ಶಿಕ್ಷಣದಿಂದಲೇ ಬ್ಯಾರಿ ಭಾಷೆ ಬೆಳೆಸೋಣ: ಖಾಲಿದ್ ತಣ್ಣೀರುಬಾವಿ

Upayuktha
0


ಮಂಗಳೂರು: ಬ್ಯಾರಿ ಭಾಷೆಯಲ್ಲೇ ಶಿಕ್ಷಣ ಕೊಡುವ ಮೂಲಕ ಇಡೀ ಸಮುದಾಯವನ್ನು ಅಭಿವೃದ್ಧಿ ಕಡೆಗೆ ಕೊಂಡೊಯ್ಯಲು ಸಾಧ್ಯ ಎಂದು ನವ ಮಂಗಳೂರು ಬಂದರು ಮಂಡಳಿಯ ನಿವೃತ್ತ ಉಪ ನಿರ್ದೇಶಕ ಖಾಲಿದ್ ತಣ್ಣೀರ್ಬಾವಿ ಹೇಳಿದರು.  


ನಗರದ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು, ಬ್ಯಾರಿ ಅಧ್ಯಯನ ಪೀಠ ಮಂಗಳೂರು ವಿಶ್ವವಿದ್ಯಾನಿಲಯ ಇವರ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ಬ್ಯಾರಿ ಸಾಹಿತ್ಯ ಕಮ್ಮಟ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.


ಈ ಹಿಂದೆ ಬ್ಯಾರಿ ಭಾಷೆಯಲ್ಲಿ ಶಿಕ್ಷಣ ಲಭ್ಯವಾಗದ ಕಾರಣ ಬಾಯಿಯಿಂದ ಬಾಯಿಗೆ ಬ್ಯಾರಿ ಭಾಷೆಯನ್ನು ಪ್ರೋತ್ಸಾಹಿಸುವ ಕೆಲಸ ಮಾಡಲಾಗುತ್ತಿತ್ತು. ಆದರೆ ಇದೀಗ ಬ್ಯಾರಿ ಶಿಕ್ಷಣ ವ್ಯವಸ್ಥೆಯೇ ಇರುವುದರಿಂದ ಇನ್ನೂ ಹೆಚ್ಚಿನ ರೀತಿಯಲ್ಲಿ ಬ್ಯಾರಿ ಭಾಷೆ ಹಾಗೂ ಸಂಸ್ಕೃತಿಯನ್ನು ಬೆಳೆಸುವಂತೆ ಯುವ ಸಾಹಿತಿಗಳು ಸಾಹಿತ್ಯದ ಮೂಲಕ ಸ್ಫೂರ್ತಿ ನೀಡಬೇಕು ಎಂದು ಕರೆ ನೀಡಿದರು. 


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬ್ಯಾರಿ ವಾರ್ತೆಯ ಸಂಪಾದಕ ಬಶೀರ್ ಬೈಕಂಪಾಡಿ, ಬ್ಯಾರಿ ಭಾಷೆಯ ಅಧ್ಯಯನ ಮಾಡುವವರ ಸಂಖ್ಯೆ ಕಡಿಮೆ ಇದೆ. ಭಾಷೆಯ ಸಾಹಿತ್ಯ, ಸಂಸ್ಕೃತಿ ಬೆಳವಣಿಗೆಗೆ ಸಮುದಾಯದವರೆಲ್ಲರೂ ಕೈಜೋಡಿಸಿಕೊಳ್ಳಬೇಕು ಎಂದು ಹೇಳಿದರು.


ಕಾಲೇಜಿನ ಪ್ರಾಂಶುಪಾಲೆ ಡಾ. ಅನುಸೂಯ ರೈ, ಬಹುಭಾಷಾ ಸಾಹಿತಿ ಮೊಹಮ್ಮದ್ ಬಡ್ದೂರು, ಯುವ ಲೇಖಕಿ ಫಾತಿಮಾ ರಲಿಯಾ ಯಜಮಾಡಿ, ಬಿ. ಎ. ಮಹಮ್ಮದ್ ಹನೀಫ್, ಸಮೀರಾ ಕೆ. ಎ., ಮಂಗಳೂರು ವಿಶ್ವವಿದ್ಯಾನಿಲಯದ ಬ್ಯಾರಿ ಅಧ್ಯಯನ ಪೀಠದ ಸಂಯೋಜಕ ಡಾ. ಅಬೂಬಕ್ಕರ್ ಸಿದ್ದಿಕ್ ಸೇರಿದಂತೆ ಇತರರು ಉಪಸ್ಥಿತರಿದ್ದರು.


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Advt Slider:
To Top