ಪರಮಾತ್ಮನ ವಿನಂತಿ ಮೇರೆಗೆ ಮೊದಲನೆಯದಾಗಿ ಬುದ್ಧಿಯ ಅಭಿಮಾನಿ ದೇವ ಎದ್ದು ನಿಂತು ತನ್ನ ವರದಿಯನ್ನು ನಿವೇದಿಸತೊಡಗಿದನು. ಪರಮಾತ್ಮ ನೀನು ನನಗೆ ಕೊಟ್ಟಂಥ ಜವಾಬ್ದಾರಿಯನ್ನು ನಾನು ಶಿರಸಾವಹಿಸಿ ನಿರ್ವಹಿಸುತ್ತಿದ್ದೇನೆ. ಆದರೆ ನನ್ನ ಸಂಪರ್ಕಕ್ಕೆ ಬರುವ ಜೀವಿಗಳು ಬಹಳ ವಿರಳ. ಎಂಭತ್ತನಾಲ್ಕು ಲಕ್ಷ ಜೀವರಾಶಿಗಳಲ್ಲಿ ನನ್ನಲ್ಲಿಗೆ ಬರುವ ಸಾಧ್ಯತೆ ಇರುವ ಜೀವಿ ಎಂದರೆ ಮನುಷ್ಯ ಮಾತ್ರ. ಅಂಥ ಮನುಷ್ಯರ ಎಲ್ಲ ವ್ಯವಹಾರಗಳೂ ಸಾಧಾರಣ ಇಂದ್ರಿಯ, ಮನಸ್ಸಿಗಷ್ಟೇ ಸೀಮಿತವಾಗಿರುತ್ತದೆ. ಅದನ್ನು ದಾಟಿ ವಿವೇಕದ ಕಡೆ ಬರುವವರು ಕೆಲವರಾದರೆ ನನ್ನನ್ನು ಬಳಸಿಕೊಂಡು ನನ್ನ ನಿರ್ದೇಶನದಂತೆ ನಡೆಯುವವರು ತೀರಾ ವಿರಳ. ಏನು ಮಾಡೋಣ ವಿವೇಕವನ್ನು ದಾಟಿ ಮನಸ್ಸಿಗೆ ತಿಳಿ ಹೇಳಬೇಕೆಂದು ಅದೆಷ್ಟೋ ಬಾರಿ ನಾನು ಯೋಚಿಸಿದ್ದೆ. ಆದರೆ ಅದು ಅತಿಕ್ರಮವಾದೀತೆಂದು ಸುಮ್ಮನಿರುತ್ತೇನೆ. ನಿನ್ನಲ್ಲಿಗೆ ಬರಬೇಕಾದರೆ ನನ್ನ ಮುಖಾಂತರವೇ ಬರಬೇಕಾಗಿರುವುದರಿಂದ ನನ್ನಲ್ಲಿಗೆ ಬರುವ ಮಾರ್ಗವನ್ನು ನೀನೇ ಅವರಿಗೆ ತೋರಿಸಬೇಕು ದೇವ. ಎಂದು ಹೇಳಿ ಬುದ್ಧಿಯ ಅಭಿಮಾನಿ ದೇವ ತಲೆಬಾಗಿದ.
