-ರಾಧಾ ಟೇಕಲ್
ಪ್ರತಿ ವ್ಯಕ್ತಿಯ ಜನ್ಮಕಾರಣಕರ್ತರು ಮಾತಾಪಿತರೇ ಆದರೂ, ವ್ಯಕ್ತಿಯನ್ನು ‘ಶಕ್ತಿಯುತ’ನನ್ನಾಗಿ ಮಾಡಬಹುದಾದವರು ಎಂದರೆ ಗುರುಗಳು. ಮಮತೆಯ ಮಡಿಲಿನಿಂದಾಚೆಗೆ, ನಡೆನುಡಿ ಕಲಿಯಲು ಮಾರ್ಗದರ್ಶಿಯಾಗಬಲ್ಲವನು ‘ಗುರು’. ತಾಯಿಗಿಂತ ಮಿಗಿಲಾಗಿ ಆ ಮಗುವಿನ ಪ್ರತಿಭೆಯನ್ನು ಗುರುತಿಸಬಲ್ಲವನು, ಸಾಮಾನ್ಯನನ್ನು ಅಸಾಮಾನ್ಯನನ್ನಾಗಿ ಮಾಡಬಲ್ಲವನೇ, ಗುರು. ಶಾಲೆಯ ವಿದ್ಯಾರ್ಥಿಯಾಗಿ, ವ್ಯಕ್ತಿನಿರತನಾಗಿ, ನಿವೃತ್ತಿಯಘಟ್ಟ ತಲುಪಿದಾಗ ಆಧ್ಯಾತ್ಮದ ಕಡೆಗೆ ಮನಸ್ಸು ವಾಲುತ್ತದೆ. ಆಧ್ಯಾತ್ಮದ ಅವಲೋಕನ, ಪರಿಪೂರ್ಣಸಾರ ಅರಿಯಲು, ಒಬ್ಬ ‘ಸತ್‍ಗುರು’ವಿನ ಮಾರ್ಗದರ್ಶನ ಬೇಕು.
ಒಬ್ಬ ಮಗುವಾಗಲಿ, ವಿದ್ಯಾರ್ಥಿಯಾಗಲಿ, ಯುವಕರಾಗಲಿ, ವೃತ್ತಿನಿರತರಾಗಲಿ, ನಿವೃತ್ತರಾಗಲಿ ಅಥವಾ ಜೀವನದ ಕೊನೆಯ ಘಟ್ಟದಲ್ಲಿರುವ ಆಧ್ಯಾತ್ಮಿಕ ಮಾರ್ಗದರ್ಶನವನ್ನು ಬಯಸುವ ಯಾರೇ ಆಗಲಿ ಜೀವನದ ಯಾವುದೇ ಹಂತದಲ್ಲಿ ಯಶಸ್ವಿಯಾಗಲು ನಮಗೆಲ್ಲರಿಗೂ ಗುರು ಬೇಕು ಎಂದು ಶ್ರೀಗಳು ನಮಗೆ ಕಲಿಸುತ್ತಾರೆ. ಭಗವಾನ್ ರಾಮನು ಸ್ವತಃ ದೇವರು ಆದರೆ ಅವನು ಭೂಮಿಯಲ್ಲಿ ಜನ್ಮ ಪಡೆದಾಗ, ಅವನಿಗೆ ಮಾರ್ಗದರ್ಶನ ನೀಡಲು ಅವನ ಜೀವನದಲ್ಲಿ ಗುರುಗಳೂ ಇದ್ದಾರೆ, ಈ ಸತ್ಯವು ಜೀವನದಲ್ಲಿ ಗುರುಗಳ ಮಹತ್ವವನ್ನು ಬಲಪಡಿಸುತ್ತದೆ.
ಸ್ವತಃ ಭಗವಂತನೇ ತನ್ನ ಕೃಪಾಕಟಾಕ್ಷದಲ್ಲಿ ನಮ್ಮನ್ನು ಸದ್ಗುರುವಿನ ಸಂಪರ್ಕದಲ್ಲಿರಿಸುತ್ತಾನೆ. ವಾಸ್ತವವಾಗಿ, ಗುರುವಿನ ಸ್ಥಾನವು ದೇವರಿಗಿಂತ ಹೆಚ್ಚಿನದಾಗಿದೆ ಎಂದು ಪರಿಗಣಿಸಲಾಗುತ್ತದೆ, ಏಕೆಂದರೆ ಒಬ್ಬ ಗುರುವಿನ ಮೂಲಕ ಮಾತ್ರ ಸರ್ವಶಕ್ತನನ್ನು ತಲುಪಬಹುದು.
‘ಗುರು’ ಎಂದರೆ ಯಾರು?
