ಕಾದು ನಿಂತಿದ್ದಳು ಆ ಕೌಸಲ್ಯೆ, ರಾಮ ಬರುವನೆಂದು... ಕೊನೆಗೂ ನನಸಾಯ್ತು ತಾಯಿಯ ಕನಸು

Upayuktha
0


ಬಾಲರಾಮ ಮನೆಗೆ ಬರುವುದನ್ನು ನೋಡಲು ಮನೆಯ ಮಹಾದ್ವಾರದ ಬಳಿ ಕಾದಿದ್ದಾಳೆ ಕೌಸಲ್ಯೆ. ಜನರ ಹರ್ಷೋದ್ಗಾರ ಮುಗಿಲುಮುಟ್ಟಿದೆ. ಜಲಾಧಿವಾಸ, ಧಾನ್ಯಾಧಿವಾಸ ಮುಂತಾದ ಶಾಸ್ರೋಕ್ತ ವಿಧಿವಿಧಾನಗಳೆಲ್ಲ ಮುಗಿದಿದೆ.


ಅವನ ಆಸನದ ಮೇಲೆ ನಿಲ್ಲಿಸಿಯೂ ಆಗಿದೆ. ಇನ್ನು ಬಾಕಿಯಿರುವುದ ನೇತ್ರೋನ್ಮೀಲನ ಕಾರ್ಯವೊಂದೇ. ಎಲ್ಲಾ ಮಂತ್ರಗಳಿಂದ ವಿಗ್ರಹಕ್ಕೆ ಚೈತನ್ಯ ತುಂಬಿದೆ. ಚೈತನ್ಯದ ಕುರುಹೇ ಹೊಳಪಿನ ಶಕ್ತಿಯಿಂದ ಕೂಡಿದ ಬೆಳಗುವ ಕಣ್ಣುಗಳು. ಚಿನ್ನದ ಸೂಜಿ ಮತ್ತು ಬೆಳ್ಳಿಯ ಸುತ್ತಿಗೆಯಿಂದ, ನವಿರಾಗಿ ಕಣ್ಣ ಬಿಡಿಸಿದ ಕುಶಲ ಶಿಲ್ಪಿ ಅರುಣ ಯೋಗಿರಾಜ. ಬಟ್ಟೆಯ ಸರಿಸಿದ ಮೇಲೆ ಕಣ್ಣ ಹೊಳಪಿಗೆ ಕನ್ನಡಿಯು ಚೂರುಚೂರು. ಆನಂತರ ಮುದ್ದುರಾಮನ ಮೊಗ ಮುದ್ದುಗರೆಯುವಂತಿದೆ.


ಕೌಸಲ್ಯೆ ಅಂದಿನ ದಿನಗಳಿಗೆ ಜಾರುತ್ತಾಳೆ. ರಾಮ ಹುಟ್ಟಿದುದು ತನ್ನ ಗರ್ಭದಲ್ಲೇ ಆದರೂ, ಬೆಳೆದುದು ಆಟಪಾಠವೆಲ್ಲ ಕೈಕೇಯ ಬಳಿಯಲ್ಲೇ. ಈ ಅರಮನೆಯಲ್ಲೇ. ತನಗಿಂತ ಹೆಚ್ಚು ಬಳಕೆ ಅವಳಲ್ಲೇ. ತಾನು ಅರಸುಕುಲದವಳಾದರೂ, ಅರಸೊತ್ತಿಗೆಯ ಒಳಹೊರಗಿನ ಸುಳುಹುಗಳೆಲ್ಲವನು ರಾಮನಿಗೆ ಕಲಿಸಿದ್ದು ಅವಳೇ, ಆ ಕೈಕೇಯಿಯೆ. ಹೇಗಾದರೂ ಸರಿ, ನಮ್ಮ ರಾಮ ಮುಂದಿನ ಜವಾಬ್ದಾರಿಗಳಿಗೆ ತಯಾರಾಗುವುದೇ ಸರಿ ಎಂಬ ಮನೋಭಾವ ಕೌಸಲ್ಯೆಗೆ.