ಸರಿ ನಿನ್ನ ವ್ಯಾಪ್ತಿಯಲ್ಲಿ ನಿನ್ನ ಕರ್ಮ ಸರಿಯಾಗಿದೆ ಎಂದು ಹೇಳಿ, ವಿವೇಕದ ಅಭಿಮಾನಿ ದೇವನನ್ನು ಕುರಿತು ಏನಪ್ಪ ನಿನ್ನ ಸಮಾಚಾರ ಹೇಳು ಎಂದಾಗ, ವಿವೇಕಾಭಿಮಾನಿ ದೇವ ಎದ್ದು ನಿಂತನು. ಪರಮಾತ್ಮ ನನಗೆ ಬುದ್ಧಿಯ ಸ್ನೇಹ ಜಾಸ್ತಿ. ಆದ್ದರಿಂದ ನಾನು ನನ್ನ ಬಳಿಗೆ ಬಂದವರನ್ನು ಬುದ್ಧಿಯೊಡನೆ ಸಹವಾಸ ಮಾಡಬೇಕೆಂದೇ ಪ್ರಚೋದಿಸುತ್ತೇನೆ. ಸಾರಿ ಸಾರಿ ಹೇಳಿದರೂ ನನ್ನ ಮಾತು ಸಲಹೆ ಕೇಳುವವರು ಕೆಲವರು ಮಾತ್ರ. ನನ್ನ ಬಳಿ ಸಲಹೆ ಕೇಳಲು ಬಹಳ ಜನ ಬರುತ್ತಾರೆ ಆದರೆ ಅವರಿಗೆ ಮನಸ್ಸಿನ ಸಂಪರ್ಕ ಹೆಚ್ಚು ಸುಖ ಕೊಡುವುದರಿಂದ, ಅದರ ಕಡೆಗೇ ಒಲವು ಹೆಚ್ಚಿರುತ್ತದೆ. ಆದರೂ ನಾನು ಮನಸ್ಸು ಹೇಳುವ ಕ್ಷಣಿಕ ಸುಖಕ್ಕೆ ಬಲಿಯಾಗದಿರಿ ನಾನು ನಿಮ್ಮನ್ನು ಶಾಶ್ವತ ಸುಖ ಕೊಡುವ ಬುದ್ಧಿಯ ಸಾಂಗತ್ಯವನ್ನು ಕೊಡಿಸುತ್ತೇನೆ ಎಂದರೂ ಒತ್ತಾಯಕ್ಕೋ ಎನ್ನುವಂತೆ ಒಪ್ಪಿಕೊಳ್ಳುತ್ತಾರೆ. ಆದರೆ ಒಂದು ಖುಷಿ ಎಂದರೆ ಅಂಥ ಒಪ್ಪಿಕೊಂಡವರಲ್ಲಿ ಕೆಲವರಾದರೂ ನಿನ್ನ ಬಳಿ ಬರುತ್ತಾರೆ ಎನ್ನುವುದೇ. ನನಗೆ ಕೂಡ ನನ್ನ ಬಳಿ ಬಾರದಿದ್ದವರಿಗೆ ಬರುವಂತೆ ಮಾಡುವ ಅಧಿಕಾರವಿಲ್ಲದಿರುವುದರಿಂದ ನೀನೇ ಅವರಿಗೆ ಪ್ರೇರಣೆ ಕೊಡಬೇಕು ದೇವ. ಎಂದು ಹೇಳಿ ವಿವೇಕಾಭಿಮಾನಿ ದೇವನೂ ತಲೆಬಾಗಿ ನಿಂತನು.
ಸರಿ ನೀನು ಹೇಳುವುದೂ ತಪ್ಪಲ್ಲ. ನಿನ್ನ ವ್ಯಾಪ್ತಿಯಲ್ಲಿ ನಿನ್ನ ಕೆಲಸವೂ ತೃಪ್ತಿ ತಂದಿದೆ ಎಂದು ಪರಮಾತ್ಮ, ಮನೋಭಿಮಾನಿ ದೇವನಲ್ಲಿ ಏನಪ್ಪ ಮನಸ್ಸೇ ಎಲ್ಲರೂ ನಿನ್ನನ್ನೇ ಬೊಟ್ಟು ಮಾಡಿ ತೋರಿಸುತ್ತಾರೆ. ಹೇಳು ನಿನ್ನ ವರದಿಯನ್ನು ಎಂದಾಗ ಮನೋಭಿಮಾನಿ ದೇವ ಏನು ಹೇಳಲಿ ಪರಮಾತ್ಮ ಪರಮಾತ್ಮನೇ ಹೇಳಿಲ್ಲವೇ ಮನ ಏವ ಮನುಷ್ಯಾಣಾಮ್ ಎಂದು. ಅದೇ ರೀತಿ ಈ ಮನುಜರೆಲ್ಲ ಅದನ್ನೇ ಆಧಾರವಾಗಿಟ್ಟುಕೊಂಡು ಅದರಂತೇ ವ್ಯವಹರಿಸುತ್ತಾರೆ. ನನ್ನ ಗುಣವೆಂದರೆ ಇಂದ್ರಿಯಗಳು ಏನನ್ನು ಬಯಸುತ್ತವೋ ಅದರಲ್ಲಿ ತಲ್ಲೀನರಾಗಿಸುವುದು. ನನ್ನನ್ನು ದಾಟಿ ವಿವೇಕದ ಕಡೆ ಹೋಗವವರಿದ್ದರೆ ನನಗೂ ಸಂತೋಷವೇ. ಯಾಕೆಂದರೆ ಈ ಇಂದ್ರಿಯಗಳ ಸಹವಾಸದಿಂದ ನನ್ನ ಹೆಸರೂ ಹಾಳಾಗುತ್ತಿದೆ. ಆದರೆ ನನ್ನ ಕೆಲಸವೇ ವಿಷಯಗಳಲ್ಲಿ ಆಸಕ್ತಿ ತೋರಿಸವುದಾದ್ದರಿಂದ ನನಗೆ ಬೇರೇನು ದಾರಿ ಇಲ್ಲವಷ್ಟೇ. ಆದರೊಂದು ಬೇಸರವೆಂದರೆ ನನ್ನನ್ನು ದಾಟಿ ಮುಂದೆ ಹೋದವರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಪುನಃ ನನ್ನನ್ನೇ ಆಶ್ರಯಿಸಿ ಅಧೋಮುಖವಾಗಿ ಇಂದ್ರಿಯ ವ್ಯಾಪಾರದಲ್ಲೇ ತೊಡಗುತ್ತಾರೆ.
