ಎಸ್.ಡಿ.ಎಂ ಪತ್ರಿಕೋದ್ಯಮ ವಿದ್ಯಾರ್ಥಿಯ ಸಾಧನೆ
ಉಜಿರೆ: ಬೆಂಗಳೂರಿನ ದಯಾನಂದ ಸಾಗರ್ ವಿಶ್ವವಿದ್ಯಾನಿಲಯದಲ್ಲಿ ಫೆಡರಲ್ ಬ್ಯಾಂಕ್ ಮತ್ತು ಟೈಮ್ಸ್ ಆಫ್ ಇಂಡಿಯಾ ಜಂಟಿಯಾಗಿ ಫೆ.16ರಂದು ಆಯೋಜಿಸಿದ್ದ ‘ಸ್ಪೀಕ್ ಫಾರ್ ಇಂಡಿಯಾ 2023-24ರ ಸಾಲಿನ 7ನೇ ಕರ್ನಾಟಕ ಆವೃತ್ತಿಯ ಅಂತಿಮ ಹಂತದ ಸ್ಪರ್ಧೆಯಲ್ಲಿ ಉಜಿರೆಯ ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ದ್ವಿತೀಯ ವರ್ಷದ ವಿದ್ಯಾರ್ಥಿ ಎಚ್.ಪಿ. ಶಾಮ ಪ್ರಸಾದ್ ಅಗ್ರಸ್ಥಾನದ ಮನ್ನಣೆಯೊಂದಿಗೆ ಜಯ ಗಳಿಸಿದ್ದಾರೆ.
ಪ್ರತಿವರ್ಷವೂ ವಿವಿಧ ಹಂತಗಳಲ್ಲಿ ಈ ಸ್ಪರ್ಧೆ ನಡೆದು ಅಂತಿಮ ಸುತ್ತಿನಲ್ಲಿ ಸಮಗ್ರ ಚಿಂತನೆಯ ಆಶಯಗಳನ್ನು ವ್ಯಕ್ತಪಡಿಸುವ ಅಗ್ರಗಣ್ಯ ವಾಗ್ಮಿಯನ್ನು ಆಯ್ಕೆ ಮಾಡಲಾಗುತ್ತದೆ. ಈ ಸಲದ ಅಂತಿಮ ಸುತ್ತಿನ ಸ್ಪರ್ಧೆಯಲ್ಲಿ ಅಂಥ ವಾಕ್ಪಟುತ್ವವನ್ನು ಪ್ರದರ್ಶಿಸಿದ ಎಚ್.ಪಿ.ಶಾಮ ಪ್ರಸಾದ್ ವಿಜಯ ಸಾಧಿಸಿದ್ದಾರೆ.
ಪ್ರಸಕ್ತ ವರ್ಷದ ಸ್ಪರ್ಧೆಗೆ 18,000 ವಿದ್ಯಾರ್ಥಿಗಳು ನೋಂದಣಿಯಾಗಿ 6,300 ವಿದ್ಯಾರ್ಥಿಗಳು ಸ್ಪರ್ಧಿಸಿದ್ದರು. 45 ಸ್ಪರ್ಧಿಗಳ ಪೈಕಿ 8 ಸ್ಪರ್ಧಿಗಳು ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದರು. ಇವರಲ್ಲಿ ಎಸ್,ಡಿ,ಎಂ.ನ ಎಚ್.ಪಿ.ಶಾಮ ಪ್ರಸಾದ್ ಆಯ್ಕೆಯಾಗಿದ್ದರು.
ಅಂತಿಮ ಸುತ್ತಿನಲ್ಲಿ ಕಾಲೇಜುಗಳಲ್ಲಿ ಸೇವಾ ಶಿಕ್ಷಣದ ಅವಶ್ಯಕತೆ, ಕೃತಕ ಬುದ್ಧಿಮತ್ತೆಯ ನಿಯಂತ್ರಣ ಹಾಗೂ ಹವಾಮಾನ ವೈಪರೀತ್ಯದ ಕುರಿತು ವ್ಯಾಪಕ ಚರ್ಚೆ ನಡೆಯಿತು. 3ನೇ ಬಾರಿಗೆ ಸ್ಪೀಕ್ ಫಾರ್ ಇಂಡಿಯಾ ಸ್ಪರ್ಧೆಯಲ್ಲಿ ಇವರು ಭಾಗವಹಿಸಿದ್ದು, ಈ ಬಾರಿ ಗೆಲುವು ಸಾಧಿಸಿದ್ದಾರೆ.
ಅಂತಿಮ ಸ್ಪರ್ಧೆಯ ತೀರ್ಪುಗಾರರಾಗಿ ನಾಡೋಜ ಡಾ. ಬಿ.ಟಿ. ರುದ್ರೇಶ್ ಮತ್ತು ಹಿರಿಯ ಪತ್ರಕರ್ತೆ ಮಾಯಾ ಶರ್ಮಾ, ವೈದ್ಯೆ ಡಾ. ಸಿಲ್ವಿಯಾ ಕರ್ಪಗಮ್ ಭಾಗಿಯಾಗಿದ್ದರು. ಅಂತಿಮ ಸುತ್ತಿನಲ್ಲಿ ವಿಜೇತರಾದ ಎಚ್.ಪಿ. ಶಾಮ ಪ್ರಸಾದ್ ಅವರನ್ನು 2.5 ಲಕ್ಷ ರೂ. ನಗದು ನೀಡಿ ಗೌರವಿಸಲಾಯಿತು.
ಮೂಲತಃ ಮೈಸೂರು ಜಿಲ್ಲೆಯ ಹುಣಸೂರು ತಾಲುಕಿನ ಹನಗೋಡಿನವರಾದ ಎಚ್.ಪಿ. ಶಾಮ ಪ್ರಸಾದ್ 8ನೇ ತರಗತಿಯಿಂದ ಶ್ರೀ ಧರ್ಮಸ್ಥಳ ಶಿಕ್ಷಣ ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಸದ್ಯ ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ದ್ವಿತೀಯ ವರ್ಷದ ವಿದ್ಯಾರ್ಥಿಯಾಗಿ ಅಧ್ಯಯನಿರತರಾಗಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