ಅಜ್ಞಾನತಿ ಮಿರಾಂಧಸ್ಯ ಜ್ಞಾನಾಂಜನ ಶಲಾಕಯಾ |ಚಕ್ಷುರುನ್ಮೀಲಿತಂ ಯೇನ ತಸ್ಮೈ ಶ್ರೀ ಗುರುವೇ ನಮಃ ||
“ಅಜ್ಞಾನದಿಂದ ಮುಚ್ಚಿದ ಕಣ್ಣುಗಳಿಗೆ ಜ್ಞಾನವೆಂಬ ತತ್ವ ಭೋಧಿಸುವ ಗುರುವಿಗೆ ನಮನ”
ವಾಲ್ಮೀಕಿ ರಾಮಾಯಣದಲ್ಲಿ ಗುರು-ಶಿಷ್ಯರ ಬಂಧ ಬಲವಾದದ್ದು. ಇಲ್ಲಿ ಶ್ರೀರಾಮನ ಬಾಲ್ಯದಿಂದ ರಾವಣನ ವಧೆಯವರೆಗೂ ಅನೇಕ ಸನ್ನಿವೇಶಗಳಲ್ಲಿ ಗುರು-ಶಿಷ್ಯ ಸಂಬಂಧ ಕಾಣಬರುತ್ತದೆ. ಸ್ವತಃ ಭಗವಂತನೇ ತನ್ನ ಕೃಪಕಟಾಕ್ಷ ಬೀರಿ, ನಮ್ಮನ್ನು ಸದ್ಗುರುವಿನ ಸಂಪರ್ಕದಲ್ಲಿರಿಸಲು ದಾರಿ ತೋರುತ್ತಾನೆ. ವಾಸ್ತವವಾಗಿ ದೇವರಿಗಿಂತ ಗುರುವಿನ ಸ್ಥಾನ ದೊಡ್ಡದು ಎಂದು ಹೇಳುತ್ತಾರೆ. “ಗುರುವಿಗಿಂತ ಹೆಚ್ಚಿನದಾದ ತತ್ವವಿಲ್ಲ”. “ಹರ ಕಾಯ್ದದಿದ್ದರೂ ಗುರು ಕಾಯ್ದನು” ಎಂದಲ್ಲದೆ, ಕಣ್ಣಿಗೆ ಕಾಣುವ ಗುರುವೇ ದೈವ ಎಂದೂ ಪ್ರತೀತಿ.
ದಶರಥ ಮಹಾರಾಜನ ನಾಲ್ವರು ಮಕ್ಕಳೂ ಮಹಾತಪಸ್ವಿ ವಸಿಷ್ಠಮಹರ್ಶಿಗಳ ಗುರುಕುಲಕ್ಕೆ ವಿದ್ಯಾರ್ಜನೆಗಾಗಿ ಬಂದರು. ಅರಮನೆಯ ವೈಭೋಗ, ಮಾತೆಯರ ಲಾಲನೆ-ಪಾಲನೆಯಿಂದ ದೂರವಾಗಿ, ಸಾಮಾನ್ಯ ವಟುವಿನಂತೆ ಇದ್ದರು. ಕಲಿಕೆಯಲ್ಲಿ ಉತ್ಸಾಹ, ಶ್ರದ್ಧೆ, ಭಕ್ತಿ, ಗೌರವ ಮೂಡಿ ಬರಲು ಅವರ ಗುರುಗಳೇ ಕಾರಣ. ಗುರು-ಶಿಷ್ಯರ ಸಂಬಂಧ ಇಲ್ಲಿ ಅಪೂರ್ವ ಬಂಧವಾಗಿತ್ತು. ಧರ್ಮ ಬೋಧೆ, ವೇದಾಧ್ಯಾಯನ, ಶಸ್ತ್ರಾಸ್ತ್ರಗಳ ಮಂತ್ರ-ತಂತ್ರ, ಧನುರ್ವಿದ್ಯೆ ಎಲ್ಲವೂ ಗುರುಕುಲದ ರೀತಿ-ನೀತಿಯಂತೆ ಹೇಳಿಕೊಡಲಾಗುತ್ತಿತ್ತು. ಶ್ರೀಮನ್ನಾರಯಣನೇ ಮಾನವನ ಅವತಾರ ತಾಳಿದ್ದರೂ, ಸಾಮಾನ್ಯ ಶಿಷ್ಯನಂತೆ ವಿನಯಸಂಪನ್ನತೆಯಿಂದ ಕಲಿತದ್ದು, ವಾಲ್ಮೀಕಿ ರಾಮಾಯಣ ಓದಿದ ಎಲ್ಲರಿಗೂ ಮೈ ನವಿರೇಳುತ್ತದೆ. ರಾವಣನ ವಧೆಗಾಗಿ ಜನ್ಮ ತಾಳಿದ ಶ್ರೀಮನ್ನಾರಾಯಣನೆಂದು ತಿಳಿದಿದ್ದೂ, ಸಾಮಾನ್ಯ ಶಿಷ್ಯನಂತೆ ನಡೆಸಿಕೊಂಡಿದ್ದ ಮೇಧಾವಂತ ಗುರುಗಳಿಗೆ ಸಾಟಿಯಿಲ್ಲದ ಶಿಷ್ಯನಾಗಿದ್ದ ಶ್ರೀರಾಮ! ಪದ್ಧತಿ, ಕ್ರಮ ಯಾವುದನ್ನೂ ಮೀರದೆ ವಿದ್ಯೆಯನ್ನು ಕಲಿತದ್ದು, ಕೊನೆಯವರೆಗೂ ಹಾಗೇ ನಡೆಸಿದ. ರಾಮನಾದರೂ, ತಾನೆಂದೂ ಭಗವಂತ, ಎಲ್ಲಾ ನನ್ನಿಂದಲೇ ಎಂದು ಒಂದು ದಿನವೂ ನೆನಪಿಸಕೊಳ್ಳಲಿಲ್ಲವೇನೋ. ಸಾಮಾನ್ಯ ಶಿಷ್ಯನಂತೆಯೇ ಇದ್ದ. ರಾಮಾಯಣದಲ್ಲಿ ನಾವು ಕಾಣುವ ಭ್ರಾತೃತ್ವ, ದಾನಗುಣ, ಸೇವಾನಿರತೆ, ಸ್ನೇಹಧರ್ಮ, ಇವೆಲ್ಲವೂ ಜನ್ಮತಃ ಬಂದಿರಬಹುದಾದರೂ, ಅದನ್ನು ಅಳವಡಿಸಿಕೊಳ್ಳುವ ಕಲೆಗೆ ಮೂಲಗುರು ವಸಿಷ್ಠಮಹರ್ಷಿ.
ಗುರುಕುಲದಲ್ಲಿ ಎಂಟು-ಒಂಭತ್ತು ವರ್ಷಗಳು ವಿದ್ಯಾಭ್ಯಾಸ ಪೂರ್ಣಗೊಳಿಸಿ ಅರಮನೆಗೆ ಹಿಂತಿರುಗಿದರು. ತಂದೆಯ ಒಡ್ಡೋಲಗದಲ್ಲಿ ಭಾಗವಹಿಸುತ್ತಾ, ತನ್ನ ಮೂವರೂ ಮಾತೆಯರ ಪ್ರೀತಿಯಲ್ಲಿ ಮೀಯುತ್ತಾ, ಸೋದರರು, ಗೆಳೆಯರೊಂದಿಗೆ ಮಾತು, ಆಟ, ಶಸ್ತ್ರಾಭ್ಯಾಸದಲ್ಲಿ ನಿರತನಾಗಿದ್ದ ರಾಮ. ಆದರೂ ರಾಮನ ಮನದಲ್ಲಿ, ಮಾನವ ಜೀವನವೇಕೆ ಹೀಗೆ ಚಕ್ರವ್ಯೂಹದಂತೆ ಗೊಂದಲಮಯ? ಎಂದು ಚಿಂತೆಯಲ್ಲಿ ಮಥಿಸುತ್ತಿತ್ತು.
ಒಂದು ರಾತ್ರಿ, ಗುರುಗಳು ಮಲಗಿದ್ದಾಗ ಯಾರೋ ಕದ ತಟ್ಟಿದ ಸದ್ದು. “ಯಾರದು?” ಎಂದು ಪ್ರಶ್ನಿಸಿದರು ಗುರುಗಳು. “ನಾನು ಗುರುವೇ” ಎಂದಿತೊಂದು ಯುವಕಂಠ. “ನಾನು, ಎಂದರೆ?” ಮರುಪ್ರಶ್ನೆ ಬಂತು ಗುರು ವಸಿಷ್ಠರಿಂದ. “ಅದನ್ನು ಅರಿಯಲೆಂದೇ ನಿಮ್ಮ ಬಳಿ ಬಂದೆ” ಎಂದ ಶಿಷ್ಯ.
