ಸ್ವಾಮಿ ವಿವೇಕಾನಂದರ ಜನ್ಮ ದಿನವನ್ನು ರಾಷ್ಟ್ರೀಯ ಯುವ ದಿನವನ್ನಾಗಿ ಆಚರಿಸಲಾಗುತ್ತದೆ. ಯುವ ಜನತೆಯ ಬಗ್ಗೆ ಸ್ವಾಮಿ ವಿವೇಕಾನಂದರು ಹೇಳಿದ್ದೇನು..? ಯುವ ಜನರನ್ನು ಪ್ರೇರೇಪಿಸಲು ಸ್ವಾಮಿ ವಿವೇಕಾನಂದರು ಯಾವ ತತ್ವವನ್ನು ಅನುಸರಿಸಿದ್ದರು ಗೊತ್ತಾ..? ಈ ಅದ್ಬುತವಾದ ಸಂದೇಶಗಳು ನಮ್ಮ ಜೀವನವನ್ನು ಎತ್ತರಕ್ಕೆ ಏರಿಸುವಲ್ಲಿ ಸಂಶಯವಿಲ್ಲ.
ಸ್ವಾಮಿ ವಿವೇಕಾನಂದರ ಈ 10 ಚಿಂತನೆಗಳನ್ನು ಅನುಸರಿಸಿದರೆ ಯಶಸ್ಸು ಖಂಡಿತ..!
ಯುವಕರ ಸ್ಫೂರ್ತಿಯಾದ ಸ್ವಾಮಿ ವಿವೇಕಾನಂದರು 1863 ರ ಜನವರಿ 12 ರಂದು ಜನಿಸಿದರು. ವಿವೇಕಾನಂದರು ಕಲ್ಕತ್ತಾದ ಕಾಯಸ್ಥ ಕುಟುಂಬದಲ್ಲಿ ಜನಿಸಿದರು. ವಿವೇಕಾನಂದರ ತಂದೆ ವಿಶ್ವನಾಥ ದತ್ತ. ಇವರು ಕಲ್ಕತ್ತಾದ ಹೈಕೋರ್ಟ್‌ನ ಪ್ರಸಿದ್ಧ ವಕೀಲರಾಗಿದ್ದರು. ಅದೇ ಸಮಯದಲ್ಲಿ, ಅವರ ತಂದೆ ಪಾಶ್ಚಿಮಾತ್ಯ ನಾಗರಿಕತೆಯನ್ನು ನಂಬಿದ್ದರು. ಇಷ್ಟೇ ಅಲ್ಲ, ವಿವೇಕಾನಂದರು ಕೂಡ ತಮ್ಮಂತೆ ಇಂಗ್ಲಿಷ್ ಕಲಿತು ದೊಡ್ಡವರಾಗುತ್ತಾರೆ ಎಂಬ ಕನಸು ಅವರ ತಂದೆಗಿತ್ತು.
ಆದರೆ, ಸ್ವಾಮಿ ವಿವೇಕಾನಂದರ ತಾಯಿಯ ನಂಬಿಕೆ ಹಿಂದೂ ಧರ್ಮದಲ್ಲಿತ್ತು. ನಿತ್ಯವೂ ಬೆಳಗ್ಗೆ ಎದ್ದಾಕ್ಷಣ ಅವರು ಬೆಳಿಗ್ಗೆ ಮತ್ತು ಸಂಜೆ ಭಗವಂತನ ಆರಾಧನೆ ಮಾಡುತ್ತಿದ್ದರು. ಅವರು ಅಧ್ಯಾತ್ಮದತ್ತ ವಾಲಿದ್ದರು ಎಂದು ಹೇಳಬಹುದು.ವಿವೇಕಾನಂದರ ಬಾಲ್ಯದ ಹೆಸರು ನರೇಂದ್ರ ದತ್ತ. ತಾಯಿ ಸರಸ್ವತಿಯ ಮೇಲೆ ಸ್ವಾಮಿ ವಿವೇಕಾನಂದರಿಗೆ ಅಪಾರ ಪ್ರೀತಿಯಿತ್ತು ಮತ್ತು ಅವರೂ ಸಹ ತಮ್ಮ ತಾಯಿಯಂತೆ ದೇವರಿಗೆ ತುಂಬಾ ಅಂಟಿಕೊಂಡಿದ್ದರು. 16 ನೇ ವಯಸ್ಸಿನಲ್ಲಿ, ಸ್ವಾಮೀಜಿ ಕಲ್ಕತ್ತಾ ವಿಶ್ವವಿದ್ಯಾಲಯದ ಪ್ರವೇಶ ಪರೀಕ್ಷೆಯಲ್ಲಿ ಉತ್ತಮ ಅಂಕವನ್ನು ಗಳಿಸಿ ಯಶಸ್ವಿಯಾದರು.
ಯುವಜನರ ಆದಶ೯ ಸ್ವಾಮೀಜಿ
1. ಏಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ.
2. ದಿನಕ್ಕೆ ಒಮ್ಮೆಯಾದರೂ ನಿಮ್ಮೊಂದಿಗೆ ಮಾತನಾಡಿ. ಇಲ್ಲದಿದ್ದರೆ, ನೀವು ವಿಶ್ವದ ಅತ್ಯಂತ ಬುದ್ಧಿವಂತ ವ್ಯಕ್ತಿಯೊಂದಿಗೆ ಸಂವಹನ ಮಾಡುವುದನ್ನು ಬಿಟ್ಟುಬಿಡುತ್ತೀರಿ.
3. ನೀವು ನಿಮ್ಮನ್ನು ನಂಬದ ಹೊರತು, ನೀವು ದೇವರನ್ನು ನಂಬಲು ಸಾಧ್ಯವಿಲ್ಲ.
4. ನಿಮಗೆ ಸಹಾಯ ಮಾಡುವ ಜನರನ್ನು ಎಂದಿಗೂ ಮರೆಯಬೇಡಿ. ನಿಮ್ಮನ್ನು ಪ್ರೀತಿಸುವವರನ್ನು ಎಂದಿಗೂ ದ್ವೇಷಿಸಬೇಡಿ. ನಿಮ್ಮನ್ನು ನಂಬಿದವರಿಗೆ ಎಂದಿಗೂ ಮೋಸ ಮಾಡಬೇಡಿ.
5. ಓದಲು ಏಕಾಗ್ರತೆ ಅಗತ್ಯ, ಏಕಾಗ್ರತೆಗೆ ಗಮನ ಅಗತ್ಯ. ಧ್ಯಾನದ ಮೂಲಕ ನಾವು ಇಂದ್ರಿಯಗಳ ಮೇಲೆ ನಿಯಂತ್ರಣವನ್ನು ಇಟ್ಟುಕೊಂಡು ಏಕಾಗ್ರತೆಯನ್ನು ಸಾಧಿಸಬಹುದು.
6. ನಿಮ್ಮ ಮನಸ್ಸನ್ನು ಉನ್ನತ ಆಲೋಚನೆಗಳಿಂದ ಮತ್ತು ಅತ್ಯುನ್ನತ ಆದರ್ಶಗಳಿಂದ ತುಂಬಿಕೊಳ್ಳಿ. ಇದರ ನಂತರ ನೀವು ಮಾಡುವ ಯಾವುದೇ ಕೆಲಸವು ಉತ್ತಮವಾಗಿರುತ್ತದೆ.
7. ಯಾವ ವ್ಯಕ್ತಿಯು ಅಮರತ್ವವನ್ನು ಪಡೆದಿರುತ್ತಾನೋ ಅವನು ಯಾವುದೇ ಲೌಕಿಕ ವಸ್ತುಗಳಿಂದ ವಿಚಲಿತನಾಗುವುದಿಲ್ಲ.
8. ದೈಹಿಕವಾಗಿ, ಮಾನಸಿಕವಾಗಿ ಮತ್ತು ಧಾರ್ಮಿಕವಾಗಿ ನಿಮ್ಮನ್ನು ದುರ್ಬಲಗೊಳಿಸುವ ಯಾವುದಾದರೂ, ಅದನ್ನು ವಿಷದಂತೆ ತಿರಸ್ಕರಿಸಿ.
9. ಯಾವಾಗಲೂ ನಾವು ಮಾತನಾಡುವ ಮುನ್ನ ಸರಿಯಾಗಿ ಯೋಚನೆ ಮಾಡಿ ಮಾತನಾಡಬೇಕು. ನಮ್ಮ ಆಲೋಚನೆಗಳು ಯಾವಾಗಲೂ ಜೀವಂತವಾಗಿರುತ್ತದೆ ಮತ್ತು ಪದಗಳು ಒಬ್ಬರ ಬಾಯಿಂದ ಇನ್ನೊಬ್ಬರ ಬಾಯಿಗೆ ಸಂಚರಿಸುತ್ತಲೇ ಇರುತ್ತದೆ.
10. ಹೋರಾಟವು ದೊಡ್ಡದಾಗಿದ್ದರೆ, ವಿಜಯವು ಹೆಚ್ಚು ಅದ್ಭುತವಾಗಿರುತ್ತದೆ. ನೀವು ಸಮಸ್ಯೆಗಳನ್ನು ಎದುರಿಸದಿದ್ದರೆ ನೀವು ತಪ್ಪು ದಾರಿಯಲ್ಲಿದ್ದೀರಿ ಎನ್ನುವುದನ್ನು ಖಚಿತವಾಗಿ ಹೇಳಬಹುದು. ನಿಮ್ಮನ್ನು ನೀವು ದುರ್ಬಲ ಎಂದು ಪರಿಗಣಿಸುವುದೇ ದೊಡ್ಡ ಪಾಪ.
ಈ 10 ತತ್ವಗಳು ಸ್ವಾಮಿ ವಿವೇಕಾನಂದರು ಸಮಾಜದ ಉದ್ಧಾರಕ್ಕೆ ಹೇಳಿದ ಮಾತುಗಳಾಗಿವೆ. ಸ್ವಾಮಿ ವಿವೇಕಾನಂದರು ಯಾವಾಗಲೂ ಸಮಾಜದ ಒಳಿತಿಗಾಗಿ, ಯುವ ಜನರ ಏಳಿಗೆಗಾಗಿ ಶ್ರಮಿಸಿದವರು. ಇವರ ಈ ತತ್ವಗಳನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಯಶಸ್ಸನ್ನು ಸಾಧಿಸಬಹುದು ಭಾರತದ ಭವಿಷ್ಯ ಯುವಜನರ ಮೇಲಿದೆ. ಜಗತ್ತಿನ ಹೆಚ್ಚಿನ ಯುವ ಜನರು ಇರುವ ದೇಶ ಅದು ಭಾರತ-ಹೀಗಾಗಿ ಭಾರತವನ್ನು ಯುವ ರಾಷ್ಟ್ರ ಎಂದು ಕರೆಯುತ್ತಾರೆ. ಸ್ವಾಮೀಜಿಯವರ ಸಂದೇಶ ನಮ್ಮೆಲ್ಲರಿಗೂ ದಾರಿದೀಪವಾಗಲಿ'
- ರಾಘವೇಂದ್ರ ಪ್ರಭು, ಕವಾ೯ಲು
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