ಕೆಲವೊಮ್ಮೆ ನಾನೇ ಪೇಚಿಗೊಳಗಾಗುತ್ತೇನೆ. ಇಂದ್ರಿಯಗಳು ಐದಿರುವುದರಿಂದ ಎಲ್ಲವನ್ನೂ ಏಕ ಕಾಲದಲ್ಲಿ ತೃಪ್ತಿ ಪಡಿಸುವ ಅನಿವಾರ್ಯತೆ ಉಂಟಾಗುತ್ತದೆ. ಏನು ಮಾಡೋಣ ನನ್ನ ಒತ್ತಡ ನನಗೇ ಜಿಗುಪ್ಸೆ ತರುವಷ್ಟಾಗುತ್ತದೆ. ಹೇ ಪರಮಾತ್ಮ ನನಗೆ ಮಾನವ ಮಾತ್ರವಲ್ಲ ನೀನು ಸೃಷ್ಟಿಸಿದ ಯಾವತ್ತೂ ಜೀವಿಗಳನ್ನು ನೋಡಿಕೊಳ್ಳುವುದೆಂದರೆ, ಅದು ನೀನು ಕೊಟ್ಟ ಶಕ್ತಿಯಿಂದ ಮಾತ್ರ ಸಾಧ್ಯ. ವಿವೇಕ, ಬುದ್ಧಿಗಾದರೋ ಸೀಮಿತವಾದ ಜವಾಬ್ದಾರಿ. ಆದರೆ ನನ್ನ ಜವಾಬ್ದಾರಿ ಬಹಳ ಕಷ್ಟವಲ್ಲವೇ. ಇಂದ್ರಿಯಗಳು ಮಾಡುವ ತಪ್ಪಾಗಲಿ, ಸರಿಯಾಗಲಿ ನಾನೇ ಉತ್ತರ ಕೊಡಬೇಕು. ಆದರೆ ನನಗೊಂದು ಸಮಾಧಾನವೆಂದರೆ, ಪರೋಕ್ಷವಾಗಿ ನಾನೇ ಕಾರಣನಾದರೂ ಪ್ರತ್ಯಕ್ಷವಾಗಿ ನಾನು ಯಾರ ಕಣ್ಣಿಗೂ ಕಾಣದೆ ಇರುವುದು. ಹಾಗೂ ನಾನು ತಟಸ್ಥನಾಗಿದ್ದರೆ ಯುವಕರೂ ನಿಷ್ಕ್ರಿಯರಾಗುತ್ತಾರೆ, ನಾನು ಸಕ್ರಿಯನಾದರೆ ಮುದುಕರೂ ಯುವಕರಂತಾಗುತ್ತಾರೆ. ಆದ್ದರಿಂದ ನಾನು ಯಾರನ್ನೂ ಬಡಿದೆಬ್ಬಿಸಬಲ್ಲೆ. ಆದರೆ ವಿವೇಕದ ಕಡೆಗೆ ನಾನು ದಾರಿ ತೋರಿಸಬಹುದೇ ಹೊರತು ಬಲವಂತವಾಗಿ ತಳ್ಳುವಂತಿಲ್ಲ. ಅದಲ್ಲದೆ ನನಗೆ ಇನ್ನೊಂದು ಬೇಸರ ತರುವ ವಿಷಯವೆಂದರೆ ಈ ಇಂದ್ರಿಯಗಳು ನನ್ನನ್ನು ಬಳಸಿಕೊಂಡು ಏನೇನೋ ಎಡವಟ್ಟು ಮಾಡಿಕೊಳ್ಳುತ್ತಾರೆ. ಆದರೆ ಎಲ್ಲರೂ ದೂರುವುದು ನನ್ನನ್ನೇ. ಇಂದ್ರಿಯಗಳು ಸರಿ ಇಲ್ಲ ಎನ್ನದೆ, ಈತನ ಮನಸ್ಸು ಸರಿ ಇಲ್ಲ ಎನ್ನುತ್ತಾರೆ. ಏನು ಮಾಡೋಣ ನನ್ನತನವನ್ನು ಬಿಡುವ ಹಾಗಿಲ್ಲವಷ್ಟೆ. ಇದಿಷ್ಟೇ ದೇವ ನನ್ನ ವರದಿ. ದೇವ ನನ್ನ ಮುಖಾಂತರ ವಿವೇಕ ಬುದ್ಧಿಯ ಕಡೆ ಹೋಗುವಂತೆ ಇನ್ನಾದರೂ ಈ ಮಾನವರಿಗೆ ಅನುಗ್ರಹಿಸು. ಎಂದು ಹೇಳಿ ತಲೆ ಬಾಗಿ ನಿಂತನು.