ಪ್ರಾಣಶಿಷ್ಯ ರಾಮನನ್ನು ಪ್ರೀತ್ಯಾದರಗಳಿಂದ ಬಿಗಿದಪ್ಪಿದರು. ಒಳಗೆ ಬರಮಾಡಿಕೊಂಡ ಗುರುಗಳು, ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿದ್ದು ಹೀಗಿತ್ತೆಂದು ‘ಯೋಗವಸಿಷ್ಠ’ದಿಂದ ಆಯ್ದ ಉದಂತ: “ಈ ಪ್ರಶ್ನೆಗೆ ಉತ್ತರವಿದು; ಭೂತಕಾಲದಲ್ಲಿ ಮಾಡಿದ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ವರ್ತಮಾನ ಇದೆ”. ಚಿಂತಿತನಾಗಿ ತನ್ನ ಬಳಿ ಬಂದ ರಾಮನಿಗೆ, ಚಿಂತನೆಯ ಮೂಲಕ ವಿನಾಶಗೊಳಿಸಿ, ಮನಃಶಕ್ತಿಯನ್ನು ಉದ್ದೀಪನೆಗೊಳಿಸಿದರು ಗುರುಗಳು. ಗುರುವಿನ ಮಹತ್ವವೇನೆಂದು ವಾಲ್ಮೀಕಿ ತಮ್ಮ ‘ರಾಮಾಯಣ’ದ ಮೂಲಕ ಹೇಳುತ್ತಾರೆ.
ಮಗನಿಗೆ ಯುವರಾಜಪಟ್ಟ ಕಟ್ಟುವ ಆಲೋಚನೆ ದಶರಥನ ಮನದಲ್ಲಿ. ಅದಕ್ಕೆ ಮೊದಲು ವಿವಾಹ ಮಾಡಿಬಿಡುವ ಮನಸ್ಸು. ತನ್ನೊಳಗೆ ತಾನು ಯೋಚಿಸುತ್ತಿರುವ ಸಮಯದಲ್ಲೇ, ರಾಜರ್ಷಿ ವಿಶ್ವಾಮಿತ್ರರು ಆಸ್ಥಾನಕ್ಕೆ ಬಂದರು. ಗೌರವಾದಾರಗಳಿಂದ ಋಷಿವರ್ಯರನ್ನು ಬರಮಾಡಿಕೊಂಡು, “ರಾಜರ್ಷಿ, ತಮ್ಮ ಆಗಮನದಿಂದ ನನ್ನ ರಾಜ್ಯಕ್ಕೆ ಅಮೃತ ಪ್ರಾಪ್ತಿಯಾದಂತಾಯಿತು. ನನ್ನಿಂದ ತಮಗೇನಾಗಬೇಕು, ಆಜ್ಞಾಪಿಸಿ. ನಿಮ್ಮ ಮಾತಿಗೆ ಬಾಗುವೆ” ಎಂದಾಗ, “ರಾಜಾ, ನಿನ್ನ ಮಕ್ಕಳಾದ ರಾಮ-ಲಕ್ಷ್ಮಣರನ್ನು ನನ್ನೊಂದಿಗೆ ಕಳಿಸು. ನಮ್ಮ ಋಷಿಗಳೊಂದಿಗೆ ನಾನು ಮಾಡುತ್ತಿರುವ ಯಜ್ಞಕ್ಕೆ ರಾಕ್ಷಸರು ಅಡ್ಡಪಡಿಸುತ್ತಿದ್ದಾರೆ. ಅವರನ್ನು ಸಂಹಾರ ಮಾಡಬೇಕು” ಎಂದಾಗ ದಶರಥ ಮಹಾರಾಜನಿಗೆ ಕಳವಳ.
“ರಾಜರ್ಷಿ, ಆ ಬಾಲಕರಿಂದ ರಾಕ್ಷಸಸಂಹಾರ ಆದೀತೇ? ನಾನು, ನನ್ನ ಸೇನೆಯೊಡನೆ ಬರುತ್ತೇನೆ” ಎಂದನು. “ಮಾತು ಕೊಟ್ಟಿದ್ದೇಯೆ. ತಪ್ಪಿದರೆ, ನಿನ್ನ ಕುಲಕ್ಕೇ ಅಗೌರವ” ಎಂದು ಕೋಪಿಸಿಕೊಂಡಾಗ, ಅಲ್ಲೇ ಇದ್ದ ಕುಲಗುರು, ಪರಮ ಶಾಂತಮೂರ್ತಿ ವಸಿಷ್ಠ ಮಹರ್ಷಿ, ರಾಜನಿಗೆ ಸಮಾಧಾನ ಮಾಡುತ್ತಾರೆ.
