ಶ್ರೀರಾಮಚಂದ್ರ ಸಕಲಗುಣ ಪರಿಪೂರ್ಣ

Upayuktha
0



ಶ್ರೀರಾಮಚಂದಿರನು ಸಕಲಗುಣ ಪರಿಪೂರ್ಣ 

ಕಾರುಣ್ಯ ಮೂರುತಿಯ ಅನುದಿನವು ನೆನೆಯೋಣ 

ವೀರಾಧಿವೀರನಿವ ಕಡುಚೆಲುವ ಜಗದೊಳಗೆ 

ರಘುವಂಶ ಕುಲತಿಲಕನು.

ಯಾರನ್ನು ನೋಯಿಸನು ಮೃದು ಮಾತನಾಡುವನು 

ಯಾರಲ್ಲು ಗುಣದೊಳಗೆ ಕಾಣನವ ಅವಗುಣವ 

ರಾರಾಜಿಸುತಲಿರುವ ಅರಸ ದಶರಥನ ಸುತ

ಇವನೆ ಶ್ರೀರಾಮಚಂದ್ರ. 




ಸವಿಯಾದ ಹಿತವಾದ ಮಾತನ್ನೆ ಆಡುವನು 

ಕವಿ ಮನಸು ಉಳ್ಳವನು ಶಾಸ್ತ್ರವನು ಅರಿತವನು 

ಭುವಿಯೊಳಗೆ ಶಸ್ತ್ರಾಸ್ತ್ರ ತಿಳಿದಂಥ ಸುಜ್ಞಾನಿ 

ಚಾಣಾಕ್ಷವಂತನಿವನು. 

ಭವಪಾಶ ಕಳೆವಂಥ ಶುಭನಾಮ ಇರುವವನು 

ಕುವಿಚಾರ ಕಪಟತನ ತಿಲಮಾತ್ರ ಇರದವನು 

ನವತರುಣನಾಗಿರುವ ಅತಿರೂಪವಂತನಿವ 

ಇವನೆ ಶ್ರೀರಾಮಚಂದ್ರ.




ತಂದೆ ತಾಯಿಗಳಲ್ಲಿ ಮತ್ತೆ ಗುರು ಹಿರಿಯರಲಿ

ಎಂದೆಂದು ಭಯ ಭಕ್ತಿ ಅತಿಯಾಗಿ ತೋರುವನು 

ಬಂಧು ಬಾಂಧವರಂತೆ ಸರ್ವರನು ಕಾಣುವನು 

ಇವನೆ ಶ್ರೀರಾಮಚಂದ್ರ. 

ಕುಂದು ಕೊರತೆಯೆ ಇರದ ದಾನ ಧರ್ಮವ ಮಾಡಿ 

ಚಂದದಲಿ ಸಜ್ಜನರು ಚಿರಕಾಲ ಇರುವಂತೆ

ಬಂಧನವ ಬಿಡಿಸುತ್ತ ಮುಕ್ತಿಯನು ಕರುಣಿಸುವ 

ಇವನೆ ಶ್ರೀರಾಮಚಂದ್ರ. 




ಉಪಕಾರ ಮಾಡಿದರೆ ಮರೆಯಲಾರನು ಇವನು 

ಅಪರಾಧ ಮಾಡಿದರು ಆ ಕ್ಷಣದಿ ಮರೆವವನು 

ಜಪತಪ ಅನುಷ್ಠಾನ ನಿತ್ಯವೂ ಮಾಡುತ್ತ

ಇರುವ ಶ್ರೀರಾಮಚಂದ್ರ.

ಅಪಜಯವೆ ಇರದವನು ಸವಿನುಡಿಯನಾಡುವನು 

ಅಪರಿಚಿತರಾದರೂ ಮೊದಲು ಮಾತಾಡುವನು 

ಅಪರಿಮಿತ ಪೌರುಷದ ಪುರಜನರ ಆತ್ಮಸಖ 

ಇವನೆ ಶ್ರೀರಾಮಚಂದ್ರ. 




ಕ್ರೋಧವೇ ಇರದವನು ದೀನರನು ಪೊರೆವವನು 

ಭೇದವನು ತೋರದೆಯೆ ನಾಲ್ಕು ವರ್ಣಗಳಲ್ಲು 

ಸಾಧನೆಯ ಗುರುತಿಸುವ ಅಭಿಮಾನಿಯಾದವನು 

ಇವನೆ ಶ್ರೀರಾಮಚಂದ್ರ.

ವೇದ ಅಧ್ಯಯನದಲಿ ವಿಷಯ ನಿಷ್ಕರ್ಷೆಯಲಿ 

ಸಿದ್ಧಾಂತ ಮಂಡಿಸುವಲಿ ನಿರ್ಣಯದ ಚರ್ಚೆಯಲಿ 

ಆಧಾರಗಳೊಡನೆಯೆ ಉತ್ತರವ ಕೊಡುವವನು 

ಇವನೆ ಶ್ರೀರಾಮಚಂದ್ರ.




ಕಾಲ ದೇಶಗಳನ್ನು ಸರಿಯಾಗಿ ತಿಳಿಯುತ್ತ 

ಕಾಲಕ್ಕೆ ತಕ್ಕಂಥ ಕಾರ್ಯಗಳ ಮಾಡುತ್ತ 

ಪಾಲಿಸುವ ರಘುರಾಮ ಸರ್ವಾಸ್ತ್ರ ನಿಪುಣನಿವ

ಸತ್ಪುರುಷ ರಾಮಚಂದ್ರ. 

ಶೀಲವಂತನು ಆಗಿ ಪುರುಷಾರ್ಥ ಅರಿತವನು 

ಸೋಲರಿಯದಿರುವಂಥ ಮೇಧಾವಿಯಾದವನು 

ಆಲಸ್ಯ ಇರದವನು ರಾಜತತ್ವವನರಿತ 

ಇವನೆ ಶ್ರೀರಾಮಚಂದ್ರ. 




ಹಲವಾರು ಸಂಗೀತ ನಾಟ್ಯ ಕಲೆ ಬಲ್ಲವನು 

ಬಲವಾದ ಕುದುರೆಗಳ ಮರ್ಮವನು ಅರಿತವನು 

ಛಲವಾದಿಯಾಗಿಯೇ ಸಂಸ್ಕೃತವೆ ಮೊದಲಾದ 

ಬಹು ಭಾಷೆ ಬಲ್ಲಿದವನು. 

ಕೆಲವೆ ಅತಿರಥರಲ್ಲಿ ಅಗ್ರಣಿಯು ಶ್ರೀರಾಮ 

ನಿಲಲಾರರಿವನೆದರು ಮೂಜಗದ ವೀರರೂ 

ಬೆಲೆ ಕಟ್ಟದಿರುವಂಥ ಮನುಜಕುಲ ಭೂಷಣನು

ಚೆಲುವ ಶ್ರೀರಾಮಚಂದ್ರ.




- ಬಾಲಕೃಷ್ಣ ಸಹಸ್ರಬುದ್ಧೆ ಮುಂಡಾಜೆ




ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

Tags

Post a Comment

0 Comments
Post a Comment (0)
To Top