ಸರಿ..ನಿನ್ನ ಮಾತೂ ನನಗೆ ಹಿಡಿಸಿದೆ. ಇನ್ನು ಕೊನೆಯದಾಗಿ ಇಂದ್ರಿಯಾಭಿಮಾನಿ ದೇವತೆಗಳೇ ನಿಮ್ಮ ವಿಚಾರ ತಿಳಿಸಿ ಎನ್ನಲು ಎಲ್ಲರೂ ಎದ್ದು ನಿಂತು ವರದಿ ಕೊಡಲಾರಂಭಿಸಿದರು. ದೇವ ನಾವು ಏನನ್ನು ನೋಡಬೇಕೋ. ಏನನ್ನು ಮುಟ್ಟಬೇಕೋ, ಏನನ್ನು ಆಘ್ರಾಣಿಸಬೇಕೋ, ಏನನ್ನು ಕೇಳಬೇಕೋ, ಏನನ್ನು ನುಡಿಯಬೇಕೋ ನಮಗೊಂದೂ ತಿಳಿಯದು. ಹಾಗೂ ನಾವು ಸ್ವತಂತ್ರರೂ ಅಲ್ಲ. ನಮ್ಮ ಕ್ರಿಯೆಯ ಹಿಂದೆ ಮನಸ್ಸಿನ ಸಂಪರ್ಕವೇ ನಿರ್ಣಾಯಕ. ನಮ್ಮನ್ನು ಮನಸ್ಸು ಪ್ರಚೋದಿಸದಿದ್ದಲ್ಲಿ ನಾವು ಜಡ ವಸ್ತುಗಳೇ. ನಮಗೆ ಅಸ್ತಿತ್ವ ಬರುವುದೇ ಮನಸ್ಸಿನ ಸಂಪರ್ಕದಿಂದ. ಮನಸ್ಸಿನಿಂದ ಆಚೆ ವಿವೇಕ ಬುದ್ಧಿ ಇದೆ ಎಂಬ ಅರಿವು ನಮಗೆ ಇರುವುದೇ ಇಲ್ಲ. ಅದಕ್ಕೆಂದೇ ನಾವು ಮನಸ್ಸು ಹೇಳಿದ್ದನ್ನೇ ಕೇಳುತ್ತೇವೆ ಹಾಗೂ ಪುನಃ ಪುನಃ ಇಲ್ಲೇ ಸುತ್ತುತ್ತಿರುತ್ತೇವೆ. ಆದರೆ ಕೆಲವೊಮ್ಮೆ ಮನಸ್ಸನ್ನು ದಾಟಿ ಕೆಲವರು ಆಚೆ ಹೋಗಿ ಪುನಃ ನಮ್ಮ ಸಂಪರ್ಕಕ್ಕೆ ಬಂದಾಗ ನಮಗೆ ಗೊತ್ತಾಗುವುದು ಮನಸ್ಸಿನ ಆಚೆಗಿರುವ ಬದುಕು ಉನ್ನತಿಗೆ ಹೋಗುವಂಥದ್ದೆಂದು. ಹಾಗೂ ಶಾಶ್ವತ ಸುಖ ಅಲ್ಲಿರುವುದೆಂದು. ಆದರೆ ಅದನ್ನು ಹುಡುಕಿಕೊಂಡು ಹೋಗಬೇಕಾದರೆ ಸಾಧನೆಗಳು ಬೇಕು. ಮನಸ್ಸಿನೊಳಗೇ ಸುಖವಿದೆ ಎಂಬ ತಪ್ಪು ಕಲ್ಪನೆಯಿಂದ ನೀನು ಅಂದು ಕಳುಹಿಸಿದ ಹೆಚ್ಚಿನ ಆತ್ಮಗಳೆಲ್ಲವೂ ಇಲ್ಲೇ ಇಂದ್ರಿಯ ಮನಸ್ಸಿನ ವ್ಯಾಪ್ತಿಯೂಳಗೆ ಸುತ್ತಿಕೊಂಡಿರುವುದರಿಂದ ನಿನ್ನೆಡೆಗೆ ಬರುವ ಜೀವಿಗಳ ಸಂಖ್ಯೆ ಬಹಳ ವಿರಳವೆಂದು ನಮ್ಮ ಅಭಿಪ್ರಾಯ. ನಾವು ಇಂದ್ರಿಯಾಭಿಮಾನಿ ದೇವತೆಗಳು ಒಂದುವೇಳೆ ಸ್ವತಂತ್ರರಾದಲ್ಲಿ ನಿನ್ನೆಡೆಗೆ ಬರುವವರ ಸಂಖ್ಯೆ ಖಂಡಿತ ಗಣನೀಯವಾಗಿ ಏರಿಸಬಲ್ಲೆವು. ಇದಿಷ್ಟು ನಮ್ಮ ವರದಿ ಎಂದು ಹೇಳಿ ಆ ದೇವತೆಗಳು ತಲೆಬಾಗಿ ನಿಂತು ಕೊಂಡವು.
ಎಲ್ಲರ ಅಭಿಪ್ರಾಯವೂ ಸರಿಯಾಗಿದೆ. ನೋಡೋಣ ಕಲಿಯುಗ ಮುಗಿಯಲು ಇನ್ನೂ ಬಹಳ ಕಾಲವಿದೆ. ನೀವೆಲ್ಲರೂ ನಿಮ್ಮ ನಿಮ್ಮ ಜವಾಬ್ದಾರಿಯನ್ನು ಈ ಹಿಂದಿನಂತೆಯೇ ನಿಭಾಯಿಸಿ ಬದಲಾವಣೆ ಬೇಕಾದಲ್ಲಿ ಅಥವಾ ನಿರ್ಣಾಯಕ ಘಟ್ಟದಲ್ಲಿ ಮುಂದಿನ ಆದೇಶದವರೆಗೆ ಯಥಾ ಸ್ಥಿತಿ ಮುಂದುವರೆಯಲಿ ಎಂದು ಹೇಳಿ ಪರಮಾತ್ಮನು ಅಂದಿನ ಸಭೆಯನ್ನು ಮುಗಿಸುವ ಮುನ್ನ ಎಲ್ಲ ದೇವತೆಗಳಿಗೂ ಒಂದು ಕಿವಿಮಾತನ್ನು ಹೇಳಿದನು. ಎಲ್ಲಿವರೆಗೆ ಮನುಷ್ಯನು ವಿವೇಕದಿಂದ ಬುದ್ಧಿಯನ್ನು ಉಪಯೋಗಿಸಿಕೊಂಡು ತನ್ನ ಆತ್ಮೋನ್ನತಿ ಮಾಡಿಕೊಳ್ಳಲಾರನೋ, ಅಲ್ಲಿವರೆಗೆ ಗಾಣದ ಎತ್ತಿನಂತೆ ವೃಥಾ ತಿರುಗುತ್ತಿರುತ್ತಾನೆ. ಅಂತೆಯೇ ಈ ಆತ್ಮಗಳು ಯಾಕೆ ಹಿಂದಿರುಗಿ ಬರಲಾರವು ಎಂಬ ಸತ್ಯದ ದರ್ಶನವೂ ಆಯಿತು ಎಂದು ಹೇಳಿ ತನ್ನ ಲೋಕಕ್ಕೆ ಮರಳಿದನು.
-ಬಾಲಕೃಷ್ಣ ಸಹಸ್ರಬುಧ್ಯೆ ಮುಂಡಾಜೆ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