“ಮಹಾರಾಜ, ವಿಶ್ವಾಮಿತ್ರನಂಥಾ ಗುರುಗಳಿಂದ ರಾಮಲಕ್ಷ್ಮಣರಿಗೆ ಒಳ್ಳೆಯದೇ ಆಗುತ್ತದೆ. ಆತ ತಪೋಬಲದಿಂದ ಪಡೆದ ಅನೇಕ ದಿವ್ಯಾಸ್ತ್ರಗಳನ್ನು ಶಿಷ್ಯರಿಗೆ ನೀಡುತ್ತಾರೆ. ರಾಮನಿಗೆ ಅಂಥಾ ಸೌಲಭ್ಯ ಸಿಗಲಿ, ಕಳುಹಿಸು. ಸ್ವಯಂ ವಿಶ್ವಾಮಿತ್ರನೇ ಜೊತೆಯಲ್ಲಿರುವಾಗ, ಇವರಿಬ್ಬರಿಗೇತರ ಭಯ?” ಇಲ್ಲಿ ನಮಗೆ ಅರ್ಥವಾಗುವ ಅಂಶ, ವಸಿಷ್ಠಮಹರ್ಷಿಗೆ ತನ್ನ ಶಿಷ್ಯ ರಾಮ ಅತ್ಯಂತ ಶ್ರೇಷ್ಠ ಧನುರ್ಧಾರಿಯಾಗಲಿ, ರಾಜರ್ಷಿಯ ಬಳಿ ಇರುವ ಅಮೋಘ ಅಸ್ತ್ರ-ಶಸ್ತ್ರಗಳು ರಾಮನಿಗೆ ದೊರೆಯಲಿ ಎಂಬ ಆಕಾಂಕ್ಷೆ. ತಮಗೂ, ರಾಜರ್ಷಿ ವಿಶ್ವಾಮಿತ್ರನಿಗೂ ಇರುವ ವೈಮನಸ್ಯದ ಪರಿಣಾಮ, ಶಿಷ್ಯನ ಮೇಲೆ ಆಗಬಾರದು. ಗುರುವಿಗೆ ಶಿಷ್ಯನ ಮೇಲೆ ಅಂಥಾ ಭಾವನೆ ಬರಬೇಕಾದರೆ, ಶಿಷ್ಯನ ಉತ್ತಮ ಗುಣಗಳು ಪ್ರಭಾವ ಬೀರಿದೆಯಲ್ಲವೇ?
ವಿಶ್ವಾಮಿತ್ರನ ಹಿಂದೆ ಹೊರಟ ರಾಮಲಕ್ಷ್ಮಣರ ನಡವಳಿಕೆ, ಬುದ್ಧಿವಂತಿಕೆ, ಶೀಘ್ರಗ್ರಹಣ ಶಕ್ತಿ ಎಲ್ಲವನ್ನೂ ಅವಲೋಕಿಸಿದ ರಾಜಮಹರ್ಷಿಗೆ ಕೆಲವೇ ದಿನಗಳಲ್ಲಿ ಆಪ್ತ ಶಿಷ್ಯರಾಗಿಬಿಟ್ಟರು. ಸೋದರರಿಬ್ಬರೂ ಅಗಸ್ತ್ಯ ಋಷಿಗಳಿಂದ ಶಾಪಗ್ರಸ್ತಳಾಗಿ ರಾಕ್ಷಸಿಯಾದ ಯಕ್ಷಿಣಿ, ಬ್ರಾಹ್ಮಣ ದ್ವೇಷಿಯಾಗಿ, ಋಷಿಗಳ ಯಾಗ-ಯಜ್ಞಗಳಿಗೆ ಅಡ್ಡಿ ಮಾಡುತ್ತಿದ್ದಳು. ಅವಳ ಮಕ್ಕಳು ಮಾರೀಚ ಹಾಗು ಸುಬಾಹು ಅವಳಿಗೆ ಜೊತೆಯಾಗಿ ಮಾರುವೇಷದಿಂದ ಯಜ್ಞಕುಂಡದಲ್ಲಿ ಅನವಶ್ಯಕ ವಸ್ತುಗಳನ್ನು ಹಾಕುತ್ತಿದ್ದರು. ರಾಮನ ಜೊತೆಯಾಗಿ ನಿಂತ ಲಕ್ಷ್ಮಣ, ರಾಕ್ಷಸರ ಸಂಹಾರಕ್ಕೆ. ತಾಟಕಿ, ಸುಬಾಹುವನ್ನು ಸಂಹಾರ ಮಾಡಿ, ಮಾರೀಚನನ್ನು ಋಷಿಗಳಿರುವ ಸ್ಥಳದಲ್ಲಿ ಸಂಚರಿಸಿದಂತೆ ದೂರ ಕಳಿಸಿದರು, ತಮ್ಮ ಬಾಣಗಳಿಂದ. ಸಂತೃಪ್ತನಾದ ವಿಶ್ವಾಮಿತ್ರ ತಮ್ಮ ಬಳಿ ಇದ್ದ ದೇವತಾಸ್ತ್ರಗಳನೆಲ್ಲಾ ಧಾರೆಯೆರದು, ಅವುಗಳ ಉಪಸಂಹಾರ ಮಂತ್ರಗಳನ್ನು ಕಲಿಸಿದರು.
