇಂದಿಗೂ ರಾಮನನ್ನು ಬಿಟ್ಟು ಹನುಮನಿಲ್ಲ, ಹನುಮನನ್ನು ಬಿಟ್ಟು ರಾಮನಿಲ್ಲ ಅನ್ನುವಷ್ಟು ಗಟ್ಟಿಯಾಗಿದೆ.


ಇನ್ನೊಂದು ಅತೀ ಸೂಕ್ಷ್ಮ ಪ್ರಸಂಗ ಚೂಡಾಮಣಿಯ ಸಂದರ್ಭದ್ದು. ಹನುಮಂತ ಈ ಪ್ರಸಂಗವನ್ನು ನಿರ್ವಹಿಸಿದ ರೀತಿ ಜಗತ್ತಿಗೆಲ್ಲ ಪಾಠ. ಹನುಮಂತ ಸೂಕ್ಷ್ಮರೂಪಿಯಾಗಿ ಅಶೋಕವನದ ಮರದ ಮೇಲೆ ಕೂತಿದ್ದಾನೆ. ರಾವಣ ಆಗ ತಾನೇ ಸೀತೆಯನ್ನು ಪೀಡಿಸಿ, ತನ್ನನ್ನು ಒಪ್ಪಿಕೊಳ್ಳಲು ಎರಡು ತಿಂಗಳ ಗಡುವನ್ನು ನೀಡಿ ಹೋಗಿದ್ದಾನೆ. ರಾಕ್ಷಸಿಯರೂ ಸೀತೆಯನ್ನು ಮಾನಸಿಕವಾಗಿ ಪೀಡಿಸಿ ಹೋಗಿದ್ದಾರೆ. ಸೀತೆ ಆತ್ಮಹತ್ಯೆ ಮಾಡಿಕೊಳ್ಳುವ ಯೋಚನೆಯಲ್ಲಿ ಇದ್ದಾಳೆ. ಹನುಮಂತ ಈ ಸಂದರ್ಭದಲ್ಲಿ ಕಾರ್ಯಪ್ರವೃತ್ತನಾಗಲೇ ಬೇಕು, ಇಲ್ಲವಾದರೆ ಎಲ್ಲರ ಸಕಲ ಪ್ರಯತ್ನಗಳೂ ಅರ್ಥಹೀನವಾಗುತ್ತದೆ. ಹೀಗಾಗಿ ಹೋಗಿ ಸೀತೆಯನ್ನು ಮಾತನಾಡಿಸಲು ಯೋಚಿಸುತ್ತಾನೆ. ಪಂಡಿತರು ಮಾತನಾಡುವ ಶುದ್ಧ ಸಂಸ್ಕೃತದಲ್ಲಿ ಸೀತೆಯನ್ನು ಮಾತನಾಡಲು ನಿರ್ಧರಿಸುತ್ತಾನೆ. ತತ್ಕ್ಷಣ ಮುಂದಿರುವ ಅಪಾಯದ ಅರಿವಾಗುತ್ತದೆ. ಸದಾ ರಾಕ್ಷಸರಿಂದ ಪೀಡನೆಗೆ ಒಳಪಡುವ ಸೀತೆಯ ಮುಂದೆ ತಾನು ಹೋದರೆ ಸೀತೆ ಹೆದರಿ ಕಿರುಚಿಕೊಳ್ಳುವ ಸಾಧ್ಯತೆಯೇ ಅಧಿಕ. ಸೀತೆ ಕಿರುಚಿಕೊಂಡರೆ ರಾಕ್ಷಸರಿಗೆಲ್ಲ ತಾನು ಬಂದಿರುವುದು ತಿಳಿದು ಯುದ್ಧಸಂಭವವಿದೆ. ಯುದ್ಧದಲ್ಲಿ ಜಯಾಪಜಯಗಳು ಅನಿಶ್ಚಿತ. ಹೀಗಾಗಿ ತಾನು ಈ ಸಮಯದಲ್ಲಿ ಸೀತೆಯನ್ನು ಮಾತನಾಡಿಸುವುದು ಅಪಾಯಕಾರಿ. ಹಾಗೆಂದು ಮಾತನಾಡಿಸದೇ ಇದ್ದರೆ ಸೀತೆಯ ಜೀವಹಾನಿಯಾದೀತು. ಅಂತಹ ಸೂಕ್ಷ್ಮ ಸಂದರ್ಭ. ಹೀಗಾಗಿ ಹನುಮಂತ ಸೀತೆಯನ್ನು ನೇರವಾಗಿ ಮಾತನಾಡಿಸುವ ಬದಲು ಬೇರೆಯದೇ ದಾರಿಯನ್ನು ಹುಡುಕಿಕೊಳ್ಳುತ್ತಾನೆ. ಸೀತೆಗಷ್ಟೇ ಕೇಳಿಸುವಂತೆ ರಾಮಕಥೆಯನ್ನು