ಮಂಗಳೂರು: ಯಾವುದೇ ದೇಶದಲ್ಲಿ ಸದೃಢ ಆಡಳಿತ ನಡೆಸಲು ಸದೃಢ ಸಂವಿಧಾನ ಬಹಳ ಮುಖ್ಯವಾಗಿರುತ್ತದೆ ಎಂದು ವಿಶ್ವವಿದ್ಯಾನಿಲಯ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಪ್ರೊ. ಲತಾ ಎ. ಪಂಡಿತ್ ಹೇಳಿದರು.
ನಗರದ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ನಡೆದ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮದ ಅಂಗವಾಗಿ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಯಾವುದೇ ದೇಶ ಸಂವಿಧಾನದ ಚೌಕಟ್ಟಿನ ಒಳಗೇ ಆಡಳಿತ ನಡೆಸಬೇಕು. ಒಂದು ದೇಶದಲ್ಲಿ ಆಡಳಿತ ಸದೃಢವಾಗಿರಬೇಕಿದ್ದರೆ ಸಂವಿಧಾನವೇ ಅಡಿಪಾಯ ಎಂದು ಅಭಿಪ್ರಾಯಪಟ್ಟರು.
ನಮ್ಮ ದೇಶದಲ್ಲಿ ಸಂವಿಧಾನ ರಚನೆ ಮಾಡಲು ಸಾಕಷ್ಟು ಚಿಂತನೆ, ಆಲೋಚನೆ ಹಾಗೂ ವಿಚಾರ ಮಂಥನಗಳ ನಂತರ ಉತ್ತಮವಾದ ಸಂವಿಧಾನವನ್ನು ೭೫ ವರ್ಷಗಳ ಹಿಂದೆಯೇ ರಚನೆ ಮಾಡಲಾಗಿದೆ. ಸಂವಿಧಾನವನ್ನು ಅರ್ಥ ಮಾಡಿಕೊಳ್ಳಲು ಅದರ ಪ್ರಸ್ತಾವನೆಯೇ ಸಾಕಾಗುತ್ತದೆ. ಅದರ ಪ್ರಕಾರ ನಮ್ಮ ಬದುಕನ್ನು ರೂಪಿಸಿಕೊಳ್ಳುವ ಕೆಲಸ ಮಾಡಬೇಕಿದೆ ಎಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲೆ ಡಾ. ಅನಸೂಯ ರೈ, ರಾಜ್ಯ ಸರ್ಕಾರದ ವತಿಯಿಂದ ಜನವರಿ ೨೬ರಿಂದ ಫೆಬ್ರವರಿ ೨೬ರವರೆಗೆ ಸಂವಿಧಾನ ಜಾಗೃತಿ ಕಾರ್ಯಕ್ರಮವನ್ನು ರಾಜ್ಯದ ಉದ್ದಗಲಕ್ಕೂ ಹಮ್ಮಿಕೊಳ್ಳಲಾಗಿದೆ. ಆ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಹಾಗೂ ಅರಿವು ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಸಂವಿಧಾನದಲ್ಲಿ ಕೇವಲ ಹಕ್ಕುಗಳನ್ನು ಮಾತ್ರವಲ್ಲದೇ ಕರ್ತವ್ಯಗಳ ಬಗ್ಗೆಯೂ ಹೇಳಲಾಗಿದೆ. ದೇಶದ ಎಲ್ಲಾ ನಾಗರಿಕರು ಸಮಾನರು ಎಂಬುದನ್ನು ಅರಿತು, ಸಂವಿಧಾನವನ್ನು ಗೌರವಿಸುವ ಕೆಲಸ ಮಾಡಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಪ್ರೊ. ಕುಮಾರ ಸುಬ್ರಹ್ಮಣ್ಯ ಭಟ್, ರಾಜ್ಯಶಾಸ್ತ್ರ ವಿಭಾಗದ ಪ್ರೊ. ಶಾನಿ ಕೆ. ಆರ್., ಡಾ. ರುಕ್ಮಯ ಸೇರಿದಂತೆ ಕಾಲೇಜಿನ ವಿವಿಧ ವಿಭಾಗದ ಉಪನ್ಯಾಸಕರು ಉಪಸ್ಥಿತರಿದ್ದರು.
ಸಂವಿಧಾನದ ಕುರಿತು ಜಾಗೃತಿ ಮೂಡಿಸುವ ಚಿಂತನ-ಮಂಥನ ತಂಡದ ವತಿಯಿಂದ ಕಿರು ನಾಟಕ ಪ್ರದರ್ಶನ ನಡೆಸಲಾಯಿತು. ಅಲ್ಲದೇ, ವಿದ್ಯಾರ್ಥಿಗಳಿಗೆ ಸಂವಿಧಾನದ ಪೀಠಿಕಾ ಭಾಗದ ಪ್ರಮಾಣ ವಚನ ಬೋಧಿಸಲಾಯಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