ಇದನ್ನೆಲ್ಲಾ ವಾಲ್ಮೀಕಿ ರಾಮಾಯಣದಲ್ಲಿ ಓದುತ್ತಾ ಹೋದಾಗ, ಗುರುವನ್ನು ಒಮ್ಮನಸ್ಸಿನಿಂದ, ಭಕ್ತಿಯಿಂದ ನಂಬಿದ ವಿಧೇಯ ಶಿಷ್ಯರಿಗೆ ‘ಗುರು’ ಸ್ಥಾನದಲ್ಲಿರುವ ವ್ಯಕ್ತಿ ಸುಪ್ರೀತರಾಗಿ ತಮ್ಮ ತಪೋಬಲದಿಂದ ತಿಳಿದ ಜ್ಞಾನವನ್ನು ಮನಸಾರೆ ಧಾರೆ ಎರೆಯುವುದರಲ್ಲಿ ಸಂದೇಹವಿಲ್ಲ ಎಂದು ಅರಿವಾಗುತ್ತದೆ. ತಮ್ಮ ಇಚ್ಛೆಗೆ ಅನುಸಾರವಾಗಿ ಗುರುವನ್ನು ನಡೆಸಿಕೊಳ್ಳುವುದು ಅಲ್ಲ, ಗುರುವಿನ ಅಭೀಷ್ಟದಂತೆ ಆಜ್ಞೆ ಪಾಲಿಸುವುದು ಶಿಷ್ಯನ ಧರ್ಮ ಎಂದು ಸಾರುತ್ತದೆ, ವಾಲ್ಮೀಕಿ ರಾಮಾಯಣ. ದಾರಿಯುದ್ದಕ್ಕೂ ಕಥೆ ಹೇಳುತ್ತಾ ಇಕ್ಷ್ವಾಕುವಂಶಜರ ಬಗ್ಗೆ, ತನ್ನ ರಾಜ್ಯದ ಇತಿಹಾಸ ತಿಳಿಸುತ್ತಾರೆ ವಿಶ್ವಾಮಿತ್ರ. ಆದರಿಂದ ಶಿಷ್ಯರಿಬ್ಬರಲ್ಲೂ ಆತ್ಮವಿಶ್ವಾಸ, ಕರ್ತವ್ಯಪ್ರಜ್ಞೆ, ಶ್ರದ್ಧೆ, ಗೌರವದ ಪಾಠ ಕಲಿಸುತ್ತಾರೆ.
‘ಗಾಯತ್ರಿ ಮಂತ್ರ’ ಜಪತಪಗಳ ಮಹತ್ವದ ಅರಿವು ಮೂಡಿಸುತ್ತಾ, ‘ಬಲ’-‘ಅತಿಬಲ’ ಎಂಬ ಮಂತ್ರಗಳನ್ನು ಉಪದೇಶಿಸುತ್ತಾರೆ. ಇದರಿಂದ ಆಧ್ಯಾತ್ಮಿಕ ಶಕ್ತಿ ಮತ್ತು ಬೌದ್ಧಿಕ ಶಕ್ತಿ ಬಲಗೊಳ್ಳುತ್ತದೆ. ಹಸಿವು, ನೀರಡಿಕೆಗಳನ್ನು ನಿಯಂತ್ರಿಸಬಲ್ಲ ಮತ್ತು ಸಾಮರ್ಥ್ಯ ಕುಂದದಂತೆ ಶಕ್ತಿ, ಧಾರೆಗೈಯುತ್ತಾರೆ.
|| ‘ಗ’ಕಾರಾಂಧಕಾರತ್ವಾತ್ ‘ರು’ಕಾರೋತನ್ನಿವಾರಕಃ || ಎಂದು ಹೇಳಿದ್ದು ಸುಮ್ಮನೆಯಲ್ಲ. ಅಂಧಕಾರವನ್ನು ನಾಶಪಡಿಸುವವನು ಗುರು. ‘ಗ’ ಎಂದರೆ ಅಜ್ಞಾನದಿಂದಾದ ಅಂಧಕಾರ. ‘ರು’ ಕಾರವೆಂದರೆ ನಾಶಪಡಿಸುವುದು ಅಥವಾ ಹೋಗಲಾಡಿಸುವುದು.