ತನ್ನಷ್ಟಕ್ಕೇ ಹಾಡಲು ಶುರುಮಾಡುತ್ತಾನೆ. ಆ ಕ್ಷಣದಲ್ಲಿ ಹನುಮಂತ ತೋರಿಸಿದ ಸಮಯಪ್ರಜ್ಞೆ ಅತ್ಯಮೂಲ್ಯವಾದದ್ದು. ರಾಮಕಥೆಯನ್ನು ಕೇಳುತ್ತಲೇ ಸೀತೆಗೆ ಹೋದ ಪ್ರಾಣ ಬಂದಂತಾಗುತ್ತದೆ. ಆದರೂ ಸೀತೆಯ ಮನಸ್ಸಲ್ಲಿ ಇದು ರಾವಣನ ಕುತಂತ್ರವಿರಬಹುದೆನ್ನುವ ಸಂಶಯ ಮೂಡದೇ ಇರಲಿಲ್ಲ. ಹೀಗಾಗಿ ಮುಂದಿನ ಹನುಮಂತನ ಮಾತುಗಳೂ ಕೂಡ ಅಷ್ಟೇ ಸಮಯಪ್ರಜ್ಞೆಯಿಂದ ಕೂಡಿದ್ದು. ಹನುಮಂತನಿಗೆ ಆಕೆ ಸೀತೆಯೆಂದು ಗೊತ್ತಿದ್ದರೂ ನೇರವಾಗಿ ಸೀತೆಯೆಂದು ಸಂಬೋಧಿಸಲು ಹೋಗಲಿಲ್ಲ. ನೇರವಾಗಿ ಆಕೆಯನ್ನು ಸೀತೆಯೆಂದೇ ಗುರುತಿಸಿದ್ದರೆ, ಹನುಮಂತ ರಾವಣನ ಕಡೆಯವನಿರಬಹುದೆಂಬ ಸೀತೆಯ ಸಂಶಯ ದೃಢವಾಗುತ್ತಿತ್ತು. ಹೀಗಾಗಿ ಹನುಮಂತ “ ನಿಷ್ಕಳಂಕಳಾಗಿ ಶೋಭಿಸುತ್ತಿರುವೆ, ಆದರೂ ದುಃಖತಪ್ತಳಾಗಿರುವೆ. ಚಂದ್ರನನ್ನು ತೊರೆದ ರೋಹಿಣಿಯೇ ನೀನು? ಅಥವಾ ವಸಿಷ್ಠರಿಂದ ತಿರಸ್ಕೃತಳಾದ ಅರುಂಧತಿಯೇ? ನಿನ್ನಲ್ಲಿರುವ ಶುಭಲಕ್ಷಣಗಳನ್ನು ಕಂಡರೆ ನೀನೊಬ್ಬ ಚಕ್ರವರ್ತಿಯ ಪಟ್ಟದರಸಿಯಂತೆ ತೋರುತ್ತಿರುವೆ. ಇಂತಹ ಲಕ್ಷಣವಂತೆ ಈ ವೇಷಭೂಷಣದಲ್ಲಿ ರಾವಣನ ನಾಡಿನಲ್ಲಿ ಇರಬೇಕಾದರೆ ನೀನು ರಾವಣನಿಂದ ಅಪಹರಿಸಲ್ಪಟ್ಟ ಸೀತಾದೇವಿಯೇ ಇರಬೇಕು. ನೀನು ಪ್ರಭು ಶ್ರೀರಾಮಚಂದ್ರನ ಪ್ರಿಯಮಡದಿ ಸೀತಾದೇವಿಯೇ ಆಗಿದ್ದರೆ ನಿನಗೆ ಮಂಗಳವಾಗಲಿ” ಅನ್ನುತ್ತಾನೆ. ಹೀಗೆ ಪ್ರತೀ ಮಾತನ್ನೂ ಅಳೆದು ತೂಗಿ, ಸೀತೆಗೆ ಯಾವ ಕಾರಣಕ್ಕೂ ಹನುಮಂತನ ಬಗ್ಗೆ ತಪ್ಪು ಅಭಿಪ್ರಾಯ ಬಾರದಂತೆ ನಡೆದುಕೊಳ್ಳುತ್ತಾನೆ. ಅಲ್ಲಿಂದ ತೆರಳುವ ಮುನ್ನ ಇಡೀ “ರಾಮನ ಸೇನೆಯಲ್ಲಿ ನಾನೇ ಅತೀ ಕಡಿಮೆ ವೀರನು. ಉಳಿದವರೆಲ್ಲ ನನ್ನಿಂದ ಬಲಶಾಲಿಗಳೇ” ಅಂತ ಹೇಳುವ ಮೂಲಕ ಸೀತೆಯಲ್ಲಿ ಭವಿಷ್ಯದ ಬಗೆಗೆ ವಿಶ್ವಾಸ ಮೂಡಿಸಿ ತೆರಳುತ್ತಾನೆ. 


ಹನುಮಂತ ಈ ರೀತಿ ಹಲವು ಸಂದರ್ಭದಲ್ಲಿ ತೋರಿದ್ದ ಸಂವಹನ ಕೌಶಲ್ಯದ ಕಾರಣದಿಂದ ಮತ್ತು ತನಗೆ ಅತ್ಯಂತ ಪ್ರಿಯನಾದ ಕಾರಣದಿಂದ, ಭರತನಿಗೆ ರಾಮ ಹಿಂದಿರುಗುವ ವಿಷಯವನ್ನು ತಿಳಿಸುವ ಹೊಣೆಗಾರಿಕೆಯೂ ಹನುಮಂತನ ಹೆಗಲಿಗೆಯೇ ಬಿತ್ತು. ಹಲವು ವರ್ಷಗಳ ಅಧಿಕಾರದ ಕಾರಣದಿಂದಲೋ, ಅಥವಾ ಬೇರೆಯವರ ಪ್ರಭಾವಕ್ಕೆ ಒಳಗಾಗಿಯೋ ಭರತ ಬದಲಾಗಿದ್ದರೆ ಅನ್ನುವ ಸಂಶಯ ರಾಮನಿಗೆ ಕಾಡಿತ್ತು. ಹೀಗಾಗಿ ಹನುಮಂತನನ್ನು ಕರೆದು “ ಭರತನಿಗೆ ನಾವೆಲ್ಲರು ಸಕ್ಷೇಮವಾಗಿ ಹಿಂದಿರುಗುತ್ತಿರುವ  ಸಮಾಚಾರವನ್ನು ತಿಳಿಸು. ಸೂಕ್ಷ್ಮವಾಗಿ ಭರತನ ಮುಖಭಾವ, ಹಾವಭಾವ, ನಡವಳಿಕೆಯನ್ನು ಗಮನಿಸು. ನಾವೆಲ್ಲ ಹಿಂದಿರುಗುವುದು ಭರತನಿಗೆ ಸಹಮತವಿಲ್ಲದಂತೆ ತೋರಿದರೆ ಆದಷ್ಟು ಬೇಗ ಹಿಂದಿರುಗಿ ವಿಷಯವನ್ನು ನನ್ನ ಗಮನಕ್ಕೆ ತಾ” ಅನ್ನುತ್ತಾನೆ. ಹನುಮಂತನೂ ಭರತನ ಬಳಿಗೆ ಹೋಗಿ ವನವಾಸದ ಕಾಲಘಟ್ಟದಲ್ಲಿ ನಡೆದ ವೃತ್ತಾಂತವನ್ನೆಲ್ಲ ಸೂಕ್ಷ್ಮವಾಗಿ ಭರತನಿಗೆ ತಿಳಿಸಿ ಭರತನಲ್ಲಿ ಯಾವ ಕಳಂಕವೂ ಇಲ್ಲವೆಂಬುದನ್ನು ಗಮನಿಸುತ್ತಾನೆ. ಹನುಮಂತನು ಭರತನ ಒತ್ತಾಸೆಯ ಮೇರೆಗೆ ಪೂರ್ಣವೃತ್ತಾಂತವನ್ನು ವಿವರವಾಗಿ ತಿಳಿಸುವಾಗಲೂ ಕೈಕೇಯಿಯು ವರಪಡೆದಿದ್ದ ಘಟನೆಯಿಂದಲೇ ಹೇಳುತ್ತಾನೆ. ಭರತ ಅಯೋಧ್ಯಗೆ ಹಿಂದಿರುವಷ್ಟರಲ್ಲಿ ರಾಮ, ಸೀತೆ, ಲಕ್ಷ್ಮಣರು ವನವಾಸಕ್ಕೆ ತೆರಳಿ ಆಗಿತ್ತು, ದಶರಥನ ಪ್ರಾಣಪಕ್ಷಿಯೂ ಹಾರಿ ಹೋಗಿತ್ತು. ಹೀಗಾಗಿ ಭರತನಿಗೆ ರಾಮ ವನವಾಸಕ್ಕೆ ಹೋಗಿದ್ದ ಕಾರಣಗಳ ಬಗ್ಗೆ ಅಲ್ಲಿ, ಇಲ್ಲಿ ಕೇಳಿದ ವಿವರಗಳಷ್ಟೇ ಲಭ್ಯವಿತ್ತೇ ಹೊರತು ಅಧಿಕೃತ ಪೂರ್ಣ ಮಾಹಿತಿ ಲಭ್ಯವಿದ್ದ ಬಗ್ಗೆ ಹನುಮಂತನಿಗೆ ಸಂಶಯವಿದ್ದೀತು. ಈ ಕಾರಣದಿಂದ ಹನುಮಂತ ಪೂರ್ಣ ವಿವರವನ್ನು ಭರತನ ಮುಂದಿಡುತ್ತಾನೆ. ಇಲ್ಲೂ ಹನುಮಂತ ತನ್ನ ಸಂವಹನ ಕೌಶಲ್ಯದಲ್ಲಿ ಪ್ರಬುದ್ಧತೆಯನ್ನೇ ತೋರಿಸುತ್ತಾನೆ.


