ಮಂಗಳೂರು: ಪ್ರಭು ಶ್ರೀರಾಮಚಂದ್ರ ಒಂದು ಆದರ್ಶದ ಪ್ರತೀಕ. ಅವನು ಭಾರತದ ಅಂತರಾತ್ಮವಾಗಿದ್ದಾನೆ. ನಮ್ಮ ವ್ಯಕ್ತಿತ್ವದ ಔನ್ನತ್ಯಕ್ಕೆ ಆತ ಒಂದು ಕೈಗನ್ನಡಿ. ಅವನನ್ನು ಅನುಸರಿಸಿ ಆದರ್ಶ ಪ್ರಜೆಗಳಾಗಿ ಉನ್ನತಿಗೇರಬೇಕೆಂಬುದೇ ಶ್ರೀರಾಮ ಮತ್ತು ರಾಮಾಯಣ ಕಥೆಯ ಆಶಯವಾಗಿದೆ ಎಂದು ಒಡಿಯೂರಿನ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.
ನಗರದ ಹೊಟೇಲ್ ಸಭಾಂಗಣದಲ್ಲಿ ಕವಿ ಸಾಹಿತಿ ಡಾ. ವಸಂತಕುಮಾರ ಪೆರ್ಲ ಅವರು ಸಂಪಾದಿಸಿ, ಪರಿಷ್ಕರಿಸಿದ ಹಾಗೂ ನಿತ್ಯಾನಂದ ಗ್ರಂಥಾಲಯವು ಪ್ರಕಟಿಸಿದ ಶ್ರೀರಾಮಭಜನೆ ಕೃತಿಯನ್ನು ಬಿಡುಗಡೆಗೊಳಿಸಿ ಅವರು ಮಾತಾಡಿದರು. ಶ್ರೀರಾಮಚಂದ್ರ ಒಬ್ಬ ಪ್ರಶ್ನಾತೀತ ನಾಯಕ. ಧೈರ್ಯ ಸಾಹಸ ವೀರತೆ ಔನ್ನತ್ಯ ಮತ್ತು ಆದರ್ಶಗಳ ಒಟ್ಟು ಮೊತ್ತವೇ ಆತನ ವ್ಯಕ್ತಿತ್ವ. ಇಂದಿನ ಸಮಾಜಕ್ಕೆ ಶ್ರೀರಾಮಚಂದ್ರ ಅವಶ್ಯಕವಾಗಿದ್ದಾನೆ ಎಂದು ಸ್ವಾಮೀಜಿ ಹೇಳಿದರು.
ಕೃತಿಕಾರರಾದ ಡಾ. ವಸಂತಕುಮಾರ ಪೆರ್ಲ ಅವರು ಭಜನೆ ರಾಮಾಯಣ, ಶ್ರೀರಾಮರಕ್ಷಾಸ್ತೋತ್ರ, ಮತ್ತು ಹನುಮಾನ್ ಚಾಲೀಸ್ ಭಕ್ತಿಸಾಹಿತ್ಯವನ್ನು ಸಂಗ್ರಹಗೊಳಿಸಿ ಪರಿಷ್ಕರಿಸಲು ಕಾರಣವಾದ ಸಂದರ್ಭವನ್ನು ವಿವರಿಸಿದರು. ವ್ಯಕ್ತಿತ್ವ ನಿರ್ಮಾಣಕ್ಕೆ ಶ್ರೀರಾಮಚಂದ್ರ ಒಂದು ಪ್ರತೀಕ. ನ್ಯಾಯ ನೀತಿ ಸತ್ಯ ನಿರ್ಭಯತೆ ಧೈರ್ಯ ಮೊದಲಾದ ಮೌಲ್ಯಗಳನ್ನು ಇಂದು ಸಮಾಜದಲ್ಲಿ ಪುನಃ ಸ್ಥಾಪನೆ ಮಾಡಬೇಕಾದರೆ ಆತನನ್ನು ಅನುಸರಿಸುವ ಅಗತ್ಯವಿದೆ. ನಿತ್ಯಭಜನೆ ಅದಕ್ಕೆ ಪೂರಕ ಎಂದು ಡಾ. ಪೆರ್ಲ ಅವರು ಹೇಳಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಕಲ್ಕೂರ ಪ್ರತಿಷ್ಠಾನದ ಪ್ರದೀಪ್ ಕುಮಾರ್ ಕಲ್ಕೂರ ಅವರು ಅಯೋಧ್ಯೆಯಲ್ಲಿ ಶ್ರೀರಾಮದೇವರ ಪ್ರಾಣಪ್ರತಿಷ್ಠೆ ಆಗುತ್ತಿರುವ ಈ ಸಂದರ್ಭದಲ್ಲಿ ಈ ಕೃತಿಗೆ ಸಾಮಾಜಿಕ ಪ್ರಸ್ತುತತೆ ಇದೆ. ನಿತ್ಯಾನಂದ ಗ್ರಂಥಾಲಯಕ್ಕೆ ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕದಲ್ಲಿ ದೊಡ್ಡ ಇತಿಹಾಸವಿದ್ದು ಈ ಕೃತಿ ಪ್ರಕಟಣೆಯ ಮೂಲಕ ಆ ಪರಂಪರೆ ಮುಂದುವರಿದಿದೆ ಎಂದರು. ಕೃತಿಯ ಪ್ರಕಾಶಕರಾದ ನಿತ್ಯಾನಂದ ಗ್ರಂಥಾಲಯದ ಕೆ. ಚಂದ್ರಶೇಖರ ಶೆಟ್ಟಿ ಸ್ವಾಗತಿಸಿ ವಂದಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