ಅಹಲ್ಯೆಯ ಶಾಪವಿಮೋಚನೆ, ಮಿಥಿಲೆಯಲ್ಲಿ ಶಿವಧನಸ್ಸು ಮುರಿಯುವುದು, ಇದೆಲ್ಲವೂ ಗುರುಗಳಿಗೆ ಮೊದಲೇ ತಿಳಿದಿತ್ತೇನೋ ಎನ್ನುವಂತೆ ನಡೆಯುತ್ತದೆ. ಶಿಷ್ಯನ ಅಭಿವೃದ್ಧಿಯ ಕಡೆ ಗಮನವಿಟ್ಟ ಗುರುವಿಗೆ, ದಾರಿಯ ಗುರುತುಗಳೂ ಗೊತ್ತಿರುತ್ತವೆ ಎಂಬ ವಿಷಯ ವಾಲ್ಮೀಕಿ ರಾಮಾಯಣದಲ್ಲಿ ಕಂಡು ಬರುತ್ತದೆ.
ರಾವಣವಧೆಯ ವೃತ್ತಾಂತದಲ್ಲಿ ಮೃತ್ಯುಶಯ್ಯೆಯಲ್ಲಿರುವ ರಾವಣನಿಂದ ರಾಜತಂತ್ರದ ಸಲಹೆ ಕೇಳಲು ವಿಭೀಷಣ ಸಲಹೆ ನೀಡುತ್ತಾನೆ. ಲಕ್ಷ್ಮಣ ನಿರಾಕರಿಸಿದರೂ, “ಹುಟ್ಟಿನಿಂದ ರಾಕ್ಷಸನಾದರೂ, ರಾವಣ ಮಹಾ ಶಿವಭಕ್ತ. ಪ್ರಜಾಪರಿಪಾಲನೆಯಲ್ಲಿ ಶ್ರೇಷ್ಠ ಮೇಧಾವಿ, ಸಕಲಶಾಸ್ತ್ರಪಾರಂಗತ. ಅವನಿಂದ ರಾಜನೀತಿ ಕಲಿಯುವ ಅಗತ್ಯವಿದೆ” ಎಂದು ಲಕ್ಷ್ಮಣನಿಗೆ ಹೇಳಿದಾಗ, ಅಯಿಷ್ಟತೆಯಿಂದ ತಲೆಯ ಬಳಿ ನಿಂತ ಲಕ್ಷ್ಮಣನಿಗೆ, ರಾಮ ಉಪದೇಶಿಸುತ್ತಾನೆ, “ಜ್ಞಾನ ಬೇಡುವಾಗ ವಿನಂತಿಸಿಕೊಳ್ಳಬೇಕು” ಎಂದು ತಾನು ಕಾಲ ಬಳಿ ನಿಂತು ವಿನಂತಿಸಿದಾಗ, ರಾವಣ ರಾಜನೀತಿ, ಪ್ರಜಾಪರಿಪಾಲನೆ, ಪ್ರಜೆಗಳ ಹಿತದೃಷ್ಟಿ, ಭೋಧಿಸುತ್ತಾನೆ. ನಾವಿಲ್ಲಿ ಕಾಣುವುದು ರಾವಣ ಒಬ್ಬ ಗುರುವಿನಂತೆ, ರಾಮ ವಿಧೇಯ ಶಿಷ್ಯನಂತೆ.
ಇಂತಹ ಪಾತ್ರಗಳು ವಾಲ್ಮೀಕಿಗಲ್ಲದೆ ಬೇರೆ ಯಾರಿಗೂ ಸೃಷ್ಟಿಸಲು ಸಾಧ್ಯವಾಗಿರಲಿಕ್ಕಿಲ್ಲ ಎನ್ನಿಸುತ್ತದೆ. ಒಂದು ಮಹಾಕಾವ್ಯದಲ್ಲಿ ಬರುವ ಪಾತ್ರಗಳೆಲ್ಲವೂ ಆದರ್ಶ ವ್ಯಕ್ತಿತ್ವದಿಂದ ಕೂಡಿವೆ. ಶ್ರದ್ಧೆ, ವಿನಯ ಅಹಮ್ಮಿಕೆ ಇಲ್ಲದೆ ಕಲಿತ ಶಿಷ್ಯನೆಂದೂ ಗುರುವಿನ ನಂಬಿಕೆಗೆ ದ್ರೋಹ ಮಾಡಲಾರ ಎಂಬ ಪಾಠ ಕಲಿಸುತ್ತದೆ ರಾಮಾಯಣ.