ಇನ್ನೊಂದು ಹೃದಯಂಗಮ ಸನ್ನಿವೇಶ ಭರತಾಗಮನದ ಸಮಯದ್ದು. ವನವಾಸಕ್ಕೆ ತೆರಳಿದ್ದ ರಾಮನನ್ನು ಪುನಃ ಅಯೋಧ್ಯೆಗೆ ಕರೆದೊಯ್ಯುವ ದೃಢ ಸಂಕಲ್ಪದೊಂದಿಗೆ ಭರತ ಬಂದಿದ್ದ. ರಾಮನನ್ನು ಒಪ್ಪಿಸಿ ಕರೆದೊಯ್ಯಲು ಚಿನ್ನಲೇಪಿತ ಪಾದುಕೆಯನ್ನೇ ತಂದಿದ್ದ. ನೀನು ಮಾತುಕೊಟ್ಟ ದಶರಥನೇ ಈಗಿಲ್ಲ. ನಮ್ಮ ವಂಶದ ಪದ್ದತಿಯಂತೆ ಹಿರಿಯ ಮಗನೇ ರಾಜ್ಯಾಡಳಿತ ನಡೆಸಬೇಕೆಂಬ ನಿಯಮವಿದೆ. ಹೀಗಾಗಿ ನೀನು ಅಯೋಧ್ಯೆಗೆ ಬಾರೆಂದು ವಿನಂತಿಸಿದ್ದ. ರಾಮ ಅಯೋಧ್ಯೆಗೆ ಹಿಂದಿರುಗುವವರೆಗೆ ಪರ್ಣಕುಟೀರದ ಬಾಗಿಲಲ್ಲೇ ದರ್ಬೆಯನ್ನು ಹಾಸಿ ನಿರಾಹಾರ ವೃತಕ್ಕೆ ಕೂತಿದ್ದ. ಅಂತಹ ಭರತನ ಮನವೊಲಿಸಲು ರಾಮನಂತಹ ರಾಮನಿಗೆ ಮಾತ್ರ ಸಾಧ್ಯ. ಪಿತೃವಿಯೋಗ, ಯಾರ ಕಾರಣಕ್ಕೆ ರಾಮ ವನವಾಸ ಕೈಗೊಂಡನೋ ಸ್ವತಃ ಆ ಭರತನೇ ಕಾಲಬುಡದಲ್ಲಿ ಬಿದ್ದು ಬೇಡಿಕೊಳ್ಳುತ್ತಿದ್ದಾನೆ, ಪುರಜನರು, ಋಷಿಮುನಿಗಳು ಒಕ್ಕೊರಲಿನಿಂದ ರಾಮನನ್ನು ಹಿಂದಿರುಗಿಸುವಂತೆ ಬೇಡಿಕೊಳ್ಳುತ್ತಿದ್ದಾರೆ. ರಾಮ ಅಯೋಧ್ಯೆಗೆ ಹಿಂತಿರುಗಲು ಎಲ್ಲವೂ ಅನುಕೂಲಕರವೇ ಆಗಿದ್ದಿತು. ಆದರೆ ರಾಮ ಒಮ್ಮೆ ಕೊಟ್ಟ ಮಾತಿಗೆ ತಪ್ಪಲಾರ. ಹೀಗಾಗಿ ಭರತನ ಮತ್ತು ಪುರಜನರ ಮನವೊಲಿಸಿ ಭರತನಿಗೆ ರಾಜಧರ್ಮವನ್ನು ಬೋಧಿಸಿ ಅವರೆಲ್ಲ ಹಿಂತಿರುಗುವಂತೆ ಮಾಡುತ್ತಾನೆ. ರಾಮ ಒಮ್ಮೆ ನಿಶ್ಚಯಿಸಿದರೆ ಮುಗಿಯಿತು, ರಾಮಬಾಣದಂತೆ ರಾಮನ ದೃಢತೆಗೂ ಎದುರಿಲ್ಲ.


ಸಂವಹನ ಕೌಶಲ್ಯದ ಕೊರತೆ ನಮ್ಮ ದೈನಂದಿನ ಬಹಳಷ್ಟು ಸಮಸ್ಯೆಗಳಿಗೆ ಮೂಲ ಕಾರಣ. ಹೀಗಾಗಿ ರಾಮಾಯಣವನ್ನು ಅರ್ಥೈಸಿಕೊಂಡು ಓದಿದರೆ ಅದು ನಿಜ ಜೀವನದಲ್ಲಿ ಹೇಗೆ ವ್ಯವಹರಿಸಬೇಕು ಅನ್ನುವ ಬಗ್ಗೆ ಸ್ಪಷ್ಟ ಚಿತ್ರಣ ಕೊಡುವುದಂತೂ ಸುಳ್ಳಲ್ಲ.




- ಅವಿನಾಶ್ ಭಟ್ ಪೆರ್ಮುಖ, ಬೆಂಗಳೂರು

99800 90200


ಲೇಖಕರ ಸಂಕ್ಷಿಪ್ತ ಪರಿಚಯ:

ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಕೊಕ್ಕಡದವರಾಗಿದ್ದು ಈಗ ಐಟಿ ಉದ್ಯೋಗಿಯಾಗಿ ಬೆಂಗಳೂರಿನಲ್ಲಿ ವಾಸವಿದ್ದಾರೆ. ಕಥೆ, ಕವನ, ಚುಟುಕು, ಮುಕ್ತಕ ರಚನೆಯ ಕೆಡೆಗೆ ಆಸಕ್ತಿಯಿದ್ದು, ಛಂದೋಬದ್ಧ ಕವನಗಳ ಕಡೆಗೆ ಹೆಚ್ಚಿನ ಒಲವು. ನಾಡಿನ ಹಲವಾರು ಪ್ರತಿಷ್ಟಿತ ಕವಿಗೋಷ್ಠಿಗಳಲ್ಲಿ ಭಾಗವಹಿಸಿದ್ದು, ಕವನಸಂಕಲನವನ್ನು ಸಂಪಾದಿಸಿದ ಪ್ರಕಟಿಸಿದ ಅನುಭವವೂ ಇದೆ.


Post a Comment

0 Comments
Post a Comment (0)
Advt Slider:
To Top