ಇಂತಹ ಕೈಕೇಯಿ ಅದೆಂತಹ ನಿರ್ದಯಿಯಾದಳು. ನಮ್ಮ ರಾಮನಿಗೆ ವನವಾಸ. ಅದೂ ಹದಿನಾಲ್ಕು ವರ್ಷಗಳು. ದಶರಥನು ಹಿಂದೊಮ್ಮೆ ಕೊಟ್ಟಿದ್ದ ಎರಡು ವರಗಳ ಉಪಯೋಗ, ಅಲ್ಲಲ್ಲ, ದುರಪಯೋಗ ಈಗ ಹೀಗೆ. ತಂದೆಯ ಮಾತನ್ನು ಪಾಲಿಸಲು ರಾಮ ಹೊರಟು ನಿಂತಾಗ, ಸೀತೆ ಮತ್ತು ಲಕ್ಷ್ಮಣನೂ ಹೊರಟರಲ್ಲ. ನಾರುಮಡಿಯುಟ್ಟು ಹೊರಟ ಮಕ್ಕಳನ್ನು ನೋಡಿ ಕರುಳು ಹಿಂಡಿತ್ತು. ಆದರೆ, ದೂರದ ಆಸೆ. ಹದಿನಾಲ್ಕು ವರುಷಗಳ ನಂತರ ರಾಮ ಬರುವನೆಂದು. ರಾಮ ವನವಾಸ ಮುಗಿಸಿ ಬಂದ. ಅಂದೂ ಕೂಡ ಅಯೋಧ್ಯೆ ಹೀಗೆ ಸಿಂಗಾರಗೊಂಡಿತ್ತು ಅಲ್ಲವೇ. ಹಾದಿಯೆಲ್ಲಾ ಹಸಿರಿನ ಚಪ್ಪರ. ಬಣ್ಣಬಣ್ಣದ ಹೂವಿನ ಅಲಂಕಾರ. ಪ್ರಜೆಗಳ ಉತ್ಸಾಹ. ಸಂಗೀತ ನರ್ತನಗಳ ಪ್ರದರ್ಶನ. ಅಲ್ಲಿ ರಾಮ ಬಂದ ಎಂಬ ಭಾವವೇ ಮಿಗಿಲಿತ್ತು.


ಯುಗಯುಗ ಕಳೆಯಿತು ದ್ವಾಪರವಾಯ್ತು. ಕಲಿಯುಗವೂ ಸಾವಿರಾರು ವರ್ಷಗಳು. ಆದರೂ ರಾಮ ಪ್ರಭಾವ ಇನ್ನೂ ಹೆಚ್ಚುತ್ತಲೇ ಹೋಯ್ತು. ರಾಮ ಅಯೋಧ್ಯ ರಾಮ ಮಾತ್ರವಲ್ಲದೆ ಇಡಿಯ ಭಾರತದ ಅಸ್ಮಿತೆಯಾದ. ಜನರ ನಾಡಿಮಿಡಿತವಾದ. ಬಾಳುವ ರೀತಿಗೆ ಮಾದರಿಯಾದ. ನೀತಿ ಸಂಹಿತೆಗಳ ಒಟ್ಟು ತಾತ್ಪರ್ಯವಾದ. ಭಾರತ ಮಾತ್ರವಲ್ಲ. ಇಡಿಯ ವಿಶ್ವವನ್ನೇ ಒಂದು ಗೂಡಿಸುವ ಶಕ್ತಿಯಾದ.


ಅದೆಲ್ಲಿಂದಲೋ ಬಂದ ಬಾಬರ. ಅವನಿಗೆ ರಾಜ್ಯ ವಿಸ್ತಾರ ಮಾಡುವ ಹುನ್ನಾರ. ಜೊತೆಗೆ, ಭಾರತದ ಸಾಂಸ್ಕೃತಿಕ ನೆಲೆಗಟ್ಟನ್ನೇ ಬುಡಮೇಲು ಮಾಡುವ ಯೋಚನೆ. ಯೋಜನೆ. ರಾಮನ ಅರಮನೆಯು ಧ್ವಂಸವಾಯ್ತು. ಮೇಲೆ ಮಸೀದಿಯು ಬಂದಿತು. ಈಗ ಮತ್ತೊಮ್ಮೆ ರಾಮ ನಿರ್ವಸಿತನಾದ. ಅವನಿಗೆ ನೆಲೆ ಇಲ್ಲವಾಯಿತು. ಆದರೆ ಎಲ್ಲಾ ಭಾರತೀಯರ, ಸನಾತನಿಗಳ ಹೃದಯವೇ ರಾಮನಿವಾಸವಾಯ್ತು.


ಅಂದು ರಾಮ ವನವಾಸಕ್ಕೆ ಹೋದಾಗ ಆದ ದು:ಖಕ್ಕಿಂತಲೂ ಇಂದು ಅಧಿಕ ದುಃಖವಾಯ್ತ. ಅಂದು ರಾಮ ಮತ್ತೆ ಬರುವನೆಂಬ ಭರವಸೆಯಿತ್ತು. ಅವನ ಮನೆ ಅವನಿಗೆ ಮೀಸಲಾಗಿತ್ತು. ಈಗ, ರಾಮನ ಮನೆ ನಾಶವಾಗಿತ್ತು. ಮತ್ತೆ ರಾಮ ಅಲ್ಲಿಗೆ ಬರುವನೆಂಬ ಆಸೆಯೂ ದೂರವಾಗಿತ್ತು.


ಕೌಸಲ್ಯೆ ಬಿಕ್ಕಿದಳು. ಯಾರೂ ಇಲ್ದವಾದಾಗ ರಾಮನೇ ನಾಥ. ರಾಮನಿಗೇ ಹೀಗಾದಾಗ, ಯಾರು ಆಸರೆ..? ರಾಮ ಪ್ರಜಾಲೋಲ. ಪ್ರಜೆಗಳನ್ನು ಮಕ್ಕಳಂತೆ ಸಲಹಿದವನು. ಅವನ ರಾಜ್ಯ ನ್ಯಾಯಕ್ಕೆ, ಸ್ಯಾಯಪರತೆಗೆ ಹೆಸರಾದುದು.

ತಮ್ಮ ನೆಚ್ಚಿನ ರಾಜನಿಗೆ ಆದ ಅನ್ಯಾಯಕ್ಕೆ ಜನರೇ ಒಗ್ಗೂಡಿದರು. ರಾಮನ ಪರ ಹೋರಾಟ ನಿರಂತರವಾಗಿ ಸಾಗಿತು. ಅನೇಕ ರಾಮಭಕ್ತರ ಬಲಿದಾನ. ಸರಯೂ ಹರಿದ ರಕ್ತದಿಂದ ಕೆಂಪಾದಳು.


ಆಗ ಯಃಕಶ್ಚಿತ್ ವಾನರ ಸೇನೆ, ಸ್ವರ್ಣ ಲಂಕೆಗೆ ಮುತ್ತಿಗೆ ಹಾಕಿ, ರಾವಣನ ಸಂಹಾರ. ಈಗ ರಾಮಸೇನೆಯ ಸ್ವಯಂಸೇವಕರ ರಥಯಾತ್ರೆ, ಕರಸೇವೆಗಳಿಂದ ರಾಮನ ಜನ್ಮಭೂಮಿಗೆ ಸಾತ್ವಿಕ ಹೋರಾಟ.


ಐದು ಶತಮಾನಗಳ ಅನ್ಯಾಯಕ್ಕೆ ಈಗ ನ್ಯಾಯಾಲಯದ ಹೋರಾಟ. ಸಾಕ್ಷಿ ಪುರಾವೆಗಳ ಉತ್ಖನನ. ಹುಟ್ಟು ಕುರುಡರಾದ. ರಾಮಭದ್ರಾಚಾರ್ಯರ ವರ ವೇದ ಮೂಲದ ಸಾಕ್ಷಿಪ್ರಮಾಣ. ರಾಮನ ಜನ್ಮಭೂಮಿಗೆ ರಾಮನೇ ಸ್ವಾಮಿ ಎಂದ ನ್ಯಾಯ. ಅಂದು ಎಷ್ಟೋ ರಾಮಭಕ್ತರ ಕಷ್ಟತಪಸ್ಸಿಗೆ ಸಿಕ್ಕ ಫಲ.


ನೋಡುವಷ್ಟರಲ್ಲೇ ಜನ್ಮಭೂಮಿಯಲ್ಲಿ ರಾಮನ ಮನೆಗೆ. ಅರಮನೆಗೆ ಗುದ್ದಲಿ ಪೂಜೆ. ಮೊನ್ನೆಯ ಪುಷ್ಯಮಾಸದ ಶುಕ್ಲಪಕ್ಷದ ದ್ವಾದಶಿಯು. ಸೋಮವಾರದಂದು ಶುಭ ಅಭಿಚಿತ್ ಲಗ್ನದಲ್ಲಿ ರಾಮನ ಆಗಮನ. ಅವನ ಮನೆಗೆ. ಅದುವೇ ರಾಮನ ಪ್ರತಿಷ್ಠಾಪನೆ. ಬಾಲರಾಮನ ಪ್ರತಿಷ್ಠಾಪನೆ. ಭವ್ಯ ಅರಮನೆ. ಭಕ್ತಕೋಟಿಗಳ ಕಾಮನೆ.


ಇದೆಲ್ಲವೂ ಕೌಸಲ್ಯೆಗೆ ಕನಸೋ ನನಸೋ ಎಂಬ ಭಾವ. ಸಂತಸದ ಕಣ್ಣೀರು ಸರಸರನೆ ಹರಿದಿದೆ. ಮಗು ರಾಮ, ಬಾಲರಾಮನ ಕಂಡು ಮನತುಂಬಿದೆ ಅವಳಿಗೆ. ತಾನು ಎಂತಹ ಅದೃಷ್ಟವಂತೆ. ಎಲ್ಲಾ ತಾಯಂದಿರು ಆಸೆ ಪಡುವ ಮಗ ಆ ಜನ್ಮವಿರುವವರೆಗೆ ಮಾತ್ರ ಸಾಧ್ಯ. ಆದರೆ ರಾಮನಂತಹ ಮಗ ಯುಗಯುಗಾಂತರಕ್ಕೂ ಪ್ರಾಕೃತ ಎಂಬ ಸತ್ಯ ಅಂತಹ ರಾಮನನ್ನು ಮಗನಾಗಿ ಪಡೆದ ನಾವೇ ಧನ್ಯರಲ್ಲವೇ ಎಂದು ಅಲ್ಲೇ ಗರ್ಭಗುಡಿಯಲ್ಲಿ ಅದೃಶ್ಯವಾಗಿ ಪ್ರತಿಷ್ಠಾಪನೆಯನ್ನು ನೋಡುತ್ತಿದ್ದ ದಶರಥ ಮತ್ತಿತರರನ್ನು ನೋಡಿದಳು ಕೃತಜ್ಞತೆಯಿಂದ, ಸಂತೃಪ್ತ ಭಾವದಿಂದ. ಬಾಲರಾಮನ ಮೂರ್ತಿ ಸ್ಪಷ್ಟವಾಗಿ ಕಾಣಲೆಂದು ಕಣ್ಣೊರೆಸಿಕೊಂಡಳು.


ಮಂದಿರದ ಒಳಗೆ, ಹೊರಗೆಲ್ಲಾ. ರಾಮಘೋಷ. ರಾಮ ನಾಮದ ಘೋಷ ಮುಗಿಲು ಮುಟ್ಟಿತ್ತು. ಎಲ್ಲರ ಹೃದಯ ತುಂಬಿ ಬಂದಿತ್ತು. ಬಾಲರಾಮ ಮನೆಯ ಅಂಗಳಕ್ಕೆ ಬಂದ. ಅರಮನೆಗೆ ಶೋಭೆ ತಂದ.. ತಾಯಿ ಕೌಸಲ್ಯೆಗೆ ಆನಂದ. ಭಕ್ತಕೋಟಿಗೆ ಪರಮಾನಂದ.


ಜೈ ಶ್ರೀರಾಮ್

ಶ್ರೀ ರಾಮ ಜಯರಾಮ ಜಯಜಯರಾಮ

ಶ್ರೀರಾಮ ರಘುರಾಮ ಸೀತಾರಾಮ


- ಮೀನಾಕ್ಷಿ ಮನೋಹರ, ಬೆಂಗಳೂರು


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
To Top