-ರಾಧಾ ಟೇಕಲ್
ಲೇಖಕರ ಕಿರು ಪರಿಚಯ
ಕಾಲೇಜಿನ ಪತ್ರಿಕೆಯಲ್ಲಿ ನನ್ನದೊಂದು ಪುಟ್ಟ ಲೇಖನ ಪ್ರಕಟವಾದಾಗ, ಸಂತೋಷದಿಂದ ಅ ಪುಟದಲ್ಲಿ ಗೀಚಿಕೊಂಡೆ- an able daughter of a noble Journalist Sri Siddavanahalli Krishnasharma - ಎಂದು. ನನ್ನ ತಂದೆ, “ಇದನ್ನು ಕನ್ನಡದಲ್ಲಿ ಯಾಕೆ ಬರೆಯಲಿಲ್ಲ ಅಂತ ನಿಮ್ಮ ಮೇಷ್ಟ್ರು ಬಯ್ಯಲಿಲ್ಲವೇ” ಎಂದರು. ಅಂತಹ ಕನ್ನಡ ಭಾಷಾಭಿಮಾನಿಯವರ ಮಗಳು ಎಂಬ ಹೆಮ್ಮೆ ನನಗೆ.
ಅಂದಿಗೂ, ಇಂದಿಗೂ ಬರೆಯುವುದು ನನ್ನ ಹವ್ಯಾಸ. ಪ್ರಕಟವಾದದ್ದು ಜತನ ಮಾಡದಿರುವುದು ನನ್ನ ದುರಭ್ಯಾಸವೇನೋ. ಬರೆದದ್ದೆಷ್ಟು, ಯಾವುವು ಎಂದು ನೆನಪಿಲ್ಲ. ಒಂದೂ ನನ್ನ ಬಳಿ ಇಲ್ಲ. 1971ರಲ್ಲಿ ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟಗೊಂಡ ಆಂಡಾಳಮ್ಮ ನಿಂದ, ‘ಪದವೀಧರೆ ಕಮಲ’, ‘ಬಾಡಿಗೆ ಮನೆ’, ‘ರಾಷ್ಟ್ರೀಯ ಶಿಕ್ಷಕ’, ‘ಅಕಾಲ ಅತಿಥಿ’, ‘ಅವೇ ಕಣ್ಗಳು’, ‘ತಾಯಿಯೇ? ಮಗಳೇ?’, ‘ಅವಳ ಕಥೆ’, ‘ಹೊಂಗನಸು’, ‘ವೀಣೆ ನುಡಿಯಿತು-ಮನ ಮಿಡಿಯಿತು’, ‘ನಾರೀ ನಾರೀ ನಡುವಿನ ನರಹರಿ’, ‘ಯಾವುದು ಸತ್ಯ?’, ‘ತಪ್ಪು ಯಾರದು? ತಪ್ಪು ಯಾವುದು?’, ‘ಊರಿಗಿಟ್ಟ ಕೊಳ್ಳಿ’, ‘ನೆನಪುಗಳ ಸುಳಿಯಲ್ಲಿ’, ಕಾದಂಬರಿಗಲಲ್ಲ್ದೇ, ಮಕ್ಕಳ ಕಥೆಗಳೆರಡು, ‘ಕೇಟು-ಡೂಪ್ಲಿಕೇಟು’ ಮತ್ತು ‘ಗಣಿತ ವಿಶಾರದೆ’.
1985 ರಲ್ಲಿ ಢಿಡೀರನೆ ನಿಂತುಹೋದ ಬರವಣಿಗೆ, ಪುನಃ 2004ರಲ್ಲಿ ನಮ್ಮ ತಂದೆಯ ಜನ್ಮಶತಾಬ್ದಿಯಂದು ಶುರು ಮಾಡಿ, ಸಣ್ಣ ನಗೆಹನಿಗಳು, ಕವಿತೆ- ಮನೆ ಮಂದಿಗೆ ಮಾತ್ರ- ಬರೆಯುತ್ತಿದ್ದೆ. 2015ರಲ್ಲಿ ಸೂರ್ಯದೇವರ ರಾಮಮೋಹನ್ ರಾವ್ ಅವರ ಹತ್ತು ಕಾದಂಬರಿಗಳನ್ನು ಸತತವಾಗಿ, ನಾಲ್ಕು ವರ್ಷಗಳು ಕಾಲ ಮಾಡಿ, ಈಗ ಎಂಭತ್ತರ ವಯಸ್ಸಿನಲ್ಲಿ, ನಿಧಾನವಾಗಿ, ಆಗೊಮ್ಮೆ-ಈಗೊಮ್ಮೆ, ಬರೆಯುತ್ತಿರುತ್ತೇನೆ.
ರಾಧಾ ಟೇಕಲ್: ಸಂ. 111, ‘ಮಾರುತಿ ಕೃಪ’, 3ನೆ ‘ಏ’ ಅಡ್ಡರಸ್ತೆ, 6ನೆ ಮುಖ್ಯರಸ್ತೆ, 7ನೆ ಬ್ಲಾಕ್, 2ನೆ ಹಂತ, ನಾಗರಭಾವಿ, ಬೆಂಗಳೂರು - 560 072
ದೂರವಾಣಿ: 080-2321 5740
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ



